Monday, April 30, 2007

ಬಹಿಷ್ಕಾರ??

"ನಿನಗೆ ಬಹಿಷ್ಕಾರ ಹಾಕ್ತಾರೆ ಅಷ್ಟೆ! ಯಾರೂ ಸೇರಿಸೋದಿಲ್ಲ ತಮ್ಮ ಮನೆಗೆ ನಿನ್ನನ್ನು.. ಎಲ್ಲರನ್ನೂ ದೂರ ಮಾಡ್ಕೋತೀಯ.." ಸತ್ಯಪ್ರಕಾಶ್ ಹೇಳಿದರು ನನಗೆ...

ಅವರು ಹಾಗೆ ಹೇಳಲು ಕಾರಣ ಇದೆ.. ಬಲವಾಗಿದೆ.. ನನ್ನ ನಂಬಿಕೆಗಳು, ನನ್ನ ಆದರ್ಶಗಳು, ನನ್ನ ಆಚರಣೆಗಳು, ನನ್ನ ಅನಿಸಿಕೆಗಳು, ನನ್ನ ವಿಚಾರಗಳು ಅನೇಕರಿಗೆ ಹಿಡಿಸೋದೇ ಇಲ್ಲ. ಇದಕ್ಕೆ ನಾನೇನೂ ಮಾಡಲಾಗುವುದಿಲ್ಲ.. ಅದು ಅವರ ಕರ್ಮ!!

ಮೊನ್ನೆ ದೊಡ್ಡಮ್ಮ ತೀರಿಕೊಂಡ ದಿನ ಶವದ ಬಾಯಿಗೆ ಅಕ್ಕಿ ಕಾಳು ಹಾಕುವಾಗ ಮನಸ್ಸು ತುಂಬಾ ಹಿಂಸೆ ಪಟ್ಟಿತು. ಇದೆಂಥಾ ಹೀನ ಸಂಪ್ರದಾಯ, ಅಸಹ್ಯ ಎಂದೆನಿಸಿತು. ಅಲ್ಲೇ, "ನನಗೆ ಇದು ಸಾಧ್ಯವಿಲ್ಲ, ನೀವು ಏನಾದರೂ ಮಾಡಿಕೊಳ್ಳಿ, ನನ್ನ ಬಲವಂತ ಮಾಡದಿರಿ" ಎಂದು ಹೇಳಿ ಹೊರಟು ಬಂದುಬಿಡೋಣವೆಂದೆನಿಸಿತು.. ಆದರೆ ಅಮ್ಮನ ಮುಖ ನೋಡಿದೆ.. ನಾನು ಹಾಗಂದಿದ್ದರೆ ಎಷ್ಟು ಜನರಲ್ಲಿ ನಿಷ್ಠುರ ಕಟ್ಟಿಕೊಳ್ಳಬೇಕಿತ್ತೋ ಏನೋ.. ಅದಕ್ಕೆ ನಾನು ಸಿದ್ಧ. ಆದರೆ ಅಮ್ಮ ಅದಕ್ಕೆ ಸಿದ್ಧವಿಲ್ಲವೆಂದು ಅವರ ಕಣ್ಣುಗಳು ಹೇಳುತ್ತಿದ್ದವು. ಮನಸ್ಸು ತೀರ ಕೆಟ್ಟಿದ್ದಿದ್ದರೆ ಅದನ್ನೂ ಲೆಕ್ಕಿಸದೆ ಹೇಳಿಬಿಡುತ್ತಿದ್ದೆನೇನೋ!!

ಇನ್ನು ಈ ಭೂಮಿ ಋಣ ತೀರಿತು, ಇವರಿಗೆ ಕೊನೆಯ ಅಕ್ಕಿ.. ಎಂಬ ಕಾರಣಕ್ಕೆ ಅಕ್ಕಿ ಕಾಳನ್ನು ಬಾಯಿಗೆ ಹಾಕುವುದಂತೆ.. ಹಾಗಂತ ಪುರೋಹಿತರು ಹೇಳಿದರು. ಬದುಕಿದಾಗ ಅನ್ನ ಹಾಕಲಾಗದ ಬಾಯಿಗೆ ಸತ್ತ ಮೇಲೆ ಅಕ್ಕಿ ಹಾಕಲು ಎಲ್ಲೆಲ್ಲಿಂದಲೋ ಹುಡುಕಿಕೊಂಡು ಬಂದು ಕಣ್ಣೀರಿನ ಮಳೆಯನ್ನು ಸುರಿಸಿ, "ನಾವಿದ್ದೇವೆ, ಚಿಂತಿಸದಿರಿ" ಎಂದು ಬದುಕುಳಿದವರಿಗೆ ಸಾಂತ್ವನ ಹೇಳುವ ನಾಟಕವನ್ನಾಡುವುದಕ್ಕಿಂತ ಬಹಿಷ್ಕಾರವೇ ಮೇಲೆನಿಸಿತು. ಇನ್ನು ಸ್ಮಶಾನದಲ್ಲಿ ಹೆಣಕ್ಕೆ ಸಿಂಗಾರ ಮಾಡುವ ಪರಿಯಂತೂ ಚಿತ್ರಹಿಂಸೆ ಕೊಡುವಂಥದ್ದು. ಇದನ್ನು ಸಂಪ್ರದಾಯವೆಂದು ಹೇಳಿಕೊಳ್ಳಲು ಮನಸ್ಸಿಗೆ ನೋವಾಗುತ್ತೆ. ಅದನ್ನೆಲ್ಲಾ ವಿರೋಧಿಸಿದವನಿಗೆ ಬಹಿಷ್ಕಾರ ಗ್ಯಾರೆಂಟಿ..

ಇಷ್ಟಕ್ಕೂ ಬಹಿಷ್ಕಾರ ಹಾಕುವವರು ಯಾರು? ನನ್ನನ್ನು "ಅರುಣ" ಎಂದು ಗುರುತಿಸದೆ, ಕೇವಲ ನಾನು ಅವರ ಜಾತಿಯವನು, ನಾನೊಬ್ಬ ಸಂಕೇತಿಯೆಂದೋ, ನಾನೊಬ್ಬ ಬ್ರಾಹ್ಮಣನೆಂದೋ, ನಾನೊಬ್ಬ ಹಿಂದುವೆಂದೋ ನನ್ನನ್ನು ತಮ್ಮವನೆಂದು ಭಾವಿಸಿರುವವರು ತಾನೇ.. ನನಗಿಂತ ನನ್ನ ಜಾತಿ ಮುಖ್ಯವಾಗಿರುವವರು ನನ್ನವರೆಂದೂ ಆಗಿರಲಾರರು. ಅದು ಬರಿ ಅವರ ನಟನೆ. ಅಂಥವರ ಸಂಬಂಧವೂ ನನಗೆ ಬೇಕಾಗಿಲ್ಲ. ಸತ್ಯಪ್ರಕಾಶರು ಬಹಿಷ್ಕಾರದ ವಿಷಯ ಹೇಳಿದ ಮರುಕ್ಷಣವೇ ಮುಂದಿನ ಸಲದಿಂದ ನೇರವಾಗಿ ಹೇಳಿಬಿಡೋಣವೆಂದೆನಿಸಿತು, ಎದುರು ಯಾರಿದ್ದರವರಿಗೆ - "ನಿಮ್ಮ ಆಚರಣೆ (ಡಂಬಾಚರಣೆ) ನಿಮಗಿರಲಿ. ನನ್ನ ಕರೆಯದಿರಿ." ಎಂದು.

ಹಿರಿಯರು ತುಂಬಿದ ಮನೆಯಲ್ಲಿ ಇದನ್ನೆಲ್ಲಾ ಮಾತನಾಡುವ ಧೈರ್ಯವೂ ಇಲ್ಲದೆ, ವಿದ್ಯಾವಂತ ಮಕ್ಕಳು ಸುಮ್ಮನೆ ಇರುತ್ತಾರಲ್ಲದೆ ತಾವೂ ಆಚರಿಸುತ್ತಾರೆ. ಡಂಬಾಚಾರವೇ ಸಂಪ್ರದಾಯವೆಂದು ನಂಬಿ, ಅದನ್ನೆಲ್ಲಾ ಆಚರಿಸದವರನ್ನು ದೂರ ಮಾಡಿಕೊಳ್ಳಬೇಕೆಂಬುದು ಇವರಿಗೆ ಅದೆಲ್ಲಿಂದ ಹೊಳೆಯುವ ಚಿಂತನೆಗಳೋ ಅವರು ನಂಬುವ ದೇವರೇ ಬಲ್ಲ! ಅವುಗಳಿಂದ ಅವರು ಮಾಡುವ ಸಾಧನೆಯಾದರೂ ಎಂಥದ್ದು?


" ಯಾವುದೋ ದೇವಸ್ಥಾನದ ಪುರೋಹಿತನಂತೆ.. ನಾನ್ಯಾಕೆ ಅವನ ಕಾಲಿಗೆ ನಮಸ್ಕರಿಸಬೇಕು? ಅವನು ಯಾರಾಗಿದ್ದರೆ ನನಗೇನಂತೆ? ಅವನಿಗೆ ದೇವರು ಒಲಿದಿದ್ದರೂ ನನಗೇನು! ಅವನು ಈ ಜಗತ್ತನ್ನು ನಡೆಸುವ ಪ್ರಕೃತಿಗಿಂತ ಹಿರಿಯನೇ? ಅವನೇನು ನನಗೆ ವಿದ್ಯೆ ಕೊಟ್ಟ ಗುರುವಲ್ಲ, ನನ್ನನ್ನು ಸಾಕಿ ಸಲಹಿದ ಪೋಷಕನಲ್ಲ. ಅವನು ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡು ಅವನ ಪಾಡಿಗವನಿದ್ದಾನೆ. ಅದು ಅವನ ಕರ್ಮ. ಅವನಿಗೆ ನಾನೇಕೆ ನಮಸ್ಕರಿಸಬೇಕು? ಇದು ನನಗೆಂಥ ಕರ್ಮ? ಒಳ್ಳೆ ಮಾತಾಡಿದರೆ ನಾನು ಒಳ್ಳೇ ಮಾತಾಡುತ್ತೇನೆ. ಅವನಿಗೆ ನಾನೇನೂ ಕೆಟ್ಟದ್ದು ಬಯಸಿಲ್ಲ. ಅವನು ಯಾರೆಂದೇ ಗೊತ್ತಿಲ್ಲ. ಅವನನ್ನು ನೋಡುತ್ತಿರೋದೇ ಇದೇ ಮೊದಲು. ನಮಸ್ಕಾರ ಬೇರೆ ಮಾಡಬೇಕಂತೆ. ಸಾಧ್ಯವೇ ಇಲ್ಲ." ಹೀಗೆಂದು ಮಿತ್ರನೊಬ್ಬ ತನ್ನ ತಂದೆಯ ವಿರುದ್ಧ ಮಾತನಾಡಿದ್ದಕ್ಕೆ ಅವನ ತಂದೆ "ಮನೆಯಿಂದ ತೊಲಗಾಚೆ" ಎಂದು ಹೇಳಿ ಅವನನ್ನು ಸ್ವತಂತ್ರ ಜೀವಿಯನ್ನಾಗಿಸಿದರು.

"ನನ್ನ ಆಪ್ತಮಿತ್ರ ಸಂತೋಷ್ ಹೋಗಿಬಿಟ್ಟ. ನಾನು ಅವನ ಅಂತ್ಯಸಂಸ್ಕಾರಕ್ಕೆ ಹೋಗಿದ್ದೆ. ಹರಿಶ್ಚಂದ್ರ ಘಾಟ್‍ಗೆ. ಅದಕ್ಕೆ ರಾತ್ರಿ ಸ್ವಲ್ಪ ಲೇಟ್ ಆಯ್ತು ಮನೆಗೆ ಬಂದಿದ್ದು." ಎಂದು ರಮೇಶ್ ತಡವಾಗಿ ಬಂದಿದ್ದಕ್ಕೆ ಕಾರಣವೇನೆಂದು ಕೇಳಿದ ತಂದೆಗೆ ಉತ್ತರ ಕೊಟ್ಟ. "ಅಯ್ಯೋ, ನಿನಗೇನೋ ಬಂತು ಬರಬಾರದ್ದು? ನಾನು ಬದುಕಿರುವಾಗಲೇ ಸ್ಮಶಾನಕ್ಕೆ ಹೋಗಿದ್ದೀಯಲ್ಲ.." ಎಂದು ತಂದೆ ಹೇಳಿದ್ದೇ ಕೊನೆ. ಅದಾದ ನಂತರ ಎಂಟು ವರ್ಷಗಳಿಂದ ಇನ್ನೂ ಒಂದು ಮಾತನ್ನೂ ಆಡಿಲ್ಲ ಅವರ ಮಗನೊಡನೆ!!

ಮಗಳು ಬೇರೆ ಜಾತಿಯವನನ್ನು ಪ್ರೀತಿಸಿದಳೆಂಬ ಕಾರಣಕ್ಕೆ ಮಗಳ ಸಂಬಂಧವೇ ಕಡಿದು ಹೋದರೆ, ಮಗಳನ್ನು ಮಗಳಾಗಿ ಪ್ರೀತಿಸಿರಲೇ ಇಲ್ಲವೆಂದರ್ಥ. ಪ್ರೀತಿ ತನಕ ಯಾಕೆ ಹೋಗೋದು. "ಅದ್ಯಾವನೋ ಬೇರೆ ಜಾತಿಯವನನ್ನೆಲ್ಲಾ ಮನೆಗೆ ಸೇರಿಸಿ, ನೀನೂ ಅವರ ಮನೆಗೆ ಹೋಗಿ ಊಟ ಮಾಡಿದ್ದೀಯಲ್ಲಾ, ನಾಚಿಕೆ ಆಗಲ್ವಾ?" ಅನ್ನೋದು ಎಷ್ಟು ಜನರ ಮನೆಯಲ್ಲಿ ಈಗಲೂ, ಈ ಕಾಲದಲ್ಲೂ ನಡೆಯುವ ಮಾತೇ ಅಲ್ಲವೇ. ಅನೇಕರು ಹೋಟೆಲಿನಲ್ಲಿ ತಿನ್ನೋದಿಲ್ಲ. ಅದು ಆರೋಗ್ಯದ ದೃಷ್ಟಿಯಿಂದಲ್ಲ, ಅಲ್ಲಿ ಯಾವ ಜಾತಿಯವನು ಅಡಿಗೆ ಮಾಡಿರುತ್ತಾನೋ ಏನೋ.. ಎಂದು. ಶತಮಾನದ ಸಂಖ್ಯೆ ಮಾತ್ರ ಹೆಚ್ಚುತ್ತಿದ್ದೆ. ಹತ್ತೊಂಭತ್ತರಿಂದ ಇಪ್ಪತ್ತು. ಇಪ್ಪತ್ತರಿಂದ ಇಪ್ಪತ್ತೊಂದು.

ತಮ್ಮ ಆಚರಣೆಗಳಿಗೆ, ತಮ್ಮ ನಂಬಿಕೆಗಳಿಗೆ, ತಮ್ಮ ಆದರ್ಶಗಳಿಗೆ ವಿರುದ್ಧ ಹೋಗುವ ಮಕ್ಕಳನ್ನು ತಂದೆತಾಯಂದಿರು, ಸಮಾಜ ಒಪ್ಪಿಕೊಳ್ಳುವ ಉದಾಹರಣೆಗಳು ಬಹಳ ವಿರಳ. ತಮ್ಮಂತೆಯೇ ಎಲ್ಲರಿಗೂ ತಮ್ಮದೇ ಆದ ನಂಬಿಕೆಗಳು, ಆದರ್ಶಗಳು ಇರುತ್ತವೆಂದು ಅರ್ಥೈಸಿಕೊಳ್ಳೋರು ತುಂಬಾ ಕಡಿಮೆ. ಅವುಗಳಿಗೆ ಗೌರವ ನೀಡುವವರು ಬಹಳ ಕಮ್ಮಿ.. "ನಿಮ್ಮಾಚರಣೆಗಳು ನನಗೆ ಹಿಡಿಸೋದಿಲ್ಲ. ನಿಮ್ಮ ಸಂಪ್ರದಾಯಗಳು ನಿಮಗೇ ಇರಲಿ. ನನ್ನ ಮೇಲೆ ಹೇರದಿರಿ." ಎಂದು ನನ್ನ ವಿನಂತಿ. ಕೇಳುವುದು ಬಿಡುವುದು "ಹಿರಿಯರಿಗೆ" ಬಿಟ್ಟಿದ್ದು.

ನಾನು ಇರುವುದೇ ಹೀಗೆ.. ಬಹಿಷ್ಕಾರ ಹಾಕುವವರಿಗೆ ಎದೆಗಾರಿಕೆಯಿದ್ದರೆ ಮುಂದೆ ಬನ್ನಿ.. ನೀವು ಬಹಿಷ್ಕಾರ ಹಾಕುವ ಮುನ್ನ ನಾನೇ ನಿಮ್ಮನ್ನು ಬಹಿಷ್ಕರಿಸುತ್ತೇನಷ್ಟೆ!!

11 comments:

 1. bahaLa chennagidhe ..nimma niluvu..
  bahaLa mandhi ee reethiya aacharaNegaLalli thodaguvavarigu kooda thiLidiruttadhe..avaru maaaduttiruvudharalli huruLilla antha....sampradaayakke(!!) kattubiddu... adanella pooraisuttaare athava hiriyara ottadakke maNebiddu...... anthaha samayadalli(yaaradaru theerikondaaga) thamma niluvannu vyakthapadisi summane yeke thondare anubhavisabekendu.... summane yeke konku birunudigaLige thuttagabekendu...athava neevu heLidanthe so called hiriyaru "bahiShkarisa" bahudendhu....

  ellarigu saagaradha alegaLa jothey eejuvudhu sulabha....virudda dikkinalli eejuva dhairya thoruvavaru kadime....eejidaru jayashaaLigaLaagi dada seruvavaru viraLa......

  anthaha prayathna swaagathaarha.. :-)

  ReplyDelete
 2. [ಶ್ರೀಧರ] ಯಾರಾದರೂ ತೀರಿಕೊಂಡ ಸಮಯದಲ್ಲಿ ನನ್ನ ನಿಲುವು ಅಲ್ಲಿದ್ದವರಿಗೆ ಮುಖ್ಯವಲ್ಲದಿದ್ದರೆ ಅಲ್ಲಿ ನಾನಿದ್ದು ಏನೂ ಪ್ರಯೋಜನವಿಲ್ಲ. ಸತ್ತವರ ಬಗ್ಗೆ ನನಗೆ ಗೌರವವಿದೆ. ಪ್ರೀತಿಯಿದೆ. ಅದನ್ನು ನಾನು ತೋರಿಸಿಕೊಳ್ಳಲು "ಇವರು" ಹೇಳಿದ ಆಚರಣೆಯಿಂದಲೇ ಮಾಡಬೇಕೆಂದಿಲ್ಲ ಅಲ್ಲವೇ?

  ಇವರ ಆಚರಣೆಗಳಲ್ಲಿ ನನಗೆ ನಂಬಿಕೆಯಿಲ್ಲವೆಂದರೆ ಅದರಿಂದ ಇವರಿಗಾಗುವ ತೊಂದರೆಯಾದರೂ ಏನು?

  ReplyDelete
 3. actually avarige enu thondare iruvudilla..huduga swalpa oodhikondiddaane..thale harate maadthidaane..annuttaare.... bidu..
  neenu heLidantha anthaha aacharaNegaLalli naavu nammanna thodagisikoLLabaaradhu..ashte...

  hiriyaru andaakshaNa..avara vayassanne maana(dhanda);-) vaagittukoLLuttare.... bouddika mattavannu bahaLastu saari noduvudilla.. ;-)...

  ReplyDelete
 4. ಬರಿ ತಲೆಹರಟೆಯೆನ್ನೋದಿಲ್ಲವಲ್ಲ.. ಬಹಿಷ್ಕಾರದವರೆಗೂ ಮಾತನಾಡುತ್ತಾರಲ್ಲ.. ಕರ್ಮಕಾಂಡ.. As if, ಅವರು ಮನುಕುಲವನ್ನುದ್ಧರಿಸುವ ಕೆಲಸದಲ್ಲಿ ತೊಡಗಿದ್ದಾರೆಂಬಂತೆ!!

  ReplyDelete
 5. nammanna yaaru beda anthaaro..avru kooda namge beda...

  haaLagihogli... ;-) he he he

  ReplyDelete
 6. ನಮ್ಮನ್ನು ಬೇಡ ಅನ್ನೋದಕ್ಕಿಂತ, ನಮ್ಮ ಆದರ್ಶಗಳಿಗೆ, ನಮ್ಮ ನಂಬಿಕೆಗಳಿಗೆ, ನಮ್ಮ ಸಿದ್ಧಾಂತಗಳಿಗೆ ಕನ್ವಿನ್ಸ್ ಆಗದೆ ಇರುವ ಸಿದ್ಧಾಂತಗಳು, ಆದರ್ಶಗಳು, ನಂಬಿಕೆಗಳು ಬೇಡವೆನ್ನುವುದು ಹೆಚ್ಚು ಸರಿಯೆಂದು ನನ್ನ ಅನಿಸಿಕೆ. ವ್ಯಕ್ತಿಯ ಮೇಲೆ ಯಾವ ದ್ವೇಷವಾಗಲೀ, ಕೆಂಡಕಾರುವುದಾಗಲೀ ಪ್ರಯೋಜನವಿಲ್ಲ. ಒಬ್ಬೊಬ್ಬರ ಚಿಂತನೆಯೊಂದೊಂದು ಥರ. ಅವರ ಚಿಂತನೆಗಳ ಬಗ್ಗೆ ಟೀಕೆಯಿರಲಿ, ಆದರೆ ಆ ವ್ಯಕ್ತಿಯ ಬಗ್ಗೆ ಅಲ್ಲ!!

  ReplyDelete
 7. ನಿಜ.. ಒಬ್ಬ ವ್ಯಕ್ತಿಯ ವಿರುದ್ಧ ಮಾತನಾಡುವುದಕ್ಕಿಂತ ಆತನ ಚಿಂತನೆಗಳ ಬಗ್ಗೆ ಪರಾಮರ್ಶೆ ಸ್ವಾಗತಾರ್ಹ.
  ಅವರವರ ನಂಬಿಕೆ ಅವರವರಿಗಿರಲಿ.

  ಪ್ರತಿಯೊಬ್ಬರೂ ಮತ್ತೊಬ್ಬರ ಆಚರಣೆ-ನಂಬುಗೆಗಳ ಬಗ್ಗೆ ತಾತ್ಸಾರವನ್ನು ತೋರದೆ, ಅವರವರ ವಿಚಾರಗ್ರಹಿಕೆಗೆ ನಿಲುಕುವಂತೆ ಅವರಿಗೆ ಸರಿಯೆನಿಸಿದ್ದನ್ನು ಮಾಡುವುದೊಳಿತು. ಅದರಿಂದ ಇಬ್ಬರಿಗೂ ನಮಾಧಾನವುಂಟು! ಅದರ ಹೊರತು ಕೆಲವು ಆಚಾರಗಳನ್ನು ನಡೆಸಿದರೆ ಮಾತ್ರ ಇತರರು ಒಳ್ಳೆಯವರು, ಇಲ್ಲದಿದ್ದರೆ ಧರ್ಮಬಹಿಷ್ಠರು ಎನ್ನುವ ಧೋರಣೆ ಎಂದಿಗೂ ಸಲ್ಲದು. ಅದು ತಪ್ಪಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲರ ಕಣ್ತೆರೆಸುವಂತಿರುವ ಈ ಲೇಖನ ಬಹಳ ವಿಚಾರಪೂರ್ವಕವಾಗಿದೆ. :) ಚೆಂದದ ಲೇಖನ. ಹೀಗೆಯೇ ವಿಚಾರವಂತ ಲೇಖನಗಳು ಹರಿದುಬರಲಿ..

  ReplyDelete
 8. [ಗಂಡಭೇರುಂಡ] ನಾನೂ ಅದನೇ ಹೇಳುತ್ತಿರೋದು..

  "ನಿಮ್ಮ ಆಚರಣೆಯ ನೊಗಭಾರವನ್ನು ನನ್ನ ಮೇಲೆ ಹೇರದಿರಿ" ಎಂದು..

  ReplyDelete
 9. naan comment gaLanna innu odilla adre .. Arun avru bardiro tarka galli saksstu vicharagaLu nannanu chintane maDoke preriside...
  Achara Vichara gaLa bagge naangeno tumbaa asaktide... adar hinde iro marma tiLiyotanaka naanu bereyavara manasannu novisa baradendu sakstu sarti heLirodanna maDtini.. kelvubari hintirugi beLodu untu... nijamshan matte tatva ariyotanaka nanage yavdannu opkoLodu sari illa annistade..
  Acharane ge KaranagaLu bari tatkalika vagirolla... kelavomme puranika, kelavu bari skhetra da mele innu kelavomme manasika vagiruttave... Yavude ritiimda sari illa andre naanu oppikollolla... Idu nanna anisike...

  ReplyDelete
 10. bravo....ur views r very true..
  yare tamma nambikegalannu heridare usirukattuttade..alle iddu saayuva badalu avugalannu bahishkarisi horabaruvudu uttama

  ReplyDelete
 11. [ಸಚ್ಚಿ] ಹಳೇ ಕಾಲದ ಆಚರಣೆ ಅಂದಾಕ್ಷಣ ಅವೆಲ್ಲಾ ಸರಿ ಎನ್ನುವುದು ಅಷ್ಟೇನು ಸರಿಯಲ್ಲ ಎಂಬುದು ನನ್ನ ಅನಿಸಿಕೆ. ಯಾಕೆಂದರೆ ಅವರು ಆ ಕಾಲದಲ್ಲಿ ಆಚರಿಸುತ್ತಿದ್ದುದು ಆಗಿನ ಸಮಾಜ ಸ್ಥಿತಿಗೆ ಅನುಸಾರವಾಗಿ.. ಆದರೆ ಅದು ಸಾರ್ವಕಾಲಿಕ ಅಲ್ಲ.

  ಅಂದಿನ "ಮನುಸ್ಮೃತಿ"ಯನ್ನೇ ಈಗಲೂ ಒಪ್ಪಿಕೊಳ್ಳಲು ಸಾಧ್ಯವೇ?

  [ಮಲ್ನಾಡ್ ಹುಡುಗಿ] ಧನ್ಯವಾದಗಳು ಇವ್ರೇ.. :-)

  ReplyDelete

ಒಂದಷ್ಟು ಚಿತ್ರಗಳು..