Thursday, September 13, 2007

ಗಣಪತಿ ಬಪ್ಪಾ 'ಮೋರಿ'ಯಾ..ಗಣೇಶ ಚತುರ್ಥಿಯೆಂದರೆ ನಮ್ಮಲ್ಲಿ ಬಹಳ ದೊಡ್ಡ ಸಡಗರದ ಉತ್ಸವ. ಮನೆಮನೆಯಲ್ಲಿ ಬೀದಿಬೀದಿಯಲ್ಲಿ ತರಹೇವಾರಿ ಅವತಾರದ ಗಣೇಶನನ್ನು ಪ್ರತಿಷ್ಠಾಪಿಸುತ್ತೇವೆ. ಮನೆಯಲ್ಲಾದರೆ ಬೆಳಿಗ್ಗೆ ಹೊತ್ತು ಪೂಜೆ, ಸಂಜೆ ಹೊತ್ತು ಕಥೆ ಓದುವುದು. ಬೀದಿಯದಾದರೆ, ಬೆಳಿಗ್ಗೆ ಪೂಜೆ, ಸಂಜೆಯಾದರೆ ಸಿನಿಮಾ ರಂಜನೆ. 'ಶುಕ್ಲಾಂಬರಧರಂ ವಿಷ್ಣುಮ್' ಇಂದ ಹಿಡಿದು 'ಅನಿಸುತಿದೆ ಯಾಕೋ ಇಂದು..' ವರೆಗೂ ಗಣೇಶನಿಗೆ ಕೇಳಿಸುತ್ತೇವೆ. ಗಣೇಶ ನಮಗೆ ಬರೀ ದೇವರು ಮಾತ್ರವಾಗಿಲ್ಲ. ಮನರಂಜನೆಯ ಮೂಲಪುರುಷನೂ ಆಗಿದ್ದಾನೆಂಬುದಕ್ಕೆ ನಮ್ಮಲ್ಲಿ ಆಚರಿಸುವ ಉತ್ಸವಗಳೇ ಸಾಕ್ಷಿ.

ಇವೆಲ್ಲಾ ಇರಲೇ ಬೇಕು. ಸಂತಸ ಪಡಲಲ್ಲದೆ ಹಬ್ಬಗಳ ಗುರಿಯು ಇನ್ನೇನು? ನಮಗೆ ಸಂತಸವಾದರೆ ಗಣಪನಿಗೂ ಸಂತಸವಾದಂತೆಯೇ. ಹಾಡು ಕುಣಿತಗಳಿಗೆ ಗಣಪನೆಂದಿಗೂ ನೊಂದಿಲ್ಲ. ಬೇಕಾದರೆ ಗಣೇಶನನ್ನೇ ಕೇಳಿ ನೋಡಿ. 'ಸಹಾರ ಪತ್ರಿಕೆ'ಗೆ ಗಣೇಶ ನೀಡಿದ ಸಂದರ್ಶನದಲ್ಲಿ ಹಾಗೇ ಹೇಳಿದ.


"ಹೌದು, ನಾನು ಬಹಳ ವರ್ಷಗಳಿಂದ ಪಿ.ಬಿ.ಶ್ರೀನಿವಾಸ್, ಎಸ್. ಜಾನಕಿಯವರ ಕಂಠಸಿರಿಯ ಸಂಗೀತವನ್ನು ಕೇಳುತ್ತಲೇ ಇದ್ದೇನೆ. ಪ್ರತೀ ಸಲವೂ ಆನಂದವಾಗುತ್ತಿರುತ್ತೆ. ನನ್ನನ್ನು ಎಲ್ಲಾ ದೇವರುಗಳಂತೆ ಕೆತ್ತುತ್ತೀರ. ಇದರಿಂದ ನನಗೆ ಹೆಮ್ಮೆ. ಎಲ್ಲಾ ಜಾತಿಯ, ಎಲ್ಲಾ ಮತಗಳ, ಎಲ್ಲಾ ವರ್ಗದವರ ಪ್ರತಿನಿಧಿ ನಾನು ಎಂಬ ಹೆಮ್ಮೆ ನನಗೆ ಇದ್ದೇ ಇರುತ್ತೆ. ವಿಷ್ಣುವಿನ ಆಕಾರದಲ್ಲಿ, ನನ್ನ ತಂದೆಯ ಆಕಾರದಲ್ಲಿ, ಬ್ರಹ್ಮನ ಆಕಾರದಲ್ಲೂ ನನ್ನನ್ನು ಕೆತ್ತಿದ್ದೀರ. ಇಷ್ಟೇ ಅಲ್ಲದೆ, ಸಹೋದರ ಅಯ್ಯಪ್ಪ, ಕೃಷ್ಣ, ಬುದ್ಧ, ಏಸು, ಕೊನೆಗೆ ಗಾಂಧಿಯ ಆಕಾರದಲ್ಲೂ ನನ್ನನ್ನು ಕೆತ್ತಿದ್ದಾರೆ ನೋಡಿ. ನನಗೆ ಇದರಿಂದ ಬಹಳ ಖುಷಿಯೇ." ಎಂದ ಗಣೇಶ ಕೆಲವು ಸಂಗತಿಗಳಿಗೆ ಬೇಸರ ಪಟ್ಟುಕೊಂಡಂತೆ ವರದಿಗಾರರಿಗೆ ತೋರಿತು.

ಈ ಬಗ್ಗೆ ಕೇಳಿದಾಗ, "ಕೆಲವು ಸಂಗತಿಗಳು ನಿಜಕ್ಕೂ ಬೇಸರ ತರಿಸುತ್ತವೆ. ನೀವು ಮನುಷ್ಯರು ಮಾಡುವ ಕೆಲವು ಅಸಹ್ಯ ಕೆಲಸಗಳಿಂದ. ಹಾಡು ಕುಣಿತ ಸರಿ, ಆದರೆ ಊರಿಗೆಲ್ಲಾ ಕೇಳಿಸುವಷ್ಟು ಜೋರಾಗಿ ಹಾಕುತ್ತೀರ. ನನಗೇನೋ ದೊಡ್ಡಕಿವಿ ಇದೆ, ಆದರೆ ಎಲ್ಲಾ ಜನರಿಗೂ, ಎಲ್ಲಾ ಪ್ರಾಣಿಗಳಿಗೂ ಅದೇ ಥರ ಇಲ್ಲವಲ್ಲಾ, ಅವರ ಕಿವಿಗಳಿಗೆ, ಅವರ ಹೃದಯಗಳಿಗೆ ತೊಂದರೆಯಾಗುವುದನ್ನು ನೆನೆಸಿಕೊಂಡರೇನೇ ಹಿಂಸೆಯಾಗುತ್ತೆ." ಎಂದು ಹಾಸ್ಯದಲ್ಲೂ ನೋವನ್ನು ಹೇಳಿಕೊಂಡ. ನಂತರ ಗಂಭೀರ ವಿಷಯವೊಂದನ್ನು ಜನರಿಗೆ ಮನದಟ್ಟು ಮಾಡಲು ಯತ್ನಿಸಿದ ಗಣಪ, "ಕೆಮಿಕಲ್ಲು ತುಂಬಿದ ಬಣ್ಣವನ್ನು ನನ್ನ ಮೂರ್ತಿಗಳ ಮೇಲೆ ಬಳಿಯುವುದಾದರೂ ಏತಕ್ಕೆ ಅಂತ ನನಗೆ ಅರ್ಥವಾಗಿಲ್ಲ. ಹೀಗೆ ಮಾಡಿದಾಗ ಮೂರ್ತಿಯನ್ನು ವಿಸರ್ಜನೆ ಮಾಡುವಾಗ ನೀರಿನಲ್ಲಿರುವ ಪ್ರಾಣಿ, ಪಕ್ಷಿ, ಗಿಡಗಳೆಲ್ಲಾ ಸತ್ತುಹೋಗುತ್ತವೆ. ಇನ್ನೊಂದು ಜೀವಿಯನ್ನು ಸಾಯಿಸಿಯಾದರೂ ಹಬ್ಬ ಮಾಡುವ ದುಷ್ಚಟ ನಿಮಗೇಕೆ? ಹಬ್ಬ ಎಂದರೆ ಸಂತೋಷ ಇರಬೇಕು, ಆದರೆ ಆ ಸಂತೋಷ ಇನ್ನೊಬ್ಬರಿಗೆ ನೋವುಂಟು ಮಾಡಬಾರದು. ಈಗ ನೀವು ನಗರಾಭಿವೃದ್ಧಿಯ ಹೆಸರಿನಲ್ಲಿ ಇರೋ ಮರಗಳನ್ನೆಲ್ಲಾ ಕಡಿದಾಗಿದೆ, ಕೆರೆಗಳನ್ನು ಬರಿದಾಗಿಸಿಯೂ ಆಗಿದೆ. ನನ್ನ ಪೈಂಟ್ ಮಾಡಿದ ಮೂರ್ತಿಗಳನ್ನು ಕೆರೆಗಳಲ್ಲಿ ಬಿಡುವ ಇರುಳಿನಲ್ಲಿ ಎಲ್ಲಾ ಜಲಚರಗಳೂ, ಗಿಡಗಳೂ, ಪ್ರಾಣಿಗಳೂ ನನ್ನ ಸನ್ನಿಧಿಗೆ ಬಂದು ಪ್ರಾರ್ಥನೆ ಮಾಡುತ್ತವೆ, 'ಈ ಮನುಷ್ಯನಿಂದ ನಮಗೆ ಉಳಿಗಾಲವೇ ಇಲ್ಲ ಗಣಪ, ನಿನ್ನ ಮೂರ್ತಿ ವಿಸರ್ಜನೆ ಮಾಡುತ್ತಾರೆ, ನಾವು ನಮ್ಮ ಪ್ರಾಣ ವಿಸರ್ಜನೆ ಮಾಡುತ್ತೇವೆ, ನಮ್ಮನ್ನು ಕಾಪಾಡು' ಎಂದು. ಪೈಂಟ್ ಮಾಡಿದ ಮೂರ್ತಿಗಳನ್ನು ಬಳಸಬೇಡಿ, ಬದಲಿಗೆ ಮಣ್ಣಿನ ಮೂರ್ತಿಗಳನ್ನು ಹಾಗೇ ಪ್ರತಿಷ್ಠಾಪಿಸಿ ಎಂದು ಜಗತ್ತಿಗೆ ಸಾರುವಿರಾ? ಇದು ನನ್ನ ಪ್ರಾರ್ಥನೆ!" ಎಂದು ದೇವರೇ ಪ್ರಾರ್ಥನೆ ಮಾಡಿಕೊಂಡಾಗ ವರದಿಗಾರರು ಮಂಕಾದರು.


ಮಾತು ಮುಂದುವರೆಸಿದ ಗಣೇಶ, "ಹೀಗೆ ಎಲ್ಲಾ ಕೆರೆಗಳನ್ನು ಬರಿದಾಗಿಸಿದ ಮೇಲೆ ನನ್ನ ಮೂರ್ತಿಗಳನ್ನು ಎಲ್ಲಿ ವಿಸರ್ಜಿಸುತ್ತೀರ? ಪೈಂಟ್ ಮಾಡಿದ ಮೂರ್ತಿಗಳನ್ನು ವಿಸರ್ಜನೆ ಮಾಡಿದರೆ ಕಡಲೂ ಸಹ ಮೋರಿಯಾಗುವುದು. ಆಗ ಘೋಷಣೆ ಕೂಗಿ ನನ್ನ ಮೂರ್ತಿಯನ್ನು ವಿಸರ್ಜನೆ ಮಾಡಿ: "ಗಣಪತಿ ಬಪ್ಪಾ 'ಮೋರಿ'ಯಾ" ಎಂದು. ಎಲ್ಲರಿಗೂ ಒಳ್ಳೆಯದಾಗಲಿ." ಎಂದು ಹೇಳುತ್ತಾ ಸಂದರ್ಶನವನ್ನು ಮುಕ್ತಾಯಗೊಳಿಸಿಬಿಟ್ಟ.


ಗಣೇಶನ ಈ ಸಂದೇಶಗಳನ್ನು ಮನದಲ್ಲಿಟ್ಟುಕೊಂಡು ಯಾರಿಗೂ ತೊಂದರೆಯಾಗದಂತೆ ಯಾವ ಜೀವಿಗಳಿಗೂ ಹಾನಿಯುಂಟಾಗದಂತೆ ಹಬ್ಬವನ್ನಾಚರಿಸೋಣ. ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು..

-ಅ
13.09.2007
5.30PM

8 comments:

 1. "ಇನ್ನೊಂದು ಜೀವಿಯನ್ನು ಸಾಯಿಸಿಯಾದರೂ ಹಬ್ಬ ಮಾಡುವ ದುಷ್ಚಟ ನಿಮಗೇಕೆ?"

  --ಒಪ್ಪಿದೆ.. ಬೇರೆ ಜೀವಿಗಳನ್ನೂ ಬದುಕೋಕ್ಕೆ ಬಿಟ್ಟು ನಾವೂ ಬದುಕೋದು ಕಲೀಬೇಕು.. live and let live ಅನ್ನೋ ಹಾಗೆ...

  ಜನತೆಗೆ educative-ಆಗಿ ಇರೋ ತರಹದ ವಿಷಯವನ್ನ ಬಹಳ ವಿಭಿನ್ನವಾಗಿ, ಸುಂದರವಾಗಿ ನಿರೂಪಿಸಿದ್ಯ.. ಓದಿ ಖುಷಿ ಆಯ್ತು... :-)

  ReplyDelete
 2. ಬರಿಯ ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸಲು ತಯಾರಾಗಿದ್ದರೂ ಪೈಂಟ್ ಇಲ್ಲದ ಮೂರ್ತಿಗಳು ಸಿಗುವುದೇ ಕಷ್ಟವಾಗಿದೆ. ಇಂಥ ದುಸ್ಥಿತಿ ಬಂದಿರುವುದು ವಿಷಾದನೀಯ

  ReplyDelete
 3. paint oDediruva moorthigalannu karidimadadhe bari mannina moorthiyannu karidhe maaduvavaru thumba aproopa
  but adara bagge jAgruthi mudisabeku.
  ny way namma maneli paint odideiro moorthiyannu thandidddu nanage santhosavaaithu

  nimma i article vibbinavagide.

  ReplyDelete
 4. [ಗಂಡಭೇರುಂಡ] ಗಣೇಶ ಹೇಳಿದ್ದಕ್ಕೆ ನೀನು ಒಪ್ಪಿದೆಯೆಂಬ ವಿಷಯವನ್ನು ಗಣೇಶನಿಗೆ ತಲುಪಿಸುತ್ತೇನೆ.

  ಖುಷಿಯಾಯ್ತು ಎಂದಿದ್ದಕ್ಕೆ ನನಗೂ ಖುಷಿ ಆಯ್ತು. ನಿನ್ನ ಖುಷಿಯನ್ನು ಜಗತ್ತಿನೊಂದಿಗೆ ಹಂಚಿಕೊ, ಪ್ರಕೃತಿಪ್ರೇಮದ ಜಾಗೃತಿಯನ್ನು ಮೂಡಿಸುವುದರ ಮೂಲಕ..

  [ಶ್ರೀಧರ] ವಿಭಿನ್ನವಾಗಿದೆ ಎಂದರೆ ಭಯ ಆಗುತ್ತೆ, ಸಕ್ಕತ್ ಕೆಟ್ಟದಾಗಿದೆ ಅಂತ ಆದರೂ ಅರ್ಥ ಆಗ್ಬೋದು ಅಂತ..

  [ಶ್ರೀಕಾಂತ್] ಕೊಂಡುಕೊಳ್ಳುವವರ ಮೇಲೆ ಅವಲಂಬಿತ ಶ್ರೀಕಾಂತ್.. ನೀನು ಅವರು ಏನು ಮಾರಿದರೂ ಕೊಂಡುಕೊಂಡರೆ ಹಾಗೇನೇ ಆಗೋದು..

  [ಸಮನ್ವಯನ] ನಿಮ್ಮ ಮನೆಯಲ್ಲಿ ಪೈಂಟ್ ಮಾಡದ ಗಣೇಶನನ್ನು ಕೂರಿಸಿದ್ದಕ್ಕೆ ಗಣೇಶನಿಗೆ ಒಂದು ಥ್ಯಾಂಕ್ಸ್..

  ReplyDelete
 5. [Parisarapremi]: Neen yaake negative part thagontya???...Ond glass nalli arda lota haalu idre...adralli "abba...ardha haalu idhe " anthyo.. athava..." bari ardha haalu maatra idhe" anthyo... uttara ninage bittaddu... :-) naanu munche ardha haal maatra ide ankotidde....aadre ivaga koncha change aagbittidini... :-|

  ReplyDelete
 6. "mOri kaddha kaLLa"!! :)
  Tumba chanaagidhe nim message!
  Ganpappa is proud of u!

  ReplyDelete
 7. ಈ ಲೆಖನದ ಪ್ರತಿಯೊಂದು ಮಾತೂ ಶತಪ್ರತಿಶತ ಸತ್ಯ.

  ReplyDelete

ಒಂದಷ್ಟು ಚಿತ್ರಗಳು..