Monday, August 27, 2007

ಕ್ರೂಗರ್..

ನಾನು ನೋಡಿರುವ BEST WILDLIFE video ಇದು.. ಅಬ್ಬಾ, ಬದುಕು ಯಾರಿಗೆ ಯಾವಾಗ ಹೇಗೆ ಎಲ್ಲಿ ತಿರುವುಗಳನ್ನು ಕೊಡುತ್ತೋ ಗೊತ್ತಿಲ್ಲ ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿ!
- ಅ
27.08.2007
6.20AM

Thursday, August 23, 2007

ಸೊಬಗಿನ ಕನ್ನಡ ನಾಡು..

"ಯಾಕಪ್ಪಾ ನೀನು ಅಷ್ಟೊಂದು ಪ್ರಯಾಣ ಮಾಡ್ತೀಯ?" ಅಂತ ಯಾರೋ ಕೇಳಿದರು ಮೊನ್ನೆ ತಾನೆ. ಆಗ ಅವರಿಗೆ ಉತ್ತರ ಕೊಡಲು ಏನೂ ಹೊಳೆಯಲೇ ಇಲ್ಲ. "ನಂಗೆ ಇಷ್ಟ ಅದಕ್ಕೆ" ಅಂದುಬಿಟ್ಟೆ. ನಾನು ಪಯಣ ಮಾಡಲು ಹಲವು ಕಾರಣಗಳಿವೆ. ಇಲ್ಲಿರದೇ ಇರುವುದನ್ನು ಅನುಭವಿಸುವ ಹಂಬಲವು ಈ ಕಾರಣಗಳಲ್ಲೊಂದು.

ಕರ್ನಾಟಕದಲ್ಲೇ ಬೆಂಗಳೂರಿಗರ ಅನುಭವಕ್ಕೆ ನಿಲುಕದ್ದು ಎಷ್ಟೊಂದು ಇದೆ. ರಾಜಧಾನಿಯಲ್ಲಿ ಇವೆಲ್ಲಾ ಇದ್ದಿದ್ದರೆ ಹೇಗಿರುತ್ತಿತ್ತು?
 • ತೀರ್ಥಹಳ್ಳಿಯ ಮಳೆ
 • ಗುಲ್ಬರ್ಗದ ಬಿಸಿಲು
 • ಕೆಮ್ಮಣ್ಣುಗುಂಡಿಯ, ಕೊಡಗಿನ ಚಳಿ
 • ಧಾರೇಶ್ವರದ ಕಡಲ ತೀರ
 • ಉತ್ತರ ಕನ್ನಡ ಜಿಲ್ಲೆಯ ಜಲಧಾರೆಗಳು
 • ಸಕಲೇಶಪುರದ ಹಸಿರು
 • ಉಡುಪಿಯ ತೇವಾಂಶ
 • ಬೇಲೂರು ಹಳೆಬೀಡು ಸೋಮನಾಥಪುರದ ಶಿಲ್ಪಕಲೆ
 • ಮೈಸೂರಿನ ಹಕ್ಕಿಗಳು
 • ಬಂಡಿಪುರದ ಹುಲಿ
 • ನಾಗರಹೊಳೆಯ ಆನೆ
 • ಆಗುಂಬೆಯ, ಬಿಸಿಲೆಯ ಕಾಳಿಂಗ ಸರ್ಪ
 • ದಕ್ಷಿಣ ಕನ್ನಡ ಜಿಲ್ಲೆಯ ಶಿಖರಗಳು
 • ಸೋಮವಾರ ಪೇಟೆಯ ನದಿತೀರದ ಕ್ಯಾಂಪು
 • ಹಂಪೆಯ ಗತವೈಭವ
 • ಮುಳ್ಳಯ್ಯನಗಿರಿಯ ನೀಲಕುರಿಂಜಿ
 • ಕನಕಪುರದ ಗುಬ್ಬಚ್ಚಿ
 • ಬಿಳಿಗಿರಿರಂಗನ ಬೆಟ್ಟದ ಇರುಳಲ್ಲಿ ಕಾಣುವ ಚುಕ್ಕಿಗಳು
 • ಸೋಲಿಗೆರೆಯ ಗುಡಿಸಲಿನೂಟ
 • ದೇವಕಾರದ ತಂಗುಸ್ಥಳ
 • ಕೊಡಚಾದ್ರಿಯ ಸೂರ್ಯೋದಯ ಸೂರ್ಯಾಸ್ತಮ
 • ಕುದುರೆಮುಖದ ಸ್ವರ್ಗ ದರ್ಶನ
 • ಬ್ರಹ್ಮಗಿರಿಯ ಜಿಗಣೆ

ಈ ಊರಲಿ ಏನುಂಟು ನೀನೇ ಹೇಳಮ್ಮಾ..

-ಅ

23.08.2007

7.30AM

Friday, August 17, 2007

ನಾಗರ ಪಂಚಮಿ...

ಬೆಳಗಾಗೆದ್ದರೆ ನಾಗರ ಪಂಚಮಿ. ಹುತ್ತದ ಸುತ್ತಲೂ ನಾಗಪ್ಪನ ಭಕ್ತರು! ಹಾವಿಗೆ ಹಾಲೆರೆಯಲು!!


ಕೆಲವು ಸಂಗತಿಗಳನ್ನು ಭಕ್ತರು ತಿಳಿದುಕೊಂಡರೆ ತಾವು ಪೂಜಿಸುವ ದೇವರಿಗೊಳಿತು.

ಹಾವು ಹಾಲು ಕುಡಿಯುವ ಪ್ರಾಣಿಯಲ್ಲ. ಗೌರವ ಕೊಡಲೇ ಬೇಕು ಅಂದರೆ ಹಾವಿನ ತಂಟೆಗೆ, ಹುತ್ತದ ತಂಟೆಗೆ ಹೋಗದಿರಿ. ಹೋದರೆ ಹಾಲನ್ನು ಮಾತ್ರ ಹುತ್ತದೊಳಕ್ಕೆ ಹಾಕಬೇಡಿ. ಹಾವು ಮಾಂಸಾಹಾರಿ ಪ್ರಾಣಿ. Carnivorous animal.

ಎರಡು, ಅರಿಶಿನ ಕುಂಕುಮಗಳನ್ನು ಹಾವಿರುವ ಹುತ್ತದೊಳಕ್ಕೆ ಸುರಿಯದಿರಿ. ಅರಿಶಿನ ಮತ್ತು ಕುಂಕುಮಗಳು ಹಾವನ್ನು ಕೊಲ್ಲಬಲ್ಲುದು.

ಮೂರನೆಯದಾಗಿ, ಹಾವುಗಳು ನಮ್ಮ ಪ್ರಕೃತಿಯ ಸಮತೋಲನತೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಹಾವುಗಳನ್ನು ತನ್ನ ಚರ್ಮಕ್ಕಾಗಿ ಮಾರಿಕೊಳ್ಳುತ್ತಾರೆ. ಅದರ ನಂಜಿನಿಂದ ಔಷಧಿಯನ್ನು ತಯಾರಿಸುವುದರಿಂದ ನಂಜಿಗಾಗಿ ಹಾವುಗಳನ್ನು ಮಾರುತ್ತಾರೆ. ಇವೆಲ್ಲಾ ಸಾಲದೆಂಬಂತೆ, ಸುಮ್ಮನೆ ಹಾವು ಕಣ್ಣೆದುರು ಸುಳಿದರೆ ಸಾಕು ಹೊಡೆದು ಕೊಲ್ಲುವವರಿದ್ದಾರೆ. ಇವುಗಳಿಂದ ಹಾವನ್ನು ರಕ್ಷಿಸುವುದು ನಮ್ಮಿಂದಾಗಬೇಕಾದ ಕೆಲಸಗಳು. ನಾಗರ ಪಂಚಮಿ ಸಾರ್ಥಕವಾದೀತು ಹಾವಿಗೆ ಗೌರವ ಪೂರ್ವಕ ರಕ್ಷಣೆ ಕೊಟ್ಟರೆ!

ಮನೆಯಲ್ಲಿ ಬೆಳ್ಳಿ ನಾಗಪ್ಪನಿಗೆ ಗಂಟೆಗಟ್ಟಲೆ ಪೂಜೆ ಮಾಡಿ ತನಿಯೆರೆಯೋಣ. ಆದರೆ ಹುತ್ತಕ್ಕೆ ತನಿಯೆರೆಯುವ ಸಂಪ್ರದಾಯವನ್ನು ತೊರೆಯೋಣ. ಅದು ಹಾವಿಗೆ ತೊಂದರೆಯೇ ಹೊರೆತು ಅದರಿಂದ ಯಾರಿಗೂ ಲಾಭವಿಲ್ಲ. ಇದರೊಂದಿಗೆ ಜೂವವುಳ್ಳ ಹಾವಿಗೆ ಪ್ರಕೃತಿಯ ಸಮತೋಲನತೆಯನ್ನು ಕಾಪಾಡುತ್ತಿರಲು ಒಂದಿಷ್ಟು ಕೃತಜ್ಞತೆ ಹೇಳಿ ನಮಿಸೋಣ.


ನಾಗರ ಪಂಚಮಿಯ ಶುಭಾಶಯಗಳು.
- ಅ

17.08.2007

10.50PM

Friday, August 10, 2007

ಉರಗೋಪಚಾರ
ಉರ = ಎದೆ
ಗ = ಗಮಿಸುವುದು
ಉರಗ = ಎದೆಯಿಂದ ಗಮಿಸುವುದು = ಹಾವು


ನಾನು ಮೃಗಾಲಯಗಳ ದ್ವೇಷಿ. ಪ್ರಾಣಿಗಳನ್ನು ಮನರಂಜನೆಗಾಗಿ ಬಳಸುವ ಮೃಗಾಲಯಗಳಿಗೆ ನನ್ನ ಧಿಕ್ಕಾರ ಸದಾ ಇದ್ದೇ ಇರುತ್ತೆ. ಮೃಗಾಲಯಗಳಿರುವುದು ಪ್ರಾಣಿ ರಕ್ಷಣೆಗಾಗಿಯೇ ಹೊರೆತು ಮನರಂಜನೆಗಲ್ಲ ಎಂಬುದನ್ನು ಜನ ಅರಿತಿಲ್ಲ.

ಮೊನ್ನೆ ಟಿವಿಯಲ್ಲಿ ಸ್ಟೀವ್ ಇರ್ವಿನ್ ಕಾರ್ಯಕ್ರಮವೊಂದು ಬರುತ್ತಿತ್ತು. ಮನಮುಟ್ಟುವಂತಿತ್ತು ಎಂದು ನಾನು ಬರೆಯಲು ಕಾರಣವಿದೆ.ಒಂದು ಹೆಬ್ಬಾವು (Australian Water Python - Katrinus fuscus) ಸ್ವಲ್ಪ ತೊಂದರೆಗೀಡಾಗಿತ್ತು. ಅದರ ಹೊಟ್ಟೆಯ ಬಳಿ ಊತ ಕಾಣಿಸಿಕೊಂಡಿತ್ತು. ಹಾವಿಗೆ ಇರುವ ಕಾಯಿಲೆಯನ್ನು ಗುರುತು ಹಿಡಿಯುವುದು ಮೊದಲನೇ ಕಷ್ಟದ ಕೆಲಸ. ಕಷ್ಟದ ಕೆಲಸ ಹಾಗಿರಲಿ, ಮೃಗಾಲಯ ಅಂತ ಇದ್ದ ಮೇಲೆ, ಅದು ಅವರ ಕೆಲಸ.

ಆದರೆ ಹಾವಿಗಾಗಿ ತಲೆ ಕೆಡಿಸಿಕೊಳ್ಳುವ ಅಧಿಕಾರಿಗಳು ನಮ್ಮಲ್ಲಿ ವಿರಳವೆಂಬುವುದು ಎಲ್ಲರಿಗೂ ಗೊತ್ತಿರೋ ಸಂಗತಿಯೇ. ಭನ್ನೇರುಗಟ್ಟದ ಹುಲಿಸಿಂಹಗಳೇ ಬೀದಿನಾಯಿಗಳಿಗಿಂತ ಕಡೆಯಾಗಿರುವುದನ್ನು ನಾನು ಕಂಡಿದ್ದೇನೆ. ಮೈಸೂರು ಮೃಗಾಲಯದಲ್ಲಿ ಶೀತವಲಯಗಳಿಂದೆಲ್ಲಾ ಪ್ರಾಣಿ ಪಕ್ಷಿಗಳನ್ನು ತಂದು ಮನರಂಜನೆಗಾಗಿ ಸಾಯಿಸುವುದನ್ನು ನೋಡುತ್ತಲೇ ಇದ್ದೇವೆ.

ಪ್ರಾಣಿಗಳು ಒಟ್ಟಿನಲ್ಲಿ ನಮ್ಮಲ್ಲಿ ಕೇವಲ ಮನರಂಜನೆಯ ವಸ್ತುಗಳಾಗಿಹೋಗಿವೆ.

ಆ ಹೆಬ್ಬಾವನ್ನು ಸ್ಟೀವ್ ಆಸ್ಪತ್ರೆಗೆ ಕರೆದೊಯ್ದು, ಅದಕ್ಕೆ ಆಪರೇಷನ್ ಮಾಡಿದಾಗ ತಿಳಿಯಿತು, ಅದರ ಮೂತ್ರಪಿಂಡದಲ್ಲಿ ಟ್ಯೂಮರ್. ಇನ್ನೂ ಅರ್ಬುದಕ್ಕೆ ತಿರುಗಿರಲಿಲ್ಲ. ಆದಕಾರಣ ಒಂದು ಮೂತ್ರಪಿಂಡವನ್ನು ತೆಗೆದುಬಿಟ್ಟರು. ತೆಗೆದು, ಟ್ಯೂಮರ್‍ನ ತೋರಿಸಿದರು. ರಾಗಿ ಮುದ್ದೆಗಾತ್ರವಿತ್ತು. "ಮನುಷ್ಯ್ತರಂತೆಯೇ ಹಾವುಗಳೂ ಸಹ ಒಂದು ಮೂತ್ರಪಿಂಡದಲ್ಲಿ ಬದುಕಬಹುದು" ಎಂದು ಸ್ಟೀವ್ ಹೇಳಿದ. ಆ ಹಾವಿಗೆ ಆಪರೇಶನ್ ಮಾಡುವ ಸಂದರ್ಭದಲ್ಲಿ ಅನೆಸ್ತೇಷಿಯಾ ಕೊಡಲಾಗಿತ್ತು. ಉಸಿರಾಡಲು ಅದೇನೋ ಉಪಕರಣವನ್ನು ಬಾಯಿಂದ ಅಳವಡಿಸಲಾಗಿತ್ತು. ಅಬ್ಬಾಹ್! ಆಪರೇಷನ್ ಮುಗಿದ ಮೇಲೆ ಕುಯ್ದ ಉದರವನ್ನು ಹೊಲಿಗೆ ಹಾಕಿದ ದೃಶ್ಯ ಮನಮುಟ್ಟುವಂತಿತ್ತು. ಹಾವನ್ನು ಬಹುಶಃ ನಮ್ಮ ದೇಶದಲ್ಲಿ ಬಹಳ ಕೀಳುಮಟ್ಟದಲ್ಲಿ ನೋಡುತ್ತಾರೆ. ಆದರೆ ನಾಗನನ್ನು ಮಾತ್ರ ದೇವರೆಂದು ಪೂಜಿಸುತ್ತಾರೆ - ಕಲ್ಲಿಗೆ ಮಾತ್ರ. ನಿಜವಾಗಿಯೂ ಹಾವು ಬಂದರೆ ಹೊಡೆದು ಸಾಯಿಸುವುದು ಸಾಮಾನ್ಯ.ನಮ್ಮ ದೇಶ ಅವರ ದೇಶ ಎಂದು ಹೇಳುತ್ತಿಲ್ಲ. ಎಲ್ಲಾ ದೇಶದ ಹಣೆಬರಹವೂ ಅಷ್ಟೆ. ಸಕಲ ಚರಾಚರ ಸೃಷ್ಟಿಯೂ ಸಹ ಒಂದು ಬಗೆಯ ಗೌರವಾರ್ಹತೆಯನ್ನು ಪಡೆದಿರುತ್ತೆ. ಆ ಅರ್ಹತೆಗೆ ಬೆಲೆ ಮನುಷ್ಯ ಕೊಡುತ್ತಿಲ್ಲ. ಸರಿಸೃಪಗಳಂತೂ ಬಹಳ ಶೋಷಣೆಗೊಳಪಡುತ್ತಿದೆ. ಕಾರ್ಯಕ್ರಮದ ಕೊನೆಯಲ್ಲಿ ಸ್ಟೀವ್ ಒಂದು ಮಾತು ಹೇಳಿದ, ಬಹಳ ಸೊಗಸಾಗಿತ್ತು. "ಪ್ರಾಣಿಗಳಿಗೆ ಬೇಕಾಗಿರೋದು ದಯೆಯಲ್ಲ, ಕರುಣೆಯಲ್ಲ. ಪ್ರೀತಿ ಮತ್ತು ಗೌರವ. ಅದನ್ನು ಸಲ್ಲಿಸಬೇಕು ನಾವು." ಎಂದು.

ಹೌದು. ಪ್ರಾಣಿಗಳಿಗೆ ದಯೆ ತೋರಿಸುವ ಅವಶ್ಯವಿಲ್ಲ, ಬದಲಿಗೆ ಗೌರವ ಪ್ರೀತಿ ತೋರಿಸಬೇಕಾಗಿದೆ. ದಯವೇ ಬೇಕು ಸಕಲ ಪ್ರಾಣಿಗಳಲ್ಲಿ ಎಂದು ಬಸವಣ್ಣ ಹೇಳಿದ್ದಾರೆ ನಿಜ, ಆದರೆ ಪ್ರಾಣಿಗಳು ಅಬಲಜೀವಗಳಲ್ಲ. ಪ್ರತಿಯೊಂದು ಜೀವಿಯೂ ಪ್ರಕೃತಿಯ ದೃಷ್ಟಿಯಲ್ಲಿ ತನ್ನದೇ ಆದ ಪಾತ್ರವನ್ನು ಜಗದ್ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಆದರೆ ಮನುಷ್ಯನೆಂಬ ಜೀವಿಯು ತಾನೊಬ್ಬನೇ ಇರಬೇಕೆಂಬ ಸ್ವಾರ್ಥದಿಂದ ಸಕಲವನ್ನೂ ನಾಶವೆಸಗುತ್ತಾ ಬಂದಿದ್ದಾನೆ. ಬೇರೆ ಜೀವಿಗಳಿಗಿಂತ ಮಾನಸಿಕವಾಗಿ ಶಕ್ತಿವಂತನಾಗಿರೋದರಿಂದ ನಾಶ ಮಾಡುವ ಹಾದಿಯನ್ನು ಹಿಡಿದಿರುವುದು ಶೋಚನೀಯ. ಪ್ರಕೃತಿಯು ಪಾಠ ಕಲಿಸದೇ ಇರದು. ಇರುವೆಗೂ ಗೌರವ ಸಲ್ಲಿಸಬೇಕಿದೆ. ಆನೆಗೂ ಅದೇ ರೀತಿಯ ಗೌರವ ಸಲ್ಲಿಸಬೇಕಿದೆ. ಅದನ್ನು ಸಲ್ಲಿಸದೇ ಹೊರೆತು ಕೊನೆಗಾಲ ದೂರವಿಲ್ಲ ಮನುಕುಲಕ್ಕೆ.

ಇದು ಸ್ಟೀವ್‍ನ ಸಂದೇಶದ ತಾತ್ಪರ್ಯ.

- ಅ
12.08.2007
1AM

ಒಂದಷ್ಟು ಚಿತ್ರಗಳು..