Sunday, June 10, 2007

ನನ್ನ ನೀನೂ.. ನಿನ್ನ ನಾನೂ....

Animal Planet, Discovery Channel, National Geographic Channel ಗಳಲ್ಲಿ ಬರುವ ಕಾರ್ಯಕ್ರಮಗಳು ಅನೇಕರಿಗೆ ಇಷ್ಟ ಆಗೋದಿಲ್ಲ. ಅದಕ್ಕೆ ಕಾರಣಗಳು ಬೇಕಾದಷ್ಟಿರಬಹುದು. ನಮ್ಮ ಸಂಬಂಧಿಕರೊಬ್ಬರು ಗೊಣಗುತ್ತಿದ್ದರು, "ಅದೇನೊಳ್ಳೇ ಗೊದ್ದ ಒಂದರ ಹಿಂದೊಂದು ಹೋಗುತ್ತಿರೋದನ್ನ ನೋಡೋದು. ಈ ಚಾನೆಲ್‍ನವರಿಗೆ ಬೇರೆ ಕೆಲಸವೇ ಇಲ್ವಾ? ಗೊದ್ದ, ಇರುವೆ, ಜಿರಲೆಗಳನ್ನೇ ತೋರಿಸಿಕೊಂಡು ಕೂತಿರ್ತಾರಲ್ಲಾ.." ಅಂತ. ಅವರುಗಳಿಗೇನಿದ್ದರೂ ಉದಯ ಟಿವಿಯಲ್ಲಿ ಬಿತ್ತರವಾಗುವ ಎರಡು ಮದುವೆ ಸೀರಯಲ್ಲುಗಳ ಮೇಲೆಯೇ ಒಲವು! ಅವರ ಕಥೆ ಈಗ ಬೇಡ.

ಮೊನ್ನೆ Animal Planetನಲ್ಲಿ ಒಂದು ಮೊಸಲೆಯು ಹೇಸರಗತ್ತೆಯೊಂದನ್ನು ಹಿಡಿದು ಕೊಂದು ತಿಂದ ದೃಶ್ಯ ಪ್ರಸಾರವಾಯಿತು. ಎಷ್ಟು ಅಮೋಘವಾಗಿತ್ತು ಅಂತೀರಾ? ಅಬ್ಬಾಹ್! ಮೊಸಲೆಗಳು ಜಯಭೇರಿ ಬಾರಿಸಿದವು, ಮೃಷ್ಟಾನ್ನ ಭೋಜನ ಸಹಿತ! ಬಹುಪಾಲು ಜನರಿಗೆ ಇಂಥ ದೃಶ್ಯಗಳನ್ನು ವೀಕ್ಷಿಸಲು ಕಷ್ಟಸಾಧ್ಯ. ಆದರೆ ಅದು ಪ್ರಕೃತಿನಿಯಮವೆಂಬುದು ಅವರು ಅರಿತಿರುವುದೇ ಇಲ್ಲವೆನಿಸುತ್ತೆ. ಪ್ರಕೃತಿಯಲ್ಲಿ ಸಮತೋಲನತೆಯನ್ನು ಕಾಪಾಡಲು ಸಾಕ್ಷಾತ್ ಸೃಷ್ಟಿದೇವನೇ ಆ‌ಜ್ಞಾಪಿಸುರುವುದೇನೆಂದರೆ ಬದುಕಲು ಇನ್ನೊಂದು ಜೀವಿಯ ಮೇಲೆ ಅವಲಂಬಿತನಾಗಬೇಕೆಂಬುದು. ಸಸ್ಯಾಹಾರಿ ಪ್ರಾಣಿಗಳು ಹೇಗೆ ಮಾತುಬಾರದ ಗಿಡ, ಹುಲ್ಲು, ಸಸ್ಯಗಳನ್ನು ತಿಂದು ಬದುಕುತ್ತವೋ, ಹಾಗೇ ಮಾಂಸಾಹಾರಿಪ್ರಾಣಿಗಳು ಇನ್ನೊಂದು ಪ್ರಾಣಿಯ ಮೇಲೆ ಅವಲಂಬಿತವಾಗಿರುತ್ತವೆ.ಅದು ರಕ್ಷಣೆಯಲ್ಲ, ನಾಶ:

ಒಂದು ಹುಲಿಯು ಆಗತಾನೇ ಹುಟ್ಟಿದ ಜಿಂಕೆಮರಿಯನ್ನು ಅದರ ಕೊರಳಿಗೆ ತನ್ನ ಖಡ್ಗದಂತಗಳಿಂದ ಬಿಗಿದು, ಬಗೆದು ಹಾಕುತ್ತಿದ್ದರೆ "ಅಯ್ಯೋ ಪಾಪ, ಜಿಂಕೆಯೇ.." ಅನ್ನಿಸುತ್ತಾ? ಹಾಗೆ ಅನ್ನಿಸಿದರೆ ಆ ವ್ಯಕ್ತಿಯೆಂದಿಗೂ ಪ್ರಕೃತಿಯ ಆರಾಧಕ, ಪ್ರಕೃತಿಪ್ರೇಮಿಯಾಗಿರಲು ಸಾಧ್ಯವೇ ಇಲ್ಲ. ಈ ಲೇಖನದ ಜೊತೆಗೆ ಒಂದಿಷ್ಟು ವೀಡಿಯೋಗಳನ್ನು ಹಾಕಿದ್ದೀನಿ, ಅದನ್ನು ನೋಡಿ ಯಾವ ಪ್ರಾಣಿಯ ಬಗ್ಗೆಯೂ ಅಯ್ಯೋ ಎನ್ನದಿರಿ. ಬದಲಿಗೆ ಅದರಲ್ಲಿ ಇರುವ ಚೆಲುವನ್ನು ನೋಡಿ.ಬೆಕ್ಕು ಇಲಿಯನ್ನು ಹಿಡಿಯುತ್ತಿದ್ದರೆ ಬೆಕ್ಕನ್ನು ಓಡಿಸಿ "ಇಲಿಯನ್ನು ಬದುಕಿಸಿದೆ" ಎಂಬ ತಿಳಿಗೇಡಿತನದಿಂದ ಹಿಗ್ಗದಿರಿ. ಬೆಕ್ಕಿನ ಆಹಾರವನ್ನು ಪ್ರಕೃತಿಯು ಬರೆದಾಗಿದೆ. ಅದರೊಳಗಿನ ಬೇಟೆಗಾರನನ್ನು ಕೊಲ್ಲದಿರಿ. ನಿಜ, ಬೆಕ್ಕು ಹಾಲು ಕುಡಿದೂ ಬದುಕಬಹುದು. ಆದರೆ, ಅದರ ಸ್ವಾಭಾವಿಕ ಆಹಾರಗುಣವು ನಿರ್ಣಯ ಮಾಡಿರುವ ಪ್ರಕೃತಿಯು "ಇಲಿಗಳನ್ನು, ಕೀಟಗಳನ್ನು, ಸಣ್ಣ ಹಕ್ಕಿಗಳನ್ನು ಬೇಟೆಯಾಡಿ ತಿನ್ನು ಮಾರ್ಜಾಲವೇ.." ಎಂದು ಹೇಳಿ ಈ ಧರೆಗೆ ಕಳಿಸಿದೆ. ಅದರ ನಡುವೆ ಮನುಷ್ಯ ತಲೆಹಾಕದಿರಲಿ. ಇದರಿಂದ ಯಾವ ದೊಡ್ಡ ಸಾಧನೆಯನ್ನೂ ಮಾಡಿದ ಹಾಗಾಗೋದಿಲ್ಲ. ಪ್ರಕೃತಿಯ ವಿನಾಶಕ್ಕೆ ಕಾರಣರಾಗುತ್ತಾರೆಯೇ ಹೊರೆತು, ಯಾರನ್ನೂ ಕಾಪಾಡಿರುವುದಿಲ್ಲ.ಬಹಳಷ್ಟು ಜನಕ್ಕೆ ಈ ಬುದ್ಧಿಯಿದೆ. ಬಹುಶಃ ಅವರು ಬಸವಣ್ಣನವರ "ದಯವೇ ಧರ್ಮದ ಮೂಲವಯ್ಯಾ.." ಎಂಬ ವಚನವನ್ನು ಈ ರೀತಿ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಪ್ರಾಣಿಗಳ ಬಗ್ಗೆ ದಯೆಯಿರಬೇಕು ನಿಜ. ಅಂದರೆ, ಸಕಲ ಪ್ರಾಣಿಗಳ ಬಗ್ಗೆಯೂ ದಯೆಯಿರಬೇಕು. ಪಕ್ಷಪಾತ ಸಲ್ಲದು. ಹಸುವೊಂದನ್ನು ಚಿರತೆಯು ತಿಂದರೆ ಅದು ಚಿರತೆಯ ತಪ್ಪಲ್ಲ. ಹಸುವಿನ ತಪ್ಪೂ ಅಲ್ಲ. ಹಸುವನ್ನು ಚಿರತೆಯಿರುವ ಕಾಡಿನಲ್ಲಿ ಸಾಕಿಕೊಂಡವನ ತಪ್ಪು. 'ಹಸು'ವನ್ನು ಕೊಂದ ಚಿರತೆಯು 'ಕ್ರೂರ ಪ್ರಾಣಿ' ಎಂಬ ಕುಖ್ಯಾತವನ್ನು ಪಡೆಯುತ್ತೆ, ಮನುಷ್ಯನ ಬೇಜವಾಬ್ದಾರಿತನದಿಂದ. ಖಂಡಿತವಾಗಿ ಯಾವ ಪ್ರಾಣಿಯೂ ಕ್ರೂರವಲ್ಲ, ಮನುಷ್ಯನೊಬ್ಬನ ಹೊರೆತು.

ಹಕ್ಕಿಗಳು ನೋಡಲು ಬಲು ಚೆಂದ, ನಮಗೆ. ಹಾಗಂತ, ಪ್ರಪಂಚದಲ್ಲಿ ಬರೀ ಹಕ್ಕಿಗಳೇ ಇರಲು ಸಾಧ್ಯವೇ? ಆಹಾರ ಸರಪಳಿಯು ಬೆಳೆಯುತ್ತಿರಬೇಕಲ್ಲವೇ? ಈ ಆಹಾರ ಸರಪಳಿಗೆ ಕತ್ತರಿ ಹಾಕಲು ನಾವು ಯಾರು?


ಶತ್ರುಮಿತ್ರರು..


ಎಮ್ಮೆಗೆ ಬೆಳ್ಳಕ್ಕಿಯು ಬಹಳ ಕ್ಲೋಸ್ ಫ್ರೆಂಡ್. ಜೊತೆಜೊತೆಗೇ ಹೊಲದಲ್ಲಿ, ಕೊಚ್ಚೆಗಳಲ್ಲಿ ಕಾಲಕಳೆಯುತ್ತಿರುತ್ತಾರೆ.. ಮನುಷ್ಯನಿಗೆ ನಾಯಿಯು ಸಿಕ್ಕಾಪಟ್ಟೆ ಹತ್ತಿರದ ಮಿತ್ರ.ಬೆಂಗಳೂರಿನಲ್ಲಿ ಬೀದಿ ನಾಯಿಗಳ ವಿರುದ್ಧ ಹೋರಾಟ ಶುರು ಆಗಿದ್ದು ಇತ್ತೀಚಿಗಾದರೂ ಮನುಷ್ಯನ ಬೆಸ್ಟ್ ಫ್ರೆಂಡ್ ಅಂತ ನಾಯಿಯನ್ನು ಕರೆಯುವುದು ಸಹಜ. ಪ್ಲೋವರ್ ಎಂಬ ಹಕ್ಕಿಯ ಆಪ್ತಮಿತ್ರನಾರು ಗೊತ್ತೇ? ಮೊಸಲೆ! ಮೊಸಲೆ ಬಾಯಿತೆರೆದು ತನ್ನ ಮೊನಚಾದ ದಂತಪಂಕ್ತಿಗಳನ್ನು ಪ್ರದರ್ಶಿಸುತ್ತಾ ಮಕರಾಸನದಲ್ಲಿ ಮಲಗಿದ್ದರೆ, ಈ ಪ್ಲೋವರ್ಗಳು ಮೊಸಲೆಗಳ ಹಲ್ಲು ಶುಚಿಮಾಡಿ ಹೋಗುತ್ತವೆ.
ಹೇಗೆ ಪ್ರಾಣಿಗಳಲ್ಲಿ ಸ್ವಾಭಾವಿಕ ಮೈತ್ರಿಯಿದೆಯೋ ಅಂತೆಯೇ ನಿಸರ್ಗವೇ ಕೆಲವು ಪ್ರಾಣಿಗಳನ್ನು ಮತ್ತೆ ಕೆಲವು ಪ್ರಾಣಿಗಳೊಡನೆ ಹಗೆಯನ್ನು ಸೃಷ್ಟಿಸಿದೆ. ಬಹಳ ಪ್ರಸಿದ್ಧವಾದ ಹಗೆಯೆಂದರೆ - ಹಾವು-ಮುಂಗುಸಿ, ನಾಯಿ-ಬೆಕ್ಕು! ಇಲ್ಲಿ ನಾನು ಏನು ಹೇಳಬಯಸುತ್ತಿದ್ದೇನೆಂದರೆ, ಒಂದು ಮುಂಗುಸಿ ಹಾವನ್ನು ಕೊಂದಿತೆಂದರೆ ಹಾವಿಗಾಗಿ ಕನಿಕರ ಪಡುವ ಅವಶ್ಯವಿಲ್ಲ. ಅಥವಾ, ಆ ದೃಶ್ಯ ಕಣ್ಣಿಗೆ ಬಿದ್ದರೆ ಕಲ್ಲು ಹೊಡೆದು ಮುಂಗುಸಿಯನ್ನು ಓಡಿಸಿ ಹಾವನ್ನು ಉಳಿಸಿದೆನೆಂದು ಹಿಗ್ಗುವುದರಲ್ಲಿ ಅರ್ಥವಿಲ್ಲ. ನಾಯಿಯಿಂದ ರಕ್ಷಿಸಲು ಬೆಕ್ಕನ್ನು ತಮ್ಮ ಮನೆಯೊಳಗೇ ಕೂಡಿ ಹಾಕಿಕೊಂಡು 'ಕಾಪಾಡಿಕೊಳ್ಳುತ್ತಿದ್ದಾರೆ' ನನ್ನ ಗೆಳೆಯರೊಬ್ಬರು. ಇದರಿಂದ ಬೆಕ್ಕಿನ ಸ್ವಾಭಾವಿಕತನವನ್ನೇ ನಶಿಸುವ ದುಷ್ಕೃತ್ಯವೆಸಗುತ್ತಿದ್ದೇವೆಂದು ಅವರಿಗೆ ಅನ್ನಿಸೋದೇ ಇಲ್ಲ. ಅವರ ಪ್ರಕಾರ, "ನಮ್ಮ ಮನೆಯಲ್ಲಿ ತಂದ ಮುಂಚಿನ ಬೆಕ್ಕುಗಳೆಲ್ಲಾ ನಾಯಿಯಿಂದ ಕೊಲ್ಲಲ್ಪಟ್ಟಿವೆ. ಆದ್ದರಿಂದ ಈ ಬೆಕ್ಕನ್ನು ಹೊರಗೆ ಬಿಡೋದೇ ಇಲ್ಲ!" ಎಂದು ಸಮಝಾಯಿಶಿ ಕೊಡುತ್ತಾರೆ. ಪಾಪ, ಆ ಬೆಕ್ಕು ಬೇಟೆಯಾಡುವುದನ್ನೇ ಕಲಿತಿಲ್ಲ. ನಾಯಿಯೆಂದರೆ ಹೇಗಿರುತ್ತೆ, ಇಲಿಯೆಂದರೆ ಏನು ಎಂಬುದನ್ನೇ ನೋಡಿಲ್ಲ. ಸೂರ್ಯಚಂದ್ರರನ್ನೂ ಕಂಡಿಲ್ಲ. ನಾಲ್ಕು ಗೋಡೆಯೊಳಗೆ ಜೈಲಿನ ಖೈದಿಯಂತೆ ಇವರ ಮನರಂಜನೆ ನೀಡುತ್ತಾ ಗುಲಾಮನಾಗಿ ಬದುಕುತ್ತಿದೆ!

ಮನುಷ್ಯನೆಂಬುವ ಜೀವಿಯು ಪ್ರಕೃತಿಯ ಒಂದು ಭಾಗವಷ್ಟೇ. ಪ್ರಕೃತಿಯೇ ಮನುಷ್ಯನಲ್ಲ. ಆದರೆ ವಿವೇಚನಾಶಕ್ತಿಯನ್ನು ಹೇಗ್‍ಹೇಗೋ ಬಳಸಿಕೊಂಡ ಮನುಜನು ಪ್ರಕೃತಿಯ ಪ್ರತಿಯೊಂದು ನಿಯಮಗಳನ್ನೂ ಮುರಿಯಲೆತ್ನಿಸುತ್ತಿರುವುದು ಕೆಡುಕಿನ ಸಂಕೇತ. ವಿದ್ಯಾವಂತರೂ ಸಹ ಸಮತೋಲನತೆಯಲ್ಲಿ ತಲೆ ಹಾಕಿ 'ಕಾಪಾಡುವ' ಭ್ರಮೆಯಲ್ಲಿ ಮುಳುಗಿರೋರಿಗೆ ಈ ಅಂಕಣವನ್ನರ್ಪಿಸುತ್ತೇನೆ. ಯಾವ ಪ್ರಾಣಿಯನ್ನೂ ಇನ್ನೊಂದು ಪ್ರಾಣಿಯಿಂದ ಅಥವಾ ಗಿಡದಿಂದ 'ಕಾಪಾಡಲು' ಹೋಗದಿರಿ. ಹಾಗೆ ಮಾಡಿದರೆ ನೀವು ಪ್ರಾಣಿಯನ್ನು ಕಾಪಾಡುತ್ತಿರುವುದಿಲ್ಲ. ಇನ್ನೊಂದು ಪ್ರಾಣಿಯ ಹಿಂಸೆಯನ್ನು ಮಾಡುತ್ತಿರುತ್ತೀರ. ಅದರ ವಿಷಯದಲ್ಲಿ ತಲೆಹಾಕಲು ನಮಗೆ ಯಾವ ಹಕ್ಕೂ ಇಲ್ಲ. ಬೇಟೆಯೆಂಬುದು ಪ್ರಾಣಿಗಳು ಮಾಡಲೇ ಬೇಕಾದ ಕ್ರಿಯೆ. ಮನುಷ್ಯನಿಂದಾಗುವ ಹಿಂಸೆಯಿಂದ ಪ್ರಾಣಿಬಲಿಯಾಗುತ್ತಲ್ಲಾ, ಅದನ್ನು ತಪ್ಪಿಸೋಣ. ಅದರ ವಿರುದ್ಧ ಹೋರಾಡೋಣ. ಪ್ರಾಕೃತಿಕ ವಿಷಯಗಳಲ್ಲಿ ಮೂಗು ತೂರಿಸುವುದು ಅನಗತ್ಯ.

ಇದನ್ನು ವಿಶ್ವಪರಿಸರದಿನದಂದು ಬರೆಯಬೇಕೆಂದಿದ್ದೆ. ಅನೇಕ ಕಾರಣದಿಂದ ಬರೆಯಲಾಗಲಿಲ್ಲ. ಅದಕ್ಕೆ ಈಗ ಬರೆದು ಪಬ್ಲಿಷ್ ಮಾಡುತ್ತಿದ್ದೇನೆ.. ಪ್ರತಿದಿನವೂ ಪರಿಸರದಿನವೇ ಆದರೂ ವಿಷಯ ಮನವರಿಕೆಗಳಿಗೆ ಕೆಲವು ಸುಸಾಂದರ್ಭಿಕದಿನಗಳು ಅಗತ್ಯ. ಅಂಥ ಸಂದರ್ಭವು ಪ್ರತಿದಿನವೂ ಬಂದರೂ ಚಿಂತೆಯಿಲ್ಲ. ಒಳ್ಳೇ ಸಂದೇಶ ಸಾರಲು ನಾನು, ನನ್ನಂಥವರು ಸದಾ ಸಿದ್ಧ!!

- ಅ
12.06.2007
11.15PM

Friday, June 01, 2007

ಕ್ಷಿತಿಜಾನಿಸಿಕೆ..

ಉದ್ದಿಶ್ಯಕ್ಕೆ ಮೀರಿದ ವಿಷಯಗಳನ್ನೆಲ್ಲಾ ಇಲ್ಲಿ ಬರೆದು ಹೆಸರಿಗೆ ಧಕ್ಕೆ ಬರಬಾರದೆಂದು ಕ್ಷಿತಿಜಾನಿಸಿಕೆಯನ್ನು ಆರಂಭಿಸಿಕೊಂಡಿದ್ದೇನೆ. ಈ ಬ್ಲಾಗಿನ ಉದ್ದಿಶ್ಯವನ್ನು ಮೇಲೆಯೇ ಬರೆದಿದ್ದೇನೆ! ಅದನ್ನು ಮೀರಿ ಅನೇಕ ಪೋಸ್ಟುಗಳನ್ನೂ ಹಾಕಿದ್ದೇನೆ. ಇನ್ನು ಮುಂದೆ ಹಾಕೋದಿಲ್ಲ..

ಒಂದಷ್ಟು ಚಿತ್ರಗಳು..