Wednesday, May 09, 2007

ಕೊಡಗಿನ ಮಳೆಯಲೊಂದು ಟ್ರೆಕ್ಕು..ಬೆಟ್ಟದ ತುದಿಯಲ್ಲಿ......

"ರೀ.. Let us go back.. Its raining heavily.. ಬೇಡ.. ನೋಡಿ, ಎಷ್ಟು ಮೋಡ.. listen to me.. come here.. ಬನ್ನಿ ಇಲ್ಲಿ, ಹೇಳ್ತೀನಿ.. ಅಲ್ಲದೇ ಬಂಡೆಗಳು ಜಾರುತ್ತೆ..", ಗೋವಿಂದ್ ರಾಜ್ ಎಂದಿನಂತೆಯೇ ತಮ್ಮ ಧಾಟಿಯಲ್ಲಿ, ಎತ್ತರದ ಕಂಠದಲ್ಲಿ ಹೇಳುತ್ತಿದ್ದಾಗ ಕತ್ತಲಾಗುವ ಸಮಯ ಇನ್ನೇನು ದೂರವಿರಲಿಲ್ಲ. ಬ್ಯಾಗುಗಳನ್ನೆಲ್ಲಾ ಎರಡು ಬಂಡೆಗಳ ಮಧ್ಯೆ ಹಾಕಿ, ಮೇಲೆ ಪ್ಲಾಸ್ಟಿಕ್ ಚೀಲವನ್ನು ಹೊದಿಸಿ, ವಿರಮಿಸಿಕೊಳ್ಳುತ್ತಿದ್ದ ನಾವು ಆಗಲೇ ಹತ್ತು ಕಿ.ಮೀ ನಡೆದು ಬಂದದ್ದಾಗಿದೆ. ಚಾರಣ ಮಾಡಬೇಕಿದ್ದು ಇನ್ನೂ ಎರಡೇ ಕಿ.ಮೀ. ಆದರೆ, ಬಹಳ ಎತ್ತರದ ಶಿಖರವನ್ನೇರುವಂತಿತ್ತು. ದೊಡ್ಡ ದೊಡ್ಡ ಬಂಡೆಗಳು ಎದ್ದು ಕಾಣುತ್ತಿದ್ದವು. ಮಳೆಯಲ್ಲಿ ನೆಂದ ಬಂಡೆಗಳು ಜಾರೋ-ಬಂಡೆಯಾಗುವುದೆಂಬುದು ಎಲ್ಲಾ ಚಾರಣಿಗನಿಗೂ ಗೊತ್ತಿರುವ ಸತ್ಯ!

ಆದರೆ ಕಣ್ಣಿಗೆ ಕಾಣುತ್ತಿದ್ದ ಬಂಡೆಗಳನ್ನು ಹಾಗೆಯೇ ಏರುವ ಅವಷ್ಯವಿಲ್ಲವೆಂವುದು ಡೀನ್ ಹಾಗೂ ನಾನು ಸ್ವಲ್ಪ ದೂರ ನಡೆದು ಸಾಗಿ ದಾರಿಯನ್ನು ಪತ್ತೆ ಮಾಡಿ ಬಂದ ನಂತರವೇ.. ದೇವಸ್ಥಾನಗಳಿಗಿರುವ ಕಾಲುದಾರಿಗಳಂತೆ ಸ್ಪಷ್ಟ ದಾರಿ ಸಿಕ್ಕಾಕ್ಷಣ "ಅಯ್ಯೋ ಇಲ್ಲೇ ಇದ್ಯಲ್ಲಾ ಮಾರಾಯ ದಾರಿ" ಎಂದು ಡೀನ್ ತಮ್ಮ ಕೈಯನ್ನು ದಾರಿಯೆಡೆಗೆ ಚಾಚಿ ತೋರಿಸಿದರು. ಮಳೆ ಆರಂಭವಾದ ಜಾಗದಲ್ಲಿ ಟೆಂಟನ್ನು ಬಿಡಿಸಿ ರಾತ್ರಿ ಅಲ್ಲೇ ಇದ್ದು ಬೆಳಿಗ್ಗೆ ಶಿಖರವನ್ನೇರೋಣವೆಂಬುದು ಶ್ರೀಕಾಂತನ ಸಲಹೆಯಾಗಿತ್ತು. ಶ್ರೀಕಾಂತನ ಕಂಗಳೂ ಸಹ ಅದನ್ನೇ ಹೇಳುತ್ತಿತ್ತು. "ಆಮೇಲೆ, ಹೆಚ್ಚು-ಕಮ್ಮಿ ಆಗ್ಬಿಟ್ರೆ?" ಅನ್ನೋ ಚಕಿತಭರಿತ ಪ್ರೆಶ್ನೆಯೊಂದು ಅವನ ಕಂಗಳಲ್ಲಿ ಗೋಚರಿಸುತ್ತಿತ್ತು.

ಬರುತ್ತಿದ್ದ ಮಳೆಯ ರಭಸವನ್ನು ಅನುಭವಿಸಲು ಪ್ಲಾಸ್ಟಿಕ್ ಸೂರಿನಿಂದ ಹೊರಗೆ ಬಂದು ಸಂಪೂರ್ಣ ನೆಂದು ಸಂತಸ ಪಟ್ಟೆ. ಬಟ್ಟೆಯೆಲ್ಲಾ ಸಂಪೂರ್ಣ ಒದ್ದೆಯಾಗಿದ್ದರೂ ಬೆಟ್ಟವನ್ನೇರಲು ಹೊರಟ ಕೆಲಸಮಯದಲ್ಲೇ ಒಣಗಿತು.. ಆದರೆ ಮಸುಕಿದ ಮಂಜು, ಅದರೊಳಗೆ ನಾವು, ನಮ್ಮನ್ನು ಸಂಪೂರ್ಣ ಒದ್ದೆ ಮಾಡಿತ್ತು. ಸ್ವರ್ಗದಲ್ಲಿ ದೇವತೆಗಳು ಮೋಡದ ಮೇಲೆ ಇರುತ್ತಾರೆಂಬಂತೆ ಚಲನಚಿತ್ರಗಳಲ್ಲಿ ತೋರಿಸೋದಿಲ್ವೇ, ಹಾಗೆ ನಾವು ಸ್ವರ್ಗದಲ್ಲಿದ್ದೇವೆಂಬ ಭಾಸವಾಗುತ್ತಿತ್ತು. ಈ ಭಾಸದಲ್ಲಿ ಮುಂದಿನ ದಾರಿಯೇ ಕಾಣದಂತಿತ್ತು. ಮಂಜು ಮರೆಯಾಗಲು ತುಸು ಕಾದು ನಂತರ ಚಾರಣ ಮುಂದುವರೆಸಬೇಕಾಯಿತು.

ಕೋಟೆಬೆಟ್ಟವು ಕಡೆಯ ಹಾದಿಯವರೆಗೂ ಬೇರೆ ಬೆಟ್ಟಶ್ರೇಣಿಗಳ ಹಿಂದೆ ಅವಿತುಕೊಂಡಿದೆ. ಅವನ್ನೆಲ್ಲಾ ದಾಟಿಬಂದ ಮೇಲೆ, ಕೈಲಾಸ ಪರ್ವತವನ್ನು ಹೋಲುವಂತೆಯೇ ಪೋಸ್ ಕೊಟ್ಟು ಸ್ವಾಗತಿಸುತ್ತೆ! ಆದರೆ ಈ ಕೈಲಾಸವನ್ನೇರಲು ಯಾರ ಅಡಚಣೆಯೂ ಇಲ್ಲ - ಮಳೆಗಾಲದಲ್ಲಿ ಆನೆಗಳನ್ನು ಹೊರೆತಾಗಿ. ಬೆಟ್ಟದ ಮೇಲೆ ಟೆಂಟುಗಳನ್ನು ಹಾಕಿ ಅದರೊಳಗೆ ಹೊಕ್ಕು ಉಸಿರೆಳೆದುಕೊಳ್ಳುವಾಗ ಸಿಡಿಲು ಗುಡುಗುಗಳು ನಮ್ಮನ್ನು ಲಯಬದ್ಧವಾಗಿ ರಂಜಿಸಿದವು. ಗಾಳಿಯ ಗಾಯನಕ್ಕೆ ಟೆಂಟುಗಳೂ ತೂಗಿದವು! ಸೂರ್ಯನು ಆಗಸವನ್ನೆಲ್ಲಾ ರುಧಿರಕೆಂಪಾಗಿಸಿ "ನಾಳೆ ಸಿಗೋಣ, ಪೂರ್ವದಲ್ಲಿ!" ಎಂದು ಹೇಳಿ ಹೊರಟು ಹೋದನು.ಟೆಂಟಿನೊಳಗೆ ನಿದ್ದೆ ಬರಲು ಪ್ರಕೃತಿಯೂ ಕಾರಣ. ಗಾಳಿ ಜೋರಾಗಿ ಬೀಸಲಿಲ್ಲ, ಮಳೆ ನಿಂತು ಹೋಯಿತು. ಗುಡುಗು ಸಿಡಿಲು ತಾಳ ಮೇಳಗಳು ಮನೆಗೆ ಹೊರಟು ಹೋದವು.ಬೆಳಿಗ್ಗೆ ಎದ್ದು ರಾಗಿ ಹುರಿಟ್ಟು ಕಲಸಲು ಬಾರದೆ, ಅರ್ಧ ಕೆ.ಜಿ. ಹುರಿಟ್ಟನ್ನು ಚೆಲ್ಲಿದ್ದಾಯಿತು. ಅದಕ್ಕೆ ಒಂದಷ್ಟು ಅನ್ನಿಸಿಕೊಂಡಿದ್ದೂ ಆಯ್ತು. "ನಾನು ಮೊದಲೇ ಹೇಳಿದೆ, ಅಷ್ಟೊಂದು ಹಾಕ್ಬೇಡಿ ಅಂತ.. ಈಗ ನೋಡಿ" ಅಂತ ಡೀನ್ ತಮ್ಮ ಯಾವುದೋ ಜನ್ಮದ ಸಿಟ್ಟನ್ನು ತೀರಿಸಿಕೊಂಡಂತೆ ಬೈದರು. ಬೈಗುಳ ಚೆನ್ನಾಗಿತ್ತು. ಎಲ್ಲರೂ ಸೇರಿ ಬೈದರು ನನಗೆ. ಅದನ್ನೆಲ್ಲಾ ಇಲ್ಲಿ ಬರೆಯೋದಿಲ್ಲ ಬಿಡಿ. ಅಲ್ಪ ಸ್ವಲ್ಪ ಮರ್ಯಾದೆಯನ್ನು ಉಳಿಸಿಕೊಂಡಿದ್ದೀನಿ. ಅನ್ನಪೂರ್ಣ ಪೂರ್ವದಲ್ಲಿ ಮೋಡದ ಮರೆಯಲ್ಲಿ ಅಡಗಿದ್ದ ಸೂರ್ಯನಿಗೆ ಬೆನ್ನು ತೋರಿಸಿ, ಬೆಟ್ಟದ ತುದಿಯಲ್ಲಿ ಕುಳಿತು ಸ್ವರ್ಗದಂಥ ದೃಶ್ಯವನ್ನು ನೋಡಿ ಮೈಮನಮರೆತು ಆನಂದಮಯಕೋಶವನ್ನು ತಲುಪಿದ್ದರು. ಡೀನ್ ಟೆಂಟನ್ನು ಬಿಡಿಸುತ್ತಲೇ ನನಗೆ ರಾಗಿಹುರಿಟ್ಟಿನ ಸಲುವಾಗಿ ಬೈಯ್ಯುತ್ತಲೇ ಇದ್ದರು.

ಎರಡು ದಿನದಿಂದಲೂ ಬೈಸಿಕೊಳ್ಳೂತ್ತಲೇ ಇದ್ದೆ ನಾನು. ಹಿಂದಿನ ದಿನ ಬಸ್ಸಿನಲ್ಲಿ ನಾಪತ್ತೆಯಾದ ಮೊಬೈಲ್ ಸಲುವಾಗಿ ನಾನು ಎಲ್ಲರಿಂದಲೂ ಹೊಸ ಹೊಸ ರಿಂಗ್ ಟೋನ್‍ಗಳ ಉಪದೇಶಗಳನ್ನು ಕೇಳಿ ನಂತರ ಹೇಗೋ ಆ ಬಸ್ಸನ್ನು ಚೇಸ್ ಮಾಡಿ ವಾಪಸ್ ಪಡೆದುಕೊಂಡಿದ್ದೆವು. ಮಡಿಕೇರಿಯ ವೀಥಿಯಲ್ಲಿ ಬೆಳ್ಳಂಬೆಳಿಗ್ಗೆ ಹಾಗೆ ದಿಕ್ಕುಕಾಣದೆ ಓಡುತ್ತಿರುತ್ತೇನೆಂದು ಕನಸುಮನಸಿನಲ್ಲಿಯೂ ಎಣಿಸಿರಲಿಲ್ಲ. ನನ್ನೊಡನೆ ಓಡುತ್ತಿದ್ದ ಶ್ರೀಕಾಂತ್ ಕರೆದರೂ ಕೇಳದಂತೆ ಓಡುತ್ತಿದ್ದೆನೇ? ನನ್ನ ಪಾಡನ್ನು ತಮ್ಮ ಪಾಡೆಂದುಕೊಂಡು ಡಿಪೋ ಇಂದ ಹೊರಟ ಬಸ್ಸಿನಲ್ಲೇ ಬಂದ ಡೀನ್ ಕೂಗಿದ್ದೂ ಕೇಳಿಸದೇ ಹೋಯಿತೇ? ಅಂತೂ ಹೇಗೋ ಮೊಬೈಲ್ ಸಿಕ್ಕಿತು. ಪಯಣವನ್ನು ಹಟ್ಟಿಹೊಳೆಯತ್ತ ಬೆಳೆಸಿದೆವು.

ಹ್ಯಾಟಿಹೋಲ್

ಇಂಗ್ಲೀಷಿನಲ್ಲಿ ಬರೆದಿರೋದು ಹೀಗೆಯೇ.. Hattyhole! ಅಲ್ಲಿಂದ ಚಾರಣವನ್ನಾರಂಭಿಸಿದ ನಾವು ಕೋಟೆಬೆಟ್ಟವನ್ನು ಯಾವಾಗ ತಲುಪುತ್ತೇವೋ ಎಂದು ಕಾತುರರಾಗಿದ್ದೆವು. ಹಟ್ಟಿಹೊಳೆಯಲ್ಲಿ ಸ್ನಾನ ಮಾಡಬೇಕೆಂದು ಥಟ್ಟನೆ ಎಲ್ಲರಿಗೂ ಹೊಳೆದ ಸಂಗತಿ - ನನ್ನನ್ನು ಹೊರೆತು. "ನಾಳೆ ವಾಪಸ್ ಬರ್ತಾ ಇಳಿಯೋಣ, ನೀರು ಸಕ್ಕತ್ತಾಗಿದೆ" ಅನ್ನಪೂರ್ಣ ಆದೇಶಿಸಿದರು. ಎಡದಲ್ಲಿ ಸಿಕ್ಕ ಸೇತುವೆಯಂತೂ ಬಹಳ ಖುಷಿ ಕೊಟ್ಟಿತು ನನಗೆ. ಆ ಸೇತುವೆಯನ್ನೊಮ್ಮೆ ದಾಟಿ ಪುನಃ ಹಿಂದಿರುಗಿದೆವು. ಟಾರುರಸ್ತೆಯು ಕಲ್ಲು ರಸ್ತೆಯಾಗಿ, ಅದು ಕಾಲುದಾರಿಯಾಗಿ ನಂತರ ಕಾಡುದಾರಿಯಾಗುವುದು ಇಲ್ಲಿನ ಹಾದಿಯ ವೈಶಿಷ್ಟ್ಯ.
ಹೋಗುವಾಗ ಅಲ್ಲಿ ಇಲ್ಲಿ ಕುಳಿತು, ಒಂದೆರಡು ಕಡೆ ನಿದ್ದೆ ಹೊಡೆದು, ಹಲಸಿನ ಹಣ್ಣನ್ನು ಕಿತ್ತು ತಿನ್ನದೇ ಬರೀ ಹೆಚ್ಚಿ, ನೂರಾರು ಫೋಟೋಗಳನ್ನು ಕ್ಲಿಕ್ಕಿಸಿ, ಕೈಲಾಸರೂಪಿ ಕೋಟೆಬೆಟ್ಟದ ತಪ್ಪಲನ್ನು ತಲುಪಲು ನಮಗೆ ಐದುಗಂಟೆಗಳಕಾಲವೇ ಬೇಕಾಯಿತು. ದಾರಿಯಲ್ಲಿ ತೊರೆಯೊಂದರಲ್ಲಿ ನೀರು ಎಷ್ಟು ಕಡಿಮೆಯಿತ್ತೆಂದರೆ, ಶ್ರೀಕಾಂತನೂ ನಾನೂ ನಮ್ಮ ಬಾಟಲಿಯನ್ನು ಭರ್ತಿ ಮಾಡಲು ಮುಚ್ಚಲದಿಂದ ತುಂಬಿಸಿದೆವು.

ಕೆಳಗಿಳಿವಾಗ ಈ ಹಲಸಿನ ಹಣ್ಣನ್ನು ಹೆಚ್ಚಿದ ಜಾಗ, ನೀರು ತುಂಬಿಸಿದ ಜಾಗ, ನಾಯಿ ಮರಿಯು ಸಿಕ್ಕಿದ ಜಾಗ, ಎಲ್ಲವನ್ನೂ ನೋಡುತ್ತಾ, ವೇಗವಾಗಿ ಚಾರಣ ಮಾಡುತ್ತ ನೆನಪಿನ ಶಿಖರವನ್ನೇರತೊಡಗಿದೆವು. ಹಟ್ಟಿಹೊಳೆಯಲ್ಲಿ ಒಂದು ಗಂಟೆ ಕಾಲ ಕಳೆದು, ಮಂಡಿಯೆತ್ತರದ ನೀರಿನಲ್ಲಿ ತೇಲಾಡಿ, ಉರುಳಾಡಿ, ಹೊರಳಾಡಿ, ಆಟವಾಡಿ, ಸಂತಸ ಪಟ್ಟು, ಹಸಿದ ಹೊಟ್ಟೆಯಲ್ಲಿ ಮಡಿಕೇರಿಯನ್ನು ತಲುಪಿ, ಊಟ ಮುಗಿಸಿದೆವು.

ಒಂದು ವರ್ಷದ ಪ್ರಾಜೆಕ್ಟು
ಒಂದು ವರ್ಷದಿಂದ ಕೋಟೆಬೆಟ್ಟ ಕೋಟೆಬೆಟ್ಟ ಎಂದು ಯೋಜನೆ ಹಾಕುತ್ತಲೇ ಬರುತ್ತಿದ್ದೆವು. ಆದರೆ ಈಗ ಕೈಗೂಡಿತು. ಕೋಟೆಬೆಟ್ಟ ನಮ್ಮನ್ನು ಧನ್ಯರನ್ನಾಗಿಸಿತು! ಸಂಪೂರ್ಣ ಯೋಜನೆ, ನಿರ್ವಹಣೆಗಳನ್ನು ಡೀನ್ ಹಾಗೂ ಶ್ರೀಕಾಂತ್ ವಹಿಸಿಕೊಂಡಿದ್ದರು. ಅನ್ನಪೂರ್ಣ, ಗೋವಿಂದ್ ರಾಜ್, ಮತ್ತು ನನ್ನ ಕೆಲಸ ಅವರನ್ನು ಫಾಲೋ ಮಾಡುವುದಷ್ಟೇ.. ಅವರೆಲ್ಲಿ ಕರೆದರತ್ತ ಹೋಗಲು ಸಿದ್ಧನಿದ್ದೆ!

ಇನ್ನೂ ಅನೇಕ ಪ್ರಾಜೆಕ್ಟುಗಳು ಪೆಂಡಿಂಗ್ ಇವೆ.. ಆದಷ್ಟು ಬೇಗ ಎಲ್ಲವನ್ನೂ ನೆರವೇರಿಸುವ ಕೆಲಸವನ್ನು ನಮ್ಮ ಪ್ಲಾನಿಂಗ್ ಕಮಿಷನ್ ಕೈಗೊಳ್ಳುತ್ತೆಂದು ಆಶಿಸುತ್ತೇನೆ.. ಹಿಂಬಾಲಿಸಲು ನಾನು ಸಿದ್ಧನಿದ್ದೇನೆ. ಗುರುಗಳ ಹಿಂದೆ ಶಿಷ್ಯನಿದ್ದಂತೆ!!ಡೈಲಾಗ್ಸ್


"ರೀ, ಇಲ್ಲಿ ದೇವಸ್ಥಾನ ಇದೆ ಅನ್ನೋದೇ ಡೌಟು, ಮೇಲೆ ಹೋಗೋದು ಸೇಫ್ ಅಲ್ಲ.. come on lets go back.. ಮಳೆ ನೋಡಿ, ಬೋಳಿಮಗಂದು ಎಷ್ಟು ಜೋರಾಗಿ ಬರ್ತಿದೆ.." - ಗೋವಿಂದ್ ರಾಜ್ (ಮಳೆ ಶುರುವಾದ ತಕ್ಷಣ)

"ಇದು ನನ್ನ ಬೆಸ್ಟ್ ಟ್ರೆಕ್ಕ್ - ಬ್ರಹ್ಮಗಿರಿಯನ್ನು ಹೊರೆತುಪಡಿಸಿ!" - ಶ್ರೀಕಾಂತ್ (ವಾಪಸ್ ಬಂದ ಮೇಲೆ)

"ಕೈಲಾಸ ಪರ್ವತದ ಹಾಗೆಯೇ ಕಾಣಿಸುತ್ತೆ ಅಲ್ಲಾ ಕೋಟೆಬೆಟ್ಟ?" - ಅನ್ನಪೂರ್ಣ (ಕೋಟೆ ಬೆಟ್ಟದ ದರ್ಶನವಾದ ನಂತರ)

"ರೀ, ಬಾಡಿ ವೈಟ್ ಹಾಕ್ರೀ.. ಎಲ್ಲಾ ಪ್ರಾಬ್ಲಮ್ ಸಾಲ್ವ್ ಆಗುತ್ತೆ ನಿಮ್ಗೆ" - ಡೀನ್ (ನನ್ನ ಕತ್ತುನೋವನ್ನುದ್ದೇಶಿಸಿ)

"ನಾನೂ ನೀರಿಗಿಳಿಯುತ್ತೇನೆ.. ನನಗೆ ಮೂಡ್ ಬಂದಿದೆ.." - ನಾನು (ನೀರಿಗಿಳಿಯುವ ಮೂಡ್ ಅಷ್ಟೇ. ಬೇರೆ ಅರ್ಥ ಮಾಡಿಕೊಳ್ಳದಿರಿ. ಹಟ್ಟಿಹೊಳೆಯ ನೀರನ್ನು ಹತ್ತು ನಿಮಿಷ ನೋಡಿದ ನಂತರ ನಾನು ಹೇಳಿದ್ದು - usually ನಾನು ನೀರಲ್ಲಿ ಆಟವಾಡುವುದಿಲ್ಲ)
ಅನ್ನಪೂರ್ಣರ ಬರಹವನ್ನೋದಿದರೆ ನಿಜವಾದ ಕೋಟೆಬೆಟ್ಟವನ್ನೇರಿದಂತಾಗುತ್ತೆ.. ಓದಿ.. http://nannakhajaane.blogspot.com/2007/05/blog-post.html


- ಅ
11.05.2007
12.10AM

10 comments:

 1. wowwwwwwww superb pics mathe ragi hurittu wate madiddu chwlpa bejaru.... aste
  sakth agi barediddira........

  ReplyDelete
 2. [ಸಮನ್ವಯನ] ಚಿತ್ರಗಳ ಕ್ರೆಡಿಟ್ಟು ಶ್ರೀಕಾಂತ್, ಅನ್ನಪೂರ್ಣ ಮತ್ತು ಡೀನ್‍ಗೆ ಸೇರಬೇಕು.. ನಾನು ತೆಗ್ದಿದ್ದು ಆ ಹೂವಿನ ಚಿತ್ರ ಮಾತ್ರ...

  ರಾಗಿ ಹುರಿಟ್ಟಿನ ಬಗ್ಗೆ ನನಗೂ ಬಹಳ ಬೇಸರ ಇದೆ.. ಇನ್ನು ಮುಂದೆ ಸರಿಯಾಗಿ ಕಲಿತುಕೊಂಡ ವಿದ್ಯೆಯನ್ನು ಮಾತ್ರ ಪ್ರಯೋಗಿಸುತ್ತೇನೆ.. ಅಲ್ಪಜ್ಞಾನಿಯಾಗಿ ವರ್ತಿಸೋದಿಲ್ಲ..

  ReplyDelete
 3. shaili nange hiDistu kanri.. neev mataDo hage baritira... odoke hodre neeve mataDida hage ansitu... [:)]

  chenngittu kanri... charana kuritu kammi got adru... nimma anubhava odoke maja bantu...

  ReplyDelete
 4. ನಿಮ್ಮ ಈ ಬ್ಲಾಗ್ ಬರಹ ಉಪಯುಕ್ತ ಲೇಖನ. ನಿಮ್ಮ ಅನುಭವದ ಮೇಲೆ ಉಳಿದವರಿಗೆ ಚಾರಣ ಹೋಗಲು ಮತ್ತು ಪ್ರಕೃತಿಯನ್ನು ಆರಾಧಿಸಲು ಸಹಾಯಕವಾಗುವುದು. ಉತ್ತಮ ಚಿತ್ರಗಳು ಕೂಡಾ. ಮುಂದುವರಿಸಿರಿ - ನಿಮ್ಮ ಬದುಕು ಮತ್ತು ಬರಹವನ್ನು.

  ReplyDelete
 5. [ಸಚ್ಚಿ] ಉದ್ದೇಶಪೂರ್ವಕವಾಗಿಯೇ ಚಾರಣದ ಕುರಿತು ಕಡಿಮೆ ಬರೆದಿದ್ದೇನೆ.. ಶ್ರೀಕಾಂತ್ ಹಾಗೂ ಅನ್ನಪೂರ್ಣರು ಅದರ ಬಗ್ಗೆ ಬರೆದಿದ್ದಾರೆ.. :-)

  ನಿಮ್ಮ ಕಮೆಂಟಿಗೆ ಧನ್ಯವಾದಗಳು..

  [ಬಾನಾಡಿ] ಇರುವ ಈ ಅಲ್ಪ ಸಂಗತಿಗಳನ್ನುಪಯುಕ್ತ ಪಡಿಸಿಕೊಂಡು ಚಾರಣಕ್ಕೆ ಸಹಾಯ ಮಾಡಿಕೊಂಡರಾತ ಪ್ರಕೃತಿಪ್ರೇಮಿಯೇ ಸರಿ. ನಿಮ್ಮ ಅನಿಸಿಕೆ, ಅಭಿಪ್ರಾಯವನ್ನು ತಿಳಿಸಿದ್ದಕ್ಕೆ ನಾನು ಕೃತಾರ್ಥ!

  ReplyDelete
 6. As usual, photos thumba chennagive :) khote betta noo chennagide. howdu, ondu nayee mari siktu andralla, adannu yelli bittu bandri? bengloore ge taralilva?

  ReplyDelete
 7. ಬರಹ ಮತ್ತು ಚಿತ್ರಗಳು ಚೆನ್ನಾಗಿವೆ. ಮೊದಲ ಚಿತ್ರವಂತೂ ಬಹಳ ಚೆನ್ನಾಗಿದೆ. ಇಲ್ಲಿನ ಚಿತ್ರಗಳು ಮತ್ತು ಅನ್ನಪೂರ್ಣರ ಬರಹ ಒಂದಕ್ಕೊಂದು ಪೂರಕವಾಗಿವೆ.

  ReplyDelete
 8. [ವಿನುತ] ನಾಯಿ ಸಿಕ್ಕಿತು ಅಂದ್ರೆ, ದಾರಿಯಲ್ಲಿ "ಮೀಟ್" ಮಾಡಿದೆವು ಅಂತ ಅಷ್ಟೇ. ಅದು ಅಲ್ಲಿಯ ನೇಟಿವ್. ಹಾಗೆಲ್ಲಾ ಬೆಂಗಳೂರಿಗೆ ತರೋದು ನ್ಯಾಯ ಅಲ್ಲ. :-)

  [ರಾಜೇಶ್ ನಾಯ್ಕ] ಅನ್ನಪೂರ್ಣ ತಮ್ಮ ಬ್ಲಾಗಿನಲ್ಲಿ ಚಿತ್ರಗಳನ್ನು ಹಾಕಿರಲಿಲ್ಲವೆಂಬುದು ನಿಮ್ಮ ಪ್ರೆಶ್ನೆಯಾಗಿತ್ತಲ್ಲಾ, ಅದಕ್ಕೆ ಪೂರಕವಾಗುವಂತೆ ನಾನು ಹಾಕಿದ್ದೀನಿ ನೋಡಿ.. :-)
  ಬರಹವನ್ನೋದಿ ಕಮೆಂಟಿಸಿದ್ದಕ್ಕೆ ಬಹಳ ಧನ್ಯವಾದ ಸರ್!

  ReplyDelete
 9. ಅಣ್ಣಾ ಅರುಣ,

  ನನ್ನನ್ನ ಆದಷ್ಟು ಬೇಗ ಕೋಟೆಬೆಟ್ಟಕ್ಕೆ ಕರೆದುಕೊಂಡು ಹೋಗಬೇಕಾಗಿ ನಿಮ್ಮ ಬಳಿ ವಿಧೇಯನಾಗಿ ಬೇಡುವ,

  ಇತಿ ನಿಮ್ಮ,
  ಶ್ರೀನಿಧಿ.ಡಿ.ಎಸ್.

  ReplyDelete
 10. [ಶ್ರೀನಿಧಿ]

  ಸುರಿಯಲೀ ಕಾಲದ ಸತತ ಮಳೆಯು
  ತೊಳೆದು ಹೋಗಲಿ ಮನುಜನೋಡಾಟದ ಕೊಳೆಯು
  ಕೊಡಗಮ್ಮ ಧರಿಸಲಿ ಹಸಿರ ಬಳೆಯು
  ಕರೆದೊಯ್ಯುವೆ ನಿನ್ನನು ಕೋಟೆಬೆಟ್ಟಕೆ
  ಆಗಲೇ ಅಲ್ಲವೇ, ನಮ್ಮ ಚಾರಣಕೆ ಕಳೆಯು?

  ReplyDelete

ಒಂದಷ್ಟು ಚಿತ್ರಗಳು..