Wednesday, November 21, 2007

ವರುಷ - ಹರುಷ (?)

blogger.comನಲ್ಲಿ ನಾನು ಬ್ಲಾಗಿಸಲು ಶುರು ಮಾಡಿ ಒಂದು ವರ್ಷವಾಯಿತು. ಸ್ಫೂರ್ತಿದಾಯಕರಿಗೆ(ಳಿಗೆ), ವಿಮರ್ಶಕರಿಗೆ, ಮೆಚ್ಚಿಕೊಂಡವರಿಗೆ, ತಿದ್ದಿದವರಿಗೆ, ಶಿಫಾರಸಿಸಿದವರಿಗೆ, ವಿಷಯಗಳಿಗೆ, ಗೂಗಲ್‍ಗೆ, ಆಗಾಗ್ಗೆ 'ವರ' ಕೊಟ್ಟರೂ ಕ್ಷಮಿಸುವ ಬಿ.ಎಸ್.ಎನ್.ಎಲ್.‍ಗೆ, ಬರಹ ತಂತ್ರಾಂಶಕ್ಕೆ, ಕನ್ನಡ ಭಾಷೆಗೆ, ಹಾಗೂ ನನಗೆ ಕನ್ನಡ ಕಲಿಸಿದ ಗುರುಗಳಿಗೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತಾ, ನನ್ನ ಬರವಣಿಗೆಯನ್ನು 'ಇಂಪ್ರೂವ್' ಮಾಡಿಕೊಳ್ಳುತ್ತೇನೆಂಬ ಪ್ರಮಾಣವನ್ನು ಮಾಡುತ್ತೇನೆ.

ಒಂದು ವರ್ಷದಿಂದ ಏನು ಬರೆಯುತ್ತಿದ್ದೇನೆ?

ಬರೆಯುವ ಲೇಖಕ ನಾನಲ್ಲ. ಕೆಲಸ ಮಾಡಲು ಗೊತ್ತಷ್ಟೆ. ಅದನ್ನೇ ಮಾಡುತ್ತಿದ್ದೇನೆ.

ಇಂದು ಉತ್ಥಾನದ್ವಾದಶಿ. ಏನಪ್ಪಾ ವಿಶೇಷ?

'ಸರ್ವರೋಗ ನಿವಾರಿಣಿ' ಎಂದು ಸಕಲ ಋಷಿಮುನಿಗಳಿಂದ ಕೊಂಡಾಡಲ್ಪಟ್ಟ ತುಳಸಿಯನ್ನು ಪೂಜಿಸುತ್ತಾರೆ. ಮನೆಯ ಗಾರೆಯು ಸರಿ ಇದೆಯೋ ಇಲ್ಲವೋ, ಮನೆಯ ಮುಂದೊಂದು ತುಳಸಿ ಗಿಡವಂತೂ ಇದ್ದೇ ಇರುತ್ತೆ. ತುಳಸಿಯ ಗಾಳಿಯೇ ಉಸಿರನ್ನು ಶುಚಿ ಮಾಡುತ್ತೆ. ತುಳಸಿಯ ರೋಗನಿರೋಧಕ ಗುಣಗಳನ್ನು ಇಲ್ಲಿ ಹೇಳುತ್ತಾ ಹೊತ್ತು ಕಳೆಯೋದು ಬೇಡ. ಅದಕ್ಕಾಗಿಯೇ ಲಕ್ಷಾಂತರ ತಾಣಗಳಿವೆ, ಪುಸ್ತಕಗಳಿವೆ. ಒಟ್ಟಿನಲ್ಲಿ ನಮ್ಮ ದೇಶದ ಎಲ್ಲರ ಬಾಳಿನಲ್ಲೂ ಬಹಳ ಮುಖ್ಯವಾದ ಒಂದು ಜೀವಿಯನ್ನು ಇಂದು ಸ್ಮರಿಸುವ ಕಾರ್ಯಕ್ರಮ ಇದೆ. ಒಬ್ಬೊಬ್ಬರ ಆಚರಣೆ ಒಂದೊಂದು ಬಗೆ. ಪೂಜೆಯ ಆಚರಣೆ ಬಗ್ಗೆ ನನ್ನದೇನೂ ಟೀಕೆಯಿಲ್ಲ, ಆದರೆ, ಇಂದು, ಅಂದರೆ ತುಳಸಿ ಪೂಜೆಯ ದಿನದಂದು ಪಟಾಕಿ ಸಿಡಿಸುವುದೂ ವಾಡಿಕೆಯಿದೆ. ಅದು ಯಾಕೆಂದು ನನಗೆ ಅರ್ಥವೇ ಆಗಿಲ್ಲ.

ದೀಪಾವಳಿಯಲ್ಲಿ ಮಾಡಿದ ಮಾಲಿನ್ಯ ಸಾಲದೆಂದು ರೋಗವನ್ನು ಗುಣ ಪಡಿಸುವ ತುಳಸಿಯ ಹೆಸರಿನಲ್ಲಿ ರೋಗವನ್ನು ಹರಡುವ ಈ ಆಚರಣೆಯು ನಮಗೆ ಬೇಡವಾದುದು. ಈ ಸಂಪ್ರದಾಯ ಎಲ್ಲಿಂದ ಹುಟ್ಟಿತೋ ಪರಮಾತ್ಮನೇ??

ಈಗ ಇಷ್ಟೊಂದು ಪೇಚಾಡುತ್ತಿದ್ದೇನೆ. ಆದರೆ ಬಾಲ್ಯದಲ್ಲಿ ನಾನೂ ಸಿಡಿಸಿದ್ದೇನೆ ಪಟಾಕಿಯನ್ನು.

ಸರಿಯಾಗಿ ಹನ್ನೊಂದು ವರ್ಷವಾಯಿತು. ಎಂಟನೇ ತರಗತಿಯಲ್ಲಿದ್ದೆ ಆಗ. ಪಟಾಕಿ ಬಗ್ಗೆ ಆಸಕ್ತಿ ಅಷ್ಟೇನೂ ಇರದಿದ್ದರೂ ಆಸೆಯಂತೂ ಇತ್ತು. ದೀಪಾವಳಿ ಮುಗಿದಿತ್ತು. ಉತ್ಥಾನದ್ವಾದಶಿ ಬಂದಿತ್ತು.

ನಮ್ಮ ಮನೆಯ ಕೆಳಗಿನ ಮನೆಯಲ್ಲಿ ನಾಗಸುಂದರ ಅನ್ನುವ ಗೆಳೆಯನೊಬ್ಬನಿದ್ದ. ನನ್ನ ವಯಸ್ಸಿನವನೇ. ನಾನು ಆಚಾರ್ಯ ಪಾಠಶಾಲೆಯ ವಿದ್ಯಾರ್ಥಿ, ಅವನು ಬೆಂಗಳೂರು ಹೈ ಸ್ಕೂಲ್ ವಿದ್ಯಾರ್ಥಿ. ಇಬ್ಬರೂ ಒಟ್ಟಿಗೇ ಓದುತ್ತಿದ್ದೆವು, ಒಟ್ಟಿಗೇ ಆಡುತ್ತಿದ್ದೆವು. ಅಂದು ಪಟಾಕಿಯನ್ನೂ ಒಟ್ಟಿಗೇ ಸಿಡಿಸಲು ಯೋಚಿಸಿದೆವು. ಸಾಮಾನ್ಯವಾಗಿ ಉತ್ಥಾನದ್ವಾದಶಿಯಂದು ಢಂ ಢಂ ಪಟಾಕಿ ಹೊಡೆಯೋದಿಲ್ಲ. ಏನಿದ್ದರೂ ಮತಾಪು, ಹೂಬಾಣ, ಹೂಕುಂಡ ಇಂಥದ್ದೇ.

ರಾತ್ರಿ ಹನ್ನೊಂದಾಗಿ ಹೋಗಿತ್ತು. ಭಾನುವಾರ ಬೇರೆ. ಎಲ್ಲಾ ಪಟಾಕಿಯನ್ನೂ ಮುಗಿಸಿದೆವು. ಐದು ಹೂಕುಂಡಗಳು (ಫ್ಲವರ್ ಪಾಟ್) ಮಿಕ್ಕಿದ್ದವು. ಐದನ್ನೂ ಸಾಲಾಗಿ ಇಟ್ಟುಕೊಂಡು ಬಂದೆ. ಸುರುಸುರು ಬತ್ತಿಯು ದೀಪಕ್ಕೆ ಸೋಕಿ ಚಿಟಚಿಟ ಸದ್ದು ಮಾಡುತ್ತ ಬೆಳಗಿತು ನನ್ನ ಕೈಯಲ್ಲಿ. ಸುಂದರ, "ನಾನು ಹಚ್ತೀನೋ, ಪ್ಲೀಸ್.." ಅಂದ. ನಾನಂದೆ, "ಐದಿದೆ. ನಾನು ಒಂದನ್ನು ಹಚ್ತೀನಷ್ಟೇ, ಮಿಕ್ಕ ನಾಲ್ಕನ್ನೂ ನೀನೇ ಹಚ್ಚು" ಎಂದೆ. ಅವನು ಒಪ್ಪಲಿಲ್ಲ. ಭಾರಿ ವಾದವಿವಾದ ರಾತ್ರಿ ಹನ್ನೊಂದು ಗಂಟೆಯಲ್ಲಿ ನಡೆಯಿತು. ಕೊನೆಗೆ ನಾನು ಹಚ್ಚಲು ಹೇಗೋ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡ. ಚಿಟಚಿಟನೆ ಉರಿಯುತ್ತಿದ್ದ ಸುರುಸುರುಬತ್ತಿಯು ನಂದಿಹೋಯಿತು. ಮತ್ತೊಂದು ಕಡ್ಡಿಯನ್ನು ತೆಗೆದುಕೊಂಡು ಚಿಟಚಿಟವೆನ್ನಿಸಿದೆ. ಫ್ಲವರ್ ಪಾಟ್ ಬಳಿ ತಂದೆ. ಅದರ ಶಿರಕ್ಕೆ ಸೋಕಿಸಿದೆ.

ನೆನಪಿಲ್ಲ.

ಪ್ರಪಂಚವು ಸಿಡಿದು ಹೋದಂತೆ ಭಾಸ.

ಢಮ್.. ಅಷ್ಟೇ ಕೇಳಿಸಿದ್ದು. ಕನಸಿನಂತಿತ್ತು.

ಎಚ್ಚರವಾಗುವ ವೇಳೆಗೆ ನಾನು ವಿಪರೀತ ಜೋರಾಗಿ ಕೂಗುತ್ತಿದ್ದೆ. ಹೋ.... ಎಂದು. ನೆನಪಿದೆ.

ಮುಂಗೈ ಚರ್ಮ ಸಂಪೂರ್ಣ ಸುಲಿದು ಗಡಿಯಾರದವರೆಗೂ ಬಂದಿತ್ತು. ಬೆಂದ ಗೆಣಸಿನ ಸಿಪ್ಪೆಯ ಹಾಗೆ ನನ್ನ ಚರ್ಮ ಸುಲಿದಿತ್ತು. ಕಣ್ಣು ಕತ್ತಲಾಗಿತ್ತು. ನನ್ನ ಕೈ ನಡುಗುತ್ತಿತ್ತು. ಕಣ್ಣಿನ ತುಂಬ ನೀರು ತುಂಬಿಕೊಂಡಿತ್ತು. ವಾಸ್ತವಕ್ಕೆ ನಿಧಾನಕ್ಕೆ ಹಿಂದಿರುಗಿದೆ. ನಾನು ಕೂಗುತ್ತಿದ್ದುದು ಅರಿವಾಯಿತು. ನನ್ನ ಸುತ್ತಲೂ ಜನರಿದ್ದರು. ಮಹದೇವ್ ಅಂಕಲ್, ಸುವರ್ಣ ಆಂಟಿ, ಸೂರಜ್, ಭಾರತಿ ಆಂಟಿ, ಸತೀಶ್ ಅಂಕಲ್, ನಿಕ್ಕಿ ಎಲ್ಲರೂ ಇದ್ದರು. ಎಡಗೈ ಇಂದ ಬಲಗೈಯನ್ನು ಬಲವಾಗಿ ಅದುಮಿಟ್ಟುಕೊಂಡಿದ್ದೆ. ಸುಲಿದು ಹೋದ ಚರ್ಮವನ್ನು ನೋಡಲು ಧೃತಿಕೆಟ್ಟಿತ್ತು. ಸುಂದರನ ಕಣ್ಣುಗಳು ಆಲ್ಸೇಷಿಯನ್ ನಾಯಿಯನ್ನು ಕಂಡ ಬೆಕ್ಕಿನ ಕಣ್ಣಿನಂತೆ ಭೀತಿಯಿಂದ ಕೂಡಿತ್ತು. ಅಮ್ಮ ಗಾಬರಿಯಿಂದ ಕೆಳಗಿಳಿದು ಬಂದರು. ಅವರ ಮುಖದಲ್ಲಿ ವಿಪರೀತ ಆತಂಕ. ಆಗ ನನಗೆ ತಿಳಿಯಿತು, ನನ್ನ ಕೈ ಸುಟ್ಟಿದೆ, ಆ ಫ್ಲವರ್ ಪಾಟ್ ಸ್ಫೋಟಿಸಿದೆ ಅಂತ. ಅಮ್ಮನಿಗೆ ಏನೂ ತೋಚದಾಗಿತ್ತು.

ಅಂದು ಭಾನುವಾರ, ಕ್ಲಿನಿಕ್ಕುಗಳು ರಾತ್ರಿ ಯಾರೂ ತೆಗೆದಿರೋದಿಲ್ಲ. ಆಸ್ಪತ್ರೆಗಳಲ್ಲಿ ಡಾಕ್ಟರುಗಳು ಸಿಗುವುದು ಕಷ್ಟ. ಹೊಸತಾಗಿ ತೆರೆದಿದ್ದ 'ಶ್ರೀನಗರ ನರ್ಸಿಂಗ್ ಹೋಮ್'ಗೆ ನನ್ನನ್ನು ಕರೆದುಕೊಂಡು ಹೋದರು. ಅಲ್ಲಿದ್ದ ಜನ ಹೊರಡುವ ಮುನ್ನ, ನನ್ನ ಸುಟ್ಟ ಕೈ ಮೇಲೆ ಇಂಕು, ಕಾಫಿ ಪುಡಿ ಏನೇನೋ ಹಾಕಲು ಸ್ಕೀಮ್ ಹಾಕಿದ್ದರು. ಹೃತ್ಪೂರ್ವಕವಾಗಿ ಪ್ರತಿಭಟಿಸಿದೆ ಅದನ್ನು. ಆಸ್ಪತ್ರೆಯಲ್ಲಿ ವೈದ್ಯರು ಬಂದು ಚಿಕಿತ್ಸೆ ನೀಡಿ ಮೂರು ತಿಂಗಳು ನನ್ನನ್ನು ಬ್ಯಾಂಡೇಜುಧಾರಿಯನ್ನಾಗಿಸಿ ಅಲಂಕರಿಸಿದರು. ಅಂದಿನಿಂದ ಮೆಡಿಕಲ್ ಸೈನ್ಸ್ ಬಗ್ಗೆ ಆಸಕ್ತಿಯೂ ಹೆಚ್ಚಿತು.

ಒಟ್ಟಿನಲ್ಲಿ ಪಟಾಕಿ ಅನ್ನೋದು ಬರೀ ಪ್ರಕೃತಿಯ ವಿನಾಶಕಾರಿಯಲ್ಲ, ನೇರವಾಗಿ ಮನುಷ್ಯನ ದೇಹವನ್ನು ಜ್ವಲಿಸಬಲ್ಲುದೆಂಬುದು ಸ್ವಾನುಭವದಿಂದ ಅರಿವಾಯಿತು. ಪುಣ್ಯಕ್ಕೆ ಮುಖಕ್ಕೆ ಸಿಡಿಯಲಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದರೂ ಎಲ್ಲರೂ. ನನಗೂ ಹಾಗೇ ಅನ್ನಿಸಿತು. ಕೈ ಮೇಲೆ ಬೃಹದ್ಗಾತ್ರದ ಗುರುತು ಉಳಿದಿರುವುದು ಪಾಠ ಕಲಿತದ್ದಕ್ಕೆ ಸರ್ಟಿಫಿಕೇಟು.

ಪಟಾಕಿ ಹೊಡೆಯುವುದನ್ನು ಬಿಟ್ಟುಬಿಟ್ಟೆ. ಕಾರಣ - ಒಂದು ಸ್ವಾರ್ಥಕ್ಕೆ. ಇನ್ನೊಂದು ಪ್ರಕೃತಿ ಪ್ರೇಮಕ್ಕೆ. ನಾನು ಕೈ ಸುಟ್ಟುಕೊಂಡೆ. ಪ್ರಕೃತಿ ಮಾತೆ ಪ್ರತಿ ಬಾರಿಯೂ ತನ್ನ ಮೈಯನ್ನೇ ಸುಟ್ಟುಕೊಳ್ಳುತ್ತಿದ್ದಾಳೆಂದು ನನಗೆ ಅರ್ಥವಾಗಲು ಹೆಚ್ಚು ದಿನಗಳು ಬೇಕಾಗಲಿಲ್ಲ. 'ಪರಿಸರ ಪ್ರೇಮಿ' ಅಂತ ದೊಡ್ಡದಾಗಿ ಹೇಳಿಕೊಂಡು ತಿರುಗುತ್ತೀನಲ್ಲಾ, ಏನು ಮಾಡಿದ್ದೀನಿ ಪ್ರಕೃತಿಗೆ ಎಂದು ಒಮ್ಮೊಮ್ಮೆ ಯೋಚನೆ ಬರುತ್ತೆ. ಆಗ ಇದನ್ನು ನೆನೆಸಿಕೊಂಡು ಸಮಾಧಾನ ಪಟ್ಟುಕೊಳ್ಳುತ್ತೇನೆ. ನಾನು ಪಟಾಕಿ ಹೊಡೆಯುವುದಿಲ್ಲ. ನಾನು ಪ್ಲಾಸ್ಟಿಕ್ ಬಿಸಾಡುವುದಿಲ್ಲ. ಹೀಗೆ... ನಾವು ಒಳ್ಳೆಯದನ್ನು ಮಾಡಬೇಕಿಲ್ಲ. ಕೆಟ್ಟದ್ದನ್ನು ಮಾಡದಿದ್ದರೆ ಅಷ್ಟೇ ಸಾಕು!!

ನನ್ನ ವಿದ್ಯಾರ್ಥಿಗಳಿಗೂ ನನ್ನ ಈ ಕಥೆ ಹೇಳುತ್ತಿರುತ್ತೇನೆ. ಮುನ್ನೂರಲ್ಲಿ ಮೂರು ಮಕ್ಕಳು ನನ್ನ ಕಥೆಯಿಂದ ಪಾಠವನ್ನು ಕಲಿತರೆ ಪ್ರಕೃತಿಗೆ ನಾನು ಸಲ್ಲಿಸುವ ಗೌರವ ಬೇಕಾದಷ್ಟಾಯಿತು.

ಸ್ಪೀಕ್ ಟು ನೇಚರ್ - ನೇಚರ್ ನನ್ನ ಜೊತೆ ಮಾತಾಡಿತ್ತು ಹನ್ನೊಂದು ವರ್ಷಗಳ ಕೆಳಗೆ. ಪ್ರಕೃತಿಯ ಅತಿಮುಖ್ಯ ಅಂಗವಾದ ಹವ್ಯವಾಹನನ ಮೂಲಕ, ಅರ್ಥಾತ್ ಬೆಂಕಿಯ ಮೂಲಕ. ನಾನು ಇಂದೂ ನೇಚರ್ ಜೊತೆ ಮಾತನಾಡುತ್ತಿದ್ದೇನೆ, ಚಾರಣಗಳ ಮೂಲಕ, ಪಕ್ಷಿವೀಕ್ಷಣೆಯ ಮೂಲಕ, ಸಾಹಸದ ಮೂಲಕ, ಬರೆಯುವುದರ ಮೂಲಕ, ಸ್ಮಿತೆ ಬೀರುವುದರ ಮೂಲಕ!!

ಈ ಘಟನೆಯನ್ನೋದಿದವರಿಗೂ ಥ್ಯಾಂಕ್ಸ್.

'ಕ್ಷಿತಿಜದೆಡೆಗೆ'ಗೆ ಒಂದು ವರ್ಷ ತುಂಬಿದ್ದಕ್ಕಾಗಿ ನನಗೆ ನನ್ನ ಶುಭಾಶಯಗಳು. ಇನ್ನೂ ಚೆನ್ನಾಗಿ ಕೆಲಸ ಮಾಡು ಅರುಣ!!

-ಅ
21.11.2007
7PM

Thursday, November 15, 2007

ನಗುವು ಸಹಜದ ಧರ್ಮ

ಕೃಪೆ:
--> ಚಿತ್ರ ಕಳುಹಿದ ರಶ್ಮಿಗೆ ಕೋಟಿ ನಮನಗಳು
--> ಗಂಡಭೇರುಂಡರಿಗೆ ವಿಶೇಷ ಥ್ಯಾಂಕ್ಸ್, ಅವರ ಬರಹದ ಟೈಟಲ್ ಒಂದನ್ನು ನಾನು ಕದಿಯಲು ಅನುಮತಿ ಕೊಟ್ಟಿದ್ದಕ್ಕೆ..

ಸಹಜ = ಸ್ವಾಭಾವಿಕ.. ಇದನ್ನು ನೈಸರ್ಗಿಕ ಅಂತಲೂ ಅನ್ನಬಹುದೇ? ಪ್ರಕೃತಿಯು ಕೋಟ್ಯಾಂತರ ರೀತಿಯಲ್ಲಿ ನಗುತ್ತೆ. ಬೆಟ್ಟಗಳಲ್ಲಿ, ನದಿಗಳಲ್ಲಿ, ಝರಿಗಳಲ್ಲಿ, ತೊರೆಗಳಲ್ಲಿ, ಹಿಮದಲ್ಲಿ, ಮಳೆಯಲ್ಲಿ, ಎಳೆಬಿಸಿಲುಗಳಲ್ಲಿ, ಹಸಿರಿನಲ್ಲಿ, ಪ್ರಾಣಿಗಳಲ್ಲಿ..

ಇಲ್ಲಿ ನಗುತ್ತಿರುವ ಪರಿಯನ್ನು ನೋಡಿ ಯಾರಿಗೆ ತಾನೆ ಮುಖದ ಮೇಲೊಂದು ಸ್ಮಿತೆ ಮೂಡುವುದಿಲ್ಲ?-ಅ
15.11.2007
11PM

Saturday, November 10, 2007

ದೀಪಾವಳಿ - ಮಕ್ಕಳೊಂದಿಗೆ..

ಇವತ್ತು ಪೇಪರ್ ತೆಗೆದು ನೋಡಿದರೆ ಬೇಸರದ ವಾರ್ತೆಗಳು. ದೀಪಾವಳಿಯ ಉಡುಗೊರೆಗಳು. ಅದರಲ್ಲೂ ಮಕ್ಕಳಿಗೆ ಸಿಕ್ಕ ಉಡುಗೊರೆಗಳು. ಎಲ್ಲಾ ಪೇಪರ್‍ಗಳಲ್ಲೂ ಬಂದಿರುತ್ತವೆ. ಆರು ವರ್ಷದ ಹುಡುಗ ಫ್ಲವರ್ ಪಾಟ್ ಸಿಡಿದು ಕಣ್ಣು ಕಳೆದುಕೊಂಡ, ಮೂರು ವರ್ಷದ ಮಗು ಲಕ್ಷ್ಮೀ ಪಟಾಕಿ ಹಚ್ಚಲು ಹೋಗಿ ಕೈಗೆ ಶೇ. 80 ಸುಟ್ಟುಕೊಂಡಿದೆ, ಹದಿನಾರು ವರ್ಷದ ಹುಡುಗಿಯೊಬ್ಬಳು ಆಟಮ್ ಬಾಂಬ್ ಸಿಡಿದು ಮುಖವೆಲ್ಲಾ ಸುಟ್ಟು ಹೋಗಿದೆ.. ಈ ರೀತಿ ವಾರ್ತೆ ಓದಲು ಯಾರಿಗೆ ಮನಸ್ಸಾಗುತ್ತೆ ಹೇಳಿ? ಆದರೂ ಪತ್ರಿಕೆಯವರು ಇದನ್ನೆಲ್ಲಾ ಪ್ರಕಟಿಸುತ್ತಾರೆ. ಪಟಾಕಿ ಹೊಡೆಯುವವರು ಹೊಡೆಯುತ್ತಲೇ ಇರುತ್ತಾರೆ.

(ಕೃಪೆ: ಹಿಂದು ಪತ್ರಿಕೆ)

ಅಕ್ಕನ ಮಗನಿಗೆ ಇನ್ನಿಲ್ಲದ ಪಾಠ ಹೇಳುವ ಕೆಲಸವನ್ನು ನಾನು, ಅಕ್ಕ ಮಾಡಿದೆವು. ಇಂಟರ್‍ನೆಟ್ ಅಲ್ಲಿ ತೋರಿಸಿದೆವು - ಪಟಾಕಿಯಿಂದ ಏನೇನು ಹಾನಿ ಅಂತ. ಅವನು ತಲೆಯಾಡಿಸಿದನೇ ಹೊರತು ಪಟಾಕಿ ಹೊಡೆಯುವುದನ್ನು ಬಿಡಲಿಲ್ಲ. ನಂತರ ನಾನು, ಅಕ್ಕ ನಿರ್ಣಯ ಮಾಡಿದ್ದೇನೆಂದರೆ, "ಮಕ್ಕಳಿಗೆ ಅವರಿಗೇ ಅರ್ಥ ಆಗಬೇಕು, ಇದು ಕೆಟ್ಟದ್ದು ಅಂತ. ನಾವು ಹೇಳೋಕೆ ಹೋದರೆ ನಮ್ಮನ್ನು ಬೈದುಕೊಂಡು ನಿಲ್ಲಿಸಬಹುದಷ್ಟೇ. ಅವರಿಗೆ ಮನಸ್ಸಲ್ಲಿ ಆಸೆ ಇದ್ದೇ ಇರುತ್ತೆ" ಅಂತ. ಆದರೆ ನನ್ನ ಅಳುಕೆಂದರೆ ಮಕ್ಕಳಿಗೆ ಅರ್ಥ ಆಗೋ ಅಷ್ಟರಲ್ಲಿ ಕಾಲ ಮೀರಿದರೇನಪ್ಪಾ ಅನ್ನೋದು. ಹಾಗಾಗದಿರಲಿ.

ಪಟಾಕಿಯಿಂದ ಪರಿಸರ ಮಾಲಿನ್ಯ ಆಗುತ್ತೆ ಅನ್ನೋದನ್ನು ನಾವು ಮೂರನೇ ತರಗತಿಯಿಂದಲೂ ಓದಿಕೊಂಡೇ ಬಂದಿದ್ದೇವೆ. ಅದರ ಬಗ್ಗೆ ಇಲ್ಲಿ ಬರೆಯೋದಿಲ್ಲ. ಪರಿಸರ ಮಾಲಿನ್ಯ ತಡೆಗಟ್ಟಬೇಕೆಂಬುದು ನಮಗೆ ಆದ್ಯತೆ ಇದ್ದಿದ್ದರೆ ಪಟಾಕಿಯನ್ನು ಖರೀದಿಸುವ ಕಾರ್ಯ ಮಾಡುತ್ತಲೇ ಇರಲಿಲ್ಲ. (ನಮಗೆ = ಜನಕ್ಕೆ). ಆದರೆ, ಬಹುಪಾಲು ಸೋ-ಕಾಲ್ಡ್ ವಿದ್ಯಾವಂತರು ತಮ್ಮ ಮಕ್ಕಳಿಗೆ ಅರ್ಥ ಆಗುವ ಭಾಷೆಯಲ್ಲಿ "ಪಟಾಕಿ ಹೊಡೆದರೆ ಅದರ ಸದ್ದಿನಿಂದ ಪಕ್ಷಿಗಳು, ಪ್ರಾಣಿಗಳು ಮಾನಸಿಕ ಒತ್ತಡಕ್ಕೊಳಗಾಗುತ್ತವೆ, ಹೊಗೆಯಿಂದ ಸಕಲ ಜೀವಿಗಳೂ ರೋಗ ರುಜಿನಗಳಿಗೆ ಗುರಿಯಾಗುತ್ತವೆ" ಅಂತ ಹೇಳುವ ಪ್ರಯತ್ನ ಮಾಡುವುದೇ ಇಲ್ಲ. ಆದರೆ ಒಂದನ್ನು ಹೇಳಿರೋದನ್ನು ಕೇಳಿದ್ದೀನಿ ಮಕ್ಕಳಿಗೆ. "ನೀವು ಪಟಾಕಿ ಸುಡುತ್ತಿಲ್ಲ, ದುಡ್ಡನ್ನು ಸುಡುತ್ತಿದ್ದೀರ" ಅಂತ. ಮಕ್ಕಳಿಗೆ "ನಮ್ಮಪ್ಪ ಜುಗ್‍-ನನ್-ಮಗ" ಎಂಬ ಭಾವನೆ ಬರುವ ರೀತಿಯಲ್ಲಿ ಮಾತನಾಡುತ್ತಾರೆ. ಮಕ್ಕಳನ್ನು ದಾರಿಗೆ ತರಲು ಶಾಲೆ, ಮೇಷ್ಟ್ರು ದುಡಿಯುವಂತೆ ಪೋಷಕರೂ ಆ ಕೆಲಸ ಮಾಡಬೇಕು. ಅನೇಕ ಪೋಷಕರಿಗೆ ಈ ವಿಷಯಗಳೇ ಗೊತ್ತಿರೋದಿಲ್ಲ. ಮಕ್ಕಳು ಶಾಲೆಯಲ್ಲಿ ಪಟಾಕಿಯಿಂದ ಪರಿಸರ ಮಾಲಿನ್ಯ ಅಂತ ಹೇಳಿಕೊಟ್ಟಿದ್ದನ್ನು ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಗುಂಡು ಗುಂಡಾದ ಅಕ್ಷರಗಳಲ್ಲಿ ಬರೆದು ಒಳ್ಳೆಯ ಅಂಕವನ್ನು ಪಡೆದುಕೊಳ್ಳುತ್ತಾರೆ, ಆದರೆ ಮನೆಯಲ್ಲಿ ಸಾವಿರಗಟ್ಟಲೆ ಪಟಾಕಿ ಸಿಡಿಸಿರುತ್ತಾರೆ. ಅಪ್ಪ-ಅಮ್ಮಂದಿರು ಈ ವಿಷಯದಲ್ಲಿ ತಲೆ ಹಾಕುವುದೇ ಇಲ್ಲವಲ್ಲಾ..

(ಕೃಪೆ: ಹಿಂದು ಪತ್ರಿಕೆ)

ನಾನು ಕೂಡ ಪಟಾಕಿ ಹೊಡೆಯುತ್ತಿದ್ದೆ. ಕೈ ಭಯಂಕರವಾಗಿ ಸುಟ್ಟುಕೊಂಡೂ ಇದ್ದೇನೆ - ಫ್ಲವರ್ ಪಾಟ್ ಸಿಡಿದು. ಕೈಯಲ್ಲಿನ ಕಪ್ಪು ಗುರುತು ಮುಂಗೈಯಲ್ಲಿ ರಾರಾಜಿಸುತ್ತಿದೆ. ಪುಣ್ಯಕ್ಕೆ ನನ್ನ ಮುಖಕ್ಕೆ ಸಿಡಿಯಲಿಲ್ಲ ಅದು. ನನ್ನ ಮುಖ ಕಂಡರೆ ಸ್ವಲ್ಪ ಕರುಣೆಯಿತ್ತೇನೋ. ಮೂರು ತಿಂಗಳು ಸತತವಾಗಿ ಒದ್ದಾಡಿದ್ದೇನೆ ಕೈಯ್ಯೂದಿಸಿಕೊಂಡು. ಆದರೆ, ಆ ಸುಟ್ಟುಕೊಂಡ ಭೀತಿಯಿಂದ ಪಟಾಕಿ ಹೊಡೆಯೋದನ್ನು ಬಿಡಲಿಲ್ಲ. ಸುಡೋದಲ್ಲದೆ ಇನ್ನು ಏನೇನು ಹಾನಿ ಮಾಡುವ ಸಾಮರ್ಥ್ಯ ಈ ಪಟಾಕಿ ಅನ್ನೋ ವೈರಿಗೆ ಇದೆ ಅನ್ನೋದನ್ನು ಸ್ಟಡಿ ಮಾಡಲು ಆರಂಭಿಸಿದೆ. ಸುಡುವುದು ಬೆಂಕಿಗೆ ಸಹಜ, ರೋಗ ತರಿಸುವುದು ರಂಜಕ ಗಂಧಕಗಳಿಂದ ಉತ್ಪಾದನೆಯಾಗುವ ವಿಷಕ್ಕೆ ಸಹಜ, ಪ್ರಾಣಿಗಳನ್ನು ಪಕ್ಷಿಗಳನ್ನು ಮಾನಸಿಕವಾಗಿ ಕುಗ್ಗಿಸಿ ಕೊಲ್ಲುವುದು ಯಾವುದೇ ಕರ್ಕಶ ಸದ್ದಿಗೆ ಸಹಜ, ಉಸಿರಾಡುವ ಗಾಳಿಯನ್ನೇ ಕಲುಶಿತಗೊಳಿಸಿ ಜೀವಿಗಳನ್ನು ಕೊಲ್ಲುವುದು ಹೊಗೆಗೆ ಸಹಜ. ಇದ್ಯಾವುದೂ ಅರ್ಥ ಆಗದೇ ಇರುವುದು ನಮ್ಮ ವಿದ್ಯಾವಂತ ಸಮೂಹಕ್ಕೆ ಸಹಜ ಅನ್ನುವುದು ಮಾತ್ರ ದುರಂತ. ಇವಿಷ್ಟೂ ಹೇಗೋ ಅರ್ಥ ಆಗೋಯ್ತು. ಪಟಾಕಿಯನ್ನು ದ್ವೇಷಿಸಲು ಆರಂಭಿಸಿದೆ.

ಮಕ್ಕಳಿಗೆ "ಬೆಳಕಿನ", "ದೀಪದ" ಪ್ರಾಮುಖ್ಯತೆಯನ್ನು ವಿವರಿಸೋಣ. "ಕತ್ತಲಿನಿಂದ ಬೆಳಕಿನೆಡೆಗೆ ನಡೆಸು ಹೇ ದೇವಾ" ಅಂತ ದಿನನಿತ್ಯ ಪ್ರಾರ್ಥಿಸುವ ಜನರನ್ನು "ಬೆಳಕಿನಿಂದ ಕತ್ತಲೆಡೆಗೆ" ಕರೆದೊಯ್ವ ಸಿಡಿಮದ್ದುಗಳನ್ನು ದೂರ ಇಡುವುದು ಸಾತ್ವಿಕವಾಗಿ ಮಕ್ಕಳಿಗೆ ಅರ್ಥವಾಗಲಿ. ತಮ್ಮದೇ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡು ಆ ಮಕ್ಕಳ ಭವಿಷ್ಯಕ್ಕೆ ಮಸಿಬಳೆಯುವ ಪಟಾಕಿ ತಯಾರಕರಿಗೆ ಧಿಕ್ಕಾರ ಹೇಳಲು ನಮ್ಮ ಮಕ್ಕಳಿಗೆ ಹೇಳಿಕೊಡೋಣ. ಬೀದಿಬೀದಿಯಲ್ಲಿ ವಾಹನಗಳನ್ನೂ, ಪ್ರಾಣಿಗಳನ್ನೂ, ಪಾದಚಾರಿಗಳನ್ನೂ ಲೆಕ್ಕಿಸದೆ ಸಿಡಿಸುವ ಪುಂಡರನ್ನು ಖಂಡಿಸಲು ಮಕ್ಕಳಿಗೆ ತಿಳಿಹೇಳೋಣ. ದೀಪಾವಳಿಯು ಬೆಳಕಿನ ಹಬ್ಬವಷ್ಟೇ, ಕರ್ಕಶ ಶಬ್ದದ ಹಬ್ಬವಲ್ಲ ಅನ್ನುವುದನ್ನು ಅರಿಕೆ ಮಾಡಿಕೊಡೋಣ. ಮೌನದಲ್ಲಿ ಬೆಳಕನ್ನು ಜಗತ್ತಿಗೇ ಚೆಲ್ಲೋಣ. ಪ್ರಕೃತಿಮಾತೆಗೆ ಸಲ್ಲಿಸುವ ಪೂಜೆ ದೀಪಾವಳಿಯಲ್ಲಾಗಲಿ.

-ಅ
10.11.2007
11.15AM

Thursday, November 01, 2007

ಮಳೆಗಾಲ?

ಮಳೆಗಾಲ ಮುಗಿಯೋ ಹಾಗೆ ಕಾಣಿಸುತ್ತಲೇ ಇಲ್ಲ. ಡಿಸೆಂಬರ್ ‍ವರೆಗೂ ಬರುತ್ತೆ ಅನ್ನಿಸುತ್ತೆ ಮಳೆ.

ಚಳಿ ಕೂಡ ಈ ವರ್ಷ ವಿಪರೀತ ಇರುತ್ತಂತೆ, ಪತ್ರಿಕೆಗಳಲ್ಲಿ ಬರೆದಿದ್ದರು. ಎರಡು ಡಿಗ್ರೀ ಸೆಲ್ಷಿಯಸ್‍ಗೆ ಹೋದರೂ ಅಚ್ಚರಿಯಿಲ್ಲ ಬೆಂಗಳೂರಿನಲ್ಲಿ ಅಂತ ಮೀಟಿಯರಾಲಜಿ ಇಲಾಖೆಯವರು ಹೇಳಿದ್ದಾರೆ.

ಪೇಪರ್‍ನವರು ಹೇಳಿದ ವಿರುದ್ಧವೇ ಆಗೋದು ಸಾಮಾನ್ಯ. ಮೊನ್ನೆ "Rainfall: Nill" ಅಂತ ಪೇಪರ್ ಅಲ್ಲಿ ಕೊಟ್ಟಿದ್ರು. ಬೆಂಗಳೂರು ಕೊಚ್ಚಿಕೊಂಡು ಹೋಗೋ ಅಷ್ಟು ಮಳೆ. "Heavy rains are expected in next 48 hours" ಅಂತ ಕೊಟ್ಟಿದ್ರು, ಆಗ ಬಿಸಿಲೋ ಬಿಸಿಲು.

ಮಳೆ ಸುರಿದು ಕಾಡೆಲ್ಲಾ ಹಸಿರಾಗಿದೆ. ರಸ್ತೆಯೆಲ್ಲಾ ಹೆಸರಿಗಿಲ್ಲದಂತಾಗಿದೆ. ಪೊದೆಗಳು ಮರಗಳಾಗಿಬಿಟ್ಟಿವೆ. ಬೆಳೆಗಳು ನಾಶವಾಗುತ್ತಿವೆ. ನಗರಗಳು ಕೊಚ್ಚೆಯ ಪ್ರವಾಹದಲ್ಲಿ ಈಜುತ್ತಿವೆ. ಅಂತರ್ಜಲವು "ಇನ್ನೂ ಬೇಕು, ಎಲ್ಲಾ ಖಾಲಿ ಆಗೋಗಿದೆ, ಇನ್ನೂ ಬರಲಿ ಇನ್ನೂ ಬರಲಿ.." ಎಂದು ಹಸಿವೆಯಿಂದ ಬಳಲುತ್ತಿದೆ. ಕೆರೆಗಳು, ಕೆರೆಗಳಿದ್ದ ಸ್ಥಳಗಳು "ನಮಗೂ ಜೀವ ಸಿಗುತ್ತಿದೆ" ಎಂದು ಮುಗುಳ್ನಗೆ ಬೀರುತ್ತಿವೆ. ಸಂಜೆ ಆರುಗಂಟೆಗೇ ಎಂಟುಗಂಟೆಯಾಗಿರೋ ಭಾವನೆ.

ಮತ್ತೆ ಬೆಂಗಳೂರಿನ ಮುಂದಿನ ಬೇಸಿಗೆಯಲ್ಲಿ ಸೂರ್ಯನೇ ಭೂಮಿಗೆ ಇಳಿದು ಬಂದು ಬಿಡುವ ಸಂಭವವಿದೆಯೆಂದು ಇಲಾಖೆಯವರು ಹೇಳುತ್ತಾರೆ. ಆಗಲೇ ಬೇಕು, ಎಲ್ಲಾ extremesನೂ ನೋಡಲೇ ಬೇಕಲ್ಲವೇ? ಸರ್ವನಾಶದ ಜಾಡು ಹಿಡಿದಿರುವ ಊರು ಇದಾಗಿಬಿಟ್ಟಿದೆ. ಪ್ರಕೃತಿಯ "ಹಿಟ್ ಲಿಸ್ಟ್" ಅಲ್ಲಿ ಮುಂದಿನದು ಬೆಂಗಳೂರೇ! ದೆಹಲಿ ಮುಂಬಯಿಗಳ ಜೊತೆ ಸ್ಪರ್ಧೆ!! ಎಲ್ಲದಕ್ಕೂ ಕಾರಣಕರ್ತರು ನಾವೇ ಅಲ್ಲವೇ?

-ಅ
01.11.2007
11AM

ಒಂದಷ್ಟು ಚಿತ್ರಗಳು..