Monday, July 09, 2007

ಇನ್ ಟು ಥಿನ್ ಏರ್...

ಪತ್ರಿಕೆಯ ಮುಖಪುಟಎವೆರೆಸ್ಟ್‍ಗೆ ಹೋಗಲು ಯಾವ ಚಾರಣಿಗನಿಗೆ ತಾನೇ ಆಸೆಯಿರೋದಿಲ್ಲ? ಆ ಅವಕಾಶ ಸಿಕ್ಕರೆ ಬದುಕು ಸಾರ್ಥಕವೆಂದೆನಿಸುತ್ತೆ ಒಬ್ಬ ಸಾಮಾನ್ಯ ಮಧ್ಯಮವರ್ಗದ ಚಾರಣಿಗನಿಗೆ.

"ಔಟ್‍ಸೈಡ್" ಎಂಬ ಪತ್ರಿಕೆಯಲ್ಲಿ ಸಂಪಾದಕೀಯ ತಂಡದಲ್ಲಿದ್ದ ಜಾನ್ ಕ್ರಾಕರ್ ಎಂಬಾತನನ್ನು ತೊಂಭತ್ತಾರರಲ್ಲಿ ಆ ಪತ್ರಿಕೆಯು ಎವೆರೆಸ್ಟ್ ಬಗ್ಗೆ ಒಂದು ಅಂಕಣ ಮಾಡಲು ಕಳುಹಿಸಿತು. ಆ ಅಂಕಣವೇ ಈ ಮರಣಗಾಥೆ - ಇನ್ ಟು ಥಿನ್ ಏರ್ - ಬರೆದಿರುವುದು, ಜಾನ್ ಕ್ರಾಕರ್!


ಬಲಿ ತೆಗೆದುಕೊಂಡ ಅನಿರೀಕ್ಷಿತ ಬಿರುಗಾಳಿ


ಹಿಮದ ಬಿರುಗಾಳಿಯಲ್ಲಿ ಚಾರಣಿಗರು - ಬಹುಪಾಲು ಜನರ ಕೊನೆಯ ಚಿತ್ರ ಇದು

1996 - ಇದು ಎವೆರೆಸ್ಟ್ ಕಂಡ ಅತ್ಯಂತ ಹೆಚ್ಚು ಸಾವಿನ ವರ್ಷ. ಯಾರೂ ನಿರೀಕ್ಷಿಸಿರದ, ಹಿಂದೆಂದೂ ನೋಡರಿಯದಂಥ ಬಿರುಗಾಳಿಯನ್ನು ಮಧ್ಯಾಹ್ನ ಕಳಿಸಿದ ವಾಯುದೇವ ಆ ವರ್ಷದ ಚಾರಣಿಗರಲ್ಲಿ ಶೇ. ಎಂಭತ್ತರಷ್ಟು ಜನರನ್ನು ಬಲಿ ತೆಗೆದುಕೊಂಡುಬಿಟ್ಟ. ಕೆಲವರ ಕೈಕಾಲುಗಳು ಹಿಮದಲ್ಲಿ ಹೂತು ಹೋಗಿ ಸಕಲವೂ ಮರಗಟ್ಟಿ ಹೋಗಿತ್ತು. ಇನ್ನು ಕೆಲವರು mountain sickness ಇಂದ ಪ್ರಾಣ ಬಿಟ್ಟರು. ಮತ್ತೆ ಕೆಲವರು ಚಳಿ ತಡೆಯಲಾರದೆ ಅಸುನೀಗಿದರು. ಒಟ್ಟಿನಲ್ಲಿ ಅದು ಸಾವಿನ ಯಾತ್ರೆಯಾಗಿತ್ತು.

ಹಿಮದ ಪಾಲಾದ ಕ್ಯಾಂಪ್ ಹಾಗೂ ಚಾರಣಿಗರು

ಇದೇ ವರ್ಷದಲ್ಲಿ ಔಟ್‍ಸೈಡ್ ಪತ್ರಿಕೆಯ ಜಾನ್ ಕ್ರಾಕರ್ ಸಹ ಹೋಗಿದ್ದು. ಮೇ ಹತ್ತರಂದು ಎವೆರೆಸ್ಟನ್ನು summit ಮಾಡಿದ. ಆದರೆ, ನಾಯಕ ರಾಬ್ ಹಾಲ್‍ನೂ ಸೇರಿಸಿದಂತೆ ತನ್ನ ತಂಡದ ಉಳಿದೈದು ಮಂದಿ ಬಿರುಗಾಳಿಗೆ ಸಿಕ್ಕ ತೃಣವಾಗಿಬಿಟ್ಟರು. ಎವೆರೆಸ್ಟ್ ಎನ್ನುವುದು ಜಾನ್‍ನ ಪಾಲಿಗೆ ಕನಸಾಗಿತ್ತು. ಆದರೆ ಆ ಯಾನ ಮುಗಿಸಿ ಬಂದ ನಂತರದಿಂದ ಅವನಿಗೆ ಎವರೆಸ್ಟ್ ಎನ್ನುವ ಪ್ರಕೃತಿಯ ಮೇರು ಪ್ರವತವು ದುಃಸ್ವಪ್ನವಾಗಿ ಉಳಿದು ಹೋಯಿತು. ಪತ್ರಿಕೆಗೆ ಡಾಕ್ಯುಮೆಂಟರಿ ಮಾಡ ಹೊರಟವನು ಮರಣಗಾಥೆಯನ್ನು ಬರೆಯುವಂತಾಯಿತು.ಹತ್ತುವಾಗ ಗೆದ್ದರೆ ಇಳಿಯುವಾಗ ಸೋಲಿಸಿತು ಬಿರುಗಾಳಿದಾರಿ ಕ್ಲಿಷ್ಟವೆನಿಸಿದಾಗ ಇಳಿದ ಪರಿ
ಎವೆರೆಸ್ಟಿಗೆ ಹೊರಟ ಮೊದಲ ಮಹಿಳೆ.. ಹಿಂದಿರುಗಲಿಲ್ಲ


ಪ್ರತಿಯೊಂದು ಕ್ಷಣವೂ ಪ್ರತಿಯೊಂದು ಉಸುರಿಗೂ ಹೇಗೆ ಕಷ್ಟ ಪಟ್ಟರು ಎಂಬುದನ್ನು ಕ್ರಾಕರ್ ಹೇಳುವ ಶೈಲಿ ಮನಮುಟ್ಟುತ್ತದೆ. ಬದುಕಿನ ಬೆಲೆ ಏನೆಂಬುದನ್ನು ಪ್ರತ್ಯಕ್ಷ ಕಂಡಿರುವ ಸಾಹಸಿ ಈತ. ಬೇಸ್ ಕ್ಯಾಂಪಿನಿಂದ "ಡೆತ್ ಝೋನ್" ವರೆಗೂ ನಮ್ಮನ್ನು ಚಾರಣ ಮಾಡಿಸಿ ಪುಸ್ತಕದಲ್ಲಿ ಕರೆದೊಯ್ಯುತ್ತಾನೆ ಜಾನ್ ಕ್ರಾಕರ್. ಇಪ್ಪತ್ತೈದು ಸಾವಿರ ಅಡಿಯೆತ್ತರದ ಅನುಭವಗಳು, ಅಅ ಚಳಿ, ಆ ಭಯ, ಆ ಆತಂಕ, ಆ ಮರೆವು, ಆ ಹಂಬಲಗಳು, ಶಿಖರದಲ್ಲಿ ಹೆಂಡತಿಯ ನೆನಪು ಸರಿಯಾಗಿ ಆಗದೇ ಇರುವುದು, ಬದುಕುಳಿದ ಸಮಾಧಾನ, ಜೊತೆಗಾರರನ್ನು ಕಳೆದುಕೊಂಡ ನೋವು, ಎವೆರೆಸ್ಟಿಗೆ ಹೋಗಬೇಕೆಂದಿದ್ದ ಕನಸು - ಎಲ್ಲವೂ ನಮ್ಮದೇ ಎನ್ನುವಂತೆ ಮಾಡುತ್ತೆ "ಇನ್ ಟು ಥಿನ್ ಏರ್.."ಕುಸಿದ ಕ್ಯಾಂಪ್ ಸೈಟಿನ ಸೈಟ್ಕೃತಿಯು ಬರೀ ಓದಿ ಪಕ್ಕಕ್ಕಿಡುವಂಥದ್ದಲ್ಲ. ಓದಿದ ಅನೇಕ ದಿನಗಳು ಎದೆಯೊಳಗೆ, ಮನದೊಳಗೆ ಕಾಡುತ್ತಿರುತ್ತೆ. ಕಲಿಯುವುದು ಸಾವಿರಕ್ಕೂ ಹೆಚ್ಚಿವೆ. ಮನರಂಜನೆಯ ಪುಸ್ತಕವಲ್ಲ. ಮನ ಕಲಕುವ ಗ್ರಂಥ! ಬದುಕಿನ ಪಾಠವನ್ನು ಹೇಳಿಕೊಡುವ ಜೀವನ ಚರಿತ್ರೆ! ಎವೆರೆಸ್ಟಿಗೆ ಇದು ಯಾವುದೂ ತಿಳಿದಿಲ್ಲ. ಎತ್ತರವಾಗಿ ನಿಂತಿರುವ ಅಚಲ! ಸಾವುಗಳನ್ನು ಕಂಡ ಪರ್ವತ!!

ಚಾರಣಿಗನಾಗಿದ್ದರಿಂದಲೋ ಏನೋ ಇದು ನನಗೆ ಅತ್ಯಂತ ಹಿಡಿಸಿದ ಪುಸ್ತಕವಿರಬಹುದು. ನಿರೂಪಣಾ ಶೈಲಿ, ಅನುಭವ, ಬಳಸಿರುವ ಅತ್ಯಂತ ಸರಳ ಭಾಷೆ ಜಿಮ್ ಕ್ರಾಕರ್‍ನನ್ನು ಉನ್ನತ ಪತ್ರಕರ್ತನನ್ನಾಗಿಸಿದ್ದಲ್ಲದೆ ಒಬ್ಬ ಒಳ್ಳೇ ಕಾದಂಬರಿಕಾರನನ್ನೂ ಆಗಿಸಿದೆ.


- ಅ

15.07.2007

3.15AM

ಒಂದಷ್ಟು ಚಿತ್ರಗಳು..