Tuesday, May 15, 2007

ಬಾಣತಿಮಾರಿ

ಡಿಸ್ಕ್ಲೈಮರ್

ಇದು ನನ್ನ ಹಳೆಯದೊಂದು ಲೇಖನ. ಮೂರು ವರ್ಷಕ್ಕೂ ಹಳೆಯದು. ಆಗ ಇದ್ದ ಅನುಭವ ತೃಣಮಾತ್ರದ್ದು. ಅದಕ್ಕೆ ತಕ್ಕ ಹಾಗೆ ಈ ಲೇಖನವಿರಬಹುದು. ಎಲ್ಲೋ ಏನೋ ಹುಡುಕುತ್ತಿದ್ದಾಗ ಹಾಳೆಗಳು ಸಿಕ್ಕಿದವು ಅಷ್ಟೇ. ಅದನ್ನು ಇಲ್ಲಿ ಟೈಪಿಸಿದ್ದೀನಿ. ಭಾಷೆ-ಭಾವಗಳಲ್ಲಿ ತಪ್ಪಿದ್ದರೆ ತಿದ್ದುಕೊಂಡು ಓದಿಬಿಡಿ. ಹಿಡಿಸದಿದ್ದರೆ ನಕ್ಕು ಸುಮ್ಮನಾಗಿಬಿಡಿ.
ಕನ್ನಡಕುವರರ ನಡುವೆ..

ಕಾವೇರಿ ಅರಣ್ಯ ಇಲಾಖೆಯ ಡಿ.ಸಿ.ಎಫ್‍ರವರು ರಾಜೇಶ್ ಮತ್ತು ನನ್ನನ್ನು ತಮ್ಮ ಛೇಂಬರಿಗೆ ಕರೆದರು. ನಾವು ಅಲ್ಲಿಗೆ ಹೋದದ್ದು "ಪ್ರಾಜೆಕ್ಟ್ ಮುತ್ತತ್ತಿ" ಬಗ್ಗೆ ಚರ್ಚೆಗೆ. ಮೂಲತಃ ರಾಜಸ್ಥಾನದವರಾದ ಡಿ.ಸಿ.ಎಫ್ ವಿಜಯ್ ಲಾಲ್ ಮೀನಾ ಅವರು ತಕ್ಕ ಮಟ್ಟಿಗೆ ಕನ್ನಡ ಮಾತನಾಡಿದರೂ ಅರ್ಥ ಮಾಡಿಕೊಳ್ಳುವುದು ಅಂಥ ಕಷ್ಟವೇನಲ್ಲ. ವಿಚಿತ್ರ ಕನ್ನಡ! ದೊಡ್ಡ ದೊಡ್ಡ ಕಡತಗಳನ್ನು ತಮ್ಮ ಟೇಬಲ್ ಮೇಲಿಂದ ಕೈಗೆತ್ತಿಕೊಂಡು ಓದಿದ ಹಾಗೆ ನಟಿಸುತ್ತಾ, ರುಜು ಹಾಕುತ್ತಾ, "ಮತ್ತೆ...?? ಎಲ್ಲಿವರ್ಗು ಬಂತು...?? ಏನು ಯೋಚ್ನೆ 'ಮಾದ್ರಿ'?" ಎಂದರು. ಥಟ್ಟನೆ ನಮ್ಮ ರಾಜೇಶ್, ತಮ್ಮ ವಿಶಿಷ್ಟ ಕನ್ನಡದಲ್ಲಿ ಉತ್ತರಿಸಿದರು. " ಹಾ... ಸಿಕ್ಕಾಪಟ್ಟೆ ಪ್ಲಾಸ್ಟಿಕ್ ಬಿಸಾಡಿದಾರೆ ಜನ.. 'ಹಲ್ಲಲ್ಲಿ' ಡಸ್ಟ್-ಬಿನ್ ಹಾಕೋಣ 'ಹಂತ'..." ಎಂದಾಗ ನನಗೆ ಸ್ವಲ್ಪ ದಿಗಿಲಾಯಿತು. ಯಾರ ಹಲ್ಲಲ್ಲಿ ಏನು ಹಾಕ್ತಾರೋ ಏನೋ ಹಂತ.. ಛೆ ಛೆ.. ಕ್ಷಮಿಸಿ.. ಏನು ಹಾಕ್ತಾರೋ ಅಂತ!! ಮುಕ್ಕಾಲುಗಂಟೆಗಳ ಕಾಲ ಸುದೀರ್ಘ ಚರ್ಚೆ, ಮೀಟಿಂಗಿನ ಅಂತ್ಯದಲ್ಲಿ ವಿಜಯಲಾಲರು "ನಿಮ್ ಬಟ್ಟೆ ಕೊಲೆಯಾಗಿದೆ"? ಎಂದರು. ನಾನು "ಸ್ವಲ್ಪ ಹೊತ್ತಿಗೆ ನಾನೂ ಕೊಲೆಯಾಗಿ ಹೋಗ್ತೀನಿ ಈ ಕನ್ನಡಕುವರರ ಮಧ್ಯೆ ಇದ್ದರೆ" ಎಂದು ಆಲೋಚಿಸುತ್ತಿರುವಾಗಲೇ ರಾಜೇಶ್, "ಹುಂ.. ಪಾರೆಸ್ಟಲ್ಲಿ ಅಂಗೆ ಹಲ್ವಾ.." ಎಂದುಬಿಟ್ಟರು!! ಆಹಾಹಾ.. ಎಂಥಾ ಜೋಡಿ...
ಕೊಲೆಯಾಗಲು ಕಾರಣ?

ನಮ್ಮ ಬಟ್ಟೆ 'ಕೊಲೆ'ಯಾಗಲು ಕಾರಣ ಇದೆ.. ಮುಂಜಾನೆ ಆರಕ್ಕೇ ನಾನು ನನ್ನ ಫಿಯರೋ ಮೇಲೆ ಕುಳಿತು, ಬನಶಂಕರಿಯ ತರಕಾರಿ ಮಾರುಕಟ್ಟೆ ಎದುರು ಕಾಯುತ್ತಿದ್ದ ರಾಜೇಶರನ್ನು ಹಿಂದೆ ಕುಳ್ಳಿರಿಸಿಕೊಂಡು ಕನಕಪುರದತ್ತ ಸಾಗಿಸಿದೆ. ಹತ್ತುವರೆ ಹೊತ್ತಿಗೆ ನಾವು ವಿಜಯ್-ರವರೊಂದಿಗೆ ಮಾತನಾಡಲು ಹೋಗಬೇಕಿತ್ತು. ಬೆಳಿಗ್ಗೆ ಬೇಗ ಹೊರಟಿದ್ದ ಕಾರಣ ಹಾಗೆ ಬಾಣತಿಮಾರಿಗೆ ಹೋಗಿ ನಂತರ ಅವರ ಆಫೀಸಿಗೆ ಹೊಗೋಣ ಎಂದು ತೀರ್ಮಾನಿಸಿದೆವು. ಕನಕಪುರದಿಂದ ರಾಮನಗರಕ್ಕೆ ಹೋಗುವ ದಾರಿಯಲ್ಲಿ ಒಂದು ಸಣ್ಣ ಹೋಟೆಲನ್ನು ಹೊಕ್ಕೆವು. ಅದನ್ನು ಹೊಟೆಲ್ ಎಂದರೆ ಹೊಟೆಲು. ಇಲ್ಲದಿದ್ದರೆ ಒಂದು ಸಣ್ಣ ತಿಂಡಿ ಮಾರುವ ಕೊಳಕು-ಶುಭ್ರ ಅಂಗಡಿ ಅಷ್ಟೆ! ಏಳು ಗಂಟೆಗೇ ತಿನ್ನಲು ಹೊಟ್ಟೆಯಾಗಲೀ, ನಾಲಿಗೆಯಾಗಲೀ ಇನ್ನೂ ಸಿದ್ಧವಿರಲಿಲ್ಲ. ಅದಕ್ಕೆ ಅಷ್ಟು ಬೇಗ ಟೀ ಕಾಫಿಗಳನ್ನು ಹೊರೆತು ಬೇರೇನೂ ಕಂಡು ಅಭ್ಯಾಸವೂ ಇರಲಿಲ್ಲ. ಅಂಥದ್ದರಲ್ಲಿ ಆ ಹೊತ್ತಿನಲ್ಲಿ ನನ್ನ ಜಿಹ್ವೆಯ ಪರಮ ವೈರಿಯಾದ ಖಾರದ ಚಟ್ನಿಯನ್ನು ಬೇರೆ ಅದಕ್ಕೆ ಪರಿಚಯಿಸಿದರೆ ಅದು ನನ್ನನ್ನು ಹೇಗೆಲ್ಲಾ ಶಪಿಸಿರಬಹುದು!! ರಾಜೇಶರಂಥ ರಾಜೇಶರೇ ಖಾರ ಎಂದರು! ನಾನು ನನ್ನ ಪ್ರೀತಿಯ ನಾಲಿಗೆಗೆ ಬೇಸರಗೊಳಿಸಲು ಇಚ್ಛಿಸದೆ ಬರೀ ಇಡ್ಲಿಯನ್ನು ತಿಂದೆ. ಟೀ ಕುಡಿದಾಗ ಸಮಾಧಾನವಾಯಿತು!


ಬೆಟ್ಟಗುಡ್ಡಗಳಂತೆಯೇ ಇರುವ ಈ ರಸ್ತೆಯಲ್ಲಿ ಹತ್ತು ನಿಮಿಷ ಪಯಣಿಸಿದ ನಂತರ ಮಾದಸಂದ್ರ ಎಂಬ ಕುಗ್ರಾಮವೊಂದು ಸಿಗುತ್ತದೆ. ಆ ಹಳ್ಳಿಯೊಳಕ್ಕೆ ಗಾಡಿಯನ್ನು ಕರೆದೊಯ್ಯಲು ಹರಸಾಹಸ ಪಡಬೇಕಾಯಿತು. ಹಳೆಯದನ್ನು ನೆನೆಸಿಕೊಂಡ ರಾಜೇಶ್ "ನಾನು, ರವಿಶಂಕರ್ ಸೋಲಿಗೆರೆನ ಬೈಕು ತಳ್ಕೊಂಡ್ ಹಿಳಿದಿದ್ವಿ" ಎಂದರು. ನನಗೆ ಅದೇನೂ ಆಶ್ವರ್ಯ ಆಗಲಿಲ್ಲ.. ಏಕೆಂದರೆ ಅವರು ನನಗೆ ಈ ವಿಷಯವನ್ನು ಹೇಳಿದ್ದು ಇದು ಹದಿನೈದನೇ ಸಲ! ಮಾದಸಂದ್ರದಲ್ಲಿ ರಾಜೇಶರ ಸಂಬಂಧಿಕರ ಮನೆಯಿದೆ. ಅಲ್ಲಿ ಗಾಡಿ ನಿಲ್ಲಿಸಿ, ಚಾರಣ ಮಾಡೋಣ ಎಂದು ನಿರ್ಣಯಿಸಿದೆವು. ಅವರ ಮನೆಯ ನಾಯಿಯು ನನ್ನನ್ನು ಬಹಳ ಪರಿಚಿತನಂತೆ ನೋಡಿ, ಬಾಲವು ಇನ್ನೆಲ್ಲಿ ಬಿದ್ದು ಹೋಗುವುದೋ ಎನ್ನುವಷ್ಟು ಪೆಂಡುಲಮ್ ಥರ ಅಲ್ಲಾಡಿಸಿ, ಮೈ ಮೇಲೆಲ್ಲಾ ಎಗರಿ, ಕೈಯನ್ನು ಕಾಲನ್ನು ನೆಕ್ಕಿತು! ನಾನೂ ಅದನ್ನು ನನ್ನ ಹಳೆಯ ಸ್ನೇಹಿತನಂತೆಯೇ ಮಾತನಾಡಿಸಿದೆ. "ಹಾಗೆಲ್ಲಾ ನೆಕ್ತಾರೇನೋ ಕೊಳಕಾ!!!" ರಾಜೇಶ್ ಮನೆಯೊಳಗೆ ಹೊಕ್ಕು ಒಳಗಿನಿಂದಲೇ ನನ್ನನ್ನು ಕೂಗಿ, "ಇವರು ನನ್ನ ಪ್ರೆಂಡ್ ಹರುಣ್ ಹಂತ" ಎಂದು ಪರಿಚಯಿಸಿಕೊಟ್ಟರು! ಅವರ ಮನೆಯಲ್ಲಿ "ನಾಸ್ಟ" ಮಾಡಲು ಬಹಳ ಬಲವಂತ ಮಾಡಿದರು. ನಾವಿಬ್ಬರೂ ಒಂದೇ ನಿಲುವಿಂದ ಒಲ್ಲೆಯೆಂದೆವು. ಇಳಿಸಲಾಗದೆ ಇಡ್ಲಿಯನ್ನು ಇಳಿಸಿಕೊಂಡು ಬಂದಿರುವಾಗ ಇಲ್ಲಿ ಮತ್ತೆ ತಿನ್ನಲು ಮನಸಾಗಲೀ ಹೊಟ್ಟೆಯಾಗಲೀ ನಾಲಿಗೆಯಾಗಲೀ ಅನುಮತಿ ನೀಡಲಿಲ್ಲ.

ರಾಜೇಶ್ ತಮ್ಮ ಟ್ರೆಕ್ಕಿಂಗ್ ಔಟ್‍ಫಿಟ್‍ನಲ್ಲಿ ಫಿಟ್ ಆದರು. ಟೀ-ಶರ್ಟ್, ಟ್ರಾಕ್ ಪ್ಯಾಂಟ್, ಹವಾಯ್ ಚಪ್ಪಲಿ!! ಚಪ್ಪಲಿ ಧರಿಸಿ ಇವರು ಅದು ಹೇಗೆ ಅಷ್ಟೊಂದು ಚಾರಣ ಮಾಡ್ತಾರೋ ನಾನರಿಯೆ! ಆದರೆ ಇವರು ಸಾಧಿಸಿರುವ ಕಾಲುಭಾಗವನ್ನೂ ನಾನು ಮುಟ್ಟಲು ನನಗೆ ವರ್ಷಗಳೇ ಬೇಕಾದೀತು! ನಾನು ನನ್ನ ಮಾಮೂಲಿ ವೇಷದಲ್ಲಿ ಸಿದ್ಧನಿದ್ದೆ. ಟ್ರೆಕ್ಕಿಂಗ್ ಗೆ ಯಾವಾಗ ಬೇಕಾದರೂ ಸಿದ್ಧ! ಒಂದು ಟೀಶರ್ಟು, ಜೀನ್ಸು, ನನ್ನ ಪ್ರೀತಿಯ ಧಡಿಯ ಶೂ, ಹೆಗಲ ಮೇಲೊಂದು ಚೀಲ, ಚೀಲದೊಳಗೆ ನೀರಿನ ಬಾಟಲಿ, ಟಾರ್ಚು, ಸೊಂಟಕ್ಕೊಂದು ಪೌಚು. ತಲೆಯ ಮೇಲೆ ಕಿರೀಟವಂತೂ ಇಲ್ಲ, ಆದರೆ ಒಂದು ಟೋಪಿ ಇರದೇ ಇರುವುದಿಲ್ಲ!

ಅವರ ಮನೆಯಿಂದ ಹೊರಡುವಾಗ ನನ್ನ ಮೈಮೇಲೆ ಎಗರಿ ನನ್ನ ಕೈಕಾಲುಗಳನ್ನು ನೆಕ್ಕಿದ ನಾಯಿಯು ತನ್ನ ಸಂಗಾತಿಯ ಮರ್ಮಾಂಗಗಳನ್ನು ನೆಕ್ಕುತ್ತಿದ್ದ ದೃಶ್ಯ ಕಣ್ಣಿಗೆ ಬಿತ್ತು. ತಕ್ಷಣ ಹಿಂದಿರುಗಿ ಸೋಪು ಹಾಕಿ ಕೈತೊಳೆದು, " ಥೂ! ಅದಕ್ಕೆ ನಾಯಿ ಬಗ್ಗೆ ಗಾದೆ ಮಾಡಿರೋದು.. ಅಸಹ್ಯ ಮುಂಡೇದು" ಎಂದು ಶಪಿಸಿದೆ. ಮರುಕ್ಷಣವೇ "ಪಾಪ, ಅದರದೇನು ತಪ್ಪಿದೆ, ಎಲ್ಲಾ ನ್ಯಾಚುರಲ್ ಇನ್ಸ್ಟಿಂಕ್ಟ್ಸ್" ಅಂದು ತೆಪ್ಪಗಾದೆ. ಆದರೂ ಒಂದು ರೀತಿ ಅಸಹ್ಯವಾಗುತಿತ್ತು.

ಸಿಟಿ ಹಂಗಲ್ಲ ಕಣಪ್ಪೋ...

ಮರಳು ಸರಬರಾಜು ಮಾಡುವ ರಾಜ ಎಂಬಾತನನ್ನು ನಮ್ಮೊಂದಿಗೆ ಕರೆದೊಯ್ದೆವು. ಆತ ನನ್ನನ್ನು ನೋಡಿ, ರಾಜೇಶ್ ಗೆ "ಸಿಟಿ ಹಂಗಲ್ಲ ರಾಯೇಸಪ್ನೋರೇ.. ಅದು ಕಾಡು.." ಎಂದ. "ಹವ್ರು ಬೇಕಾದಷ್ಟು ಕಾಡು ನೋಡಿದಾರೆ.. ನೀನು ನಡಿ ರಾಜ.." ಎಂದು ನನ್ನ ಪರವಾಗಿ ರಾಜೇಶ್ ಮಾತನಾಡಿದರು. ಅದೆಂಥಾ ಕಾಡೋ! ಅಷ್ಟು ದಟ್ಟವಾಗಿದೆಯಾ? ಕರ್ನಾಟಕದ ಪಶ್ಚಿಮಘಟ್ಟಕ್ಕಿಂತಲೂ ಕನಕಪುರದ ಬಳಿ??? ರಾಜ ಯಾಕೆ ಹೀಗೆಲ್ಲಾ ಹೇಳ್ತಿದಾನೆ?? ಅವನೇನೇ ಹೇಳಲಿ, "ಅಮೃತ"ದ ವಾಸನೆ ಅವನ ಉಸಿರಿನಿಂದ ಬರುತ್ತಿದ್ದ ಕಾರಣ ಹೀಗೆಲ್ಲ ಮಾತನಾಡುತ್ತಿದ್ದಾನೆ ಎಂದುಕೊಂಡೆ. ನನ್ನ ಸಣ್ಣ ಸೂಕ್ಷ್ಮ ದೇಹ, ನೋಡಿದರೆ ಸಿಟಿಯವನಂತಿರುವ ನನ್ನ ಈ ಕಾಡು ಮನಸ್ಸಿನ ಸಿಟಿದೇಹವನ್ನು ನೋಡಿದ ರಾಜನಿಗೆ ಆ ಕಾಡು, ಆ ಬೆಟ್ಟ ಹತ್ತುತ್ತೀನೋ ಇಲ್ಲವೋ ಎಂಬ ಸಂದೇಹ ಬಂದಿರಬೇಕು.
ಚಾರಣ ಶುರುವಾಯಿತು. ಅವರಿಬ್ಬರೂ ಬಲುವೇಗದಲ್ಲಿ ನಡೆಯುತ್ತಿದ್ದರು. ನಾನು ಅವರ ಹಿಂದೆಯೇ ಅವರ ವೇಗಕ್ಕೆ ಹೊಂದಿಕೊಳ್ಳಲು ಯತ್ನಿಸುತ್ತ ನಡೆದೆ. ಬಾಣತಿಮಾರಿಯದು ಪಶ್ಚಿಮಘಟ್ಟದ ರೀತಿ ಹಸಿರುಗಾಡಲ್ಲ. ಮಳೆ ಬಂದಾಗ ಬೆಳೆಯುವ ಕಾಡು. ಕಳೆದ ಎರಡು ತಿಂಗಳು ಸಾಕಷ್ಟು ಮಳೆಯಾಗಿ ದಟ್ಟವಾಗಿ ಬೆಳೆದಿದೆ. ವಿಶೇಷವೇನೆಂದರೆ ಈ ದಟ್ಟ ಕಾಡಿನಲ್ಲಿ ಹೆಮ್ಮರಗಳಾಗಲೀ ಹೆಬ್ಬುಲಿಗಳಾಗಲೀ ಇಲ್ಲ. ಇದು ಸಂಪೂರ್ಣ ಮುಳ್ಳುಗಾಡು. ಮಳೆಯಾದ ಒಂದು ದಿನದಲ್ಲೇ ಎತ್ತೆತ್ತರಕ್ಕೆ ಮುಳ್ಳುಗಿಡಗಳು ಬೆಳೆದು ನಿಂತು ದಾರಿಯನ್ನೆಲ್ಲಾ ಮುಚ್ಚಿ ರಾಸ್ತಾ ರೋಕೋ ಚಳುವಳಿ ಮಾಡುತ್ತವೆ. ಈ ಮೊನೆಯಾದ ಮುಳ್ಳಿನ ವ್ಯೂಹವನ್ನು ಭೇದಿಸಿ, ಛೇದಿಸಿ ದಾರಿ ಮಾಡಿಕೊಂಡು ಬೆಟ್ಟ ಹತ್ತುವುದರಲ್ಲಿ ಅದೆಂಥ ಆನಂದ! ಅನುಭವಿಸಿದವನಿಗೇ ಗೊತ್ತು!!!
ರಾಜನ ಕೈಲಿ ಮಚ್ಚಿತ್ತು. ದಾರಿಗೆ ಅಡ್ಡ ನಿಂತ ಚಳುವಳಿಗಾರರ ಕತ್ತು ಕತ್ತರಿಸಿದನು. ಇಲ್ಲಿರುವಿದು ಬರೀ ಮುಳ್ಳು ಮಾತ್ರವಲ್ಲ. ತೇಗ, ಬಿದಿರು, ನೆಲ್ಲಿ ಇನ್ನು ಅನೇಕ ಔಷಧಿಯುತ ಗಿಡಗಳು ಸಹ ಇವೆ. ರಾಜನು ಅಂದಿನ ತನ್ನ ಊಟಕ್ಕೆಂದು ಬಿದಿರು ಕಳಲೆಯನ್ನು ಕಿತ್ತುಕೊಳ್ಳುತ್ತಾ ಬಂದನು. (ಬಿದಿರಿನ ಬೇರಿನ ಬಳಿ ಬೆಳೆಯುವ ಎಳೆಯ ಕಾಂಡವನ್ನು ಕಳಲೆ ಎನ್ನುತ್ತಾರೆ. ಇದರ ಸಾಂಬಾರು ಬಲುರುಚಿ. ಕಾನೂನು ಪ್ರಕಾರ ಇದನ್ನು ಇದನ್ನು ಕಡಿಯುವುದು ನಿಷಿದ್ಧ. ಪಾಲಿಸದವರ ಪ್ರಕಾರ ನಿಷಿದ್ಧವಲ್ಲ!! ಕಳಲೆಯನ್ನು ಕಡಿದಾಗ ಇಡೀ ಗಿಡವು ಸತ್ತು ಹೋದಂತೆ. ಮೊಳಕೆಯಲ್ಲೇ ಚಿವುಟಿದಂತೆ. ನಮ್ಮ ಕೂಸನ್ನು ಅತಿ ಚಿಕ್ಕ ವಯಸ್ಸಿನಲ್ಲೇ ಕೊಚ್ಚಿಹಾಕಿದಂತೆ.)ಒಂದು ಚೂರೂ ದಾರಿಯಿಲ್ಲದ ದಾರಿಯಲ್ಲಿ ದಾರಿಯನ್ನು ಮಾಡುತ್ತ ಸಾಗಿದೆವು. ಕೈಕಾಲುಗಳು ತರಚಿ ಬರೆ ಹಾಕಿದಂತಾದವು. ಲಂಟಾನ ನವೆಯನ್ನುಂಟು ಮಾಡಿತು! ಕರಡಿಗಳು ಎದುರು ಬಾರದಿರಲಿ ಎಂದು ರಾಜ ಆಗಾಗ್ಗೆ "ಹೊಯ್.." ಎಂದು ಜೋರಾಗಿ ಕೂಗುತ್ತಿದ್ದ. ಒಂದು ಬೃಹತ್ ಬಂಡೆಯನ್ನು ತಲುಪಿದೆವು. "ಅರುಣೂ.. ನೋಡಿ ಹೇಗಿದೆ ಕಾಡು.." ಎಂದ.. ನಾನು ಸುಮ್ಮನೆ ನಕ್ಕು ನಿಶಬ್ಧವನ್ನು ಆನಂದಿಸಿದೆ. ಮೌನವನ್ನು ಮೀರಿದ ನಿಶಬ್ಧ ಅದು. ಹಾಡು ಗುನುಗತೊಡಗಿದೆ..


"ಸುಹಾನೀ ರಾತ್ ಢಲ್ ಚುಕೀ.. ನ ಜಾನೇ ತುಮ್ ಕಬ್ ಆಓಗೇ..."

ಬೆಟ್ಟದ ಕಾಲು ಭಾಗ ತಲುಪಿದ್ದೆವು. ಚಾರಣ ಮುಂದುವರೆಸಿದೆವು. ದಾರಿಯುದ್ದಕ್ಕೂ ರಾಜ ಕಳಲೆಯನ್ನು ಕಿತ್ತು ಕಿತ್ತು ಅಲ್ಲಲ್ಲಿ ಬಚ್ಚಿಡುತ್ತಿದ್ದ. "ಕೆಳೀಕ್ ಓಯ್ತೀವಲ್ಲಾ, ಆಗ ತಗೋತೀನಿ ಅರುಣೂ.." ಅಂತ ಬಾಯಿ ಬಾಯಿ ಬಿಟ್ಟುಕೊಂಡು ನೋಡುತ್ತಿದ್ದ ನನಗೆ ಹೇಳಿದ. ನೆಲ್ಲಿಕಾಯಿ ಮರ ಸಿಕ್ಕಿತು.. ಸಾಕಷ್ಟು ನೆಲ್ಲಿಕಾಯಿ ತಿಂದೆವು. ನಂತರ ಹೊನ್ನೆ ಮರ ಎದುರಾಯಿತು. ಅದರ ಕೊಂಬೆಗೆ ರಪ್ಪನೆ ತನ್ನ ಮಚ್ಚಿಂದ ಬೀಸಿದ. ಕೆಂಪಗೆ ರಕ್ತ ಬಂದಿತು. ಅವನು ರಾಮಾಯಣದ ಒಂದು ಕಥೆಯನ್ನು ಹೆಳಿ, ಹೊನ್ನೆ ಮರದಲ್ಲಿ ಹಾಲು ಬರಲ್ಲ, ರಕ್ತ ಬರುತ್ತೆ ಎಂದ.ಹೀಗೆ ಕಥೆ ಕೇಳುತ್ತ ಕೇಳುತ್ತ, ಬೆಟ್ಟದ ನೆತ್ತಿಗೆ ಬಂದೇಬಿಟ್ಟೆವು. ಬಾಣತಿಮಾರಿ ಬೆಟ್ಟದ ಪೀಕ್! ದೊಡ್ಡ ಸ್ಟೇಡಿಯಮ್ ಹಾಗಿದೆ. ತುದಿಗೆ ಹೋದೆವು. ಗಾಳಿಯು ನಮ್ಮನ್ನು ಹಾರಿಸಿಕೊಂಡು ಹೋಗುವಂತೆ ಇತ್ತು. ಭೋರೆಂದು ಸದ್ದು ಮಾಡುತ್ತಿತ್ತು! ಮೂರುಸಾವಿರ ಅಡಿಗಳ ಎತ್ತರದಲ್ಲಿ ನಿಂತು ಆಷಾಢದಲ್ಲಿ ಆ ಪವನಸ್ಪರ್ಶವನ್ನು ಆ ಅನುಭವವನ್ನು ಬರೆಯಲು ಸಾಧ್ಯವಿಲ್ಲ. ಅದನ್ನು ಅನುಭವಿಸಲೇ ಬೇಕು. ಬೆಟ್ಟದ ಮೇಲೆ ಒಂದಷ್ಟು ಹೊತ್ತು ಕಾಲ ಕಳೆದೆವು. ಎರಡು ಸಾವಿರ ಅಡಿಯ ಜಾರುಬಂಡೆಯಂತಿದ್ದ ಹೆಬ್ಬಂಡೆಯನ್ನು ಕಂಡು ಆನಂದಿಸಿದೆವು. ಆ ಬಂಡೆಯಿಂದ ನೀರು ಜಾರಿಹೋಗುತ್ತಿತ್ತು. ಎಡಕ್ಕೆ ತಿರುಗಿದರೆ, ದೂರದಲ್ಲಿ ಕಲ್ಲಹಳ್ಳಿಯ ಚಿಕ್ಕ ತಿರುಪತಿಯೆಂದೇ ಖ್ಯಾತವಾದ ವೆಂಕಟೇಶ ದೇವಸ್ಥಾನ. ಹಾಗೇ ಅರ್ಧ ಸೆಂಟಿಮೀಟರು ಕಣ್ಣು ಪಕ್ಕಕ್ಕೆ ಹಾಯಿಸಿದರೆ ಗೆರೆಯೆಳೆದಂತೆ ಅರ್ಕಾವತಿ! ಬಲಕ್ಕೆ ತಿರುಗಿದರೆ ಬರೀ ಬೆಟ್ಟಗಳೆ!ಕೆಳಗೆ ಧಾವಿಸಿದೆವು..

ಅಲ್ಲಿಂದ ಕೆಳಗೆ ಇಳಿವಾಗ ಮುಳ್ಳುಗಳನ್ನು ಲೆಕ್ಕಿಸುವಷ್ಟು ಸಮಯ ನಮಗೆ ಇರಲಿಲ್ಲ. ಸಮಯ ಹತ್ತುಗಂಟೆಯೆಂದು ಗಡಿಯಾರ ಕೂಗಿ ಹೇಳಿತು. ವಿಜಯಲಾಲರನ್ನು ನೋಡಬೇಕಿತ್ತು. ಹಾಗೇ ತರಚಿಕೊಂಡೇ, ಮೈಕೈ ಗಾಯ ಮಾಡಿಕೊಂಡೇ ಕೆಳಗೆ ಧಾವಿಸಿದೆವು. ರಾಜೇಶರ ಸಂಬಂಧಿಕರ ಮನೆಯಲ್ಲಿ ಸೊಗಸಾದ ಮುಂಡುಗ ಅಕ್ಕಿಯ ಸಾರನ್ನ ಬಡಿಸಿದರು. ಹಸಿದ ಹೊಟ್ಟೆಯು ಥ್ಯಾಂಕ್ಸ್ ಹೇಳಿತು. ರಾಜ ತನ್ನ ಮನೆಗೆ ಹೋದ.. ಮೂರು ಕೆ.ಜಿ. ಕಳಲೆಯೊಂದಿಗೆ! ಎಲ್ಲರಿಗೂ ಬೈ ಹೇಳಿ ನನ್ನ ಫಿಯರೋ ಏರಿ ಹೊರಟೆವು. ರಾಜನಿಗೆ ಇಪ್ಪತ್ತು ರುಪಾಯಿ ಇನಾಮು ಕೊಟ್ಟು ವಿಶೇಷ ಬೈ ಹೇಳಿ ಹಳ್ಳಿಯಿಂದ ಹೊರಕ್ಕೆ ಹೋಗುವಾಗ ಇರುವ ಭೀಕರ ರಸ್ತೆಯಲ್ಲಿ ಜಾಗರೂಕತೆಯಿಂದ ಗಾಡಿ ಓಡಿಸತೊಡಗಿದೆ. ರಾಜೇಶ್, "ನೋಡಿ.. ನಾನು, ರವಿಶಂಕರ್ ಇಬ್ರೂ ಸೋಲಿಗೆರೆಲಿ..." ಅಂತ ಹದಿನಾರನೆಯ ರಿಪೀಟ್ ಟೆಲಿಕಾಸ್ಟ್ ಮಾಡಿದರು..

ನಾನು ಬೆವರೊರೆಸಿಕೊಂಡು ಒಳಗೇ ನಕ್ಕೆ!

-ಅ
14.02.2004

9 comments:

 1. hmmmm..chennagidhe..lekhana.. :-)... kanakapurada hatra idhella idhya...?? hmmm...

  neevu ivaga bareyo shaili.. 3 varshada hindina shaili ge holisidare..vyathyaasa kandubaruttadhe.... :-) idhu nanna abhipraaya...

  ReplyDelete
 2. ಮೂರು ವರ್ಷದಲ್ಲಿ ವ್ಯತ್ಯಾಸ ಬರೋದು ಸಹಜ... ನಾನು ಮೂರು ವರ್ಷದ ಹಿಂದೆ ಹಾಕುತ್ತಿದ್ದ ರುಜುನೇ ಇವತ್ತು ಹಾಕೋದು ಕಷ್ಟ. ಇನ್ನು ಬರೆಯುವ ಶೈಲಿ ಕೇಳ್ಬೇಕಾ?

  ಆದ್ರೂ ಲೇಖನ ತುಂಬ ಚೆನ್ನಾಗಿದೆ. ಇದನ್ನು ಬರೆದ ತಪ್ಪಿಗೆ - ಬಾಣತಿ ಮಾರಿ ಬೆಟ್ಟಕ್ಕೆ ನನ್ನ ಯಾವಾಗ ಕರ್ಕೊಂಡು ಹೋಗ್ತೀಯ ಅರುಣ? :-)

  ReplyDelete
 3. [ಶ್ರೀಧರ] ವ್ಯತ್ಯಾಸ ಬೆಳವಣಿಗೆ ರೀತಿಯಲ್ಲಿದೆಯೋ ಅಥವಾ ಇನ್ನೂ ಕೆಟ್ಟದಾಗಿದೆಯೋ?

  [ಶ್ರೀಕಾಂತ್] ಜುಲೈ ಅಲ್ಲಿ ಕರ್ಕೊಂಡ್ ಹೋಗ್ತೀನಿ...

  ReplyDelete
 4. vyathyaasa beLavaNige reethilidyo athava bere thara idyo antha heLo ashtu doddonalla naanu..asht yogyathenu illa nange :-)

  ReplyDelete
 5. [ಶ್ರೀಧರ] ಹಾಗೇನೂ ಇಲ್ಲಪ್ಪಾ.. ಒಬ್ಬ ಓದುಗನಾಗಿ ನಿನಗೇ ಗೊತ್ತಾಗುತ್ತೆ, ವ್ಯತ್ಯಾಸ.. ಒಳ್ಳೇ ರೀತಿಯಲ್ಲಿದೆಯೋ, ಅಥವಾ ಕುಲಗೆಟ್ಟು ಮಠ ಸೇರಿದ್ದೆಯೋ ಅಂತ..

  ReplyDelete
 6. [ಶ್ರೀನಿಧಿ] ಈ ಸಲದ ಮಳೆಗಾಲದಲ್ಲಿ ಅಲ್ಲಿಗೆ ಒಂದು ಟ್ರೆಕ್ಕು RHM ಇಂದ ಇದೆ. ಜುಲೈ ಅಲ್ಲಿ. ಮಳೆಗಾಲದಲ್ಲೇ ಅಲ್ಲಿ ಮಜ ಬರೋದು.

  ReplyDelete
 7. ಆಹ್! ಒಮ್ಮೆ ಬಾಣತಿಮಾರಿಯನ್ನು ಹತ್ತಿ ಇಳಿದಂತಾಯಿತು.. ಆಗ ನೀನು ಬರೆಯುತ್ತಿದ್ದುದು ಈಗಿನ ಲೇಖನಕ್ಕಿಂತ ಕಡಿಮೆಯೇನೂ ಇಲ್ಲ. ಇದೂ ಈಗ ಬರೆದಂತೆಯೇ ಇದೆ. ಶ್ರೀಧರ ಹೇಳಿದಂತೆ ಎಲ್ಲೋ ಒಂದೆರಡು ಕಡೆ ನೀನು ಹೆಚ್ಚು ಒತ್ತು ಕೊಡುತ್ತಿದ್ದ, ಈಗ ಒತ್ತು ಕೊಡುವ ವಿಷಯಗಳಲ್ಲಿರುವ ವ್ಯತ್ಯಾಸದ ಹೊರತಾಗಿ ಬಹಳ ಸೊಗಸಾದ ಲೇಖನ. :)

  ReplyDelete
 8. [ಗಂಡಭೇರುಂಡ] ತುಂಬಾ ಥ್ಯಾಂಕ್ಸ್ ಕಣಪ್ಪಾ.. ಹಾಗಾದರೆ ಇನ್ನು ಮುಂದೆ ಬೆಳವಣಿಗೆಯತ್ತ ಗಮನ ಹರಿಸುವಂತಾಗುತ್ತೇನೆ.. :-)

  ReplyDelete

ಒಂದಷ್ಟು ಚಿತ್ರಗಳು..