Thursday, May 17, 2007

ಅಮೃತವಾಹಿನಿಯೊಂದು...

"ಕಾಫಿ?" ಶ್ರೀಧರ ಕೇಳುತ್ತಾನೆ.

"ಓಕೆ, ಏಳು ಗಂಟೆ" ನಾನು ಹೇಳುತ್ತೇನೆ.

ಇಬ್ಬರಿಗೂ ಗೊತ್ತು. ಏಳುಗಂಟೆಗೆ ಗಾಂಧಿಬಜಾರು ವೃತ್ತದಲ್ಲಿ ಸಿಕ್ಕು ಒಂದು ಕಾಫಿ ಹೀರಿ, ಅಲ್ಲಿಂದ ಮಹಾಲಕ್ಷ್ಮಿ ಟಿಫನ್ ರೂಮಿಗೆ ಹೋಗಿ, ಹಸಿದಿದ್ದರೆ ಖಾಲಿ ದೋಸೆ ತಿಂದು ಇನ್ನೊಂದು ಕಾಫಿ ಹೀರಿ ಗಾಂಧಿಬಜಾರು ಪರ್ಯಟನೆ ಮಾಡಿಬರುವುದು ನಮ್ಮ ಕಾರ್ಯಕ್ರಮವೆಂದು.

ಅದ್ಯಾರು ಕಂಡು ಹಿಡಿದರೋ ಕಾಫಿಯಲ್ಲಿರುವ ಚೈತನ್ಯವನ್ನು! ಇಷ್ಟೇ ಪ್ರಮಾಣದ ಕಾಫಿಗೆ ಇಷ್ಟೇ ಸಕ್ಕರೆಯನ್ನು ಬೆರೆಸಿ, ಇಷ್ಟೇ ಹಾಲನ್ನು ಸೇರಿಸಿದರೆ ಅಮೃತದ ಸವಿಯಿದೆಯೆಂದು ಕಂಡು ಹಿಡಿದ ಪುಣ್ಯಾತ್ಮ ಯಾರು? ಆಹ್.. ಅವನ ಹೊಟ್ಟೆ ತಣ್ಣಗಿರಲಿ. ಅವನ ಜನ್ಮ ಸಾರ್ಥಕವಾಯಿತು ಬಿಡಿ.

ವಿಜಯ ಕರ್ನಾಟಕದ ಅಂಕಣವೊಂದನ್ನು ಕಳುಹಿಸಿದ ಶ್ರೀಧರ "ಕಾಫಿ ಬಗ್ಗೆ ಎಂಥಾ ಒಳ್ಳೇ ನ್ಯೂಸ್ ಬಂದಿದೆ ನೋಡೋ" ಎಂದು ಬಹಳ ಖುಷಿ ಪಟ್ಟು ಹೇಳಿದ.. ಆ ಖುಷಿಯಲ್ಲೇ ಮತ್ತೆ ಗಾಂಧಿಬಜಾರಿನ ಕಾಫಿಯನ್ನು ಸವಿದು ಬಂದೆವು."ರೀ ಕಾಫಿ, ಟೀ ಎಲ್ಲಾ ಕುಡೀ ಬೇಡ್ರೀ.. ಅದು ವಿಷ" ಎಂದು ಡೀನ್ ಕಾಫಿಯ ಹೆಸರೆತ್ತಿದಾಗಲೆಲ್ಲಾ ಹೇಳುತ್ತಿರುತ್ತಾರೆ. ಅವರು ಈ ಆರ್ಟಿಕಲ್‍ನ ಒಮ್ಮೆ ನೋಡಲೆಂದು ಬಯಸುತ್ತೇನೆ.

ನನ್ನ-ಕಾಫಿಯ ಬಾಂಧವ್ಯ

ಕೆಲವು ಕಡೆ ಕಾಫಿಗಳು ಸಖತ್ ರುಚಿಕರ. ಕುಡಿದರೇ ಆನಂದದಿಂದ ತೇಲುವಂತಿರುತ್ತೆ. ಇನ್ನು ಕೆಲವು ಕಡೆ ಹೊಟ್ಟೆ ಉರಿಯುತ್ತೆ. ಕಾಫಿ ಡೇ (ಇತ್ಯಾದಿಗಳು) ಎಂದು ದೊಡ್ಡ ದೊಡ್ಡ ಬೋರ್ಡುಗಳನ್ನು ಹಾಕಿಕೊಂಡು ಕಾಫಿಯ ಹೆಸರಿನಲ್ಲಿ ಕೊಡುವ ದ್ರವಕ್ಕೆ ಉಚ್ಚರಿಸಲಸಾಧ್ಯಕರ ನಾಮಕರಣ ಮಾಡಿ ಹಣ ದೋಚುವ ಹುನ್ನಾರ ಅವರದೆಂದು ನನ್ನ ಸ್ನೇಹಿತರೊಬ್ಬರು ಶಪಿಸುತ್ತಿದ್ದರು. "ಕಪ್ಪೆ-ಸೀನ" (Capuccino), "ಚಾಕು-ಸೀನ" (Chococcino) ಈ ರೀತಿಯ ಗೂಂಡಾಗಳ ಹೆಸರನ್ನು ಅಮೃತದಂತಹ ಕಾಫಿಗೆ ಇಟ್ಟು ನೂರಾರು ರುಪಾಯಿ ಕೀಳುತ್ತಾರೆ. ಆದರೂ ಒಮ್ಮೊಮ್ಮೆ ಅಲ್ಲೂ ಕುಡಿಯುತ್ತೇವೆ, ಭಂಡರು ನಾವು. ಆದರೆ ಅಷ್ಟು ಸಮಾಧಾನಕರವಾಗಿರೋದಿಲ್ಲ ಬಿಡಿ.ಎಲ್ಲೆಲ್ಲೋ ಕಾಫಿ ಕುಡಿದಿದ್ದೇನೆ. ಬಸವನಗುಡಿಯ ಕೆಲವು ಹೋಟೆಲುಗಳಿನ ಕಾಫಿ ಬಲು ರುಚಿಕರ.. ಬಾಲಾಜಿ, ಮಹಾಲಕ್ಷ್ಮಿ, ಉಪಹಾರ ದರ್ಶಿನಿ, ಬ್ರಾಹ್ಮಣರ ಕಾಫಿ ಬಾರ್, ಎಸ್.ಎಲ್.ವಿ., ಅಡಿಗಾಸ್, ನಿಸರ್ಗ, ಹಳ್ಳಿತಿಂಡಿ, ವಿದ್ಯಾರ್ಥಿ ಭವನ, ಮಾಡರ್ನ್ ಟಿಫಿನ್ ರೂಮ್, ರೋಟಿ ಘರ್, ಎಲ್ಲರಿಗೂ ಒಂದು ಕೃತಜ್ಞತೆಯ ನಮನ - ಅದ್ಭುತವಾದ ಕಾಫಿಗೆ. ಎಲ್ಲರಿಗೂ ಥ್ಯಾಂಕ್ಸ್. ಬೆಳಗೆರೆಯ ಕಾದಂಬರಿಯೊಂದರಲ್ಲಿ ಬರುವಂತೆ, "ಇವು ದೇವತೆಗಳೇ ಕುಡಿಯುವಂಥ ಕಾಫಿ" .

ಕಝಿನ್ ಮಧು ಮನೆಗೆ ಹೋದರೆ ಗಂಟೆ ರಾತ್ರಿ ಹನ್ನೆರಡಾದರೂ ಒಂದು ಕಾಫಿಯಂತೂ ಗ್ಯಾರೆಂಟಿ. ಅತ್ತೆ ಮಾಡಿಕೊಡುವ ಕಾಫಿ ಏನು ರುಚಿ, ಏನು ಮೋಹ.. ಆಹಾ..

ಗೆಳೆಯ ಬಾಲಾಜಿ ಮನೆಯಲ್ಲಿ ನೀರಿಗಿಂತ ಹೆಚ್ಚು ಕಾಫಿಯನ್ನೇ ಕುಡಿಯುತ್ತಾರೆ. ಅವರ ಮನೆಗೆ ಹೋದ ತಕ್ಷಣ, "ಬಾ ಅರುಣ.. ಕಾಫಿ ಕೊಡಲಾ??" ಎಂದೇ ಕೇಳುತ್ತಾರೆ. ಅವರ ಮನೆಯ ಕಾಫಿ ಬಣ್ಣಿಸಲಸದಳ.

ಶ್ರೀ ಮನೆಗೆ ಹೋದಾಗ, ಅದೆಷ್ಟೋ ಸಲ ಅವಳ ಕೈಯ್ಯಾರೆಯೇ ಮಾಡಿಕೊಟ್ಟ ಕಾಫಿಯ ಸವಿಯನ್ನು ಮರೆಯಲು ಸಾಧ್ಯವೇ? ಚಾಮರಾಜ ಪೇಟೆಯ ಡಾನ್ ಆಗಿದ್ದೂ ಮಚ್ಚನ್ನೆತ್ತುವಂತೆ ಕಾಫಿಯನ್ನು ಮಾಡುವುದರಲ್ಲಿ ಕೂಡ ಎತ್ತಿದ ಕೈಯೆಂದು ಎಷ್ಟೋ ಸಲ ನಿರೂಪಿಸಿದ್ದಾಳೆ ಶೃತಿಯು! ಬಂದಾಗಲೆಲ್ಲಾ ಹೀಗೇ ಕಾಫಿಯನ್ನು ನೀಡುತ್ತಿರುವಂತಿರಲಿ ಈ ಹೆಣ್ಣು ಮಕ್ಕಳು!! ;-)

ಮೊನ್ನೆ ಮೊನ್ನೆಯಷ್ಟೇ ಅಮೆರಿಕೆಗೆ ಹೊರಟಿದ್ದ ಅಕ್ಕ ಕಾಫಿ ಪುಡಿಯನ್ನೂ ಕೊಂಡೊಯ್ದಿದ್ದಳು. ಯಾಕೆಂದರೆ ಅಲ್ಲಿ ಸಿಗುವ ಕಾಫಿಗಿಂತ ಕಲಗಚ್ಚೇ ಚೆನ್ನಾಗಿರುತ್ತೆ ಅಂತ! ಅದಕ್ಕೇ ತಾನೇ ಮಾಡಿಕೊಂಡು ಕುಡಿವ ಛಲ! ಬೆಂಗಳೂರಿಗೆ ಬಂದಾಕ್ಷಣ ಒಳ್ಳೆಯ ಫಿಲ್ಟರ್ ಕಾಫಿ ಅವಳನ್ನು ಸ್ವಾಗತಿಸಿತ್ತು. ತನ್ನ ಗಂಡ ಕೈಯ್ಯಾರೆ ಮಾಡಿದ್ದ ನೊರೆಭರಿತ ಕಾಫಿ - ಮಧ್ಯರಾತ್ರಿಯಲ್ಲಿ!ಉತ್ತರಭಾರತ ಪ್ರವಾಸಕ್ಕೆ ಹೋಗಿದ್ದಾಗ ಇಪ್ಪತ್ತು ದಿನ ಕಾಫಿಯಿಲ್ಲದೆ ನಾಲಿಗೆಯೆಲ್ಲಾ ಕೆಟ್ಟ ಕೆರವಾಗಿ ತುಕ್ಕು ಹಿಡಿದು ಹೋಗಿತ್ತು. ಕರ್ನಾಟಕ ಎಕ್ಸ್‍ಪ್ರೆಸ್‍ನಲ್ಲಿ ಹಿಂದಿರುಗುವಾಗ ಗುಂಟ್‍ಕಲ್ ತಲುಪುತ್ತಿದ್ದಂತೆಯೇ, "ಕಾಫಿ ಕಾಫಿ" ಎಂದು ಕಾಫಿ ಮಾರುವವನ ಧ್ವನಿ ಕೇಳಿ ಕರುವಿಗೆ ಹಸುವಿನ ಅಂಬಾ ಸದ್ದು ಕೇಳಿದಂತೆಯೇ ಸಂತಸವಾಗಿತ್ತು. ಆ ಉತ್ತರಭಾರತದವರು ಕಾಫಿ ಕುಡಿಯದೇ ಅದು ಹೇಗೆ ಇದ್ದಾರೋ ಎಂದು ಶಪಿಸಿ ರೈಲಿನ ಕಾಫಿ ಅಷ್ಟೇನೂ ಚೆನ್ನಿರದಿದ್ದರೂ ಬರಗೆಟ್ಟವರಂತೆ ಹೀರಿದ್ದೆ.

ಆದರೂ ಶ್ರೀನಿಧಿಯನ್ನು ಕೇಳಿ ನೋಡಿ.. ಮುಸುಕಿದ ಮಂಜಿನ ನಡುವೆ, ಕೊರೆವ ಚಳಿಯಲ್ಲಿ, ಚಾರಣದಿಂದ ದಣಿದ ಚೇತನಕ್ಕೆ, ಆರೂಕಾಲುಸಾಸಿರ ಅಡಿಯೆತ್ತರದ ಮುಳ್ಳಯ್ಯನಗಿರಿ ಶಿಖರದ ಮೇಲೆ, ನಾಲಿಗೆಗೆ ಚರಟ ಸಿಗುವಂತೆ, ಅತಿ ಕಡಿಮೆ ಹಾಲಿಗೆ ಅಕ್ಕರೆಯಿಂದ ಬೆರೆಸಿ ಕೊಟ್ಟರಲ್ಲಾ, ಆ ಬೆಲ್ಲದ ಸ್ಟ್ರಾಂಗ್ ಕಾಫಿಯ ರುಚಿಯ ಮುಂದೆ ಬೇರೆ ಕಾಫಿಯಿಲ್ಲ ಬಿಡಿ.. ಅನ್ನುತ್ತಾರೆ..

ನಿಜಕ್ಕೂ ಅಂದು ಕುಡಿದಿದ್ದು ಅಮೃತವೇ!!

ಕಾಫಿಯೆಂಬ ಅಮೃತವನ್ನು ಕುಡಿಯೋಣ ಬನ್ನಿ..

ಕಾಫಿಗೆ ಜೈ!

(ಇಲ್ಲಿ ಕಾಫಿ ಪುರಾಣ ಮಾತ್ರ. ಟೀ ಬಗ್ಗೆ ಇನ್ಯಾವಾಗಲಾದರೂ ಬರೆಯುತ್ತೇನೆ. ಇಲ್ಲಾ ಅಂದರೆ ಕವಿ ಗಂಡಭೇರುಂಡರು ಹಳೆಗನ್ನಡದಲ್ಲಿ ಬೈದಾರು!)

- ಅ
17. 05.2007
1.30PM

13 comments:

 1. ಆಹಾ!

  ಕಾಫಿ ಬಗ್ಗೆ ಬರ್ದಿದ್ದು, ಕಾಫಿ ಕುಡ್ದಷ್ಟೇ ಸಂತೋಷ ಕೊಡ್ತು!

  ಬನ್ನಿ, ಒಂದ್ ಬೈ- ಟು ಕಾಫಿ ಕುಡ್ಕೊಂಡ್ ಬರೋಣ, ಖುಷಿಗೆ!

  ReplyDelete
 2. ಮುಳ್ಳಯ್ಯನಗಿರಿಗೆ ಹೋಗೋಣ್ವಾ??

  ReplyDelete
 3. ನನಗೆ ಕಾಫಿ ಇಷ್ಟವೇ... ಇಲ್ಲ ಅನ್ನಲ್ಲ. ಆದ್ರೆ ಕಾಫಿ ಇಲ್ದೆ ತಿಂಗಳುಗಟ್ಲೆ ಇದ್ದೂ ಅಭ್ಯಾಸ ಇದೆ. ಜನ ಕಾಫಿಗೆ ಅಡಿಕ್ಟ್ ಆಗೋದು ನೋಡಿದ್ರೆ ಸಿಟ್ಟು ಬರತ್ತೆ... ಇದು ಒಂದು ರೀತಿ ಹೆಂಡ ಅನ್ಸತ್ತೆ. ನಾನು ಅದನ್ನು ಹುಡುಕಿಕೊಂಡು ಹೋಗಲ್ಲ... ಆದ್ರೆ ಅದೇ ನನ್ನ ಹುಡುಕಿಕೊಂಡು ಬಂದ್ರೆ ಬೇಡ ಅನ್ನಲ್ಲ.

  ಅರುಣ, ಶ್ರೀನಿಧಿ - ಗೊತ್ತಲ್ಲ... ನನ್ನ ಬಿಟ್ಟು ಮುಳ್ಳಯ್ಯನಗಿರಿಗೆ ಹೋದ್ರೆ ಗೊತ್ತಲ್ಲ... ಸುಪಾರಿ...

  ReplyDelete
 4. [ಶ್ರೀಕಾಂತ್] ಅಂದರೆ ನಮ್ಮ ಮೇಲೆ ಸಿಟ್ಟು ಮಾಡಿಕೊಳ್ಳುವ ಎಲ್ಲಾ ಅರ್ಹತೆಯನ್ನೂ ನಾನೂ, ಶ್ರೀನಿಧಿಯೂ ಹೊಂದಿದ್ದೇವೆ ಅಂತಾಯ್ತು.. ;-)

  ಸುಪಾರಿ ಕಾಫಿಗಿಂತ ಕೆಟ್ಟದ್ದು ಕಣೋ... ;-)

  ReplyDelete
 5. ಭಾಳಾ ರುಚಿರುಚಿಯಾಗಿ ಬರ್ದಿದೀರಿ. ನಾನೂ ಒಬ್ಬ ಕಾಫಿಲೋಲ. ಹೀಗಾಗಿ, ಸಖ್ಖತ್ ಖುಷಿಯಾಯ್ತು ನೀವು ಕಂಪನಿಗೆ ಸಿಕ್ಕಿದ್ರಿ ಅಂತ. :)

  ReplyDelete
 6. [ಸುಶ್ರುತ ದೊಡ್ಡೇರಿ] ಕಾಫಿಲೋಲ - ಸೂಪರ್ ಆಗಿದೆ ಪದ!

  ReplyDelete
 7. =)) ಉ.ಹೊ.ನ.... ಉ.ಹೊ.ನ...

  ನೋಡಿ ಕ್ಷಿತಿಜರೇ, "ಟೀ ಬಗ್ಗೆ ಇನ್ಯಾವಗಲಾದರೂ ಬರೆಯುತ್ತೇನೆ" ಅಂತ ಹೇಳಿ ಆಮೇಲೆನಾದ್ರೂ ತಪ್ಪಿಸಿಕೊಂಡರೆ ಗೊತ್ತಲ್ಲ,... he he he.. :D

  ಆದ್ರೂ ನಿಮ್ಮ ಕಾಫಿ ಪುರಾಣ ಬಹಳ ಚೆನ್ನಾಗಿದೆ. ಒಳ್ಳೆ ಫಿಳ್ಟರ್ ಕಾಫಿ ಹೀರಿದ ಹಾಗಾತು ನೋಡಿ.. :)

  ಇನ್ನು ಇದೇ ರೀತಿ ಟೀ ಪುರಾಣವನ್ನು ಎದುರುನೋಡುತ್ತಿರುವ,

  ಇಂತು ಟೀ ವಿಶ್ವಾಸಿ,
  --ಗಂಡ ಭೇರುಂಡ

  ReplyDelete
 8. ಅಂದು ನಿಮ್ಮ ಮನೆಯಲ್ಲಿ ಕೊಟ್ಟ ಸ್ವರ್ಗದಲ್ಲಿ ಮಾತ್ರ ಸಿಗುವಂಥ ಬ್ಲಾಕ್ ಟೀ ಮೇಲಾಣೆ, ಬರೆಯುತ್ತೇನೆ ಟೀ ಪುರಾಣವನ್ನು.

  ReplyDelete
 9. nanu usually headache bandre maatra coffee tea kudiyodu..but nam office nalli coffee boy obba bartaane. avanu maadi koduva coffee estu ruchi yagiruttade andre bere yellooo nanu ashtu tasty coffee kudide illa.. plastik cups ge coffee powder haaki, flask nalli iruva milk(mixed with sugar)annu mix maadi instant aagi ready madikodtane.. nange eetara Instant coffee madoke barolla ;) Really the coffee would be hot and tasty !!!!

  ReplyDelete
 10. [ವಿನುತ] ಅದರಲ್ಲೂ ಮಳೆ ಬರುತ್ತಿರುವಾಗ ಇಂಥ ಕಾಫಿ ಸಿಕ್ಕರೆ.. ಆಹ್..

  ವಿ.ಸೂ. ವಿನುತ, ತಲೆ ನೋವಿರುವಾಗ ಯಾವುದೇ ರೀತಿಯ ಕೆಫೀನ್ ಒಳ್ಳೇದಲ್ಲ. ತಲೆ ನೋವು ಆ ಕ್ಷಣದಲ್ಲಿ ಮಾಯ ಆಗಬಹುದು, ಆದರೆ ನಂತರದ ತಲೆನೋವುಗಳು ಇಮ್ಮಡಿಯಾಗಿರುತ್ತೆ. ತಲೆ ನೋವಿರುವಾಗ ಕಾಫಿ ಟೀ ಕುಡಿಯೋದನ್ನು ನೀನು ಅವಾಯ್ಡ್ ಮಾಡುವುದು ಒಳ್ಳೇದು.

  ReplyDelete
 11. naanu almost PUC ge barovargu ondu glass kaapi nu kudhirlilla
  ee frds force mAdi mAdi adeno challange antha heLi adralli aparoopakke challangenalli sOthidakke kaapi kudyo test banthu nange avathu hogidde brahmin kaapi barge
  ondu glass kudiyamma andru sari antha opkondu kudhe sooppppppppper aagithu avathu innu ondu glass kaapi kudibeku ansithu aadre ivra mundhe ishta aaaithu antha heLkondu kudhidare dina kaapi ge hogona baare antha gOloikothAre antha aaga kudililla.Avrnella manege right heLidd mele mathe innondu glass kaapi antha kudihu bande aaga shuru mAdkond namma ammange sakkath gOloikondiddini madhya rAthri odhovagella kaapi beku antha.
  astu ishta aagogithu kaapi andre amele dinaLu madhayana oota mAdinu ondu glass kaapi kudidhe class ge hOgthidaddu.

  ReplyDelete

ಒಂದಷ್ಟು ಚಿತ್ರಗಳು..