Tuesday, February 26, 2008

ತೀರ್ಥಹಳ್ಳಿಯ ತೀರ್ಥಪ್ರಸಾದ

ಬಸ್ಸಿನಲ್ಲಿ ಕುಳಿತವರಾರಿಗೂ ಮನಸ್ಸಿರಲಿಲ್ಲ ಬೆಂಗಳೂರಿಗೆ ವಾಪಸಾಗಲು. ಎಲ್ಲರ ಕಾಲೂ ಪದ ಹೇಳುತ್ತಿತ್ತು, ಕಣ್ಣುಗಳು ಎಳೆಯುತ್ತಿದ್ದುವು. ಆದರೆ ಪಯಣದ, ಜೊತೆಯಿದ್ದ ಗಳಿಗೆಗಳು ಸಾಲದೇ ಬಂದಿದ್ದು ಎಲ್ಲರ ಕಣ್ಣೋಟದಲ್ಲೂ ಗೋಚರಿಸುತ್ತಿತ್ತು. ಬೆಳಗಾಗೋದರೊಳಗಾಗಿ ದರಿದ್ರ ಬೆಂಗಳೂರಿಗೆ ಕಾಲಿಡುತ್ತೇವೆ. ಅದೇ ಆಫೀಸು, ಅದೇ ಟ್ರಾಫಿಕ್ಕು, ಅದೇ ಹೊಗೆ, ಅದೇ ಜಂಜಾಟ..

"ಬೆಂಗಳೂರ್ ಬಗ್ಗೆ ಮಾತ್ಥಾಡ್ ಬೇಡ.." ಶ್ರೇಯಸ್ ಹೇಳಿದ, ಮಹಾಪ್ರಾಣದ ಸಮೇತ.

ಅವನು ಏನು ಹೇಳಿದರೇನು, ಬೆಂಗಳೂರು ಬೆಂಗಳೂರೇ. ತೀರ್ಥಹಳ್ಳಿ ತೀರ್ಥಹಳ್ಳಿಯೇ. ಹಸಿರು ಸ್ವರ್ಗವೆಲ್ಲಾದರೂ ಹೊಗೆ ಗೂಡಿಗೆ ಹೋಲಿಕೆಯಾದೀತೇ?

ಈ ಮಹಾಪ್ರಾಣದ ವ್ಯಾಕರಣ ಪ್ರಾಕಾರದ ಆವಿಷ್ಕಾರವನ್ನು ಕುಪ್ಪಳಿಯ ಕುವೆಂಪು ಮನೆಯ ಮುಂದೆ ಮಾಡಿದ್ದೆವು. ಅಶ್ವಥ್ ಹಾಡೋದು ಹೇಗೆ? ಸೋರುತಿಹುದು ಮನೆಯ ಮಾಳಿಗಿ... ಇದರಲ್ಲಿ "ಸೋರುತಿಹುದು" ಅನ್ನುವಾಗ ಮಹಾಪ್ರಾಣ 'ಸ' ಬರುವುದನ್ನು ಗಮನಿಸಬೇಕು. ಅದು ಅಶ್ವಥ್ ವೈಶಿಷ್ಟ್ಯ. ಮಹಾಪ್ರಾಣ 'ಸ', ಮಹಾಪ್ರಾಣ 'ಹ' ಎಲ್ಲಾ ಹೇಳ್ತಾರೆ.

ಕುಪ್ಪಳಿಗೆ ಹೆಗ್ಗೆಬಯಲಿನ ಶ್ರೇಯಸ್ ಮನೆಯಿಂದ ಅರ್ಧಗಂಟೆ ಪ್ರಯಾಣ. ಹೆಗ್ಗೆಬಯಲಿನಿಂದ ಕೊಂಚ ದೂರ ಹೊಲದಲ್ಲಿ, ತೋಟದಲ್ಲಿ ನಡೆದು ಬಂದು ನಿಂತಿದ್ದೆವು ನಾವು. ಕುರುವಳ್ಳಿ ಸೇತುವೆ ದಾಟಿ ಬಂದು ನಿಂತ ಬಸ್ಸು ನಮ್ಮನ್ನು ಕುಪ್ಪಳಿಗೆ ಕರೆದೊಯ್ದಿತು. ಹೊರಡುವ ಮುನ್ನ, ಶ್ರೇಯಸ್ ಮನೆಯ ತೋಟದ ದರ್ಶನ ಮಾಡಿಕೊಂಡು, ಅದ್ಭುತವಾದ ಹಂಡೆ ನೀರಿನ ಸ್ನಾನ ಮಾಡಿಕೊಂಡಿದ್ದೆವಾದ್ದರಿಂದ ಎಲ್ಲರೂ ಬಹಳ ಚೈತನ್ಯವಂತರಾಗಿದ್ದೆವು."ಎಷ್ಟ್ ಬೇಕಾದ್ರೂ ಸ್ನಾನ ಮಾಡ್ಬೋದು.. ಮನಸ್ಸಿಗೆ ತೃಪ್ತಿಯಾಗೋ ಅಷ್ಟು!" ಅಂತ ಶ್ರೇಯಸ್‍ನ ತಂದೆ ಹೇಳಿದ್ದರು. ಅದು ಮಲೆನಾಡಿನ ವಿಶೇಷತೆ. ನೀರಿಗೆ ಕಿಂಚಿತ್ ಕೊರತೆಯೂ ಇರೋದಿಲ್ಲ. ಈ ಮಾತನ್ನು ಯಾರಾದರೂ ಬಳ್ಳಾರಿಯವರು ಹೇಳಿದರೆ ಹೇಗಿರುತ್ತೆ ಅಂತ ಯೋಚಿಸಿದೆ. ಬೆಳಗಿನ ನಿತ್ಯಕರ್ಮಕ್ಕೂ ನೀರು ಸಿಗೋದು ಕಷ್ಟ ಅಲ್ಲಿ. ಕುಡಿಯೋಕೆ ಸಿಕ್ರೆ ಅವರ ಪುಣ್ಯ! ಮಲೆನಾಡಿನಲ್ಲಿ ಹಾಗಲ್ಲ, ನೀರನ್ನು "ನೀರು ಖರ್ಚ್ ಮಾಡಿದ ಹಾಗೆ" ಮಾಡ್ತಾರೆ.

ಮನಸಾರೆ ಸ್ನಾನ ಮಾಡೋಕಿಂತ ನಿರಾಳ ಭಾವನೆಯಿನ್ನೊಂದಿಲ್ಲ. ದೇಹದ ಕೊಳೆಯೊಂದಿಗೆ ಮನಸ್ಸಿನ ಜಾಡ್ಯವನ್ನೆಲ್ಲಾ ತೊಳೆದು ಹಾಕುತ್ತೆ ಮಲೆನಾಡಿನ ಹಂಡೆ ಸ್ನಾನ. ರಾತ್ರಿ ಬಸ್ಸಿನಲ್ಲಿ ನಾನೂ, ಶೃತಿಯೂ, ಶುಭಾಳೂ ಮಾತನಾಡುತ್ತಿದ್ದ "ಲವ್ ಸ್ಟೋರಿ"ಗಳೆಲ್ಲಾ ತಲೆಯಲ್ಲಿ ಸ್ನಾನದ ನೀರಿನೊಂದಿಗೆ ಬೆರೆತು ಕರಗಿ ಹೋದವು. ಶೃತಿ ತನ್ನ ಕತೆಯನ್ನು ಮೊಟ್ಟಮೊದಲ ಬಾರಿಗೆ ಹೇಳಿದ್ದಳು, ಶುಭಾ ಕೂಡಾ! ಶ್ರೇಯಸ್ ಮಾತ್ರ ಸುಮ್ಮನೆ ಕೂತು ಕೇಳಿಸಿಕೊಳ್ಳುತ್ತಿದ್ದ. ಹೇಳಿಕೊಳ್ಳುವಷ್ಟು ಧೈರ್ಯವಾಗಲೀ, ಕಾನ್ಫಿಡೆನ್ಸ್ ಆಗಲೀ, ಮನಸ್ಸಾಗಲೀ ಅವನ ಕಂಗಳಲ್ಲಿರಲಿಲ್ಲ. ಅಂದು ಅವನ ಹುಟ್ಟುಹಬ್ಬ ಬೇರೆ. ಈ ಪ್ರವಾಸದ ಕಾರಣವೇ ಅವನ ಹುಟ್ಟುಹಬ್ಬ. ಬಸ್ಸಿನಲ್ಲೇ ಶುಭಾ ಮಾಡಿದ ಚಾಕೊಲೇಟನ್ನು ಕತ್ತರಿಸಿದ (ಕೇಕ್ ಕತ್ತರಿಸುವಂತೆ), ಎಲ್ಲರೂ ಚಪ್ಪಾಳೆ ಹೊಡೆದು "ಹ್ಯಾಪಿ ಬರ್ತ್ ಡೇ" ಅಂತ ಅವನಿಗೆ ಹೇಳುತ್ತಿರಲು, ಅವನು ತನ್ನ ಸ್ವೀಟ್ ಹಾರ್ಟ್ ಜೊತೆ ಫೋನಿನಲ್ಲಿ ನಿರತನಾಗಿಬಿಟ್ಟ. ಅವನ ವಿರಹ ವೇದನೆಯು ನಮಗೇನು ಅರ್ಥವಾದೀತು! ಚಾಕೊಲೇಟು ಬಹಳ ಮಧುರವಾಗಿತ್ತು!! ಇವಿಷ್ಟೂ ಚಿತ್ರಣ ಸ್ನಾನ ಮಾಡುತ್ತಿರುವಾಗ ಕಣ್ಣ ಮುಂದೆ ಬಂದು ನೃತ್ಯವಾಡಿತು. ಬೇಗ ಬೇಗ ಮೈಯ್ಯೊರೆಸಿಕೊಂಡು ಕುಪ್ಪಳಿಗೆ ಹೊರಡಲನುವಾದೆ. ಯಾಕೆಂದರೆ ನಾನೇ ಕೊನೆಯಲ್ಲಿ ಸ್ನಾನ ಮಾಡಿದ್ದು - ಮಿಕ್ಕೋರೆಲ್ಲಾ ಸಿದ್ಧವಾಗಿಬಿಟ್ಟಿದ್ದರು. ನಾನು ನಿದ್ದೆ ಹೊಡೀತಾ ಇದ್ದೆ. ಅಷ್ಟು ನಿದ್ದೆ ಬೇಕಿತ್ತು ನನ್ನ ದೇಹಕ್ಕೆ.ಕುಪ್ಪಳಿಗೆ ನಾನು ಹೊಸಬನೇನೂ ಅಲ್ಲ. ಅಲ್ಲಿಗೆ ಶ್ರೀಧರ ಕೂಡ ಹಳಬನಾಗಿದ್ದ. ಶ್ರೇಯಸ್ ಅಂತೂ ಮಲೆನಾಡಿಗನೇ. ಮಿಕ್ಕೋರಿಗೆ ಕುವೆಂಪು ಮನೆ ಮೊದಲ ಬಾರಿಗೆ ನೋಡಿದ ಅನುಭವ. ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಪ್ರಕಾಶ್ ಅವರು ಕುವೆಂಪು ಮನೆಯ ಮುಂದೆಯೇ ಸಿಕ್ಕರು, ಅವರನ್ನು ಮಾತನಾಡಿಸಿಕೊಂಡು ಮುಂದಿನ ಚಾರಣದ ಯೋಜನೆಗಳನ್ನು ಹಾಕಿಕೊಂಡು ಕವಿಯ ಮನೆಯೊಳಗೆ ಹೊಕ್ಕೆವು. ಮನೆಯನ್ನು ನೋಡಿದ ಗೆಳೆಯರೆಲ್ಲರೂ ಬಹಳವಾಗಿ ಮೆಚ್ಚಿಕೊಂಡರು. ಪುಸ್ತಕಗಳನ್ನು ಕೊಂಡರು. ಕನ್ನಡ ಪುಸ್ತಕವನ್ನು ಎಲ್ಲರೂ ಓದಲಿ ಎಂಬ ಬಯಕೆ ನನ್ನದು. ಮನದಲ್ಲಿ ಸಂತಸವಾಯಿತು ಪುಸ್ತಕ ಕೊಂಡೋರನ್ನು ನೋಡಿ. ಹೊರಡುವ ಮುನ್ನ "ಅನಿಸಿಕೆ" ಪುಸ್ತಕದಲ್ಲಿ ಬರೆಯಬೇಕಲ್ಲಾ, ಅದಕ್ಕೆ ಶ್ರೀನಿವಾಸನಿಗಿಂತ ಬೇಕಾ? ಅವನೇ ಬರೆದ. ಕವಿ ಭಾಷೆಯಲ್ಲೇ ಬರೆದ. ನಾವೆಲ್ಲಾ ಓದಿ ಅರ್ಥವಾಗದೇ ಇದ್ದರೂ "ಸಕ್ಕತ್ತಾಗಿದೆ" ಅಂದೆವು. ಮನೆಗೆ ಬಂದ ಮೇಲೆ "ಧನ್ವಂತರಿಯ ಚಿಕಿತ್ಸೆ" ಕಥೆಯ ಅರ್ಧ ಭಾಗವನ್ನು ಜೋರಾಗಿ ಓದಿದೆ. ಶೃತಿಯು ಮಿಕ್ಕಿದ್ದನ್ನು ಓದಿ ಮನಮುಟ್ಟಿಸಿದಳು.

ಕುವೆಂಪು ಮನೆಯೊಳಗೆ ಕ್ಯಾಮೆರಾ ಬಳಸೋ ಹಾಗಿಲ್ಲ. ಆದ್ದರಿಂದಲೇ ಕಣ್ಣಲ್ಲೇ ಎಲ್ಲಾ ಫೋಟೋ ತೆಗೆದುಕೊಂಡೆವು. ಬಾಗಿಲೇ ಇಲ್ಲದ ಬಚ್ಚಲುಮನೆ, 30X40 ತೊಟ್ಟಿ, ಓದುವ ಕೊಠಡಿ, ಉಪ್ಪರಿಗೆಯಲ್ಲೊಂದು ಉಪ್ಪರಿಗೆ, ಬಾಣಂತಿ ಕೋಣೆ, ಹೆಂಗಸರ "ವಿಶೇಷ ಸಂದರ್ಭದ" ಕೋಣೆ, ಅಡುಗೆ ಸಾಮಾನುಗಳು, ಪುಸ್ತಕಗಳು, ಪ್ರಶಸ್ತಿಗಳು, ಚಿತ್ರಗಳು - ಅಚ್ಚರಿ ಮೂಡಿಸಿದವು. ಶ್ರೀಧರನ ಕುವೆಂಪು ಮನೆಯ ಮುಂದಿನ ಫೋಟೋ ಕನಸು ನನಸಾದೀತೆಂದು ತೋರಿತು. ಕವಿಯ ಮನೆಯ ಮುಂದೆ ನಿಂತು ನಾವೆಲ್ಲಾ ಫೋಟೋ ತೆಗೆಸಿಕೊಳ್ಳಬೇಕು ಅನ್ನೋದು. ಕುವೆಂಪು ಮನೆಗಿಂತ ಮನಸ್ಸಿಗೆ ಹಿಡಿಸೋ ಜಾಗ ಅಂದರೆ ಕವಿಶೈಲ. ಕವಿಯ ಮನೆಯಿಂದ ಒಂದು ಹತ್ತು ನಿಮಿಷ ನಡೆದಾಗ ಸಿಗುವ ಜಾಗವೇ ಕವಿಶೈಲ. ಕುವೆಂಪು ಹಸ್ತಾಕ್ಷರದಿಂದ ಹಿಡಿದು, ಅವರ ಸಮಾಧಿಯವರೆಗೂ ಎಲ್ಲವೂ ಅಲ್ಲಿ ಲೀನವಾಗಿದೆ. 'ಸುತ್ತಲೆತ್ತೆತ್ತ' ನೋಡಿದರೂ ನಿತ್ಯಹರಿದ್ವರ್ಣದ ಸಹ್ಯಾದ್ರಿಗಿರಿಶ್ರೇಣಿಯ ಮನೋಹರ ನೋಟ. ಅತಿ ಸಮೀಪದಲ್ಲೇ ನವಿಲುಗಳ ಕೂಗು. ದೂರದಲ್ಲಿ "ನಾನೇ ರಾಜ" ಅಂತ ಎದ್ದು ನಿಂತಿರುವ ಕುಂದಾದ್ರಿ ಬೆಟ್ಟ. ಆಗಸದಲ್ಲಿ ಮರೆಯಾದ ಮೋಡಗಳ ರಾಶಿ. ದಣಿದ ದೇಹಕ್ಕೆ ಹಾಯೆನಿಸುವಂತೆ ಬೀಸುತ್ತಿದ್ದ ಮಧುರವಾದ ಗಾಳಿ - ನಮ್ಮನ್ನು ಸ್ವರ್ಗದಲ್ಲಿಯೇ ಪ್ರತಿಷ್ಠಾಪಿಸಿದ್ದವು.'ಮಹಾಪ್ರಾಣ'ದ ಸಂಗತಿಯನ್ನು ನೆನೆಸಿಕೊಂಡು ಆಗಾಗ್ಗೆ ಕಾರಿನ ಕ್ಲಚ್ಚು ಬಿಟ್ಟ ಹಾಗೆ ನಗುತ್ತಲೇ ಇದ್ದಳು ಶುಭಾ! ಕುಪ್ಪಳಿಯಿಂದ ಕುರುವಳ್ಳಿಗೆ ಕೊನೆಯ ಬಸ್ಸು ಏಳೂವರೆಗೆ ಎಂದು ತಿಳಿದಿದ್ದರೂ ಏಳುಗಂಟೆಗೆ ಬಸ್ ನಿಲ್ದಾಣಕ್ಕೆ ಬಂದು ಕುಳಿತಿದ್ದು ನನಗೆ ಸ್ವಲ್ಪ ದಿಗಿಲುಂಟು ಮಾಡಿತ್ತು. ಆ ಬಸ್ ವಿಪರೀತ ರಷ್ ಇದ್ದರೇನಪ್ಪಾ ಮಾಡೋದು ಅಂತ. ಬಸ್ಸಿನಲ್ಲಿ ಪಯಣಿಸಲೂ ಸಹ ಹಿಂದೇಟು ಹಾಕುವವಳು ಸಿಂಧು. ಇನ್ನು ಸೀಟೂ ಇಲ್ಲ ಅಂದ್ರೆ ಅವಳ ಪಾಡೇನಪ್ಪಾ ಎಂದು ಒಂದು ಯೋಚನೆಯಾದರೆ, ಅಲ್ಲಿ ಆ ರಷ್ಷಿನಲ್ಲಿ ಪಯಣಿಸುವ ಮನಸ್ಸು ನನಗೂ ಇರಲಿಲ್ಲವೆಂಬುದು ಇನ್ನೊಂದು ಯೋಚನೆ. ಬಸ್ ನಿಲ್ದಾಣದಲ್ಲೇ ಕುಳಿತಿದ್ದಂತೆಯೇ ಕತ್ತಲೆಯ ಪರದೆಯು ನಮ್ಮನ್ನಾವರಿಸಿತು. ಮಬ್ಬುಗತ್ತಲು ಕಪ್ಪುಕತ್ತಲಾಯಿತು. "ಆರು ಗಂಟೆಗೆಲ್ಲಾ ಕತ್ತಲಾಗುತ್ತೆ, ಬೇಗ ಬನ್ನಿ" ಅಂತ ಶ್ರೇಯಸ್‍ನ ತಾಯಿ ಹೇಳಿಕಳಿಸಿದ್ದರು. "ನಂಗೆ ಒಂಭತ್ ಗಂಟೆ ಆಗಿರೋ ಹಾಗೆ ಅನ್ನಿಸುತ್ತಾ ಇದೆ" ಅಂತ ಸಿಂಧು ಆ ಕತ್ತಲೆಯನ್ನು ನೋಡಿ ಹೇಳಿದಳು. ನಾವು ಹೋಗೋ-ಬರೋ ಗಾಡಿಗಳನ್ನೆಲ್ಲಾ ನೋಡುತ್ತ, "ಇದು ವ್ಯಾಗನ್ ಆರ್, ಇದು ಮಾರುತಿ ಓಮ್ನಿ, ಇದು ಲಾರಿ, ಇದು ಬಸ್ಸು" ಅಂತ ಗುರುತಿಸಲೆತ್ನಿಸುತ್ತಿದ್ದೆವು. ಶೃತಿ-ನಾನು ಪರಸ್ಪರ ಬೆನ್ನಿಗೊರಗಿಕೊಂಡು ಆಯಾಸ ನಿವಾರಣೆ ಮಾಡಿಕೊಂಡು ನೆಲದ ಮೇಲೆಯೇ ಕುಳಿತಿದ್ದಾಗ ಕಗ್ಗತ್ತಲಲ್ಲಿ ನನ್ನ ಟಾರ್ಚನ್ನು ಹೊತ್ತಿಸಿ ಮುಖದ ಬಳಿಯಿಟ್ಟು ದೆವ್ವದಂತೆ ಮೂತಿ ಮಾಡಿಸಿ ಫೋಟೋ ತೆಗೆದ ಶ್ರೀಧರ. ಆಗಸದ ತುಂಬಾ ಕ್ಷೀರಪಥದೊಂದಿಗೆ ಬೆರೆತಿದ್ದ ಅಸಂಖ್ಯಾತ ಚುಕ್ಕಿಗಳು ರಾರಾಜಿಸುತ್ತಿದ್ದವು.ಆದರೆ ಈಗ?

"ಆಕಾಶ ಬಿಕ್ಕುತಿದೆ ಮುಗಿಲ ಮುಸುಕ ಮರೆಗೆ
ಮಾತಿರದ ತಾರೆಗಳು ಅಡಗಿ ಕುಳಿತ ಘಳಿಗೆ..."

ನಮ್ಮ ಪುಣ್ಯವೋ ಏನೋ, ಖಾಲಿ ಬಸ್ಸೇ ಬಂತು, ಕುರುವಳ್ಳಿಗೆ ಸುಖಪ್ರಯಾಣವೇ ಮಾಡಿದೆವು. ಇಳಿದ ನಂತರ ಐಸ್ ಕ್ರೀಮ್ ತಿನ್ನುವ ಬಯಕೆ ಇದ್ದಕ್ಕಿದ್ದ ಹಾಗೆ ಶುರುವಾಯಿತು ನನಗೆ. ಅದನ್ನು ಕೇಳಿದ ಶುಭಾ, ತನಗೂ ಅದೇ ಬಯಕೆಯೆಂದುಬಿಟ್ಟಳು. ಕೊನೆಗೆ ಅಲ್ಲಿ ಒಂದು ಕ್ಯಾಂಟೀನಿನನ್ನು ಹೊಕ್ಕು, ಐಸ್ ಕ್ರೀಮನ್ನು ತೆಗೆದುಕೊಂಡಳು. ನಾನು ಪಕ್ಷ ಬದಲಿಸಿ ಟೀ ಕುಡಿದುಬಿಟ್ಟೆ. ಬೆಳಿಗ್ಗೆ ತೋಟಕ್ಕೆ ಹೊರಟಾಗ ನದಿ ತೀರದಲ್ಲಿ ಕುಳಿತುಕೊಳ್ಳಲು ಹೋದ ನನಗೆ ಚುಚ್ಚಿದ ದೊಡ್ಡದೊಂದು ಬಿದಿರು ಮುಳ್ಳು ಸಣ್ಣದೊಂದು ಗಾಯ ಮಾಡಿತ್ತು. ಆದರೆ ಆ ನೋವು ಚಿತ್ರಹಿಂಸೆ ನೀಡುತ್ತಿತ್ತು. ಅದನ್ನು ಆಗಾಗ್ಗೆ ನೋಡಿಕೊಳ್ಳುತ್ತಲೇ ಇದ್ದೆ. ಕೈ ತೋರಿಸಿ, "ನೋಡು ಮುಳ್ಳು ಚುಚ್ಚಿ ನೋಯುತ್ತಿದೆ" ಅಂತ ಸಿಕ್ಕಸಿಕ್ಕವರಿಗೆಲ್ಲಾ ಹೇಳುತ್ತಿದ್ದೆ. ಇನ್ನೂ ನೋವು ಇದೆ. ಆ ನೋವನ್ನೆಲ್ಲಾ ಮರೆ ಮಾಚುವಂತಿತ್ತು ನಮ್ಮ ಗುಂಪಿನ ಸಹವಾಸ. ಮನೆಗೆ ಹಿಂದಿರುಗಿದಾಕ್ಷಣವೇ ಶ್ರೇಯಸ್‍ನ ತಂದೆ "ಅರುಣ್.... ಹೇಗಿತ್ತು?" ಅಂದ್ರು. ನಂಗೆ ಮನದೊಳಗೇ ಹೇಳತೀರದ ಆನಂದ ಆಯಿತು. ನನ್ನ ತಂದೆಯಿದ್ದಿದ್ದರೆ ಬಹುಶಃ ಹೀಗೆಯೇ ಸ್ನೇಹಪೂರ್ವಕವಾಗಿಯೇ ಇರುತ್ತಿದ್ದರು ಎಂದುಕೊಂಡು ಮೂಡಿಬಂದ ಕಣ್ಣೀರನ್ನು ನುಂಗಿಕೊಂಡುಬಿಟ್ಟೆ.

ಅಮ್ಮ ಅದ್ಭುತವಾದ ಊಟವನ್ನು ನಮಗಾಗಿ ಸಿದ್ಧಪಡಿಸಿದ್ದರು. ತುಪ್ಪ ಅಂತೂ ಕೇಜಿಗಟ್ಟಲೆ ಬಡಿಸುತ್ತಿದ್ದರು "ಚೆನ್ನಾಗಿ ಊಟ ಮಾಡಿ.." ಅಂತ. ಸಿಂಧು ಮತ್ತು ಶೃತಿಯರು ಅದೇಕೆ ಘೃತದ್ವೇಷಿಗಳೋ ಅರಿಯದಾದೆ. ಪತ್ರೊಡೆಯ ಜೊತೆಗೆ ಬೆಲ್ಲದ ಜೋಡಿ ಅದ್ಭುತ! ಅಯ್ಯೋ ನಾನು ಮಲೆನಾಡಿನಲ್ಲಿ ಜನಿಸಬಾರದಿತ್ತೇ?? ಅವರಿಗೆ ಹೇಳಿಬಿಡೋಣ ಅನ್ನಿಸುತ್ತಿತ್ತು, "ನನ್ನನ್ನು ದತ್ತು ತೆಗೆದುಕೊಂಡುಬಿಡಿ" ಅಂತ. ನಾವು ಏನೇನು ಪಡೆದುಕೊಂಡು ಬಂದಿರುತ್ತೇವೋ ವಿಧಿಲೀಲೆ!! ನನಗೆ ಆ ಬೆಲ್ಲ ಅಂತೂ ಸಿಕ್ಕಾಪಟ್ಟೆ ಇಷ್ಟ ಆಗಿಬಿಟ್ಟಿತು. ಬೆಲ್ಲದಷ್ಟೇ ಸಿಹಿ ಮನಸ್ಸು ಅಮ್ಮ-ಅಪ್ಪಂದು!!

ಗೆಳೆಯರೆಲ್ಲಾ ಒಟ್ಟಿಗೆ ಸೇರಿದ್ದೇವೆ ಅಂದರೆ ರಾತ್ರಿ ನಿದ್ರೆಯೆಲ್ಲಾದರೂ ಉಂಟೇ? ಉಂಟು - ಮೊದಲು ಸಿಂಧುವಿಗೆ. ಅವಳನ್ನು ಬಲ್ಲದಿರುವವರು ಯಾರಿದ್ದಾರೆ, ಪಾಪ, ನಿದ್ರೆಯನ್ನು ತಡಿಯಲಾರಳು. ಕೂತ್‍ಕೂತಿದ್ ಹಾಗೇನೇ ನಿದ್ರೆ ಬಂದುಬಿಟ್ಟಿತ್ತು ಅವಳಿಗೆ. ಹಾಸಿಗೆ ಹಾಸಿದ್ದೇ ತಡ ಶರಣಾಗತಿಯನ್ನರ್ಪಿಸಿ ಕನಸಿನ ಲೋಕದ ರಾಣಿಯಾಗಿಬಿಟ್ಟಳು. ನಿದ್ರೆಗೆ ಪ್ರಖ್ಯಾತನಾದ ಶ್ರೀನಿವಾಸನಂಥ ಶ್ರೀನಿವಾಸನೇ ಬೆಕ್ಕಸಕ್ಕೊಳಗಾದನು ಸಿಂಧು ನಿದ್ರಾ ಸಾಮರ್ಥ್ಯವನ್ನು ಕಂಡು. "ನಂಗೆ ಹಾಗೆಲ್ಲ ಅಂತೀರ ನೀವು, ಸಿಂಧು-ನ ನೋಡಿ, ಹೇಗೆ ನಿದ್ರೆ ಮಾಡ್ತಾ ಇದ್ದಾಳೆ" ಅಂತ ಪ್ರಪಂಚ ಪ್ರಳಯ ಆದರೂ ತನಗೆ ಸಂಬಂಧ ಪಟ್ಟಿಲ್ಲ ಅಂತ ಮಲಗಿದ್ದ ಸಿಂಧುವನ್ನು ತೋರಿಸಿ ನನಗೆ, ಶ್ರೀಧರನಿಗೆ ಹೇಳಿದನು ಶ್ರೀನಿವಾಸ.

ಮೈಸೂರಿನ ರಾತ್ರಿಯ ಹರಟೆಯನ್ನು ಮರೆಯಲಾದೀತೇ? ಅದೇ ರೀತಿಯ ಹರಟೆ ಇಲ್ಲಿ ಮೂಡಿ ಬರಲಿಲ್ಲ. ಕಳ್ಳ-ಪೋಲೀಸ್ ಆಡಿದೆವು, ಯಾವುದೋ ಜೋಕು ಹೇಳಿಕೊಂಡು ಹೊಟ್ಟೆ ಹಿಡಿದುಕೊಂಡು ಮನಸಾರೆ ನಕ್ಕೆವು. ಶ್ರೀಧರ ಅಷ್ಟೊಂದು ನಕ್ಕಿದ್ದು ನಾನು ಕಂಡಿರಲಿಲ್ಲ. ಶುಭಾ ಅಂತೂ ನೆನೆಸಿನೆನೆಸಿಕೊಂಡು ಕ್ಲಚ್ ಬಿಡುತ್ತಲೇ ಇದ್ದಳು. ಶೃತಿ ನಿದ್ದೆಗಣ್ಣಿಗೊಮ್ಮೆ, ಎಚ್ಚರಕ್ಕೊಮ್ಮೆ ಎರಡು ದಡಕ್ಕೂ ಪಯಣಿಸುತ್ತಲೇ ಇದ್ದಳು. ಶ್ರೇಯಸ್ ಇದ್ದಕ್ಕಿದ್ದ ಹಾಗೆ ಮೌನಾವತಾರ ತಾಳಿಬೀಡುತ್ತಿದ್ದ - "ಲಿಸ್ನಿಂಗ್ ಮೋಡ್ ಅಲ್ಲಿದೀನಿ" ಅಂತ ನೆಪ ಹೇಳುತ್ತಾ! ಶ್ರೇಯಸ್ಸಿಗೆ ಕೊಡುವ ಉಡುಗೊರೆಗೆ ಬಹಳ ಸತಾಯಿಸಿ ಕೊನೆಗೆ ಕೊಟ್ಟೆವು. ಅವನು ನಿರೀಕ್ಷಿಸಿದ್ದೇ ಒಂದು, ಆಗಿದ್ದೇ ಇನ್ನೊಂದು. ಆ ಕಥೆ ಇಲ್ಲಿ ಅಪ್ರಸ್ತುತ. ಸ್ವರೂಪ, ಸ್ಮಿತೆ ಫೋನಾಯಿಸುತ್ತಲೇ ಇದ್ದರು. ಎಸ್ಸೆಮ್ಮೆಸ್ಸಂತೂ ಕೇಳಲೇ ಬೇಕಿಲ್ಲ, ಎಲ್ಲರೂ ಮಾಡುತ್ತಿದ್ದರು. ಅಸಲಿಗೆ ನಾವು ಏಳೇ ಜನ ಪಯಣಿಸಿದ್ದರೂ ಮಿಕ್ಕವರೆಲ್ಲರೂ ನಮ್ಮೊಂದಿಗೇ ಇದ್ದರು. ಎಲ್ಲರೂ ಮನದೊಳಗೇ ಇದ್ದರು. ನಮ್ಮಲ್ಲೇ ಇದ್ದರು. ಸ್ವರೂಪ, ಸ್ಮಿತೆ, ಶೃತಿ, ಸಂತೋಷ, ವಿವೇಕ, ಶ್ರೀ... ಎಲ್ಲರೂ ನಮ್ಮ ಜೊತೆಗೇ ಇದ್ದರು. ಆದರೂ ಮಿಸ್ಸಿಂಗ್ ದೆಮ್...

ಹಾಡು ಹೇಳುವುದು ನಮ್ಮ ಗುಂಪಿನ ಸಂಪ್ರದಾಯ. ಅದರಲ್ಲೂ ಶ್ರೀನಿವಾಸ ಇದ್ದರಂತೂ ಸಂಗೀತ ರಸಗಳಿಗೆಯಿರದೆ ಇರಲು ಸಾಧ್ಯವೇ? ಈ ಬಾರಿ, ಶ್ರೀನಿವಾಸ ಮತ್ತೆ ನಾನು ಇಬ್ಬರೂ ಯುಗಳ ಹಾಡನ್ನು ಹಾಡಿದೆವು. ನಮಗೇ ಆನಂದವಾಗುವಷ್ಟು ಸೊಗಸಾಗಿ ಮೂಡಿ ಬಂತು.


ಮೈತ್ರೀಮ್ ಭಜತ ಅಖಿಲ ಹೃತ್ ಜೇತ್ರೀಮ್
ಆತ್ಮವತೇವ ಪರಾನ್ನಪಿ ಪಶ್ಯತ್
ಯುದ್ಧಂ ತ್ಯಜತ ಸ್ಪರ್ಧಾಮ್ ತ್ಯಜತ
ತ್ಯಜತ ಪರೇಶ್ವಕ್ರಮಮಾಕ್ರಮಣಮ್...

ಅಪ್ಪ-ಅಮ್ಮ ಒಳಗೆ ಮಲಗಿದ್ದರಾದ್ದರಿಂದ ಮೆಲುಧ್ವನಿಯಲ್ಲೇ ಹಾಡಿದೆವು. ಬೆಳಿಗ್ಗೆ ಎದ್ದ ಮೇಲೆ "ತಮಿಳು ಹಾಡು ಹೇಳ್ತಿದ್ದರಲ್ಲಾ ಚೆನ್ನಾಗಿತ್ತು ಕೇಳೋಕೆ" ಅಂತ ಅಪ್ಪ ಹೇಳಿದಾಗ ನಾನು ಸ್ನಾನದ ಕೋಣೆಯಲ್ಲೇ ಸಂತೋಷ ಪಟ್ಟೆ.

ಕುರೈ ಒನ್ರುಮ್ ಇಲ್ಲೈ ಮರೈ ಮೂರ್ತಿ ಕಣ್ಣಾ...

ಅಂತ ಹಾಡಿದ್ದೆವು ನಾನು ಮತ್ತು ಶ್ರೀನಿವಾಸ.

ಬೆಳಿಗ್ಗೆ ಅಲಾರಂ ಹೊಡೆಯೋದಕ್ಕೆ ಮುಂಚೆಯೇ ಅಮ್ಮ ಎದ್ದು ನಮಗಾಗಿ ಅವಲಕ್ಕಿಯನ್ನು ಮಾಡಿದ್ದರು. ಬೆಳಿಗ್ಗೆ ಪ್ರವಾಸ ಮುಂದುವರೆಸಬೇಕಿತ್ತಲ್ಲಾ ಕುಂದಾದ್ರಿಗೆ. ಕುಂದಾದ್ರಿಗೆ ಚಾರಣ ಮಾಡಬೇಕೆಂಬುದು ನನ್ನ ಬಹುದಿನದ ಬಯಕೆಯಾಗಿತ್ತು. ಕಾರಣ, ಅಲ್ಲಿ ದಟ್ಟಾರಣ್ಯವಿದೆ, ನಿಷಿದ್ಧಪ್ರದೇಶ ಹೀಗೆಲ್ಲಾ. ಆದರೆ, ಅದು ಜಾಲಮಂಗಲಕ್ಕಿಂತ ಚಿಕ್ಕ ಗುಡ್ಡ ಎಂದು ತಿಳಿದಾಗ ಸ್ವಲ್ಪ ನಿರಾಶೆಯಾದರೂ ಹಸಿರನ್ನು ಮೆಚ್ಚಲೇ ಬೇಕು. ಮಲೆನಾಡ ಹಸಿರು ಎಲ್ಲೆಲ್ಲೂ ಮೆರೆಯುತ್ತಿತ್ತು. ಬೆಳಿಗ್ಗೆ ಕಾರೊಂದು ನಮಗಾಗಿ ಕಾದಿತ್ತು. ಪ್ರಸನ್ನ ಎಂಬ ಸಾರಥಿ ನಮಗಾಗಿ ಒಂದರ್ಧ ಗಂಟೆ ಕಾದಿದ್ದರು. ಜೋಗಿಗುಂಡಿಗೆ ಹೋಗುತ್ತೇವೆಂದು ಅರಿತ ಅಮ್ಮ "ನೀರಲ್ಲಿ ಹುಷಾರು, ಕಾಡಲ್ಲಿ ಹುಷಾರು, ಬೆಟ್ಟದ ಮೇಲೆ ಹುಷಾರು" ಅಂತ ಸಾಸಿರ ರೀತಿ ಸಾಸಿರ ಬಾರಿ ಹೇಳಿ ಕಳಿಸಿದರು. ಅವರ ಕಾಳಜಿ. ಕುಂದಾದ್ರಿಯಲ್ಲಿ ನನ್ನ ಮೇಲೆ ಶುಭಾ, ಶೃತಿ ತೋರಿಸಿದ "ಕಾಳಜಿ"ಯನ್ನೇ ಅಮ್ಮನೂ ತೋರಿಸಿದ್ದು. ಕುಂದಾದ್ರಿಯನ್ನು ಹತ್ತುವ ಬದಲು ಕಾರಿನಲ್ಲೇ ಮೇಲಿನವರೆಗೂ ಹೋಗಿದ್ದು ಅತಿದೊಡ್ಡ ವಿಪರ್ಯಾಸ. ಆ ಬೆಟ್ಟಕ್ಕೆ ರಸ್ತೆ ಮಾಡುವ ಯೋಚನೆ ಬಂದಿದ್ದೇ ದೊಡ್ಡ ವಿಪರ್ಯಾಸ. ರಸ್ತೆ ಮಾಡಿಸಿದವನ ಕೈಗೆ ಲಕ್ವಾ ಹೊಡೆಯಲಿ.ನಾನು ಅನೇಕ ಕಾರಣಗಳಿಂದ ಒಬ್ಬನೇ ಪ್ರಯಾಣ ಮಾಡಲು ಇಚ್ಛಿಸುತ್ತೇನೆ. ಅದರಲ್ಲೂ ವನ್ಯಪಯಣದಲ್ಲಂತೂ. ಅನೇಕ ಸಲ ನಾನು ಎಲ್ಲಿಗೆ ಹೋಗಿರುತ್ತೇನೆ, ಏನೇನು ಸಾಹಸ ಮಾಡಿರುತ್ತೇನೆ ಎಂದು ಯಾರಿಗೂ ಹೇಳೂ ಇರೋದಿಲ್ಲ. ಬಂಡೆಗಳ ಹತ್ತಿರ ನಿಂತಿದ್ದಾಗ ಶೃತಿ ಮತ್ತು ಶುಭಾರ "ಕಾಳಜಿ" ನನಗೆ ಕೆಲವು ಪೋಷಕರನ್ನು ನೆನಪು ಮಾಡಿಕೊಟ್ಟಿತು. "ಅಲ್ಲಿಗೆ ಹೋಗ್ಬೇಡಿ, ಇಲ್ಲಿಗೆ ಹೋಗ್ಬೇಡಿ.." ಅಂತ ಪೋಷಕರು ಹೇಳ್ತಾರಲ್ಲಾ, ಅದು. ನನ್ನ ಬದುಕೂ ಸಾವೂ ಕಾಡಿನಲ್ಲೇ ಎಂಬುದನ್ನು ಸೃಷ್ಟಿಕರ್ತನು ನಿರ್ಣಯಿಸಿಯಾಯಿತು. ಬದುಕು ನಿಸರ್ಗಕ್ಕೆ ಸಮರ್ಪಣೆ. ಈ "ಪೋಷಕರ ಕಾಳಜಿಯು" ಒಂದು ಕ್ಷಣ ನನ್ನನ್ನು ಏನೇನೋ ಯೋಚನೆಯ ಚಾರಣಕ್ಕೆ ಕರೆದೊಯ್ದುಬಿಟ್ಟಿತು. ಆಮೇಲೆ "ಹಾಳಾದೋನೆ, ನೀನು ಇಲ್ಲಿ ಒಬ್ನೇ ಇಲ್ಲ, ಗೆಳೆಯರ ಜೊತೆ ಇದ್ದೀಯ, ಮುಚ್ಕೊಂಡು ಸರೀಗಿರು" ಅಂತ ತಲೆ ಕೆಡವಿಕೊಂಡು ಬಂಡೆಗಳಿಂದ ಶೇಕಡ ನೂರಕ್ಕೆ ನೂರು ಸುರಕ್ಷಿತನಾಗಿದ್ದರೂ ಅವರುಗಳಿಗೆ ಸಮಾಧಾನವಾಗುವಂತೆ ಹಿಂದೆ ಬಂದೆ. ಒಬ್ಬನೇ ಇದ್ದಿದ್ದರೆ ಇನ್ನೊಂದು ನೂರು ಅಡಿ ಮುಂದೆ ಹೋಗಬಹುದಿತ್ತು ಎಂಬ ಸತ್ಯವರಿತಿದ್ದರೂ ಅವರ ಪ್ರೀತಿಪೂರ್ವಕ ಕಾಳಜಿಗೆ ನಾನು ಬದ್ಧ.

ಕುಂದಾದ್ರಿಗೆ ಶ್ರೇಯಸ್ "ಕುಂದ ಗುಡ್ಡ" ಎಂದು ಕರೆಯುತ್ತಿದ್ದ. ನಾವು "ರಾಗಿ ಗುಡ್ಡ" ಅಂತ ಕರೆಯೋದಿಲ್ವಾ ಹಾಗೆ. ಕುಂದಾದ್ರಿಗೆ "ಗುಡ್ಡ" ಅನ್ನೋ adjective ಅದ್ಯಾಕೋ ಸರಿ ಹೊಂದುತ್ತಿಲ್ಲ ಅನ್ನಿಸುತ್ತಿತ್ತು. "ಅದ್ರಿ"ಗೆ ಇವರೇಕೆ ಗುಡ್ಡ ಅನ್ನುತ್ತಿದ್ದಾರೆ ಎಂದು ಆಲೋಚಿಸಿದೆ. ಎವೆರೆಸ್ಟ್ ಬೆಟ್ಟ ಅನ್ನಲ್ಲ, ಕಾವೇರಿ ಹೊಳೆ ಅನ್ನಲ್ಲ, ಬೆಂಗಳೂರು ಗ್ರಾಮ ಅನ್ನಲ್ಲ - ಹಾಗೇ ಕುಂದಾದ್ರಿಗೆ ಮಾತ್ರ ಯಾಕೆ ಈ ಪಟ್ಟ? ಯಾರಿಗೆ ಗೊತ್ತು! ಕಾರಿನಲ್ಲಿ ಮೊದಲು ಕುಂದ ಗುಡ್ಡಕ್ಕೆ ಹೋಗಿ ಅಲ್ಲಿ ಕೆಲಕಾಲ ಕಳೆದು ಕೊಳಗಾರು ಎಂಬ ಊರಿನಲ್ಲಿ ಶ್ರೇಯಸ್‍ನ ಕಝಿನ್ ಸುಪ್ರೀತರ ಮನೆಗೆ ಹೋದೆವು. ಬಹಳ ಹಳೆಯ ಕಾಲದ ಮನೆ ಇವರದು. ಮನೆಯೆಲ್ಲಾ ತೋರಿಸಿದ ಶ್ರೇಯಸ್ - ಬಚ್ಚಲು ಮನೆಯಿಂದ ಆರಂಭಿಸಿ! ಜೇನುಗೂಡನ್ನು ನೋಡಿ ಬಾಯಲ್ಲಿ ನೀರೂರಿತು. ಅವರ ಮನೆಯ ನಾಯಿ ಮಾತ್ರ ನಮ್ಮನ್ನು ನೋಡಿ ವಿಪರೀತ ತಲೆ ಕೆಡಿಸಿಕೊಂಡುಬಿಟ್ಟಿತ್ತು. ಒಂದೇ ಸಮನೆ ನಕ್ಸಲೀಯರನ್ನು ಕಂಡ ಪೋಲೀಸರಂತೆ ಬಾಯಿಗೆ ಕೆಲಸ ಕೊಡುತ್ತಲೇ ಇತ್ತು. ಅವರ ಮೆನೆಯನ್ನು ಆಮೂಲಾಗ್ರವಾಗಿ ವೀಕ್ಷಣೆ ಮಾಡಿ, ಫೋಟೋ ತೆಗೆದುಕೊಂಡು, ಜೋಗಿ ಗುಂಡಿಯತ್ತ ಪಯಣ ಮುಂದುವರೆಸಿದೆವು.

ಆಗುಂಬೆಯ ಬಳಿ ಬರ್ಕಣ ಎಂಬ ಬೃಹತ್ ಕಣಿವೆಯಿದೆ. ಕನ್ನಡ ನಾಡಿನ ಪಶ್ಚಿಮಘಟ್ಟದ ಅತಿ ದಟ್ಟಡವಿಯಿರುವುದು ಈ ಶ್ರೇಣಿಯಲ್ಲಿಯೇ. ಭಾರತದಲ್ಲಿ ಇಲ್ಲೇ ಅತಿ ಹೆಚ್ಚು ಮಳೆ ಬೀಳುವುದರಿಂದ ಹಸಿರು ಇಲ್ಲಿನ ಅರಸ. ಸೀತಾ ನದಿಯು ಇಲ್ಲಿನ ಒಡತಿ. ಕಾಳಿಂಗ ಸರ್ಪ ಇಲ್ಲಿನ ಶೋಭೆ. ಈ ಬರ್ಕಣ ಕಣಿವೆಯಿಂದ ಹರಿದು ಬರುವ ನೀರು ಜೋಗಿ ಗುಂಡಿಯೆಂಬ ಕಡೆ ಸ್ನಾನದ ತೊರೆಯನ್ನೇ ಉಂಟು ಮಾಡುವುದರಿಂದ ಪ್ರವಾಸಿಗರು ಬರುತ್ತಲಿರುತ್ತಾರೆ. ಮಳೆಗಾಲದಲ್ಲಿ ಕಾಲಿಡುವ ಕಲ್ಪನೆ ಮಾಡಲೂ ಅಸಾಧ್ಯ ಸ್ಥಳ ಅದು. ನಕ್ಸಲೀಯರ ಕಾರ್ಯಾಚಣೆಯಿರುವಂಥ ಸ್ಥಳವಾದ್ದರಿಂದ ಮನೆಯಲ್ಲಿ ಹುಷಾರು ಹುಷಾರು ಅಂತ ಸಾವಿರ ಬಾರಿ ಹೇಳಿದ್ದರು. ಆಗುಂಬೆಯ ಪೋಲಿಸರು ನಿರಾತಂಕವಾಗಿ ಪರವಾನಗಿ ಕೊಟ್ಟರಾದರೂ ನಮ್ಮ ವಿಳಾಸ, ಗಾಡಿ ಸಂಖ್ಯೆ, ಎಷ್ಟು ಜನ ಇದ್ದೀವಿ - ಸಕಲ ಮಾಹಿತಿಯನ್ನೂ ತೆಗೆದುಕೊಂಡ ನಂತರವೇ ಆಗುಂಬೆಯ ಚೆಕ್‍ಪೋಸ್ಟ್ ದಾಟಲು ಬಿಟ್ಟಿದ್ದು. ಜೋಗಿಗುಂಡಿಯನ್ನು ಹುಡುಕಲು ಸ್ವಲ್ಪ ಕಷ್ಟವೆನಿಸಿತು, ನಂತರ ಕೆಲವು ಸ್ಥಳೀಯರ ಸಹಾಯದಿಂದ ಅಡವಿಯೊಳಗೆ ಹೊಕ್ಕು ಜೋಗಿಗುಂಡಿಯನ್ನು ತಲುಪಿದೆವು. ಹಾದಿಯಲ್ಲಿ ಬೆರಳೆಣಿಕೆಯಷ್ಟು ಇಂಬಳಗಳು ಶುಭಾ, ಸಿಂಧುರನ್ನು ಕಿರುಚಿ ಅರಚಿಸಿದವು. ಇಂಬಳಗಳಿಗೂ ಜಿಗಣೆಗಳಿಗೂ ವ್ಯತ್ಯಾಸವನ್ನು ಮಲೆನಾಡಿಗರು ಹೇಳುತ್ತಾರೆ. ಶಬ್ದಕೋಶದ ಪ್ರಕಾರ, ವನ್ಯಜೀವಿತಜ್ಞರ ಪ್ರಕಾರ ಎರಡೂ ಒಂದೇ ಆದರೂ ಸ್ಥಳೀಯರು ಇಂಬಳಕ್ಕೂ ಜಿಗಣೆಗೂ ಸಾಕಷ್ಟು ವ್ಯತ್ಯಾಸ ಹೇಳುತ್ತಾರೆ. "ನೀವು ಜಿಗಣೆ ನೋಡಿರೋಕೆ ಸಾಧ್ಯ ಇಲ್ಲ, ಇಂಬಳ ನೋಡಿರ್ತೀರ ಅಷ್ಟೇ" ಅಂತ ಅಮ್ಮ ಎಷ್ಟೊಂದು ಸಲ ಹೇಳಿದರು. ಜೋಗಿಗುಂಡಿಯಲ್ಲಿ ನಮ್ಮ (ಶುಭಾಳ) ಪುಣ್ಯವೋ ಏನೋ ಒಂದು ಇಂಬಳವೂ ಇರಲಿಲ್ಲ. ಗುಂಡಿಯ ಎಡಭಾಗವನ್ನು ನೋಡುತ್ತಿದ್ದಂತೆಯೇ ಶ್ರೇಯಸ್ "ಇಲ್ಲಿ ಆಳ ಇದೆ ವಿಪರೀತ, ಇಳೀಯೋದ್ ಬೇಡ ಇಲ್ಲಿ" ಅಂತ ಆದೇಶಿಸಿದ. ಅವನ ಆದೇಶ ನೂರಕ್ಕೆ ನೂರು ಸರಿಯಾದದ್ದು. ಜಲಧಾರೆಯ ಕೊರೆತ ಎದ್ದು ಕಾಣಿಸುತ್ತಿತ್ತು. ಜಲಧಾರೆಯ ಕೆಳಗೆ ಎಂದೂ ಈಜಬಾರದು. ಎಂಥಾ ಈಜುಗಾರರ ಚಾಂಪಿಯನ್ ಕೂಡ ಇಂಥಾ ನೀರಿನಲ್ಲಿ "ನೀರು ಪಾಲು" ಆಗಿರೋದನ್ನು ಚರಿತ್ರೆ ಬರೆದಿಟ್ಟುಕೊಂಡಿದೆ. ಬಲಕ್ಕೆ ತಿರುಗಿ ನಮಗೆಂದೇ ಮಾಡಿಸಿದಂತಿದ್ದ ಗುಂಡಿಯಲ್ಲಿ ಸ್ವಚ್ಛಂದ ನೀರಿನಲ್ಲಿ ಮನ ಬಂದಷ್ಟು ತೋಯ್ದೆವು. ನಾನು ನೀರಿಗಿಳಿಯೋದೇ ಅಪರೂಪ. ಆ ನೀರು ನೋಡಿದ ತಕ್ಷಣ ಇಳಿಯಬೇಕೆನಿಸಿ ನನ್ನ ನೀರ್ಬಟ್ಟೆ ತೊಟ್ಟು ಇಳಿದೇ ಬಿಟ್ಟೆ. ಕೊರಕೊರನೆ ಕೊರೆಯುತ್ತಿದ್ದ ನೀರಿನಲ್ಲಿ ಮಲಗಿಕೊಂಡೆವು, ಕುಣಿದೆವು, ಒಬ್ಬರ ಮೇಲೊಬ್ಬರು ನೀರೆರಚಿಕೊಂಡೆವು, ಕುಳಿತೆವು, ಹರಟಿದೆವು - ಒಟ್ಟಿನಲ್ಲಿ ಅಲ್ಲಿಂದ ಎದ್ದೇಳೋ ವಿಧಿಯನ್ನು ಮಾತ್ರ ಎಲ್ಲರೂ ಶಪಿಸಿದೆವು. ವಿಧಿಗೆ ಗೊತ್ತು, ನಾವು ಹೀಗೆ ಅಂತ, ಅದಕ್ಕೆ ಇನ್ನೊಂದು ದೊಡ್ಡ ಗುಂಪೊಂದನ್ನು ಅದೇ ಸ್ಥಳಕ್ಕೆ ಕಳಿಸಿಬಿಟ್ಟಿತು. ನಮ್ಮ ಏಕಾಂತಕ್ಕೆ ಭಂಗ ಬಂದಂತಾಗಿ ಅಲ್ಲಿಂದ 'ಎಸ್ಕೇಪ್' ಆದೆವು!!

ನೀರಿನಲ್ಲಿ ಆಡಿ ಹೊಟ್ಟೆಯಂತೂ ಕದನಕುತೂಹಲ ರಾಗದಲ್ಲಿ ಹಾಡುತ್ತಿತ್ತು. ಶ್ರೇಯಸ್, "ನೀರ್‍ದೋಸೆ ತಿನ್ನೋಣ, ನೀರ್‍ದೋಸೆ ತಿನ್ನೋಣ" ಅಂತ ಆಗಾಗ್ಗೆ ಹೇಳಿ ಹೇಳಿ ನೀರೂರಿಸುತ್ತಿದ್ದ. ಕೊನೆಗೂ ಆಗುಂಬೆಯ ಹೊಟೆಲೊಂದನ್ನು ಹೊಕ್ಕು ಚೆನ್ನಾಗಿ ಹೊಡೆದೆವು. ಟೀ ಕಾಫಿಗಳಿಗೂ ಮಿತಿಯಿರಲಿಲ್ಲ. ನಂತರದ ಕಾರ್ಯಕ್ರಮವಿದ್ದುದು ಆಗುಂಬೆಯ ಸೂರ್ಯಾಸ್ತಮ ವೀಕ್ಷಣೆ. ಮಳೆಗಾಲ ಇನ್ನೂ ಸಂಪೂರ್ಣವಾಗಿ ಮುಗಿದೇ ಇಲ್ಲ, ಆದರೂ ಏನೋ ಆಶಾಭಾವ, ವಿಶ್ವವಿಖ್ಯಾತ ಸೂರ್ಯಾಸ್ತಮ ದೃಶ್ಯ ನಮಗೂ ಸಿಗುತ್ತೆ ಅಂತ. ಇನ್ನೂ ಎರಡುಗಂಟೆಗಳ ಕಾಲ ಇತ್ತು. ಅಲ್ಲೇ ಒಂದು ಸಣ್ಣ ಉದ್ಯಾನವನ್ನು ನೋಡಿಕೊಂಡು ಬಂದು ಮೆಟ್ಟಿಲೇರಿ ಕುಳಿತುಬಿಟ್ಟೆವು. ಹಗೆಯು ನನ್ನ ಹಿಂಸಿಸಲು ಬಂದೇ ಬಿಟ್ಟಿದ್ದ. ತಲೆನೋವು!! ಹಣೆಯ ಒಳಗಿನಿಂದ ಟಪ ಟಪ ಹೊಡೆಯುತ್ತಿತ್ತು. ಥ್ಯಾಂಕ್ಸ್ ಟು ಮೊಮ್ಮಗಳು, ಹಣೆಯನ್ನೂ ಮನಸ್ಸನ್ನೂ ಹಗುರ ಮಾಡಿಕೊಟ್ಟಳು. ಜನ್ಮ ಜನ್ಮಾಂತರಕ್ಕೂ ನೆನೆಸಿಕೊಳ್ಳಬೇಕು. ನನಗೆ ಪಯಣದಲ್ಲೆಲ್ಲಾ ತಲೆನೋವು ಬಂದಿದ್ದೇ ಇಲ್ಲ. ಇದೇ ಮೊದಲು. ಶೃತಿಯ ಹಿತವೈದ್ಯಸ್ಪರ್ಶವು ಶಿರೋಬಾಧೆಯನ್ನು ಶಮನಗೊಳಿಸಿತು! ಅಲ್ಲೇ ಕುಳಿತು ಕನ್ನಡ ಪದಾಂತಾಕ್ಷ್ಯರಿಯನ್ನು ಆಡುತ್ತ ಕುಳಿತೆವು. ಹೊಸ ಹೊಸ ಪದಗಳ ಪರಿಚಯವನ್ನು ಶ್ರೇಯಸ್, ಶ್ರೀನಿವಾಸ್ ಹಾಗೂ ಶ್ರೀಧರ್ ಮಾಡಿಕೊಟ್ಟರು. ಜೊತೆಗೆ ಬೆಂಗಳೂರಿನಿಂದ "ಪಿಡ್ಜಾ ತಿನ್ನುತ್ತಿದ್ದೇವೆ, ಕಾಫಿ ಡೇ ಗೆ ಹೋಗ್ತಾ ಇದ್ದೀವಿ" ಅಂತೆಲ್ಲಾ ಸಂದೇಶಗಳು ಬೇರೆ! ಆಗುಂಬೆಯ ಸೂರ್ಯಾಸ್ತಮಕ್ಕಿಂತ ಸುಂದರ ಇನ್ನೇನಿದೆ ಎಂದು ಶ್ರೀನಿವಾಸ ಅದೇನೋ ಉತ್ತರ ಕೊಟ್ಟ ಎಲ್ಲರಿಗೂ!

ಆಗುಂಬೆಯ ಸೂರ್ಯ ದಿಗಂತದಲ್ಲಿ ಲೀನವಾಗುವ ಮುನ್ನವೇ ಮೇಘರಾಜ ತನ್ನ ವಶವನ್ನಾಗಿಸಿಕೊಂಡುಬಿಟ್ಟ. ಇನ್ನು ಕೆಲವೇ ನಿಮಿಷಗಳಲ್ಲಿ ಕತ್ತಲಾಗುವುದೆಂಬುದನ್ನರಿತ ನಾವುಗಳು ಅಲ್ಲಿಂದ ಹೊರಟುಬಿಟ್ಟೆವು. ಪ್ರಸನ್ನರು ಕಾರನ್ನು ಮನೆಯತ್ತಾ ಶರವೇಗದ ಸರದಾರನಂತೆ ಓಡಿಸಿದರು. ಸಿಂಧು ರಸ್ತೆಯನ್ನು ನೋಡಲು ಸಾಧ್ಯವೇ ಇಲ್ಲವೆಂದು ತೀರ್ಮಾನಿಸಿ ಮಲಗಿಬಿಟ್ಟಳು. ಹೆಗ್ಗೆಬಯಲು ತಲುಪುವ ಹೊತ್ತಿಗೆ ಎಲ್ಲರೂ ಒಂದು ಸುತ್ತು ನಿದ್ರೆಯನ್ನು ಸವಿದು ಬಂದುಬಿಟ್ಟಿದ್ದೆವು. ಮತ್ತೆ ಅದೇ ಧಾಟಿಯಲ್ಲಿ, "ಅರುಣ್... ಹೇಗಿತ್ತು?" ಅಂತ ಅಪ್ಪ ಹೇಳಿದಾಗ ಮನಸ್ಸು ಅದೇ ರೀತಿ ಪುಲಕಿತವಾಯಿತು. ಮತ್ತೆ ಅಮೃತಸವಿಯಂತೆ ಊಟವನ್ನು ಅಮ್ಮ ಬಡಿಸಿದರು. ದೇಹದ ದಣಿವೆಲ್ಲಾ ಮನಸ್ಸಿನ ಕಲ್ಮಶದೊಂದಿಗೆ ಬಚ್ಚಲಲ್ಲಿ ಕೊಚ್ಚಿ ಹೋಗುವಂಥ ಅದ್ಭುತ ಸ್ನಾನ ನಮ್ಮನ್ನಾಹ್ವಾನಿಸಿತ್ತು.ಎರಡು ವಿಷಯಗಳಿಗೆ ವಿಶೇಷಾದ್ಯತೆ ಇರುವುದರಿಂದ ಅದನ್ನು ಕೊನೆಯಲ್ಲಿ ಬರೆಯುತ್ತಿದ್ದೇನೆ.

ಶ್ರೀನಿವಾಸನು ಶ್ರೇಯಸ್ಸಿಗೆಂದು ಬರೆದ ಕವನ:

ಸುರರು ಹರಸಿಹ ವರವು,
ಖಗಗಳುಲಿದಿಹ ಚೆಲುವು,
ವಿಶದವೀ ನಿನ್ನ ಗೆಳೆತನದ ಸುಧೆಯೊಲವು!
ರವಿಶಶಿಗಳಾಗಸದಿ ನಗುವನಕ ಬೆಳಗುತ್ತ-
ಲಿರಲಿ ನಿನ್ನಯ ಬಾಳಿನೊಳು ನಗೆಯ ಸೊಡರು!

ಶುಭವು ಭವಿಸಲಿ, ಸುಖವು ಸ್ಫುರಿಸಲಿ,
ಭಾಗ್ಯವುದಯಿಸಿ ಬೆಳಗಲಿ;
ಶರಧಿಶಯನನ ಒಲುಮೆಯೊದಗಲಿ,
ಯತ್ನವೆಲ್ಲವೂ ಫಲಿಸಲಿ.....

ಹುಟ್ಟುಹಬ್ಬಕ್ಕೆ ಎಂಥಾ ಸೊಗಸಾದ ಉಡುಗೊರೆ. ನಾನೂ ಯಾರಿಗಾದರೂ ಈ ರೀತಿಯ ವಿಶೇಷವಾದ ಉಡುಗೊರೆಯೊಂದನ್ನು ಕೊಡಬೇಕೆಂದು ಅನೇಕ ಬಾರಿ ಅಂದುಕೊಂಡಿದ್ದೇನೆ, ಆಗಿಲ್ಲ.ಎರಡನೆಯದು, ಅಲ್ಲಿ ನನ್ನ ಮನಸೆಳೆದ ಇಬ್ಬರು - ಜಿಮ್ಮಿ ಮತ್ತು "ಕರಿಯಾ ಐ ಲವ್ ಯೂ...."

ಇಬ್ಬರನ್ನೂ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇಬ್ಬರಿಗೂ ನನ್ನ ಕಂಡರೆ ಸಿಟ್ಟಿತ್ತು. ಮುಂದಿನ ಸಲದ ಹೊತ್ತಿಗೆ ನನ್ನ ಮೈತ್ರಿಯನ್ನರಸುತ್ತವೇನೋ ನೋಡಬೇಕು. ಅದು ಏನೇ ಆಗಲೀ, ದೂರ ಹೋದರೂ ನನಗೆ ಹಾಗೇ ಪ್ರೀತಿಸಲು ಗೊತ್ತು.

ಶ್ರೀನಿವಾಸ ತನ್ನ ನಿವಾಸಕ್ಕೆ ನೇರವಾಗಿ ಪಯಣಿಸಬೇಕಾಗಿದ್ದರಿಂದ ಎಲ್ಲರಿಗಿಂತ ಮುಂಚೆಯೇ ಹೊರಟುಬಿಟ್ಟ. ಅಪ್ಪ - ಅಮ್ಮಂಗೆ ಬೈ ಹೇಳಿ ನಾವುಗಳೂ ನಮಗಾಗಿ ಕಾದಿದ್ದ ಆಟೋಗಳನ್ನೇರಿದೆವು. ಮನಸ್ಸು ಅಲ್ಲೇ ಇತ್ತು. ತೀರ್ಥಹಳ್ಳಿಯ ಬಸ್ಸಿನಲ್ಲಿ ಕುಳಿತು ಅದನ್ನೇ ಮಾತನಾಡಿಕೊಂಡೆವು. "ಯಾಕೋ ಈ ಪ್ರವಾಸ ಸಾಲದೇ ಬಂದಿತು.. ಸಮಯ ಬೇಗ ಆಗೋಯ್ತು.." ತಲೆ ನೋವು ಇನ್ನೂ ಇತ್ತು ಒಳಗೆ. ನಿದ್ದೆ ಬೇಕಿತ್ತು ಅಷ್ಟೇ ಅದಕ್ಕೆ. ಬಸ್ಸಿನಲ್ಲಿ ಕೂತವರಾರಿಗೂ ಮನಸ್ಸಿರಲಿಲ್ಲ ಬೆಂಗಳೂರಿಗೆ ವಾಪಸಾಗಲು. ಎಲ್ಲರ ಕಾಲೂ ಪದ ಹೇಳುತ್ತಿತ್ತು, ಕಂಗಳು ಎಳೆಯುತ್ತಿತ್ತು. ಆದರೆ ಪಯಣದ, ಜೊತೆಯಿದ್ದ ಗಳಿಗೆಗಳು ಸಾಲದೇ ಬಂದಿದ್ದು ಎಲ್ಲರ ಕಣ್ಣೋಟದಲ್ಲೂ ಗೋಚರಿಸುತ್ತಿತ್ತು. ಬೆಳಗಾಗೋದರೊಳಗಾಗಿ ದರಿದ್ರ ಬೆಂಗಳೂರಿಗೆ ಕಾಲಿಡುತ್ತೇವೆ. ಅದೇ ಆಫೀಸು, ಅದೇ ಟ್ರಾಫಿಕ್ಕು, ಅದೇ ಹೊಗೆ, ಅದೇ ಜಂಜಾಟ..

ಮುತ್ತಿನಂಥ ಮಾತೊಂದು ಗೊತ್ತೇನಮ್ಮಾ....

ಅಶ್ವಥ್ ಮಹಾಪ್ರಾಣ "ಸ" ಹಾಡ್ತಾರೆ ಸೋರುತಿಹುದು ಮನೆಯ ಮಾಳಿಗಿ... ಅನ್ನುವಾಗ - ನಾನು

ತನುವು ನಿನ್ನದು ಮನವು ನಿನ್ನದು ಎನ್ನ ಜೀವನ ನಿನ್ನದು.. ಕುವೆಂಪು ಹಾಡು ಬರುತ್ತಿತ್ತು ಕಾರಿನಲ್ಲಿ. ತನು ಅಂದರೇನು? ಇಂಗ್ಲೀಷಿನಲ್ಲಿ Body ಅಂತಾರೆ. ಇದನ್ನು ಕೇಳಿದ ಸಿಂಧು, "ಬಾಡಿ ಅಂದ್ರೆ.. ಅದು!! ಹ ಹ್ಹ ಹ್ಹಾ..." ಎನ್ನಲು ಎಲ್ಲರೂ "ಹೋಪ್ಲೆಸ್ ಫೆಲೋ.." ಎಂದೆವು.

"ಘೋರವಾಗಿ ಖಂಡಿಸ್ತೀನಿ - ಅತಿ ಘೋರವಾಗಿ ಖಂಡಿಸ್ತೀನಿ" - ಶ್ರೀಧರ

ನಾನು ಲಿಸನಿಂಗ್ ಮೋಡ್ ಅಲ್ಲಿ ಇದ್ದೀನಿ, ಮಾತಾಡಲ್ಲ - ಶ್ರೇಯಸ್

ವಿ ಡೂ ಲವ್ ಎಂಡ್ ಕೇರ್ ಫಾರ್ ಅವರ್ ಫ್ರೆಂಡ್ಸ್ - ಬಸ್ಸಿನಲ್ಲಿ ಶೃತಿ

ಅದೇನೋ ಗೊತ್ತಿಲ್ಲ, ಜಗತ್ತೆಲ್ಲಾ ಇವತ್ತು ಚೆನ್ನಾಗಿ ಕಾಣ್ಸ್ತಾ ಇದೆ - ಕನ್ನಡಕ ತೆಗೆದಿಟ್ಟಿದ್ದ ಶುಭಾ - ನೀರಿನಲ್ಲಿ

ಪೀಪಲ್ ಹೂ ಆರ್ ಮಿಸ್ಸಿಂಗ್ ದಿ ಸನ್‍ಸೆಟ್ ಎಟ್ ಆಗುಂಬೆ ಆರ್ ಬೀಯಿಂಗ್ ಮಿಸ್ಡ್ - ಶ್ರೀನಿವಾಸ

ಇವರು ಜೋಕ್ ಮಾಡ್ತಾರೆ - ನನ್ನ ತೋರಿಸಿ ಅಮ್ಮ ಹೇಳಿದರು. ಆಮೇಲೆ ನಾನು ಹಾಲ್‍ ಅಲ್ಲಿ ನೇತು ಹಾಕಿದ್ದ ಕನ್ನಡಿ ನೋಡ್ಕೊಂಡೆ ಒಂದು ಸಲ, ವೇಷ ಏನಾದ್ರೂ ಬದಲಾಗಿದ್ಯಾ ಅಂತ!

"ಅವರಿಗೆ ದಾರಿ ಗೊತ್ತಾ?" - ಆಟೋ ಚಾಲಕ ನನ್ನನ್ನು ಕೇಳಿದ ಶ್ರೇಯಸ್‍ನ ತೋರಿಸಿ. ನಾವು ಹೋಗ್ತಾ ಇದ್ದುದ್ದು ಶ್ರೇಯಸ್ ಮನೆಗೆ ಅಂತ ಚಾಲಕನಿಗೇನು ಗೊತ್ತು!

"ನೀವ್ ಇಲ್ಲಿ ತುಂಬಾ ಚೆನ್ನಾಗ್ ಹೊಂದ್ಕೋತೀರಾ.. ಬರ್ತಾ ಇರಿ.." - ಅಪ್ಪ, ಅಮ್ಮ!

- ಅ
18.10.2007
11.15AM

8 comments:

 1. ಸಕ್ಕತ್ತಾಗಿ ಬರ್ದಿದೀರ. ನಾನು ಹೈಸ್ಕೂಲ್‍ನಲ್ಲಿದ್ದಾಗ ಕುಪ್ಪಳ್ಳಿಗೆ ಹೋಗಿದ್ದೆ. ಆವಾಗ ಇನ್ನು ಕುವೆಂಪು ಮನೆಯ ಜೀರ್ಣೋದ್ದಾರ ನಡಿತಾ ಇತ್ತು.ನಾನು ಓದಿದ್ದೆಲ್ಲಾ ತೀರ್ಥಹಳ್ಳಿಯಿಂದ ೩೦ ಕಿಮೀ ದೂರದಲ್ಲಿ ಇದ್ದ ಮಾಸ್ತಿಕಟ್ಟೆ ಅನ್ನೋ ಹಳ್ಳಿಯಲ್ಲಿ. ಮಲೆನಾಡು ಮಲೆನಾಡೇ ಬಿಡಿ, ಅದಕ್ಕೆ ಬೆರೇ ಯೇನೂ ಸಾಟಿ ಇಲ್ಲ

  ReplyDelete
 2. ಅಯ್ಯೋ! ನನ್ನ ತೀರ್ಥಳ್ಳಿಗೆ ಹೋಗಿದ್ರಾ? ಸಖತ್ತಾಗಿತ್ತಲ್ಲ!?
  ನೀವು ಬರೆದಿರೋದು ತುಂಬಾ ತುಂಬಾ ತುಂಬಾ ಖುಶಿಯಾಯ್ತು.
  - ಚೇತನಾ

  ReplyDelete
 3. ತೀರ್ಥಹಳ್ಳಿಗೆ ನಾನು ಹೋಗಿರುವುದೊಂದೇ ಬಾರಿ. ಅದೂ ಕೆಲವೇ ಘಂಟೆಗಳ ಕಾಲ. ನನಗಾದ ಅಲ್ಲಿನ ಪರಿಚಯ ಬಹಳ ಕಡಿಮೆ. ಆದರೂ ಆ ಕಡಿಮೆ ಪರಿಚಯಕ್ಕೇ ಸೋತುಹೋಗಿದ್ದೆ ನಾನು. ಈ ಲೇಖನ ಓದಿದ ಮೇಲೆ ಮತ್ತಷ್ಟು ಸೋತುಹೋಗಿದ್ದೇನೆ. ಆದಷ್ಟು ಬೇಗ ತೀರ್ಥಹಳ್ಳಿಗೆ ಹೊರಡ್ಬೇಕು.

  ಸಿಕ್ಕಾಪಟ್ಟೆ ಚೆನ್ನಾಗಿ ಬರ್ದ್ಬಿಟ್ಟಿದ್ದೀಯ. ಲೇಖನ ಓದಿದ್ದಕ್ಕೇ ಒಮ್ಮೆ ತೀರ್ಥಹಳ್ಳಿಗೆ ಹೋಗಿ ಬಂದಂತಾಯ್ತು!

  ReplyDelete
 4. [creatam] ಮಾಸ್ತಿಕಟ್ಟೆ ನೋಡಿದೀನಿ.. :-)

  [ಶ್ರೀನಿಧಿ] ತೀರ್ಥಹಳ್ಳಿಗೆ!

  [ಚೇತನಾ] ಹೌದು, ಸೂಪರ್ ಆಗಿತ್ತು ರೀ ತೀರ್ಥಹಳ್ಳಿ. ಈ ಸಲ ಮಳೆಗಾಲಕ್ಕೆ ಅಲ್ಲಿ ಕ್ಯಾಂಪು!!

  [ಶ್ರೀಕಾಂತ್] ಮಳೆ ಶುರು ಆಗ್ಲಿ ಇರೋ, ಹೋಗೋಣ!!

  [ಎಲ್ಲರಿಗೂ] ಧನ್ಯವಾದಗಳು.

  ReplyDelete
 5. hmm thumbA manasu agura aagthide eega !nange manasige bejaar adagella "kShithijadege" aaage ivathu nenapaaithu .Odhi thumbAne kushi aaithu . thumbAne chennagidhe.

  ReplyDelete

ಒಂದಷ್ಟು ಚಿತ್ರಗಳು..