Thursday, January 03, 2008

ಸಾವು ಬಂದೇ ಬಿಟ್ಟಿತು...

ಪೇಪರ್ ಅಲ್ಲಿ ವಾರ್ತೆ ನೋಡಿದಾಗ ಸ್ವಲ್ಪ ಬೇಸರ ಆಯಿತು.

ಇಂಗ್ಲೀಷ್ ವಾರ್ತೆ: http://www.thehindu.com/2008/01/03/stories/2008010359790400.htm

ಕನ್ನಡ ವಾರ್ತೆ: http://thatskannada.oneindia.in/news/2008/01/03/forest-officer-vishvanath-demise.html

ಬನ್ನೇರುಘಟ್ಟ ಉದ್ಯಾನವನದ ಮುಂದೆ ಪ್ಲಾಸ್ಟಿಕ್ ತಿಂದು ಪ್ರಾಣ ಬಿಟ್ಟ ಜಿಂಕೆಯೊಂದರ ಫೋಟೋ ಇದೆ. "ಪ್ಲಾಸ್ಟಿಕ್ ಬಿಸಾಡಬೇಡಿ" ಅಂತ ಬರೆದಿದ್ದಾರೆ.

ನಾನು ಆಗ ನೇಚರ್ ಸರ್ಫ್ ಅಡ್ವೆಂಚರರ್ಸ್ ಜೊತೆಯಿದ್ದೆ. RHM ಇನ್ನೂ ಶುರು ಆಗಿರಲಿಲ್ಲ. ರಾಜೇಶ್ ಮುತ್ತತ್ತಿಯಲ್ಲಿ ಶುಚಿ ಮಾಡುವ ಪ್ರಾಜೆಕ್ಟ್ ಒಂದನ್ನು ಯಶಸ್ವಿಯಾಗಿ ಮಾಡಿದ್ದರಿಂದ ನಾನು ಅವರಿಗೆ ಬನ್ನೇರುಘಟ್ಟದವರಿಂದ ಆ ಜಿಂಕೆ ಫೋಟೋ ಇಸ್ಕೊಂಡು ಹೋಗಿ ಮುತ್ತತ್ತಿಯಲ್ಲಿ ನಾವು ತೊಟ್ಟಿಗಳನ್ನು ಹಾಕಿಸಿರುವ ಸ್ಥಳಗಳ ಮುಂದೆ ಬೋರ್ಡುಗಳನ್ನು ಹಾಕಿ ಆ ಫೋಟೋವನ್ನು ಹಾಕೋಣ ಎಂದು ಸಲಹೆ ಕೊಟ್ಟಿದ್ದೆ. ಹಾಗಾಗಿ ನಾನೂ, ರಾಜೇಶ್ ಇಬ್ಬರೂ ನ್ಯಾಷನಲ್ ಪಾರ್ಕ್‍ಗೆ ಹೋಗಿದ್ದೆವು.

ಡಾ.ವಿಶ್ವನಾಥ್ ಆಗ ಪರಿಚಯವಾದರು. ಚಿರತೆಯ ಬೋನಿನ ಎದುರೇ ಇರುವ ಆಸ್ಪತ್ರೆಯೊಳಕ್ಕೆ ನಗುನಗುತ್ತಾ ಕರೆದು ನಮಗೆ ಎಲ್ಲವನ್ನೂ ಸಂತೋಷದಿಂದ ವಿವರಿಸಿದರು. ಮುತ್ತತ್ತಿಯ ಕಾಡಿನಲ್ಲಿ ಇಂಥದ್ದೇ ಒಂದು ಪ್ರಾಜೆಕ್ಟನ್ನು ಮಾಡಲು ಹೊರಟಿರುವ ನಮ್ಮನ್ನು ಪ್ರಶಂಸಿಸಿದರು. ಸುಮಾರು ನೂರು ಫೋಟೋಗಳನ್ನು ತೋರಿಸಿದರು. "ಎಷ್ಟು ಬೇಕಾದರೂ ತೊಗೊಳ್ಳಿ, ಆದರೆ ಒಂದು ವಾರದಲ್ಲಿ ವಾಪಸ್ ಕೊಟ್ಟುಬಿಡಿ" ಎಂದಿದ್ದರು.

ನಾನು ಸುಮ್ಮನೆ ಕೇಳಿದೆ, "ಸರ್, ಇಲ್ಲಿ ಶೇಖರಿಸುವ ಪ್ಲಾಸ್ಟಿಕ್ ಎಲ್ಲಾ ಏನ್ ಮಾಡ್ತೀರ?" ಅಂತ.

ಅವರು ನೊಂದುಕೊಂಡಂತೆ ಮುಖ ಮಾಡಿಕೊಂಡು, "ಅದನ್ನು ದೂರ ಎಲ್ಲೋ ತೊಗೊಂಡು ಹೋಗಿ ಸುಟ್ಟುಬಿಡ್ತಾರೆ" ಎಂದರು.

ಪ್ಲಾಸ್ಟಿಕ್ ನಿರ್ಮೂಲನೆ ಹೇಗೆ ಎಂದು ಯಾರಿಗೂ ತಿಳಿಯದ ವಿಷಯ.

ಅವರು ಹೆಚ್ಚು ಮಾತನಾಡುತ್ತಿರಲಿಲ್ಲ. ಎಷ್ಟು ಬೇಕೋ ಅಷ್ಟು ಮಾತ್ರ ಮಾತನಾಡುತ್ತಿದ್ದರು. ಆದರೆ, ಪ್ರಾಣಿಗಳ ಆರೋಗ್ಯದ ಬಗ್ಗೆ ಮಾತ್ರ ಸಂತಸದಿಂದ ಹೇಳಿಕೊಳ್ಳುತ್ತಿದ್ದರು. ಮೊಸಲೆಯೊಂದನ್ನು ಉಳಿಸಿದೆವು, ಚಿರತೆಯೊಂದಕ್ಕೆ ಆದ ಗಾಯವನ್ನು ವಾಸಿ ಮಾಡಿದೆವು ಅಂತೆಲ್ಲಾ ಹೆಮ್ಮೆಯೊಂದ ಹೇಳಿಕೊಳ್ಳುತ್ತಿದ್ದರು. ಆನೆಗಳ ಬಗ್ಗೆ ಅವರಿಗೆ ಅಪಾರವಾದ ಪ್ರೀತಿಯಂತೆ. "ನನಗೆ ಎಲ್ಲಾ ಪ್ರಾಣಿಗಳೂ ಇಷ್ಟ, ಆದರೆ ಆನೆ ಅಂದ್ರೆ ತುಂಬಾ ಪ್ರೀತಿ." ಎಂದು ಅಲ್ಲಿ ಮಾಹುತನೊಂದಿಗೆ ಹಾದು ಹೋಗುತ್ತಿದ್ದ ಆನೆಯೆಡೆ ಬೊಟ್ಟು ಮಾಡಿ ತೋರಿಸಿದರು. ಅವರ ಸಹಾಯಕ ತಂಡದವರನ್ನು ಕರೆದು, "ಇವರಿಗೆ ನಮ್ಮ ಹೊಸ ಪ್ರಾಜೆಕ್ಟ್ ತೋರಿಸಿ.." ಎಂದು ಆದೇಶ ಕೊಟ್ಟರು.

ಆಗಿನ್ನೂ "ಚಿಟ್ಟೆ ಉದ್ಯಾನ" ಮಾಡುತ್ತಿದ್ದರು. ಇನ್ನೂ ಪ್ರಯೋಗದ ಹಂತದಲ್ಲಿತ್ತು. ಮೂರು ಜನ ಅಸಿಸ್ಟೆಂಟುಗಳೂ ನಮ್ಮನ್ನು ಯಾವುದೋ ವಿದೇಶೀ ಡೆಲಿಗೇಟ್‍ಗಳು ಎಂಬಂತೆ ಎಲ್ಲವನ್ನೂ ಅಚ್ಚುಕಟ್ಟಾಗಿ ವಿವರಿಸಿದರು. "ಎಲ್ಲಾ ಡಾಕ್ಟರ ಪ್ಲಾನು" ಎಂದು ಆಗಾಗ್ಗೆ ಹೇಳುತ್ತಲೇ ಇದ್ದರು.

ಇದರಿಂದ ತಿಳಿಯಿತು, ಡಾಕ್ಟರಿಗೆ wildlife ಅಂದರೆ ತಮ್ಮ lifeಗಿಂತ ಹೆಚ್ಚು ಎಂದು.

ಫೋಟೋ ಹಿಂದಿರುಗಿಸಲು ಬಂದಾಗ, "ಓಹ್ ರಾಜೇಶ್, ಅರುಣ್ ಬನ್ನಿ ಎಂದು ನಮ್ಮ ಹೆಸರನ್ನು ಸಹ ನೆನಪಿಟ್ಟುಕೊಂಡಿದ್ದರು." ಕೇಳಿ ಖುಷಿ ಆಯಿತು. ಹೆಚ್ಚು ಮಾತನಾಡಲಿಲ್ಲ. ಡಿ.ಎಫ್.ಓ. ಇದ್ದರು. ಅವರನ್ನು ಪರಿಚಯಿಸಿಕೊಟ್ಟರು. ಡಾಕ್ಟರೇನೂ ಹತ್ತಿರದ ಗೆಳೆಯರಾಗಲಿಲ್ಲ. ಹೊರಟು ಬಂದುಬಿಟ್ಟೆವು ಫೋಟೋ ಕೊಟ್ಟು ಥ್ಯಾಂಕ್ಸ್ ಹೇಳಿ.

ಅದಾದ ಮೇಲೆ ತುಂಬಾ ದಿನಗಳ ನಂತರ ಅಕ್ಕ ಭಾವರೊಡನೆ ನ್ಯಾಷನಲ್ ಪಾರ್ಕ್‍ಗೆ ಹೋದಾಗ, ಸಫಾರಿ ಕ್ಯೂ ನೋಡಿ ತಿರುಪತಿಯನ್ನೂ ಮೀರಿಸುವಂತಿದೆ ಎಂದು ಅಭಿಪ್ರಾಯ ಪಟ್ಟಾಗ ಸೆಕ್ಯುರಿಟಿ ಆನಂದ್ ನೆನಪಾದ. ಆನಂದ್ ಬಳಿ ಹೋದಾಗ, ಆತ ಬಹಳ ಗೌರವದಿಂದ ಮಾತನಾಡಿಸಿ, ನಮ್ಮನ್ನು ನೇರ ವ್ಯಾನ್ ಬಳಿ ಕರೆದುಕೊಂಡು ಹೋಗಿ, "ಇವರು ಡಾಕ್ಟರ ಕಡೆಯವರು" ಎಂದು ಹೇಳಿ ನಮಗೆ ಸಫಾರಿ ವ್ಯಾನಿಗೆ ಸ್ಪೆಷಲ್ ಎಂಟ್ರಿ ಮಾಡಿಕೊಟ್ಟ. ಡಾಕ್ಟರು ಆಗ ಊರಲ್ಲಿರಲಿಲ್ಲವಂತೆ. ಹಾಗಾಗಿ ಭೇಟಿಯಾಗಲಾಗಲಿಲ್ಲ. ಅದಾದ ಮೇಲೆ ನ್ಯಾಷನಲ್ ಪಾರ್ಕಿಗೇ ಹೋಗೇ ಇಲ್ಲ.

ಪೇಪರ್ ನೋಡಿದಾಗ ವಿಶ್ವನಾಥ್ ಮರಣ ಹೊಂದಿದರು, ಅದೂ ಆನೆಯ ದಾಳಿಗೆ ಸಿಲುಕಿ ಎಂದು ಅರಿತು ಸ್ವಲ್ಪ ಬೇಸರವಾಯಿತು. ಹಿಂದಿನ ಕಥೆಯೆಲ್ಲಾ ನೆನಪಾಯಿತು. ಆದರೆ ಡಾಕ್ಟರಿಗೆ ಇದಕ್ಕಿಂತ ಒಳ್ಳೇ ಸಾವು ಬಂದಿರಲಾರದು ಎಂದು ಸ್ವತಃ ಡಾಕ್ಟರೇ ಹೇಳಬಹುದು. ಯಾಕೆಂದರೆ ತಾವು ಮಾಡುವ ಕೆಲಸದಲ್ಲಿ ಸಾವು ಬಂದರೆ ಅವರಿಗೆ ಅದರಲ್ಲಿ ಅತ್ಯಂತ ಹೆಚ್ಚು ಸಂತಸ. ಅದರಲ್ಲೂ ಒಬ್ಬ ಅರಣ್ಯತಜ್ಞನಿಗಂತೂ ಅರಣ್ಯದಲ್ಲೇ ಸಾವನ್ನಪ್ಪಬೇಕೆಂಬುದು ಬದುಕಿನ ಹೆಬ್ಬಯಕೆಯಾಗಿರುತ್ತೆ.

ವಯಸ್ಸಾಗುತ್ತಾ ಆಗುತ್ತಾ reflexಗಳು, ಮಗ್ನತೆಯ ಸಾಮರ್ಥ್ಯ, ಓಡುವ ಶಕ್ತಿ ಎಲ್ಲಾ ಕುಂದುತ್ತೆ. ಬಹುಶಃ ಡಾಕ್ಟರಿಗೂ ಹಾಗೇ ಆಗಿತ್ತನ್ನಿಸುತ್ತೆ. ಆನೆಯೇ ನೊಂದುಕೊಂಡಿರುತ್ತೆ ಇಷ್ಟು ಹೊತ್ತಿಗೆ. ಎರಡು ತಿಂಗಳ ಕಾಲ ಬೆನ್ನು ಮೂಳೆ ಮುರಿದುಕೊಂಡು ಆಸ್ಪತ್ರೆಯಲ್ಲಿದ್ದರಂತೆ. ಪೇಪರ್ ಅಲ್ಲಿ ಓದಿದಾಗ ಬೇಸರವಾಯಿತು. ಒಮ್ಮೆ ಸ್ಟೀವ್ ಇರ್ವಿನ್ ನೆನಪಾದ. ಸಾವು ಇವರಿಗೆ ಆನೆಯ ರೂಪದಲ್ಲಿ ಬಂದು ಮುಕ್ತಿಯನ್ನು ದಯಪಾಲಿಸಿತ್ತು. ಆನೆಗಳಿಗೆ ಮತ್ತೆ ಇಂಥ ಒಬ್ಬ ಸಖ ಸಿಗಬೇಕಾದರೆ ಬಹಳ ಸಮಯ ಬೇಕಾದೀತು.

[ಇವರ ಫೋಟೋ ಸಿಗಲಿಲ್ಲ. ಪತ್ರಿಕೆಯೊಂದರಲ್ಲಿತ್ತು. ಆದರೆ ಅದನ್ನು ಹಾಕಲು ಯಾಕೋ ಮನಸ್ಸಾಗುತ್ತಿಲ್ಲ.]

ಈಗ ನನ್ನ ಸಾವಿನ ರೀತಿಯ ಬಗ್ಗೆ ಯೋಚನೆ ಬರುತ್ತಿದೆ. ಅರಣ್ಯದಲ್ಲಿ ಪ್ರಾಣವನ್ನು ಬಿಡುವುದಕ್ಕಿಂತ ಸ್ವರ್ಗ ಬೇರೊಂದಿಲ್ಲವೆನಿಸುತ್ತಿದೆ.

-ಅ
03.01.2008
11.45PM

5 comments:

 1. ಒಳ್ಳೆ ಶ್ರದ್ಧಾಂಜಲಿ. ಅಗಲಿದ ವನ್ಯ ಜೀವಿ ಪ್ರಿಯ ವೈದ್ಯನಿಗೆ ಗೌರವ ಸಲ್ಲಿಕೆ. ಇಂತಹ ಜನರಿಂದಲೇ ನಾವು ನಮ್ಮ ಕಾಡು ಉಳಿದಿರುವುದು. ಇಂತಹವರ್ ಸಂತತಿ ಹೆಚ್ಚಾಗಲಿ. ಅವರ ಸಾಂಗತ್ಯ ನಮ್ಮಂತಹವರಿಗೆ ಸಿಕ್ಕಲಿ. ಮುಂದಿನ ಪೀಳಿಗೆಗೆ ಆದಷ್ಟು ಚೆಂದದ ಪರಿಸರವನ್ನು ಬಿಟ್ಟು ಹೋಗೋಣ.

  ReplyDelete
 2. ಬೇಜಾರಾಗತ್ತೆ ಓದಿದ್ರೆ... ಒಳ್ಳೆಯವರಲ್ಲಾ ಮೇಲಕ್ಕೆ ಹೋಗ್ತಿದಾರೆ, ಭ್ರಷ್ಟರು ಭೂಮಿ ಆಳ್ತಿದಾರೆ :-(

  ReplyDelete
 3. hmmm... inthaavru obru idru antha nin article inda gottaythu..ella ok neenu praaNa bido vichaara yaake?? aaram aagirappa...

  ReplyDelete
 4. [ಶ್ರೀಧರ] ನಿಜ. ಗೆಳತಿ ಸುಶ್ಮಾ ಹೇಳಿದಂತೆ ಮೊದಲು ಅವರು ಮಾಡಿರೋ ಅರ್ಧದಷ್ಟಾದರೂ ಸಾಧನೆ ಏನಾದರೂ ಮಾಡಿ ನಂತರ ಸಾವಿನ ಬಗ್ಗೆ ಯೋಚಿಸಬೇಕು. ಇಲ್ಲವಾದರೆ ನಾನು ಈಗಿರುವ ಹಾಗೇ ವೇಸ್ಟ್ ಬಾಡಿ ಆಗ್ಬಿಡ್ತೀನಿ... ಆ ವಾಕ್ಯ ಬರೀಬಾರದಿತ್ತೆನಿಸುತ್ತೆ. ಆದರೆ ಡಿಲೀಟ್ ಮಾಡಲು ಮನಸ್ಸಿಲ್ಲ.

  [ಶ್ರೀಕಾಂತ್] ಮೇಲಕ್ಕೆ ಹೋಗಿ ಕೆಳಕ್ಕೆ ಬರಲಿ ಮತ್ತೆ!

  [ಮಲೆನಾಡಿಗ] ಚಿನ್ನದಂಥ ಮಾತು!

  ReplyDelete
 5. ನಾನು ಈ ವಿಷಯ ಪತ್ರಿಕೆಯಲ್ಲೋದಿದ್ದೆ... ಆದರೆ ವ್ಯಕ್ತಿ ನನಗೆ ತಿಳಿದಿರಲಿಲ್ಲವಾದ್ದರಿಂದ ಒಂದು ಸಂತಾಪ ಮಾತ್ರ ಇತ್ತು. ಈಗಿದನ್ನೋದಿದ ಮೇಲೆ ಆತ ವನ್ಯಜೀವಿಗಳ ಬಗ್ಗೆ ತುಡಿಯುತ್ತಿದ್ದುದನ್ನು ಕೇಳಿ ಸಂತೋಷವೊಂದೆಡೆಯಾದರೆ, ಅವರ ಸಾವಿನ ಸುದ್ದಿ ನೆನೆಸಿಕೊಂಡು ಬೇಸರವಾಗುತ್ತೆ..

  ಇಂಥವರು ಇನ್ನೂ ನೂರಾರು-ಸಾವಿರಾರು ಜನ ಹುಟ್ಟಿಬರುವಂತಾಗಲಿ ಅಂತ ಆ ದೇವರಲ್ಲಿ ನಾನು ಕೇಳ್ಕೋತೀನಿ..

  ReplyDelete

ಒಂದಷ್ಟು ಚಿತ್ರಗಳು..