Saturday, November 10, 2007

ದೀಪಾವಳಿ - ಮಕ್ಕಳೊಂದಿಗೆ..

ಇವತ್ತು ಪೇಪರ್ ತೆಗೆದು ನೋಡಿದರೆ ಬೇಸರದ ವಾರ್ತೆಗಳು. ದೀಪಾವಳಿಯ ಉಡುಗೊರೆಗಳು. ಅದರಲ್ಲೂ ಮಕ್ಕಳಿಗೆ ಸಿಕ್ಕ ಉಡುಗೊರೆಗಳು. ಎಲ್ಲಾ ಪೇಪರ್‍ಗಳಲ್ಲೂ ಬಂದಿರುತ್ತವೆ. ಆರು ವರ್ಷದ ಹುಡುಗ ಫ್ಲವರ್ ಪಾಟ್ ಸಿಡಿದು ಕಣ್ಣು ಕಳೆದುಕೊಂಡ, ಮೂರು ವರ್ಷದ ಮಗು ಲಕ್ಷ್ಮೀ ಪಟಾಕಿ ಹಚ್ಚಲು ಹೋಗಿ ಕೈಗೆ ಶೇ. 80 ಸುಟ್ಟುಕೊಂಡಿದೆ, ಹದಿನಾರು ವರ್ಷದ ಹುಡುಗಿಯೊಬ್ಬಳು ಆಟಮ್ ಬಾಂಬ್ ಸಿಡಿದು ಮುಖವೆಲ್ಲಾ ಸುಟ್ಟು ಹೋಗಿದೆ.. ಈ ರೀತಿ ವಾರ್ತೆ ಓದಲು ಯಾರಿಗೆ ಮನಸ್ಸಾಗುತ್ತೆ ಹೇಳಿ? ಆದರೂ ಪತ್ರಿಕೆಯವರು ಇದನ್ನೆಲ್ಲಾ ಪ್ರಕಟಿಸುತ್ತಾರೆ. ಪಟಾಕಿ ಹೊಡೆಯುವವರು ಹೊಡೆಯುತ್ತಲೇ ಇರುತ್ತಾರೆ.

(ಕೃಪೆ: ಹಿಂದು ಪತ್ರಿಕೆ)

ಅಕ್ಕನ ಮಗನಿಗೆ ಇನ್ನಿಲ್ಲದ ಪಾಠ ಹೇಳುವ ಕೆಲಸವನ್ನು ನಾನು, ಅಕ್ಕ ಮಾಡಿದೆವು. ಇಂಟರ್‍ನೆಟ್ ಅಲ್ಲಿ ತೋರಿಸಿದೆವು - ಪಟಾಕಿಯಿಂದ ಏನೇನು ಹಾನಿ ಅಂತ. ಅವನು ತಲೆಯಾಡಿಸಿದನೇ ಹೊರತು ಪಟಾಕಿ ಹೊಡೆಯುವುದನ್ನು ಬಿಡಲಿಲ್ಲ. ನಂತರ ನಾನು, ಅಕ್ಕ ನಿರ್ಣಯ ಮಾಡಿದ್ದೇನೆಂದರೆ, "ಮಕ್ಕಳಿಗೆ ಅವರಿಗೇ ಅರ್ಥ ಆಗಬೇಕು, ಇದು ಕೆಟ್ಟದ್ದು ಅಂತ. ನಾವು ಹೇಳೋಕೆ ಹೋದರೆ ನಮ್ಮನ್ನು ಬೈದುಕೊಂಡು ನಿಲ್ಲಿಸಬಹುದಷ್ಟೇ. ಅವರಿಗೆ ಮನಸ್ಸಲ್ಲಿ ಆಸೆ ಇದ್ದೇ ಇರುತ್ತೆ" ಅಂತ. ಆದರೆ ನನ್ನ ಅಳುಕೆಂದರೆ ಮಕ್ಕಳಿಗೆ ಅರ್ಥ ಆಗೋ ಅಷ್ಟರಲ್ಲಿ ಕಾಲ ಮೀರಿದರೇನಪ್ಪಾ ಅನ್ನೋದು. ಹಾಗಾಗದಿರಲಿ.

ಪಟಾಕಿಯಿಂದ ಪರಿಸರ ಮಾಲಿನ್ಯ ಆಗುತ್ತೆ ಅನ್ನೋದನ್ನು ನಾವು ಮೂರನೇ ತರಗತಿಯಿಂದಲೂ ಓದಿಕೊಂಡೇ ಬಂದಿದ್ದೇವೆ. ಅದರ ಬಗ್ಗೆ ಇಲ್ಲಿ ಬರೆಯೋದಿಲ್ಲ. ಪರಿಸರ ಮಾಲಿನ್ಯ ತಡೆಗಟ್ಟಬೇಕೆಂಬುದು ನಮಗೆ ಆದ್ಯತೆ ಇದ್ದಿದ್ದರೆ ಪಟಾಕಿಯನ್ನು ಖರೀದಿಸುವ ಕಾರ್ಯ ಮಾಡುತ್ತಲೇ ಇರಲಿಲ್ಲ. (ನಮಗೆ = ಜನಕ್ಕೆ). ಆದರೆ, ಬಹುಪಾಲು ಸೋ-ಕಾಲ್ಡ್ ವಿದ್ಯಾವಂತರು ತಮ್ಮ ಮಕ್ಕಳಿಗೆ ಅರ್ಥ ಆಗುವ ಭಾಷೆಯಲ್ಲಿ "ಪಟಾಕಿ ಹೊಡೆದರೆ ಅದರ ಸದ್ದಿನಿಂದ ಪಕ್ಷಿಗಳು, ಪ್ರಾಣಿಗಳು ಮಾನಸಿಕ ಒತ್ತಡಕ್ಕೊಳಗಾಗುತ್ತವೆ, ಹೊಗೆಯಿಂದ ಸಕಲ ಜೀವಿಗಳೂ ರೋಗ ರುಜಿನಗಳಿಗೆ ಗುರಿಯಾಗುತ್ತವೆ" ಅಂತ ಹೇಳುವ ಪ್ರಯತ್ನ ಮಾಡುವುದೇ ಇಲ್ಲ. ಆದರೆ ಒಂದನ್ನು ಹೇಳಿರೋದನ್ನು ಕೇಳಿದ್ದೀನಿ ಮಕ್ಕಳಿಗೆ. "ನೀವು ಪಟಾಕಿ ಸುಡುತ್ತಿಲ್ಲ, ದುಡ್ಡನ್ನು ಸುಡುತ್ತಿದ್ದೀರ" ಅಂತ. ಮಕ್ಕಳಿಗೆ "ನಮ್ಮಪ್ಪ ಜುಗ್‍-ನನ್-ಮಗ" ಎಂಬ ಭಾವನೆ ಬರುವ ರೀತಿಯಲ್ಲಿ ಮಾತನಾಡುತ್ತಾರೆ. ಮಕ್ಕಳನ್ನು ದಾರಿಗೆ ತರಲು ಶಾಲೆ, ಮೇಷ್ಟ್ರು ದುಡಿಯುವಂತೆ ಪೋಷಕರೂ ಆ ಕೆಲಸ ಮಾಡಬೇಕು. ಅನೇಕ ಪೋಷಕರಿಗೆ ಈ ವಿಷಯಗಳೇ ಗೊತ್ತಿರೋದಿಲ್ಲ. ಮಕ್ಕಳು ಶಾಲೆಯಲ್ಲಿ ಪಟಾಕಿಯಿಂದ ಪರಿಸರ ಮಾಲಿನ್ಯ ಅಂತ ಹೇಳಿಕೊಟ್ಟಿದ್ದನ್ನು ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಗುಂಡು ಗುಂಡಾದ ಅಕ್ಷರಗಳಲ್ಲಿ ಬರೆದು ಒಳ್ಳೆಯ ಅಂಕವನ್ನು ಪಡೆದುಕೊಳ್ಳುತ್ತಾರೆ, ಆದರೆ ಮನೆಯಲ್ಲಿ ಸಾವಿರಗಟ್ಟಲೆ ಪಟಾಕಿ ಸಿಡಿಸಿರುತ್ತಾರೆ. ಅಪ್ಪ-ಅಮ್ಮಂದಿರು ಈ ವಿಷಯದಲ್ಲಿ ತಲೆ ಹಾಕುವುದೇ ಇಲ್ಲವಲ್ಲಾ..

(ಕೃಪೆ: ಹಿಂದು ಪತ್ರಿಕೆ)

ನಾನು ಕೂಡ ಪಟಾಕಿ ಹೊಡೆಯುತ್ತಿದ್ದೆ. ಕೈ ಭಯಂಕರವಾಗಿ ಸುಟ್ಟುಕೊಂಡೂ ಇದ್ದೇನೆ - ಫ್ಲವರ್ ಪಾಟ್ ಸಿಡಿದು. ಕೈಯಲ್ಲಿನ ಕಪ್ಪು ಗುರುತು ಮುಂಗೈಯಲ್ಲಿ ರಾರಾಜಿಸುತ್ತಿದೆ. ಪುಣ್ಯಕ್ಕೆ ನನ್ನ ಮುಖಕ್ಕೆ ಸಿಡಿಯಲಿಲ್ಲ ಅದು. ನನ್ನ ಮುಖ ಕಂಡರೆ ಸ್ವಲ್ಪ ಕರುಣೆಯಿತ್ತೇನೋ. ಮೂರು ತಿಂಗಳು ಸತತವಾಗಿ ಒದ್ದಾಡಿದ್ದೇನೆ ಕೈಯ್ಯೂದಿಸಿಕೊಂಡು. ಆದರೆ, ಆ ಸುಟ್ಟುಕೊಂಡ ಭೀತಿಯಿಂದ ಪಟಾಕಿ ಹೊಡೆಯೋದನ್ನು ಬಿಡಲಿಲ್ಲ. ಸುಡೋದಲ್ಲದೆ ಇನ್ನು ಏನೇನು ಹಾನಿ ಮಾಡುವ ಸಾಮರ್ಥ್ಯ ಈ ಪಟಾಕಿ ಅನ್ನೋ ವೈರಿಗೆ ಇದೆ ಅನ್ನೋದನ್ನು ಸ್ಟಡಿ ಮಾಡಲು ಆರಂಭಿಸಿದೆ. ಸುಡುವುದು ಬೆಂಕಿಗೆ ಸಹಜ, ರೋಗ ತರಿಸುವುದು ರಂಜಕ ಗಂಧಕಗಳಿಂದ ಉತ್ಪಾದನೆಯಾಗುವ ವಿಷಕ್ಕೆ ಸಹಜ, ಪ್ರಾಣಿಗಳನ್ನು ಪಕ್ಷಿಗಳನ್ನು ಮಾನಸಿಕವಾಗಿ ಕುಗ್ಗಿಸಿ ಕೊಲ್ಲುವುದು ಯಾವುದೇ ಕರ್ಕಶ ಸದ್ದಿಗೆ ಸಹಜ, ಉಸಿರಾಡುವ ಗಾಳಿಯನ್ನೇ ಕಲುಶಿತಗೊಳಿಸಿ ಜೀವಿಗಳನ್ನು ಕೊಲ್ಲುವುದು ಹೊಗೆಗೆ ಸಹಜ. ಇದ್ಯಾವುದೂ ಅರ್ಥ ಆಗದೇ ಇರುವುದು ನಮ್ಮ ವಿದ್ಯಾವಂತ ಸಮೂಹಕ್ಕೆ ಸಹಜ ಅನ್ನುವುದು ಮಾತ್ರ ದುರಂತ. ಇವಿಷ್ಟೂ ಹೇಗೋ ಅರ್ಥ ಆಗೋಯ್ತು. ಪಟಾಕಿಯನ್ನು ದ್ವೇಷಿಸಲು ಆರಂಭಿಸಿದೆ.

ಮಕ್ಕಳಿಗೆ "ಬೆಳಕಿನ", "ದೀಪದ" ಪ್ರಾಮುಖ್ಯತೆಯನ್ನು ವಿವರಿಸೋಣ. "ಕತ್ತಲಿನಿಂದ ಬೆಳಕಿನೆಡೆಗೆ ನಡೆಸು ಹೇ ದೇವಾ" ಅಂತ ದಿನನಿತ್ಯ ಪ್ರಾರ್ಥಿಸುವ ಜನರನ್ನು "ಬೆಳಕಿನಿಂದ ಕತ್ತಲೆಡೆಗೆ" ಕರೆದೊಯ್ವ ಸಿಡಿಮದ್ದುಗಳನ್ನು ದೂರ ಇಡುವುದು ಸಾತ್ವಿಕವಾಗಿ ಮಕ್ಕಳಿಗೆ ಅರ್ಥವಾಗಲಿ. ತಮ್ಮದೇ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡು ಆ ಮಕ್ಕಳ ಭವಿಷ್ಯಕ್ಕೆ ಮಸಿಬಳೆಯುವ ಪಟಾಕಿ ತಯಾರಕರಿಗೆ ಧಿಕ್ಕಾರ ಹೇಳಲು ನಮ್ಮ ಮಕ್ಕಳಿಗೆ ಹೇಳಿಕೊಡೋಣ. ಬೀದಿಬೀದಿಯಲ್ಲಿ ವಾಹನಗಳನ್ನೂ, ಪ್ರಾಣಿಗಳನ್ನೂ, ಪಾದಚಾರಿಗಳನ್ನೂ ಲೆಕ್ಕಿಸದೆ ಸಿಡಿಸುವ ಪುಂಡರನ್ನು ಖಂಡಿಸಲು ಮಕ್ಕಳಿಗೆ ತಿಳಿಹೇಳೋಣ. ದೀಪಾವಳಿಯು ಬೆಳಕಿನ ಹಬ್ಬವಷ್ಟೇ, ಕರ್ಕಶ ಶಬ್ದದ ಹಬ್ಬವಲ್ಲ ಅನ್ನುವುದನ್ನು ಅರಿಕೆ ಮಾಡಿಕೊಡೋಣ. ಮೌನದಲ್ಲಿ ಬೆಳಕನ್ನು ಜಗತ್ತಿಗೇ ಚೆಲ್ಲೋಣ. ಪ್ರಕೃತಿಮಾತೆಗೆ ಸಲ್ಲಿಸುವ ಪೂಜೆ ದೀಪಾವಳಿಯಲ್ಲಾಗಲಿ.

-ಅ
10.11.2007
11.15AM

10 comments:

 1. tumba bhinnavaagidhe nimme lekhana.....artha poorNa....

  ಮಕ್ಕಳು ಶಾಲೆಯಲ್ಲಿ ಪಟಾಕಿಯಿಂದ ಪರಿಸರ ಮಾಲಿನ್ಯ ಅಂತ ಹೇಳಿಕೊಟ್ಟಿದ್ದನ್ನು ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಗುಂಡು ಗುಂಡಾದ ಅಕ್ಷರಗಳಲ್ಲಿ ಬರೆದು ಒಳ್ಳೆಯ ಅಂಕವನ್ನು ಪಡೆದುಕೊಳ್ಳುತ್ತಾರೆ, ಆದರೆ ಮನೆಯಲ್ಲಿ ಸಾವಿರಗಟ್ಟಲೆ ಪಟಾಕಿ ಸಿಡಿಸಿರುತ್ತಾರೆ.....

  ee melina maathu noorakke nooraraShTu satya...."shaastra oodhodhu badnekaay tinnondu" thara aagbittidhe....

  ಪಟಾಕಿ ಹೊಡೆದರೆ ಅದರ ಸದ್ದಿನಿಂದ ಪಕ್ಷಿಗಳು, ಪ್ರಾಣಿಗಳು ಮಾನಸಿಕ ಒತ್ತಡಕ್ಕೊಳಗಾಗುತ್ತವೆ, ಹೊಗೆಯಿಂದ ಸಕಲ ಜೀವಿಗಳೂ ರೋಗ ರುಜಿನಗಳಿಗೆ ಗುರಿಯಾಗುತ್ತವೆ" ..

  tumbaa jana bari avra bagge yochisthaare...nan paTaaki, nan duddu, nannista..... hoditheeni, sudtheeni...antha....ee dhoraNe badalaagabeku...adu poshaka varga haagu shikshaka varga dinda maatra saadya......


  pataaki suduvudarabadalu ide makkaLige saamoohikavaagi deepagaLannu bhinna bhinnavaagi jodisuvudu, alankarisuvudu maadidare, eereethiya durgaTanegaLu tapputtade...ee reetiya kelasagaLu ondu area mattadinda shuruvaagabekaste... adakke prachaara sigabeku....siguttade....jaagruthi mooDuttade.... :-)

  ReplyDelete
 2. ಹೋದವರ್ಷ ದೀಪಾವಳಿಯಲ್ಲಿ ನಾನು ಕೇರಳದ ತ್ರಿಶೂರು ಮತ್ತು ಕೊಚ್ಚಿನ್ ಅಲ್ಲಿದ್ದೆ. ಅಲ್ಲಿ ಒಂದು ಹಳ್ಳಿಯಲ್ಲಿ ಒಂದು ದೊಡ್ಡ ಮೈದಾನದಲ್ಲಿ ಊರಿನ ಜನರೆಲ್ಲಾ ಸೇರಿ ದೀಪಾವಳಿಯ ಪ್ರಯುಕ್ತ ಪ್ರತಿಯೊಬ್ಬರೂ ಒಂದೊಂದು ಹಣತೆಯನ್ನು ಹಚ್ಚಿ ಹೋಗುತ್ತಿದ್ದರು. ನಾವು ಕೂಡ ಅಲ್ಲಿ ಒಂದು ಹಣತೆಯನ್ನು ಹಚ್ಚಿ ಬಂದೆವು..

  ReplyDelete
 3. [ಶ್ರೀಧರ] ಜಾಗೃತೆಯನ್ನು ಮೂಡಿಸೋಣ ಬನ್ನಿ.. ವಿಭಿನ್ನ ರೀತಿಯಲ್ಲಿ. ಪಾಠ ಹೇಳಿದರೆ ಕೇಳುವ ಜನ ನಮ್ಮಲ್ಲಿಲ್ಲ ಎಂಬುದು ಗೊತ್ತಿರೋ ಸತ್ಯ.

  ReplyDelete
 4. Tumbaaaa ishTa aythu ee article-u!!
  Article ishTa paTkond idbiDOdeee aagide namge... (namge = janakke)!
  Articles nuu ishTa paDde irOree jaasti percentage!!

  Neev heLiro ella maatu nanna haagu ella naturelovers na manada miDitadantittu!!

  nenne raatri hogegooDu aagidda vaatavaraNa noDi kemm jotey aLu nu bartittu!! En jananO... shaapa haaki haaki bydu bydu kemmu tale nov jaasti aythu!
  Solutions bagge yochne -- aa solutions na nan blog alli odhi coming shortly! :D :)

  ReplyDelete
 5. ಜನಕ್ಕೆ "ಜ್ಯೋತಿರ್ಗಮಯ" ಬೇಡ. ಬದಲಾಗಿ "ತಮಸೋ ಗಮಯ" ಬೇಕು. ಅಯ್ಯೋ ಪಾಪ...

  ಏನೇ ಇರಲಿ, ಬೆಂಗಳೂರಿನಲ್ಲಿ ಈ ವರ್ಷ ಪಟಾಕಿ ಕಡಿಮೆ ಅನ್ನೋದಂತು ನಿಜ. ಇದು ಸ್ವಲ್ಪ ಸಮಾಧಾನಕರ ವಿಷಯ. ಆದರೆ ಅಮಾವಾಸ್ಯೆ ದಿನ ಕತ್ತರಿಗುಪ್ಪೆ ಮತ್ತು ಗಾಂಧಿಬಜಾರ್ ಅಲ್ಲಿ ಯದ್ವಾತದ್ವಾ ಪಟಾಕಿ ಹೊಡೀತಿದ್ರು, ಮುಖ್ಯವಾಗಿ ಅಂಗಡಿಯವರು. ಮುಂದೆ ಅವರ ಜೀವನದಲ್ಲಿ ಪ್ರತಿದಿನವೂ ಅಮಾವಾಸ್ಯೆಯಾದಾಗ ಬುದ್ಧಿ ಬರತ್ತೆ. ಆದರೆ ಆಗ ಬುದ್ಧಿ ಬಂದು ಪ್ರಯೋಜನ ಇಲ್ಲ. ರೈಲ್ ಹೋದ್ಮೇಲೆ ಟಿಕೆಟ್ ತೊಗೊಂಡಂಗೆ...

  ReplyDelete
 6. [ಡೈನಮಿಕ್] ಧನ್ಯವಾದ. ಮತ್ತೆ ಒಂದು ವಿಷಯ. solutionsನ ಮೊದಲು ಬರಿ. ಆಮೇಲೆ ಇಲ್ಲಿ ಬರಿ.

  [ಶ್ರೀಕಾಂತ್] ಹೌದಪ್ಪ.. ಆಗ ಪರದಾಟ ಕಟ್ಟಿಟ್ಟ ಬುತ್ತಿ.

  ReplyDelete
 7. hmmmm....
  "Experience is the greatest teacher. It can never be explained.. It has to be experienced to know it.." anta ello Odida nenapu... chikka makkaLigu (paTaaki hoDiyo 'hiriya'rigu) idu anvaya aagutte.. aadre neenu heLidahaage avrigella aa paTaakigaLa prabhaava keTTa reetiyalli experience aagokku munche ne avrige oLLe buddhi barli... devru oLLe buddhi koDli..

  ReplyDelete
 8. [ಗಂಡಭೇರುಂಡ] ನೀನು ಅದನ್ನು ಎಲ್ಲಿ ಓದಿದೆಯೋ ನೆನಪಿಲ್ಲ, ಆದರೆ ಆ ಡೈಲಾಗನ್ನು "ಆಪ್ತಮಿತ್ರ"ದಲ್ಲಿ ಬಳಸಲಾಗಿದೆ ಅನ್ನೋದಂತೂ ಸತ್ಯ!

  ಹೌದು. ಶ್ರೀಕಾಂತ್ ಹೇಳಿದ ಹಾಗೆ ರೈಲು ಹೋದ ಮೇಲೆ ಟಿಕೀಟು ತೊಗೊಂಡ್ರೆ ಏನ್ ಪ್ರಯೋಜನ!! ಸಾಯುವ ಮುನ್ನ ಬದುಕೋಣ ಬನ್ನಿ ಅನ್ನೋದು ನನ್ನ ಕರೆ!

  ReplyDelete
 9. @parisarapremi : jaagruthi bagge heLidyalla..idanna neenu nimma shaaleli makkaLige workshop thara maadabahudu...pataaaki hodyobadlu deepagaLna jodosdhu...enantheera??

  ReplyDelete
 10. ಏನೇನೋ ಮಾಡೋಕೆ ಆಸೆ ಇದೆ ಶ್ರೀಧರ. ಆದರೆ ನೂರೆಂಟು ಒತ್ತಡಗಳು ಇಂಥವಕ್ಕೆ ಅನುಮತಿ ಕೊಡೋದೇ ಇಲ್ಲ ಅನ್ನೋದು ಬೇಸರ ತರಿಸುತ್ತೆ. ಆದರೆ ನನ್ನ ಕಕ್ಷೆಯಲ್ಲಿ ಇವೆಲ್ಲಾ ಹೇಳಿದೆ!!

  ReplyDelete

ಒಂದಷ್ಟು ಚಿತ್ರಗಳು..