Saturday, May 26, 2007

ಅದೇ ವೆಂಕಾ, ಸೀನಾ, ನೊಣ..

ಅರ್ಪಣೆ:

-> ಹುಟ್ಟುಹಬ್ಬವನ್ನಾಚರಿಸಿಕೊಳ್ಳುತಿಹ ಶ್ರೀಧರನಿಗೆ ಒಂದು ಗಿಫ್ಟಾಗಿ..
-> ಈ ಲೇಖನದ ಇನ್ನೊಬ್ಬ ಮುಖ್ಯಪಾತ್ರ ಶ್ರೀನಿವಾಸನಿಗೆ..
-> ಮತ್ತು ಅಪ್ಪಿ ತಪ್ಪಿ ವೆಂಕಾ ಸೀನಾ ನೊಣರಲ್ಲದೆ ಬೇರೆಯವರು ಈ ಲೇಖನವನ್ನೋದಿ ಮೆಚ್ಚಿಕೊಂಡರೆ, ಅವರಿಗೆ!

ನೊಣ ಅನ್ನಬೇಕೋ ನೋಣ ಅನ್ನಬೇಕೋ ಗೊತ್ತಿಲ್ಲ.. ಈ ನಾಣ್ಣುಡಿಯಲ್ಲಿ ನೊಣ ಅದೆಲ್ಲಿಂದ ಬಂತೋ ಗೊತ್ತಿಲ್ಲ. ಕನ್ನಡಿಗರು ಪ್ರಾಣ ಹೋದರೂ ಪ್ರಾಸ ಬಿಡಲ್ಲ ಅಂತಾರೆ, ಅಂಥದರಲ್ಲಿ ನಮ್ಮ ಪೂರ್ವಜರು ಈ ಒಂದು ನಾಣ್ಣುಡಿಯಲ್ಲಿ ಯಾಕೆ ಪ್ರಾಸದ ಕೈಬಿಟ್ಟರು ಎಂಬುದೇ ಅರ್ಥವಾಗುತ್ತಿಲ್ಲವಲ್ಲಾ?

ವಿಷಯ ಅದಲ್ಲ ಬಿಡಿ..

ಪ್ರತಿ ಇರುಳಲ್ಲೂ ಯಾಹೂ ಕಾನ್ಫೆರೆನ್ಸ್ (ಗುಂಪು ಹರಟೆ ಅನ್ನೋಣವೇ?) ಸಂಪ್ರದಾಯ ಹೇಗೆ ಹುಟ್ಟಿಕೊಂಡಿತೋ ಗೊತ್ತಿಲ್ಲ. ಋಷಿ ಮೂಲ, ನದಿ ಮೂಲ ಸಿಗದಂತೆ, ನಮ್ಮ ಈ ಸಂಪ್ರದಾಯದ ಮೂಲವೂ ಸಿಗಲೊಲ್ಲದು. ಬೆಳಿಗ್ಗೆಯ ನಿತ್ಯಕರ್ಮದಂತೆಯೇ ಇರುಳಲ್ಲಿ ಈ ಕಾನ್ಫೆರೆನ್ಸ್ ಇಲ್ಲದಿದ್ದರೆ ದಿನವೇ ಅಪೂರ್ಣವೆಂಬಂತೆ ನಮಗೆ.

ನಮಗೆ ಎಂದರೆ?

ಅದೇ ವೆಂಕಾ, ಸೀನಾ, ನೊಣ..

ಕಾನ್ಫೆರೆನ್ಸ್ ಅಲ್ಲಿ ನಮ್ಮ ಜೊತೆ ಗುಂಪಲ್ಲಿ ಒಮ್ಮೊಮ್ಮೆ ಆರೇಳು ಜನ ಇರ್ತಾರೆ. ಸ್ವರೂಪ, ಸಿಂಧು, ಶೃತಿ, ಸ್ಮಿತೆ.. ಆದರೆ, ಆರಂಭದಲ್ಲಿ ಮತ್ತು ಕೊನೆಯಲ್ಲಿ ಉಳಿವವರು ನಾವು ಮೂವರೇ.. ವೆಂಕಾ, ಸೀನಾ, ನೊಣ.. ಶ್ರೀಧರ, ಶ್ರೀನಿವಾಸ, ನಾನು!

ಹತ್ತೂವರೆಯಾಯ್ತೆಂದರೆ ಕಂಪ್ಯೂಟರಿನ ಯಾಹೂ ದೂತ (ಯಾಹೂ ಮೆಸೆಂಜರು) ನಮಗಾಗಿ ಕಾದಿರುತ್ತೆ. ಕೆಲಸಕ್ಕೆ ಬಾರದ ಹರಟೆಯೊಮ್ಮೊಮ್ಮೆ, ದೇಶದ ಸಮಸ್ಯೆಗಳ ಚರ್ಚೆಯೊಮ್ಮೊಮ್ಮೆ! ಸುಬ್ಬುಲಕ್ಷ್ಮಿ, ಸಂತಾನಂ ಸಂಗೀತ ಕೇಳಲು ಧ್ವನಿ ಚಾಟ್ ಒಮ್ಮೊಮ್ಮೆ, ನಾವು ಕೇಳುತ್ತಿರುವ ಸಂಗೀತ ಸಾಹಿತ್ಯದ ವಿಮರ್ಷೆಯೊಮ್ಮೊಮ್ಮೆ!! ಯಾಹೂ ಸ್ಮಿತೆಗಳನ್ನೆಲ್ಲಾ ಕನ್ನಡೀಕರಿಸುವುದು, ಕಂಪ್ಯೂಟರಿನ ಪದಗಳನ್ನು ನಮ್ಮ ಕನ್ನಡ ಶಬ್ದಕೋಶಗಳಿಗೆ ಹೇಗೆ ತರುವುದೆಂದು ರಿಸರ್ಚ್ ಮಾಡುವುದು ಕೆಲವು ಸಲ ನಡೆಯುವ ಚರ್ಚೆಗಳೇ. ಯಾಹೂ ಮೆಸೆಂಜರಿಗೆ ದೂತ ಎಂಬ ಹೆಸರೂ ಇದೇ ಕಾನ್ಫೆರೆನ್ಸ್ ಇಂದಲೇ ಹುಟ್ಟಿದ್ದು. ನಮ್ಮ ಪ್ರೇಮ ಕಥೆಗಳಿಂದ ಹಿಡಿದು, ದಿನನಿತ್ಯದ ಜಂಜಾಟಗಳವರೆಗೆ ಪ್ರತಿಯೊಂದನ್ನೂ ಆಮೂಲಾಗ್ರವಾಗಿ ಚರ್ಚಿಸಿರೋದು ಇದೇ ಸಂಪ್ರದಾಯ ಆರಂಭ ಆದ ಮೇಲೆಯೇ.

ಮುಖ್ಯ ಸದಸ್ಯರು:

ಆಫ್ ಕೋರ್ಸ್, ವೆಂಕಾ, ಸೀನಾ, ನೊಣ - ಕಾನ್ಫೆರೆನ್ಸ್ ಶುರು ಮಾಡೋರು ನಾವೇ! ಆದರೆ ನಮ್ಮ ಹೊರೆತು ಬೇರೆ ಮುಖ್ಯ ಸದಸ್ಯರ ಬಗ್ಗೆ ಬರೆಯುವಾಸೆ.

ಶೃತಿ: ಅನೇಕ ಬಾರಿ ಗುಂಪು ಹರಟೆಯನ್ನು ಈಕೆಯೂ ಆರಂಭಿಸಿದ್ದಾಳೆ.. ಆರಂಭಿಸಿ, ಅಲ್ಲಿರೋರಿಗೆಲ್ಲಾ ವಾಚಾಮಗೋಚರವಾಗಿ ಬೈಯ್ಯದಿದ್ದರೆ ಈಕೆಗೆ ನಿದ್ದೆ ಬಾರದು. "ಲೋ ಚಪ್ಪರ್..", "ಯಾಯ್... ಒದ್ದುಬಿಡ್ತೀನಿ.." ಬಿಡಿ... ಇನ್ನೂ ಅವಾಚ್ಯಗಳು ಇವೆ.. "ನಾನು ಹೊರಡ್ತೀನಿ, ನಿದ್ದೆ" ಅಷ್ಟೇ ಹೇಳೋದು.. ಹೊರಟುಬಿಡುತ್ತಾಳೆ. ನಾವುಗಳು "ಓಕೆ" ಎಂದು ಟೈಪಿಸುವುದರೊಳಗೆ ಇವಳು ಆಫ್‍ಲೈನ್!! ಉಳಿಯುವುದು ನಾವು ಮೂವರೇ.. ಅದೇ, ವೆಂಕಾ, ಸೀನಾ, ನೊಣ!!

ಸ್ಮಿತೆ: ಕಣ್ಣಾಮುಚ್ಚಾಲೆಯಲ್ಲಿ ಯಾಹೂ ಒಳಗಿರ್ತಾಳೆ (Invisible). ಆದರೂ ನಮ್ಮಂಥವರಿಗೆ ಗೊತ್ತಾಗಿಬಿಡುತ್ತೆ! ಸರಿ, ಬಿಡ್ತೀವಾ? ನಮ್ಮ ಗುಂಪಿನ ಯಾರೇ ಆನ್‍ಲೈನ್ ಕಂಡರೂ ಸೆಳೆದು ತರುತ್ತೇವೆ. ಹೆಚ್ಚು "ಆಳದ" ಸಂಗತಿಗಳನ್ನು ಮಾತನಾಡಿದರೆ ಕಿವಿಯಿಂದ (ವಾಸ್ತವವಾಗಿ ಕಣ್ಣಿನಿಂದ - ಯಾಕೆಂದರೆ ಪರದೆ ಮೇಲೆ ನೋಡುವುದು ತಾನೆ ಶಬ್ದಗಳನ್ನು) ಮೆದುಳಿನವರೆಗೂ ಹೋಗದ ಕಾರಣ, ಚರ್ಚೆ ನಮ್ಮ ಪರಿಧಿಯೊಳಗಿರದೇ ಸ್ವಲ್ಪ ಒಳ ವರ್ತಿಲದಲ್ಲಿರುತ್ತೆ! ಕಾಲುಗಂಟೆ ಇಪ್ಪತ್ತು ನಿಮಿಷವಾದ ಮೇಲೆ, "ಗುಡ್ ನೈಟ್" ಎಂದು ಬಿಡುತ್ತಾಳೆ. ನಾವು ಟಾಟ ಮಾಡೋದೇ! ಮತ್ತದೇ ವೆಂ, ಸೀ, ನೊ!

ಭೀಮರಾಯರು (ಶುಭಾ): "ನಮಸ್ಕಾರ ಭೀಮರಾಯರಿಗೆ" ಎಂದರೆ, "ಅಲ್ಲ, ಅವರ ಮಗಳು" ಎಂದು ಹೇಳುವುದು ಇನ್ನೊಂದು ಸಂಪ್ರದಾಯ. ಹೆಚ್ಚು ಹೊತ್ತಿರದೇ, ಶುಭಾ ತುಂಬಾ ಬೇಗನೇ ಶುಭರಾತ್ರಿಯೆಂದುಬಿಡುತ್ತಾಳೆ. ಯಾಹೂ ದೂತದಲ್ಲಿ ವೆಂಕಾ, ಸೀನಾ, ನೊಣ - ಹಾಡುಗಳನ್ನು ಮುಂದುವರೆಸುತ್ತಿರುತ್ತೇವೆ..

ಸಿಂಧು: ಅಪರೂಪದ ಸದಸ್ಯೆ. ಹನ್ನೊಂದಾಗಿ ಒಂದು ಸೆಕೆಂಡಾದರೂ ದೂತದೊಳಗೆ ಇರೋದಿಲ್ಲ. ಬೈ ಅನ್ನೋದೇ! ನಾವು ಯಾರು ಬೈ ಎಂದರೂ ತಡೆಯುವುದಿಲ್ಲ. ಆರಂಭದ ವೆಂ, ಸೀ, ನೊ ಕೊನೆಯಲ್ಲೂ ಇರಲು ನಮಗೂ ಆನಂದವೇ!!

ಗುಂಪಿನಲ್ಲಿ ಇನ್ನೂ ಏಳು ಜನರಿದ್ದೂ ಬಹಳ ಬಹಳ ವಿರಳವಾಗಿ ಗುಂಪು ಹರಟೆಗೆ ಬರುವುದಾದ್ದರಿಂದ ಅವರ ಬಗ್ಗೆ ಇಲ್ಲಿ ಬರೆಯುತ್ತಿಲ್ಲ. ಅವರು ಎಲಿಜಿಬಿಲಿಟಿ ಪರೀಕ್ಷೇಯಲ್ಲಿ ಅನುತ್ತೀರ್ಣರಾಗಿದ್ದಾರೆ!

ಅದೇ ವೆಂಕಾ, ಸೀನಾ, ನೊಣ:"ಏನಪ್ಪಾ ಸಮಾಚಾರ?" ಅನ್ನೋದು ಬಹಳ ಕಡಿಮೆ. ಸಮಾಚಾರ ಎಲ್ಲರಿಗೂ ಗೊತ್ತು, ಎಲ್ಲಾ ಗ್ರಹಚಾರವೇ ಅಂತ!

"ಯಾವ ಕಾಣಿಕೆ ನೀಡಲಿ ನಿನಗೆ.." ಎಂದು ನಾನು ಟೈಪಿಸಿದರೆ, ಆ ಹಾಡನ್ನು ನಾನು ಕೇಳ್ತಾ ಇದೀನಿ ಅಂತ...

"ಯುದ್ಧಂ ತ್ಯಜತ.. ಸ್ಪರ್ಧಾಮ್ ತ್ಯಜತ.." ಎಂದು ಶ್ರೀನಿವಾಸ ಟೈಪಿಸಿದರೆ ಅವನು ಆ ಹಾಡನ್ನು ಕೇಳ್ತಾ ಇದ್ದಾನೆ ಎಂದರ್ಥ..

ವಾಯ್ಸ್ ಚಾಟಿಗೆ ಹಾಕಿ ನಾವು ಮೂರೂ ಜನ ಹಾಡು ಅದೆಷ್ಟು ಸಲ ಕೇಳಿದ್ದೇವೋ! ಬರೀ ಹಾಡು ಕೇಳಲೆಂದೇ ವಾಯ್ಸ್ ಚಾಟ್ ಮಾಡುತ್ತಿರುತ್ತೇವೆ!

"ಕಾಪಿ?" ಎಂದರೆ ಆ ಮೆಸೇಜು ನಾನು ಶ್ರೀಧರನಿಗೆ ಕಳಿಸಿರುವುದು, ಅಥವಾ ಶ್ರೀಧರ ನನಗೆ ಕಳಿಸಿರುವುದು.. ಇದು ಮೂರೂ ಜನಕ್ಕೂ ಗೊತ್ತು. ಬೆಳಿಗ್ಗೆ ಕಾಫಿ ಕುಡಿಯಲು ಗಾಂಧಿ ಬಜಾರಿನಲ್ಲಿ ಭೇಟಿಯಾಗಲು ಬರೆವ ಸಂದೇಶವೆಂದು!

ಯಾರೇ ಬರಲಿ, ಯಾರೇ ಹೋಗಲಿ ಆರಂಭದಲ್ಲಿ ನಾವು ಮೂವರೇ, ಕೊನೆಯಲ್ಲೂ ನಾವು ಮೂವರೇ.. ವೆಂಕಾ, ಸೀನಾ, ನೊಣ!!

ಅಂತೂ ಇಂತೂ ಒಂದು ಸಂಪ್ರದಾಯವನ್ನು ಆರಂಭಿಸಿಕೊಂಡಿದ್ದೇವೆ. ಸಂಪ್ರದಾಯ ಹೀಗೇ ಮುಂದುವರೆಯಲಿ.. ದೂತನಿಗೊಂದು ಥ್ಯಾಂಕ್ಸ್! ನಾಣ್ಣುಡಿಗೊಂದು ಥ್ಯಾಂಕ್ಸ್!!

ಹುಟ್ಟುಹಬ್ಬದ ಶುಭಾಶಯಗಳು ಶ್ರೀಧರ!!

ಅಪ್ಪಿ ತಪ್ಪಿ ಇದನ್ನೋದಿದ ಜನರಿಗೆ: ಹಾಗೇ ಇವನ್ನೂ ನೋಡಿದರೊಳಿತು... ಶೀರ್ಷಿಕೆಯೊಂದೇ.. ಬರೆವವರು, ಬರೆವ ರೀತಿ ಇನ್ನೂ ಸೊಗಸು!!

http://karmakaanda.blogspot.com/2007/05/blog-post_26.html

http://gandabherunda.blogspot.com/2007/05/blog-post_26.html

-ಅ
26.05.2006
1.40AM

Monday, May 21, 2007

ರಾಜಣ್ಣನ ಡೈಲಾಗ್ ಕೇಳಿ..ಕನ್ನಡದ ಸೂಪರ್ ಸ್ಟಾರ್ ಅಂತ ರಾಜ್ ಕುಮಾರ್‍ನ ಯಾಕೆ ಕರೆಯೋದು ಅಂತ ತಿಳೀತೇ?

ಗವಿಯೊಳು ಕವಿಗಳು..

ಬೇಲುಂ ಗುಹೆಯ ದರ್ಶನ ಮಾಡಿಕೊಂಡು ಬಂದೆವು. ಈ ಪ್ರವಾಸದ ಬಗ್ಗೆ ಬರೆಯೋಕೆ ಇನ್ನೂ ಸಮಯ ಬೇಕು. ಸದ್ಯದಲ್ಲಿ ಇನ್ಯಾವುದೋ ಪ್ರಾಜೆಕ್ಟಿನಲ್ಲಿ ಬ್ಯುಸಿ ಇದ್ದೀನಿ.. ಆಮೇಲೆ ಬರೀತೀನಿ.

ಚಿತ್ರಗಳು ಇಲ್ಲಿವೆ ನೋಡಿ..

Belum Caves


ಚಿತ್ರಗಳನ್ನು ನೋಡಿ ನಿಮಗನ್ನಿಸಿದ್ದನ್ನು ಹೇಳಿಪ್ಪಾ....

Thursday, May 17, 2007

ಅಮೃತವಾಹಿನಿಯೊಂದು...

"ಕಾಫಿ?" ಶ್ರೀಧರ ಕೇಳುತ್ತಾನೆ.

"ಓಕೆ, ಏಳು ಗಂಟೆ" ನಾನು ಹೇಳುತ್ತೇನೆ.

ಇಬ್ಬರಿಗೂ ಗೊತ್ತು. ಏಳುಗಂಟೆಗೆ ಗಾಂಧಿಬಜಾರು ವೃತ್ತದಲ್ಲಿ ಸಿಕ್ಕು ಒಂದು ಕಾಫಿ ಹೀರಿ, ಅಲ್ಲಿಂದ ಮಹಾಲಕ್ಷ್ಮಿ ಟಿಫನ್ ರೂಮಿಗೆ ಹೋಗಿ, ಹಸಿದಿದ್ದರೆ ಖಾಲಿ ದೋಸೆ ತಿಂದು ಇನ್ನೊಂದು ಕಾಫಿ ಹೀರಿ ಗಾಂಧಿಬಜಾರು ಪರ್ಯಟನೆ ಮಾಡಿಬರುವುದು ನಮ್ಮ ಕಾರ್ಯಕ್ರಮವೆಂದು.

ಅದ್ಯಾರು ಕಂಡು ಹಿಡಿದರೋ ಕಾಫಿಯಲ್ಲಿರುವ ಚೈತನ್ಯವನ್ನು! ಇಷ್ಟೇ ಪ್ರಮಾಣದ ಕಾಫಿಗೆ ಇಷ್ಟೇ ಸಕ್ಕರೆಯನ್ನು ಬೆರೆಸಿ, ಇಷ್ಟೇ ಹಾಲನ್ನು ಸೇರಿಸಿದರೆ ಅಮೃತದ ಸವಿಯಿದೆಯೆಂದು ಕಂಡು ಹಿಡಿದ ಪುಣ್ಯಾತ್ಮ ಯಾರು? ಆಹ್.. ಅವನ ಹೊಟ್ಟೆ ತಣ್ಣಗಿರಲಿ. ಅವನ ಜನ್ಮ ಸಾರ್ಥಕವಾಯಿತು ಬಿಡಿ.

ವಿಜಯ ಕರ್ನಾಟಕದ ಅಂಕಣವೊಂದನ್ನು ಕಳುಹಿಸಿದ ಶ್ರೀಧರ "ಕಾಫಿ ಬಗ್ಗೆ ಎಂಥಾ ಒಳ್ಳೇ ನ್ಯೂಸ್ ಬಂದಿದೆ ನೋಡೋ" ಎಂದು ಬಹಳ ಖುಷಿ ಪಟ್ಟು ಹೇಳಿದ.. ಆ ಖುಷಿಯಲ್ಲೇ ಮತ್ತೆ ಗಾಂಧಿಬಜಾರಿನ ಕಾಫಿಯನ್ನು ಸವಿದು ಬಂದೆವು."ರೀ ಕಾಫಿ, ಟೀ ಎಲ್ಲಾ ಕುಡೀ ಬೇಡ್ರೀ.. ಅದು ವಿಷ" ಎಂದು ಡೀನ್ ಕಾಫಿಯ ಹೆಸರೆತ್ತಿದಾಗಲೆಲ್ಲಾ ಹೇಳುತ್ತಿರುತ್ತಾರೆ. ಅವರು ಈ ಆರ್ಟಿಕಲ್‍ನ ಒಮ್ಮೆ ನೋಡಲೆಂದು ಬಯಸುತ್ತೇನೆ.

ನನ್ನ-ಕಾಫಿಯ ಬಾಂಧವ್ಯ

ಕೆಲವು ಕಡೆ ಕಾಫಿಗಳು ಸಖತ್ ರುಚಿಕರ. ಕುಡಿದರೇ ಆನಂದದಿಂದ ತೇಲುವಂತಿರುತ್ತೆ. ಇನ್ನು ಕೆಲವು ಕಡೆ ಹೊಟ್ಟೆ ಉರಿಯುತ್ತೆ. ಕಾಫಿ ಡೇ (ಇತ್ಯಾದಿಗಳು) ಎಂದು ದೊಡ್ಡ ದೊಡ್ಡ ಬೋರ್ಡುಗಳನ್ನು ಹಾಕಿಕೊಂಡು ಕಾಫಿಯ ಹೆಸರಿನಲ್ಲಿ ಕೊಡುವ ದ್ರವಕ್ಕೆ ಉಚ್ಚರಿಸಲಸಾಧ್ಯಕರ ನಾಮಕರಣ ಮಾಡಿ ಹಣ ದೋಚುವ ಹುನ್ನಾರ ಅವರದೆಂದು ನನ್ನ ಸ್ನೇಹಿತರೊಬ್ಬರು ಶಪಿಸುತ್ತಿದ್ದರು. "ಕಪ್ಪೆ-ಸೀನ" (Capuccino), "ಚಾಕು-ಸೀನ" (Chococcino) ಈ ರೀತಿಯ ಗೂಂಡಾಗಳ ಹೆಸರನ್ನು ಅಮೃತದಂತಹ ಕಾಫಿಗೆ ಇಟ್ಟು ನೂರಾರು ರುಪಾಯಿ ಕೀಳುತ್ತಾರೆ. ಆದರೂ ಒಮ್ಮೊಮ್ಮೆ ಅಲ್ಲೂ ಕುಡಿಯುತ್ತೇವೆ, ಭಂಡರು ನಾವು. ಆದರೆ ಅಷ್ಟು ಸಮಾಧಾನಕರವಾಗಿರೋದಿಲ್ಲ ಬಿಡಿ.ಎಲ್ಲೆಲ್ಲೋ ಕಾಫಿ ಕುಡಿದಿದ್ದೇನೆ. ಬಸವನಗುಡಿಯ ಕೆಲವು ಹೋಟೆಲುಗಳಿನ ಕಾಫಿ ಬಲು ರುಚಿಕರ.. ಬಾಲಾಜಿ, ಮಹಾಲಕ್ಷ್ಮಿ, ಉಪಹಾರ ದರ್ಶಿನಿ, ಬ್ರಾಹ್ಮಣರ ಕಾಫಿ ಬಾರ್, ಎಸ್.ಎಲ್.ವಿ., ಅಡಿಗಾಸ್, ನಿಸರ್ಗ, ಹಳ್ಳಿತಿಂಡಿ, ವಿದ್ಯಾರ್ಥಿ ಭವನ, ಮಾಡರ್ನ್ ಟಿಫಿನ್ ರೂಮ್, ರೋಟಿ ಘರ್, ಎಲ್ಲರಿಗೂ ಒಂದು ಕೃತಜ್ಞತೆಯ ನಮನ - ಅದ್ಭುತವಾದ ಕಾಫಿಗೆ. ಎಲ್ಲರಿಗೂ ಥ್ಯಾಂಕ್ಸ್. ಬೆಳಗೆರೆಯ ಕಾದಂಬರಿಯೊಂದರಲ್ಲಿ ಬರುವಂತೆ, "ಇವು ದೇವತೆಗಳೇ ಕುಡಿಯುವಂಥ ಕಾಫಿ" .

ಕಝಿನ್ ಮಧು ಮನೆಗೆ ಹೋದರೆ ಗಂಟೆ ರಾತ್ರಿ ಹನ್ನೆರಡಾದರೂ ಒಂದು ಕಾಫಿಯಂತೂ ಗ್ಯಾರೆಂಟಿ. ಅತ್ತೆ ಮಾಡಿಕೊಡುವ ಕಾಫಿ ಏನು ರುಚಿ, ಏನು ಮೋಹ.. ಆಹಾ..

ಗೆಳೆಯ ಬಾಲಾಜಿ ಮನೆಯಲ್ಲಿ ನೀರಿಗಿಂತ ಹೆಚ್ಚು ಕಾಫಿಯನ್ನೇ ಕುಡಿಯುತ್ತಾರೆ. ಅವರ ಮನೆಗೆ ಹೋದ ತಕ್ಷಣ, "ಬಾ ಅರುಣ.. ಕಾಫಿ ಕೊಡಲಾ??" ಎಂದೇ ಕೇಳುತ್ತಾರೆ. ಅವರ ಮನೆಯ ಕಾಫಿ ಬಣ್ಣಿಸಲಸದಳ.

ಶ್ರೀ ಮನೆಗೆ ಹೋದಾಗ, ಅದೆಷ್ಟೋ ಸಲ ಅವಳ ಕೈಯ್ಯಾರೆಯೇ ಮಾಡಿಕೊಟ್ಟ ಕಾಫಿಯ ಸವಿಯನ್ನು ಮರೆಯಲು ಸಾಧ್ಯವೇ? ಚಾಮರಾಜ ಪೇಟೆಯ ಡಾನ್ ಆಗಿದ್ದೂ ಮಚ್ಚನ್ನೆತ್ತುವಂತೆ ಕಾಫಿಯನ್ನು ಮಾಡುವುದರಲ್ಲಿ ಕೂಡ ಎತ್ತಿದ ಕೈಯೆಂದು ಎಷ್ಟೋ ಸಲ ನಿರೂಪಿಸಿದ್ದಾಳೆ ಶೃತಿಯು! ಬಂದಾಗಲೆಲ್ಲಾ ಹೀಗೇ ಕಾಫಿಯನ್ನು ನೀಡುತ್ತಿರುವಂತಿರಲಿ ಈ ಹೆಣ್ಣು ಮಕ್ಕಳು!! ;-)

ಮೊನ್ನೆ ಮೊನ್ನೆಯಷ್ಟೇ ಅಮೆರಿಕೆಗೆ ಹೊರಟಿದ್ದ ಅಕ್ಕ ಕಾಫಿ ಪುಡಿಯನ್ನೂ ಕೊಂಡೊಯ್ದಿದ್ದಳು. ಯಾಕೆಂದರೆ ಅಲ್ಲಿ ಸಿಗುವ ಕಾಫಿಗಿಂತ ಕಲಗಚ್ಚೇ ಚೆನ್ನಾಗಿರುತ್ತೆ ಅಂತ! ಅದಕ್ಕೇ ತಾನೇ ಮಾಡಿಕೊಂಡು ಕುಡಿವ ಛಲ! ಬೆಂಗಳೂರಿಗೆ ಬಂದಾಕ್ಷಣ ಒಳ್ಳೆಯ ಫಿಲ್ಟರ್ ಕಾಫಿ ಅವಳನ್ನು ಸ್ವಾಗತಿಸಿತ್ತು. ತನ್ನ ಗಂಡ ಕೈಯ್ಯಾರೆ ಮಾಡಿದ್ದ ನೊರೆಭರಿತ ಕಾಫಿ - ಮಧ್ಯರಾತ್ರಿಯಲ್ಲಿ!ಉತ್ತರಭಾರತ ಪ್ರವಾಸಕ್ಕೆ ಹೋಗಿದ್ದಾಗ ಇಪ್ಪತ್ತು ದಿನ ಕಾಫಿಯಿಲ್ಲದೆ ನಾಲಿಗೆಯೆಲ್ಲಾ ಕೆಟ್ಟ ಕೆರವಾಗಿ ತುಕ್ಕು ಹಿಡಿದು ಹೋಗಿತ್ತು. ಕರ್ನಾಟಕ ಎಕ್ಸ್‍ಪ್ರೆಸ್‍ನಲ್ಲಿ ಹಿಂದಿರುಗುವಾಗ ಗುಂಟ್‍ಕಲ್ ತಲುಪುತ್ತಿದ್ದಂತೆಯೇ, "ಕಾಫಿ ಕಾಫಿ" ಎಂದು ಕಾಫಿ ಮಾರುವವನ ಧ್ವನಿ ಕೇಳಿ ಕರುವಿಗೆ ಹಸುವಿನ ಅಂಬಾ ಸದ್ದು ಕೇಳಿದಂತೆಯೇ ಸಂತಸವಾಗಿತ್ತು. ಆ ಉತ್ತರಭಾರತದವರು ಕಾಫಿ ಕುಡಿಯದೇ ಅದು ಹೇಗೆ ಇದ್ದಾರೋ ಎಂದು ಶಪಿಸಿ ರೈಲಿನ ಕಾಫಿ ಅಷ್ಟೇನೂ ಚೆನ್ನಿರದಿದ್ದರೂ ಬರಗೆಟ್ಟವರಂತೆ ಹೀರಿದ್ದೆ.

ಆದರೂ ಶ್ರೀನಿಧಿಯನ್ನು ಕೇಳಿ ನೋಡಿ.. ಮುಸುಕಿದ ಮಂಜಿನ ನಡುವೆ, ಕೊರೆವ ಚಳಿಯಲ್ಲಿ, ಚಾರಣದಿಂದ ದಣಿದ ಚೇತನಕ್ಕೆ, ಆರೂಕಾಲುಸಾಸಿರ ಅಡಿಯೆತ್ತರದ ಮುಳ್ಳಯ್ಯನಗಿರಿ ಶಿಖರದ ಮೇಲೆ, ನಾಲಿಗೆಗೆ ಚರಟ ಸಿಗುವಂತೆ, ಅತಿ ಕಡಿಮೆ ಹಾಲಿಗೆ ಅಕ್ಕರೆಯಿಂದ ಬೆರೆಸಿ ಕೊಟ್ಟರಲ್ಲಾ, ಆ ಬೆಲ್ಲದ ಸ್ಟ್ರಾಂಗ್ ಕಾಫಿಯ ರುಚಿಯ ಮುಂದೆ ಬೇರೆ ಕಾಫಿಯಿಲ್ಲ ಬಿಡಿ.. ಅನ್ನುತ್ತಾರೆ..

ನಿಜಕ್ಕೂ ಅಂದು ಕುಡಿದಿದ್ದು ಅಮೃತವೇ!!

ಕಾಫಿಯೆಂಬ ಅಮೃತವನ್ನು ಕುಡಿಯೋಣ ಬನ್ನಿ..

ಕಾಫಿಗೆ ಜೈ!

(ಇಲ್ಲಿ ಕಾಫಿ ಪುರಾಣ ಮಾತ್ರ. ಟೀ ಬಗ್ಗೆ ಇನ್ಯಾವಾಗಲಾದರೂ ಬರೆಯುತ್ತೇನೆ. ಇಲ್ಲಾ ಅಂದರೆ ಕವಿ ಗಂಡಭೇರುಂಡರು ಹಳೆಗನ್ನಡದಲ್ಲಿ ಬೈದಾರು!)

- ಅ
17. 05.2007
1.30PM

ಹಾರೈಕೆ..

ಪುಟ್ಟ ತಂಗಿ ಸ್ಮಿತಾ ಇಂದು ಗಂಡು ಮಗುವಿಗೆ ಜನುಮ ನೀಡಿದ್ದಾಳೆ. 'ಕಂದ' ಎಂದು ಕರೆಯುತ್ತಿದ್ದೆ, ಈಗ ಅವಳಿಗೊಂದು ಕಂದಮ್ಮ.. ನನ್ನ ಹಾಗೂ ನನ್ನವರ ಅಕ್ಕರೆಯ ಹಾರೈಕೆಯು ತಂಗಿಗೆ ಹಾಗೂ ಪತಿ ಕಾರ್ತಿಕ್‍ರೊಡನೆ ನಿರಂತರವಾಗಿರುವುದು. ಇವರ ಸಂತಸವು ಹೀಗೇ ನಿರಂತರವಾಗಿರಲಿ.


- ಅ
17. 05.2007
10AM

Tuesday, May 15, 2007

ಬಾಣತಿಮಾರಿ

ಡಿಸ್ಕ್ಲೈಮರ್

ಇದು ನನ್ನ ಹಳೆಯದೊಂದು ಲೇಖನ. ಮೂರು ವರ್ಷಕ್ಕೂ ಹಳೆಯದು. ಆಗ ಇದ್ದ ಅನುಭವ ತೃಣಮಾತ್ರದ್ದು. ಅದಕ್ಕೆ ತಕ್ಕ ಹಾಗೆ ಈ ಲೇಖನವಿರಬಹುದು. ಎಲ್ಲೋ ಏನೋ ಹುಡುಕುತ್ತಿದ್ದಾಗ ಹಾಳೆಗಳು ಸಿಕ್ಕಿದವು ಅಷ್ಟೇ. ಅದನ್ನು ಇಲ್ಲಿ ಟೈಪಿಸಿದ್ದೀನಿ. ಭಾಷೆ-ಭಾವಗಳಲ್ಲಿ ತಪ್ಪಿದ್ದರೆ ತಿದ್ದುಕೊಂಡು ಓದಿಬಿಡಿ. ಹಿಡಿಸದಿದ್ದರೆ ನಕ್ಕು ಸುಮ್ಮನಾಗಿಬಿಡಿ.
ಕನ್ನಡಕುವರರ ನಡುವೆ..

ಕಾವೇರಿ ಅರಣ್ಯ ಇಲಾಖೆಯ ಡಿ.ಸಿ.ಎಫ್‍ರವರು ರಾಜೇಶ್ ಮತ್ತು ನನ್ನನ್ನು ತಮ್ಮ ಛೇಂಬರಿಗೆ ಕರೆದರು. ನಾವು ಅಲ್ಲಿಗೆ ಹೋದದ್ದು "ಪ್ರಾಜೆಕ್ಟ್ ಮುತ್ತತ್ತಿ" ಬಗ್ಗೆ ಚರ್ಚೆಗೆ. ಮೂಲತಃ ರಾಜಸ್ಥಾನದವರಾದ ಡಿ.ಸಿ.ಎಫ್ ವಿಜಯ್ ಲಾಲ್ ಮೀನಾ ಅವರು ತಕ್ಕ ಮಟ್ಟಿಗೆ ಕನ್ನಡ ಮಾತನಾಡಿದರೂ ಅರ್ಥ ಮಾಡಿಕೊಳ್ಳುವುದು ಅಂಥ ಕಷ್ಟವೇನಲ್ಲ. ವಿಚಿತ್ರ ಕನ್ನಡ! ದೊಡ್ಡ ದೊಡ್ಡ ಕಡತಗಳನ್ನು ತಮ್ಮ ಟೇಬಲ್ ಮೇಲಿಂದ ಕೈಗೆತ್ತಿಕೊಂಡು ಓದಿದ ಹಾಗೆ ನಟಿಸುತ್ತಾ, ರುಜು ಹಾಕುತ್ತಾ, "ಮತ್ತೆ...?? ಎಲ್ಲಿವರ್ಗು ಬಂತು...?? ಏನು ಯೋಚ್ನೆ 'ಮಾದ್ರಿ'?" ಎಂದರು. ಥಟ್ಟನೆ ನಮ್ಮ ರಾಜೇಶ್, ತಮ್ಮ ವಿಶಿಷ್ಟ ಕನ್ನಡದಲ್ಲಿ ಉತ್ತರಿಸಿದರು. " ಹಾ... ಸಿಕ್ಕಾಪಟ್ಟೆ ಪ್ಲಾಸ್ಟಿಕ್ ಬಿಸಾಡಿದಾರೆ ಜನ.. 'ಹಲ್ಲಲ್ಲಿ' ಡಸ್ಟ್-ಬಿನ್ ಹಾಕೋಣ 'ಹಂತ'..." ಎಂದಾಗ ನನಗೆ ಸ್ವಲ್ಪ ದಿಗಿಲಾಯಿತು. ಯಾರ ಹಲ್ಲಲ್ಲಿ ಏನು ಹಾಕ್ತಾರೋ ಏನೋ ಹಂತ.. ಛೆ ಛೆ.. ಕ್ಷಮಿಸಿ.. ಏನು ಹಾಕ್ತಾರೋ ಅಂತ!! ಮುಕ್ಕಾಲುಗಂಟೆಗಳ ಕಾಲ ಸುದೀರ್ಘ ಚರ್ಚೆ, ಮೀಟಿಂಗಿನ ಅಂತ್ಯದಲ್ಲಿ ವಿಜಯಲಾಲರು "ನಿಮ್ ಬಟ್ಟೆ ಕೊಲೆಯಾಗಿದೆ"? ಎಂದರು. ನಾನು "ಸ್ವಲ್ಪ ಹೊತ್ತಿಗೆ ನಾನೂ ಕೊಲೆಯಾಗಿ ಹೋಗ್ತೀನಿ ಈ ಕನ್ನಡಕುವರರ ಮಧ್ಯೆ ಇದ್ದರೆ" ಎಂದು ಆಲೋಚಿಸುತ್ತಿರುವಾಗಲೇ ರಾಜೇಶ್, "ಹುಂ.. ಪಾರೆಸ್ಟಲ್ಲಿ ಅಂಗೆ ಹಲ್ವಾ.." ಎಂದುಬಿಟ್ಟರು!! ಆಹಾಹಾ.. ಎಂಥಾ ಜೋಡಿ...
ಕೊಲೆಯಾಗಲು ಕಾರಣ?

ನಮ್ಮ ಬಟ್ಟೆ 'ಕೊಲೆ'ಯಾಗಲು ಕಾರಣ ಇದೆ.. ಮುಂಜಾನೆ ಆರಕ್ಕೇ ನಾನು ನನ್ನ ಫಿಯರೋ ಮೇಲೆ ಕುಳಿತು, ಬನಶಂಕರಿಯ ತರಕಾರಿ ಮಾರುಕಟ್ಟೆ ಎದುರು ಕಾಯುತ್ತಿದ್ದ ರಾಜೇಶರನ್ನು ಹಿಂದೆ ಕುಳ್ಳಿರಿಸಿಕೊಂಡು ಕನಕಪುರದತ್ತ ಸಾಗಿಸಿದೆ. ಹತ್ತುವರೆ ಹೊತ್ತಿಗೆ ನಾವು ವಿಜಯ್-ರವರೊಂದಿಗೆ ಮಾತನಾಡಲು ಹೋಗಬೇಕಿತ್ತು. ಬೆಳಿಗ್ಗೆ ಬೇಗ ಹೊರಟಿದ್ದ ಕಾರಣ ಹಾಗೆ ಬಾಣತಿಮಾರಿಗೆ ಹೋಗಿ ನಂತರ ಅವರ ಆಫೀಸಿಗೆ ಹೊಗೋಣ ಎಂದು ತೀರ್ಮಾನಿಸಿದೆವು. ಕನಕಪುರದಿಂದ ರಾಮನಗರಕ್ಕೆ ಹೋಗುವ ದಾರಿಯಲ್ಲಿ ಒಂದು ಸಣ್ಣ ಹೋಟೆಲನ್ನು ಹೊಕ್ಕೆವು. ಅದನ್ನು ಹೊಟೆಲ್ ಎಂದರೆ ಹೊಟೆಲು. ಇಲ್ಲದಿದ್ದರೆ ಒಂದು ಸಣ್ಣ ತಿಂಡಿ ಮಾರುವ ಕೊಳಕು-ಶುಭ್ರ ಅಂಗಡಿ ಅಷ್ಟೆ! ಏಳು ಗಂಟೆಗೇ ತಿನ್ನಲು ಹೊಟ್ಟೆಯಾಗಲೀ, ನಾಲಿಗೆಯಾಗಲೀ ಇನ್ನೂ ಸಿದ್ಧವಿರಲಿಲ್ಲ. ಅದಕ್ಕೆ ಅಷ್ಟು ಬೇಗ ಟೀ ಕಾಫಿಗಳನ್ನು ಹೊರೆತು ಬೇರೇನೂ ಕಂಡು ಅಭ್ಯಾಸವೂ ಇರಲಿಲ್ಲ. ಅಂಥದ್ದರಲ್ಲಿ ಆ ಹೊತ್ತಿನಲ್ಲಿ ನನ್ನ ಜಿಹ್ವೆಯ ಪರಮ ವೈರಿಯಾದ ಖಾರದ ಚಟ್ನಿಯನ್ನು ಬೇರೆ ಅದಕ್ಕೆ ಪರಿಚಯಿಸಿದರೆ ಅದು ನನ್ನನ್ನು ಹೇಗೆಲ್ಲಾ ಶಪಿಸಿರಬಹುದು!! ರಾಜೇಶರಂಥ ರಾಜೇಶರೇ ಖಾರ ಎಂದರು! ನಾನು ನನ್ನ ಪ್ರೀತಿಯ ನಾಲಿಗೆಗೆ ಬೇಸರಗೊಳಿಸಲು ಇಚ್ಛಿಸದೆ ಬರೀ ಇಡ್ಲಿಯನ್ನು ತಿಂದೆ. ಟೀ ಕುಡಿದಾಗ ಸಮಾಧಾನವಾಯಿತು!


ಬೆಟ್ಟಗುಡ್ಡಗಳಂತೆಯೇ ಇರುವ ಈ ರಸ್ತೆಯಲ್ಲಿ ಹತ್ತು ನಿಮಿಷ ಪಯಣಿಸಿದ ನಂತರ ಮಾದಸಂದ್ರ ಎಂಬ ಕುಗ್ರಾಮವೊಂದು ಸಿಗುತ್ತದೆ. ಆ ಹಳ್ಳಿಯೊಳಕ್ಕೆ ಗಾಡಿಯನ್ನು ಕರೆದೊಯ್ಯಲು ಹರಸಾಹಸ ಪಡಬೇಕಾಯಿತು. ಹಳೆಯದನ್ನು ನೆನೆಸಿಕೊಂಡ ರಾಜೇಶ್ "ನಾನು, ರವಿಶಂಕರ್ ಸೋಲಿಗೆರೆನ ಬೈಕು ತಳ್ಕೊಂಡ್ ಹಿಳಿದಿದ್ವಿ" ಎಂದರು. ನನಗೆ ಅದೇನೂ ಆಶ್ವರ್ಯ ಆಗಲಿಲ್ಲ.. ಏಕೆಂದರೆ ಅವರು ನನಗೆ ಈ ವಿಷಯವನ್ನು ಹೇಳಿದ್ದು ಇದು ಹದಿನೈದನೇ ಸಲ! ಮಾದಸಂದ್ರದಲ್ಲಿ ರಾಜೇಶರ ಸಂಬಂಧಿಕರ ಮನೆಯಿದೆ. ಅಲ್ಲಿ ಗಾಡಿ ನಿಲ್ಲಿಸಿ, ಚಾರಣ ಮಾಡೋಣ ಎಂದು ನಿರ್ಣಯಿಸಿದೆವು. ಅವರ ಮನೆಯ ನಾಯಿಯು ನನ್ನನ್ನು ಬಹಳ ಪರಿಚಿತನಂತೆ ನೋಡಿ, ಬಾಲವು ಇನ್ನೆಲ್ಲಿ ಬಿದ್ದು ಹೋಗುವುದೋ ಎನ್ನುವಷ್ಟು ಪೆಂಡುಲಮ್ ಥರ ಅಲ್ಲಾಡಿಸಿ, ಮೈ ಮೇಲೆಲ್ಲಾ ಎಗರಿ, ಕೈಯನ್ನು ಕಾಲನ್ನು ನೆಕ್ಕಿತು! ನಾನೂ ಅದನ್ನು ನನ್ನ ಹಳೆಯ ಸ್ನೇಹಿತನಂತೆಯೇ ಮಾತನಾಡಿಸಿದೆ. "ಹಾಗೆಲ್ಲಾ ನೆಕ್ತಾರೇನೋ ಕೊಳಕಾ!!!" ರಾಜೇಶ್ ಮನೆಯೊಳಗೆ ಹೊಕ್ಕು ಒಳಗಿನಿಂದಲೇ ನನ್ನನ್ನು ಕೂಗಿ, "ಇವರು ನನ್ನ ಪ್ರೆಂಡ್ ಹರುಣ್ ಹಂತ" ಎಂದು ಪರಿಚಯಿಸಿಕೊಟ್ಟರು! ಅವರ ಮನೆಯಲ್ಲಿ "ನಾಸ್ಟ" ಮಾಡಲು ಬಹಳ ಬಲವಂತ ಮಾಡಿದರು. ನಾವಿಬ್ಬರೂ ಒಂದೇ ನಿಲುವಿಂದ ಒಲ್ಲೆಯೆಂದೆವು. ಇಳಿಸಲಾಗದೆ ಇಡ್ಲಿಯನ್ನು ಇಳಿಸಿಕೊಂಡು ಬಂದಿರುವಾಗ ಇಲ್ಲಿ ಮತ್ತೆ ತಿನ್ನಲು ಮನಸಾಗಲೀ ಹೊಟ್ಟೆಯಾಗಲೀ ನಾಲಿಗೆಯಾಗಲೀ ಅನುಮತಿ ನೀಡಲಿಲ್ಲ.

ರಾಜೇಶ್ ತಮ್ಮ ಟ್ರೆಕ್ಕಿಂಗ್ ಔಟ್‍ಫಿಟ್‍ನಲ್ಲಿ ಫಿಟ್ ಆದರು. ಟೀ-ಶರ್ಟ್, ಟ್ರಾಕ್ ಪ್ಯಾಂಟ್, ಹವಾಯ್ ಚಪ್ಪಲಿ!! ಚಪ್ಪಲಿ ಧರಿಸಿ ಇವರು ಅದು ಹೇಗೆ ಅಷ್ಟೊಂದು ಚಾರಣ ಮಾಡ್ತಾರೋ ನಾನರಿಯೆ! ಆದರೆ ಇವರು ಸಾಧಿಸಿರುವ ಕಾಲುಭಾಗವನ್ನೂ ನಾನು ಮುಟ್ಟಲು ನನಗೆ ವರ್ಷಗಳೇ ಬೇಕಾದೀತು! ನಾನು ನನ್ನ ಮಾಮೂಲಿ ವೇಷದಲ್ಲಿ ಸಿದ್ಧನಿದ್ದೆ. ಟ್ರೆಕ್ಕಿಂಗ್ ಗೆ ಯಾವಾಗ ಬೇಕಾದರೂ ಸಿದ್ಧ! ಒಂದು ಟೀಶರ್ಟು, ಜೀನ್ಸು, ನನ್ನ ಪ್ರೀತಿಯ ಧಡಿಯ ಶೂ, ಹೆಗಲ ಮೇಲೊಂದು ಚೀಲ, ಚೀಲದೊಳಗೆ ನೀರಿನ ಬಾಟಲಿ, ಟಾರ್ಚು, ಸೊಂಟಕ್ಕೊಂದು ಪೌಚು. ತಲೆಯ ಮೇಲೆ ಕಿರೀಟವಂತೂ ಇಲ್ಲ, ಆದರೆ ಒಂದು ಟೋಪಿ ಇರದೇ ಇರುವುದಿಲ್ಲ!

ಅವರ ಮನೆಯಿಂದ ಹೊರಡುವಾಗ ನನ್ನ ಮೈಮೇಲೆ ಎಗರಿ ನನ್ನ ಕೈಕಾಲುಗಳನ್ನು ನೆಕ್ಕಿದ ನಾಯಿಯು ತನ್ನ ಸಂಗಾತಿಯ ಮರ್ಮಾಂಗಗಳನ್ನು ನೆಕ್ಕುತ್ತಿದ್ದ ದೃಶ್ಯ ಕಣ್ಣಿಗೆ ಬಿತ್ತು. ತಕ್ಷಣ ಹಿಂದಿರುಗಿ ಸೋಪು ಹಾಕಿ ಕೈತೊಳೆದು, " ಥೂ! ಅದಕ್ಕೆ ನಾಯಿ ಬಗ್ಗೆ ಗಾದೆ ಮಾಡಿರೋದು.. ಅಸಹ್ಯ ಮುಂಡೇದು" ಎಂದು ಶಪಿಸಿದೆ. ಮರುಕ್ಷಣವೇ "ಪಾಪ, ಅದರದೇನು ತಪ್ಪಿದೆ, ಎಲ್ಲಾ ನ್ಯಾಚುರಲ್ ಇನ್ಸ್ಟಿಂಕ್ಟ್ಸ್" ಅಂದು ತೆಪ್ಪಗಾದೆ. ಆದರೂ ಒಂದು ರೀತಿ ಅಸಹ್ಯವಾಗುತಿತ್ತು.

ಸಿಟಿ ಹಂಗಲ್ಲ ಕಣಪ್ಪೋ...

ಮರಳು ಸರಬರಾಜು ಮಾಡುವ ರಾಜ ಎಂಬಾತನನ್ನು ನಮ್ಮೊಂದಿಗೆ ಕರೆದೊಯ್ದೆವು. ಆತ ನನ್ನನ್ನು ನೋಡಿ, ರಾಜೇಶ್ ಗೆ "ಸಿಟಿ ಹಂಗಲ್ಲ ರಾಯೇಸಪ್ನೋರೇ.. ಅದು ಕಾಡು.." ಎಂದ. "ಹವ್ರು ಬೇಕಾದಷ್ಟು ಕಾಡು ನೋಡಿದಾರೆ.. ನೀನು ನಡಿ ರಾಜ.." ಎಂದು ನನ್ನ ಪರವಾಗಿ ರಾಜೇಶ್ ಮಾತನಾಡಿದರು. ಅದೆಂಥಾ ಕಾಡೋ! ಅಷ್ಟು ದಟ್ಟವಾಗಿದೆಯಾ? ಕರ್ನಾಟಕದ ಪಶ್ಚಿಮಘಟ್ಟಕ್ಕಿಂತಲೂ ಕನಕಪುರದ ಬಳಿ??? ರಾಜ ಯಾಕೆ ಹೀಗೆಲ್ಲಾ ಹೇಳ್ತಿದಾನೆ?? ಅವನೇನೇ ಹೇಳಲಿ, "ಅಮೃತ"ದ ವಾಸನೆ ಅವನ ಉಸಿರಿನಿಂದ ಬರುತ್ತಿದ್ದ ಕಾರಣ ಹೀಗೆಲ್ಲ ಮಾತನಾಡುತ್ತಿದ್ದಾನೆ ಎಂದುಕೊಂಡೆ. ನನ್ನ ಸಣ್ಣ ಸೂಕ್ಷ್ಮ ದೇಹ, ನೋಡಿದರೆ ಸಿಟಿಯವನಂತಿರುವ ನನ್ನ ಈ ಕಾಡು ಮನಸ್ಸಿನ ಸಿಟಿದೇಹವನ್ನು ನೋಡಿದ ರಾಜನಿಗೆ ಆ ಕಾಡು, ಆ ಬೆಟ್ಟ ಹತ್ತುತ್ತೀನೋ ಇಲ್ಲವೋ ಎಂಬ ಸಂದೇಹ ಬಂದಿರಬೇಕು.
ಚಾರಣ ಶುರುವಾಯಿತು. ಅವರಿಬ್ಬರೂ ಬಲುವೇಗದಲ್ಲಿ ನಡೆಯುತ್ತಿದ್ದರು. ನಾನು ಅವರ ಹಿಂದೆಯೇ ಅವರ ವೇಗಕ್ಕೆ ಹೊಂದಿಕೊಳ್ಳಲು ಯತ್ನಿಸುತ್ತ ನಡೆದೆ. ಬಾಣತಿಮಾರಿಯದು ಪಶ್ಚಿಮಘಟ್ಟದ ರೀತಿ ಹಸಿರುಗಾಡಲ್ಲ. ಮಳೆ ಬಂದಾಗ ಬೆಳೆಯುವ ಕಾಡು. ಕಳೆದ ಎರಡು ತಿಂಗಳು ಸಾಕಷ್ಟು ಮಳೆಯಾಗಿ ದಟ್ಟವಾಗಿ ಬೆಳೆದಿದೆ. ವಿಶೇಷವೇನೆಂದರೆ ಈ ದಟ್ಟ ಕಾಡಿನಲ್ಲಿ ಹೆಮ್ಮರಗಳಾಗಲೀ ಹೆಬ್ಬುಲಿಗಳಾಗಲೀ ಇಲ್ಲ. ಇದು ಸಂಪೂರ್ಣ ಮುಳ್ಳುಗಾಡು. ಮಳೆಯಾದ ಒಂದು ದಿನದಲ್ಲೇ ಎತ್ತೆತ್ತರಕ್ಕೆ ಮುಳ್ಳುಗಿಡಗಳು ಬೆಳೆದು ನಿಂತು ದಾರಿಯನ್ನೆಲ್ಲಾ ಮುಚ್ಚಿ ರಾಸ್ತಾ ರೋಕೋ ಚಳುವಳಿ ಮಾಡುತ್ತವೆ. ಈ ಮೊನೆಯಾದ ಮುಳ್ಳಿನ ವ್ಯೂಹವನ್ನು ಭೇದಿಸಿ, ಛೇದಿಸಿ ದಾರಿ ಮಾಡಿಕೊಂಡು ಬೆಟ್ಟ ಹತ್ತುವುದರಲ್ಲಿ ಅದೆಂಥ ಆನಂದ! ಅನುಭವಿಸಿದವನಿಗೇ ಗೊತ್ತು!!!
ರಾಜನ ಕೈಲಿ ಮಚ್ಚಿತ್ತು. ದಾರಿಗೆ ಅಡ್ಡ ನಿಂತ ಚಳುವಳಿಗಾರರ ಕತ್ತು ಕತ್ತರಿಸಿದನು. ಇಲ್ಲಿರುವಿದು ಬರೀ ಮುಳ್ಳು ಮಾತ್ರವಲ್ಲ. ತೇಗ, ಬಿದಿರು, ನೆಲ್ಲಿ ಇನ್ನು ಅನೇಕ ಔಷಧಿಯುತ ಗಿಡಗಳು ಸಹ ಇವೆ. ರಾಜನು ಅಂದಿನ ತನ್ನ ಊಟಕ್ಕೆಂದು ಬಿದಿರು ಕಳಲೆಯನ್ನು ಕಿತ್ತುಕೊಳ್ಳುತ್ತಾ ಬಂದನು. (ಬಿದಿರಿನ ಬೇರಿನ ಬಳಿ ಬೆಳೆಯುವ ಎಳೆಯ ಕಾಂಡವನ್ನು ಕಳಲೆ ಎನ್ನುತ್ತಾರೆ. ಇದರ ಸಾಂಬಾರು ಬಲುರುಚಿ. ಕಾನೂನು ಪ್ರಕಾರ ಇದನ್ನು ಇದನ್ನು ಕಡಿಯುವುದು ನಿಷಿದ್ಧ. ಪಾಲಿಸದವರ ಪ್ರಕಾರ ನಿಷಿದ್ಧವಲ್ಲ!! ಕಳಲೆಯನ್ನು ಕಡಿದಾಗ ಇಡೀ ಗಿಡವು ಸತ್ತು ಹೋದಂತೆ. ಮೊಳಕೆಯಲ್ಲೇ ಚಿವುಟಿದಂತೆ. ನಮ್ಮ ಕೂಸನ್ನು ಅತಿ ಚಿಕ್ಕ ವಯಸ್ಸಿನಲ್ಲೇ ಕೊಚ್ಚಿಹಾಕಿದಂತೆ.)ಒಂದು ಚೂರೂ ದಾರಿಯಿಲ್ಲದ ದಾರಿಯಲ್ಲಿ ದಾರಿಯನ್ನು ಮಾಡುತ್ತ ಸಾಗಿದೆವು. ಕೈಕಾಲುಗಳು ತರಚಿ ಬರೆ ಹಾಕಿದಂತಾದವು. ಲಂಟಾನ ನವೆಯನ್ನುಂಟು ಮಾಡಿತು! ಕರಡಿಗಳು ಎದುರು ಬಾರದಿರಲಿ ಎಂದು ರಾಜ ಆಗಾಗ್ಗೆ "ಹೊಯ್.." ಎಂದು ಜೋರಾಗಿ ಕೂಗುತ್ತಿದ್ದ. ಒಂದು ಬೃಹತ್ ಬಂಡೆಯನ್ನು ತಲುಪಿದೆವು. "ಅರುಣೂ.. ನೋಡಿ ಹೇಗಿದೆ ಕಾಡು.." ಎಂದ.. ನಾನು ಸುಮ್ಮನೆ ನಕ್ಕು ನಿಶಬ್ಧವನ್ನು ಆನಂದಿಸಿದೆ. ಮೌನವನ್ನು ಮೀರಿದ ನಿಶಬ್ಧ ಅದು. ಹಾಡು ಗುನುಗತೊಡಗಿದೆ..


"ಸುಹಾನೀ ರಾತ್ ಢಲ್ ಚುಕೀ.. ನ ಜಾನೇ ತುಮ್ ಕಬ್ ಆಓಗೇ..."

ಬೆಟ್ಟದ ಕಾಲು ಭಾಗ ತಲುಪಿದ್ದೆವು. ಚಾರಣ ಮುಂದುವರೆಸಿದೆವು. ದಾರಿಯುದ್ದಕ್ಕೂ ರಾಜ ಕಳಲೆಯನ್ನು ಕಿತ್ತು ಕಿತ್ತು ಅಲ್ಲಲ್ಲಿ ಬಚ್ಚಿಡುತ್ತಿದ್ದ. "ಕೆಳೀಕ್ ಓಯ್ತೀವಲ್ಲಾ, ಆಗ ತಗೋತೀನಿ ಅರುಣೂ.." ಅಂತ ಬಾಯಿ ಬಾಯಿ ಬಿಟ್ಟುಕೊಂಡು ನೋಡುತ್ತಿದ್ದ ನನಗೆ ಹೇಳಿದ. ನೆಲ್ಲಿಕಾಯಿ ಮರ ಸಿಕ್ಕಿತು.. ಸಾಕಷ್ಟು ನೆಲ್ಲಿಕಾಯಿ ತಿಂದೆವು. ನಂತರ ಹೊನ್ನೆ ಮರ ಎದುರಾಯಿತು. ಅದರ ಕೊಂಬೆಗೆ ರಪ್ಪನೆ ತನ್ನ ಮಚ್ಚಿಂದ ಬೀಸಿದ. ಕೆಂಪಗೆ ರಕ್ತ ಬಂದಿತು. ಅವನು ರಾಮಾಯಣದ ಒಂದು ಕಥೆಯನ್ನು ಹೆಳಿ, ಹೊನ್ನೆ ಮರದಲ್ಲಿ ಹಾಲು ಬರಲ್ಲ, ರಕ್ತ ಬರುತ್ತೆ ಎಂದ.ಹೀಗೆ ಕಥೆ ಕೇಳುತ್ತ ಕೇಳುತ್ತ, ಬೆಟ್ಟದ ನೆತ್ತಿಗೆ ಬಂದೇಬಿಟ್ಟೆವು. ಬಾಣತಿಮಾರಿ ಬೆಟ್ಟದ ಪೀಕ್! ದೊಡ್ಡ ಸ್ಟೇಡಿಯಮ್ ಹಾಗಿದೆ. ತುದಿಗೆ ಹೋದೆವು. ಗಾಳಿಯು ನಮ್ಮನ್ನು ಹಾರಿಸಿಕೊಂಡು ಹೋಗುವಂತೆ ಇತ್ತು. ಭೋರೆಂದು ಸದ್ದು ಮಾಡುತ್ತಿತ್ತು! ಮೂರುಸಾವಿರ ಅಡಿಗಳ ಎತ್ತರದಲ್ಲಿ ನಿಂತು ಆಷಾಢದಲ್ಲಿ ಆ ಪವನಸ್ಪರ್ಶವನ್ನು ಆ ಅನುಭವವನ್ನು ಬರೆಯಲು ಸಾಧ್ಯವಿಲ್ಲ. ಅದನ್ನು ಅನುಭವಿಸಲೇ ಬೇಕು. ಬೆಟ್ಟದ ಮೇಲೆ ಒಂದಷ್ಟು ಹೊತ್ತು ಕಾಲ ಕಳೆದೆವು. ಎರಡು ಸಾವಿರ ಅಡಿಯ ಜಾರುಬಂಡೆಯಂತಿದ್ದ ಹೆಬ್ಬಂಡೆಯನ್ನು ಕಂಡು ಆನಂದಿಸಿದೆವು. ಆ ಬಂಡೆಯಿಂದ ನೀರು ಜಾರಿಹೋಗುತ್ತಿತ್ತು. ಎಡಕ್ಕೆ ತಿರುಗಿದರೆ, ದೂರದಲ್ಲಿ ಕಲ್ಲಹಳ್ಳಿಯ ಚಿಕ್ಕ ತಿರುಪತಿಯೆಂದೇ ಖ್ಯಾತವಾದ ವೆಂಕಟೇಶ ದೇವಸ್ಥಾನ. ಹಾಗೇ ಅರ್ಧ ಸೆಂಟಿಮೀಟರು ಕಣ್ಣು ಪಕ್ಕಕ್ಕೆ ಹಾಯಿಸಿದರೆ ಗೆರೆಯೆಳೆದಂತೆ ಅರ್ಕಾವತಿ! ಬಲಕ್ಕೆ ತಿರುಗಿದರೆ ಬರೀ ಬೆಟ್ಟಗಳೆ!ಕೆಳಗೆ ಧಾವಿಸಿದೆವು..

ಅಲ್ಲಿಂದ ಕೆಳಗೆ ಇಳಿವಾಗ ಮುಳ್ಳುಗಳನ್ನು ಲೆಕ್ಕಿಸುವಷ್ಟು ಸಮಯ ನಮಗೆ ಇರಲಿಲ್ಲ. ಸಮಯ ಹತ್ತುಗಂಟೆಯೆಂದು ಗಡಿಯಾರ ಕೂಗಿ ಹೇಳಿತು. ವಿಜಯಲಾಲರನ್ನು ನೋಡಬೇಕಿತ್ತು. ಹಾಗೇ ತರಚಿಕೊಂಡೇ, ಮೈಕೈ ಗಾಯ ಮಾಡಿಕೊಂಡೇ ಕೆಳಗೆ ಧಾವಿಸಿದೆವು. ರಾಜೇಶರ ಸಂಬಂಧಿಕರ ಮನೆಯಲ್ಲಿ ಸೊಗಸಾದ ಮುಂಡುಗ ಅಕ್ಕಿಯ ಸಾರನ್ನ ಬಡಿಸಿದರು. ಹಸಿದ ಹೊಟ್ಟೆಯು ಥ್ಯಾಂಕ್ಸ್ ಹೇಳಿತು. ರಾಜ ತನ್ನ ಮನೆಗೆ ಹೋದ.. ಮೂರು ಕೆ.ಜಿ. ಕಳಲೆಯೊಂದಿಗೆ! ಎಲ್ಲರಿಗೂ ಬೈ ಹೇಳಿ ನನ್ನ ಫಿಯರೋ ಏರಿ ಹೊರಟೆವು. ರಾಜನಿಗೆ ಇಪ್ಪತ್ತು ರುಪಾಯಿ ಇನಾಮು ಕೊಟ್ಟು ವಿಶೇಷ ಬೈ ಹೇಳಿ ಹಳ್ಳಿಯಿಂದ ಹೊರಕ್ಕೆ ಹೋಗುವಾಗ ಇರುವ ಭೀಕರ ರಸ್ತೆಯಲ್ಲಿ ಜಾಗರೂಕತೆಯಿಂದ ಗಾಡಿ ಓಡಿಸತೊಡಗಿದೆ. ರಾಜೇಶ್, "ನೋಡಿ.. ನಾನು, ರವಿಶಂಕರ್ ಇಬ್ರೂ ಸೋಲಿಗೆರೆಲಿ..." ಅಂತ ಹದಿನಾರನೆಯ ರಿಪೀಟ್ ಟೆಲಿಕಾಸ್ಟ್ ಮಾಡಿದರು..

ನಾನು ಬೆವರೊರೆಸಿಕೊಂಡು ಒಳಗೇ ನಕ್ಕೆ!

-ಅ
14.02.2004

Friday, May 11, 2007

ಎನಗೆಂದು ಕರುಣಿಪುದು ವಿಧಿಯುಮೀ ಸಗ್ಗವಂ?ಮಿತ್ರ ಜಯಣ್ಣ ಸ್ಯಾನ್ ಡಿಯೆಗೋಗೆ ಹೋಗಿ ವರ್ಷದ ಮೇಲಾಯಿತು. ಆಗಾಗ್ಗೆ ಚಾಟಿಂಗ್‍ಗೆ ಸಿಗುತ್ತಿರುತ್ತಾನೆ. ಇವತ್ತಿನ ಚಾಟಿಂಗ್‍ ಅಲ್ಲಿ ಅವನು ಹೇಳಿದ ವಿಷಯಗಳು ನನಗೆ ಬಹಳ ರೋಮಾಂಚಕಾರಿಯಾಗಿತ್ತು.


ಒಂದು ವರ್ಷದಿಂದ ಕತ್ತುನೋವಿನಿಂದ ಒದ್ದಾಡುತ್ತಿರುವ ನನಗೆ ಚಾರಣವನ್ನೂ ನಿಲ್ಲಿಸಿಬಿಡಿ ಎಂದು ವೈದ್ಯರೊಬ್ಬರು ಹೇಳಿದಾಗ ಆದ ನೋವು ಅಷ್ಟಿಷ್ಟಲ್ಲ. ಆದರೆ ತೀರ extreme adventureನ ಮಾಡಲೆತ್ನಿಸದಿರಿ ಎಂದಾಗ ಸ್ವಲ್ಪ ಸಮಾಧಾನವಾದರೂ ಒಳಗೆ ಬೇಸರ ಹಾಗೆಯೇ ಇದೆ. But something is better than nothing..


ಜಯಣ್ಣ ನನ್ನ ಜೊತೆ ಒಂದೇ ಒಂದು ಟ್ರೆಕ್ಕು ಮಾಡಿದ್ದಲ್ಲದೆ ಬೇರಾವ ಸಾಹಸವನ್ನೂ ಮಾಡಿದ್ದು ನಾನು ಕಂಡಿಲ್ಲ. "ಏನೋ, ಅಮೆರಿಕೆಗೆ ಹೋಗಿ ಹೊಟ್ಟೆಯನ್ನು ಸಾಕುತ್ತಿದ್ದೀಯ" ಎಂದು ರೇಗಿಸುತ್ತಿದ್ದೆ. ಇಂದು "ಸ್ಕೈ ಡೈವಿಂಗ್ ಮಾಡಿದೆ ಗುರೂ..." ಎಂದು ಅವನು ಹೇಳಿದ ಮಾತಿನಲ್ಲಿ ಅಡ್ರಿನಲಿನ್ ತುಂಬಿ ತುಳುಕಾಡುತ್ತಿತ್ತು. ನನಗೆ ಎಲ್ಲಿಲ್ಲದ ಸಂತಸವಾಯಿತು. ಓಹ್, ಜಯಣ್ಣ ಸ್ಕೈ ಡೈವಿಂಗ್ ಮಾಡಿದನೇ? Super!! ಎಂದು ಮನಸ್ಸಿನಲ್ಲಿ ಸಾವಿರ ಬಾರಿ ಹೇಳಿಕೊಂಡೆ. ಹದಿಮೂರು ಸಾವಿರ ಅಡಿಯೆತ್ತರದಿಂದ ಧುಮುಕುವ ಮಜವೇ ಬೇರೆ.. ( ಅದೂ ಅಲ್ಲದೆ, ಚೆಲುವೆಯೊಬ್ಬಳು ಇವನ ಇನ್ಸ್ಟ್ರಕ್ಟರ್ ಆಗಿ ಅವಳನ್ನು ತಬ್ಬಿಕೊಂಡು ಬೀಳುವ ಮಜವೇ ಬೇರೆ ಬಿಡಿ ;-) ) ನಾನು ಮಾಡುವುದು ಯಾವಾಗಪ್ಪಾ ವಿಧಿಯೇ?? (ಶ್ರೀನಿಧಿಯನ್ನು ನಾನು ಚಾರಣದ ಕಥೆ ಹೇಳಿ ಹೊಟ್ಟೆ ಉರಿಸುತ್ತಿದ್ದೆ ಬೆಳಿಗ್ಗೆಯೆಲ್ಲಾ.. ಈಗ ನನ್ನನ್ನು ಇವನು.. :-) )


ನಮ್ಮ ದೇಶದಲ್ಲಿ ಸಾಹಸ ಕ್ರೀಡೆಗಳಿಗೆ ಹೆಣ್ಣುಮಕ್ಕಳನ್ನು ಧೈರ್ಯವಾಗಿ ಕಳಿಸುವುದಿಲ್ಲವೆಂಬುದು ವಿಪರ್ಯಾಸ! ಅದು ಇರುವುದೇ ಗಂಡಸರಿಗೆ ಎಂಬ ಭೇದಭಾವದ ಕೀಳರಿಮೆಯ ಜನ ಇನ್ನೂ ನಮ್ಮಲ್ಲಿ ಬಹಳ ಇದ್ದಾರೆ. ಹೆಣ್ಣುಮಕ್ಕಳಿರಲಿ, ಗಂಡಸರಿಗೂ ಪ್ರೋತ್ಸಾಹವಿಲ್ಲದ್ದನ್ನು ನಾನು ಕಂಡಿದ್ದೇನೆ. ನಮ್ಮ ಜನಕ್ಕೆ ಇಂಜಿನಿಯರ್ ಆಗ್ಬಿಡಬೇಕು ಎಲ್ಲರೂ.. ಕಂಪ್ಯೂಟರ್ ಮುಂದೆ ಏಸಿ ರೂಮಿನಲ್ಲಿ ಕೂತು ಕೈಗೆ ಲಕ್ಷ ಲಕ್ಷ ಇಳಿಸಿಕೊಳ್ಳುತ್ತಿರಬೇಕು. ಬೇರೆ ಕೆಲಸ ಮಾಡುವವರೆಲ್ಲಾ ಅಪ್ರಯೋಜಕರು ಎಂಬ ಭಾವನೆ ಇನ್ನೂ ಕೋಟ್ಯಾನುಕೋಟಿ ಮನೆಗಳಲ್ಲಿ ಇದೆ. ನಮ್ಮ ಮನೆಯವರ ಮನದಲ್ಲಿಯೂ ಇಂಥ ಮಾರಿಯು ವಾಸ ಮಾಡುತ್ತಿದೆ. ಅದು ನಮ್ಮ ಹಣೆಬರಹ ಬಿಡಿ. ಎಲ್ಲೋ ಒಬ್ಬಳು ಕಲ್ಪನಾ ಚಾವ್ಲಾ, ಎಲ್ಲೋ ಒಬ್ಬಳು ಕಿರಣ್ ಬೇಡಿ.. ಮನೆಮನಗಳಲ್ಲಿ ಪ್ರೋತ್ಸಾಹ ಧೈರ್ಯ ಸ್ಥೈರ್ಯಗಳೆಂದು ಬರುವುದೋ ಸ್ತ್ರೀಗೆ.


ಆ ವಿಷಯ ಬದಿಗಿರಲಿ. ಟಾಪಿಕ್ ಎಲ್ಲೆಲ್ಲೋ ಡ್ರಿಫ್ಟ್ ಆಗೋದು ಬೇಡ. ಅದು ಬೇರಯದೇ ಚರ್ಚೆ. ಇನ್ನೊಮ್ಮೆ ಇರಲಿ. ಈಗ ಮೂಡ್ ಇಲ್ಲ.

"ಜಯಣ್ಣ, ನಂಗೆ ನಿನ್ನ ಬಗ್ಗೆ ನಿಜವಾಗಿಯೂ ಹೊಟ್ಟೆವುರಿ ಆಗ್ತಾ ಇದೆ ಕಣೋ" ಎಂದೆ. ಒಂದು ಬಗೆಯ ಸಾತ್ವಿಕ ಅಸೂಯೆ ಮೂಡುವುದು ಸಹಜವಲ್ಲವೇ? ಸಂತಸದ ಅಸೂಯೆ!! ನಮ್ಮಲ್ಲಿ ಅಷ್ಟೆತ್ತರದ ಸ್ಕೈ ಡೈವಿಂಗ್ ಇನ್ನೂ ಬಂದಿಲ್ಲ. ಮತ್ತು ತುಂಬಾ ತುಂಬಾ ತುಟ್ಟಿ. ಹದಿನೈದರಿಂದ ಇಪ್ಪತ್ತು ಸಾವಿರ ಕೊಟ್ಟು ಸ್ಕೈ ಡೈವಿಂಗ್ ಮಾಡಲು ಬರೀ ಆಸೆ, ಧೈರ್ಯಗಳಿದ್ದರೆ ಸಾಲದು. ಅಂತೂ ದೂರದ ದೇಶದಲ್ಲಿ ಉನ್ನತ ಸಾಹಸ ಮಾಡುತ್ತಿರುವ ಜಯಣ್ಣ ಸಂತಸದಿಂದಿರಲಿ. "ನನಗೆ ಈಗ ಧೈರ್ಯ ಹೆಚ್ಚಾಗಿದೆ, ನಾನು ಎಲ್ಲಾ ಅಡ್ವೆಂಚರ್‍ನೂ ಮಾಡಬೇಕೆನಿಸಿದೆ" ಎಂದು ಅವನು ಹೇಳಿದಾಗ ಬಹಳ ಖುಷಿಯಾಯಿತು. ಸಾಹಸ ಕ್ರೀಡೆಗಳೇ ಹಾಗೆ, ಧೈರ್ಯ, ಕಾನ್ಫಿಡೆನ್ಸು, ತಾಳ್ಮೆ ಎಲ್ಲವನ್ನೂ ವೃದ್ಧಿಸುತ್ತೆ!


ಒಂದು ಚಿಕ್ಕ ವಿಮಾನದಲ್ಲಿ ಡೈವ್ ಮಾಡುವವರನ್ನು ಮೇಲಕ್ಕೆ, ಹದಿಮೂರು ಸಾವಿರ ಅಡಿಯೆತ್ತರಕ್ಕೆ ಕರೆದೊಯ್ದು, ಒಬ್ಬ ಡೈವರ್ ಜೊತೆಗೊಬ್ಬ(ಳು) ಇನ್ಸ್ಟ್ರಕ್ಟರು ಧುಮುಕಿ, ಧುಮುಕಿಸಿ, ಪ್ಯಾರಾಶೂಟಿನಿಂದ ಸುರಕ್ಷಿತವಾಗಿ ಕೆಳಗಿಳಿಸಿ, ಬದುಕಿನ ಅಮೃತ ಕ್ಷಣಗಳನ್ನು ದಯಪಾಲಿಸುವ ಸಂಘಗಳೇ ಧನ್ಯ. ಅಂತ ಅಮೃತಘಳಿಗೆಯನ್ನನುಭವಿಸಿದ ಜಯಣ್ಣನೇ ಧನ್ಯ! ಜಯಣ್ಣನ ಬಗ್ಗೆ ನಂಗೆ ಬಹಳ ಸಂತಸವಾಗುತ್ತಿದೆ. ನನ್ನ ಸ್ನೇಹಿತನು ಸ್ಕೈಡೈವಿಂಗ್ ಮಾಡಿದ್ದಾನೆ. ಬದುಕಿನ ಪ್ರತಿಯೊಂದು ಕ್ಷಣದಲ್ಲೂ ನೆನಪಿನಲ್ಲುಳಿಯುವಂಥ ಪ್ರಸಂಗವೊಂದು ಇವನ ಪಾಲಾಗಿದ್ದು ಇವನ ಯಾವ ಜನ್ಮದ ಪುಣ್ಯವೋ! ಕೆಲವು ಅನುಭವಗಳನ್ನು ಬಣ್ಣಿಸಲು ಸಾಧ್ಯವಿಲ್ಲ. ಅನುಭವಿಸಬೇಕಷ್ಟೇ!
ಹೀಗೆ ಸಾಹಸಗಳನ್ನು ಮಾಡುತ್ತಿರು ಜಯಣ್ಣ... ಆಲ್ ದಿ ಬೆಸ್ಟ್.. (ಹುಡುಗಿ ಇನ್ಸ್ಟ್ರಕ್ಟರ್ ಅಂತ ಹೆಚ್ಚು ಕಮ್ಮಿ ಮಾಡ್ಕೊಂಡೀಯೆ.. ಜೋಕೆ)
ಸಂಪೂರ್ಣ ಚಲನಚಿತ್ರ ಇಲ್ಲಿದೆ, ವೀಕ್ಷಿಸಿ..
ಓದುಗ ಮಿತ್ರರೇ, ನನಗೂ ಇಂಥ ಸುದಿನ ಒದಗಲೆಂದು ಪ್ರಾರ್ಥಿಸಿ! ;-)
ಎನಗೆಂದು ಕರುಣಿಪುದು ವಿಧಿಯುಮೀ ಸಗ್ಗವಂ??
-ಅ
11.07.2007
11PM

Wednesday, May 09, 2007

ಕೊಡಗಿನ ಮಳೆಯಲೊಂದು ಟ್ರೆಕ್ಕು..ಬೆಟ್ಟದ ತುದಿಯಲ್ಲಿ......

"ರೀ.. Let us go back.. Its raining heavily.. ಬೇಡ.. ನೋಡಿ, ಎಷ್ಟು ಮೋಡ.. listen to me.. come here.. ಬನ್ನಿ ಇಲ್ಲಿ, ಹೇಳ್ತೀನಿ.. ಅಲ್ಲದೇ ಬಂಡೆಗಳು ಜಾರುತ್ತೆ..", ಗೋವಿಂದ್ ರಾಜ್ ಎಂದಿನಂತೆಯೇ ತಮ್ಮ ಧಾಟಿಯಲ್ಲಿ, ಎತ್ತರದ ಕಂಠದಲ್ಲಿ ಹೇಳುತ್ತಿದ್ದಾಗ ಕತ್ತಲಾಗುವ ಸಮಯ ಇನ್ನೇನು ದೂರವಿರಲಿಲ್ಲ. ಬ್ಯಾಗುಗಳನ್ನೆಲ್ಲಾ ಎರಡು ಬಂಡೆಗಳ ಮಧ್ಯೆ ಹಾಕಿ, ಮೇಲೆ ಪ್ಲಾಸ್ಟಿಕ್ ಚೀಲವನ್ನು ಹೊದಿಸಿ, ವಿರಮಿಸಿಕೊಳ್ಳುತ್ತಿದ್ದ ನಾವು ಆಗಲೇ ಹತ್ತು ಕಿ.ಮೀ ನಡೆದು ಬಂದದ್ದಾಗಿದೆ. ಚಾರಣ ಮಾಡಬೇಕಿದ್ದು ಇನ್ನೂ ಎರಡೇ ಕಿ.ಮೀ. ಆದರೆ, ಬಹಳ ಎತ್ತರದ ಶಿಖರವನ್ನೇರುವಂತಿತ್ತು. ದೊಡ್ಡ ದೊಡ್ಡ ಬಂಡೆಗಳು ಎದ್ದು ಕಾಣುತ್ತಿದ್ದವು. ಮಳೆಯಲ್ಲಿ ನೆಂದ ಬಂಡೆಗಳು ಜಾರೋ-ಬಂಡೆಯಾಗುವುದೆಂಬುದು ಎಲ್ಲಾ ಚಾರಣಿಗನಿಗೂ ಗೊತ್ತಿರುವ ಸತ್ಯ!

ಆದರೆ ಕಣ್ಣಿಗೆ ಕಾಣುತ್ತಿದ್ದ ಬಂಡೆಗಳನ್ನು ಹಾಗೆಯೇ ಏರುವ ಅವಷ್ಯವಿಲ್ಲವೆಂವುದು ಡೀನ್ ಹಾಗೂ ನಾನು ಸ್ವಲ್ಪ ದೂರ ನಡೆದು ಸಾಗಿ ದಾರಿಯನ್ನು ಪತ್ತೆ ಮಾಡಿ ಬಂದ ನಂತರವೇ.. ದೇವಸ್ಥಾನಗಳಿಗಿರುವ ಕಾಲುದಾರಿಗಳಂತೆ ಸ್ಪಷ್ಟ ದಾರಿ ಸಿಕ್ಕಾಕ್ಷಣ "ಅಯ್ಯೋ ಇಲ್ಲೇ ಇದ್ಯಲ್ಲಾ ಮಾರಾಯ ದಾರಿ" ಎಂದು ಡೀನ್ ತಮ್ಮ ಕೈಯನ್ನು ದಾರಿಯೆಡೆಗೆ ಚಾಚಿ ತೋರಿಸಿದರು. ಮಳೆ ಆರಂಭವಾದ ಜಾಗದಲ್ಲಿ ಟೆಂಟನ್ನು ಬಿಡಿಸಿ ರಾತ್ರಿ ಅಲ್ಲೇ ಇದ್ದು ಬೆಳಿಗ್ಗೆ ಶಿಖರವನ್ನೇರೋಣವೆಂಬುದು ಶ್ರೀಕಾಂತನ ಸಲಹೆಯಾಗಿತ್ತು. ಶ್ರೀಕಾಂತನ ಕಂಗಳೂ ಸಹ ಅದನ್ನೇ ಹೇಳುತ್ತಿತ್ತು. "ಆಮೇಲೆ, ಹೆಚ್ಚು-ಕಮ್ಮಿ ಆಗ್ಬಿಟ್ರೆ?" ಅನ್ನೋ ಚಕಿತಭರಿತ ಪ್ರೆಶ್ನೆಯೊಂದು ಅವನ ಕಂಗಳಲ್ಲಿ ಗೋಚರಿಸುತ್ತಿತ್ತು.

ಬರುತ್ತಿದ್ದ ಮಳೆಯ ರಭಸವನ್ನು ಅನುಭವಿಸಲು ಪ್ಲಾಸ್ಟಿಕ್ ಸೂರಿನಿಂದ ಹೊರಗೆ ಬಂದು ಸಂಪೂರ್ಣ ನೆಂದು ಸಂತಸ ಪಟ್ಟೆ. ಬಟ್ಟೆಯೆಲ್ಲಾ ಸಂಪೂರ್ಣ ಒದ್ದೆಯಾಗಿದ್ದರೂ ಬೆಟ್ಟವನ್ನೇರಲು ಹೊರಟ ಕೆಲಸಮಯದಲ್ಲೇ ಒಣಗಿತು.. ಆದರೆ ಮಸುಕಿದ ಮಂಜು, ಅದರೊಳಗೆ ನಾವು, ನಮ್ಮನ್ನು ಸಂಪೂರ್ಣ ಒದ್ದೆ ಮಾಡಿತ್ತು. ಸ್ವರ್ಗದಲ್ಲಿ ದೇವತೆಗಳು ಮೋಡದ ಮೇಲೆ ಇರುತ್ತಾರೆಂಬಂತೆ ಚಲನಚಿತ್ರಗಳಲ್ಲಿ ತೋರಿಸೋದಿಲ್ವೇ, ಹಾಗೆ ನಾವು ಸ್ವರ್ಗದಲ್ಲಿದ್ದೇವೆಂಬ ಭಾಸವಾಗುತ್ತಿತ್ತು. ಈ ಭಾಸದಲ್ಲಿ ಮುಂದಿನ ದಾರಿಯೇ ಕಾಣದಂತಿತ್ತು. ಮಂಜು ಮರೆಯಾಗಲು ತುಸು ಕಾದು ನಂತರ ಚಾರಣ ಮುಂದುವರೆಸಬೇಕಾಯಿತು.

ಕೋಟೆಬೆಟ್ಟವು ಕಡೆಯ ಹಾದಿಯವರೆಗೂ ಬೇರೆ ಬೆಟ್ಟಶ್ರೇಣಿಗಳ ಹಿಂದೆ ಅವಿತುಕೊಂಡಿದೆ. ಅವನ್ನೆಲ್ಲಾ ದಾಟಿಬಂದ ಮೇಲೆ, ಕೈಲಾಸ ಪರ್ವತವನ್ನು ಹೋಲುವಂತೆಯೇ ಪೋಸ್ ಕೊಟ್ಟು ಸ್ವಾಗತಿಸುತ್ತೆ! ಆದರೆ ಈ ಕೈಲಾಸವನ್ನೇರಲು ಯಾರ ಅಡಚಣೆಯೂ ಇಲ್ಲ - ಮಳೆಗಾಲದಲ್ಲಿ ಆನೆಗಳನ್ನು ಹೊರೆತಾಗಿ. ಬೆಟ್ಟದ ಮೇಲೆ ಟೆಂಟುಗಳನ್ನು ಹಾಕಿ ಅದರೊಳಗೆ ಹೊಕ್ಕು ಉಸಿರೆಳೆದುಕೊಳ್ಳುವಾಗ ಸಿಡಿಲು ಗುಡುಗುಗಳು ನಮ್ಮನ್ನು ಲಯಬದ್ಧವಾಗಿ ರಂಜಿಸಿದವು. ಗಾಳಿಯ ಗಾಯನಕ್ಕೆ ಟೆಂಟುಗಳೂ ತೂಗಿದವು! ಸೂರ್ಯನು ಆಗಸವನ್ನೆಲ್ಲಾ ರುಧಿರಕೆಂಪಾಗಿಸಿ "ನಾಳೆ ಸಿಗೋಣ, ಪೂರ್ವದಲ್ಲಿ!" ಎಂದು ಹೇಳಿ ಹೊರಟು ಹೋದನು.ಟೆಂಟಿನೊಳಗೆ ನಿದ್ದೆ ಬರಲು ಪ್ರಕೃತಿಯೂ ಕಾರಣ. ಗಾಳಿ ಜೋರಾಗಿ ಬೀಸಲಿಲ್ಲ, ಮಳೆ ನಿಂತು ಹೋಯಿತು. ಗುಡುಗು ಸಿಡಿಲು ತಾಳ ಮೇಳಗಳು ಮನೆಗೆ ಹೊರಟು ಹೋದವು.ಬೆಳಿಗ್ಗೆ ಎದ್ದು ರಾಗಿ ಹುರಿಟ್ಟು ಕಲಸಲು ಬಾರದೆ, ಅರ್ಧ ಕೆ.ಜಿ. ಹುರಿಟ್ಟನ್ನು ಚೆಲ್ಲಿದ್ದಾಯಿತು. ಅದಕ್ಕೆ ಒಂದಷ್ಟು ಅನ್ನಿಸಿಕೊಂಡಿದ್ದೂ ಆಯ್ತು. "ನಾನು ಮೊದಲೇ ಹೇಳಿದೆ, ಅಷ್ಟೊಂದು ಹಾಕ್ಬೇಡಿ ಅಂತ.. ಈಗ ನೋಡಿ" ಅಂತ ಡೀನ್ ತಮ್ಮ ಯಾವುದೋ ಜನ್ಮದ ಸಿಟ್ಟನ್ನು ತೀರಿಸಿಕೊಂಡಂತೆ ಬೈದರು. ಬೈಗುಳ ಚೆನ್ನಾಗಿತ್ತು. ಎಲ್ಲರೂ ಸೇರಿ ಬೈದರು ನನಗೆ. ಅದನ್ನೆಲ್ಲಾ ಇಲ್ಲಿ ಬರೆಯೋದಿಲ್ಲ ಬಿಡಿ. ಅಲ್ಪ ಸ್ವಲ್ಪ ಮರ್ಯಾದೆಯನ್ನು ಉಳಿಸಿಕೊಂಡಿದ್ದೀನಿ. ಅನ್ನಪೂರ್ಣ ಪೂರ್ವದಲ್ಲಿ ಮೋಡದ ಮರೆಯಲ್ಲಿ ಅಡಗಿದ್ದ ಸೂರ್ಯನಿಗೆ ಬೆನ್ನು ತೋರಿಸಿ, ಬೆಟ್ಟದ ತುದಿಯಲ್ಲಿ ಕುಳಿತು ಸ್ವರ್ಗದಂಥ ದೃಶ್ಯವನ್ನು ನೋಡಿ ಮೈಮನಮರೆತು ಆನಂದಮಯಕೋಶವನ್ನು ತಲುಪಿದ್ದರು. ಡೀನ್ ಟೆಂಟನ್ನು ಬಿಡಿಸುತ್ತಲೇ ನನಗೆ ರಾಗಿಹುರಿಟ್ಟಿನ ಸಲುವಾಗಿ ಬೈಯ್ಯುತ್ತಲೇ ಇದ್ದರು.

ಎರಡು ದಿನದಿಂದಲೂ ಬೈಸಿಕೊಳ್ಳೂತ್ತಲೇ ಇದ್ದೆ ನಾನು. ಹಿಂದಿನ ದಿನ ಬಸ್ಸಿನಲ್ಲಿ ನಾಪತ್ತೆಯಾದ ಮೊಬೈಲ್ ಸಲುವಾಗಿ ನಾನು ಎಲ್ಲರಿಂದಲೂ ಹೊಸ ಹೊಸ ರಿಂಗ್ ಟೋನ್‍ಗಳ ಉಪದೇಶಗಳನ್ನು ಕೇಳಿ ನಂತರ ಹೇಗೋ ಆ ಬಸ್ಸನ್ನು ಚೇಸ್ ಮಾಡಿ ವಾಪಸ್ ಪಡೆದುಕೊಂಡಿದ್ದೆವು. ಮಡಿಕೇರಿಯ ವೀಥಿಯಲ್ಲಿ ಬೆಳ್ಳಂಬೆಳಿಗ್ಗೆ ಹಾಗೆ ದಿಕ್ಕುಕಾಣದೆ ಓಡುತ್ತಿರುತ್ತೇನೆಂದು ಕನಸುಮನಸಿನಲ್ಲಿಯೂ ಎಣಿಸಿರಲಿಲ್ಲ. ನನ್ನೊಡನೆ ಓಡುತ್ತಿದ್ದ ಶ್ರೀಕಾಂತ್ ಕರೆದರೂ ಕೇಳದಂತೆ ಓಡುತ್ತಿದ್ದೆನೇ? ನನ್ನ ಪಾಡನ್ನು ತಮ್ಮ ಪಾಡೆಂದುಕೊಂಡು ಡಿಪೋ ಇಂದ ಹೊರಟ ಬಸ್ಸಿನಲ್ಲೇ ಬಂದ ಡೀನ್ ಕೂಗಿದ್ದೂ ಕೇಳಿಸದೇ ಹೋಯಿತೇ? ಅಂತೂ ಹೇಗೋ ಮೊಬೈಲ್ ಸಿಕ್ಕಿತು. ಪಯಣವನ್ನು ಹಟ್ಟಿಹೊಳೆಯತ್ತ ಬೆಳೆಸಿದೆವು.

ಹ್ಯಾಟಿಹೋಲ್

ಇಂಗ್ಲೀಷಿನಲ್ಲಿ ಬರೆದಿರೋದು ಹೀಗೆಯೇ.. Hattyhole! ಅಲ್ಲಿಂದ ಚಾರಣವನ್ನಾರಂಭಿಸಿದ ನಾವು ಕೋಟೆಬೆಟ್ಟವನ್ನು ಯಾವಾಗ ತಲುಪುತ್ತೇವೋ ಎಂದು ಕಾತುರರಾಗಿದ್ದೆವು. ಹಟ್ಟಿಹೊಳೆಯಲ್ಲಿ ಸ್ನಾನ ಮಾಡಬೇಕೆಂದು ಥಟ್ಟನೆ ಎಲ್ಲರಿಗೂ ಹೊಳೆದ ಸಂಗತಿ - ನನ್ನನ್ನು ಹೊರೆತು. "ನಾಳೆ ವಾಪಸ್ ಬರ್ತಾ ಇಳಿಯೋಣ, ನೀರು ಸಕ್ಕತ್ತಾಗಿದೆ" ಅನ್ನಪೂರ್ಣ ಆದೇಶಿಸಿದರು. ಎಡದಲ್ಲಿ ಸಿಕ್ಕ ಸೇತುವೆಯಂತೂ ಬಹಳ ಖುಷಿ ಕೊಟ್ಟಿತು ನನಗೆ. ಆ ಸೇತುವೆಯನ್ನೊಮ್ಮೆ ದಾಟಿ ಪುನಃ ಹಿಂದಿರುಗಿದೆವು. ಟಾರುರಸ್ತೆಯು ಕಲ್ಲು ರಸ್ತೆಯಾಗಿ, ಅದು ಕಾಲುದಾರಿಯಾಗಿ ನಂತರ ಕಾಡುದಾರಿಯಾಗುವುದು ಇಲ್ಲಿನ ಹಾದಿಯ ವೈಶಿಷ್ಟ್ಯ.
ಹೋಗುವಾಗ ಅಲ್ಲಿ ಇಲ್ಲಿ ಕುಳಿತು, ಒಂದೆರಡು ಕಡೆ ನಿದ್ದೆ ಹೊಡೆದು, ಹಲಸಿನ ಹಣ್ಣನ್ನು ಕಿತ್ತು ತಿನ್ನದೇ ಬರೀ ಹೆಚ್ಚಿ, ನೂರಾರು ಫೋಟೋಗಳನ್ನು ಕ್ಲಿಕ್ಕಿಸಿ, ಕೈಲಾಸರೂಪಿ ಕೋಟೆಬೆಟ್ಟದ ತಪ್ಪಲನ್ನು ತಲುಪಲು ನಮಗೆ ಐದುಗಂಟೆಗಳಕಾಲವೇ ಬೇಕಾಯಿತು. ದಾರಿಯಲ್ಲಿ ತೊರೆಯೊಂದರಲ್ಲಿ ನೀರು ಎಷ್ಟು ಕಡಿಮೆಯಿತ್ತೆಂದರೆ, ಶ್ರೀಕಾಂತನೂ ನಾನೂ ನಮ್ಮ ಬಾಟಲಿಯನ್ನು ಭರ್ತಿ ಮಾಡಲು ಮುಚ್ಚಲದಿಂದ ತುಂಬಿಸಿದೆವು.

ಕೆಳಗಿಳಿವಾಗ ಈ ಹಲಸಿನ ಹಣ್ಣನ್ನು ಹೆಚ್ಚಿದ ಜಾಗ, ನೀರು ತುಂಬಿಸಿದ ಜಾಗ, ನಾಯಿ ಮರಿಯು ಸಿಕ್ಕಿದ ಜಾಗ, ಎಲ್ಲವನ್ನೂ ನೋಡುತ್ತಾ, ವೇಗವಾಗಿ ಚಾರಣ ಮಾಡುತ್ತ ನೆನಪಿನ ಶಿಖರವನ್ನೇರತೊಡಗಿದೆವು. ಹಟ್ಟಿಹೊಳೆಯಲ್ಲಿ ಒಂದು ಗಂಟೆ ಕಾಲ ಕಳೆದು, ಮಂಡಿಯೆತ್ತರದ ನೀರಿನಲ್ಲಿ ತೇಲಾಡಿ, ಉರುಳಾಡಿ, ಹೊರಳಾಡಿ, ಆಟವಾಡಿ, ಸಂತಸ ಪಟ್ಟು, ಹಸಿದ ಹೊಟ್ಟೆಯಲ್ಲಿ ಮಡಿಕೇರಿಯನ್ನು ತಲುಪಿ, ಊಟ ಮುಗಿಸಿದೆವು.

ಒಂದು ವರ್ಷದ ಪ್ರಾಜೆಕ್ಟು
ಒಂದು ವರ್ಷದಿಂದ ಕೋಟೆಬೆಟ್ಟ ಕೋಟೆಬೆಟ್ಟ ಎಂದು ಯೋಜನೆ ಹಾಕುತ್ತಲೇ ಬರುತ್ತಿದ್ದೆವು. ಆದರೆ ಈಗ ಕೈಗೂಡಿತು. ಕೋಟೆಬೆಟ್ಟ ನಮ್ಮನ್ನು ಧನ್ಯರನ್ನಾಗಿಸಿತು! ಸಂಪೂರ್ಣ ಯೋಜನೆ, ನಿರ್ವಹಣೆಗಳನ್ನು ಡೀನ್ ಹಾಗೂ ಶ್ರೀಕಾಂತ್ ವಹಿಸಿಕೊಂಡಿದ್ದರು. ಅನ್ನಪೂರ್ಣ, ಗೋವಿಂದ್ ರಾಜ್, ಮತ್ತು ನನ್ನ ಕೆಲಸ ಅವರನ್ನು ಫಾಲೋ ಮಾಡುವುದಷ್ಟೇ.. ಅವರೆಲ್ಲಿ ಕರೆದರತ್ತ ಹೋಗಲು ಸಿದ್ಧನಿದ್ದೆ!

ಇನ್ನೂ ಅನೇಕ ಪ್ರಾಜೆಕ್ಟುಗಳು ಪೆಂಡಿಂಗ್ ಇವೆ.. ಆದಷ್ಟು ಬೇಗ ಎಲ್ಲವನ್ನೂ ನೆರವೇರಿಸುವ ಕೆಲಸವನ್ನು ನಮ್ಮ ಪ್ಲಾನಿಂಗ್ ಕಮಿಷನ್ ಕೈಗೊಳ್ಳುತ್ತೆಂದು ಆಶಿಸುತ್ತೇನೆ.. ಹಿಂಬಾಲಿಸಲು ನಾನು ಸಿದ್ಧನಿದ್ದೇನೆ. ಗುರುಗಳ ಹಿಂದೆ ಶಿಷ್ಯನಿದ್ದಂತೆ!!ಡೈಲಾಗ್ಸ್


"ರೀ, ಇಲ್ಲಿ ದೇವಸ್ಥಾನ ಇದೆ ಅನ್ನೋದೇ ಡೌಟು, ಮೇಲೆ ಹೋಗೋದು ಸೇಫ್ ಅಲ್ಲ.. come on lets go back.. ಮಳೆ ನೋಡಿ, ಬೋಳಿಮಗಂದು ಎಷ್ಟು ಜೋರಾಗಿ ಬರ್ತಿದೆ.." - ಗೋವಿಂದ್ ರಾಜ್ (ಮಳೆ ಶುರುವಾದ ತಕ್ಷಣ)

"ಇದು ನನ್ನ ಬೆಸ್ಟ್ ಟ್ರೆಕ್ಕ್ - ಬ್ರಹ್ಮಗಿರಿಯನ್ನು ಹೊರೆತುಪಡಿಸಿ!" - ಶ್ರೀಕಾಂತ್ (ವಾಪಸ್ ಬಂದ ಮೇಲೆ)

"ಕೈಲಾಸ ಪರ್ವತದ ಹಾಗೆಯೇ ಕಾಣಿಸುತ್ತೆ ಅಲ್ಲಾ ಕೋಟೆಬೆಟ್ಟ?" - ಅನ್ನಪೂರ್ಣ (ಕೋಟೆ ಬೆಟ್ಟದ ದರ್ಶನವಾದ ನಂತರ)

"ರೀ, ಬಾಡಿ ವೈಟ್ ಹಾಕ್ರೀ.. ಎಲ್ಲಾ ಪ್ರಾಬ್ಲಮ್ ಸಾಲ್ವ್ ಆಗುತ್ತೆ ನಿಮ್ಗೆ" - ಡೀನ್ (ನನ್ನ ಕತ್ತುನೋವನ್ನುದ್ದೇಶಿಸಿ)

"ನಾನೂ ನೀರಿಗಿಳಿಯುತ್ತೇನೆ.. ನನಗೆ ಮೂಡ್ ಬಂದಿದೆ.." - ನಾನು (ನೀರಿಗಿಳಿಯುವ ಮೂಡ್ ಅಷ್ಟೇ. ಬೇರೆ ಅರ್ಥ ಮಾಡಿಕೊಳ್ಳದಿರಿ. ಹಟ್ಟಿಹೊಳೆಯ ನೀರನ್ನು ಹತ್ತು ನಿಮಿಷ ನೋಡಿದ ನಂತರ ನಾನು ಹೇಳಿದ್ದು - usually ನಾನು ನೀರಲ್ಲಿ ಆಟವಾಡುವುದಿಲ್ಲ)
ಅನ್ನಪೂರ್ಣರ ಬರಹವನ್ನೋದಿದರೆ ನಿಜವಾದ ಕೋಟೆಬೆಟ್ಟವನ್ನೇರಿದಂತಾಗುತ್ತೆ.. ಓದಿ.. http://nannakhajaane.blogspot.com/2007/05/blog-post.html


- ಅ
11.05.2007
12.10AM

Friday, May 04, 2007

ಮುಂಗಾರು ಮಳೆ

ಚೆನ್ನಾಗಿದೆ.. ತಾಳ್ಮೆಯಿದ್ದರೆ ಒಮ್ಮೆ ನೋಡಬಹುದು...

ನೋಡಲು ಆಗದಿದ್ದರೆ ನಷ್ಟವೇನಿಲ್ಲ.

Tuesday, May 01, 2007

ನನ್ನಂತೆ ಬರವಣಿಗೆಯನ್ನಾರಾಧಿಸುವವರಿಗೆ....


ಗೋಪಾಲಕೃಷ್ಣ ಅಡಿಗರ 'ಭಾವತರಂಗ' ಕವನಸಂಕಲನದ 'ಬಯಕೆ' ಕವನದ ಸಾಲುಗಳು...
ಅಂದು ರಸಋಷಿಗಳೆನಿಬರೊ ಬರೆದ ಕಾವ್ಯರಸ
ಸಿಂಧುವಿನೊಳೆದೆ ಮಿಂದು ಮಿರುಗುಗೊಳಲಿ;
ಅಂದಿನವರಾಂತರ್ಯದೊಂದು ಶಾಂತಿಯ ಕಾಂತಿ
ಇಂದೆಮ್ಮ ಕೃತಿಗಳಲಿ ಮಾರ್ಪೊಳೆಯಲಿ.

ಒಂದಷ್ಟು ಚಿತ್ರಗಳು..