Monday, December 29, 2008

ಈಗ ಸರದಿ ಕೊಡಚಾದ್ರಿಯದು
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯವರ ಕೈಯಿಗೆ, ಮತ್ತು ಇದರ ಬೆನ್ನೆಲುಬಿನಂತೆ ಕನ್ನಡ ಚಿತ್ರೋದ್ಯಮದವರ ಕೈಯಿಗೆ ಸಿಕ್ಕ ಯಾವ ಸ್ಥಳವು ಶುಚಿಯಾಗಿ, ಮಾಲಿನ್ಯರಹಿತವಾಗಿ, ಸಭ್ಯವಾಗಿದೆ ಎಂದು ಯೋಚಿಸುತ್ತಾ ಕುಳಿತಾಗ ಒಂದು ಜಾಗದ ಹೆಸರೂ ಗೊತ್ತಾಗುವುದಿಲ್ಲ.

೧. ಸಾತೊಡ್ಡಿ ಜಲಧಾರೆ - ಈಗ ಯಾರು ಬೇಕಾದರೂ ತಮ್ಮ ಕಾರಿನಲ್ಲೋ ಜೀಪಿನಲ್ಲೋ ಹೋಗಿ ಈ ನೀರಿಗೆ ಹೆಂಡ ಸುರಿದು, ಬಂಡೆಗಳ ಮೇಲೆ ಬಾಟಲಿಗಳನ್ನು ಒಡೆದು ಬರಬಹುದು.

೨. ಯಾಣ - 'ನಮ್ಮೂರ ಮಂದಾರ ಹೂವೆ' ಚಿತ್ರ ಬಿಡುಗಡೆಯಾಗುವವರೆಗೂ ಇಲ್ಲಿ ವನ್ಯಮೃಗಗಳಿದ್ದವು, ದಟ್ಟ ಅರಣ್ಯವಿತ್ತು, ಕಾಡಿನ ಹಾದಿಯು ದುರ್ಗಮವಾಗಿತ್ತು, ಪ್ಲಾಸ್ಟಿಕ್ ಎಂದರೇನೆಂದೇ ಈ ಕಾಡಿಗೆ ಗೊತ್ತಿರಲಿಲ್ಲ. (ಹೆಬ್ಳೀಕರರ ಆಗಂತುಕ ಚಿತ್ರದಲ್ಲಿ ಯಾಣ ತೋರಿಸಿದ್ದರಾದರೂ ಆ ಚಿತ್ರವನ್ನು ಹೆಚ್ಚು ಜನ ನೋಡಿರಲಿಕ್ಕಿಲ್ಲ.). ಈಗ ಯಾಣಕ್ಕೆ ಹೋಗಲು ಮನಸ್ಸಾಗುವುದು ಕೇವಲ "ಮಜಾ" ಮಾಡುವವರಿಗೆ ಮಾತ್ರ. ಉತ್ತರ ಕನ್ನಡ ಜಿಲ್ಲೆಯವರಲ್ಲಿ ಒಂದು ಮಾತಿದೆ. "ಸೊಕ್ಕಿದ್ದರೆ ಯಾಣಕ್ಕೆ ಹೋಗು, ರೊಕ್ಕಿದ್ದರೆ ಬನವಾಸಿಗೆ ಹೋಗು" ಅಂತ. ಇಲ್ಲಿ 'ಸೊಕ್ಕು' ಎಂದರೆ ಶಕ್ತಿ ಎಂದರ್ಥ. ಆದರೆ ಈಗ ಇದನ್ನು 'ಕೊಬ್ಬು, ದರ್ಪ' ಎಂದು ಅರ್ಥೈಸಿಕೊಳ್ಳಬಹುದು.

೩. ಮುಳ್ಳಯ್ಯನಗಿರಿ - ಕರ್ನಾಟಕದ ಅತ್ಯಂತ ಎತ್ತರದ ಶಿಖರವನ್ನು ತಲುಪಲು ಕಾರಿನಲ್ಲಿ ಕೇವಲ ಅರ್ಧ ಗಂಟೆ ಸಾಕು. ಹೀಗಾದಾಗ ಏನಾಗುತ್ತೆ? ಅನೇಕ ಅಪ್ರಯೋಜಕರ ದಾಳಿಗೆ ಗುರಿಯಾಗುತ್ತೆ ಸ್ವಚ್ಛಂದ ಪರಿಸರ.

ನನಗೆ ಇನ್ನು ಹೆಚ್ಚು ಜಾಗಗಳನ್ನು ಇಲ್ಲಿ ಹೆಸರಿಸಲು ಮನಸ್ಸಾಗುತ್ತಿಲ್ಲ. ದುಗುಡವೇನೆಂದರೆ ಇವೆಲ್ಲವನ್ನೂ ಮೀರಿ ಈಗ ಕೊಡಚಾದ್ರಿ ನಿಂತಿದೆ. ಚಾರಣದ ಹಾದಿಯಲ್ಲಿ ಅಂಗಡಿ ಸಾಲುಗಳು, ಸರ್ವನಾಶಕ್ಕೂ ಆಸ್ಪದ ಕೊಡುತ್ತಿರುವ ಅರಣ್ಯ ಇಲಾಖೆಯ ಐಬಿ, ಯಾವ ಲಾಡ್ಜಿಗೆ ಏನು ಕಮ್ಮಿ ಎನ್ನುವಂತಹ "ರೂಮುಗಳು", ಎಲ್ಲಿ ಬೇಕೆಂದರಲ್ಲಿ ಏನು ಬೇಕೆಂದರೆ ಅದನ್ನು ಬಿಸಾಡಬಹುದಾದ ಸ್ವಾತಂತ್ರ್ಯ - ಎಲ್ಲವೂ ಮೆರೆಯುತ್ತಿದೆ!! ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಬಂದವರೆಲ್ಲರೂ ಕೊಡಚಾದ್ರಿಯ ಶಿಖರದ ಮೇಲೆ ಉಳಿಯುತ್ತಾರೇನೋ ಎಂಬಷ್ಟು ಜನ ಅಲ್ಲಿ ನೆರೆದಿರುತ್ತಾರೆ. ಗಲಾಟೆ, ಕಿರುಚಾಟಕ್ಕೆ ಮಿತಿಯಿಲ್ಲ. ಇಷ್ಟರ ಮಧ್ಯೆಯೂ ಹಸಿರು ಕಾಣಿಸುತ್ತಲ್ಲಾ ಎಂಬುದು ಒಂದು ತೃಪ್ತಿಯೆಂದುಕೊಳ್ಳುವಷ್ಟರಲ್ಲೇ, ಆ ಹಸಿರಿಗೆ ಇನ್ನೆಷ್ಟು ದಿನ ಆಯುಷ್ಯವಿದೆಯೋ ಎಂಬ ಭೀತಿ ಹುಟ್ಟುತ್ತೆ.

(ವಾಹನಗಳ ರಾಶಿ)

ಒಂದು ಸುಂದರ ತಾಣವು ಹಾಳಾಗಲು ಮೊದಲ ಕಾರಣ - ಅಲ್ಲಿಗೆ ರಸ್ತೆ ಸೌಲಭ್ಯ ದೊರಕುವುದು. ಇದು ಪ್ರವಾಸೋದ್ಯಮ ಇಲಾಖೆಯವರಿಗೂ ಗೊತ್ತು, ಅರಣ್ಯ ಇಲಾಖೆಯವರಿಗೂ ಗೊತ್ತು, ಪರಿಸರ ಸಂರಕ್ಷಣೆ ಇಲಾಖೆಗೂ ಗೊತ್ತು. ನನಗೂ ಗೊತ್ತು. ನನ್ನ ಮಕ್ಕಳಿಗೂ ಗೊತ್ತು! ಆದರೂ ಹೀಗೆ ಆಗುವುದು ಏಕೆ? ಜನ ಹೆಚ್ಚು ಬಂದರೆ ದುಡ್ಡು ಹೆಚ್ಚು ಬರುತ್ತೆ ಅಲ್ಲವೆ? ಬಂದ ಜನ ಪ್ಲಾಸ್ಟಿಕ್ ಬಿಸಾಡಿದರೇನು, ಬಾಟಲಿ ಎಸೆದರೇನು? ಇದರಿಂದ ತಮಗೇನು ಆಗಬೇಕಿದೆ? ಪ್ರಾಣಿಗಳ ಹಾವಳಿಯೂ ಕಮ್ಮಿಯಾಗುತ್ತೆ! ಜನರು ಬರುವುದು ಹೆಚ್ಚಾದರೆ ಪ್ರಾಣಿಗಳು ಅಲ್ಲಿಂದ ಜಾಗ ಖಾಲಿ ಮಾಡುತ್ತವೆ, ಇಲ್ಲಾ ಅಂದರೆ ಸಾಯುತ್ತವೆ. ಇದರಿಂದ ಒಳ್ಳೆಯದೇ ಆಯಿತಲ್ಲಾ... ಬಂದವರು ಕಸ ಕಡ್ಡಿಯ ನಡುವೆಯೇ ಕಾಣಸಿಗುವ ದೂರದ ಬೆಟ್ಟದ ದೃಶ್ಯವನ್ನು ನೋಡಿ ಕರ್ನಾಟಕ ಬಹಳ ಸುಂದರವಾಗಿದೆ ಎನ್ನುತ್ತಾರಲ್ಲಾ!! ಇನ್ನೂ ಹೆಚ್ಚು ಹೆಚ್ಚು ಜನರನ್ನು ಕರೆತರುತ್ತಾರಲ್ಲಾ... ಇನ್ನೂ ಹೆಚ್ಚು ಹೆಚ್ಚು ಹಣ ಹರಿದು ಬರುತ್ತಲ್ಲಾ.....

ಹೊಸ ವರ್ಷಕ್ಕೆ ಒಂದು ಸುಂದರ ಜಾಗವು ಬಲಿಯಾಗಿರುವುದನ್ನು ನೋಡಿಕೊಂಡು ಬಂದು ಮನ ನೊಂದಿದೆ. ಇನ್ನು ಎಷ್ಟು ಸ್ಥಳಗಳು ಈ ಹಾದಿ ಹಿಡಿಯುವುದೋ ಎಂಬ ಭೀತಿಯೂ ಆಗಿದೆ. ಇದಕ್ಕೆ ನಾವೇನು ಮಾಡಬಹುದು, ಹೇಗೆ ಮಾಡಬಹುದು ಎಂದು ತೋಚದಾಗಿದೆ. ನಮ್ಮ ನಿಸ್ಸಹಾಯಕತೆಯು ಇವರ ಬಂಡವಾಳವಾಗುತ್ತಿದೆಯಲ್ಲಾ ಎಂದೂ ಬೇಸರವಾಗುತ್ತಿದೆ. ಯಾಕೆಂದರೆ, "ಭಕ್ತಾದಿ"ಗಳಿಗೆ ಪರಿಸರಕ್ಕಿಂತ ಕೊಡಚಾದ್ರಿಯ ಮೇಲಿರುವ ದೇವಸ್ಥಾನವೇ ಹೆಚ್ಚು. ಮತ್ತೆ ನಮ್ಮಂಥವರಿಗಿಂತ "ಭಕ್ತಾದಿ"ಗಳ ಸಂಖ್ಯೆಯೇ ಹೆಚ್ಚು. ಭಕ್ತಾದಿಗಳ ಸಂಖ್ಯೆಗಿಂತ 'ಮೇಲಿನವರ' ದುರಾಸೆಯೇ ಹೆಚ್ಚು!!

:-( :-( :-( :-(

ಹೊಸ ವರ್ಷಕ್ಕೆ ಹೊಸ ಕ್ರಾಂತಿಯಾಗಲಿ. ಎಲ್ಲರಿಗೂ ಶುಭಾಶಯಗಳು.

-ಅ
29.12.2008
1PM

Wednesday, December 24, 2008

ಹೋರಾಟದ ಹಾದಿಯಲ್ಲಿ

ಹೊಟ್ಟೆರಾಯನ ನಿತ್ಯದಟ್ಟಹಾಸವೊ ಬಾಳು |
ಧೃಷ್ಟ ಧಣಿಯೂಳಿಗಕೆ ಸೊಟ್ಟು ಮೈಬಾಗು ||
ಹಿಟ್ಟಿಗಗಲಿದ ಬಾಯಿ, ಬಟ್ಟೆಗೊಡ್ಡಿದ ಕೈಯಿ |
ಇಷ್ಟೆ ನಮ್ಮೆಲ್ಲ ಕಥೆ - ಮಂಕುತಿಮ್ಮ ||ಆಟಕ್ಕೆ ಫಲವೇನು? ಕೌತುಕದ ರುಚಿಯೆ ಫಲ |
ಚೀಟಿ ತಾಂ ಬೀಳೆನೆನಲ್ ಆಟ ಸಾಗುವುದೆ? ||
ಏಟಾಯ್ತೆ ಗೆಲುವಾಯ್ತೆಯೆಂದು ಕೇಳುವುದೇನು? |
ಆಟದೋಟವೆ ಲಾಭ - ಮಂಕುತಿಮ್ಮ ||ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ |
ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ ||
ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿ- |
ನ್ನುದ್ಧಾರವೆಷ್ಟಾಯ್ತೊ? - ಮಂಕುತಿಮ್ಮ ||ತಳೆಯಲಾರನೆ ಬೊಮ್ಮ ಬೀಭತ್ಸರೂಪಗಳ? |
ನಲಿಯಲಾರನೆ ತಿಪ್ಪೆರೊಚ್ಚು ನಾತದಲಿ? ||
ಮಲವೇನೊ! ಹೊಲೆಯೇನೊ! ಜೀವಸಂಬಂಧವಲ |
ಮಲಿನದಲಿ ನೆನೆ ಶುಚಿಯ - ಮಂಕುತಿಮ್ಮ ||ಭುಕ್ತಿ ನಿನಗೆಲ್ಲಿಯದು? ಭತ್ತ ತಾನೆಲ್ಲಿಯದೊ! |
ಎತ್ತಲಿನ ಗೊಬ್ಬರವೊ! ಎತ್ತಲಿನ ನೀರೋ! ||
ಭಾಕ್ತವಾರರ ದುಡಿತದಿನೊ ನಿನಗಾಗಿಹುದು! |
ಗುಪ್ತಗಾಮಿನಿಯೊ ಋಣ - ಮಂಕುತಿಮ್ಮ ||ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ |
ಚಿನ್ನದಾತುರಕುಂತ ಹೆಣ್ಣುಗಂಡೊಲವು ||
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ |
ತಿನ್ನುವುದದಾತ್ಮವನೆ - ಮಂಕುತಿಮ್ಮ ||ಉದರದೈವಕೆ ಜಗದೊಳೆದುರು ದೈವವದೆಲ್ಲಿ? |
ಮೊದಲದರ ಪೂಜೆ; ಮಿಕ್ಕೆಲ್ಲವದರಿಂದ ||
ಮದಿಸುವುದದಾದರಿಸೆ, ಕುದಿವುದು ನಿರಾಕರಿಸೆ |
ಹದದೊಳಿರಿಸುವುದೆಂತೊ? - ಮಂಕುತಿಮ್ಮ ||ಸತ್ತೆನೆಂದೆನಬೇಡ; ಸೋತೆನೆಂದೆನಬೇಡ |
ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ||
ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು |
ಮತ್ತೆ ತೋರ್ಪುದು ನಾಳೆ - ಮಂಕುತಿಮ್ಮ ||-ಅ
24.12.2008
8.40PM

Thursday, December 18, 2008

ಗೋಡೆಯ ರಾಜವಾರ್ತೆಯ ಮುಖ್ಯಾಂಶ: ಅಡುಗೆಯಲ್ಲಿ ಹಲ್ಲಿಯನ್ನು ಬೆರೆಸಿ ತನ್ನ ಗಂಡನನ್ನು ಕೊಂದ ಹೆಂಡತಿ!

ಇದು ಸಾಧ್ಯವೇ ಎಂದು ಪತ್ರಿಕೆಯವರೂ ಯೋಚಿಸದೆ ಪ್ರಕಟಿಸುತ್ತಾರಲ್ಲಾ ಎಂಬುದು ಬೇಸರದ ಸಂಗತಿ.

ಯಾವುದೇ ಸಂಕುಲದ ಹಲ್ಲಿಯನ್ನು ತಿಂದರೂ ಅದು ವಿಷವಲ್ಲ ಎಂಬುದು ನೆನಪಿರಲಿ. ಹಲ್ಲಿಯೇ ಏನು, ಕಿಂಗ್ ಕೋಬ್ರಾ ಕೂಡ ತಿಂದರೆ ಅದು ವಿಷವಲ್ಲ. ಹಾವಿನ ವಿಷವನ್ನೆಲ್ಲಾ ಒಂದು ಲೋಟದಲ್ಲಿ ಬಗ್ಗಿಸಿಕೊಂಡು ಶ್ರೀಧರನು ಕಾಫಿ ಹೀರುವಂತೆ ಗಟಗಟನೆ ಹೀರಿದರೂ ಏನೂ ಆಗುವುದಿಲ್ಲವೆಂಬುದು ತಿಳಿದಿರಲಿ.

ಹಲ್ಲಿಯ ಬಗ್ಗೆ ಹೀಗೇಕೆ ಮೂಢನಂಬಿಕೆ ಬಂದಿತು?

ಚೀನಾ ಥಾಯ್ಲೆಂಡ್ ದೇಶದವರು ಹಲ್ಲಿಯ ರುಚಿರುಚಿಯಾದ ತಿನಿಸುಗಳನ್ನು ಮಾಡುವುದು ನಮಗೆ ಗೊತ್ತಿಲ್ಲವೆ? ಅಷ್ಟು ದೂರ ಯಾಕೆ, ನೆಲದ ಮೇಲೆ ಥಪುಕ್ಕನೆ ಬಿದ್ದ ಹಲ್ಲಿಯನ್ನು ಅಟ್ಟಿಸಿಕೊಂಡು ಹೋಗಿ ಬೇಟೆ ಆಡಿ ಗುಳುಂ ಸ್ವಾಹ ಮಾಡುವ ಬೆಕ್ಕುಗಳನ್ನು ನಾವು ನೋಡಿಲ್ಲವೆ? ಬೆಕ್ಕುಗಳಿಗೆ ತಗುಲದ ವಿಷ ನಮಗೆ ತಗುಲೀತೇ? ಅಕಸ್ಮಾತ್ ನಮಗೆ ಗೊತ್ತಿಲ್ಲದ ಹಾಗೆ ಒಂದು ಹಲ್ಲಿಯು ಸಾರಿನ ಪಾತ್ರೆಯಲ್ಲೋ, ಗೊಜ್ಜಿನ ಪಾತ್ರೆಯಲ್ಲೋ ಬಿದ್ದಿದ್ದು, ಅಮ್ಮ ಅದನ್ನು ತಿಳಿಯದೆ ಸೌಟಿನಿಂದ ಚೆನ್ನಾಗಿ ಕಲಿಸಿ, ಬೆರೆಸಿ ಬಡಿಸಿದಾಗ ರುಚಿರುಚಿಯಾಗಿದೆಯೆಂದು ಊಟವನ್ನು ನಾವು ಸವಿದಿಲ್ಲವೆಂದು ಏನು ಗ್ಯಾರೆಂಟಿ?

ಮೂಢನಂಬಿಕೆಗಳಿಗೇನು ಕೊರತೆಯೇ? ಪಟ್ಟಿ ಮಾಡುತ್ತಾ ಹೋದರೆ ಆಂಜನೇಯನ ಬಾಲವೇ ಆದೀತು. ಹರಿಯಿಂದ ಹಲ್ಲಿಯವರೆಗೆ!!

ಏನಾದರೂ ಹೇಳಿಕೆಯನ್ನು ಕೊಟ್ಟಾಗ ಲೊಚಗುಟ್ಟುವ ಹಲ್ಲಿಯು ಶುಭ ಶಕುನದ ಸಂಕೇತ. ಈ ಒಂದು ನಂಬಿಕೆಯನ್ನು ನಾನು ಬಹಳ ಗೌರವಿಸುತ್ತೇನೆ. ಯಾಕೆಂದರೆ ಹಲ್ಲಿಯ ಬಗ್ಗೆ ನಾನು ಜನರ ಬಾಯಲ್ಲಿ ಕೇಳಿರುವ ಒಂದೇ ಒಂದು ಒಳ್ಳೆಯ ಮಾತು ಇದು. "ಅಯ್ಯೋ, ಅಸಹ್ಯ..." ಎಂಬುವವರೇ ಹೆಚ್ಚು.
ಈ ಲೊಚಗುಟ್ಟುವಿಕೆಯ ಬಗ್ಗೆ ಮುಂದುವರೆಸುವುದಕ್ಕಿಂತ ಮುಂಚೆ ಈ ಕೆಳಗಿನ ತಿಳಿವಳಿಕೆ ಅಗತ್ಯ.

ಮನೆಯಲ್ಲಿ ಕಾಣುವ ಹಲ್ಲಿಗಳಿಗೆ ಇಂಗ್ಲಿಷಿನಲ್ಲಿ Gecko ಎನ್ನುತ್ತಾರೆ. ನಮ್ಮಲ್ಲಿರುವುದು Hemidactylus frenatus ಎಂಬ ಗೆಕೋ. Lizard ಎನ್ನುವುದು ಇಡೀ ಸಂಕುಲಕ್ಕೆ ಅಥವಾ ಜಾತಿಗೆ.

ಈಗ ಮತ್ತೆ ವಿಷಯಕ್ಕೆ ಬರೋಣ.

ಗೆಕೋ ಒಂದನ್ನು ಹೊರೆತು ಉಳಿದ ಐದು ಸಾವಿರ ಬಗೆಯ ಹಲ್ಲಿಗಳೂ ಸಹ ಬುಸುಗುಟ್ಟುತ್ತವೆ. ಇದೊಂದು ಮಾತ್ರ ಲೊಚಗುಟ್ಟುವುದು. ಇವು ಆಹಾರ ತಮ್ಮ 'ರಾಜ್ಯ'ವನ್ನು ಚೆನ್ನಾಗಿ ಕಾಪಾಡಿಕೊಳ್ಳುತ್ತೆ. ತೀರಾ ನಾಟಕೀಯವಾಗಿ ಗಂಡು ಹಲ್ಲಿಗಳ ಯುದ್ಧ ನಡೆಯುತ್ತೆ. ಬಾಲವನ್ನು ಕಿತ್ತು ಹಾಕುವುದರಿಂದ ಹಿಡಿದು, ಕಚ್ಚಿ ಕೊಂದು ಸಾಯಿಸುವುದರವರೆಗೂ. ಬೇರೆ ಗೆಕೋಗಳ ಜೊತೆ ಆಹಾರದ ಸ್ಪರ್ಧೆಗಾಗಿ, ಮತ್ತೆ ಸಂಗಾತಿಯ ಸ್ಪರ್ಧೆಗಾಗಿ ಹೋರಾಡುತ್ತವೆ. ದಷ್ಟಪುಷ್ಟವಾಗಿರುವ ಧೈರ್ಯಶಾಲಿ ಹಲ್ಲಿಯು ಲೊಚಗುಟ್ಟಿದರೆ ಅದರರ್ಥ "ನನ್ನ ರಾಜ್ಯದಲ್ಲಿ ಆಹಾರಕ್ಕೇನೂ ಕೊರತೆಯಿಲ್ಲ, ನಾನು ಸಂಗಾತಿಯನ್ನು ಅರಸುತ್ತಿದ್ದೇನೆ. ನನ್ನೊಡನೆ ಸಂಭೋಗಿಸಲು ಇಚ್ಛಿಸುವ ಗೆಕೋ ಸುತ್ತಮುತ್ತ ಇದ್ದರೆ ನಾನು ಸಿದ್ಧ" ಎಂದು.
ಹೆಣ್ಣು ಗೆಕೋಗಳು ಲೊಚಗುಟ್ಟುವುದಿಲ್ಲ!!

ಶುಭಶಕುನದ ಶಬ್ದದ ಒಳ ಅರ್ಥ ಇದೇ.

ಇನ್ನು ಇದ್ದಕ್ಕಿದ್ದ ಹಾಗೆ ಮೈ ಮೇಲೆ ಬೀಳುವ ಹಲ್ಲಿಯು ಅನೇಕ ಶಕುನಗಳನ್ನು ಪ್ರತಿನಿಧಿಸುತ್ತವೆ - ಶುಭ, ಅಶುಭ ಎರಡೂ! ತಲೆಯ ಮೇಲೆ ಬಿದ್ದರೆ ಹಾಗೆ, ತೊಡೆಯ ಮೇಲೆ ಬಿದ್ದರೆ ಹೀಗೆ, ಕಣ್ಣಿನ ರೆಪ್ಪೆಯ ಕೂದಲಿನ ಮೇಲೆ ಬಿದ್ದರೆ ಇನ್ನೊಂದು ಬಗೆ, ಬೆನ್ನಿನ ಕೆಳಭಾಗದ ಮೇಲೆ ಬಿದ್ದರೆ ಮತ್ತೊಂದು ಬಗೆಯಾದ ಘಟನೆಗಳು ಸಂಭವಿಸುತ್ತವಂತೆ! ಅದಕ್ಕೆ ಪರಿಹಾರ ಶಾಂತಿ ಕ್ರಾಂತಿಗಳು ಬೇರೆ!! ಯಾವುದೇ ಪಾಕೆಟ್ ಕ್ಯಾಲೆಂಡರ್ ತೆಗೆದು ನೋಡಿದರೂ ಹಲ್ಲಿಗೊಂದು ಕಾಲಂ ಮೀಸಲಿರದೇ ಇರುವುದಿಲ್ಲ.ನಾವೆಲ್ಲರೂ ನೋಡಿಯೇ ಇರುತ್ತೇವೆ, ಗೋಡೆಯ ಮೇಲೆ, ಛಾವಣಿಯ ಮೇಲೆ ಸಲೀಸಾಗಿ ಓಡುತ್ತಿರುವ ಹಲ್ಲಿಗಳನ್ನು. ಹಲ್ಲಿಯ ಕಾಲುಗಳಲ್ಲಿ ವಿಶೇಷವಾದ ಪದರಗಳಿರುತ್ತವೆ. ಎಂಥಾದ್ದೇ ನೆಲವಿರಲಿ ಜಾರದೇ ನಡೆಯುವ ಸಾಮರ್ಥ್ಯ ಹಲ್ಲಿಗಳಿಗಿರುತ್ತವೆ. ಆದರೆ ಒಮ್ಮೊಮ್ಮೆ ಈ ಪದರವನ್ನೂ ಮೀರಿ ನೈಸಾಗಿರುವ ಗೋಡೆಯಿಂದಲೋ ಛಾವಣಿಯಿಂದಲೋ ಜಾರಿ ಕೆಳಗೆ ಬಿದ್ದು ಜೀವ ಉಳಿಸಿಕೊಳ್ಳಲು ತನ್ನ ಶತ್ರುಗಳ ಗಮನವನ್ನು ಬೇರೆ ಕಡೆ ಸೆಳೆಯಲು ತನ್ನ ಬಾಲವನ್ನು ಕಳಚಿ ಕಾಲಿಗೆ ಬುದ್ಧಿ ಹೇಳುತ್ತವೆ. ಬಾಲವನ್ನು ಕಳಚಿದ ಹಲ್ಲಿಗೆ ಕೆಲವು ದಿನಗಳ ನಂತರ ಹೊಸ ಬಾಲವು ಬೆಳೆದುಕೊಳ್ಳುತ್ತೆ.

ಹಲ್ಲಿಯ ಕಣ್ಣುಗಳು ಮತ್ತು ಕಿವಿಗಳು ಬಹಳ ಚುರುಕಾಗಿರುವುದರಿಂದ ಉತ್ತಮ ಬೇಟೆಗಾರ ಪ್ರಾಣಿಗಳಲ್ಲಿ ಇದೂ ಒಂದು ಎಂಬ ಖ್ಯಾತಿಗೊಳಪಟ್ಟಿದೆ.ಈ ಗೋಡೆಯ ರಾಜನ ಕಂಡರೆ ನಾವು ಅಸಹ್ಯ ಪಡಬರಾದು. ಅದರ ಮೇಲೆ ಅಪಶಕುನದ ಆರೋಪ ಹೊರೆಸ ಬಾರದು. ಅದು ವಿಷವೆಂಬ ಸುಳ್ಳು ಆಪದನೆ ಮಾಡಬಾರದು. ನಾವು ಹಲ್ಲಿಗಳಿಗೆ ಕೃತಜ್ಞರಾಗಿರಬೇಕು. ಮನೆಯಲ್ಲಿರುವ ಹುಳು ಹುಪ್ಪಟೆಗಳನ್ನು ಕೆಮಿಕಲ್ಲುಗಳಿಲ್ಲದೇ ಶುಚಿಗೊಳಿಸುವುದು ಹಲ್ಲಿಗಳು ಮಾತ್ರ.

-ಅ
18.12.2008
10.30PM

Tuesday, December 16, 2008

ರಕ್ತ ಮತ್ತು ಜ್ವರ

ನಮಗೆ ಜ್ವರ ಏಕೆ ಬರುತ್ತೆ? ಬೇಡ ಈ ಪ್ರಶ್ನೆ. ಮನುಷ್ಯನಿಗೆ ಜ್ವರ ಬರಲೇ ಬೇಕು ತನ್ನ ದೇಹ ಸಾಮರ್ಥ್ಯ ಕಡಿಮೆಯಾದಾಗ. ಜ್ವರವೆಂದರೆ ದೇಹದ ಉಷ್ಣಾಂಶ ಹೆಚ್ಚುವುದು ಎಂದರ್ಥ ಎನ್ನುವುದು ಒಂದನೆಯ ತರಗತಿಯ ಮಗುವೂ ತಿಳಿದಿದೆ.

ಆದರೆ ನನ್ನಂತೆಯೇ ಎಲ್ಲರೂ ಪ್ರಶ್ನಿಸಿರುತ್ತಾರೆ, ಚಿಕ್ಕಂದಿನಲ್ಲಿ (ಕೆಲವರು ದೊಡ್ಡವರಾದ ಮೇಲೂ) - ನಮ್ಮಂತೆ ಬೇರೆ ಪ್ರಾಣಿಗಳಿಗೂ ಜ್ವರ ಬರುತ್ತಾ? ಸ್ವಲ್ಪ ತಿಳಿವಳಿಕೆ ಬಂದ ಮೇಲೆ ನೋಡಿರುತ್ತೇವೆ ಜ್ವರ ಬಂದಿರುವ ನಾಯಿಯೋ ಬೆಕ್ಕೋ ಮಂಕಾಗಿದ್ದು ಹುಲ್ಲನ್ನು ತಿಂದು ವಾಂತಿ ಮಾಡಿ ತನ್ನ ಕಾಯಿಲೆಯನ್ನು ತಾನೇ ವಾಸಿ ಮಾಡಿಕೊಳ್ಳುವುದನ್ನು.ನಮ್ಮ ದೇಹದ ಉಷ್ಣಾಂಶ 33°C ಮೀರಿದರೆ ಥರ್ಮಾಮೀಟರ್ ಇಟ್ಟು ಜ್ವರ ಬಂದಿರುವುದನ್ನು ನಾವು ಖಚಿತ ಪಡಿಸಿಕೊಳ್ಳುತ್ತೇವೆ. ಇದೆಲ್ಲಾ ಈಗ ಯಾಕೆ? ಜ್ವರ ಬಂದಾಗ ನೋಡಿಕೊಳ್ಳೋಣ. ಇಲ್ಲಿ ಬೇಕಾಗಿರುವ ವಿಷಯವೆಂದರೆ ನಮ್ಮ ದೇಹದ ಒಳಗಿನ ಕ್ರಿಯೆಗಳು (metabolism) ಉಷ್ಣಾಂಶಕ್ಕೆ ಕಾರಣವಾಗಿರುತ್ತೆ ಎಂಬುದನ್ನು ನಾವು ಮರೆಯಬಾರದು. ಇದೇ ರೀತಿ ನಾಯಿ, ಬೆಕ್ಕು, ಹುಲಿ, ಸಿಂಹ, ಆನೆ, ಜಿಂಕೆ, ಕಾಗೆ, ಗುಬ್ಬಚ್ಚಿ - ಎಲ್ಲಾ ಪ್ರಾಣಿ ಪಕ್ಷಿಗಳಿಗೂ ಆಗುತ್ತೆ. ಇಂಥಾ ಪ್ರಾಣಿಗಳನ್ನು (ಮನುಷ್ಯರನ್ನೂ ಸೇರಿಸಿ) ನಾವು ಬಿಸಿ ರಕ್ತ ಪ್ರಾಣಿಗಳೆನ್ನುತ್ತೇವೆ. ಸುತ್ತಮುತ್ತಲಿನ ಹವಾಮಾನದಲ್ಲಿ ಏನೇ ಏರುಪೇರಾದರೂ ದೇಹದ ಉಷ್ಣಾಂಶ ಮಾತ್ರ ಬದಲಾಗುವುದಿಲ್ಲ. ಬದಲಾದರೆ ಅದನ್ನು ಜ್ವರ ಎನ್ನುತ್ತೇವೆ. ಹೀಗೆ ಬದಲಾಗದ ಉಷ್ಣಾಂಶ ಇರುವ ಇಂಥ (ನಮ್ಮನ್ನೂ ಸೇರಿಸಿ) ಪ್ರಾಣಿಗಳನ್ನು ಹೋಮಿಯೋಥರ್ಮಿಕ್ (Homeothermic) ಪ್ರಾಣಿಗಳು ಎಂದೂ ಕರೆಯುತ್ತೇವೆ.ಮೇಲೆ ಹೇಳಿದ್ದನ್ನು ಇನ್ನೊಂದು ಸಲ ಹೇಳುತ್ತೇನೆ. ಜ್ವರವೆಂದರೆ ದೇಹದ ಉಷ್ಣಾಂಶ ಹೆಚ್ಚಾಗುವುದೆಂದಷ್ಟೇ ಅರ್ಥ.

ಈಗ ಎರಡನೆಯ ಪ್ರಶ್ನೆ. ಬಹುಶಃ ಇದನ್ನು ಎಲ್ಲರೂ ಹಾಕಿಕೊಂಡಿರುವುದಿಲ್ಲ. ಮೀನುಗಳಿಗೆ ಜ್ವರ ಬರುವುದಿಲ್ಲವೇ? ಹಾವುಗಳಿಗೆ ಜ್ವರ ಬರುವುದಿಲ್ಲವೇ? ಅಥವಾ ಬಂದರೂ ಅದು ತಣ್ಣಗೆ ಇರುತ್ತಾ? ಅದು ಹೇಗೆ? ಮತ್ತು ಯಾಕೆ?

ಮೀನುಗಳು, ಹಾವುಗಳು, ಹುಳುಗಳು, ಹಲ್ಲಿಗಳು ಎಲ್ಲವೂ ತಣ್ಣನೆಯ ರಕ್ತ ಪ್ರಾಣಿಗಳು ಎಂದು ಕರೆಯುತ್ತೇವೆ. ಯಾಕೆ?ಅವುಗಳ ದೇಹದ ಉಷ್ಣಾಂಶವೂ ಬದಲಾಗುತ್ತೆ, ಆದರೆ ನಮಗಾಗುವ ಕಾರಣಗಳಿಂದಲ್ಲ. ದೇಹದ ಕ್ರಿಯೆಗಳಿಗೂ ಉಷ್ಣಾಂಶಕ್ಕೂ ಸಂಬಂಧವೇ ಇರುವುದಿಲ್ಲ. ಬದಲಿಗೆ ಸುತ್ತಮುತ್ತಲಿನ ಪರಿಸರದ ಮೇಲೆ ಅವಲಂಬಿತವಾಗಿರುತ್ತೆ. ಒಂದು ಜೇಡವನ್ನು ಕೈಗೆತ್ತಿಕೊಂಡರೆ ನಮ್ಮ ಕೈ ತಾಪಮಾನವೇ ಜೇಡದ ತಾಪಮಾನ ಕೂಡ ಆಗಿರುತ್ತೆ. ಹಾವುಗಳು ಬಿಸಿಲಿಗೆ ಬಂದರೆ ಹೊರಗೆ ಎಷ್ಟು ತಾಪಮಾನವಿರುತ್ತೋ ಅದರ ದೇಹದ ಉಷ್ಣಾಂಶ ಕೂಡ ಅಷ್ಟೇ ಆಗಿಬಿಡುತ್ತೆ. ಮೀನುಗಳ ದೇಹದ ಉಷ್ಣಾಂಶ ನೀರಿನ ಉಷ್ಣಾಂಶದ ಮೇಲೆ ಅವಲಂಬಿತವಾಗಿರುತ್ತೆ. ಹಾಗಾಗಿ ಇವುಗಳನ್ನು ಪಾಯ್ಕಿಲೋಥರ್ಮಿಕ್ (Poikilothermic) ಅಥವಾ ಎಕ್ಟೋಥರ್ಮಿಕ್ (Ectothermic) ಪ್ರಾಣಿಗಳೆನ್ನುತ್ತೇವೆ.

ದೇಹದ ಉಷ್ಣಾಂಶವು ಏರುಪೇರಾದರೆ ದೈಹಿಕ ಕ್ರಿಯೆಗಳಿಗೆ ತೊಂದರೆ. ಇದರ ಫಲಿತಾಂಶವೇ ಜ್ವರ. ಇದು ಹೋಮಿಯೀಥರ್ಮಿಕ್ ಮತ್ತು ಎಕ್ಟೋಥರ್ಮಿಕ್ ಎರಡು ಬಗೆಯ ಪ್ರಾಣಿಗಳಿಗೂ ಅನ್ವಯಿಸುವ ಸೂತ್ರ. ನಾವುಗಳು ಆಹಾರದಿಂದ, ಶೌಚದಿಂದ, ಜೀರ್ಣಶಕ್ತಿವೃದ್ಧಿಯಿಂದ, ಒಳ್ಳೆಯ ದೈಹಿಕ ಸಹವಾಸದಿಂದ ಜ್ವರವನ್ನು ತಡೆಗಟ್ಟಬಹುದು. ತಣ್ಣನೆಯ ರಕ್ತದ ಜೀವಿಗಳು ತಮ್ಮ ದೇಹದ ತಾಪಮಾನಕ್ಕೆ ತಕ್ಕಂಥ ಪರಿಸರದಲ್ಲಿ ವಾಸಿಸುವುದರಿಂದ ಜ್ವರವನ್ನು ತಡೆಗಟ್ಟಬಹುದು.
--> ಹಾವು ಹುತ್ತದಲ್ಲಿ ಮತ್ತು ಬಂಡೆಗಳ ಸಂದಿಗಳಲ್ಲಿ ಅಡಗಿಕೊಂಡಿರುತ್ತವೆ.

--> ಹಲ್ಲಿ, ಓತಿಕ್ಯಾತ, ಹಾವ್ರಾಣಿ ಬಂಡೆಗಳ ಸಂದಿಗಳನ್ನು ಬಯಸುತ್ತವೆ.

--> ಮೊಸಲೆಗಳು ನೀರಲ್ಲಿ ಕೆಲಕಾಲ, ಬಂಡೆಗಳ ಮೇಲೆ ಕೆಲಕಾಲ ಕಳೆಯುತ್ತವೆ.

--> ಮೀನುಗಳು ನೀರಿನ ಆಳಗಳನ್ನು ಬದಲಿಸುತ್ತಿರುತ್ತವೆ.

--> ಮರುಭೂಮಿಯ ಸರಿಸೃಪಗಳು ಆಳದ ಬಿಲಗಳನ್ನು ಹೊಗುತ್ತವೆ.

--> ಆಮೆಗಳಿಗೆ ಹುಟ್ಟಿದಾಗಿನಿಂದಲೂ ಉಷ್ಣಾಂಶ ಕಾಪಾಡಲು ಚಿಪ್ಪಿವೆ.

--> ಹುಳು ಹುಪ್ಪಟೆಗಳು ತಮ್ಮ ಹಾರಾಟದ ಅಂಗಗಳನ್ನು ಕಂಪಿಸಿ ಶಾಖವನ್ನು ಉತ್ಪತ್ತಿ ಮಾಡಿಕೊಳ್ಳುತ್ತವೆ.

-ಅ
16.12.2008
8.45PM

Thursday, December 11, 2008

ಚಂದ್ರ ಪುರಾಣಇಂದು ನನಗೆ ಬಂದ ಒಂದು ಎಸ್ಸೆಮ್ಮೆಸ್ಸು ಈ ಪೋಸ್ಟ್-ಗೆ ಕಾರಣ. ಸಂದೇಶ ಹೀಗಿದೆ.

Tonight by 10:53 all the 7 moons of Venus will be visible in the sky. This will happen only once in 7,306,428 years. Dont miss it.

ಇಂಥಾ ಮೆಸೇಜುಗಳ ಕರ್ತೃಗಳು ಎಲ್ಲಿರುತ್ತಾರೋ ಹುಡುಕಬೇಕು.

ಸರಿ ಈಗ ಗ್ರಹಗಳ ಚಂದಿರಗಳ ಬಗ್ಗೆ ತಿಳಿದುಕೊಳ್ಳೋಣ. ಯಾಕೆಂದರೆ ವೀನಸ್ (ಶುಕ್ರ) ಗ್ರಹದ ಏಳು ಚಂದಿರಗಳೆಂದಾಗ ನನಗೆ ಆದ ಅಚ್ಚರಿ ಅಷ್ಟಿಷ್ಟಲ್ಲ.

ಭೂಮಿ ಗ್ರಹಕ್ಕೆ ಒಂದು ಚಂದ್ರ. ಇದನ್ನು ಉಪಗ್ರಹವೆಂದೂ ಕರೆಯುತ್ತೇವೆ. ಸ್ವಾಭಾವಿಕ ಉಪಗ್ರಹಗಳನ್ನು ಚಂದ್ರ ಎಂದು ಕರೆಯುವುದು ವಾಡಿಕೆ. ಭೂಮಿಗೆ ಒಂದೇ ಸ್ವಾಭಾವಿಕ ಉಪಗ್ರಹವಿರುವುದು. ನಮ್ಮ ಚಂದ್ರ!!

ಗುರು (Jupiter) ಮತ್ತು ಶನಿ (Saturn) ಎರಡೂ ಗ್ರಹಗಳು ಸ್ಪರ್ಧೆಯ ಮೇಲೆ ಉಪಗ್ರಹಗಳನ್ನು ಹೊಂದಿವೆ. ಗೆಲುವು ಶನಿಗೇ. ಐವತ್ತೆರಡು ಚಂದ್ರಗಳು ಶನಿಯಲ್ಲಿದೆ. ಹಗಿನ್ಸ್ ಎಂಬಾತ ಶನಿಯ ಚಂದ್ರ ಟೈಟನ್‍ನನ್ನು ಪ್ರಥಮ ಬಾರಿಗೆ ಕಂಡುಹಿಡಿದದ್ದು ಹದಿನೇಳನೆಯ ಶತಮಾನದಲ್ಲಿ. ನಂತರ ಕ್ಯಾಸಿನಿ ಎಂಬಾತ ಶನಿಯ ಇನ್ನೂ ನಾಲ್ಕು ಚಂದ್ರಗಳನ್ನು ಲ್ಯಾಪಿಟಸ್, ರಿಯಾ, ಡಿಯೋನೆ, ಮತ್ತು ತೆಥಿಸ್ ಎಂಬುದನ್ನು ಕಂಡುಹಿಡಿದರು. ಶನಿ ಗ್ರಹವನ್ನು ಸುತ್ತುವರಿದ ಉಂಗುರಗಳ ನಡುವೆ ಇರುವ ಅಂತರವನ್ನು ಕ್ಯಾಸಿನಿ ವಿಭಜಕಗಳು ಎಂದು ಈ ವಿಜ್ಞಾನಿಯ ಹೆಸರನ್ನೇ ಇಟ್ಟಿದ್ದಾರೆ. ಗುರು ಗ್ರಹವು ನಲವತ್ತೊಂಭತ್ತು ಚಂದ್ರಗಳನ್ನು ಹೊಂದಿದೆ. ಅದರಲ್ಲಿ ಬಹು ಮುಖ್ಯವಾದುವು ಐಯೋ, ಯೂರೋಪಾ, ಗ್ಯಾನಿಮೀಡ್ ಮತ್ತು ಕ್ಯಾಲಿಸ್ಟೋ. ಯೂರೋಪಾ ಉಪಗ್ರಹವು ಬುಧಗ್ರಹಕ್ಕಿಂತ ದೊಡ್ಡದಾಗಿರುವುದು ವಿಶೇಷ.

ಸೂರ್ಯನಿಗೆ ಅತಿ ಹತ್ತಿರವಾದ ಬುಧ ಗ್ರಹಕ್ಕೆ ಒಂದು ಚಂದಿರದ ದಿಕ್ಕೂ ಇಲ್ಲ! (ಸುಮ್ಮನೆ ಮಾಹಿತಿಗಾಗಿ: ಬುಧ ಗ್ರಹವು ಸೂರ್ಯನಿಗೆ ಅತಿ ಹೆಚ್ಚು ಹತ್ತಿರವಾದರೂ ಅತ್ಯಂತ ತಾಪಮಾನ ಇರುವುದು ಬುಧದಲ್ಲಲ್ಲ. ಶುಕ್ರನಲ್ಲಿ!!)

ಭೂಮಿಯ ಅತಿ ಹತ್ತಿರದ ಗೆಳೆಯ, ಮನುಷ್ಯನ ಆಕರ್ಷಣೆಯನ್ನು ಪಡೆದ ಕುಜ (Mars) ಗ್ರಹಕ್ಕೆ ಫೋಬೋಸ್ ಮತ್ತು ಡೀಮೋಸ್ ಎಂಬ ಎರಡು ಸುಂದರ ಚಂದ್ರಗಳಿವೆ. ಮೂರು ಸಾವಿರ ಚದುರ ಕಿ.ಮೀ. ಅಡಿಗಳಷ್ಟು ಸುತ್ತಳತೆಯನ್ನು ಹೊಂದಿರುವ ಈ ಉಪಗ್ರಹಗಳು ಇಡೀ ಸೌರಮಂಡಲದಲ್ಲಿ ಅತ್ಯಂತ ಚಿಕ್ಕವು.ಆಧುನಿಕ ಗ್ರಹಗಳು ಯುರೇನಸ್ ಮತ್ತು ನೆಪ್ಚೂನ್ ಕ್ರಮವಾಗಿ ಇಪ್ಪತ್ತೇಳು ಮತ್ತು ಹದಿಮೂರು ಚಂದ್ರಗಳನ್ನು ಹೊಂದಿವೆ.

ಉಳಿದಿರುವುದು ಶುಕ್ರ - ಅಥವಾ Venus. ಇದಕ್ಕೆ ಒಂದು ಉಪಗ್ರಹವೂ ಇಲ್ಲ!! ಚಂದಿರಗಳೇ ಇಲ್ಲದ ಗ್ರಹದ ಏಳು ಚಂದ್ರಗಳು ಎಲ್ಲಿಂದ ತಾನೇ ಕಂಡೀತು?[ಪ್ಲೂಟೋ ತನ್ನ ಗ್ರಹದ ಸ್ಥಾನಮಾನವನ್ನು ಆಗಸ್ಟ್ 2006-ರಲ್ಲಿ ಕಳೆದುಕೊಂಡಿತಾದರೂ ಸೂರ್ಯನ ಕಕ್ಷೆಯಲ್ಲೇ ಇರುವ ಇದರಂತಹ ಸಣ್ಣ ಗ್ರಹದಂತಹ ವಸ್ತುಗಳಿಗೆ ಪ್ಲೂಟಾಯ್ಡ್-ಗಳು ಎನ್ನುತ್ತಾರೆ. ಹಳೆಯ ಪ್ಲೂಟೋ ಚರಾನ್ ಎಂಬ ಉಪಗ್ರಹವನ್ನು ಹೊಂದಿತ್ತೆಂದು ಹೇಳುತ್ತಾರೆ]

-ಅ
11.12.2008
1AM

Wednesday, December 03, 2008

ಉಣಿಸುವುದುಸಾಮಾನ್ಯವಾಗಿ ಮೃಗಾಲಯಗಳಿಗೆ, ಪ್ರಾಣಿ ಸಂಗ್ರಹಾಲಯಗಳಿಗೆ ಭೇಟಿ ನೀಡುವ ಅನೇಕ ವಿಕೃತ ಮನರಂಜನಾರ್ಥಿಗಳು 10 X 10 ಕೂಡ ಇಲ್ಲದ ಪಂಜರದೊಳಗಿನ ಪ್ರಾಣಿಗಳಿಗೆ ಏನಾದರೂ ಆಹಾರ ತಿನಿಸುವ ದುರಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಬನ್ನೇರುಘಟ್ಟದ ನವಿಲುಗಳು ಲೇಸ್, ರಫಲ್ಸ್, ಕುರ್‍ಕುರೇ ರುಚಿಯನ್ನೆಲ್ಲಾ ಬಲ್ಲವು. ಶೃಂಗೇರಿಯ ಮೀನುಗಳು ಈಗ ಕಡಲೆಪುರಿ ತಿನ್ನುವುದಿಲ್ಲ, ಅದಕ್ಕೆ ಮಸಾಲೆ ಬೆರೆತ ಖಾರದ ಪುರಿಯೇ ಆಗಬೇಕು. ಕಾವೇರಿ ನಿಸರ್ಗಧಾಮದ ಜಿಂಕೆಗಳು ಹುಲ್ಲು ಮೇಯುವುದಿಲ್ಲ, ಪ್ರವಾಸಿಗರು ಸೌತೇಕಾಯಿ ತಿನ್ನಿಸುತ್ತಾರೆ. ಬಂಡೀಪುರದ ಹಾದಿಯ ಕಾಡುಜಿಂಕೆಗಳಿಗೆ ಮನುಷ್ಯರೆಂದರೆ ಭಯವಿಲ್ಲ, ಚಿಪ್ಸು, ಬ್ರೆಡ್ಡು, ಹಣ್ಣು ಹಂಪಲು ಇವೆಲ್ಲಾ ಸಲೀಸಾಗಿ ಸಿಗುತ್ತೆ ರಸ್ತೆ ಬದಿಗೆ ಬಂದುಬಿಟ್ಟರೆ. ಇನ್ನೂ ವಿಶೇಷವೆಂದರೆ ಮದುಮಲೈ ವಲಯದ ಕಾಡಾನೆಗಳು ಕೂಡ ಪ್ರವಾಸಿಗರ ತಿಂಡಿ ತೀರ್ಥಗಳೆಂದರೆ ಜೊಲ್ಲು ಸುರಿಸುತ್ತವೆ.

ನಾಯಿಗಳಿಗೆ ಬ್ರೆಡ್, ಬಿಸ್ಕತ್ತು ಹಾಕುವಾಗ ಮೇಲಕ್ಕೆಸೆಯುವುದನ್ನು ನೋಡಿದ್ದೇವೆ, ಹಾಗೆ ಮಾಡಿಯೂ ಇದ್ದೇವೆ. ನಾಯಿಗಳು ಸ್ವಲ್ಪ ಸ್ನೇಹಮಯಿಯಾಗಿದ್ದರೆ ಕೈಯಿಂದ ತಿನ್ನಿಸುವುದೂ ಉಂಟು. "ಒಳ್ಳೇ ನಾಯಿಗೆ ಹಾಕಿದ ಹಾಗೆ ಬಿಸಾಕ್ದ.." ಎಂದೂ ಹೇಳುತ್ತೇವೆ. ಪಾಪ, ನಾಯಿಗೆ ಶಾಶ್ವತ ನಾಯಿಪಾಡು. ನಾಯಿಗಳಿಗೆ ಸಿಹಿ ತಿನಿಸುಗಳನ್ನು ತಿನ್ನಿಸಬಾರದೆಂಬ ಸಣ್ಣ ವಿಷಯವೂ ಅನೇಕರಿಗೆ ಗೊತ್ತಿರುವುದಿಲ್ಲ. ಇನ್ನು ಕೋತಿಗಳದೋ ಗೊತ್ತಿರುವ ವಿಷಯವೇ. ಶಿವಗಂಗೆ ನಂದಿಬೆಟ್ಟದ ಕೋತಿಗಳು ರೌಡಿ ಅಪರಾವತಾರಗಳು. ನಾವು ತಿಂಡಿ ತೆಗೆಯುವ ಮುನ್ನವೇ ನಮ್ಮ ತಿಂಡಿಯ ಚೀಲವೇ ದರೋಡೆಯಾಗುವುದರಲ್ಲಿ ಆಶ್ಚರ್ಯವಿಲ್ಲ.

ಕಾಡುಕೋತಿಗಳು ಹಾಗೆ ರೌಡಿಗಳಾಗಲು ಕಾರಣ ಏನೆಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಕೃತಿ ನಿಯಮದ ಪ್ರಕಾರ ನಾಯಿ ಬೆಕ್ಕು ದನಗಳಂತಹ ಸಾಕುಪ್ರಾಣಿಗಳು ಮನುಷ್ಯನಿಗೆ ಹೊಂದುಕೊಂಡಿರುವುದರಿಂದ, ಮತ್ತು ಅವಲಂಬಿತವಾಗಿರುವುದರಿಂದ ಇವುಗಳ ಹೊರೆತು ವನ್ಯಮೃಗಗಳು ಯಾವುವೂ ಮನುಷ್ಯನಿಂದ ಆಹಾರ ಉಣಿಸಿಕೊಳ್ಳುವಂಥದ್ದಲ್ಲ. ಹುಲಿಯು ಬೇಟೆಯಾಡಿಯೇ ಆಹಾರ ಸಂಪಾದಿಸಬೇಕು. ಜಿಂಕೆಯು ಹುಲ್ಲನ್ನು ಮೇಯಬೇಕು. ಹದ್ದುಗಳು, ಕಿರುಬಗಳು "ಅನಾಥ" ಹೆಣಗಳನ್ನು ಮೆಲ್ಲಬೇಕು. ಏನೋ ದೊಡ್ಡ ಉಪಕಾರ ಮಾಡುವಂತೆ ತಪ್ಪು ತಿಳಿದವರು ಪ್ರಾಣಿಗಳಿಗೆ ಆಹಾರ ಕೊಡುವುದನ್ನು ಅಭ್ಯಸಿಸಿಕೊಂಡಿರುತ್ತಾರೆ. ಇದರಿಂದ ಆ ಪ್ರಾಣಿಗಳಿಗೂ ತೊಂದರೆ, ಕೋತಿಯು ಉಗ್ರ(ವಾ)ನರಸಿಂಹವಾಗುವ ಕಾರಣವೂ ಇದೇ.ಹಕ್ಕಿಗಳಿಗೆ ಆಹಾರ ಕೊಡುವುದು ಕೆಲವರಿಗೆ ಬಹಳ ಖುಷಿ. ಮನೆಯಲ್ಲಿ ಪಂಜರದೊಳಗೆ ಸಾಕಿಕೊಂಡಿರುವ ಹಕ್ಕಿಗಳ ಬಗ್ಗೆ ನಾನು ಮಾತನಾಡುತ್ತಿಲ್ಲ. ಅಂಥವರ ಬಗ್ಗೆ ನನಗೆ ಬೇಸರವಿದೆ. ಆದರೆ ಸ್ವತಂತ್ರವಾಗಿ ಹಾರಾಡುತ್ತಿರುವ ಹಕ್ಕಿಗಳಿಗೆ ಆಹಾರ ಕೊಡುವವರನ್ನು ನಾನು ನೋಡಿದ್ದೇನೆ. ತಪ್ಪೇನೂ ಇಲ್ಲ. ಪಾರಿವಾಳಗಳು ಅದೆಷ್ಟೋ ಕಾಲದಿಂದ ಮನುಷ್ಯನ ಸಖ್ಯ ವಹಿಸಿದೆ. ಕಾಗೆಗಳಂತೂ ನಾಯಿಗಳಿಗಿಂತ ಹತ್ತಿರವಾಗಿಬಿಟ್ಟಿದೆ. ಮನುಷ್ಯನ ಹಳೆಯ ಮಿತ್ರ ಗುಬ್ಬಿಯು ನಾಪತ್ತೆಯಾಗಿಬಿಟ್ಟಿದೆ. ಆದರೆ ಪಕ್ಷಿಧಾಮಗಳಿಗೆ ಭೇಟಿ ನೀಡುವವರು ಇದರ ಬಗ್ಗೆ ಗಮನ ಹರಿಸಬೇಕು. ಪಾರಿವಾಳ, ಕಾಗೆಗಳಂತೆ ಬೇರೆ ಪಕ್ಷಿಗಳು ಗಟ್ಟಿಯಾಗಿರುವುದಿಲ್ಲ. ಚಿಪ್ಸು, ಪಾಪ್‍ಕಾರ್ನು ತಿಂದು ಜೀರ್ಣಿಸಿಕೊಳ್ಳಬಲ್ಲ ಶಕ್ತಿ ಅವುಗಳಿಗಿರುವುದಿಲ್ಲ. ಇನ್ನು ಕೆಲವು ದುಷ್ಕರ್ಮಿಗಳು ಪ್ಯಾಕೆಟ್ ಸಮೇತ ಕೊಕ್ಕರೆಗಳಿಗೆ ಚಿಪ್ಸನ್ನು ಹಾಕಿರುವುದನ್ನೂ ನೋಡಿದ್ದೇನೆ, ಅಂಥವರಿಗೆ ಬೈದಿದ್ದೇನೆ.

ಮನೆಯ ಮೇಲೆ ಒಂದು ದೊಡ್ಡ ಹಲಗೆಯ ಮೇಲೆ ಒಂದು ಚಪ್ಪಟ್ಟೆಯ ತಟ್ಟೆಯನ್ನಿಟ್ಟು ಅದರಲ್ಲಿ ಬ್ರೆಡ್ಡು ಚೂರನ್ನು ಉದುರಿಸಿದ್ದು, ಅನತಿ ದೂರದಲ್ಲೇ ಇನ್ನೊಂದು ಬಟ್ಟಲಿನಲ್ಲಿ ನೀರನ್ನಿಟ್ಟಿದ್ದು ಮನೆಯ ಮೇಲೇ ಒಂದು ಸಣ್ಣ ಪಕ್ಷಿಧಾಮವನ್ನು ನಿರ್ಮಿಸಬಹುದು. ಗಮನವಿರಲಿ, ಉಪ್ಪು ಬೆರೆತ ತಿಂಡಿಗಳನ್ನು ಪಕ್ಷಿಗಳ ದೇಹ ಸಹಿಸುವುದಿಲ್ಲ. ಆದರೆ ಪಕ್ಷಿಗಳು ಆಹಾರಕ್ಕೆ ಮನುಷ್ಯನ ಮೇಲೆ ಅವಲಂಬಿತವಾಗುವಂತೆ ಮಾಡುವುದು ತಪ್ಪು.


Feed the Bear - Click here for more blooper videos

-ಅ
03.12.2008
12.30AM

Wednesday, November 26, 2008

ಶವ ಸಂಸ್ಕಾರ

ಒಂದು ಯಃಕಶ್ಚಿತ್ ಇಲಿಸುಂಡ ಸತ್ತು ಬಿದ್ದರೆ ಎಷ್ಟು ವಾಸನೆ, ಅದರಿಂದ ಎಷ್ಟು ರೋಗ ಹರಡುತ್ತೆ, ಇನ್ನು ಮನುಷ್ಯನ ಹೆಣದಿಂದ ಇನ್ನೆಷ್ಟು ರೋಗ ಬರಬಹುದು?! ಸತ್ತ ಮೇಲೆ ಆದಷ್ಟು ಬೇಗ ಹೆಣವನ್ನು ನಾಶಗೊಳಿಸಿಬಿಡಬೇಕು ಎಂಬುದನ್ನು ಎಲ್ಲರೂ ಬಲ್ಲರು. ನಾವು ಪ್ರಕೃತಿಯ ಅಂಶವೇ ಆದರೂ "ಸಂಸ್ಕೃತಿ"ಯನ್ನು ರೂಢಿಸಿಕೊಂಡು ಉಳಿದ ಜೀವಿಗಳಿಂದ ಭಿನ್ನವಾಗಿರುವುದರಿಂದ ಸತ್ತವರನ್ನು ಸಂಸ್ಕರಿಸುವುದನ್ನು ಪಾಲಿಸುತ್ತೇವೆ. ನಾವು "ಹೆಣ" ಎಂದು ಹೇಳುವುದಿಲ್ಲ, "ಪಾರ್ಥಿವ ಶರೀರ" ಎಂದು ಗೌರವಿಸುತ್ತೇವೆ. ಪ್ರಾಣಿಗಳದಾದರೆ "ಹೆಣ" ಎನ್ನುತ್ತೇವೆ. ಸತ್ತವರ ಮನೆಗೆ ಹೋದರೆ "ಎಲ್ಲಿ ಮಲಗಿಸಿದ್ದೀರ?" ಎಂದು ಶವಕ್ಕೆ ಗೌರವ ಕೊಟ್ಟು ಕೇಳುತ್ತೇವೆ. ಯಾರೂ ಏನು ಮಲಗಿಸ ಬೇಕಾಗಿಲ್ಲ ನಿರ್ಜೀವ ದೇಹವನ್ನು! ಜೀವ ಹೋದ ಮೇಲೆ, ನಾವೆಲ್ಲರೂ ಕೊಳೆತು ಹೋಗಬಲ್ಲ (bio-degradable), ನಾಶಹೊಂದಲ್ಪಡುವ(disposable), ಸಾವಯವ(organic) ವಸ್ತುಗಳಷ್ಟೆ. ಆದರೂ ನಮ್ಮ ಸಂಸ್ಕೃತಿಯು "ಎಲ್ಲಿ ಮಲಗಿಸಿದ್ದೀರ?" ಎಂದೇ ಕೇಳಿಸುತ್ತೆ!

ಪ್ರಾಚೀನ ಈಜಿಪ್ತರು ಗುವಾಯಕಾಲ್ ಎಂಬ ದ್ರವವನ್ನು ಬಳಸಿ ಶವಗಳನ್ನು ಮಮ್ಮಿಗಳಲ್ಲಿ ಸಹಸ್ರಾರು ವರ್ಷಗಳ ಕಾಲ ಕಾಪಾಡಿದ್ದರು. ಅನೇಕ ಹಳೆಯ ಇಸ್ಲಾಮ್ ಅರಸರುಗಳು ಹೆಣಗಳನ್ನು ಊರಿಂದ ಊರಿಗೆ ಸಾಗಿಸುವಾಗ ಜೇನುತುಪ್ಪವನ್ನೂ ಬಳಸುತ್ತಿದ್ದರಂತೆ.

ಇರಲಿ.

"ಮಲಗಿಸಿದ್ದ" ಹೆಣವನ್ನು - ಕೆಲವರು ಕೂರಿಸುವುದೂ ಉಂಟು (ನನಗೆ ತಿಳಿದ ಮಟ್ಟಿಗೆ ಯಾವ ಮತದವರೂ ಹೆಣವನ್ನು ನಿಲ್ಲಿಸುವುದಿಲ್ಲ ಅನ್ನಿಸುತ್ತೆ) - ಸಂಸ್ಕಾರಕ್ಕೆ ತೆಗೆದುಕೊಂಡು ಹೋಗುವುದು ಮುಂದಿನ ಕೆಲಸ.

ನಾನು ಹುಟ್ಟಿ ಬೆಳೆದು ಬಂದ ಮನೆಯ "ಜಾತಿ"ಯವರ ಜನಗಳಲ್ಲಿ ಶವಸಂಸ್ಕಾರ, ನಂತರದ ಕರ್ಮಗಳು ಅನೇಕವಿದೆ. ಹೆಣವನ್ನು ಸುಡುತ್ತಾರೆಂಬ ಒಂದು ಅಂಶವನ್ನು ಇಲ್ಲಿ ತೆಗೆದುಕೊಂಡು ಸದ್ಯಕ್ಕೆ ಮಿಕ್ಕ ಆಚರಣೆಗಳನ್ನೆಲ್ಲಾ ಬದಿಗಿಡೋಣ. ಅವರವರ ನಂಬಿಕೆಯದು. ಅದನ್ನು ಆಚರಿಸಲೀ ಬಿಡಲಿ ಏನೂ ನಷ್ಟವಿಲ್ಲ. ಹೆಣವನ್ನು ಸೌದೆಯ ಮೇಲಿಟ್ಟು, ಬೆರಣಿ ಜೋಡಿಸಿ, ದಿನವೆಲ್ಲಾ ಅದರ ಮುಂದೆ ನಿಂತು, ತಲೆ ಬುರುಡೆಯು "ಫಟ್" ಎನ್ನುವವರೆಗೂ ನೋಡುತ್ತಾ ಸುಡುವುದು ಒಂದು ಬಗೆಯ ಸಂಸ್ಕಾರವಾದರೆ ನಗರವಾಸಿಗಳಿಗೆ ಅಷ್ಟೊಂದು ಸಮಯವಿಲ್ಲದೆ ವಿದ್ಯುತ್ ಸ್ಪರ್ಶದಿಂದ ನಿಮಿಷಮಾತ್ರದಲ್ಲೇ ಹೆಣವನ್ನು ಬೂದಿಗೈದು ತಲೆತೊಳೆದುಕೊಂಡುಬಿಡುತ್ತಾರೆ. ಏನೇ ಆಗಲಿ, ನಾವು ಹೋದಮೇಲೆ ಅಗ್ನಿಯ ಸಹಾಯದಿಂದ ನಮ್ಮನ್ನು ಬೂದಿಗೊಳಿಸುವುದು ಈ ಎರಡೂ ಸಂಸ್ಕಾರದ ಕೆಲಸ.ಕೆಲವು ಜನರು ಶವದ ಪೆಟ್ಟಿಗೆಯಲ್ಲಿ ಹಾಕಿ ಹೂಳುತ್ತಾರೆ, ಇನ್ನು ಕೆಲವರು ಬಟ್ಟೆಯಲ್ಲಿ ಸುತ್ತಿ ಹೂಳುತ್ತಾರೆ, ಮತ್ತೆ ಕೆಲವರು ಬೆತ್ತಲೆ ಹೆಣವನ್ನು ಹಾಗೇ ಹೂಳುತ್ತಾರೆ - ಸಾರಾಂಶವಿಷ್ಟೆ - ಶವವನ್ನು ಮಣ್ಣಿನ ವಶ ಮಾಡುತ್ತಾರೆ. ಮೇಲೆ ಗೋರಿ ಕಲ್ಲು ಕಟ್ಟುವುದು ಒಂದು ಆಚರಣೆ, ಗಿಡ ನೆಡುವುದು ಇನ್ನೊಂದು! ಶವವನ್ನು ಹೂತು ಗಿಡ ನೆಡುವ ಆಚರಣೆ ಬಹಳ ಸಾತ್ವಿಕವೆಂದು ನನ್ನ ಅನಿಸಿಕೆ. ದೇಹದಲ್ಲಿರುವ ಸತ್ತ್ವವು ಅದರಲ್ಲೂ ರಂಜಕ (Phosphorus) ಮತ್ತು ಸಾರಜನಕ (Nitrogen) ಎರಡೂ ಗಿಡಗಳಿಗೆ ಬಹಳ ಮುಖ್ಯ. ನಾವು ಅಳಿದ ಮೇಲೆ ಗಿಡವೊಂದಕ್ಕೆ ಗೊಬ್ಬರವಾಗುವುದಕ್ಕಿಂತ ಭಾಗ್ಯ ಬೇರೇನಿದೆ!?! ಆದರೆ ಈ ಪದ್ಧತಿಯ ಸಮಸ್ಯೆಯೆಂದರೆ ಜಾಗದ ಕೊರತೆ. ಎಲ್ಲರನ್ನೂ (ಸತ್ತ ಮೇಲೆ) ಹೂಳಲು ಜಾಗವೆಲ್ಲಿದೆ? ಜೊತೆಗೆ ಹೂತ ನಂತರ ಗಿಡವನ್ನು ನೆಟ್ಟರೆ ಆ ಶವವು ಸಂಪೂರ್ಣವಾಗಿ decompose ಆಗುವವರೆಗೂ ಆ ಜಾಗದಲ್ಲಿ ಸುರಕ್ಷಿತವೇನಲ್ಲ.ಕೆಲವು ಜನಾಂಗದವರು ಶವಗಳನ್ನು ಪುಣ್ಯನದಿಗಳಲ್ಲಿ ತೇಲಿಬಿಡುತ್ತಿದ್ದರು. ನದಿಯೆಂದರೆ ಸಾಕು, "ಪುಣ್ಯ" ನದಿಯೆನ್ನುವ ಅವಶ್ಯವಿಲ್ಲ. ಆದರೆ, ಈ ಆಚರಣೆ ಮಾಡುತ್ತಿದ್ದವರು ಕೆಲವು ನದಿಗಳನ್ನು ಮಾತ್ರವೇ ಆಯ್ಕೆ ಮಾಡಿಕೊಂಡಿದ್ದರು. ನಮ್ಮ ದೇಶದಲ್ಲಿ ಬಹುಮುಖ್ಯವಾಗಿ ಗಂಗೆ. ನದಿಯಲ್ಲಿ ಬೂದಿ ಕದಡುವಂತೆ (ಅಸ್ಥಿ ಸಂಚಯನ) ಶವವನ್ನೇ ತೇಲಿಬಿಡುವ ಆಚರಣೆಯನ್ನು ಸರ್ಕಾರವು ಪರಿಸರವಾದಿಗಳ ಅನೇಕ ವರ್ಷಗಳ ಹೋರಾಟದ ನಂತರ ನಿಷೇಧಿಸಿತು. ಗಂಗೆಯ ಮೊಸಲೆಗಳು ಹೆಣಗಳನ್ನು ತಿಂದು ನರಭಕ್ಷಕಗಳಾಗಿದ್ದುದೂ ಅಲ್ಲದೆ ವಿಪರೀತ aggressive ಆಗಿದ್ದವು. ಅಲ್ಲದೆ ಕುಡಿಯಲು ಬಳಸುವ ಗಂಗೆಯ ನೀರನ್ನು ಅತಿ ಸುಲಭವಾಗಿ ಮನುಷ್ಯಶವವು ಕೆಡಿಸಿಬಿಡುತ್ತಿತ್ತು. (ಈಗೇನೂ ಶುಚಿಯಾಗಿಲ್ಲ ಗಂಗಾನದಿಯ ನೀರು. ಆದರೆ something is better than nothing).

"ಝೋರೋಸ್ಟ್ರಿಯಾನರು" ಎಂಬ ಧರ್ಮದವರ (religion) ಶವಸಂಸ್ಕಾರದ ಆಚರಣೆ ಬಹಳ interesting ಆಗಿದೆ.ನೆನ್ನೆ ಶ್ರೀಕಾಂತ್ ಜೊತೆ ಮಾತನಾಡುತ್ತಿದ್ದಾಗ ಉತ್ತರಾಂಚಲದ ಒಂದು ಅನುಭವವನ್ನು ಹೇಳಿದೆ. ಅಲ್ಲಿ ಒಂದು ಘಟ್ಟ ಪ್ರದೇಶದಲ್ಲಿ ನಾವು ಟ್ಯಾಕ್ಸಿಯಲ್ಲಿ ಹೋಗುತ್ತಿದ್ದಾಗ ಬಸ್ಸೊಂದು ಪ್ರಪಾತಕ್ಕೆ ಉರುಳಿ ಬಿದ್ದುದನ್ನು ನೋಡಿದೆವು. ಟ್ಯಾಕ್ಸಿಯಿಂದ ಇಳಿದು ಎಂಟು ಸಾವಿರ ಅಡಿ ಕೆಳಗೆ ಬೆಂಕಿ ಪೊಟ್ಟಣದಂತೆ ಕಾಣುತ್ತಿದ್ದ ಬಸ್ಸನ್ನು ನೋಡುತ್ತಾ "ಅಯ್ಯೋ, ಛೆ!" ಎಂದುಕೊಳ್ಳುತ್ತಿದ್ದ ನಮ್ಮನ್ನು ಕರೆದ ನಮ್ಮ ಡ್ರೈವರು "ಚಲೋ ಸಾಬ್, ಆಜ್ ಏ, ಔರ್ ಕಲ್ ಹಮ್.." ಎಂದು ಸಲೀಸಾಗಿ ಹೇಳಿಬಿಟ್ಟ. ಶ್ರೀಕಾಂತ "ಇಲ್ಲಿ ಉರುಳಿ ಬೀಳುವ ಗಾಡಿಗಳು, ಹೆಣಗಳನ್ನು ಎಷ್ಟೋ ಸಲ ತೆಗೆಯುವುದೂ ಇಲ್ಲ, ಅನಾಥ ಹೆಣಗಳಾಗುತ್ತವೆ, ಅಲ್ಲವೇ?" ಎಂದು ಕೇಳಿದ. ನನಗೆ ಆ ಕ್ಷಣ ಹೌದೆನಿಸಿದರೂ ಈ ಝೋರೋಸ್ಟ್ರಿಯಾನರ ಬಗ್ಗೆ ನೆನಪಾಗದೇ ಇರಲಿಲ್ಲ. ಈ ಧರ್ಮದವರು ಹೆಣಗಳನ್ನು ಸುಡುವುದಾಗಲೀ, ಹೂಳುವುದಾಗಲೀ ಮಾಡುವುದಿಲ್ಲ. ಅವರ ನಂಬಿಕೆಯೆಂದರೆ ಸಾವು ಎಂಬುದು "ದೆವ್ವಗಳ ಆಟ". ಹಾಗಾಗಿ ಹೆಣವನ್ನು ದೂರದ ಬರಡು ಭೂಮಿಗೆ ತೆಗೆದುಕೊಂಡು ಹೋಗಿ, ಯಾರೂ ಅದರ ಹತ್ತಿರ ಸುಳಿಯದಂತಿರುವ ನಿರ್ಜನ ಜಾಗದಲ್ಲಿ ಬಿಸಾಡಿಬಿಡುತ್ತಾರೆ! ಹೆಣವು ಹದ್ದು ಗಿಡುಗಗಳಿಗೋ ನಾಯಿ ನರಿಗಳಿಗೋ ಆಹಾರವಾಗುತ್ತೆ!! ಒಂದು ಥರಾ ವಿಭಿನ್ನವಾದ ಆಚರಣೆ!!! ವಿಭಿನ್ನವಾದ "ಸಂಸ್ಕಾರ"!!!!ಹೇಗೋ ಒಂದು, ಒಟ್ಟಿನಲ್ಲಿ ಶವಕ್ಕೊಂದು ಸಂಸ್ಕಾರ ಬೇಕು. ಬದುಕಿರುವವರ ಒಳಿತಿಗಾಗಿ, ಆರೋಗ್ಯಕ್ಕಾಗಿ!

ಆರೋಗ್ಯವೇ ಭಾಗ್ಯ.

-ಅ
26.11.2008
9PM

Friday, November 21, 2008

ಗೂಬೆಗೊಂದು ಹಬ್ಬಬಡಪಾಯಿ ಗೂಬೆಯು ನಮ್ಮ ದೇಶದಲ್ಲಿ ಬಹಳ ಕೆಟ್ಟ ಹೆಸರನ್ನು ಸಂಪಾದಿಸಿಬಿಟ್ಟಿದೆ. ಸುತ್ತಲೂ ಕತ್ತನ್ನು ತಿರುಗಿಸಬಲ್ಲ, ಸ್ಮಶಾನಗಳಲ್ಲೇ ವಾಸಿಸುವ, ಭಯಂಕರ ರೂಪವುಳ್ಳ, ಗೂ ಗೂ ಎಂದು ಹೆದರಿಕೆಯಾಗುವಂತೆ ಮಂದ್ರಸ್ವರದಲ್ಲಿ ಕೂಗಬಲ್ಲ, ಕಣ್ಣುಗಳನ್ನು ಮಿಟುಕಿಸದೇ ದಿಟ್ಟಿಸಿ ಒಂದೇ ಕಡೆ ನೋಡಬಲ್ಲ, "ಗೂಬೆಯಂತೆ" ಕುಳಿತಲ್ಲೇ ಗಂಟೆಗಟ್ಟಲೆ ಕುಳಿತುಕೊಳ್ಳಬಲ್ಲ ಈ ಗೂಬೆಯು ಇಲಿಗಳನ್ನೂ, ಅಳಿಲುಗಳನ್ನೂ, ಹಾವುಗಳನ್ನೂ, ಹಾಗೂ ಮನುಷ್ಯರನ್ನೂ ಹೆದರಿಸುವ ಸಾಮರ್ಥ್ಯ ಉಳ್ಳದ್ದು. ಈ ಪಕ್ಷಿಯೇನಾದರೂ ಮನೆಯ ಮೇಲೆ ಬಂದು ಕುಳಿತುಬಿಟ್ಟರೆಂದರೆ ಮುಗಿಯಿತು - ಪೂಜೆಯೋ ಪೂಜೆ, ಹೋಮವೋ ಹೋಮ. ಮನೆಗೆ ಲತ್ತೆ ಹೊಡೆಯುವುದಂತೂ ಖಚಿತ!! ಆ ಮನೆಯಲ್ಲಿ ಸಾವು ಸಂಭವಿಸಿಬಿಡುತ್ತೆ ಶೀಘ್ರದಲ್ಲೇ.. ಗೂಬೆಯು ಯಮರಾಜನ ಅವತಾರವೇ ಸರಿ!

ಗೂಬೆಯ ಬಗ್ಗೆ ನನಗೆ ವಿಶೇಷವಾದ ಒಲವಿದೆ. ನಾನು ಆಚಾರ್ಯ ಪಾಠಶಾಲೆಯಲ್ಲಿದ್ದಾಗ ಶಾಲೆಯ ಆವರಣದೊಳಗೊಮ್ಮೆ ಬಂದು ಮೂರು ದಿನ ಝಾಂಡಾ ಹೂಡಿತ್ತು. ಆ ಮೂರೂ ದಿನವೂ ನನ್ನ ಪಕ್ಷಿವೀಕ್ಷಣಾ ಕಾರ್ಯವು ಗೂಬೆಗೆ ಸೀಮಿತವಾಗಿತ್ತು. ಒಂದೇ ಕಡೆ ನೋಡುತ್ತಾ ತಾನು ಈ ಪ್ರಪಂಚಕ್ಕೆ ಸಂಬಂಧ ಪಟ್ಟವನಲ್ಲನೆಂಬಂತೆ ಕುಳಿತಿದ್ದ ಗೂಬೆಯೊಡನೆ ಮಾತನಾಡಲು ಆರಂಭಿಸಿಬಿಟ್ಟಿದ್ದೆ! ನನ್ನ ಗೆಳೆಯನಾಗಿಬಿಟ್ಟಿದ್ದ. ಅದು ಶಾಲೆಯನ್ನು ಬಿಟ್ಟು ಹೊರಟಾಗ ವಿಪರೀತ ಸಂಕಟವೂ ಆಗಿತ್ತು.

ಇತ್ತೀಚೆಗೆ ಸತ್ಯಪ್ರಕಾಶರ ಮನೆಗೆ ಅತಿಥಿಯಾಗಿ ಬಂದ ಗೂಬೆಯನ್ನು ನೋಡಲು ನನಗೆ ಸಾಧ್ಯವಾಗಲಿಲ್ಲವೆಂಬ ಅಳಲು ಸಹ ನನ್ನಲ್ಲಿದೆ. ಅದು ಎರಡು ದಿನ ಅವರ ಮನೆಯಲ್ಲೇ ಕ್ಯಾಂಪ್ ಮಾಡಿತ್ತು. (ಚಿತ್ರಚಾಪದಲ್ಲಿ ಇದರ ಬಗ್ಗೆ ಬರೆದಿದ್ದೇನೆ.)

ನಮ್ಮ ಕೆಲವು (ಹಲವು) ಮೂಢ ಜನಗಳ ಮನಸ್ಸಿನಲ್ಲಿ ಎಲ್ಲಾ ಪಕ್ಷಿಗಳದೊಂದು ಗುಂಪಾದರೆ ಈ ಕಾಗೆ ಗೂಬೆಗಳದು ಬೇರಯದೇ ಗುಂಪು. ಇವು ಅಪಶಕುನದ ಪಕ್ಷಿಗಳೆಂದು. ಆದರೆ ಹೊಲದಲ್ಲಿ ಇಲಿಗಳ ಬೇಟೆ ಹಾವುಗಳಿಗಿಂತ ಚೆನ್ನಾಗಿ ಗೂಬೆಗಳು ಆಡುವುದು ಎಂಬ ಸತ್ಯವನ್ನು ಹೇಗೆ ಮರೆಯುವರೋ ಗೊತ್ತಿಲ್ಲ.ಹೊರದೇಶಗಳಲ್ಲಿ ಗೂಬೆಗಳ ಬಗ್ಗೆ ನಮ್ಮಲ್ಲಿರುವ ನಂಬಿಕೆಗಳಂತಿಲ್ಲ. (ಅವರುಗಳಲ್ಲೂ ಮೂಢನಂಬಿಕೆಗಳಿವೆ, ಅನೇಕ ಸಲ ನಮಗಿಂತ ಹೆಚ್ಚು). ವಿಶ್ವ ಗೂಬೆಯುತ್ಸವವನ್ನು ಪ್ರತಿ ವರ್ಷ ಫೆಬ್ರುವರಿ - ಮಾರ್ಚಿನಲ್ಲಿ ಆಚರಿಸುತ್ತಾರೆ.

http://www.festivalofowls.com/

ನಮ್ಮ ದೇಶದವರೂ ಇದರಲ್ಲಿ ಪಾಲ್ಗೊಳ್ಳುವಂತಾಗಲಿ ಎಂಬುದು ನನ್ನ ಹಾರೈಕೆ. ಕಾಲ್ಪನಿಕ ಗರುಡಕ್ಕೆ ಸಲ್ಲುವ ಪೂಜೆಯು ಉಪಕಾರಿ ಗೂಬೆಗೆ ಗೌರವ ರೂಪದಲ್ಲಿ ಸಂದರೆ ನಾಶವಾಗುತ್ತಿರುವ ಗೂಬೆಯ ಸಂತತಿಯನ್ನು ಉಳಿಸಬಹುದು. ಅನೇಕ ಗೂಬೆ ಸಂಕುಲಗಳು ಇಂದು endangered ಆಗಿವೆ. ಇವನ್ನು ರಕ್ಷಿಸುವ ಹೊಣೆ ನಮ್ಮದು. ಅದಕ್ಕೋಸ್ಕರವಾಗಿಯೇ ಗೂಬೆಯ ಅಭಿಮಾನಿ ಸಂಘವು ಗ್ಲೋಬಲ್ ಔಲ್ ಪ್ರಾಜೆಕ್ಟ್ ಅನ್ನೂ ಹಮ್ಮಿಕೊಂಡಿದೆ. ಡಿ.ಎನ್.ಎ. ವಿಶ್ಲೇಷಣೆಯಿಂದ ಗೂಬೆಗಳ ರಕ್ಷಣೆಗೆ ಸಹಾಯವಾಗುವಂತಹ ಈ ಕಾರ್ಯಕ್ರಮವು ಯಶಸ್ವಿಯಾಗಲೆಂದು ಬಯಸುತ್ತೇನೆ.

http://www.globalowlproject.com/

-ಅ
21.11.2008
11.45AM

Monday, November 17, 2008

ಗಿಡವೋ, ಪ್ರಾಣಿಯೋ?ಏಕಕೋಶ ಜೀವಿಗಳಲ್ಲಿ ಅತಿ ಮುಖ್ಯ ಸ್ಥಾನವನ್ನು ಗಿಟ್ಟಿಸಿಕೊಂಡಿರುವ ಇದು, ಗಿಡವೋ ಪ್ರಾಣಿಯೋ ಎಂದು ಖಚಿತವಾಗಿ ಹೇಳಲಾಗುವುದೇ ಇಲ್ಲ. ಯಾಕೆಂದರೆ, ಹರಿತ್ತಿನ (chlorophyll) ಅಂಶವನ್ನು ಹೊಂದಿರುವ ಇದು ಹಗಲಲ್ಲಿ ಗಿಡದಂತೆ ದ್ಯುತಿಸಂಶ್ಲೇಷಣ ಕ್ರಿಯೆಯೂ (photosynthesis) ನಡೆಸುತ್ತೆ ಮತ್ತು ಇರುಳಲ್ಲಿ ತನಗಿಂತ ಚಿಕ್ಕದಾದ ಅಮೀಬಾ ಪ್ಯಾರಾಮೀಷಿಯಮ್‍ನಂಥಹ ಜೀವಿಗಳನ್ನು ಪ್ರಾಣಿಗಳಂತೆ ತಿನ್ನುವುದೂ ಉಂಟು! ಈ ವಿಶೇಷ ಜೀವಿಯ ಹೆಸರು ಯೂಗ್ಲೀನಾ - Euglena ಎಂದು.

ಇದರ ಇನ್ನೊಂದು ವಿಶೇಷತೆಯೆಂದರೆ ಬೆಳಕನ್ನು ಗುರುತಿಸಲು ಒಂದು ಕೆಂಪನೆಯ ಚುಕ್ಕಿಯ ಸೂಕ್ಷ್ಮಾಂಗವನ್ನೂ ಹೊಂದಿರುತ್ತೆ!

ಸಿಹಿನೀರು, ಉಪ್ಪುನೀರು ಎರಡರಲ್ಲೂ ವಾಸ ಮಾಡಬಲ್ಲ ಶಕ್ತಿಯುಳ್ಳ ಯೂಗ್ಲೀನಾ ಮೀಸೆಯಂತಿರುವ ಅಂಗವನ್ನು ಬಳಸಿ ಚಲಿಸಬಲ್ಲುದು. ಈ ಮೀಸೆಗೆ ಫ್ಲಾಜೆಲ್ಲಮ್ (flagellum) ಎನ್ನುತ್ತಾರೆ. ಇದನ್ನು ಚಾವಟಿಯಂತೆ ಬಡಿಯುತ್ತಾ ಚಲಿಸುತ್ತೆ.ಗಿಡದಿಂದ ಪ್ರಾಣಿ ಹೇಗೆ ವಿಕಾಸವಾಯಿತೆಂಬ ಸಂಗತಿ ಮತ್ತು ಅದರ ಕೊಂಡಿ ಎಲ್ಲಿದೆ ಎಂದು ಬಹುಕಾಲ ಜನಕ್ಕೆ ಗೊತ್ತಿರಲಿಲ್ಲ. ಪ್ರಾಣಿಗಳಿಂದ ಮನುಷ್ಯ ಹೇಗೆ ಬಂದನೆಂಬುದು ನಮಗೆಲ್ಲಾ ತಿಳಿದೇ ಇದೆ! ಹೆಚ್ಚಿನ ವಿವರಕ್ಕೆ ಡಾರ್ವಿನ್ ವಿರಚಿತ ಆರಿಜಿನ್ ಆಫ್ ಸ್ಪೀಷೀಸ್ ಓದಬಹುದು. ತೇಜಸ್ವಿಯವರ ಮಿಸ್ಸಿಂಗ್ ಲಿಂಕ್ ಅಂತೂ ಅತಿಸುಲಭವಾಗಿ ಸುಲಲಿತವಾಗಿ ತಿಳಿಸಿಕೊಟ್ಟಿದೆ. ಅಂತೂ ನಿರಂತರ ವಿಕಾಸದಲ್ಲಿ ಜೀವ - ಜಗತ್ತು ಸಾಗುತ್ತಿದೆ.

-ಅ
17.11.2008
11.30PM

Monday, November 10, 2008

ಸರ್ವರೋಗ ನಿವಾರಿಣೀ

ತುಳಸಿ - Ocimum sanctum ಗಿಡವನ್ನು ಆಯುರ್ವೇದದಲ್ಲಿ ಸರ್ವರೋಗ ನಿವಾರಿಣೀ ಎಂದು ಕೊಂಡಾಡಿದ್ದಾರೆ. ಅದರಲ್ಲಿರುವ ಔಷಧೀಯ ಗುಣಗಳಿಗೆ ಬೇವು, ನಿಂಬೆ, ಹೆರಳೆ - ಇಂಥಾ ಘಟಾನುಘಟಿ ಗಿಡಗಳೇ ನಾಚುತ್ತವೆ. ಅಲ್ಲದೆ ದೇಹವನ್ನು ಸುತ್ತಮುತ್ತಲಿನ ಪರಿಸರದೊಂದಿಗೆ ಸಾತ್ವಿಕವಾಗಿ ಸ್ಪಂದಿಸುವಂತೆ ಮಾಡಲು ತುಳಸಿಯು ಬಹಳ ಉಪಯುಕ್ತವಾಗಿರುತ್ತೆಂದು ಸಂಶೋಧನೆಗಳು ತಿಳಿಸಿವೆ.

ನಮ್ಮಲ್ಲಿ ಎಲ್ಲ ಗಿಡ ಮರ ಪಶು ಪಕ್ಷಿ ಮೃಗಗಳಿಗೆ ದಿವ್ಯ ಸ್ಥಾನ ಕೊಟ್ಟಿರುವುದು ಎಂಥಾ ಅದ್ಭುತ ಚಿಂತನೆ. ಗರುಡ ಪಕ್ಷಿಯು ವಿಷ್ಣುವಿನ ವಾಹನವಾದರೆ, ಸರ್ಪವು ಹಾಸಿಗೆ. ತುಳಸಿಯು ವಿಷ್ಣುವಿನ ಹೆಂಡತಿ! ಆ ಕಥೆ ಬದಿಗಿರಲಿ. ಒಟ್ಟಿನಲ್ಲಿ ನಮ್ಮಲ್ಲಿ ತುಳಸಿಯು ಯಾವ ಮಟ್ಟದಲ್ಲಿ ಗೌರವಿಸಲ್ಪಡುತ್ತದೆಂಬುದಕ್ಕೆ ನಮ್ಮ ಪುರಾಣ ಕಥೆಗಳೇ ಸಾಕ್ಷಿ.ಹೀಗೆ ಸುಮ್ಮಸುಮ್ಮನೆ ಉನ್ನತಮಟ್ಟದಲ್ಲಿ ಯಾವುದೇ ಗಿಡವನ್ನು ಕೂರಿಸಿಲ್ಲ. ತುಳಸಿಗೆ ಆ ಮಟ್ಟದ ಗೌರವಕ್ಕೆ ಎಲ್ಲಾ ಅರ್ಹತೆ ಅಧಿಕಾರವೂ ಇದೆ. ಮೂರು ಬಗೆಯ ತುಳಸಿ ಗಿಡಗಳಿವೆ. ಮೂರೂ ಸಹ ಔಷಧೀಯ ಗುಣಗಳುಳ್ಳದ್ದೇ!

--> ಕೃಷ್ಣ ತುಳಸಿ ಅಥವಾ ಕಪ್ಪು ತುಳಸಿ
--> ರಾಮ ತುಳಸಿ ಅಥವಾ ಶ್ರೀ ತುಳಸಿ
--> ವನ ತುಳಸಿ ಅಥವಾ ಕಾಡು ತುಳಸಿ
೧. ಹಸಿವು - ನಿದ್ದೆ ಹೆಚ್ಚಾಗಲೀ ಕಡಿಮೆಯಾಗಲೀ ಆದರೆ ತುಳಸಿಯ ಕಷಾಯವನ್ನು ಸೇವಿಸಿದರೆ ಸಾಕು - ಸಮವಾಗುತ್ತೆ.

೨. ಹೊಟ್ಟೆ ತೊಳೆಸು, ವಾಂತಿ, ಬೇಧಿ, ಕ್ಷಯ - ಇವುಗಳನ್ನು ಗುಣಪಡಿಸುವ ಸಾಮರ್ಥ್ಯವುಳ್ಳದ್ದು ತುಳಸಿ. ಬ್ಯಾಕ್ಟೀರಿಯಾ, ಫಂಗಸ್, ಮತ್ತು ವೈರಸ್ - ಮೂರನ್ನೂ ಸರ್ವನಾಶಮಾಡಬಲ್ಲುದು!

೩. ಮನೆಯಲ್ಲಿ ಸೊಳ್ಳೆ ಹೆಚ್ಚಾಗಿದ್ದರೆ, ನೀರಿನಲ್ಲಿ ತುಳಸಿ ಎಲೆಗಳನ್ನು ಕುದಿಸಿ ಸಿಂಪಡಿಸಬೇಕು. ಡಿ.ಡಿ.ಟಿ. ಸಿಂಪಡಿಸಿ ಬಯೋ-ಮ್ಯಾಗ್ನಿಫಿಕೇಷನ್‍ಗೆ ಗುರಿಯಾಗುವುದು ಅನುಚಿತ.

೪. ಚರ್ಮರೋಗಗಳಿಗೆ, ಅದರಲ್ಲೂ ಅಲರ್ಜಿಗಳ ವಿರುದ್ಧ ಹೋರಾಡಬೇಕೆಂದರೆ ತುಳಸಿಗಿಂತ ಒಳ್ಳೆಯ ಔಷಧ ಸಿಗದು.

೫. ತುಳಸಿ ಕಷಾಯವನ್ನು ನಿತ್ಯವೂ ಕುಡಿಯುವುದರಿಂದ ಮಾನಸಿಕ ಒತ್ತಡಗಳನ್ನು ತಡೆಗಟ್ಟಬಹುದು.

೬. ಸಕ್ಕರೆ ಕಾಯಿಲೆಯನ್ನು ಗುಣ ಪಡಿಸಲು ತುಳಸಿಯನ್ನು ಬಳಸುತ್ತಾರೆ. ರಕ್ತ - ಸಕ್ಕರೆ ಪ್ರಮಾಣವು ಹತೋಟೆಗೆ ಬರಲು ತುಳಸಿಯು ಬಹಳ ಉಪಯುಕ್ತ.೭. ರಕ್ತದೊತ್ತಡವನ್ನು (BP) ಸಮವಾಗಿಸಲೂ ಹೃದ್ರೋಗಗಳನ್ನು ತಡೆಗಟ್ಟಲೂ ಸಹ ತುಳಸಿಯನ್ನು ಬಳಸಬಹುದು.

೮. ಕೆಮ್ಮು ನೆಗಡಿ ಮುಂತಾದ ಶೀತಪ್ರವೃತ್ತ ಕಾಯಿಲೆಗಳಿಗೆ ತುಳಸಿಯೇ ಮೊದಲ ಮದ್ದು.

೯. ತುಳಸಿ ಕಷಾಯವು ಉತ್ತೇಜಕಕಾರಿ ಪೇಯ ಕೂಡ!

೧೦. ಹಲ್ಲು ನೋವಿದ್ದು, ಹಲ್ಲು ಹುಳುಕಿದ್ದಾಗ ತುಳಸಿ ನೀರಿನಲ್ಲಿ ಬಾಯಿ ಮುಕ್ಕಳಿಸುವುದನ್ನು ವೈದ್ಯರು ಸೂಚಿಸುತ್ತಾರೆ.ಇಷ್ಟೆಲ್ಲಾ ಪ್ರಯೋಜನಕಾರಿಯಾಗರುವ ತುಳಸಿಯು ದೇವರಲ್ಲದೆ ಇನ್ನೇನು! ಅದನ್ನು ಪೂಜಿಸುವುದು, ಗೌರವಿಸುವುದು, ವರ್ಷದಲೊಮ್ಮೆಯಾದರೂ ಅದನ್ನು ನೆನೆಸಿಕೊಂಡು ಥ್ಯಾಂಕ್ಸ್ ಹೇಳುವುದು ನಮ್ಮೆಲ್ಲರ ಕರ್ತವ್ಯವೇ ಸರಿ.

ಉತ್ಥಾನದ ದ್ವಾದಶಿಯ (ತುಳಸಿ ಹಬ್ಬದ) ಶುಭಾಶಯಗಳು.

-ಅ
10.11.2008
2.20PM

Tuesday, November 04, 2008

ಕೆರೆ

ಬೆಂಗಳೂರಿನ ಕೆರೆಗಳನ್ನು ಖಾಸಗೀಕರಿಸಬೇಕೆಂಬ ಕೆಲಸಕ್ಕೆ ಸರ್ಕಾರ ಕೆಲವು ತಿಂಗಳುಗಳ ಮುಂಚೆ ಕೈ ಹಾಕಿತ್ತು. ಸರ್ಕಾರವು ಹೀಗೆ ಪೆದ್ದು ಪೆದ್ದಾಗಿ ನಡೆದುಕೊಳ್ಳುವುದು ಹೊಸತಲ್ಲವಾದರೂ ಅದನ್ನೆಲ್ಲಾ ಅಲಕ್ಷ್ಯ ಮಾಡುವಂತಿಲ್ಲ. ಖಾಸಗೀಕರಣದಿಂದ ಆಗಬಹುದಾದ ಅನಾಹುತಗಳು - ಜನರಿಗೆ ಮಾತ್ರವಲ್ಲ, ಮೀನುಗಳಿಗೆ, ಪಕ್ಷಿಗಳಿಗೆ - ಇವು ಸರ್ಕಾರಕ್ಕಂತೂ ತಿಳಿಯದ ಸಂಗತಿಯೇ.

ಬರೀ ಸರ್ಕಾರವನ್ನೇ ದೂಷಿಸಲು ಹಲವಾರು ಪತ್ರಿಕೆಗಳಿವೆ, ನನಗೆ ಅದರ ಆಸಕ್ತಿಯೂ, ಪುರುಸೊತ್ತೂ ಹೆಚ್ಚಾಗಿ ಇಲ್ಲ. ಆದರೆ ಇಲ್ಲಿ ಹೈಕೋರ್ಟಿನ ತೀರ್ಪಿಗಾಗಿ ಕೆರೆಗಳು ಕಾಯುತ್ತಿವೆ. ನಾಳೆ ನಾಡಿದ್ದರಲ್ಲಿ ಹೊರ ಬರಲಿದೆ. ಪತ್ರಿಕೆಗಳಲ್ಲಿ ಭವಿಷ್ಯ ಓದಲು ಕೆರೆಗಳು, ಕೊಕ್ಕರೆಗಳು ಕಾಯುತ್ತಿವೆ. ಮೀನುಗಳು ಕೊಕ್ಕರೆಯ ಬಾಯಿಗೆ ಸಿಕ್ಕಿ ಸಾಯಲು ಬಯಸುತ್ತವೆಯೇ ಹೊರೆತು ಯಾವುದೋ ಖಾಸಗೀ ಕಂಪೆನಿಯ ರಾಸಾಯನಿಕ ದ್ರವವನ್ನು ಸೇವಿಸಿ ಅಲ್ಲ ಎಂಬುದು ಅರ್ಥಮಾಡಿಸಲು ಕಾಯುತ್ತಿವೆ.ಬೆಂಗಳೂರಿನ ಬೃಹತ್ ಕೆರೆಗಳನ್ನು ಈಗಾಗಲೇ ಬೇಜವಾಬ್ದಾರಿಯಿಂದ ನಾವು ಕಳೆದುಕೊಂಡಿದ್ದೇವೆ. ನಮ್ಮೂರು ಹವಾನಿಯಂತ್ರಣ ನಗರವೆಂದು ಹೆಸರುವಾಸಿಯಾಗಲು ಮೊದಲ ಕಾರಣವಿದ್ದಿದ್ದೇ ಕೆರೆಗಳದು.

ಬನಶಂಕರಿಯ ಮಾನೋಟೈಪಿನಿಂದ ಹಿಡಿದು ಇಂದಿನ ಕತ್ತರಿಗುಪ್ಪೆಯ ಫುಡ್ ವರ್ಲ್ಡ್ ವರೆಗೂ ರಾರಾಜಿಸುತ್ತಿದ್ದ ಚೆನ್ನಮ್ಮನಕೆರೆ ಈಗ "ಅಚ್ಚುಕಟ್ಟಾಗಿದೆ". ಧರ್ಮಾಂಬುಧಿ ಕೆರೆ ಮೆಜೆಸ್ಟಿಕ್ ಬಸ್‍ಸ್ಟಾಂಡ್ ಆಗಿದೆ. ಬೆಳ್ಳಂದೂರು ಕೆರೆ ಐಟಿ ಪಾರ್ಕಾಗಿದೆ. ಕೆಂಪಾಂಬುಧಿ ಕೆರೆ ಕುಲಗೆಟ್ಟ ಫ್ಯಾಂಟಸಿ ಪಾರ್ಕ್ ಆಗಿದೆ. ಹೊಸಕೋಟೆ ಕೆರೆ ಆರು ನೂರು ಎಕರೆ ಬಟ್ಟಾ ಬಯಲಾಗಿದೆ. ಹೆಬ್ಬಾಳದ ಕೆರೆ ಈಗಲೋ ಆಗಲೋ ಎಂದು ಉಸಿರಾಡುತ್ತಿದೆ. ಎಡಿಯೂರು ಕೆರೆಯಲ್ಲಿ ಅಪಾರ್ಟ್ಮೆಂಟುಗಳು ಹಡಗುಗಳಂತೆ ತೇಲಾಡುತ್ತಾ, ನೀರಿಗೆ ಕೇವಲ ಒಂದು ಬಾವಿಯಷ್ಟು ಜಾಗ ಉಳಿಸಿವೆ - ಆ ಜಾಗವೂ ಸಹ 'ಗಣೇಶ'ನೆಂಬುವನಿಂದ ಸರ್ವನಾಶವಾಗುತ್ತಿದೆ. ಸ್ಯಾಂಕಿ ಕೆರೆ ಮನೆ ಮೇಲಿನ ಸಿಂಟೆಕ್ಸ್ ಟ್ಯಾಂಕ್ ಎಂಬಂತೆ ಸ್ಯಾಂಕಿ ಟ್ಯಾಂಕ್ ಎಂದೇ ಹೆಸರು ಪಡೆದುಬಿಟ್ಟಿದೆ. ಬೆಂಗಳೂರು ಹವಾನಿಯಂತ್ರಣ ನಗರವೆಂಬ ಹೆಸರನ್ನು ಕಳೆದುಕೊಂಡು ಇನ್ನೂ ಹತ್ತುವರ್ಷವೂ ಆಗಿಲ್ಲ!

ಲಾಲ್‍ಬಾಗ್‍ - ಒಂದೇ ಅನ್ನಿಸುತ್ತೆ ಬೆಂಗಳೂರಿನ ಮರ್ಯಾದೆಯನ್ನು ಇಷ್ಟೋ ಅಷ್ಟೋ ಕಾಪಾಡುತ್ತಿರುವುದು. ಇದು ಖಾಸಗೀಕರಣದಿಂದಲ್ಲವೆಂಬುದು ಅರಿವಿದ್ದರೊಳಿತು.

LDA - Lake Department Authority of Bangalore - ಈ ಸಂಸ್ಥೆಯನ್ನೇ ಕೋರ್ಟು ನಿಷ್ಕ್ರಿಯಗೊಳಿಸುವ ಎಲ್ಲಾ ಸಾಧ್ಯತೆಗಳಿವೆ. ಕೆರೆಗಳು ಉಳಿವುದೇ? ಪಕ್ಷಿಗಳು ನಲಿವುದೇ? ನೋಡೋಣ!

-ಅ
04.11.2008
10PM

Thursday, October 30, 2008

ಬಣ್ಣ ಬದಲಿಸುವ..."ಗೋಸುಂಬೆಯಂತೆ ಹಿನ್ನೆಲೆಗೆ ತಕ್ಕಂತೆ ಬಣ್ಣ ಬದಲಿಸುವವನು" ಎಂದು ನಾವು ಹೇಳುತ್ತೇವಲ್ಲವೇ?

ಗೋಸುಂಬೆ ನಿಜವಾಗಲೂ ತನ್ನ ಹಿನ್ನೆಲೆಯ ಬಣ್ಣಕ್ಕೆ ತಕ್ಕ ಹಾಗೆ ಬಣ್ಣ ಬದಲಿಸುವ ಸಾಮರ್ಥ್ಯ ಉಳ್ಳದ್ದೇ? ಹೌದಾದರೆ, ಅದಕ್ಕೆ ಹೇಗೆ ಗೊತ್ತಾಗುತ್ತೆ ಯಾವ ಬಣ್ಣದ ಎಲೆಯ ಮೇಲೋ, ಹೂ ಮೇಲೋ, ಬಂಡೆಯ ಮೇಲೋ ತಾನು ಇರುವುದು? ಅದು ಹೇಗೋ ಗೊತ್ತಾದರೂ ಮೈ ಬಣ್ಣವನ್ನೇ ಬದಲಿಸುವುದಾದರೂ ಹೇಗೆ? ಮತ್ತು ಯಾಕೆ?ಎಷ್ಟೊಂದು ಪ್ರಶ್ನೆಗಳು ಕೇವಲ ಒಂದು ಸರಿಸೃಪ (reptile) ನಮ್ಮಲ್ಲಿ ಸೃಷ್ಟಿಸಿದೆ!ಉತ್ತರಗಳನ್ನು ಕಂಡುಕೊಳ್ಳೋಣ. Reverse orderನಲ್ಲಿ.

೧. ಗೋಸುಂಬೆಗಳು ಬಹಳ ನಿಧಾನವಾಗಿ ಚಲಿಸುವ ಸರೀಸೃಪಗಳು. ಬೇರೆ ಹಲ್ಲಿಯಂತೆ ವೇಗವಾಗಿ ಬಂಡೆಯೊಳಕ್ಕೆ ನುಸುಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾವುಗಳು, ಹದ್ದುಗಳು, ನವಿಲುಗಳು, ದೊಡ್ಡ ಬೆಕ್ಕುಗಳು, ಗೂಬೆಗಳು ಸದಾ ಹೊಂಚು ಹಾಕುತ್ತಲೇ ಇರುತ್ತವೆ. ಇವುಗಳ ಕೈಗೆ ಸಲೀಸಾಗಿ ಸಿಲುಕಿ ಆಹಾರವಾಗಬಲ್ಲುದು ಗೋಸುಂಬೆಗಳು - ಬಣ್ಣ ಬದಲಿಸದಿದ್ದರೆ! ಎಲೆಯ ಮರೆಯಲ್ಲಿ ಹಸಿರು ಬಣ್ಣ, ಒಣಗಿದ ಎಲೆಗಳ ನಡುವೆ ಕಂದು ಬಣ್ಣ, ಹೂಗಳ ಮಧ್ಯೆ ನೀಲಿ ಹೀಗೆ ವಿವಿಧ ವರ್ಣಗಳನ್ನು ಬಟ್ಟೆ ಧರಿಸಿದ ಹಾಗೆ ಧರಿಸುವುದರಿಂದ ಮರೆಮಾಚಬಹುದು. ಇದಕ್ಕೆ ಇಂಗ್ಲಿಷಿನಲ್ಲಿ camouflage ಎಂದು ಕರೆಯುತ್ತೇವೆ. ಗೋಸುಂಬೆಗಳು ಈ ಮರೆಮಾಚುವ ವಿದ್ಯಾಪಾರಂಗತವಾದರೂ ಇವುಗಳ ಸಂಖ್ಯೆ ತೀರ ಕಡಿಮೆಯಾಗುತ್ತಿದೆ.೨. ನಮಗೂ ಇರುವಂತೆ, ಚರ್ಮದ ಬಣ್ಣಕ್ಕೆ ಒಂದು ಪಿಗ್ಮೆಂಟು (ಕನ್ನಡದಲ್ಲಿ pigmentಗೆ ಏನೆನ್ನುತ್ತಾರೆಂದು ಗೊತ್ತಿಲ್ಲ), ಗೋಸುಂಬೆಗೂ ಇರುತ್ತೆ. ಕಪ್ಪು ಬಣ್ಣದ ಪಿಗ್ಮೆಂಟಿಗೆ ಮೆಲನಿನ್ ಎನ್ನುತ್ತೇವೆ. ನಮ್ಮಲ್ಲಿ ಈ ಮೆಲನಿನ್ ಪ್ರಮಾಣ ಕಡಿಮೆಯಾದಂತೆ ನಾವು "ಬೆಳ್ಳಗಾಗುತ್ತೇವೆ". ಆದರೆ ಗೋಸುಂಬೆಗಳಿಗೆ ಇನ್ನೊಂದು ಪಿಗ್ಮೆಂಟ್ ಇರುತ್ತೆ, ಬೇರೆ ಬಣ್ಣಗಳಿಗೋಸ್ಕರ. ಇದಕ್ಕೆ ಕ್ರೊಮ್ಯಾಟೋಫೋರ್ (chromatophores) ಎನ್ನುತ್ತೇವೆ. ಬಣ್ಣ ಬದಲಿಕೆಗೆ ಕಾರಣ ಈ ಕ್ರೊಮ್ಯಾಟೋಫೋರುಗಳೇ. ಅದು ಹೇಗೆ??
ಎಲ್ಲಾ ಪ್ರಾಣಿಗಳಂತೆ, ಚಲನವಲನಗಳ ಹಿಡಿತವಿರುವುದು ನರಗಳ ಕೈಯ್ಯಲ್ಲಿ. ಮತ್ತು ಮೂತ್ರಪಿಂಡದಲ್ಲಿ ಉತ್ಪತ್ತಿಯಾಗುವ ಅಡ್ರಿನಲಿನ್ ಎಂಬ ಹಾರ್ಮೋನುಗಳೂ ಸಹ ಚಲನೆಯನ್ನು ನಿಯಂತ್ರಿಸುತ್ತೆ. ಈ ಅಡ್ರಿನಲಿನ್ ಹಾರ್ಮೋನು ಹೊರಗಿನ ಜಗತ್ತಿನ ಕ್ರಿಯೆಗಳಿಗೆ ದೇಹ ಸ್ಪಂದಿಸಲು ಸಹಾಯ ಮಾಡುತ್ತೆ. ಸಂದೇಶವು ಮಿದುಳಿಗೆ ತಲುಪುವ ಮೊದಲೇ ಅಡ್ರಿನಲಿನ್ ಸಹಾಯದಿಂದ ಪ್ರತಿಸ್ಪಂದನೆ ನಡೆದು ಹೋಗಿರುತ್ತೆ. ನಮ್ಮದೇ ಉದಾಹರಣೆ ಕೊಡಬೇಕೆಂದರೆ, ಇದ್ದಕ್ಕಿದ್ದ ಹಾಗೆ ಮೇಜಿನ ಕೆಳಗೆ ಹಾವೊಂದನ್ನು ಕಂಡರೆ ನಮಗೇ ಅರಿವಿಲ್ಲದೇ ಸೂರು ಹಾರಿ ಹೋಗುವ ಹಾಗೆ ಕಿರುಚಬಹುದು, ಅಥವಾ ಸುಸ್ತಾಗಿ ನಡೆದು ಹೋಗುತ್ತಿದ್ದಾಗ ನಾಯಿಯೊಂದು ಬೊಗಳಿಕೊಂಡು ಅಟ್ಟಿಸಿಕೊಂಡು ಬಂದರೆ ಪಿ.ಟಿ.ಉಷಾಳಂತೆ ನಾವೂ ಓಡಬಹುದು. ಇದಕ್ಕೆ ಕಾರಣ ಅಡ್ರಿನಲಿನ್. ಅಂತೆಯೇ ಗೋಸುಂಬೆಯ ಸ್ಥಿತಿಗಳಿಗೆ (ಅದು ನಿಂತಿರುವ ಜಾಗದ ಬಣ್ಣಗಳಿಗಲ್ಲ) ಪ್ರತಿಸ್ಪಂದಿಸಲು ಸಹಾಯ ಮಾಡುವುದು ಅಡ್ರಿನಲಿನ್ನೇ.

ಕಪ್ಪು, ಕಂದು, ಬೂದಿ, ಹಸಿರು, ನೀಲಿ, ನೇರಳೆ, ಹಳದಿ ಮತ್ತು ಬಿಳಿ - ಇಷ್ಟು ವರ್ಣಗಳನ್ನು ಒಂದು ಗೋಸುಂಬೆ ತಾಳಬಹುದು.೩. ಗೋಸುಂಬೆಗಳು ಯಾವ ಬಣ್ಣದ ಹಿನ್ನೆಲೆಯಲ್ಲಿರುತ್ತೋ ಆ ಬಣ್ಣಕ್ಕೆ ತನ್ನ ಮೈ ಬಣ್ಣ ಬದಲಿಸಿಕೊಳ್ಳಬಲ್ಲುದು ಎಂಬ ನಂಬಿಕೆ ತಪ್ಪು. ಹಾಗೆ ಮಾಡಲು ಸಾಧ್ಯವಿಲ್ಲ. ಮೇಲೆ ಹೇಳಿದ ಬಣ್ಣಗಳಷ್ಟನ್ನೇ ಗೋಸುಂಬೆಗಳು ಸದಾ ಕಾಲ ಬದಲಿಸುತ್ತಲೇ ಇರುತ್ತೆ. ಆರಂಭದಿಂದ ಮುಕ್ತಾಯವೆಂಬಂತೆ, ಒಂದು ವರ್ಣ ಚಕ್ರವನ್ನೇ ನಿರ್ಮಿಸುತ್ತೆ! ತಾನು ಆ ಕ್ಷಣದಲ್ಲಿರುವ ಪರಿಸರಕ್ಕೆ ತಕ್ಕ ಬಣ್ಣವನ್ನು ಧರಿಸಬಹುದೇ ವಿನಃ ಹಿನ್ನೆಲೆಯ ಬಣ್ಣ ಧರಿಸಲು ಅಸಾಧ್ಯ.
ಒಂದು ಆಸಕ್ತಿದಾಯಕ ಮಾಹಿತಿಪೂರ್ಣ ತಾಣ ಇಲ್ಲಿದೆ, ಗೋಸುಂಬೆಯ ಬಗ್ಗೆ. http://www.medicalnewstoday.com/articles/94886.php

-ಅ
30.10.2008
11AM

Saturday, October 25, 2008

ಬೆಳಗಲಿ

ಮನುಷ್ಯನ ಮಿದುಳಿನಷ್ಟು ಬಲಿಷ್ಠವಾಗಲೀ, ಸಮರ್ಥವಾಗಲೀ ಯಾವುದೇ ಪ್ರಾಣಿಗಳ ಪಕ್ಷಿಗಳ ಮಿದುಳುಗಳಿಲ್ಲ. ಅವುಗಳ ಮೇಲೆ ಒತ್ತಡ ಹೇರುವುದು ಬಹಳ ಸುಲಭ.

ಪಕ್ಷಿಗಳಂತೂ ಬಲುಬೇಗ ಒತ್ತಡಕ್ಕೊಳಗಾಗಿಬಿಡುತ್ತವೆ. ಎಲ್ಲೋ ದೂರದಲ್ಲಿ ನಾವು ನಡೆದುಕೊಂಡು ಹೋಗುತ್ತಿದ್ದರೆ ಸಾಕು ತನ್ನನ್ನೆಲ್ಲಿ ಕೊಂದುಬಿಡುವರೋ ಎಂಬ ಭೀತಿಯಿಂದ ಹಾರಿ ಹೋಗುವ ಗುಬ್ಬಿ ಮೈನಾಗಳನ್ನು ನಾವು ನೋಡೇ ಇದ್ದೇವೆ. ಪಕ್ಷಿಗಳ ಕಣ್ಣಿನಲ್ಲಿ ಸಾವಿನ ಭೀತಿ ನೃತ್ಯವಾಡುವುದೂ ಸಹ ಗೋಚರ. ಹದ್ದುಗಳೂ ಸಹ ಒತ್ತಡಕ್ಕೆ ಬಲುಬೇಗ ಸಿಲುಕುವ ಪಕ್ಷಿಗಳೇ.

ಮಿದುಳಿಗೆ ಒತ್ತಡ ಬೀಳಲು ಬೇಕಾದಷ್ಟು ಕಾರಣಗಳಿವೆ. ಒಂಟಿತನ, ಹಗೆತನ, ಸಾವಿನ ದವಡೆಯಲ್ಲೇ ಬದುಕುವ ರೀತಿ, ಆವಾಸ ಕೊರತೆ, ಅತಿಯಾದ ಶಬ್ದ, ಮಾಲಿನ್ಯ, ಆಹಾರದ ಕೊರತೆ, ಅತಿವೃಷ್ಟಿ, ಅನಾವೃಷ್ಟಿ, ಚಳಿ, ಶೆಖೆ, ಎಲ್ಲವೂ ಒತ್ತಡವನ್ನು ಹೇರುತ್ತವೆ. ಪ್ರಾಣಿಪಕ್ಷಿಗಳಂತೂ ಬಹಳ ಸೂಕ್ಷ್ಮ. ಯಾವ ಜೀವಿಯು ಒತ್ತಡವನ್ನು ಸಹಿಸಿಕೊಳ್ಳಬಲ್ಲದೋ ಅವು ಹೆಚ್ಚು ಹೆಚ್ಚು ಉಳಿಯುತ್ತವೆ. ಜಿರಲೆಗಳು ಅತ್ಯಂತ ಸಮರ್ಥ ಜೀವಿ.

ಗಣಿಗಾರಿಕೆಯ ಪ್ರದೇಶಗಳಲ್ಲಿ ಅನೇಕ ಪ್ರಾಣಿಗಳು ಅರಣ್ಯನಾಶದ ಪರಿಣಾಮವಾಗಿ ಸತ್ತು ಹೋಗುತ್ತಿವೆ. ಆ ಪ್ರಾಣಿಗಳು ಅರಣ್ಯವನ್ನು ಹೊರೆತು ಬೇರೆಲ್ಲೂ ಬದುಕಲು ಸಾಧ್ಯವಾಗದಿರುವುದೇ ಒತ್ತಡ. ರೈಲ್ವೇ ಇಲಾಖೆಯವರು ಮಾಡಿರುವ ಗುಹೆಗಳಲ್ಲಿ ಓಡಾಡುವ ಮಜ ನಮಗಿದ್ದರೆ, ಆ ಗುಹೆಗಳ ರಚನೆಯಾಗುವ ಸಮಯದಲ್ಲಿ ಹುಲಿಗಳೂ ಆನೆಗಳೂ ಕರಡಿಗಳೂ ಸಹಸ್ರಾರು ಪಕ್ಷಿಗಳೂ ಪ್ರಾಣ ಕಳೆದುಕೊಂಡಿರುವುದು ಸತ್ಯವಷ್ಟೆ. ಕಾರಣ, ಗುಹೆಯನ್ನು ಕೊರೆಯುವಾಗ ಉಂಟಾದ ಸದ್ದು!

ಸಮುದ್ರದ ಆಳದಲ್ಲಿ ಸೋನಾರ್ ಸಿಗ್ನಲ್ಲುಗಳಿಂದ ಉಂಟಾಗುವ ಸದ್ದಿನಿಂದ ತಿಮಿಂಗಿಲಗಳೂ ಸಾಯುತ್ತವೆ.

ಶಬ್ದ ಮಾಲಿನ್ಯವು ಅತಿ ಹೆಚ್ಚು ಉಂಟಾಗುವುದು ರೈಲ್ವೇ ಇಂಜಿನ್ನುಗಳಿಂದ. ಅದರ ಸದ್ದು ಯಾವ ಪ್ರಾಣಿಯನ್ನು ಬೇಕಾದರೂ ಕೊಲ್ಲಬಹುದು. ಇಂಜಿನ್ನಿನ ಸದ್ದು ರೈಲಿನ ವೇಗಕ್ಕಿಂತ ಅಪಾಯ.

ಪಟಾಕಿ ಸದ್ದು ಯಾವ ಪ್ರಾಣಿಗಳೂ ಇಷ್ಟ ಪಡುವುದಿಲ್ಲವೆಂಬುದು ಅವುಗಳ ವರ್ತನೆಯಿಂದಲೇ ಗೊತ್ತಾಗುತ್ತೆ. ಮನುಷ್ಯನ ಜೊತೆಯಲ್ಲಿ ಎಷ್ಟೊಂದು ವರ್ಷಗಳಿಂದಲೂ ಬಾಳಿ ಬದುಕುತ್ತಿರುವ ನಾಯಿ ಬೆಕ್ಕು ಕಾಗೆ ಗುಬ್ಬಿಗಳೂ ಕೂಡ ಪಟಾಕಿಗೆ ಹೊಂದುಕೊಂಡಿಲ್ಲ. ಹೊಂದುಕೊಳ್ಳಲು ಸಾಧ್ಯವೂ ಇಲ್ಲ. ಒಂದೊಂದು ಪಟಾಕಿ ಸಿಡಿದಾಗಲೂ ಒಂದು ಪಕ್ಷಿಯು ಹತವಾಗುತ್ತೆಂದರೆ ಅದು ಅತಿಶಯೋಕ್ತಿಯಲ್ಲ. ಆಟಂ ಬಾಂಬ್ ಸಿಡಿದರೆ ಅಸರ ಶಬ್ದದಿಂದ ನಮಗಾಗುವ ಪ್ರಯೋಜನವಾದರೂ ಏನು? ನಮ್ಮ ಮಿದುಳಿನ ಮೇಲೆ ಒಂದಷ್ಟು ಒತ್ತಡ!! ಕ್ಷಣಿಕ "ಮಜ"!!!

ಯಾವ ಯಾವ ಕಾರಣದಿಂದ ಎಷ್ಟು ಎಷ್ಟು ಶಬ್ದ ಉತ್ಪತ್ತಿಯಾಗುತ್ತೆಂಬುದನ್ನು ಈ ಪುಣ್ಯಾತ್ಮರು ಬಹಳ ಸ್ಪಷ್ಟವಾಗಿ ಕೊಟ್ಟಿದ್ದಾರೆ. ನಾವು ಎಲ್ಲಿ ಬದುಕುತ್ತಿದ್ದೇವೆಂದು ಸೂಕ್ಷ್ಮವಾಗಿ ಗಮನಿಸಿದರೆ ಭೀತಿಯಾಗುವುದು ಆಶ್ಚರ್ಯವೇನಲ್ಲ.

ಮೊದಲೆರಡು ನಿದರ್ಶನಗಳೂ ಮನುಷ್ಯನ "ಬದುಕಿಗೆ" ಸಹಾಯಕವಾಗಿದೆ. ಒಂದು ಜೀವಿ ಬದುಕಲು ಇನ್ನೊಂದು ಜೀವಿ ಸಾಯುವುದು ಪ್ರಕೃತಿನಿಯಮ. ಆದರೆ ಪಟಾಕಿಗಳಿಂದ ಗಿಡಗಳೂ ಸೇರಿದಂತೆ ಎಲ್ಲವೂ ನಾಶವೆಂಬುದು ಅರಿವಾಗಲಿ. ಮಜಕ್ಕಾಗಿ ಅನ್ಯಜೀವಿಯ ನಾಶಕ್ಕೆ ಕಾರಣರಾಗದೇ ದೀಪಾವಳಿಯು ಎಲ್ಲರ, ಎಲ್ಲ ಜೀವಿಗಳ ಬದುಕನ್ನು ಬೆಳಗಲಿ.

ದೀಪಾವಳಿಯ ಶುಭಾಶಯಗಳು.

-ಅ
26.10.2008
12.30PM

Wednesday, October 15, 2008

ಕಡಲು - ಒಡಲುಇದು ಉಪ್ಪುನೀರ ಕಡಲಲ್ಲೊ
ನಮ್ಮ ಒಡಲಲ್ಲು ಇದರ ನೆಲೆಯು
ಕಂಡವರಿಗಲ್ಲೊ ಕಂಡವರಿಗಷ್ಟೆ
ತಿಳಿದದ ಇದರ ಬೆಲೆಯು.
-ವರಕವಿ ಬೇಂದ್ರೆ

ಇದನ್ನು ಕಂಡುಕೊಳ್ಳಲು ಇಷ್ಟು ದಿನ ಬೇಕಾಯಿತು!

--> ಸಮುದ್ರದ ನೀರಿನಲ್ಲಿರುವ ಲವಣಾಂಶಗಳೂ, ಮನುಷ್ಯನ ದೇಹದಲ್ಲಿರುವ ದ್ರವಗಳ ಲವಣಾಂಶಗಳೂ ಎರಡೂ ಬಹುಪಾಲು ಸಾಮ್ಯವನ್ನು ಹೊಂದಿರುವುದೇ.

--> ಸಮುದ್ರದ ಲವಣಾಂಶದ ಪ್ರಮಾಣವೂ, ದೇಹದಲ್ಲಿರುವ ದ್ರವಗಳ ಲವಣಾಂಶದ ಪ್ರಮಾಣವೂ ಒಂದೇ.

--> ಚಂದಿರ, ಸೂರ್ಯ ಮತ್ತು ಭೂಮಿ ಒಂದೇ ಅಕ್ಷದಲ್ಲಿ ಬಂದಾಗ ಗುರುತ್ವಾಕರ್ಷಣೆಯ ಪರಿಣಾಮ ಸಮುದ್ರದಲ್ಲಿ ಎತ್ತರದ ಅಲೆಗಳು ಉಂಟಾಗುತ್ತದೆ. ಅಮಾವಾಸ್ಯೆ ಮತ್ತು ಹುಣ್ಣಿಮೆ - ಇಂಥಾ ಸ್ಥಿತಿಗೆ ಉದಾಹರಣೆ. ಇದೇ ದಿನಗಳಲ್ಲಿ ದೇಹದ ದ್ರವಗಳೂ ಸಹ ಉದ್ರೇಕಗೊಳ್ಳುತ್ತವೆ. ಹಾಗಾಗಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ಸಮಯದಲ್ಲಿ ಮನುಷ್ಯನ ಪರಿಸ್ಥಿತಿಯೂ ಸಹ ಎಂದಿನಂತಿರುವುದಿಲ್ಲ. ಮನಸ್‍ಶಾಸ್ತ್ರಜ್ಞರು ಹೇಳುವ ಪ್ರಕಾರ ದುರಂತಗಳಾಗಲೀ, ಜಗಳ ಕದನಗಳಾಗಲೀ, ಹೊಡೆದಾಟಗಳಾಗಲೀ, ತಪ್ಪು ನಡವಳಿಕೆಗಳಾಗಲೀ ಅಥವಾ ಎಂಥದ್ದೋ ಒಂದು ಕೆಟ್ಟದ್ದಾಗುವುದು ಅಮಾವಾಸ್ಯೆ ಹುಣ್ಣಿಮೆಗಳ ಸಮಯದಲ್ಲಿ ಹೆಚ್ಚು. ಹಿರಿಯರು ಹೇಳುತ್ತಾರಲ್ಲಾ "ಇವತ್ತು ಅಮಾವಾಸ್ಯೆ, 'ಸಾಹಸ' ಮಾಡಲು ಹೋಗಬೇಡ" ಅಂತ - ಇದನ್ನು ಮೂಢನಂಬಿಕೆಯೆಂದು ತಳ್ಳಿಹಾಕುವುದು ಉಚಿತವಲ್ಲ.

--> ಮತ್ತೊಂದು ಕುತೂಹಲಕಾರ ವಿಷಯವೆಂದರೆ ಜಗತ್ತು ಶೇ.70 ರಷ್ಟು ಕಡಲ ನೀರಿನಿಂದಾವರಿಸಿದೆ. ಮನುಷ್ಯ ದೇಹದ ದ್ರವಗಳೂ ದೇಹದ ಶೇ. 70 ರಷ್ಟು ಆವರಿಸಿದೆ.

-ಅ
15.10.2008
1PM

Sunday, October 12, 2008

ಇದೊಂದು ಪ್ರಕಟಣೆ

ಕೆನೆತ್ ಆಂಡರ್ಸನ್ ಹೆಸರು ಕೇಳಿದರೇನೇ ಮನಸ್ಸಿನಲ್ಲಿ ಹುಮ್ಮಸ್ಸು. ಪರಿಸರ, ಪ್ರಕೃತಿ, ಚಾರಣ, ಅರಣ್ಯ, ಓದುವಿಕೆ - ಇವುಗಳ ಬಗ್ಗೆ ಆಸಕ್ತಿ ಮೂಡಿಸಿದ್ದು ಕನ್ನಡದ ತೇಜಸ್ವಿಯಾದರೆ, ಇಂಗ್ಲಿಷಿನ ಬರಹಗಳಲ್ಲಿ ಕೆನೆತ್ ಮತ್ತು ಜಿಮ್ ಕಾರ್ಬೆಟ್. ಕೆನೆತ್ ಬಗ್ಗೆ ಮತ್ತೆಂದಾದರೂ ಓದಿಕೊಳ್ಳೋಣ, ತಿಳಿದುಕೊಳ್ಳೋಣ. ಈಗ ಪ್ರಕಟಣೆ ವಿಷಯ ಇಂತಿದೆ.

ಕಾಡಿನ ಮಧ್ಯೆ ವಾಹನ ಚಲಾಯಿಸುವವರು ಅನುಸರಿಸಬೇಕಾದ ನೀತಿ ನಿಯಮಗಳು, ಅವರಿಗಿರಬೇಕಾದ ತಿಳಿವಳಿಕೆ ಮತ್ತು ಪ್ರಜ್ಞೆ - ಇವುಗಳ ಅರಿವು ಮೂಡಿಸಲು ಒಂದು ಕಾರ್ಯಕ್ರಮವನ್ನು ಕೆನೆತ್ ಸಂಸ್ಥೆ ಹಮ್ಮಿಕೊಂಡಿದೆ. ಬಂಡಿಪುರ ಚೆಕ್ ಪೋಸ್ಟ್‍ನ ಎದುರು ಕರಪತ್ರಗಳೊಡನೆ ನಿಂತು, ಆ ದಾರಿಯಲ್ಲಿ ಓಡಾಡುವ ಚಾಲಕರುಗಳಿಗೆ ವನ್ಯಜೀವಿಗಳ ಬಗ್ಗೆ, ವಾಹನವನ್ನು ಅರಣ್ಯದಲ್ಲಿ ಹೇಗೆ ಚಲಾಯಿಸಬೇಕು, ಏನೇನು ಮಾಡಬೇಕು, ಏನೇನು ಮಾಡಬಾರದು - ಹೀಗೆ ಎಲ್ಲ ವಿಷಯಗಳನ್ನೂ ತಿಳಿಸಿಕೊಡುವ ಸ್ವಯಂಸೇವಕರನ್ನು ಆಹ್ವಾನಿಸುತ್ತಿದೆ.

ಕಾರ್ಯಕ್ರಮವು ನವೆಂಬರ್ ಒಂದು ಮತ್ತು ಎರಡರಂದು ನಡೆಯುತ್ತಿದೆ.

ಇದೇ ಪ್ರಕಟಣೆಯನ್ನು ಇಂಗ್ಲಿಷಿನಲ್ಲೂ ಓದಿಕೊಳ್ಳಬಹುದು.

ಕಾರ್ಯಕ್ರಮದ ಹೆಸರು - ರೋಡ್ ಕಿಲ್ಸ್!

ಆಸಕ್ತರು ಗೆಳೆಯ ಜಯರಾಮನ್‍ರವರೊಡನೆ ಮಾತನಾಡಬಹುದು. ಅವರ ಈಮೇಲ್ ವಿಳಾಸ jaykakarla@yahoo.co.in

ಮತ್ತು KANS (Kenneth Anderson Nature Society) ಸಂಸ್ಥೆಯ ನಿರ್ದೇಶಕರ ವಿವರ ಹೀಗಿದೆ:
ಹರಿ. ಎ.ಎಸ್. - 9886623950 hari.omniscient@ gmail.com

ನನಗಂತೂ ಆಸಕ್ತಿಯಿದೆ. ಸಮಯ ಸಂದರ್ಭದ ಚರ್ಚೆ ನಡೆಸಿ ಇಲ್ಲಿಗೊಂದು ಪಯಣ ಬೆಳೆಸುವ ಯೋಜನೆಯೂ ಇದೆ. ಶಾಲೆಯ ಮೇಲೆ ಅವಲಂಬಿತವಾಗಿದೆ ಕೂಡ.

ನನ್ನಂತೆ ಇನ್ಯಾರಿಗಾದರೂ ಆಸಕ್ತಿಯಿದ್ದರೆ ಅರಣ್ಯಕ್ಕಾಗಿ, ಪರಿಸರಕ್ಕಾಗಿ, ವನ್ಯಜೀವಕ್ಕಾಗಿ, ನಮ್ಮೆಲ್ಲರಿಗಾಗಿ, ಪ್ರಕೃತಿಗಾಗಿ - ಈ ಸತ್ಕಾರ್ಯವನ್ನು ಮಾಡಬಹುದು.

-ಅ
12.10.2008
1.30PM

Thursday, October 09, 2008

ಯಾಕೆ?

ಪ್ರ.೧. ಗಂಡು ನಾಯಿಗಳು ಆಗಾಗ್ಗೆ ಸಿಕ್ಕ ಸಿಕ್ಕ ಕಡೆ ಮೂತ್ರ ವಿಸರ್ಜನೆ ಮಾಡುವುದು ಏಕೆ?

ಗಂಡು ನಾಯಿಗಳು ತಮ್ಮ 'ಸಾಮ್ರಾಜ್ಯ'ವನ್ನು ನಿರ್ಮಿಸಿಕೊಂಡಿರುತ್ತೆ. ಅದರ ಪರಿಧಿಯನ್ನು ಮೂತ್ರದಿಂದ ಗುರುತು ಮಾಡುತ್ತೆ. ವಾಸನೆಯು ಬೇಗ ಹೊರಟು ಹೋಗುವುದರಿಂದ ಮತ್ತೆ ಮತ್ತೆ ಮೂತ್ರ ವಿಸರ್ಜನೆ ಮಾಡುತ್ತೆ. ಸರಹದ್ದನ್ನು ದಾಟಿ ಬೇರೆ ಗಂಡು ನಾಯಿಗಳು ಬಂದರೆ ಸಾಮ್ರಾಜ್ಯದೊಳಗಿನ ನಾಯಿಗಳು ಗುಂಪಾಗಿ ಆಕ್ರಮಿಸಿ ಓಡಿಸಿಬಿಡುತ್ತೆ.

* ಇದೇ ಪದ್ಧತಿಯನ್ನು ಬೆಕ್ಕುಗಳೂ, ಹುಲಿಗಳೂ, ಸಿಂಹಗಳೂ, ತೋಳಗಳೂ, ನರಿಗಳೂ, ಚಿರತೆಗಳೂ, ಕಿರುಬಗಳೂ ಅನುಸರಿಸುತ್ತವೆ......................................................................................

ಪ್ರ. ೨. ಹಾವುಗಳು ಪೊರೆ ಬಿಡುವುದು ಏಕೆ?

ಹಾವಿನ ದೇಹ ವಿನ್ಯಾಸ ನಮ್ಮಂತೆ ಇಲ್ಲ. ಚರ್ಮದ ಒಳಗಿರುವ ದೇಹವು ಬೆಳೆಯುತ್ತೆ, ಆದರೆ ಚರ್ಮವು ಬೆಳೆಯುವುದಿಲ್ಲ. ಹಾಗಾಗಿ ಕಾಲಕಾಲಕ್ಕೆ ಬಟ್ಟೆ ಚಿಕ್ಕದಾದ ಹಾಗೆ ಬಟ್ಟೆ ಬದಲಿಸುವಂತೆ ಹಳೆ ಚರ್ಮವನ್ನು ತೊರೆಯುತ್ತೆ. ಇದಕ್ಕೆ Ecdysis ಎಂದು ಹೆಸರು.

* ಹಾವುಗಳು ಮಾತ್ರವಲ್ಲ, ಹಾವುಗಳಂತೆ exoskeleton ಉಳ್ಳ ಎಲ್ಲಾ ಸರೀಸೃಪಗಳೂ, ಕೀಟಗಳೂ ಪೊರೆ ಬಿಡುತ್ತವೆ......................................................................................

ಪ್ರ. ೩. ಸೊಳ್ಳೆಗಳು ಗುಯ್ಗುಟ್ಟುವುದು ಏಕೆ?

ಸೊಳ್ಳೆಗಳು ಕಂಠದಿಂದ ಶಬ್ದ ಮಾಡುವುದಿಲ್ಲ. ಗುಯ್ಗುಟ್ಟುವ ಶಬ್ದ ಬರುವುದು ರೆಕ್ಕೆಗಳಿಂದ. ಸೊಳ್ಳೆಗಳ ರೆಕ್ಕೆಗಳು ಒಂದು ಕ್ಷಣಕ್ಕೆ ಆರು ನೂರು ಸಲ ಬಡಿದುಕೊಳ್ಳುತ್ತೆ. ಇದರ ಪರಿಣಾಮವೇ ಗುಯ್‍ಯ್....

* ದುಂಬಿ, ಜೇನು, ನೊಣ - ಎಲ್ಲವೂ ರೆಕ್ಕೆ ಬಡಿದು ಸದ್ದು ಮಾಡುವ ಹುಳುಗಳೇ......................................................................................

ಪ್ರ. ೪. 'ಮುಟ್ಟಿದರೆ ಮುನಿ'ಯು ಮುನಿಯುವುದೇಕೆ?

ಮುಟ್ಟಿದರೆ ಮುನಿ - Mimosa pudica ಗಿಡದ ಎಲೆಗಳ ಜೀವಕೋಶಗಳು ಸೂಕ್ಷ್ಮವಾಗಿದ್ದು, ಕಿಂಚಿತ್ ಒತ್ತಡ ವ್ಯತ್ಯಾಸವಾದರೂ ಮಡಚಿಕೊಂಡು ಬಿಡುತ್ತೆ. ಸಸ್ಯಶಾಸ್ತ್ರಜ್ಞರು ಇದನ್ನು defence mechanism ಎಂದೂ ಶಂಕಿಸುತ್ತಾರೆ. ಹುಳು ಹುಪ್ಪಟೆಗಳಿಂದ, ಮೇಯಲು ಬಂದ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಎಲೆಗಳನ್ನು ಮಡಚಿಕೊಂಡರೆ ತನ್ನಲ್ಲಿರುವ ಮುಳ್ಳು ಆ ಪ್ರಾಣಿಗೆ ಚುಚ್ಚಿ ಪಾರಾಗಬಹುದು. ಇದೊಂದು ಸಸ್ಯಲೋಕದ ವಿಸ್ಮಯ ಜೀವಿ.......................................................................................

ಪ್ರ. ೫. ಆನೆಗಳು ವಿಪರೀತ ಲದ್ದಿ ಹಾಕುವುದು ಯಾಕೆ?

ಆನೆಗಳ ಜೀರ್ಣಶಕ್ತಿ ತೀರ ಕಡಿಮೆ. ಅದೇ ಕಾರಣಕ್ಕಾಗಿ ವಿಪರೀತ ತಿನ್ನುತ್ತೆ. ದಕ್ಕುವುದು ವಿಪರೀತ ಕಮ್ಮಿ.

* ಆನೆಯ ಜೀರ್ಣಶಕ್ತಿ ಕಡಿಮೆಯೆನ್ನುವುದಕ್ಕೆ ಸಾಕ್ಷಿ, ಅದರ ಲದ್ದಿಯಲ್ಲಿ ಹುಲ್ಲುಕಡ್ಡಿಗಳು, ಎಲೆ ಚೂರುಗಳು ಹಾಗ್‍ಹಾಗೇ ಇರುತ್ತೆ.......................................................................................

ಪ್ರ. ೬. ಅರಣ್ಯದಲ್ಲಿ ಪ್ಲಾಸ್ಟಿಕ್ ಯಾಕೆ ಬಿಸಾಡಬಾರದು?

ಗಿಡಗಳಿಗೆ ಸಾರಜನಕ ದೊರಕುವುದು ಮಣ್ಣಿನಿಂದ, ಪ್ಲಾಸ್ಟಿಕ್ ಅದನ್ನು ತಡೆಹಿಡಿದು ಬಿಡುತ್ತೆ. ಯಾವುದೇ ಪ್ರಾಣಿಯೂ, ಮನುಷ್ಯನನ್ನೂ ಸೇರಿಸಿ, ಪ್ಲಾಸ್ಟಿಕ್‍ಅನ್ನು ಜೀರ್ಣಿಸಿಕೊಳ್ಳಲು ಅಸಮರ್ಥ. ಪ್ಲಾಸ್ಟಿಕ್ ವಸ್ತುವು ಕರುಳುಗಳನ್ನು ಬ್ಲಾಕ್ ಮಾಡಿಬಿಡುತ್ತೆ. ಇಂದು ಅರಣ್ಯದಲ್ಲಿ ಬಹುತೇಕ ಪ್ರಾಣಿಗಳ ಸಾವಿಗೆ ಪ್ಲಾಸ್ಟಿಕ್ ಕಾರಣ.

* ಎಂಥಾ ಗಟ್ಟಿಯಾದ ಮರವನ್ನೇ ತಿಂದು ಮುಗಿಸುವ ಗೆದ್ದಲು ಹುಳು ಕೂಡ ಪ್ಲಾಸ್ಟಿಕ್ ಅನ್ನು ತಿನ್ನಲಾಗುವುದಿಲ್ಲ.......................................................................................

ಪ್ರ. ೭. ನದಿ ನೀರು ಸಿಹಿ, ಮಳೆ ನೀರು ಸಿಹಿ, ಅಂತರ್ಜಲ ಸಿಹಿ - ಮುನ್ನೀರು (ಈ ಮೂರೂ ಸೇರಿ ಆಗುವುದು = ಸಮುದ್ರ) ಮಾತ್ರ ಉಪ್ಪು. ಯಾಕೆ?

ಭೂಮಿ ಸೃಷ್ಟಿಯಾದಾಗ ವರ್ಷಾನುಗಟ್ಟಲೆ ಮಳೆಗರೆದಾಗ ಸಾಗರಗಳು ಸೃಷ್ಟಿಯಾದವು. ಉಲ್ಕಾಪಾತಗಳಿಂದಾದ ಬೃಹದ್ಬಾವಿಗಳಲ್ಲಿ ಅಡಗಿದ್ದ ಉಪ್ಪಿನಂಶವು (ಎಲ್ಲಾ ಬಗೆಯ ಉಪ್ಪು) ಸಾಗರದ ನೀರಿನಲ್ಲಿ ಕರಗಿ ಹೋದವು. ಹಾಗೆ ಕರಗಿ ಹೋಗಿ, ಸೂರ್ಯನ ತಾಪಕ್ಕೆ ತಳಹೊಕ್ಕವು. ಅದೇ ತಾಪಕ್ಕೆ ನೀರು ಮಾತ್ರ ಆವಿಯಾಗಿ ಮತ್ತೆ ಮೋಡವಾಗಿ ಮಳೆಗರೆಯುವುದು. ಹಾಗೆ ಮಳೆಯಾಗಿ ಸುರಿಯುವ ನೀರು, ಈ ಬೃಹದ್ಬಾವಿಗಳಲ್ಲದ ಸ್ಥಳಗಳಲ್ಲಿ ಬಿದ್ದಾಗ ಅವು ಹರಿದು ಹೋಗುವ ಝರಿ ತೊರೆ ನದಿ ಕೆರೆಗಳಾದವು. ಅಲ್ಲಿ ಉಪ್ಪಿನಂಶವಿಲ್ಲ. ಭೂಮಿಯ ಸೃಷ್ಟಿಯ ಸಮಯದಲ್ಲಿ ಉಂಟಾದ ಬಾವಿಗಳಲ್ಲಿ ಉಪ್ಪಿನಂಶವಿರುವುದು ಸುಮಾರು ಐವತ್ತು ಮಿಲಿಯನ್ ಬಿಲಿಯನ್ ಟನ್‍ಗಳು ಎನ್ನಲಾಗಿದೆ.

* ಸಮುದ್ರದ ನೀರು ಮೊದಲ ಮಳೆಯಿಂದಲೂ ಉಪ್ಪಾಗಿಯೇ ಇದೆ.......................................................................................

ಪ್ರ. ೮. ಮರಕುಟುಕ ಹಕ್ಕಿ ಯಾಕೆ ಮರವನ್ನು ಕುಟುಕುತ್ತೆ?

ಅನೇಕರು ಮರಕುಟುಕ ಪಕ್ಷಿಯು ಮರದ ಚೂರನ್ನು ತಿನ್ನುತ್ತೆ ಎಂದು ನಂಬಿದ್ದಾರೆ. ಆದರೆ, ಮರಕುಟುಕವು ಹುಳುಗಳನ್ನು ತಿನ್ನುವ ಹಕ್ಕಿ. ಸತ್ತು ಹೋದ ಮರವನ್ನು ಹೆಚ್ಚು ಬಯಸುತ್ತೆ. ಯಾಕೆಂದರೆ ಸತ್ತ ಮರದ ಮೇಲೆ ಹುಳುಗಳು ಹೆಚ್ಚಿರುತ್ತೆ. ಅಂಥಾ ಮರದಲ್ಲಿ ಗೂಡನ್ನು, ಅದರಲ್ಲೂ ಸಣ್ಣ ಸಣ್ಣ ಪೊಟರೆಗಳನ್ನು ಮಾಡುವ ಸಲುವಾಗಿ ಮರವನ್ನು ಕುಟುಕುತ್ತೆ. ಜೊತೆಗೆ, ಮರವನ್ನು ಕುಟುಕುವ ಸದ್ದು ಇವುಗಳಲ್ಲಿ ಸಂಭಾಷಣೆಯ ರೀತಿಯೂ ಕೂಡ!!......................................................................................

ಪ್ರ. ೯. ಹಲ್ಲಿಗಳು ಬಾಲಗಳನ್ನು ಕಳಚುವುದೇಕೆ?

ಇದಕ್ಕೆ ಆಟೋಟಮಿ ಎಂದು ಹೆಸರು. ಅಂದರೆ ತನ್ನ ಒಂದು ಅಂಗವನ್ನು ಸ್ವೇಚ್ಛೆಯಿಂದ ಕಳಚಿಬಿಡುವುದು. ಹಾಗೆ ಕಳಚಿಕೊಂಡ ಅಂಗವು ಮತ್ತೆ ಬೆಳೆಯುವುದು. ಇದಕ್ಕೆ regeneration ಎಂದು ಹೆಸರು. ಶತ್ರು ಪ್ರಾಣಿಯಿಂದ ತಪ್ಪಿಸಿಕೊಳ್ಳಲು, ಶತ್ರುವನ್ನು ಮೂರ್ಖಗೊಳಿಸಲು ಹಲ್ಲಿಯು ಹೂಡುವ ತಂತ್ರವು ಈ ಆಟೋಟಮಿ.

* ಹಲ್ಲಿಯು ಬಾಲ ಕಳಚುವಂತೆ ಸ್ಯಾಲಮಾಂಡರ್ ಕೂಡ ಕಳಚುತ್ತೆ. ಅನೇಕ ಏಡಿಗಳು, ಜೇಡಗಳು ತಮ್ಮ ಕಾಲನ್ನೇ ಕಳಚಿಬಿಡುತ್ತವೆ.......................................................................................

ಪ್ರ. ೧೦. ಮುಂಗುಸಿಗೆ ಹಾವಿನ ವಿಷವೇಕೆ ತಗುಲುವುದಿಲ್ಲ?

ಇದು ತಪ್ಪು ನಂಬಿಕೆ. ಹಾವಿಗಿಂತ ಮುಂಗುಸಿಯು ವೇಗವಾಗಿರುತ್ತೆ, ಮತ್ತು ಚುರುಕಾಗಿರುತ್ತೆ. ಮುಂಗುಸಿಯು ಹಾವನ್ನು ಬೇಟೆಯಾಡಲೆಂದೇ ಹುಟ್ಟಿರುವ ಪ್ರಾಣಿ. ನೇರವಾಗಿ ಹಾವಿನ ತಲೆಯ ಮೇಲೆಯೇ ಎರಗಿ, ಹಾವಿನ ತಲೆಬುರುಡೆಯನ್ನು ಮುರಿಯುವಂತೆ ಕಚ್ಚುತ್ತೆ. ಮುಂಗುಸಿಯ ಹಲ್ಲುಗಳು ಗರಗಸದಂತೆ ಹರಿತವಾಗಿದ್ದು, ಹಾವಿನ ಪ್ರಾಕೃತ ಶತ್ರುವಾಗಿರುವುದರಿಂದ ಈ ಕೆಲಸದಲ್ಲಿ ಯಶಸ್ವಿಯಾಗುತ್ತೆ. ಕೆಲವು ಸಲ ಹಾವೂ ಗೆಲ್ಲುತ್ತೆ!

* ಮುಂಗುಸಿಯದೇ ಜಾತಿಯ (Herpestes) ಎಲ್ಲಾ ಪ್ರಾಣಿಗಳೂ ಹಾವುಗಳಂತಹ ಸರೀಸೃಪಗಳನ್ನೇ ಅವಲಂಬಿಸಿ ಬದುಕುವುದು ಆಹಾರಕ್ಕೆ.......................................................................................

ಈ ಬಾರಿ "ಯಾಕೆ"ಯಾಯಿತು. ಮುಂದಿನ ಸಲ, "ಹೇಗೆ"ಗಳನ್ನು ನೋಡೋಣ.

-ಅ
09.10.2008
4AM

ಒಂದಷ್ಟು ಚಿತ್ರಗಳು..