Thursday, September 27, 2007

ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ...

"ನಿಮ್ಮದು ಯಾವ ಊರು?"

"ಮುಂಬೈ. ನಿಮ್ಮದು?"

"ಮೈಸೂರು"

"ಸಧ್ಯ, ಈ ದೇಶದವರೇ ಆಗಿದ್ದೀರಲ್ಲಾ, ಆ ಪಾಕಿಸ್ತಾನದವರು ನೋಡಿ, ಎಲ್ಲಾ ಭಯೋತ್ಪಾದಕರು"

"ಅಮೇರಿಕಾದವರು ಏನೂ ಕಮ್ಮಿ ಇಲ್ಲ ಬಿಡಿ"

"ಇದ್ದಿದ್ದರಲ್ಲಿ ಆಫ್ರಿಕಾದವರೇ ವಾಸಿ, ಯಾರ ತಂಟೆಗೂ ಹೋಗಲ್ಲ, ಅವರಿಗೆ ರಷ್ಯಾದವರ ಥರ ದ್ವೇಶ ಬೇಕಿಲ್ಲ."

"ಚೈನಾದವರಿಗೆ ನಮ್ಮ ದೇಶದ ಮೇಲೆ ಏನೋ ಸಿಟ್ಟು, ಒಳಗೊಳಗೇ ಕುತಂತ್ರ ಮಾಡ್ತಾ ಇದ್ದಾರೆ.."

ಅಬ್ಬಬ್ಬಬ್ಬಬ್ಬಾ... ಎಷ್ಟೊಂದು ದ್ವೇಷ.. ಅಲ್ಲಲ್ಲ, ಎಷ್ಟೊಂದು ದೇಶ!! ಇವರ ತಲೆ ಕಂಡರೆ ಅವರಿಗಾಗಲ್ಲ, ಅವರ ತಲೆ ಕಂಡರೆ ಇವರಿಗಾಗಲ್ಲ.

ಇಲ್ಲೊಬ್ಬರನ್ನು ಪರಿಚಯ ಮಾಡ್ಕೊಡ್ತೀನಿ, ಇವರಿಗೆ ನಮ್ಮ ಹಾಗೆ ಆ ದೇಶ ಈ ದೇಶ ಅಂತ ಇಲ್ಲ. ಇವರನ್ನು ಆರ್.ಟಿ. ಅಂತ ಸಧ್ಯಕ್ಕೆ ಕರೆಯಬಹುದು. ಪೂರ್ಣ ಹೆಸರನ್ನು ಆಮೇಲೆ ಹೇಳ್ತೀನಿ.

ಇವರು ಮಳೆಗಾಲ ಬರ್ತಿದ್ ಹಾಗೇನೇ, ಮೈಸೂರಿಗೆ ಬಂದ್‍ಬಿಡ್ತಾರೆ. ಎಲ್ಲಿಂದ ಗೊತ್ತಾ? ಪಾಕಿಸ್ತಾನದ ಪೇಶಾವಾರದಿಂದ. ಇವರು ನಮ್ಮವರೇ ಅಲ್ಲವೇ ಅಂತ ಯಾರೋ ಕನ್ನಡಿಗರು ಚೆಕ್‍ಪೋಸ್ಟ್ ಅಲ್ಲಿ ಮಾತನಾಡಿಕೊಂಡರು, ಪಕ್ಕದವರು, ಉಹ್ಞುಂ, ಇವರು ಪೇಷಾವಾರದಿಂದ ಬಂದವರು, ಪ್ರತಿ ಮಳೆಗಾಲಕ್ಕೆ ಮೈಸೂರಿಗೆ ಬರ್ತಾರೆ ಅಂತ ಹೇಳಿದರು. ಆರ್.ಟಿ. ಮಾತ್ರ ಜೊಳ್ಳನೆ ನಕ್ಕು ಮೈಸೂರಿನಲ್ಲಿ ಮಾಡಿಟ್ಟಿರುವ ಮನೆಯನ್ನು ಹೊಕ್ಕ. ಮೈಸೂರಿನಲ್ಲಿ ಒಂದು ದೊಡ್ಡ ಸಂಸಾರವನ್ನೇ ಹೂಡಿದ್ದ ಆರ್.ಟಿ. ಮಳೆಗಾಲ ಮುಗೀತಿದ್ದ ಹಾಗೆ, ಗಂಟು ಮೂಟೆ ಕಟ್ಟಿಕೊಂಡು ವಾಪಸ್ ಪೇಷಾವಾರಕ್ಕೆ ಹೊರಟುಬಿಡುವುದು ಇವನ ರೂಢಿ. ಇನ್ನೊಂದು ವಿಷಯ ಗೊತ್ತಾ, ಈತನ ಬಳಿ ಪಾಸ್‍ಪೋರ್ಟ್ ಆಗಲೀ, ವೀಸಾ ಆಗಲೀ ಇಲ್ಲವೇ ಇಲ್ಲ. ಈತ ಪಾಕಿಸ್ತಾನಕ್ಕೂ ಪ್ರಜೆ, ಭಾರತಕ್ಕೂ ಪ್ರಜೆ. ಬಿಟ್ಟರೆ ಆಸ್ಟ್ರೇಲಿಯಾ ಪ್ರಜೆ ಬೇಕಾದರೂ ಆಗುವ ತಾಕತ್ತು ಇದೆ, ಯಾವ ಸರ್ಕಾರವೂ ಈತನ ವಿರುದ್ಧ ಮೊಕದ್ದಮೆ ಹೂಡಲಾಗುವುದಿಲ್ಲ. ಈತ ವಿಶ್ವ ಮಾನವ ಸಂದೇಶವನ್ನು ಅರೆದು ಕುಡಿದಿದ್ದಾನೆ. ಈತನ ಪೂರ್ಣ ಹೆಸರು ರಿವರ್ ಟರ್ನ್ ಅಂತ!!
ಗಡಿಗಳನ್ನು ಗೆರೆಗಳನ್ನು ಹಾಕಿಕೊಂಡವರು ನಾವೇ. ಮನುಷ್ಯರೆಂಬ ಜೀವಿಗಳು. ಆ ಗೆರೆಗಳಿಗೆ ಕಿತ್ತಾಡುವುದೂ ನಾವೇ. ನಮ್ಮ ರಾಜ್ಯ, ನಮ್ಮ ದೇಶ, ನಮ್ಮ ನೆಲ, ನಮ್ಮ ಜಲ, ನಮ್ಮ ಸಂಪನ್ಮೂಲ, ನಮ್ಮ ಚಿನ್ನ, ನಮ್ಮ ಕಬ್ಬಿಣ, ನಮ್ಮ ಗಂಧ, ನಮ್ಮ ನದಿ!!! ಇವು ನಮ್ಮದೇ? ಮನುಷ್ಯನ ದೃಷ್ಟಿಯಲ್ಲಿ ಹೌದು. ಗಂಗೆಯು ಭಾರತದ್ದು, ಎವೆರೆಸ್ಟು ಚೈನಾದು, ಸಹಾರ ಆಫ್ರಿಕಾದ್ದು, ಕಾಂಗರೂ ಆಸ್ಟ್ರೇಲಿಯಾದ್ದು. ಆದರೆ ಸೃಷ್ಟಿಯ ದೃಷ್ಟಿಯಲ್ಲಿ?


ನಮ್ಮ ಆರ್.ಟಿ.ಗೆ ಯಾವ ದೇಶವೂ ಮುಖ್ಯವಲ್ಲ. ಬದುಕು ಮುಖ್ಯ.

ಕೇರಳದ ಆನೆಗಳು ವೈನಾಡಿನಿಂದ ಕರ್ನಾಟಕಕ್ಕೆ ಸಲೀಸಾಗಿ ಬರುತ್ತವೆ. ಯಾವ ಚೆಕ್‍ಪೋಸ್ಟೂ ಇಲ್ಲ, ಯಾವ ಗಡಿ ವಿವಾದವೂ ಇಲ್ಲ. ಇಡೀ ಪಶ್ಚಿಮ ಘಟ್ಟವೇ ತಮ್ಮ ಮನೆ!

ಕರ್ನಾಟಕದ ಹುಲಿಯು ಯಾರ ಅಪ್ಪಣೆಯ ಅವಶ್ಯಕತೆಯೂ ಇಲ್ಲದೆ ಕೇರಳಕ್ಕೆ ಹೋಗುತ್ತೆ.

ಕೊಡಗಿನ ಕಾವೇರಿಯು ಎಷ್ಟೇ ಕಿತ್ತಾಡಿದರೂ, ಕಿರುಚಾಡಿದರೂ ತಮಿಳು ನಾಡಿನಲ್ಲೂ ಹರಿಯುತ್ತೆ. ಹರಿಯುವ ನದಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ.

ಪರಾಗಸ್ಪರ್ಶದಿಂದ ನೀಲಕುರಿಂಜಿಯು ಮುನ್ನಾರ್ ಇಂದ ಚಿಕ್ಕಮಗಳೂರಿನವರೆಗೂ ಬಂದು ಇಡೀ ಪರ್ವತ ಶ್ರೇಣಿಯನ್ನೇ ವರ್ಣರಂಜಿತವಾಗಿಸುತ್ತದೆ.

ಗಿಡಗಳಿಂದ, ಪ್ರಾಣಿ ಪಕ್ಷಿಗಳಿಂದ, ನದಿ ಕಡಲುಗಳಿಂದ ಕಲಿಯ ಬೇಕಾದ್ದು ಸಾವಿರ ಇದೆ. ಅವು ಯಾರ ಸ್ವತ್ತೂ ಅಲ್ಲ. ಗಡಿಗಾರಿಕೆಯು ಆಡಳಿತ ವರ್ಗ ಇರೋ ವರೆಗೂ ಅಷ್ಟೇ. ಬೃಹತ್ ಭೂಕಂಪ ಆದರೆ ಗಡಿಗೆರೆಯ ಜೊತೆ ಎರಡು ಕಿತ್ತಾಟದ ಭೂಮಿಯೂ ನೆಲಸಮ. ನಿಜವಾದ ಆಡಳಿತಗಾರನ ಹೆಸರು ನಿಸರ್ಗ. ಕೃತಕ ಗೆರೆಗಳನ್ನು ನೋಡಿ ನಗುತ್ತಿರುವ ಬಾಸ್!


ಆದರೂ ಮನುಷ್ಯನಿಗೂ ಬೇರೆ ಜೀವಿಗಳಿಗೂ ವ್ಯತ್ಯಾಸ ಇರಲೇ ಬೇಕಲ್ಲವೇ? ಅದಕ್ಕೆ ಮನುಷ್ಯನು ಬೇರೆಲ್ಲಾ ಜೀವಿಗಳಿಗಿಂತ ನಿಕೃಷ್ಟನೆಂದು ಸಾಬೀತು ಪಡಿಸಲು ನಿಸರ್ಗದ ಸ್ವತ್ತನ್ನು ತನ್ನದೆಂದೇ ಭಾವಿಸಿ, ಉಳಿದೆಲ್ಲ ಜೀವಿಗಳ ಪ್ರಾಣಕ್ಕೇ ಸಂಚಕಾರ ತಂದು, ತನ್ನದೇ ಸ್ಪೀಷೀಸ್ (ಮನುಷ್ಯ - ಮನುಷ್ಯ) ಜೊತೆಗೇ ಕಿತ್ತಾಟ ಮಾಡುವ ಹೀನ ಕೃತ್ಯಕ್ಕಿಂತ ಬೇರೆ ಕೆಲಸದ ಉದಾಹರಣೆ ಬೇಕೆ?
-ಅ
27.09.2007
1.40AM


Sunday, September 23, 2007

ಬತ್ತಿಹೋದ 'ಗಂಗೆ'ಗಳು

ಮೊನ್ನೆಯ ಮಳೆಯಿಂದ ಬೆಂಗಳೂರಿನ ಅನೇಕ ಮನೆಗಳಲ್ಲಿ ನೀರು ಹೊಕ್ಕು ಎಲ್ಲರಿಗೂ ಸುಸ್ತು ಹೊಡೆಸಿದ್ದು ಬಹಳ ಸತ್ಯ. "ಇಲಿ ಹೋದರೆ ಹುಲಿ ಹೋಯಿತು" ಎನ್ನುವ TV 9 ಅವರು ಹುಲಿಯೇ ಹೋದರೆ ಡೈನಾಸರ್ ಹೋಯಿತೆನ್ನದೇ ಇರುವರೇ? ಈ ಮಳೆಯ ಸುದ್ದಿಯು ಬಹಳ ವಿಸ್ತಾರವಾಗಿ ಪ್ರಸಾರವಾಗಿತ್ತು.

ನೀರು ಹೊಕ್ಕ ಮನೆಗಳು ಇರುವ ಜಾಗಗಳ, ಮತ್ತೆ ಮಳೆ ನೀರು ನಿಂತು, ಅಥವಾ ಉಕ್ಕಿ ಹರಿದು ಜನ ತೊಂದರೆಗೀಡಾದ ಜಾಗಗಳ ಬಗ್ಗೆ ಒಂದು ಸಣ್ಣ ಪರ್ಯಟನೆ ಮಾಡಿದೆ ಈ ವಾರ. ಅವುಗಳ ಪಟ್ಟಿ ಈ ರೀತಿಯಿದೆ.

--> ಮೆಜೆಸ್ಟಿಕ್ ಬಸ್ ಸ್ಟಾಂಡ್ - ಧರ್ಮಾಂಬುಧಿ ಕೆರೆ ಇದ್ದ ಜಾಗ

--> ವಯ್ಯಾಲಿಕಾವಲ್ - ಸ್ಯಾಂಕಿ ಕೆರೆಯು ಮೆರೆದಿದ್ದ ಜಾಗ

--> ಹೊಸಕೆರೆ ಹಳ್ಳಿ - ದೊಡ್ಡ ಕೆರೆಯು ಈಗ ಬಡಾವಣೆ ಆಗಿದೆ

--> ಮಡಿವಾಳ - ಮಡಿವಾಳ ಕೆರೆ ಎಲ್ಲಿಗೆ ಹೋಗಿದೆಯೋ ಏನೋ

--> ಬಿ.ಟಿ.ಎಮ್. ಲೇ ಔಟ್ - ಕೆರೆ ಮುಚ್ಚಿ ಲೇಔಟ್ ಮಾಡು

--> ಚೆನ್ನಮ್ಮನಕೆರೆ ಅಚ್ಚುಕಟ್ಟು - ಹೆಸರೇ ಹೇಳೋದಿಲ್ವೇ ಇಲ್ಲಿ ಕೆರೆ ಇತ್ತು ಅಂತ!

--> ರಾಜರಾಜೇಶ್ವರಿ ನಗರ - ಇದು 'ನಗರ'ವಾಗಿದ್ದು ಇತ್ತೀಚೆಗಷ್ಟೇ. ಇಲ್ಲಿ ವೃಷಭಾವತಿ ಹರಿಯುತ್ತಿದ್ದಳು. ಅವಳೀಗ ದೊಡ್ಡ ಮೋರಿಯಾಗಿದ್ದಾಳೆ.

--> ಎಲೆಕ್ಟ್ರಾನಿಕ್ ಸಿಟಿ - ಇಲ್ಲಿದ್ದ ಕೆರೆಗಳೆಲ್ಲಾ ಕಾನ್‍ಕ್ರೀಟು ಕಾಡಾಗಿದೆ.

--> ಕಾಳಿದಾಸ ಲೇಔಟ್ - ಕಣಿವೆಯಂಥಾ ಜಾಗ

--> ಪ್ರಮೋದ್ ನಗರ - ಹೊಲಗದ್ದೆಗಳಿದ್ದ ಸ್ಥಳ

--> ಹೆಬ್ಬಾಳ - ಹೆಬ್ಬಾಳದ ಕೆರೆಯು ಈಗ ಟ್ಯಾಂಕ್ ಆಗೋಗಿದೆ

--> ವೆಂಕಟಾದ್ರಿ ಲೇಔಟ್ - ಭನ್ನೇರುಘಟ್ಟದ ಕಾಡು ಇದ್ದ ಜಾಗ

--> ಹೆಚ್. ಎಸ್. ಆರ್. ಲೇಔಟ್ - ಮಡಿವಾಳ ಕೆರೆ ಇಲ್ಲಿಯವರೆಗೂ ಆವರಿಸಿತ್ತು

--> ಹೊಸೂರು ರಸ್ತೆಯ ಲೇಔಟುಗಳು - ಬೊಮ್ಮನ ಹಳ್ಳಿಯ ಕೆರೆ, ಬೆಳ್ಳಂದೂರಿನ ಕೆರೆ, ಹೀಗೆ ಹಲವಾರು ಕೆರೆಗಳು ಲೇಔಟ್ ಆಗಿರುವ ಸ್ಥಳಗಳು

ಬೆಂಗಳೂರು ಹಸಿರು ನಗರ, ಕೆರೆಗಳ ನಗರ, ಸ್ಮಾರಕಗಳ ನಗರ, ಹವಾನಿಯಂತ್ರಿತ ನಗರ - ಆಗಿತ್ತು. ಇದನ್ನು ಈಗ ಎಷ್ಟು ಹದಗೆಡಿಸಿದೀವಿ ಎಂಬುದಕ್ಕೆ ಮೊನ್ನೆಯ ಮಳೆಯ ನಂತರ ಆದ ಅವಾಂತರವೇ ಸಾಕ್ಷಿ.

ಇದು ದಾಖಲೆ ಮಳೆ ಹಾಗೆ ಹೀಗೆ ಅಂತೆಲ್ಲಾ ನಾವು ನ್ಯೂಸ್ ಚಾನೆಲ್‍ಗಳಲ್ಲಿ ನೋಡಿದೆವಲ್ಲಾ, ಇವೆಲ್ಲಾ ವೈಭವೀಕರಣ ಅಷ್ಟೇ. ತಮ್ಮ ಚಾನೆಲ್‍ನಲ್ಲಿ ಬೆಂಗಳೂರು ನಶಿಸುತ್ತಿರುವ ಚಿತ್ರಣ ತೋರಿಸಿದರೆ ಸರ್ಕಾರವನ್ನು ಟೀಕಿಸಬಹುದು, ಮಸಿ ಬಳೆಯಬಹುದು ಅಂತ. ಸರ್ಕಾರದವರು ಅಷ್ಟೂ ಸುಲಭವಾಗಿ ಟೀಕೆಗೆ ಒಳಪಡುತ್ತಾರೆಯೇ? ಅವರ ಮುಖಕ್ಕೆ ಮಸಿ ಅಲ್ಲ, ಸಂಡಾಸು ಬಳಿದರೂ ಅವಮಾನ ಆಗದವರು ಮಾತ್ರ ರಾಜಕಾರಣಿಗಳಾಗುವುದು ಅಂತ ಯಾರೋ ಸಿಟ್ಟು ಮಾಡಿಕೊಂಡು ಯಾವುದೋ ಚಾನೆಲ್ಲಿನ ಸಂದರ್ಶನವೊಂದರಲ್ಲಿ ಹೇಳುತ್ತಿದ್ದರು.

ಕೆಲವರು ಮಳೆಯನ್ನೇ ಶಪಿಸುತ್ತಿದ್ದರು. ಹೀಗೆ ಮಳೆ ಬಂದ್ಬಿಟ್ರೆ ಏನು ಮಾಡೋದು ಅಂತ. ಮಳೆಯ ನಿರ್ಮಾಪಕನಿಗೆ ಕೆರೆಗಳು ಲೇಔಟ್‍ಗಳು ಆಗಿರುವುದು ಗೊತ್ತಿಲ್ಲ. ಹೇಳದೇ ಕೇಳದೇ, ತನ್ನ ಜಾಗವನ್ನು encroach ಮಾಡಿಕೊಂಡು ವಾಸಿಸತೊಡಗಿದರೆ ನಿರ್ಮಾಪಕನಿಗೆ ಏನು ಗೊತ್ತಾಗುತ್ತೆ? ತನ್ನ ದಾಖಲೆಗಳಲ್ಲಿ ಇಲ್ಲಿ ಕೆರೆಯಿದೆ, ಮಳೆ ಹುಯ್ದು ಕೆರೆ ತುಂಬಿಸಬೇಕು ಎಂಬುದು ಮಾತ್ರ ಇರುತ್ತೆ. ಅಲ್ಲಿ ಲೇಔಟ್ ಇರುವುದು ತನ್ನ ದಾಖಲೆಗಳಲ್ಲಿ update ಆಗಿರೋದಿಲ್ಲ. ಒಂದು ಭೌಗೋಳಿಕ ಸ್ಥಳ ನಿರ್ಮಾಣವಾಗುವಾಗಲೇ ಇಲ್ಲಿ ಬೆಟ್ಟ, ಇಲ್ಲಿ ಕೆರೆ, ಇಲ್ಲಿ ನದಿ, ಇಲ್ಲಿ ಕಡಲು, ಇಲ್ಲಿ ಬರಡು - ಹೀಗೆ ನಿರ್ಧಾರ ಆದ ನಂತರವೇ ಪ್ರಕೃತಿಯು ನಿರ್ಮಾಣ ಕೆಲಸ ಮಾಡಿರುವುದು. ನಾವು ಅಕ್ರಮವಾಗಿ ಕೆರೆಗಳನ್ನು ಬತ್ತಿಸಿದ್ದೇವೆ. ಮರಗಳನ್ನು ನೆಲಕ್ಕುರುಳಿಸಿದ್ದೇವೆ. ಪ್ರಾಣಿ ಪಕ್ಷಿಗಳೊಡನೆಯ ಸಹಬಾಳ್ವೆಯನ್ನು ಮರೆತಿದ್ದೇವೆ. ಒಂದು ಜಿರಲೆ ಬಂದರೂ ವಿಷ ಹಾಕಿ ಕೊಲ್ಲುತ್ತೇವೆ. "ನಮ್ಮ" ಸೈಟಿನಲ್ಲಿ ಮರವಿದೆಯಾ, ಕಡಿದು ಮನೆ ಕಟ್ಟುತ್ತೇವೆ. ಬೋರ್‍ವೆಲ್‍ಗಳಿಗೆ ಲೆಕ್ಕವೇ ಇಲ್ಲ. ತೋಡಿ ತೋಡಿ ಅಮೇರಿಕಾವರೆಗೂ ಹೋಗಿಬಿಡುತ್ತೇವೆ.ಇದ್ಯಾವುದೂ ಸಹ್ಯವಲ್ಲ.

ಎಲ್ಲರಿಗೂ ಬೆಂಗಳೂರೇ ಬೇಕು. ಮೊದಲಿನಿಂದ ಇಲ್ಲಿದ್ದವರಿಗೆ, ಭಾರಿ ಭಾರಿ ಬಹುರಾಷ್ಟ್ರೀಯ ಕಂಪೆನಿಗಳನ್ನು ಇಲ್ಲಿ ತೆಗೆದವರಿಗೆ, ಅಲ್ಲಿ ಕೆಲಸ ಮಾಡಲು ದೇಶದ ಎಲ್ಲೆಡೆಯಿಂದ ಇಲ್ಲಿಗೆ ಬರುವವರಿಗೆ, ಕೆಲಸ ಹುಡುಕುವವರಿಗೆ, ಬೀದಿ ಸುತ್ತುವವರಿಗೆ, ಜೈವಿಕ ತಂತ್ರಜ್ಞಾನದವರಿಗೆ, ಮಾಹಿತಿ ತಂತ್ರಜ್ಞಾನದವರಿಗೆ, ಬಾಹ್ಯಾಕಾಶ ತಂತ್ರಜ್ಞಾನದವರಿಗೆ, ವಿದ್ಯಾವಂತರಿಗೆ, ಅನಕ್ಷರಸ್ಥರಿಗೆ, ಪ್ಲಾಸ್ಟಿಕ್ ಮಾರುವವರಿಗೆ, ಅಡ್ವೆಂಚರ್ ಮಾಡುವವರಿಗೆ - ಒಟ್ಟಿನಲ್ಲಿ ಹಣ ಮಾಡಬೇಕೆಂಬ ಮನಸ್ಸಿದೆಯಾ ಬೆಂಗಳೂರಿಗೆ ಮೊದಲು ಹೋಗು - ಎಂಬ ಸಂದೇಶವು ಪ್ರತಿಯೊಬ್ಬನ ಮೆದುಳುಗಳೂ ಕಳಿಸುತ್ತಿವೆ! ಎಲ್ಲರಿಗೂ ಜಾಗ ಕೊಡಲು ಹೋದ ಬೆಂಗಳೂರು ತನ್ನ ಅಂಗಗಳನ್ನೇ ತ್ಯಾಗ ಮಾಡುವಂತಾಗಿ ಕೆರೆ, ಮರ, ಹಸಿರು, ಸ್ಮಾರಕ - ಎಲ್ಲವನ್ನೂ ಕಳೆದುಕೊಳ್ಳುತ್ತಾ ಬರುತ್ತಿದೆ.

ಬೆಂಗಳೂರು ಸರ್ವನಾಶದ ಬುನಾದಿ ಹಾಕಿತೆಂದು ಕೆಲವು ತಜ್ಞರು ಹೇಳಿದರು. ಸರ್ವನಾಶದ ಕಾಲ ದೂರವಿಲ್ಲ - ಸರ್ವನಾಶ ಬರೀ ಬೆಂಗಳೂರಿನದಲ್ಲ, ಬೆಂಗಳೂರಿಗರದಲ್ಲ. ಇಡೀ ಮನುಕುಲಕ್ಕೆ ಪ್ರಕೃತಿಯು ಅನೇಕ ರೀತಿಯ ಸಂದೇಶ ಕಳುಹಿಸುತ್ತಲೇ ಇದೆ, ಕಳೆದ ಐದು ವರ್ಷದಿಂದ. "ಬಡ್ಡಿಮಕ್ಳಾ, ನನಗೆ ನೀವುಗಳು ರೆಸ್ಪೆಕ್ಟ್ ಕೊಡ್ತಾ ಇಲ್ಲ, ನಿಮ್ಮನ್ನು ನಾಮಾವಶೇಷ ಮಾಡುತ್ತೇನೆ.." ಅಂತ - ಸುನಾಮಿ, ಭೂಕಂಪ, ಚಂಡಮಾರುತ, ಅತಿವೃಷ್ಟಿ, ಅನಾವೃಷ್ಟಿ ಹೀಗೆ! ಇವೆಲ್ಲಕ್ಕೂ ನಾವೇ ಕಾರಣ.

"ನಾವು" ಅಂದರೆ, ಪ್ರಕೃತಿಯ ಅಂಗವಾದ ಮನುಷ್ಯರು. ಪ್ರಕೃತಿಯ ಉಳಿದೆಲ್ಲ ಅಂಗಗಳನ್ನು ತಮ್ಮದೆಂಬ ಕಲ್ಪನೆಯಿಂದಲೇ ಕಡಿದು ಹಾಕುತ್ತಾ ಬರುತ್ತಿರುವ ರಾಕ್ಷಸರು. ಹಣವೊಂದೇ ಮನಸ್ಸಿನಲ್ಲಿ ಇಟ್ಟುಕೊಂಡು ನೀರನ್ನೂ ಹಸಿರನ್ನೂ ಬಂಡೆಗಳನ್ನೂ ಬರಿದಾಗಿಸುತ್ತಿರುವ ಅಯೋಗ್ಯ ರಾಜಕಾರಣಿಗಳು. ಅಂಥವರನ್ನು ರಾಜಕಾರಣಿಗಳನ್ನಾಗಿಸಿರುವ ಪ್ರಜೆಗಳು - ಸಕಲ ವ್ಯವಸ್ಥೆಯೇ ಹೀಗೆ. ಅಡಿಗರ ಮಾತಿನಲ್ಲಿ ಹೇಳುವುದೆಂದರೆ ಇದೊಂದು ಬತ್ತಲಾರದ ಗಂಗೆ!

"ಮಾನವ ಜನ್ಮ ದೊಡ್ಡದು.." (ಅಂತೆ)

- ಅ
24.09.2007
12PM

Thursday, September 13, 2007

ಗಣಪತಿ ಬಪ್ಪಾ 'ಮೋರಿ'ಯಾ..ಗಣೇಶ ಚತುರ್ಥಿಯೆಂದರೆ ನಮ್ಮಲ್ಲಿ ಬಹಳ ದೊಡ್ಡ ಸಡಗರದ ಉತ್ಸವ. ಮನೆಮನೆಯಲ್ಲಿ ಬೀದಿಬೀದಿಯಲ್ಲಿ ತರಹೇವಾರಿ ಅವತಾರದ ಗಣೇಶನನ್ನು ಪ್ರತಿಷ್ಠಾಪಿಸುತ್ತೇವೆ. ಮನೆಯಲ್ಲಾದರೆ ಬೆಳಿಗ್ಗೆ ಹೊತ್ತು ಪೂಜೆ, ಸಂಜೆ ಹೊತ್ತು ಕಥೆ ಓದುವುದು. ಬೀದಿಯದಾದರೆ, ಬೆಳಿಗ್ಗೆ ಪೂಜೆ, ಸಂಜೆಯಾದರೆ ಸಿನಿಮಾ ರಂಜನೆ. 'ಶುಕ್ಲಾಂಬರಧರಂ ವಿಷ್ಣುಮ್' ಇಂದ ಹಿಡಿದು 'ಅನಿಸುತಿದೆ ಯಾಕೋ ಇಂದು..' ವರೆಗೂ ಗಣೇಶನಿಗೆ ಕೇಳಿಸುತ್ತೇವೆ. ಗಣೇಶ ನಮಗೆ ಬರೀ ದೇವರು ಮಾತ್ರವಾಗಿಲ್ಲ. ಮನರಂಜನೆಯ ಮೂಲಪುರುಷನೂ ಆಗಿದ್ದಾನೆಂಬುದಕ್ಕೆ ನಮ್ಮಲ್ಲಿ ಆಚರಿಸುವ ಉತ್ಸವಗಳೇ ಸಾಕ್ಷಿ.

ಇವೆಲ್ಲಾ ಇರಲೇ ಬೇಕು. ಸಂತಸ ಪಡಲಲ್ಲದೆ ಹಬ್ಬಗಳ ಗುರಿಯು ಇನ್ನೇನು? ನಮಗೆ ಸಂತಸವಾದರೆ ಗಣಪನಿಗೂ ಸಂತಸವಾದಂತೆಯೇ. ಹಾಡು ಕುಣಿತಗಳಿಗೆ ಗಣಪನೆಂದಿಗೂ ನೊಂದಿಲ್ಲ. ಬೇಕಾದರೆ ಗಣೇಶನನ್ನೇ ಕೇಳಿ ನೋಡಿ. 'ಸಹಾರ ಪತ್ರಿಕೆ'ಗೆ ಗಣೇಶ ನೀಡಿದ ಸಂದರ್ಶನದಲ್ಲಿ ಹಾಗೇ ಹೇಳಿದ.


"ಹೌದು, ನಾನು ಬಹಳ ವರ್ಷಗಳಿಂದ ಪಿ.ಬಿ.ಶ್ರೀನಿವಾಸ್, ಎಸ್. ಜಾನಕಿಯವರ ಕಂಠಸಿರಿಯ ಸಂಗೀತವನ್ನು ಕೇಳುತ್ತಲೇ ಇದ್ದೇನೆ. ಪ್ರತೀ ಸಲವೂ ಆನಂದವಾಗುತ್ತಿರುತ್ತೆ. ನನ್ನನ್ನು ಎಲ್ಲಾ ದೇವರುಗಳಂತೆ ಕೆತ್ತುತ್ತೀರ. ಇದರಿಂದ ನನಗೆ ಹೆಮ್ಮೆ. ಎಲ್ಲಾ ಜಾತಿಯ, ಎಲ್ಲಾ ಮತಗಳ, ಎಲ್ಲಾ ವರ್ಗದವರ ಪ್ರತಿನಿಧಿ ನಾನು ಎಂಬ ಹೆಮ್ಮೆ ನನಗೆ ಇದ್ದೇ ಇರುತ್ತೆ. ವಿಷ್ಣುವಿನ ಆಕಾರದಲ್ಲಿ, ನನ್ನ ತಂದೆಯ ಆಕಾರದಲ್ಲಿ, ಬ್ರಹ್ಮನ ಆಕಾರದಲ್ಲೂ ನನ್ನನ್ನು ಕೆತ್ತಿದ್ದೀರ. ಇಷ್ಟೇ ಅಲ್ಲದೆ, ಸಹೋದರ ಅಯ್ಯಪ್ಪ, ಕೃಷ್ಣ, ಬುದ್ಧ, ಏಸು, ಕೊನೆಗೆ ಗಾಂಧಿಯ ಆಕಾರದಲ್ಲೂ ನನ್ನನ್ನು ಕೆತ್ತಿದ್ದಾರೆ ನೋಡಿ. ನನಗೆ ಇದರಿಂದ ಬಹಳ ಖುಷಿಯೇ." ಎಂದ ಗಣೇಶ ಕೆಲವು ಸಂಗತಿಗಳಿಗೆ ಬೇಸರ ಪಟ್ಟುಕೊಂಡಂತೆ ವರದಿಗಾರರಿಗೆ ತೋರಿತು.

ಈ ಬಗ್ಗೆ ಕೇಳಿದಾಗ, "ಕೆಲವು ಸಂಗತಿಗಳು ನಿಜಕ್ಕೂ ಬೇಸರ ತರಿಸುತ್ತವೆ. ನೀವು ಮನುಷ್ಯರು ಮಾಡುವ ಕೆಲವು ಅಸಹ್ಯ ಕೆಲಸಗಳಿಂದ. ಹಾಡು ಕುಣಿತ ಸರಿ, ಆದರೆ ಊರಿಗೆಲ್ಲಾ ಕೇಳಿಸುವಷ್ಟು ಜೋರಾಗಿ ಹಾಕುತ್ತೀರ. ನನಗೇನೋ ದೊಡ್ಡಕಿವಿ ಇದೆ, ಆದರೆ ಎಲ್ಲಾ ಜನರಿಗೂ, ಎಲ್ಲಾ ಪ್ರಾಣಿಗಳಿಗೂ ಅದೇ ಥರ ಇಲ್ಲವಲ್ಲಾ, ಅವರ ಕಿವಿಗಳಿಗೆ, ಅವರ ಹೃದಯಗಳಿಗೆ ತೊಂದರೆಯಾಗುವುದನ್ನು ನೆನೆಸಿಕೊಂಡರೇನೇ ಹಿಂಸೆಯಾಗುತ್ತೆ." ಎಂದು ಹಾಸ್ಯದಲ್ಲೂ ನೋವನ್ನು ಹೇಳಿಕೊಂಡ. ನಂತರ ಗಂಭೀರ ವಿಷಯವೊಂದನ್ನು ಜನರಿಗೆ ಮನದಟ್ಟು ಮಾಡಲು ಯತ್ನಿಸಿದ ಗಣಪ, "ಕೆಮಿಕಲ್ಲು ತುಂಬಿದ ಬಣ್ಣವನ್ನು ನನ್ನ ಮೂರ್ತಿಗಳ ಮೇಲೆ ಬಳಿಯುವುದಾದರೂ ಏತಕ್ಕೆ ಅಂತ ನನಗೆ ಅರ್ಥವಾಗಿಲ್ಲ. ಹೀಗೆ ಮಾಡಿದಾಗ ಮೂರ್ತಿಯನ್ನು ವಿಸರ್ಜನೆ ಮಾಡುವಾಗ ನೀರಿನಲ್ಲಿರುವ ಪ್ರಾಣಿ, ಪಕ್ಷಿ, ಗಿಡಗಳೆಲ್ಲಾ ಸತ್ತುಹೋಗುತ್ತವೆ. ಇನ್ನೊಂದು ಜೀವಿಯನ್ನು ಸಾಯಿಸಿಯಾದರೂ ಹಬ್ಬ ಮಾಡುವ ದುಷ್ಚಟ ನಿಮಗೇಕೆ? ಹಬ್ಬ ಎಂದರೆ ಸಂತೋಷ ಇರಬೇಕು, ಆದರೆ ಆ ಸಂತೋಷ ಇನ್ನೊಬ್ಬರಿಗೆ ನೋವುಂಟು ಮಾಡಬಾರದು. ಈಗ ನೀವು ನಗರಾಭಿವೃದ್ಧಿಯ ಹೆಸರಿನಲ್ಲಿ ಇರೋ ಮರಗಳನ್ನೆಲ್ಲಾ ಕಡಿದಾಗಿದೆ, ಕೆರೆಗಳನ್ನು ಬರಿದಾಗಿಸಿಯೂ ಆಗಿದೆ. ನನ್ನ ಪೈಂಟ್ ಮಾಡಿದ ಮೂರ್ತಿಗಳನ್ನು ಕೆರೆಗಳಲ್ಲಿ ಬಿಡುವ ಇರುಳಿನಲ್ಲಿ ಎಲ್ಲಾ ಜಲಚರಗಳೂ, ಗಿಡಗಳೂ, ಪ್ರಾಣಿಗಳೂ ನನ್ನ ಸನ್ನಿಧಿಗೆ ಬಂದು ಪ್ರಾರ್ಥನೆ ಮಾಡುತ್ತವೆ, 'ಈ ಮನುಷ್ಯನಿಂದ ನಮಗೆ ಉಳಿಗಾಲವೇ ಇಲ್ಲ ಗಣಪ, ನಿನ್ನ ಮೂರ್ತಿ ವಿಸರ್ಜನೆ ಮಾಡುತ್ತಾರೆ, ನಾವು ನಮ್ಮ ಪ್ರಾಣ ವಿಸರ್ಜನೆ ಮಾಡುತ್ತೇವೆ, ನಮ್ಮನ್ನು ಕಾಪಾಡು' ಎಂದು. ಪೈಂಟ್ ಮಾಡಿದ ಮೂರ್ತಿಗಳನ್ನು ಬಳಸಬೇಡಿ, ಬದಲಿಗೆ ಮಣ್ಣಿನ ಮೂರ್ತಿಗಳನ್ನು ಹಾಗೇ ಪ್ರತಿಷ್ಠಾಪಿಸಿ ಎಂದು ಜಗತ್ತಿಗೆ ಸಾರುವಿರಾ? ಇದು ನನ್ನ ಪ್ರಾರ್ಥನೆ!" ಎಂದು ದೇವರೇ ಪ್ರಾರ್ಥನೆ ಮಾಡಿಕೊಂಡಾಗ ವರದಿಗಾರರು ಮಂಕಾದರು.


ಮಾತು ಮುಂದುವರೆಸಿದ ಗಣೇಶ, "ಹೀಗೆ ಎಲ್ಲಾ ಕೆರೆಗಳನ್ನು ಬರಿದಾಗಿಸಿದ ಮೇಲೆ ನನ್ನ ಮೂರ್ತಿಗಳನ್ನು ಎಲ್ಲಿ ವಿಸರ್ಜಿಸುತ್ತೀರ? ಪೈಂಟ್ ಮಾಡಿದ ಮೂರ್ತಿಗಳನ್ನು ವಿಸರ್ಜನೆ ಮಾಡಿದರೆ ಕಡಲೂ ಸಹ ಮೋರಿಯಾಗುವುದು. ಆಗ ಘೋಷಣೆ ಕೂಗಿ ನನ್ನ ಮೂರ್ತಿಯನ್ನು ವಿಸರ್ಜನೆ ಮಾಡಿ: "ಗಣಪತಿ ಬಪ್ಪಾ 'ಮೋರಿ'ಯಾ" ಎಂದು. ಎಲ್ಲರಿಗೂ ಒಳ್ಳೆಯದಾಗಲಿ." ಎಂದು ಹೇಳುತ್ತಾ ಸಂದರ್ಶನವನ್ನು ಮುಕ್ತಾಯಗೊಳಿಸಿಬಿಟ್ಟ.


ಗಣೇಶನ ಈ ಸಂದೇಶಗಳನ್ನು ಮನದಲ್ಲಿಟ್ಟುಕೊಂಡು ಯಾರಿಗೂ ತೊಂದರೆಯಾಗದಂತೆ ಯಾವ ಜೀವಿಗಳಿಗೂ ಹಾನಿಯುಂಟಾಗದಂತೆ ಹಬ್ಬವನ್ನಾಚರಿಸೋಣ. ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು..

-ಅ
13.09.2007
5.30PM

Thursday, September 06, 2007

ಎಷ್ಟು ಬೇಗ ಒಂದು ವರ್ಷವಾಯ್ತು!!

ಮಡಿಕೇರಿಯಲ್ಲಿದ್ದೆ. ಬೆಳಿಗ್ಗೆ ಆರಕ್ಕೇ ಮೊಬೈಲು ಎಸ್ಸೆಮ್ಮೆಸ್ ಹಾಡನ್ನುಲಿಯಿತು. ನಿದ್ದೆಗಣ್ಣಿನಲ್ಲೇ ಸಂದೇಶವನ್ನು ಓದಿದೆ. ಒಮ್ಮೆ ಓದಿದಾಗ ನಂಬಲಾಗಲೇ ಇಲ್ಲ. ಕಣ್ಣುಜ್ಜಿ ಮತ್ತೆ ನೋಡಿದೆ. ಆ ಮೊಬೈಲ್ ಸಂಖ್ಯೆ ತುಂಬಾ familiar ಆಗಿತ್ತು. ನನ್ನನ್ನು ತಿರಸ್ಕರಿಸಿ ಹೋದ ವ್ಯಕ್ತಿಯು ನನ್ನನ್ನು ಮರೆತಿರಲಿಲ್ಲ. ನನ್ನನ್ನು ತೊರೆದು ನಾಲ್ಕು ವರ್ಷವಾಗಿದ್ದರೂ ನನ್ನ ಕನಸು ಆಸೆ ಆಕಾಂಕ್ಷೆಗಳನ್ನು ಮರೆತಿರಲಿಲ್ಲವಲ್ಲಾ ಎಂಬ ಖುಷಿಯೊಂದು ಕಡೆಯಾಯಿತಾದರೂ, ಹಳೆಯದೆಲ್ಲಾ ನೆನಪಾಗುತ್ತೆಂಬ ಭೀತಿ ಇನ್ನೊಂದು ಕಡೆ. ಎಲ್ಲವನ್ನೂ ಬಿಟ್ಟು ನಾನು ಹೊಸದಾದ ಜೀವನವನ್ನೇ ಆರಂಭಿಸಿ ಮೂರು ವರ್ಷ ಆಗಿತ್ತು. ಆ ಮೊಬೈಲ್ ಸಂಖ್ಯೆ ನನ್ನನ್ನು ಹಿಂದಿನ ದಿನಗಳಿಗೆ ಕರೆದೊಯ್ಯಬೇಕಿತ್ತು. ಆದರೆ ಹಾಗೆ ಮಾಡಲಿಲ್ಲ. ಯಾಕೆಂದರೆ ಸಂದೇಶವು ಆ ರೀತಿ ಇತ್ತು.

"Steve Irwin Dead!"

ಕಣ್ಣುಜ್ಜಿ ಮತ್ತೆ ನೋಡಿದೆ. ಸಂದೇಶವು ಬದಲಾಗಿರಲಿಲ್ಲ. ಅದೇ ಸಂದೇಶ. ಮಡಿಕೇರಿಯ ಹೊಟೆಲಿನ ಟಿವಿಯನ್ನು ಹಾಕಿದೆ. ಎಲ್ಲಾ ನ್ಯೂಸ್ ಚಾನೆಲ್‍ಗಳಲ್ಲಿ ಕೇವಲ ಒಂದು ಸಣ್ಣ ಸಂದೇಶವೊಂದು ಬರುತ್ತಿತ್ತೇ ವಿನಾ ವಿವರವಾದ ವಾರ್ತೆಯನ್ನು ಎಲ್ಲೂ ಹೇಳುತ್ತಿರಲಿಲ್ಲ.

"Snake Bite?"

ಎಂದು ಆ ಸಂಖ್ಯೆಗೆ ಎಸ್ಸೆಮ್ಮೆಸ್ ಕಳಿಸಿದೆ.

"No, fish bite.." ಎಂದು ಆ ಕಡೆಯಿಂದ ಸಂದೇಶ ಬಂತು. ಅಷ್ಟೇ. ಆ ಸಂಖ್ಯೆಯು ನನಗೆ ಸಂದೇಶ ಕಳಿಸಿ ಮೂರು ವರ್ಷಗಳಾಗಿದ್ದವು. ಈಗ ಎರಡು ಸಂದೇಶ ಕಳಿಸಿ ಮೌನವಾಗಿಬಿಟ್ಟಿತು.

ನನಗೆ ಅರ್ಥವಾಗಲೇ ಇಲ್ಲ. ಇದೇನು ಫಿಶ್ ಬೈಟ್ ಅಂದ್ರೆ ಅಂತ! ಅಂದು ರಾತ್ರಿ ಬೆಂಗಳೂರಿಗೆ ಬಸ್ಸು ರಿಸರ್ವ್ ಆಗಿತ್ತು. ಮಡಿಕೇರಿಯಲ್ಲಿ ಗೆಳೆಯನೊಬ್ಬನನ್ನು ಭೇಟಿ ಮಾಡಬೇಕಿತ್ತು. ನನಗೆ ಸಂಪೂರ್ಣ ಮೂಡ್ ಆಫ್ ಆಗಿಬಿಟ್ಟಿತ್ತು. ಅವನಿಗೆ ಫೋನ್ ಮಾಡಿ, ಇನೊಂದ್ ಸಲ ಸಿಗೋಣ ಅಂತ ಹೇಳಿ ಹೊಟೆಲಿನಲ್ಲೇ ಕುಳಿತೆ. ರಾತ್ರಿ ವರೆಗೂ ಹೇಗೆ ಕಳೆಯೋದಪ್ಪಾ ಎಂದೆನಿಸಲಿಲ್ಲ, ಸ್ಟೀವ್ ತುಂಬಿದ್ದ ತಲೆಯ ತುಂಬಾ.


ಟಿವಿಯಲ್ಲಿ ನಾನು ಸ್ಟೀವ್ ಕಾರ್ಯಕ್ರಮಗಳನ್ನು ನೋಡುತ್ತಿದ್ದುದು, ಆತ ಪ್ರಾಣಿಗಳಿಗೆ ತೋರಿಸುತ್ತಿದ್ದ ಪ್ರೀತಿ ವಾತ್ಸಲ್ಯಗಳ ಆದರ್ಶವನ್ನು ನಾನು ಅಳವಡಿಸಲೆತ್ನಿಸುತ್ತಿದ್ದುದು, ಆತ ಲೀಲಾಜಾಲವಾಗಿ ಉರಗ ಮಕರಿಗಳನ್ನು ಹತ್ತಿರದಿಂದ "ಮಾತನಾಡಿಸುತ್ತಿದ್ದುದು", ಆತನಂತೆಯೇ ವನ್ಯಜೀವಿಗಾಗಿ ಬಾಳನ್ನು ಮುಡಿಪಾಗಿಡಬೇಕೆಂದು ಕನಸು ಕಟ್ಟಿದ್ದುದು ಎಲ್ಲವೂ ನೆನಪಿಗೆ ಬಂದು ಹೋಗುವಷ್ಟರಲ್ಲಿ ರಾತ್ರಿಯಾಯಿತು.

ಬಸ್ಸನ್ನೇರಿದೆ. ಸ್ಟೀವ್ ಮಾತ್ರ ತಲೆಯಿಂದ ಹೋಗಲೇ ಇಲ್ಲ. ನಿದ್ದೆಯನ್ನು ಓಡಿಸಿ ತಾನು ತಲೆಯೊಳಗೆ ಕೂತಿದ್ದ. "ನಾನು ಸತ್ತಿಲ್ಲ, ಹಾಗೆಲ್ಲಾ ಸಾಯ್ತೀನೇನೋ ನಾನು ಇಷ್ಟ್ ಬೇಗಾ?" ಅಂತ ನನಗೇ ಹೇಳಿದಂತೆ ಭಾಸವಾಗುತ್ತಿತ್ತು. ಅವನೇನು ನೆಂಟನಲ್ಲ, ಸ್ನೇಹಿತನಲ್ಲ. ನಮ್ಮ ದೇಶದವನೂ ಅಲ್ಲ, ನಮ್ಮ ಭಾಷೆ ಮಾತನಾಡುವವನೂ ಅಲ್ಲ. ಆದರೂ ಮನೆಯವನಂತೆಯೇ ಎಂದೆನಿಸಿತ್ತು. ಅಷ್ಟು ಹತ್ತಿರವಾಗಿದ್ದ. ಹೃದಯದೊಳಗೆ ನೆಲೆಸಿದ್ದ. "ಸತ್ತಿರಲಾರ.. ಬಹುಶಃ ತಪ್ಪು ವಾರ್ತೆ ಇರಬೇಕು.." ಎಂದು ಏನಲ್ಲಾ ಅಂದ್ರೂ ಐವತ್ತು ಸಲ ಹೇಳಿಕೊಂಡೆ. ಅವನು ಸತ್ತಿದ್ದಾನೆಂದು ನಂಬಲು ನನಗೆ ಇಷ್ಟ ಇರಲಿಲ್ಲ.

ಊರಿಗೆ ಬಂದು ಟಿವಿ ಹಾಕಿದೆ. ಅಷ್ಟರಲ್ಲಿ ಸ್ಟೀವ್ ವಿಷಯ ಎಲ್ಲಾ ಚಾನೆಲ್‍ಗಳಲ್ಲೂ ವಿವರವಾಗಿ ಬರತೊಡಗಿತ್ತು. ಮೀನಿನಿಂದ ಹತನಾಗಿರಲಿಲ್ಲ. ಸ್ಟಿಂಗ್ ರೇ ಇಂದ ಹತನಾಗಿದ್ದ. ಪಾಪ, ನನ್ನ ತಿರಸ್ಕರಿಸಿ ಹೋಗಿದ್ದ ಸಂಖ್ಯೆಗೆ ಆ ವ್ಯತ್ಯಾಸ ಅರಿವಿಲ್ಲ. ಅತ್ಯದ್ಭುತ ಸಂದೇಶವನ್ನು ಮನುಕುಲಕ್ಕೆ ಕೊಟ್ಟಿದ್ದ ಸ್ಟೀವ್ ಸತ್ತು ಹೋಗಿದ್ದು ನಿಜವಾಗಿತ್ತು. ಕಣ್ಣಲ್ಲಿ ಹನಿಗಳು ಮುತ್ತಿನಂತೆ ಮೂಡಿದ್ದವು. ಒರೆಸಿಕೊಂಡುಬಿಟ್ಟೆ.

ಸ್ಟೀವ್ ಬಗ್ಗೆ ಬರೆಯದ ಪತ್ರಿಕೆಗಳೇ ಇಲ್ಲ. ಅವನನ್ನು ನೋಡದೇ ಇರುವವರಿಂದ ಹಿಡಿದು, ಅವನನ್ನು ಖುದ್ದು ಸಂದರ್ಶನ ಮಾಡಿರುವವರವರೆಗೂ ಒಬ್ಬರೂ ಬಿಟ್ಟಿಲ್ಲ. ನಾನು ಸ್ಟೀವ್ ಕಾರ್ಯಕ್ರಮವನ್ನು Animal Planet ಎಂಬ ವಾಹಿನಿಯು ನಮ್ಮ ಮನೆಗೆ ಬರಲು ಶುರುವಾದಾಗಿನಿಂದ ನೋಡುತ್ತಿದ್ದೆ. ಸ್ಟೀವ್ ನನಗೆ ಒಬ್ಬ ಕೇವಲ ಶೋ ನೀಡುವ ಟಿವಿಯವನಾಗಿರಲಿಲ್ಲ. ನಾನೂ ಅವನಂತಾಗಬೇಕೆಂಬ ಆಶಯವನ್ನು ಹುಟ್ಟಿಹಾಕಿದವನು. ಅವನು ಸತ್ತ ಮೇಲೆ "ನಾನೂ ಅವನಂತೆಯೇ ಸಾಯಬೇಕು.." ಎಂಬ ಆಶಯವನ್ನು ಹುಟ್ಟಿಹಾಕಿದ.

ನೆನ್ನೆಗೆ ಆತ ಸತ್ತು ಒಂದು ವರ್ಷವಾಯಿತು. ಆದರೆ ಪ್ರಾಣಿಗಳೂ ಸಹ ಅವನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿವೆ. ನಾನೂ ಅಷ್ಟೇ..

-ಅ
05.09.2007
1.20AM

ಒಂದಷ್ಟು ಚಿತ್ರಗಳು..