Saturday, May 26, 2007

ಅದೇ ವೆಂಕಾ, ಸೀನಾ, ನೊಣ..

ಅರ್ಪಣೆ:

-> ಹುಟ್ಟುಹಬ್ಬವನ್ನಾಚರಿಸಿಕೊಳ್ಳುತಿಹ ಶ್ರೀಧರನಿಗೆ ಒಂದು ಗಿಫ್ಟಾಗಿ..
-> ಈ ಲೇಖನದ ಇನ್ನೊಬ್ಬ ಮುಖ್ಯಪಾತ್ರ ಶ್ರೀನಿವಾಸನಿಗೆ..
-> ಮತ್ತು ಅಪ್ಪಿ ತಪ್ಪಿ ವೆಂಕಾ ಸೀನಾ ನೊಣರಲ್ಲದೆ ಬೇರೆಯವರು ಈ ಲೇಖನವನ್ನೋದಿ ಮೆಚ್ಚಿಕೊಂಡರೆ, ಅವರಿಗೆ!

ನೊಣ ಅನ್ನಬೇಕೋ ನೋಣ ಅನ್ನಬೇಕೋ ಗೊತ್ತಿಲ್ಲ.. ಈ ನಾಣ್ಣುಡಿಯಲ್ಲಿ ನೊಣ ಅದೆಲ್ಲಿಂದ ಬಂತೋ ಗೊತ್ತಿಲ್ಲ. ಕನ್ನಡಿಗರು ಪ್ರಾಣ ಹೋದರೂ ಪ್ರಾಸ ಬಿಡಲ್ಲ ಅಂತಾರೆ, ಅಂಥದರಲ್ಲಿ ನಮ್ಮ ಪೂರ್ವಜರು ಈ ಒಂದು ನಾಣ್ಣುಡಿಯಲ್ಲಿ ಯಾಕೆ ಪ್ರಾಸದ ಕೈಬಿಟ್ಟರು ಎಂಬುದೇ ಅರ್ಥವಾಗುತ್ತಿಲ್ಲವಲ್ಲಾ?

ವಿಷಯ ಅದಲ್ಲ ಬಿಡಿ..

ಪ್ರತಿ ಇರುಳಲ್ಲೂ ಯಾಹೂ ಕಾನ್ಫೆರೆನ್ಸ್ (ಗುಂಪು ಹರಟೆ ಅನ್ನೋಣವೇ?) ಸಂಪ್ರದಾಯ ಹೇಗೆ ಹುಟ್ಟಿಕೊಂಡಿತೋ ಗೊತ್ತಿಲ್ಲ. ಋಷಿ ಮೂಲ, ನದಿ ಮೂಲ ಸಿಗದಂತೆ, ನಮ್ಮ ಈ ಸಂಪ್ರದಾಯದ ಮೂಲವೂ ಸಿಗಲೊಲ್ಲದು. ಬೆಳಿಗ್ಗೆಯ ನಿತ್ಯಕರ್ಮದಂತೆಯೇ ಇರುಳಲ್ಲಿ ಈ ಕಾನ್ಫೆರೆನ್ಸ್ ಇಲ್ಲದಿದ್ದರೆ ದಿನವೇ ಅಪೂರ್ಣವೆಂಬಂತೆ ನಮಗೆ.

ನಮಗೆ ಎಂದರೆ?

ಅದೇ ವೆಂಕಾ, ಸೀನಾ, ನೊಣ..

ಕಾನ್ಫೆರೆನ್ಸ್ ಅಲ್ಲಿ ನಮ್ಮ ಜೊತೆ ಗುಂಪಲ್ಲಿ ಒಮ್ಮೊಮ್ಮೆ ಆರೇಳು ಜನ ಇರ್ತಾರೆ. ಸ್ವರೂಪ, ಸಿಂಧು, ಶೃತಿ, ಸ್ಮಿತೆ.. ಆದರೆ, ಆರಂಭದಲ್ಲಿ ಮತ್ತು ಕೊನೆಯಲ್ಲಿ ಉಳಿವವರು ನಾವು ಮೂವರೇ.. ವೆಂಕಾ, ಸೀನಾ, ನೊಣ.. ಶ್ರೀಧರ, ಶ್ರೀನಿವಾಸ, ನಾನು!

ಹತ್ತೂವರೆಯಾಯ್ತೆಂದರೆ ಕಂಪ್ಯೂಟರಿನ ಯಾಹೂ ದೂತ (ಯಾಹೂ ಮೆಸೆಂಜರು) ನಮಗಾಗಿ ಕಾದಿರುತ್ತೆ. ಕೆಲಸಕ್ಕೆ ಬಾರದ ಹರಟೆಯೊಮ್ಮೊಮ್ಮೆ, ದೇಶದ ಸಮಸ್ಯೆಗಳ ಚರ್ಚೆಯೊಮ್ಮೊಮ್ಮೆ! ಸುಬ್ಬುಲಕ್ಷ್ಮಿ, ಸಂತಾನಂ ಸಂಗೀತ ಕೇಳಲು ಧ್ವನಿ ಚಾಟ್ ಒಮ್ಮೊಮ್ಮೆ, ನಾವು ಕೇಳುತ್ತಿರುವ ಸಂಗೀತ ಸಾಹಿತ್ಯದ ವಿಮರ್ಷೆಯೊಮ್ಮೊಮ್ಮೆ!! ಯಾಹೂ ಸ್ಮಿತೆಗಳನ್ನೆಲ್ಲಾ ಕನ್ನಡೀಕರಿಸುವುದು, ಕಂಪ್ಯೂಟರಿನ ಪದಗಳನ್ನು ನಮ್ಮ ಕನ್ನಡ ಶಬ್ದಕೋಶಗಳಿಗೆ ಹೇಗೆ ತರುವುದೆಂದು ರಿಸರ್ಚ್ ಮಾಡುವುದು ಕೆಲವು ಸಲ ನಡೆಯುವ ಚರ್ಚೆಗಳೇ. ಯಾಹೂ ಮೆಸೆಂಜರಿಗೆ ದೂತ ಎಂಬ ಹೆಸರೂ ಇದೇ ಕಾನ್ಫೆರೆನ್ಸ್ ಇಂದಲೇ ಹುಟ್ಟಿದ್ದು. ನಮ್ಮ ಪ್ರೇಮ ಕಥೆಗಳಿಂದ ಹಿಡಿದು, ದಿನನಿತ್ಯದ ಜಂಜಾಟಗಳವರೆಗೆ ಪ್ರತಿಯೊಂದನ್ನೂ ಆಮೂಲಾಗ್ರವಾಗಿ ಚರ್ಚಿಸಿರೋದು ಇದೇ ಸಂಪ್ರದಾಯ ಆರಂಭ ಆದ ಮೇಲೆಯೇ.

ಮುಖ್ಯ ಸದಸ್ಯರು:

ಆಫ್ ಕೋರ್ಸ್, ವೆಂಕಾ, ಸೀನಾ, ನೊಣ - ಕಾನ್ಫೆರೆನ್ಸ್ ಶುರು ಮಾಡೋರು ನಾವೇ! ಆದರೆ ನಮ್ಮ ಹೊರೆತು ಬೇರೆ ಮುಖ್ಯ ಸದಸ್ಯರ ಬಗ್ಗೆ ಬರೆಯುವಾಸೆ.

ಶೃತಿ: ಅನೇಕ ಬಾರಿ ಗುಂಪು ಹರಟೆಯನ್ನು ಈಕೆಯೂ ಆರಂಭಿಸಿದ್ದಾಳೆ.. ಆರಂಭಿಸಿ, ಅಲ್ಲಿರೋರಿಗೆಲ್ಲಾ ವಾಚಾಮಗೋಚರವಾಗಿ ಬೈಯ್ಯದಿದ್ದರೆ ಈಕೆಗೆ ನಿದ್ದೆ ಬಾರದು. "ಲೋ ಚಪ್ಪರ್..", "ಯಾಯ್... ಒದ್ದುಬಿಡ್ತೀನಿ.." ಬಿಡಿ... ಇನ್ನೂ ಅವಾಚ್ಯಗಳು ಇವೆ.. "ನಾನು ಹೊರಡ್ತೀನಿ, ನಿದ್ದೆ" ಅಷ್ಟೇ ಹೇಳೋದು.. ಹೊರಟುಬಿಡುತ್ತಾಳೆ. ನಾವುಗಳು "ಓಕೆ" ಎಂದು ಟೈಪಿಸುವುದರೊಳಗೆ ಇವಳು ಆಫ್‍ಲೈನ್!! ಉಳಿಯುವುದು ನಾವು ಮೂವರೇ.. ಅದೇ, ವೆಂಕಾ, ಸೀನಾ, ನೊಣ!!

ಸ್ಮಿತೆ: ಕಣ್ಣಾಮುಚ್ಚಾಲೆಯಲ್ಲಿ ಯಾಹೂ ಒಳಗಿರ್ತಾಳೆ (Invisible). ಆದರೂ ನಮ್ಮಂಥವರಿಗೆ ಗೊತ್ತಾಗಿಬಿಡುತ್ತೆ! ಸರಿ, ಬಿಡ್ತೀವಾ? ನಮ್ಮ ಗುಂಪಿನ ಯಾರೇ ಆನ್‍ಲೈನ್ ಕಂಡರೂ ಸೆಳೆದು ತರುತ್ತೇವೆ. ಹೆಚ್ಚು "ಆಳದ" ಸಂಗತಿಗಳನ್ನು ಮಾತನಾಡಿದರೆ ಕಿವಿಯಿಂದ (ವಾಸ್ತವವಾಗಿ ಕಣ್ಣಿನಿಂದ - ಯಾಕೆಂದರೆ ಪರದೆ ಮೇಲೆ ನೋಡುವುದು ತಾನೆ ಶಬ್ದಗಳನ್ನು) ಮೆದುಳಿನವರೆಗೂ ಹೋಗದ ಕಾರಣ, ಚರ್ಚೆ ನಮ್ಮ ಪರಿಧಿಯೊಳಗಿರದೇ ಸ್ವಲ್ಪ ಒಳ ವರ್ತಿಲದಲ್ಲಿರುತ್ತೆ! ಕಾಲುಗಂಟೆ ಇಪ್ಪತ್ತು ನಿಮಿಷವಾದ ಮೇಲೆ, "ಗುಡ್ ನೈಟ್" ಎಂದು ಬಿಡುತ್ತಾಳೆ. ನಾವು ಟಾಟ ಮಾಡೋದೇ! ಮತ್ತದೇ ವೆಂ, ಸೀ, ನೊ!

ಭೀಮರಾಯರು (ಶುಭಾ): "ನಮಸ್ಕಾರ ಭೀಮರಾಯರಿಗೆ" ಎಂದರೆ, "ಅಲ್ಲ, ಅವರ ಮಗಳು" ಎಂದು ಹೇಳುವುದು ಇನ್ನೊಂದು ಸಂಪ್ರದಾಯ. ಹೆಚ್ಚು ಹೊತ್ತಿರದೇ, ಶುಭಾ ತುಂಬಾ ಬೇಗನೇ ಶುಭರಾತ್ರಿಯೆಂದುಬಿಡುತ್ತಾಳೆ. ಯಾಹೂ ದೂತದಲ್ಲಿ ವೆಂಕಾ, ಸೀನಾ, ನೊಣ - ಹಾಡುಗಳನ್ನು ಮುಂದುವರೆಸುತ್ತಿರುತ್ತೇವೆ..

ಸಿಂಧು: ಅಪರೂಪದ ಸದಸ್ಯೆ. ಹನ್ನೊಂದಾಗಿ ಒಂದು ಸೆಕೆಂಡಾದರೂ ದೂತದೊಳಗೆ ಇರೋದಿಲ್ಲ. ಬೈ ಅನ್ನೋದೇ! ನಾವು ಯಾರು ಬೈ ಎಂದರೂ ತಡೆಯುವುದಿಲ್ಲ. ಆರಂಭದ ವೆಂ, ಸೀ, ನೊ ಕೊನೆಯಲ್ಲೂ ಇರಲು ನಮಗೂ ಆನಂದವೇ!!

ಗುಂಪಿನಲ್ಲಿ ಇನ್ನೂ ಏಳು ಜನರಿದ್ದೂ ಬಹಳ ಬಹಳ ವಿರಳವಾಗಿ ಗುಂಪು ಹರಟೆಗೆ ಬರುವುದಾದ್ದರಿಂದ ಅವರ ಬಗ್ಗೆ ಇಲ್ಲಿ ಬರೆಯುತ್ತಿಲ್ಲ. ಅವರು ಎಲಿಜಿಬಿಲಿಟಿ ಪರೀಕ್ಷೇಯಲ್ಲಿ ಅನುತ್ತೀರ್ಣರಾಗಿದ್ದಾರೆ!

ಅದೇ ವೆಂಕಾ, ಸೀನಾ, ನೊಣ:"ಏನಪ್ಪಾ ಸಮಾಚಾರ?" ಅನ್ನೋದು ಬಹಳ ಕಡಿಮೆ. ಸಮಾಚಾರ ಎಲ್ಲರಿಗೂ ಗೊತ್ತು, ಎಲ್ಲಾ ಗ್ರಹಚಾರವೇ ಅಂತ!

"ಯಾವ ಕಾಣಿಕೆ ನೀಡಲಿ ನಿನಗೆ.." ಎಂದು ನಾನು ಟೈಪಿಸಿದರೆ, ಆ ಹಾಡನ್ನು ನಾನು ಕೇಳ್ತಾ ಇದೀನಿ ಅಂತ...

"ಯುದ್ಧಂ ತ್ಯಜತ.. ಸ್ಪರ್ಧಾಮ್ ತ್ಯಜತ.." ಎಂದು ಶ್ರೀನಿವಾಸ ಟೈಪಿಸಿದರೆ ಅವನು ಆ ಹಾಡನ್ನು ಕೇಳ್ತಾ ಇದ್ದಾನೆ ಎಂದರ್ಥ..

ವಾಯ್ಸ್ ಚಾಟಿಗೆ ಹಾಕಿ ನಾವು ಮೂರೂ ಜನ ಹಾಡು ಅದೆಷ್ಟು ಸಲ ಕೇಳಿದ್ದೇವೋ! ಬರೀ ಹಾಡು ಕೇಳಲೆಂದೇ ವಾಯ್ಸ್ ಚಾಟ್ ಮಾಡುತ್ತಿರುತ್ತೇವೆ!

"ಕಾಪಿ?" ಎಂದರೆ ಆ ಮೆಸೇಜು ನಾನು ಶ್ರೀಧರನಿಗೆ ಕಳಿಸಿರುವುದು, ಅಥವಾ ಶ್ರೀಧರ ನನಗೆ ಕಳಿಸಿರುವುದು.. ಇದು ಮೂರೂ ಜನಕ್ಕೂ ಗೊತ್ತು. ಬೆಳಿಗ್ಗೆ ಕಾಫಿ ಕುಡಿಯಲು ಗಾಂಧಿ ಬಜಾರಿನಲ್ಲಿ ಭೇಟಿಯಾಗಲು ಬರೆವ ಸಂದೇಶವೆಂದು!

ಯಾರೇ ಬರಲಿ, ಯಾರೇ ಹೋಗಲಿ ಆರಂಭದಲ್ಲಿ ನಾವು ಮೂವರೇ, ಕೊನೆಯಲ್ಲೂ ನಾವು ಮೂವರೇ.. ವೆಂಕಾ, ಸೀನಾ, ನೊಣ!!

ಅಂತೂ ಇಂತೂ ಒಂದು ಸಂಪ್ರದಾಯವನ್ನು ಆರಂಭಿಸಿಕೊಂಡಿದ್ದೇವೆ. ಸಂಪ್ರದಾಯ ಹೀಗೇ ಮುಂದುವರೆಯಲಿ.. ದೂತನಿಗೊಂದು ಥ್ಯಾಂಕ್ಸ್! ನಾಣ್ಣುಡಿಗೊಂದು ಥ್ಯಾಂಕ್ಸ್!!

ಹುಟ್ಟುಹಬ್ಬದ ಶುಭಾಶಯಗಳು ಶ್ರೀಧರ!!

ಅಪ್ಪಿ ತಪ್ಪಿ ಇದನ್ನೋದಿದ ಜನರಿಗೆ: ಹಾಗೇ ಇವನ್ನೂ ನೋಡಿದರೊಳಿತು... ಶೀರ್ಷಿಕೆಯೊಂದೇ.. ಬರೆವವರು, ಬರೆವ ರೀತಿ ಇನ್ನೂ ಸೊಗಸು!!

http://karmakaanda.blogspot.com/2007/05/blog-post_26.html

http://gandabherunda.blogspot.com/2007/05/blog-post_26.html

-ಅ
26.05.2006
1.40AM

11 comments:

 1. ಈ ಸತ್ಸಂಪ್ರದಾಯವು ಇನ್ನೂ ಅನೇಕಾನೇಕ ವರ್ಷಗಳ ಕಾಲ ಹೀಗೇ ಉಳಿಯಲಿ.. :)

  --ಸೀನ..

  ReplyDelete
 2. hmmm...naanu saha srinivaasa na maathannu anumodisutteene..
  huttuhabbada shubhaashayagaLige dhanyavaadagaLu.. :-)..

  Thank you very much...

  "kaapi"?? ;-)

  ReplyDelete
 3. [ಸೀನ] ನನ್ನಾಸೇಯೂ ಅದೇ!

  [ಶ್ರೀಧರ] ರಯ್ಯ..

  ReplyDelete
 4. [ಸೀನ] Correction: ನನ್ನಾಸೆಯೂ ಅದೇ!

  ReplyDelete
 5. i want to join the group on a new moon night...
  shinu ge gottu "new moon effect"...
  yeno shinu??

  ReplyDelete
 6. ಏನಪ್ಪಾ ಅದು ಎಫೆಕ್ಟು??

  ReplyDelete
 7. hmmm... ಆ ಎಫೆಕ್ಟಿನ ಬಗ್ಗೆ ಕೂಡ ಅತಿ ಶೀಘ್ರದಲ್ಲೇ ಬ್ಲಾಗಿಸುತ್ತೇನೆ. ಆಗ ಓದುವೆಯಂತೆ. ಇರು... :D

  ReplyDelete
 8. ಈ ಕಥೆಗೆಲ್ಲಾ ಕಾರಣ ಯಾಹೋ ದೂತನೋ? ಅಥವಾ ಗಾಂಧಿಬಜಾರ್ ಕಾಫಿನೋ? ಅಥವಾ ಅದೇ ವೆಂಕ, ಸೀನ, ನೊಣನೋ?

  ReplyDelete
 9. ಒಳ್ಳೇ ಮಜ ಬಂತು ನಿಮ್ಮ ಯಾಹೂ ಸಂಪ್ರದಾಯದ ಬಗ್ಗೆ ತಿಳಿದುಕೊಂಡು. ಕನ್ನಡ ಸ್ಮಿತೆಗಳ ಬಗ್ಗೆ ಬರೆದಿರೋದ್ ನೋಡಿ ಸ್ವಲ್ಪ ಕಿವಿ(ಕಣ್ಣು ಅನ್ನಿ)ಚುರುಕಾಗಿ ಹಿಂದೊಮ್ಮೆ ನಾವುಗಳೆಲ್ಲ ಸೇರಿ ಈ ನಿಟ್ಟಿನಲ್ಲಿ ಮಾಡಿದ್ದ ಕೆಲ ಕನ್ನಡ ಸ್ಮಿತೆಗಳ ಪಟ್ಟಿ ಇಲ್ಲಿದೆ ನೋಡಿ..ನಿಮಗೂ ಇಷ್ಟವಾಗಬಹುದು...
  http://susheelsandeepmurali.blogspot.com/2006/09/blog-post.html

  ಹಾಗೆ ಆರ್ಕುಟ್ಟಿನ ಒಂದು ಗುಂಪು ಕೂಡಾ ಇದೆ/ಇತ್ತು!
  http://www.orkut.com/Community.aspx?cmm=20116420

  ReplyDelete
 10. ಹೇ ನಾನು YM ದೂತದಲ್ಲಿ ಕಾನ್ಪರೆನ್ಸ್ ಗೆ ಬರಲು ಕರ್ಮಕಾಂಡ ಹೆಸರೇ ಮುಖ್ಯಕಾರಣ ಆಗಾಗ ನಿಮ್ಮ ಬ್ಲಾಗ್ ನೋಡಿ ಓದುತ್ತಿದ್ದ ಎನಗೆ ಪ್ರತಿಸಲಿನೂ ಕೂತುಹಲ ಹುಟ್ಕೋತಿತ್ತು www.karmakaanda.blogspot.com ಲಿಂಕ್ ನೋಡಿ ಒಂದು ನಾಲ್ಕೈದು ಸಲಿ ಇದೇ ರೀತಿ ಆಗಿತ್ತು ಒಂದು ದಿನ ಮಾಡೋಕೆ ಏನ್ ಕೆಲಸನೂ ಇರದೇ ಇದ್ದಾಗ ಕರ್ಮಕಾಂಡ ಬ್ಲಾಗ್ ನೆನಪಾಯ್ತು ಆಗ ಓಪನ್ ಆದಾಗ ಮೊದಲು ನೋಡಿದ್ದೇ ಈ" ಅದೇ ವೆಂಕ - ಸೀನ - ನೊಣ " ಆರ್ಟಿಕಲ್ ಕರ್ಮಕಾಂಡ ಅಂತ ಹೆಸರಿಟ್ಟಿದ್ದರಿಂದ ಏನೋ ಇರುತ್ತೆ ಅಂದುಕೊಂಡಿದ್ದ ನನಗೆ ಈ ಆರ್ಟಿಕಲ್ ನೋಡಿ ನಗು ಶುರು ಆಯ್ತು ಏನೋ ಅನ್ಕೊಂಡಿದ್ದೆ ಆದರೆ ಅದೇ ಇಲ್ಲಿ ಇಲ್ಲ ಅಂತ.
  ಆದರು ಓದೋಕೆ ಶುರು ಮಾಡ್ಕೋಂಡ್ರೆ ಅದೇನೆ ಆಗಿರಲಿ ನಾನು ಬಿಡೋಲ್ಲ ತುಂಬ ಇಷ್ಟಆಯಿತು ನನಗು ಎಲ್ಲೋ ಒಂದೆಡೆ YM confge ಸೇರ್ಪಡೆ ಆಗೋಣ ಅನಿಸಿತು
  ಮೋಸ್ಟ್ಲಿ ಈ ಆರ್ಟಿಕಲ ಓದಿದ ಮಾರನೆ ದಿನ ನಾನು YM conf ge serpAde ಯಾದ ನೆನಪು
  ಆದರೆ ಈಗ ಅದೇ ವೆಂಕ - ಸೀನ - ನೊಣ ಅಷ್ಟೆ ಅಲ್ಲದೆ
  ಕೊನೆಯವರೆಗು ಇವರೊಂದಿಗೆ ನಾನು,ನಮ್ಮ ಡೈನಮಿಕ್-ದಿವ್ಯ,ಶ್ರೀಕಾಂತ್ ಎಲ್ಲಾ ಇರ್ತಿದ್ದಿವೆ.

  ನಮ್ಮ ಹರಟೆ ಶುರು ಆಗೋದು ೧೦pm ge ಶ್ರೀನಿವಾಸರವರ ನಮಸ್ಕಾರದಿಂದ ಆಮೇಲೆ ಅದು ಮುಗಿಯೋದು ಎಲ್ಲರಿಗು ಶುಭರಾತ್ರಿ GNSD,taata antha.

  ನಮ್ಮ ಹರಟೆ ನೆವ ಎನ್ಡಿಂಗ್ ಅನಿಸುತ್ತೆ ಕೆಲವೊಮ್ಮ BSNL sikk sikkapatte varagaLa kAtada madhyenu ಅದೇ ವೆಂಕ - ಸೀನ - ನೊಣ
  ಮಾತ್ರ ಮಿಸ್ ಆಗೋಲ್ಲ
  ಅವರಲ್ಲಿ ಒಬ್ಬರು ಇಲ್ಲ ಅಂದರು ಎನೋ ಮ್

  ReplyDelete
 11. ಹೇ ನಾನು YM ದೂತದಲ್ಲಿ ಕಾನ್ಪರೆನ್ಸ್ ಗೆ ಬರಲು ಕರ್ಮಕಾಂಡ ಹೆಸರೇ ಮುಖ್ಯಕಾರಣ ಆಗಾಗ ನಿಮ್ಮ ಬ್ಲಾಗ್ ನೋಡಿ ಓದುತ್ತಿದ್ದ ಎನಗೆ ಪ್ರತಿಸಲಿನೂ ಕೂತುಹಲ ಹುಟ್ಕೋತಿತ್ತು www.karmakaanda.blogspot.com ಲಿಂಕ್ ನೋಡಿ ಒಂದು ನಾಲ್ಕೈದು ಸಲಿ ಇದೇ ರೀತಿ ಆಗಿತ್ತು ಒಂದು ದಿನ ಮಾಡೋಕೆ ಏನ್ ಕೆಲಸನೂ ಇರದೇ ಇದ್ದಾಗ ಕರ್ಮಕಾಂಡ ಬ್ಲಾಗ್ ನೆನಪಾಯ್ತು ಆಗ ಓಪನ್ ಆದಾಗ ಮೊದಲು ನೋಡಿದ್ದೇ ಈ" ಅದೇ ವೆಂಕ - ಸೀನ - ನೊಣ " ಆರ್ಟಿಕಲ್ ಕರ್ಮಕಾಂಡ ಅಂತ ಹೆಸರಿಟ್ಟಿದ್ದರಿಂದ ಏನೋ ಇರುತ್ತೆ ಅಂದುಕೊಂಡಿದ್ದ ನನಗೆ ಈ ಆರ್ಟಿಕಲ್ ನೋಡಿ ನಗು ಶುರು ಆಯ್ತು ಏನೋ ಅನ್ಕೊಂಡಿದ್ದೆ ಆದರೆ ಅದೇ ಇಲ್ಲಿ ಇಲ್ಲ ಅಂತ.
  ಆದರು ಓದೋಕೆ ಶುರು ಮಾಡ್ಕೋಂಡ್ರೆ ಅದೇನೆ ಆಗಿರಲಿ ನಾನು ಬಿಡೋಲ್ಲ ತುಂಬ ಇಷ್ಟಆಯಿತು ನನಗು ಎಲ್ಲೋ ಒಂದೆಡೆ YM confge ಸೇರ್ಪಡೆ ಆಗೋಣ ಅನಿಸಿತು
  ಮೋಸ್ಟ್ಲಿ ಈ ಆರ್ಟಿಕಲ ಓದಿದ ಮಾರನೆ ದಿನ ನಾನು YM conf ge serpAde ಯಾದ ನೆನಪು
  ಆದರೆ ಈಗ ಅದೇ ವೆಂಕ - ಸೀನ - ನೊಣ ಅಷ್ಟೆ ಅಲ್ಲದೆ
  ಕೊನೆಯವರೆಗು ಇವರೊಂದಿಗೆ ನಾನು,ನಮ್ಮ ಡೈನಮಿಕ್-ದಿವ್ಯ,ಶ್ರೀಕಾಂತ್ ಎಲ್ಲಾ ಇರ್ತಿದ್ದಿವೆ.

  ನಮ್ಮ ಹರಟೆ ಶುರು ಆಗೋದು ೧೦pm ge ಶ್ರೀನಿವಾಸರವರ ನಮಸ್ಕಾರದಿಂದ ಆಮೇಲೆ ಅದು ಮುಗಿಯೋದು ಎಲ್ಲರಿಗು ಶುಭರಾತ್ರಿ GNSD,taata antha.

  ನಮ್ಮ ಹರಟೆ ನೆವರ್ ಎನ್ಡಿಂಗ್ ಅನಿಸುತ್ತೆ ಕೆಲವೊಮ್ಮ BSNL sikk sikkapatte varagaLa kAtada madhyenu ಅದೇ ವೆಂಕ - ಸೀನ - ನೊಣ
  ಮಾತ್ರ ಮಿಸ್ ಆಗೋಲ್ಲ
  ಅವರಲ್ಲಿ ಒಬ್ಬರು ಇಲ್ಲ ಅಂದರು ನನಗಂತು ಏನೋ ಮಿಸ್ ಆಗಿರೋ ಹಾಗೆ ಭಾಸವಾಗುತ್ತೆ.:))

  ReplyDelete

ಒಂದಷ್ಟು ಚಿತ್ರಗಳು..