Wednesday, November 21, 2007

ವರುಷ - ಹರುಷ (?)

blogger.comನಲ್ಲಿ ನಾನು ಬ್ಲಾಗಿಸಲು ಶುರು ಮಾಡಿ ಒಂದು ವರ್ಷವಾಯಿತು. ಸ್ಫೂರ್ತಿದಾಯಕರಿಗೆ(ಳಿಗೆ), ವಿಮರ್ಶಕರಿಗೆ, ಮೆಚ್ಚಿಕೊಂಡವರಿಗೆ, ತಿದ್ದಿದವರಿಗೆ, ಶಿಫಾರಸಿಸಿದವರಿಗೆ, ವಿಷಯಗಳಿಗೆ, ಗೂಗಲ್‍ಗೆ, ಆಗಾಗ್ಗೆ 'ವರ' ಕೊಟ್ಟರೂ ಕ್ಷಮಿಸುವ ಬಿ.ಎಸ್.ಎನ್.ಎಲ್.‍ಗೆ, ಬರಹ ತಂತ್ರಾಂಶಕ್ಕೆ, ಕನ್ನಡ ಭಾಷೆಗೆ, ಹಾಗೂ ನನಗೆ ಕನ್ನಡ ಕಲಿಸಿದ ಗುರುಗಳಿಗೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತಾ, ನನ್ನ ಬರವಣಿಗೆಯನ್ನು 'ಇಂಪ್ರೂವ್' ಮಾಡಿಕೊಳ್ಳುತ್ತೇನೆಂಬ ಪ್ರಮಾಣವನ್ನು ಮಾಡುತ್ತೇನೆ.

ಒಂದು ವರ್ಷದಿಂದ ಏನು ಬರೆಯುತ್ತಿದ್ದೇನೆ?

ಬರೆಯುವ ಲೇಖಕ ನಾನಲ್ಲ. ಕೆಲಸ ಮಾಡಲು ಗೊತ್ತಷ್ಟೆ. ಅದನ್ನೇ ಮಾಡುತ್ತಿದ್ದೇನೆ.

ಇಂದು ಉತ್ಥಾನದ್ವಾದಶಿ. ಏನಪ್ಪಾ ವಿಶೇಷ?

'ಸರ್ವರೋಗ ನಿವಾರಿಣಿ' ಎಂದು ಸಕಲ ಋಷಿಮುನಿಗಳಿಂದ ಕೊಂಡಾಡಲ್ಪಟ್ಟ ತುಳಸಿಯನ್ನು ಪೂಜಿಸುತ್ತಾರೆ. ಮನೆಯ ಗಾರೆಯು ಸರಿ ಇದೆಯೋ ಇಲ್ಲವೋ, ಮನೆಯ ಮುಂದೊಂದು ತುಳಸಿ ಗಿಡವಂತೂ ಇದ್ದೇ ಇರುತ್ತೆ. ತುಳಸಿಯ ಗಾಳಿಯೇ ಉಸಿರನ್ನು ಶುಚಿ ಮಾಡುತ್ತೆ. ತುಳಸಿಯ ರೋಗನಿರೋಧಕ ಗುಣಗಳನ್ನು ಇಲ್ಲಿ ಹೇಳುತ್ತಾ ಹೊತ್ತು ಕಳೆಯೋದು ಬೇಡ. ಅದಕ್ಕಾಗಿಯೇ ಲಕ್ಷಾಂತರ ತಾಣಗಳಿವೆ, ಪುಸ್ತಕಗಳಿವೆ. ಒಟ್ಟಿನಲ್ಲಿ ನಮ್ಮ ದೇಶದ ಎಲ್ಲರ ಬಾಳಿನಲ್ಲೂ ಬಹಳ ಮುಖ್ಯವಾದ ಒಂದು ಜೀವಿಯನ್ನು ಇಂದು ಸ್ಮರಿಸುವ ಕಾರ್ಯಕ್ರಮ ಇದೆ. ಒಬ್ಬೊಬ್ಬರ ಆಚರಣೆ ಒಂದೊಂದು ಬಗೆ. ಪೂಜೆಯ ಆಚರಣೆ ಬಗ್ಗೆ ನನ್ನದೇನೂ ಟೀಕೆಯಿಲ್ಲ, ಆದರೆ, ಇಂದು, ಅಂದರೆ ತುಳಸಿ ಪೂಜೆಯ ದಿನದಂದು ಪಟಾಕಿ ಸಿಡಿಸುವುದೂ ವಾಡಿಕೆಯಿದೆ. ಅದು ಯಾಕೆಂದು ನನಗೆ ಅರ್ಥವೇ ಆಗಿಲ್ಲ.

ದೀಪಾವಳಿಯಲ್ಲಿ ಮಾಡಿದ ಮಾಲಿನ್ಯ ಸಾಲದೆಂದು ರೋಗವನ್ನು ಗುಣ ಪಡಿಸುವ ತುಳಸಿಯ ಹೆಸರಿನಲ್ಲಿ ರೋಗವನ್ನು ಹರಡುವ ಈ ಆಚರಣೆಯು ನಮಗೆ ಬೇಡವಾದುದು. ಈ ಸಂಪ್ರದಾಯ ಎಲ್ಲಿಂದ ಹುಟ್ಟಿತೋ ಪರಮಾತ್ಮನೇ??

ಈಗ ಇಷ್ಟೊಂದು ಪೇಚಾಡುತ್ತಿದ್ದೇನೆ. ಆದರೆ ಬಾಲ್ಯದಲ್ಲಿ ನಾನೂ ಸಿಡಿಸಿದ್ದೇನೆ ಪಟಾಕಿಯನ್ನು.

ಸರಿಯಾಗಿ ಹನ್ನೊಂದು ವರ್ಷವಾಯಿತು. ಎಂಟನೇ ತರಗತಿಯಲ್ಲಿದ್ದೆ ಆಗ. ಪಟಾಕಿ ಬಗ್ಗೆ ಆಸಕ್ತಿ ಅಷ್ಟೇನೂ ಇರದಿದ್ದರೂ ಆಸೆಯಂತೂ ಇತ್ತು. ದೀಪಾವಳಿ ಮುಗಿದಿತ್ತು. ಉತ್ಥಾನದ್ವಾದಶಿ ಬಂದಿತ್ತು.

ನಮ್ಮ ಮನೆಯ ಕೆಳಗಿನ ಮನೆಯಲ್ಲಿ ನಾಗಸುಂದರ ಅನ್ನುವ ಗೆಳೆಯನೊಬ್ಬನಿದ್ದ. ನನ್ನ ವಯಸ್ಸಿನವನೇ. ನಾನು ಆಚಾರ್ಯ ಪಾಠಶಾಲೆಯ ವಿದ್ಯಾರ್ಥಿ, ಅವನು ಬೆಂಗಳೂರು ಹೈ ಸ್ಕೂಲ್ ವಿದ್ಯಾರ್ಥಿ. ಇಬ್ಬರೂ ಒಟ್ಟಿಗೇ ಓದುತ್ತಿದ್ದೆವು, ಒಟ್ಟಿಗೇ ಆಡುತ್ತಿದ್ದೆವು. ಅಂದು ಪಟಾಕಿಯನ್ನೂ ಒಟ್ಟಿಗೇ ಸಿಡಿಸಲು ಯೋಚಿಸಿದೆವು. ಸಾಮಾನ್ಯವಾಗಿ ಉತ್ಥಾನದ್ವಾದಶಿಯಂದು ಢಂ ಢಂ ಪಟಾಕಿ ಹೊಡೆಯೋದಿಲ್ಲ. ಏನಿದ್ದರೂ ಮತಾಪು, ಹೂಬಾಣ, ಹೂಕುಂಡ ಇಂಥದ್ದೇ.

ರಾತ್ರಿ ಹನ್ನೊಂದಾಗಿ ಹೋಗಿತ್ತು. ಭಾನುವಾರ ಬೇರೆ. ಎಲ್ಲಾ ಪಟಾಕಿಯನ್ನೂ ಮುಗಿಸಿದೆವು. ಐದು ಹೂಕುಂಡಗಳು (ಫ್ಲವರ್ ಪಾಟ್) ಮಿಕ್ಕಿದ್ದವು. ಐದನ್ನೂ ಸಾಲಾಗಿ ಇಟ್ಟುಕೊಂಡು ಬಂದೆ. ಸುರುಸುರು ಬತ್ತಿಯು ದೀಪಕ್ಕೆ ಸೋಕಿ ಚಿಟಚಿಟ ಸದ್ದು ಮಾಡುತ್ತ ಬೆಳಗಿತು ನನ್ನ ಕೈಯಲ್ಲಿ. ಸುಂದರ, "ನಾನು ಹಚ್ತೀನೋ, ಪ್ಲೀಸ್.." ಅಂದ. ನಾನಂದೆ, "ಐದಿದೆ. ನಾನು ಒಂದನ್ನು ಹಚ್ತೀನಷ್ಟೇ, ಮಿಕ್ಕ ನಾಲ್ಕನ್ನೂ ನೀನೇ ಹಚ್ಚು" ಎಂದೆ. ಅವನು ಒಪ್ಪಲಿಲ್ಲ. ಭಾರಿ ವಾದವಿವಾದ ರಾತ್ರಿ ಹನ್ನೊಂದು ಗಂಟೆಯಲ್ಲಿ ನಡೆಯಿತು. ಕೊನೆಗೆ ನಾನು ಹಚ್ಚಲು ಹೇಗೋ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡ. ಚಿಟಚಿಟನೆ ಉರಿಯುತ್ತಿದ್ದ ಸುರುಸುರುಬತ್ತಿಯು ನಂದಿಹೋಯಿತು. ಮತ್ತೊಂದು ಕಡ್ಡಿಯನ್ನು ತೆಗೆದುಕೊಂಡು ಚಿಟಚಿಟವೆನ್ನಿಸಿದೆ. ಫ್ಲವರ್ ಪಾಟ್ ಬಳಿ ತಂದೆ. ಅದರ ಶಿರಕ್ಕೆ ಸೋಕಿಸಿದೆ.

ನೆನಪಿಲ್ಲ.

ಪ್ರಪಂಚವು ಸಿಡಿದು ಹೋದಂತೆ ಭಾಸ.

ಢಮ್.. ಅಷ್ಟೇ ಕೇಳಿಸಿದ್ದು. ಕನಸಿನಂತಿತ್ತು.

ಎಚ್ಚರವಾಗುವ ವೇಳೆಗೆ ನಾನು ವಿಪರೀತ ಜೋರಾಗಿ ಕೂಗುತ್ತಿದ್ದೆ. ಹೋ.... ಎಂದು. ನೆನಪಿದೆ.

ಮುಂಗೈ ಚರ್ಮ ಸಂಪೂರ್ಣ ಸುಲಿದು ಗಡಿಯಾರದವರೆಗೂ ಬಂದಿತ್ತು. ಬೆಂದ ಗೆಣಸಿನ ಸಿಪ್ಪೆಯ ಹಾಗೆ ನನ್ನ ಚರ್ಮ ಸುಲಿದಿತ್ತು. ಕಣ್ಣು ಕತ್ತಲಾಗಿತ್ತು. ನನ್ನ ಕೈ ನಡುಗುತ್ತಿತ್ತು. ಕಣ್ಣಿನ ತುಂಬ ನೀರು ತುಂಬಿಕೊಂಡಿತ್ತು. ವಾಸ್ತವಕ್ಕೆ ನಿಧಾನಕ್ಕೆ ಹಿಂದಿರುಗಿದೆ. ನಾನು ಕೂಗುತ್ತಿದ್ದುದು ಅರಿವಾಯಿತು. ನನ್ನ ಸುತ್ತಲೂ ಜನರಿದ್ದರು. ಮಹದೇವ್ ಅಂಕಲ್, ಸುವರ್ಣ ಆಂಟಿ, ಸೂರಜ್, ಭಾರತಿ ಆಂಟಿ, ಸತೀಶ್ ಅಂಕಲ್, ನಿಕ್ಕಿ ಎಲ್ಲರೂ ಇದ್ದರು. ಎಡಗೈ ಇಂದ ಬಲಗೈಯನ್ನು ಬಲವಾಗಿ ಅದುಮಿಟ್ಟುಕೊಂಡಿದ್ದೆ. ಸುಲಿದು ಹೋದ ಚರ್ಮವನ್ನು ನೋಡಲು ಧೃತಿಕೆಟ್ಟಿತ್ತು. ಸುಂದರನ ಕಣ್ಣುಗಳು ಆಲ್ಸೇಷಿಯನ್ ನಾಯಿಯನ್ನು ಕಂಡ ಬೆಕ್ಕಿನ ಕಣ್ಣಿನಂತೆ ಭೀತಿಯಿಂದ ಕೂಡಿತ್ತು. ಅಮ್ಮ ಗಾಬರಿಯಿಂದ ಕೆಳಗಿಳಿದು ಬಂದರು. ಅವರ ಮುಖದಲ್ಲಿ ವಿಪರೀತ ಆತಂಕ. ಆಗ ನನಗೆ ತಿಳಿಯಿತು, ನನ್ನ ಕೈ ಸುಟ್ಟಿದೆ, ಆ ಫ್ಲವರ್ ಪಾಟ್ ಸ್ಫೋಟಿಸಿದೆ ಅಂತ. ಅಮ್ಮನಿಗೆ ಏನೂ ತೋಚದಾಗಿತ್ತು.

ಅಂದು ಭಾನುವಾರ, ಕ್ಲಿನಿಕ್ಕುಗಳು ರಾತ್ರಿ ಯಾರೂ ತೆಗೆದಿರೋದಿಲ್ಲ. ಆಸ್ಪತ್ರೆಗಳಲ್ಲಿ ಡಾಕ್ಟರುಗಳು ಸಿಗುವುದು ಕಷ್ಟ. ಹೊಸತಾಗಿ ತೆರೆದಿದ್ದ 'ಶ್ರೀನಗರ ನರ್ಸಿಂಗ್ ಹೋಮ್'ಗೆ ನನ್ನನ್ನು ಕರೆದುಕೊಂಡು ಹೋದರು. ಅಲ್ಲಿದ್ದ ಜನ ಹೊರಡುವ ಮುನ್ನ, ನನ್ನ ಸುಟ್ಟ ಕೈ ಮೇಲೆ ಇಂಕು, ಕಾಫಿ ಪುಡಿ ಏನೇನೋ ಹಾಕಲು ಸ್ಕೀಮ್ ಹಾಕಿದ್ದರು. ಹೃತ್ಪೂರ್ವಕವಾಗಿ ಪ್ರತಿಭಟಿಸಿದೆ ಅದನ್ನು. ಆಸ್ಪತ್ರೆಯಲ್ಲಿ ವೈದ್ಯರು ಬಂದು ಚಿಕಿತ್ಸೆ ನೀಡಿ ಮೂರು ತಿಂಗಳು ನನ್ನನ್ನು ಬ್ಯಾಂಡೇಜುಧಾರಿಯನ್ನಾಗಿಸಿ ಅಲಂಕರಿಸಿದರು. ಅಂದಿನಿಂದ ಮೆಡಿಕಲ್ ಸೈನ್ಸ್ ಬಗ್ಗೆ ಆಸಕ್ತಿಯೂ ಹೆಚ್ಚಿತು.

ಒಟ್ಟಿನಲ್ಲಿ ಪಟಾಕಿ ಅನ್ನೋದು ಬರೀ ಪ್ರಕೃತಿಯ ವಿನಾಶಕಾರಿಯಲ್ಲ, ನೇರವಾಗಿ ಮನುಷ್ಯನ ದೇಹವನ್ನು ಜ್ವಲಿಸಬಲ್ಲುದೆಂಬುದು ಸ್ವಾನುಭವದಿಂದ ಅರಿವಾಯಿತು. ಪುಣ್ಯಕ್ಕೆ ಮುಖಕ್ಕೆ ಸಿಡಿಯಲಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದರೂ ಎಲ್ಲರೂ. ನನಗೂ ಹಾಗೇ ಅನ್ನಿಸಿತು. ಕೈ ಮೇಲೆ ಬೃಹದ್ಗಾತ್ರದ ಗುರುತು ಉಳಿದಿರುವುದು ಪಾಠ ಕಲಿತದ್ದಕ್ಕೆ ಸರ್ಟಿಫಿಕೇಟು.

ಪಟಾಕಿ ಹೊಡೆಯುವುದನ್ನು ಬಿಟ್ಟುಬಿಟ್ಟೆ. ಕಾರಣ - ಒಂದು ಸ್ವಾರ್ಥಕ್ಕೆ. ಇನ್ನೊಂದು ಪ್ರಕೃತಿ ಪ್ರೇಮಕ್ಕೆ. ನಾನು ಕೈ ಸುಟ್ಟುಕೊಂಡೆ. ಪ್ರಕೃತಿ ಮಾತೆ ಪ್ರತಿ ಬಾರಿಯೂ ತನ್ನ ಮೈಯನ್ನೇ ಸುಟ್ಟುಕೊಳ್ಳುತ್ತಿದ್ದಾಳೆಂದು ನನಗೆ ಅರ್ಥವಾಗಲು ಹೆಚ್ಚು ದಿನಗಳು ಬೇಕಾಗಲಿಲ್ಲ. 'ಪರಿಸರ ಪ್ರೇಮಿ' ಅಂತ ದೊಡ್ಡದಾಗಿ ಹೇಳಿಕೊಂಡು ತಿರುಗುತ್ತೀನಲ್ಲಾ, ಏನು ಮಾಡಿದ್ದೀನಿ ಪ್ರಕೃತಿಗೆ ಎಂದು ಒಮ್ಮೊಮ್ಮೆ ಯೋಚನೆ ಬರುತ್ತೆ. ಆಗ ಇದನ್ನು ನೆನೆಸಿಕೊಂಡು ಸಮಾಧಾನ ಪಟ್ಟುಕೊಳ್ಳುತ್ತೇನೆ. ನಾನು ಪಟಾಕಿ ಹೊಡೆಯುವುದಿಲ್ಲ. ನಾನು ಪ್ಲಾಸ್ಟಿಕ್ ಬಿಸಾಡುವುದಿಲ್ಲ. ಹೀಗೆ... ನಾವು ಒಳ್ಳೆಯದನ್ನು ಮಾಡಬೇಕಿಲ್ಲ. ಕೆಟ್ಟದ್ದನ್ನು ಮಾಡದಿದ್ದರೆ ಅಷ್ಟೇ ಸಾಕು!!

ನನ್ನ ವಿದ್ಯಾರ್ಥಿಗಳಿಗೂ ನನ್ನ ಈ ಕಥೆ ಹೇಳುತ್ತಿರುತ್ತೇನೆ. ಮುನ್ನೂರಲ್ಲಿ ಮೂರು ಮಕ್ಕಳು ನನ್ನ ಕಥೆಯಿಂದ ಪಾಠವನ್ನು ಕಲಿತರೆ ಪ್ರಕೃತಿಗೆ ನಾನು ಸಲ್ಲಿಸುವ ಗೌರವ ಬೇಕಾದಷ್ಟಾಯಿತು.

ಸ್ಪೀಕ್ ಟು ನೇಚರ್ - ನೇಚರ್ ನನ್ನ ಜೊತೆ ಮಾತಾಡಿತ್ತು ಹನ್ನೊಂದು ವರ್ಷಗಳ ಕೆಳಗೆ. ಪ್ರಕೃತಿಯ ಅತಿಮುಖ್ಯ ಅಂಗವಾದ ಹವ್ಯವಾಹನನ ಮೂಲಕ, ಅರ್ಥಾತ್ ಬೆಂಕಿಯ ಮೂಲಕ. ನಾನು ಇಂದೂ ನೇಚರ್ ಜೊತೆ ಮಾತನಾಡುತ್ತಿದ್ದೇನೆ, ಚಾರಣಗಳ ಮೂಲಕ, ಪಕ್ಷಿವೀಕ್ಷಣೆಯ ಮೂಲಕ, ಸಾಹಸದ ಮೂಲಕ, ಬರೆಯುವುದರ ಮೂಲಕ, ಸ್ಮಿತೆ ಬೀರುವುದರ ಮೂಲಕ!!

ಈ ಘಟನೆಯನ್ನೋದಿದವರಿಗೂ ಥ್ಯಾಂಕ್ಸ್.

'ಕ್ಷಿತಿಜದೆಡೆಗೆ'ಗೆ ಒಂದು ವರ್ಷ ತುಂಬಿದ್ದಕ್ಕಾಗಿ ನನಗೆ ನನ್ನ ಶುಭಾಶಯಗಳು. ಇನ್ನೂ ಚೆನ್ನಾಗಿ ಕೆಲಸ ಮಾಡು ಅರುಣ!!

-ಅ
21.11.2007
7PM

15 comments:

 1. ಮೊನ್ನೆಯಷ್ಟೇ ಕೈ ಸುಟ್ಕೊಂಡಷ್ಟು ಚೆನ್ನಾಗಿ ಬರ್ದಿದೀಯಾ... ನಿನ್ನ ನೆನಪಿನ ಶಕ್ತಿ ಅಪಾರ!

  ನಾನು ಹೇಳಬೇಕಾದ್ದನ್ನು ನೀನೇ ಬರೆದುಕೊಂಡುಬಿಟ್ಟಿದೀಯಾ... ಅದನ್ನೇ ctrl+c, ctrl+v ಮಾಡ್ತೀನಿ... ಒಂದು ಬದಲಾವಣೆಯೊಂದಿಗೆ

  'ಕ್ಷಿತಿಜದೆಡೆಗೆ'ಗೆ ಒಂದು ವರ್ಷ ತುಂಬಿದ್ದಕ್ಕಾಗಿ ನಿನಗೆ ನನ್ನ ಶುಭಾಶಯಗಳು.

  ReplyDelete
 2. ಪ್ರಿಯ ಅರುಣ್,

  ಕ್ಷಿತಿಜದೆಡೆಗಿನ ನಿಮ್ಮ ಪರಿಸರಪ್ರೀತಿಯ ಪಯಣಕ್ಕೆ ವರುಷ ತುಂಬಿದ ಸಮಯದಲ್ಲಿ ನನ್ನ ಪ್ರೀತಿಯ ಶುಭಾಶಯಗಳು.

  ಪ್ರತಿ ಬಾರಿ ಬರೆವಾಗಲೂ ಪರಿಸರದ ಒಂದು ವಿಶಿಷ್ಟ ಮುಖ ಪರಿಚಯಿಸುತ್ತಾ, ನಮ್ಮನ್ನು ಪರಿಸರಪ್ರೀತಿಯ ನಿಮ್ಮ ಪಯಣದಲ್ಲಿ ಸೇರಿಸಿಕೊಳ್ಳುವ ಪರಿಯೇ ಚಂದ.

  ಒಳಿತಾಗಲಿ. ನಲಿವಿರಲಿ.

  ಪ್ರೀತಿಯಿಂದ
  ಸಿಂಧು

  ReplyDelete
 3. "ನಾವು ಒಳ್ಳೆಯದನ್ನು ಮಾಡಬೇಕಿಲ್ಲ. ಕೆಟ್ಟದ್ದನ್ನು ಮಾಡದಿದ್ದರೆ ಅಷ್ಟೇ ಸಾಕು!!"

  true. ಪರಿಸರ ಪ್ರೇಮಿಗೆ ಶುಭ ಹಾರೈಕೆಗಳು.

  ReplyDelete
 4. ನೀನು ಕೈ ಸುಟ್ಟುಕೊಂಡಿದ್ಯೇನೋ? ನಂಗೆ ಇದುವರೆಗೂ ಕಿಡಿ ಹಾರಿದೆ ಅಷ್ಟೆ.. ಜಾಸ್ತಿ ಸುಟ್ಟಿಲ್ಲ.. ಸುಡೋದೂ ಬೇಡ ಬಿಡು.. ;-)

  ನಿನ್ನ ಬ್ಲಾಗಿಂಗ್ ಕಾರ್ಯ ಮೊದಲನೆಯ ವರ್ಷದ ಯಶಸ್ಸು ಕಂಡಿದ್ದಕ್ಕೆ ನಿನಗೆ ಶುಭಾಶಯಗಳು.. ಇನ್ನು ಮುಂದೆಯೂ ಇದೇ ಥರ ಉತ್ತಮ ಲೇಖನಗಳನ್ನ ನೀಡ್ತಿರು.. ನಿನ್ನ ಬ್ಲಾಗ್‌ಗೆ ಇನ್ನೂ ಹೆಚ್ಚಿನ ಯಶಸ್ಸು ಲಭಿಸಲಿ.. :) ಶುಭವಾಗಲಿ...

  ReplyDelete
 5. hey ಅರುಣ.. ಹಾಗೇ ಹೇಳೋದು ಮರೆತೆ man.. ಇಷ್ಟ್ರಲ್ಲೇ ಯಾವಾಗ್ಲೋ ನನ್ನ ಬ್ಲಾಗ್ ಕೂಡ ಒಂದು ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿತು man.. ನಂಗೂ (ನನ್ ಬ್ಲಾಗ್‌ಗೂ) wish ಮಾಡೊ :D

  ReplyDelete
 6. ಕ್ಷಿತಿಜದೆಡೆಗೆ ಒಂದು ವರ್ಷ ತುಂಬಿರುವ ಸಮಯದಲ್ಲಿ ನಿಮಗೆ ಶುಭಾಶಯ ಮೇಷ್ಟೆ .:)
  ನೀವು ಹೀಗೆ ಸದಾ ಕಾಲ ಬರಿತಾನೆ ಇರಿ .ನಿಮ್ಮ ಪರಿಸರಪ್ರೇಮ ಇನ್ನಷ್ಟು ಹಿಮ್ಮಡಿಗೊಂಡು ನೀವು ಮುಂದೊಂದು ದಿನ ಪರಿಸರವಾದಿ ಆಗಲಿ ಎಂಬು ನನ್ನ ಪುಟ್ಟ ಹರಸಿಕೆ ಈ ಶುಭ ಸಮಯದಲ್ಲಿ.

  ಮತ್ತೊಮ್ಮೆ ಶುಭಾಶಯಗಳು

  ReplyDelete
 7. All the best arun..speaktonature blog ge ond varsha tumbiddakke ninage hruthpoorvakavaada shubhaashayagaLu.... :-) heege saaguttirali nimma baravaNigeya krushi.... :-)

  neenu kai suttkondidra bagge kaNNige kattida haage bardidya.... :-)

  ReplyDelete
 8. [ಶ್ರೀಧರ] ಕೈ ಸುಟ್ಟುಕೊಂಡಿದ್ದಕ್ಕೂ ಸಾರ್ಥಕ ಆಯಿತು ಬಿಡು ಹಾಗಾದ್ರೆ! ;-)

  [ಸಮನ್ವಯನ] ನಾನು ಪರಿಸರವಾದಿಯಾಗುವ ಇಚ್ಛೆಯುಳ್ಳವನಲ್ಲ ಕಣ್ರೀ..

  [ಸುಶ್ರುತ ದೊಡ್ಡೇರಿ] ಬಹಳ ಧನ್ಯವಾದಗಳು..

  [ಗಂಡಭೇರುಂಡ] ನೂರೆಂಟು ಕಡೆ ಕೈ ಸುಟ್ಕೊಂಡಿದೀನಿ man.

  [ಗಂಡಭೇರುಂಡ] ನಿನ್ನ ಬ್ಲಾಗಿಗೆ ಒಂದು ವರ್ಷ ತುಂಬಿದ್ದು ಗೊತ್ತು. ಅದರ ಬಗ್ಗೆ ಕ್ಷಿತಿಜಾನಿಸಿಕೆಯನ್ನೋದು. ತುಂಬಿರೋದು ಬರಿ ಒಂದು ವರ್ಷ ಮಾತ್ರ ಅಲ್ಲ, ಬೇರೇನೋ ಇದೆ ಅನ್ನೋದು ತಿಳಿಯುತ್ತೆ.

  [ವಿಕಾಸ್ ಹೆಗಡೆ] ಧನ್ಯವಾದಗಳು ಸರ್.

  [ಸಿಂಧು] ಪ್ರೀತಿಯ ಶುಭ ಹಾರೈಕೆಗೆ ಪ್ರೀತಿಯ ವಂದನೆಗಳು. ನಾನು ಅಷ್ಟೆಲ್ಲಾ ಪರಿಚಯಿಸಿದ್ದೀನಾ? ;-)

  [ಶ್ರೀಕಾಂತ್] ಒಳ್ಳೇ ಕಾಪಿ ಪೇಸ್ಟು!
  ಲೋ, ಸುಮ್ನಿರಪ್ಪ, ಹನ್ನೊಂದು ವರ್ಷಗಳ ಕೆಳಗೆ ಸುಟ್ಕೊಂಡಿದ್ದಕ್ಕೇ ಈ ಪಾಟಿ ಪಿಟೀಲು, ಇನ್ನು ಮೊನ್ನೆಯೇ ಸುಟ್ಕೊಂಡಿದ್ದಿದ್ರೆ ಕರ್ಮಕಾಂಡ!

  [ಸುಧನ್ವಾ] ಅತಿ ಶೀಘ್ರವೇ ಕಮೆಂಟಿಸಿದ್ದಕ್ಕೆ ಧನ್ಯವಾದಗಳು ಸರ್..

  [ಎಲ್ಲರಿಗೂ] ತುಂಬಾ ಧನ್ಯವಾದಗಳು..

  ReplyDelete
 9. hey ... my wishes too .... heege bareetiru ...
  btw ... neenu kai suttkondu 12 varsha aaytu ansutte ... adu nanna maduve aagi modala deepavali nalli aagiddalva ... ? 12 years aaytu ... 1995 ...

  ReplyDelete
 10. [ವಿಜಯಾ] ನಾನು ಟೀಚರು. Academic Year 1995 - 96 ಅಲ್ಲಿ ಸುಟ್ಟುಕೊಂಡಿದ್ದು. ;-)

  ReplyDelete
 11. ಅರುಣ್,
  ಶುಭಾಷಯಗಳು. ಬ್ಲಾಗ್ ಲೋಕದಲ್ಲಿ ಪರಿಸರದ ಬಗ್ಗೆ ಅತಿ ಕಾಳಜಿ ಇರುವ್ ಲೇಖನಗಳನ್ನು ನಾನು ಓದಿರಿವುದು ನಿಮ್ಮ ಬ್ಲಾಗ್ ನಲ್ಲಿ. ಬರೆಯುವ ಶೈಲಿ ಸುಂದರ. ಪರಿಸರದ ಬಗ್ಗೆ ನಿಮಗಿರುವ ಕಾಳಜಿ ಮೆಚ್ಚಬೇಕು. ನಿಮ್ಮ ಎರಡೂ ಬ್ಲಾಗುಗಳ ಅಭಿಮಾನಿ ನಾನು.

  ReplyDelete
 12. ಅರುಣ್,
  ಶುಭಾಷಯಗಳು. ಬ್ಲಾಗ್ ಲೋಕದಲ್ಲಿ ಪರಿಸರದ ಬಗ್ಗೆ ಅತಿ ಕಾಳಜಿ ಇರುವ್ ಲೇಖನಗಳನ್ನು ನಾನು ಓದಿರಿವುದು ನಿಮ್ಮ ಬ್ಲಾಗ್ ನಲ್ಲಿ. ಬರೆಯುವ ಶೈಲಿ ಸುಂದರ. ಪರಿಸರದ ಬಗ್ಗೆ ನಿಮಗಿರುವ ಕಾಳಜಿ ಮೆಚ್ಚಬೇಕು. ನಿಮ್ಮ ಎರಡೂ ಬ್ಲಾಗುಗಳ ಅಭಿಮಾನಿ ನಾನು.

  ReplyDelete
 13. [ರಾಜೇಶ್ ನಾಯ್ಕ] ಅಭಿಮಾನವನ್ನು ನಿಮ್ಮಂಥ ನೀವೇ ಕೊಡುತ್ತಿರಲು ನಾನು ಧನ್ಯ. ತುಂಬಾ ಹೊಗಳ್ತಿದ್ದೀರ. ಆದ್ರೂ ಥ್ಯಾಂಕ್ಸ್.. :-)

  ReplyDelete

ಒಂದಷ್ಟು ಚಿತ್ರಗಳು..