Sunday, February 03, 2008

ವಿಶ್ವ ಸೌಂದರ್ಯ ಸ್ಪರ್ಧೆ

೧. ಕೋಆಲಾ - Phascolarctos cinereusನಾನು ಆಸ್ಟ್ರೇಲಿಯಾದಿಂದ ಬಂದಿದ್ದೀನಿ. ಪ್ರಪಂಚದ ಬೇರೆಲ್ಲೂ ನಾನು ಕಾಣಸಿಗುವುದಿಲ್ಲ. ನನ್ನ ಆಲಿಂಗನವನ್ನು ಬಯಸದಿರುವವರೇ ಇಲ್ಲ. ನನ್ನ ನೋಡಲು ಬಂದವರೆಲ್ಲಾ ನನ್ನ ಮುದ್ದು ಮಾಡಬೇಕೆನ್ನುತ್ತಾರೆ. ನಾನು ಕಟ್ಟಾ ಸಸ್ಯಾಹಾರಿ ಎಂದರೆ ಇಲ್ಲಿ ಯಾರೂ ನಂಬಲಿಲ್ಲ. ಆಸ್ಟ್ರೇಲಿಯಾದಲ್ಲಿದ್ದೀಯ, ಅದು ಹೇಗೆ ಸಸ್ಯಾಹಾರಿ ಎಂದುಬಿಟ್ಟರು. ನನ್ನ ಬಗ್ಗೆ ಕೆಲವು ವಿಷಯಗಳನ್ನು ಹೇಳಿಕೊಳ್ಳಲು ಸಂಕೋಚ ಆಗುತ್ತೆ, ಆದರೂ ಹೇಳ್ತೀನಿ. ಎರಡು ಮರ್ಮಾಂಗಗಳಿವೆ!! ಹಾಗಂತ ನಾನು ಕಾಮಾಂಧನಲ್ಲ. ಪ್ರಕೃತಿಯು ನನಗೆ ಕೊಟ್ಟ ವರ ಇದು. ನಿಮಗೆಲ್ಲರಿಗೂ ನನ್ನ ಮುಖಸೌಂದರ್ಯದ ಬಗ್ಗೆ ಚಿಂತೆಯಿರಲಿ ಸಾಕು!

೨. ಪ್ಯಾಂಥರ್ ಕೆಮಿಲಿಯಾನ್ - Furcifer pardalisಸೌಂದರ್ಯಕ್ಕೆ ಬಹಳ ಮುಖ್ಯವಾದದ್ದು ಬಣ್ಣ. ಯಾವಾಗ ಯಾವ ಬಣ್ಣ ಬೇಕೋ ಆ ಬಣ್ಣ ನನ್ನ ದೇಹದ ಮೇಲೆ ಬರುತ್ತೆ. ದೂರದ ಮಡಗಾಸ್ಕರ್‍ನಿಂದ ಇಲ್ಲಿಗೆ ಬರುವ ಹೊತ್ತಿಗೆ ನಾನು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಬಣ್ಣಗಳನ್ನು ಬದಲಿಸಿದ್ದೇನೆ. ಮನುಷ್ಯರು ನೀವು ಬಣ್ಣಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ಮಿಂಚುವುದು ವಿಶೇಷ ಎನ್ನಿಸುತ್ತಿದೆಯಾ? ನನ್ನ ನೋಡಿ.

೩. ಸ್ಕಾರ್ಲೆಟ್ ಮೆಕಾವ್ - Ara macao
ಬಣ್ಣದ ಬಗ್ಗೆ ಈಗ ತಾನೆ ನಮ್ಮ ಸುರಸುಂದರಾಂಗಿ ಪ್ಯಾಂಥರ್ ಕೆಮಿಲಿಯನ್ ಹೇಳಿದರು. ನನ್ನ ಬಣ್ಣದ ಬಗ್ಗೆ ಏನಾದರೂ ಶಂಕೆಯಿದೆಯೇ ಎಂದು ಅವರನ್ನು ಕೇಳಬೇಕೆನಿಸುತ್ತಿದೆ. ನಾನು ಗಿಣಿಯ ಸಂಬಂಧಿಕ. ಆದರೆ ಗಿಣಿಗಳಿಗಿಂತ ಹೆಚ್ಚು ಬುದ್ಧಿವಂತನೆಂಬುದು ತಿಳಿದಿರಲಿ. ಅಷ್ಟೇ ಜಂಭ ಕೂಡ ಅಂತ ನಿಮಗೆ ಈಗಾಗಲೇ ಅರಿವಾಗಿರಬೇಕು. ಜಂಭ ಪಡುವುದರಲ್ಲಿ ತಪ್ಪೇನು? ನಾನು ಸುಂದರವಾಗಿದ್ದೀನಿ, ಬುದ್ಧಿವಂತನಾಗಿದ್ದೀನಿ, ಅದಕ್ಕೆ ಜಂಭ ಪಡುತ್ತೇನಪ್ಪ! ನನ್ನ ಸ್ವದೇಶ ಬ್ರೆಜಿಲ್‍ನಲ್ಲಿ ಎಲ್ಲರ ಮನೆಯಲ್ಲೂ ನನ್ನ ಫೋಟೋ ಇರುತ್ತೆ!

೪. ಬಾಟಲ್‍ನೋಸ್ ಡಾಲ್ಫಿನ್ - Tursiops truncatus
ಮನುಷ್ಯನ ಬುದ್ಧಿವಂತಿಕೆಗೆ ಸ್ಪರ್ಧಿ ನಾನೊಬ್ಬನೇ ಇರುವುದು. ಬುದ್ಧಿವಂತಿಕೆ ಹಾಗಿರಲಿ, ಮನುಷ್ಯನಿಗೆ ಬುದ್ಧಿವಂತಿಕೆಯೆಲ್ಲಿದೆ, ಸೌಂದರ್ಯವೆಂಬುದು ನಮ್ಮಂಥ ಜಲಚರಗಳಿಗೆ ಯಾವುದೋ ಕಾಲದಿಂದಲೂ ಬಂದಿರುವುದು. ಎರಡು ಮಿಲಿಯನ್ ವರ್ಷದ ಕೆಳಗಿನ 'ಮನುಷ್ಯ'ನ ಸೌಂದರ್ಯವನ್ನು ನೆನೆಸಿಕೊಳ್ಳಿ ನಿಮಗೇ ಗೊತ್ತಾಗುತ್ತೆ! ನೀರಿನ ಮೇಲ್ಭಾಗಕ್ಕೆ ಬಂದು ಗಾಳಿಯಲ್ಲೊಮ್ಮೆ ಜಿಗಿದು ಮತ್ತೆ ನೀರಿಗಿಳಿವಾಗ ನಾನು ಇನ್ನಷ್ಟು ಸುಂದರವಾಗಿ ಕಾಣಿಸುತ್ತೇನೆಂಬುದನ್ನು ನೀವು ಬಲ್ಲಿರಿ. ಎಲ್ಲಾ ಸಾಗರಗಳಲ್ಲೂ ನಿಮಗೆ ನಾನು ಸಿಗುವೆ, ಆದರೆ ನನ್ನ ಹುಡುಕಿಕೊಂಡು ಆರ್ಕ್ಟಿಕ್ ಅಥವಾ ಅಂಟಾರ್ಕ್ಟಿಕ್ ಮಹಾಸಾಗರಗಳಿಗೆ ಬಂದೀರಿ, ನಾನು ಅಲ್ಲಿಲ್ಲ.

೫. ಕಿಂಗ್ ಕೋಬ್ರಾ - Ophiophagus hannah
ನನ್ನ ಬಳಿ ವಿಷವಿದೆ ಎಂದು ಭಯವೇ? ಹೆದರಬೇಡಿ. ಅದು ನನ್ನ ಆಹಾರಕ್ಕಾಗಿ ಮಾತ್ರ. ಅಥವಾ ನನ್ನ ದಿಟವಾದ ಶತ್ರುಗಳಿಗೆ ಮಾತ್ರ. ಮನುಷ್ಯರು ನನಗೆ ಶತ್ರುಗಳಲ್ಲ, ಅವರೇ ಕಾಲುಕೆರೆದುಕೊಂಡು ನನ್ನ ಕೆಣಕುತ್ತಾರೆ. ನಾನು ಹೆಡೆಯೆತ್ತಿ ಅವರ ತಲೆಯ ಮಟ್ಟಕ್ಕೆ ನಿಲ್ಲಬಲ್ಲೆ, ಹಾಗೆಯೇ ಅಟ್ಟಿಸಿಕೊಂಡು ಬರಬಲ್ಲೆ. ಇವೆಲ್ಲಾ ಮಾಡಲು ನನಗೆ ಇಷ್ಟವಿಲ್ಲ. ನಾನು ಹೆಡೆಯೆತ್ತಿ ನಿಂತಿರುವಾಗ ಕೇವಲ ಸುಂದರವಾಗಿ ಕಾಣಿಸುವುದಿಲ್ಲ. ದೇವರಂತೆಯೇ ಕಾಣಿಸುತ್ತೇನೆ ಎಂದು ಸಾಕ್ಷಾತ್ ಈಶ್ವರ ಹೇಳಿದ್ದಾನೆ. ಫಳ ಫಳ ಹೊಳೆಯುವ ಮಣಿಯನ್ನು ನನ್ನ ಹಣೆಯಮೇಲೆ ಸೃಷ್ಟಿ ಮಾಡುತ್ತೇನಲ್ಲಾ, ಅದು ನಿಜವಾಗಿಯೂ ಮಣಿಯಲ್ಲ, ಅದು ನನ್ನ ಮೈಕಾಂತಿ!

೬. ಪೀ ಫೌಲ್ - Pavo cristatusಈ ಮುಂಚೆ ಇಲ್ಲಿ ಒಂದಿಬ್ಬರು ಬಣ್ಣದ ಬಗ್ಗೆ ಮಾತನಾಡಿದರು. ಅವರು ಒಮ್ಮೆ ನನ್ನ ನೋಡಿದರೊಳಿತು. ನನಗೆ ನವರಂಗಿ ಎಂಬ ಹೆಸರು ಕೂಡ ಇದೆ. ಇದೇ ದೇಶದ ರಾಷ್ಟ್ರೀಯ ಪಕ್ಷಿ ನಾನು ಸುಮ್ಮಸುಮ್ಮನೆ ಆಗಿಲ್ಲ. ನಾನು ಗರಿಕೆದರಿ ಕುಣಿದೆನೆಂದರೆ ಪ್ರಪಂಚದ ಮೂಲೆ ಮೂಲೆಯ ಪ್ರಾಣಿಪಕ್ಷಿ ಮನುಷ್ಯರೆಲ್ಲಾ ನಿಬ್ಬೆರಗಾಗಬೇಕು. ಆದರೆ ನಾನು ಹಾಗೆ ಮಾಡುವುದಿಲ್ಲ. ಎಲ್ಲರ ಮುಂದೆ ಕುಣಿಯಲು ನಾನೇನು .... ಅಲ್ಲ. ನಾನು ಕುಣಿಯುವುದು ನನ್ನವಳ ಸಂಗಕ್ಕಾಗಿ. ಅವಳನ್ನು ಮೆಚ್ಚಿಸಲು. ನನ್ನ ಪ್ರೀತಿಗಾಗಿ. ನನ್ನ ಸೌಂದರ್ಯವೆಲ್ಲಾ ನನ್ನವಳಿಗೆ ಮುಡಿಪು!

೭. ಕ್ಲೌನ್ ಫಿಶ್ - Amphiprion ocellarisನನ್ನ ಚೆಲುವಿನ ಬಗ್ಗೆ ಅರಿವಾಗಿದ್ದು ಈಗ್ಗೆ ಕೆಲವು ವರ್ಷಗಳ ಹಿಂದೆ ಫೈಂಡಿಂಗ್ ನೀಮೋ ಚಿತ್ರ ಬಂದಾಗ ಅಲ್ಲವೇ? ಆದರೆ ಇಡೀ ಸಮುದ್ರದಲ್ಲಿ ನನ್ನನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಾರೆ ನನ್ನ ಜೊತೆಗಾರರು. ಆದರೂ ಎಲ್ಲರೂ ನನಗೆ ಸ್ನೇಹಮಯಿ. ಗೆಳೆಯ ಡಾಲ್ಫಿನ್ ಕೂಡ ಇಲ್ಲಿ ಬಂದಿರುವುದು ನನಗೆ ಸಂತೋಷ. ಅವರಿಗೂ ಒಳ್ಳೇದಾಗಲಿ.

೮. ಬೀ ಹಮ್ಮಿಂಗ್ ಬರ್ಡ್ - Mellisuga helenae
ಚಿಟ್ಟೆ ಅಂದ್ಕೊಂಡ್ರಾ? ಅಲ್ಲ. ಕೆಲವು ಚಿಟ್ಟೆಗಳೂ ಸಹ ನನಗಿಂತ ದೊಡ್ಡದಾಗಿವೆ. ನಾನು ಎರಡು ಇಂಚಿನಷ್ಟು ಅಷ್ಟೇ ಇರೋದು. ಮಕರಂದ ಹೀರುತ್ತೇನೆ. ಕಿರಿದಾಗಿದ್ದಷ್ಟೂ ಚೆಲುವು ಹೆಚ್ಚುತ್ತೆಂದು ನಮ್ಮಲ್ಲಿ ಹೇಳಿಕೆಯಿದೆ. ನಾನು ಹೇಗಿದ್ದೀನಿ? ಸುಂದರನಲ್ಲವೇ? ನನ್ನೂರಿನ ಹೆಸರು ನನ್ನಷ್ಟೇ ಸುಂದರವಾಗಿದೆ. ಜ಼ುನ್‍ಜ಼ುನ್‍ಕಿಟೋ. ನೀವು ಅದನ್ನು ಕ್ಯೂಬಾ ಅಂತೀರ.

೯. ಬ್ಲೂ ಮಾರ್ಫೋ ಡೈಡಸ್ - Morpho didius
ನಾನು ಒಬ್ಬನೇ ಬಂದಿರುವುದಕ್ಕೆ ಸ್ವಲ್ಪ ಬೇಸರ ಆಗ್ತಾ ಇದೆ. ನಾವು ಯಾವಾಗಲೂ ಗೆಳೆಯರ ಜೊತೆಯೇ ಇರುವುದು. ನಮಗೆ ಅನೇಕ ಸಲ ಸೌಂದರ್ಯಸ್ಪರ್ಧೆಯಲ್ಲಿ ಪ್ರಶಸ್ತಿಗಳು ಪ್ರಶಂಸೆಗಳು ಬಂದಿವೆ. ನಮಗೆ ಇವೆಲ್ಲಾ ಹೊಸತಲ್ಲ. ಬಣ್ಣ ಬಣ್ಣದಿಂದ ಮೆರೆಯುವುದು ನಮ್ಮ ಜಾಯಮಾನಕ್ಕೇ ಇಲ್ಲ. ಇರುವ ಒಂದು ಬಣ್ಣವನ್ನು ಅತಿಸುಂದರವಾಗಿ ರೂಪಿಸಿಕೊಂಡಿದ್ದೇವಷ್ಟೆ. ಬ್ರೆಜಿಲ್‍ನಿಂದ ಆಸ್ಟ್ರೇಲಿಯಾಕ್ಕೆ ಹೋಗಬಲ್ಲೆವು. ಆಸ್ಟ್ರೇಲಿಯಾದಿಂದ ಶ್ರೀಲಂಕೆಗೆ ಹಾರಬಲ್ಲೆವು. ಎಲ್ಲರಿಂದಲೂ ಪ್ರಶಂಸೆ ಗಿಟ್ಟಿಸಿಕೊಳ್ಳಬಲ್ಲೆವು.

೧೦. ಸ್ನೋ ಲೆಪರ್ಡ್ - Uncia uncia
ಹಿಮಾಲಯದ ಶಿಖರಗಳಲ್ಲಿ ನಡೆಯುವಾಗ ನನ್ನ ಕಂಡರೆ ನನ್ನ ಫೋಟೋ ತೆಗೆಯುವುದನ್ನು ಮರೆಯಬೇಡಿ. ನಮ್ಮವರು ಬಹಳ ಕಡಿಮೆಯಿರುವುದು ಭೂಮಿಯ ಮೇಲೆ. ಕಡೇ ಪಕ್ಷ ಫೋಟೋದಲ್ಲಾದರೂ ನಮ್ಮ ಚೆಲುವು ನಿಮ್ಮ ಕಣ್ಮುಂದಿರಲಿ.ಫಲಿತಾಂಶಗಳನ್ನು ಈಗಲೇ ಪ್ರಕಟಿಸಲು ಆಗುತ್ತಿಲ್ಲ. ತೀರ್ಪುಗಾರರು ತಬ್ಬಿಬ್ಬಾಗಿದ್ದಾರೆ. ಅವರಿಗೆ ಕೊಂಚ ಸಹಾಯ ಬೇಕಾಗಿದೆ..

-ಅ
03.02.2008
2.30PM

11 comments:

 1. aahaaaa! aruna back with a bang:) majavaagide baraha.. adroo, innondu 3-4 prani pakshigaLu miss aagive listindaa.. king fisher hakki, hima karaDi....

  ReplyDelete
 2. ತೀರ್ಪುಗಾರರು ತಬ್ಬಿಬ್ಬಾಗಿದ್ದರಲ್ಲಿ ಅನುಮಾನವೇ ಇಲ್ಲ !! ಅಷ್ಟು ಚೆನ್ನಾಗಿದ್ದಾರೆ ಪ್ರತಿಯೊಬ್ಬರೂ !! Vote ಮಾಡಿದರೆ ಹೇಗೆ pp ? ಯಾರಿಗೆ ಹೆಚ್ಚು ವೋಟ್ ಬರತ್ತೋ ಅವರೇ ವಿಶ್ವ ಸುಂದರ/ಸುಂದರಿ.

  ReplyDelete
 3. ಸುಂದರವಾದ್ದು ಈ ಸೃಷ್ಟಿಯಲ್ಲಿ ಬೇಕಾದಷ್ಟಿವೆ. ನೋಡುವ ರೀತಿಯಲ್ಲಿ ನೋಡಿದರೆ ಎಲ್ಲವೂ ಸುಂದರವೇ! ಆಕಾಶ, ಬೆಂಕಿ, ಗಾಳಿ, ನೀರು, ಮಣ್ಣು, ನೀರು, ಜೀವ, ಜೀವಿಗಳಲ್ಲಿ ವೈವಿಧ್ಯ, ಗಿಡಮರಗಳು, ಪ್ರಾಣಿಪಕ್ಷಿಗಳು, ಸೂರ್ಯಚಂದ್ರತಾರೆಗಳು, ಬಣ್ಣ, ವಾಸನೆ, ಮನಸ್ಸು, ..... ಎಲ್ಲದರಲ್ಲೂ ಸೌಂದರ್ಯ ಅಡಗಿದೆ. ನನ್ನ ಪ್ರಕಾರ ಸೌಂದರ್ಯ ಸ್ಪರ್ಧೆಯಲ್ಲಿ ಗೆಲ್ಲುವುದು ಸೃಷ್ಟಿಕರ್ತ. ಇನ್ಯಾರೂ ಅಲ್ಲ.

  ಅಂದಹಾಗೆ, ಈ ಬರವಣಿಗೆಯೂ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಬಹುದು... ನೋಡು, ನಾನು ನಾಮಿನೇಶನ್ ಹಾಕ್ತಿದೀನಿ!

  ReplyDelete
 4. ಸಾಮಾನ್ಯವಾಗಿ ಜನರಿಗೆ ತಿಳಿಯದ ಸುಂದರವಾದ ಪ್ರಾಣಿ-ಪಕ್ಷಿಗಳ ಬಗ್ಗೆ ಚೆನ್ನಾಗಿ ಬರೆದಿದ್ದೀಯ... ಹೀಗೇ ಮುಂದುವರೆಸು!

  ReplyDelete
 5. ಸಾಮಾನ್ಯವಾಗಿ ಜನರಿಗೆ ತಿಳಿಯದ ಸುಂದರವಾದ ಪ್ರಾಣಿ-ಪಕ್ಷಿಗಳ ಬಗ್ಗೆ ಚೆನ್ನಾಗಿ ಬರೆದಿದ್ದೀಯ... ಹೀಗೇ ಮುಂದುವರೆಸು!

  ReplyDelete
 6. Lovely ... dolphin na smile yaavaagloo nanna captivate maadutte ... nefertiti ... solomon jothe beLdoralve naavu :-) ... vote maadodu tumba kashta ... king cobra ge iro mejestic look yaargide ... wah ...

  ReplyDelete
 7. 1. Snow Leapord
  2. Butterfly
  3. Dolphin

  Idu nannu aayke maaraaya...

  ReplyDelete
 8. [ಶ್ರೇಯಸ್] ಮೂರು ಮೂರಕ್ಕೆ ಮತ ನೀಡಿರುವುದರಿಂದ ನಿಮ್ಮದನ್ನು 'ಕುಲಗೆಟ್ಟ' ಮತ ಎಂದು ಪರಿಗಣಿಸಲಾಗುತ್ತದೆ. ಆದರೂ ಮೂರಕ್ಕೂ ಪ್ರಶಸ್ತಿ ಕೊಡೋಣ!

  [ವಿಜಯಾ] ಸಾಲೋಮನ್.. ನೆಫರ್‍ಟಿಟಿ.. ಅಬ್ಬಾಹ್... ಅದ್ಭುತ!!

  [ಶ್ರೀಕಾಂತ್] ಉದ್ದಿಶ್ಯ ಅದೇ ಕಣೋ. ಎಷ್ಟು ವಿಸ್ಮಯ ಅಲ್ಲವೇ ಪ್ರಕೃತಿ?

  [ಶ್ರೀಕಾಂತ್ - ಮತ್ತೊಮ್ಮೆ] ಸರ್ವಂ ಕಲ್ವಿದಂ ಸುಂದರಂ. ನಿನ್ನ ಕಮೆಂಟು ಕೂಡ.

  [ಲಕುಮಿ] ವೋಟ್ ಮಾಡಿದರೆ ಹೇಗೆ ಅನ್ನೋರು ಒಂದು ವೋಟ್ ಮಾಡೇ ಇಲ್ಲ???

  [ಶ್ರೀನಿಧಿ] ಈಗಾಗಲೇ ಸೌಂದರ್ಯ ಸ್ಪರ್ಧೆಯಲ್ಲಿ ಐವತ್ತಕ್ಕೂ ಹೆಚ್ಚು ಪ್ರಶಸ್ತಿ ಪಡೆದವರಿಗೆ ಈ ಬಾರಿ ಅವಕಾಶವಿಲ್ಲ.. ;-)

  ReplyDelete
 9. ella praaNigaLu tammade aada reetiyalli muddaagive...naaanu teerpugaaranaagiddalli nanna aayke..."ಸ್ನೋ ಲೆಪರ್ಡ್ - Uncia uncia "..

  ReplyDelete
 10. ಸ್ವಾಮಿ,

  ನಿಮ್ಮ ವಿಶ್ವ ಸೌಂದರ್ಯ ಸ್ಪರ್ಧೆ ಚೆನ್ನಾಗಿದೆ. ಎಲ್ಲರಿಗೂ ಕ್ವೀನ್ ಪಟ್ಟ ಕೊಟ್ಟು ಬಿಡಿ ಪ್ಲೀಸ್, ಎಲ್ಲರೂ ಚೆನ್ನಾಗಿದ್ದಾರೆ.
  ನಾವಡ

  ReplyDelete

ಒಂದಷ್ಟು ಚಿತ್ರಗಳು..