Monday, April 16, 2007

ಮಾರಿ ಹಬ್ಬ!!

ಬೋನ್‍ಜ಼ೂರ್!! (ಶುಭದಿನ!)

ಇದೇನು ದೊಡ್ಡ ಸಾಧನೆಯಲ್ಲ, ಘಟನೆಯಲ್ಲ. ಆದರೆ ಇದರ ಬಗ್ಗೆ ತುಂಬಾ ಯೋಚನೆ ಮಾಡುವಂತಾಗಿತ್ತು. ತುಂಬಾ ನಗಿಸಿತ್ತು ಈ ಘಟನೆ. ಅದಕ್ಕೋಸ್ಕರ ಬರೆದುಕೊಳ್ಳುತ್ತಿದ್ದೇನಷ್ಟೇ.

ಫ್ರೆಂಚ್ ಪರೀಕ್ಷೆ.. Oral examination!! ಪರೀಕ್ಷಾವಿಧಾನ ಬಹಳ ಸೊಗಸಾಗಿತ್ತು.. ನಾನು ನರ್ಸರಿಯಲ್ಲಿ ಈ ಥರದ ಪರೀಕ್ಷೆಗೆ ಹಾಜರಾಗಿದ್ದು ಅನ್ನಿಸುತ್ತೆ. ಆಮೇಲೆ ಹೋದ ತಿಂಗಳೇ.. ಫ್ರೆಂಚ್ ಮಾತನಾಡುವುದರಲ್ಲಿ ನಾವು ನರ್ಸರಿ ಮಕ್ಕಳಂತೆಯೇ ಸರಿ. ಪ್ರತಿಯೊಂದಕ್ಕೂ ಪದಗಳನ್ನು ಸ್ಮೃತಿಪಥದಿಂದ ತಾಂಬೂಲ ಸಹಿತ ಬಿನ್ನವಿಸಿ ಕರೆತರಬೇಕಿತ್ತು!! ಅಷ್ಟು ಕ್ಲಿಷ್ಟಮಯ!!!!

ಇಬ್ಬಿಬ್ಬರು ಹೋಗಬೇಕು, ಇನ್‍ವಿಜಿಲೇಟರ್ ಎದುರು ಕುಳಿತು, ಅವರು ಕೊಟ್ಟ ವಿಷಯದ ಬಗ್ಗೆ ಫ್ರೆಂಚಿನಲ್ಲಿ ಮಾತನಾಡಬೇಕು. ಮೊದಲೇ ನಮ್ಮ ನಮ್ಮ ಪಾರ್ಟ್‌ನರ್‍ಗಳನ್ನು ಆಯ್ಕೆ ಮಾಡಿದ್ದಾಗಿತ್ತು. ನನ್ನ ಜೊತೆ ವಿಕ್ರಮ್ ಜೋಶಿ!

ಇದುವರೆಗೂ ಗಮನಿಸಿದ್ದೀನಿ -ನನ್ನ ಇಡೀ ವಿದ್ಯಾರ್ಥಿ ಜೀವನದಲ್ಲಿ. ಪರೀಕ್ಷೆಗೆ ಕೆಲವನ್ನು ಓದಲು ಸಾಧ್ಯವಾಗಿರೋದಿಲ್ಲ. "ಅಯ್ಯೋ ಇದನ್ನು ಕೊಡೋದಿಲ್ಲ ಅನ್ಸುತ್ತೆ.." ಅಂತ ಅದನ್ನು ಓದದೆ ಬಿಟ್ಟರೆ, ಪರೀಕ್ಷೆಯಲ್ಲಿ ಅದನ್ನೇ ಕೊಟ್ಟಿರುತ್ತಿದ್ದರು!! ನಮ್ಮ ಮೇಷ್ಟ್ರುಗಳು ಬೈಯ್ಯೋರು, "ಅವತ್ತವತ್ತಿನ ಪಾಠಗಳನ್ನು ಅವತ್ತವತ್ತೇ ಓದಿಕೊಳ್ಳೋಕೆ ಏನು ರೋಗ ನಿಮಗೆ" ಅಂತ. ಕಾಲೇಜುದಿನಗಳಲ್ಲಂತೂ ಪರೀಕ್ಷೆಗೆ ಹಿಂದಿನ ದಿನ ಓದಿಕೊಂಡು ಹೋದರೇನೆ ಪರೀಕ್ಷೆ ಬರೆಯೋದಕ್ಕೆ ಆಗುವುದು ಎಂಬಂತಾಗಿ ಹೋಗಿತ್ತು . (ವಿ.ಸೂ.: ಇದು ಶುದ್ಧ ತಪ್ಪು - ಇದನ್ನೋದಿದವರು ಇದರಂತನುಕರಿಸಿದರೆ ಅದಕ್ಕೆ ನಾನು ಹೊಣೆಯಲ್ಲ). ಪರೀಕ್ಷೆಗೆ ಹಿಂದಿನ ದಿನವೆಲ್ಲಾ ಕೂತು, ರಾತ್ರಿಯೆಲ್ಲಾ ಎದ್ದಿದ್ದು ಏನೇನು ಓದಲು ಸಾಧ್ಯವೋ ಅದನ್ನೋದಿಕೊಂಡು ಹೋಗುವುದು ಅಭ್ಯಾಸವಾಗಿತ್ತು, ಆ ದುರಭ್ಯಾಸ ಫ್ರೆಂಚ್ ತರಗತಿಗೂ ಮುಂದುವರೆದಿತ್ತು. ಮೊದಲಾದರೆ ಗೆಳೆಯರ ಮನೆಯಲ್ಲಿ ನೈಟ್ ಔಟ್ ಮಾಡ್ತಿದ್ವಿ.. ಈಗ ಸ್ವಲ್ಪ ಬೆಳೆದಿದ್ದೇವೆ, ತಂತ್ರಜ್ಞಾನ ಬೆಳೆದಿದೆ, ನಾನು ಹಾಗೂ ವಿಕ್ರಮ್ ಇಬ್ಬರೂ ಆನ್‍ಲೈನ್ ರಿಹರ್ಸಲ್ ಮಾಡಿಕೊಂಡೆವು ನಮ್ಮ ಸಂಭಾಷಣೆಗಳನ್ನು. ಒಟ್ಟು ಆರು ಸಂಭಾಷಣೆಗಳಿದ್ದವು. ನಾವು ಐದಕ್ಕೆ ಸಂಪೂರ್ಣ ರೆಡಿಯಾಗಿ ಆರನೇದನ್ನು ಬೆಳಿಗ್ಗೆ ಓದಿದರಾಯ್ತೆಂದು ಬಿಟ್ಟೆವು. ಬೆಳಿಗ್ಗೆ ಏಳಕ್ಕೆ ಪರೀಕ್ಷೆ. ಪರೀಕ್ಷಾ ಕೊಠಡಿಯಲ್ಲಿ ಆರನೆಯದನ್ನು ರಿಹರ್ಸಲ್ ಮಾಡಿದೆವು.

ನಮ್ಮ ಸಂಭಾಷಣಾ ಪರೀಕ್ಷೆಗೆ ಆರನೆಯದರ ಬಗ್ಗೆಯೇ ಕೊಟ್ಟುಬಿಟ್ಟರು!! ಅಯ್ಯೋ ಕರ್ಮವೇ...

ಅದಾಯ್ತು, ಹೇಗೋ.. ನೆನಪು ಮಾಡಿಕೊಂಡು ಮಾಡಿಕೊಂಡು ಮಾತನಾಡಿದೆವು.. ಚೆನ್ನಾಗೇ ಮಾತನಾಡಿದೆವು..

ಪರೀಕ್ಷೆಯ ಎರಡನೆಯ ಹಂತ ಬಹಳ ವಿನೋದಮಯ. ಎರಡು ಕಾರ್ಡನ್ನು ಆರಿಸಿಕೊಳ್ಳಬೇಕು, ಅದರಲ್ಲಿ ಏನು ಬರೆದಿರುತ್ತೋ ಅದರ ಬಗ್ಗೆ ಗುರುಗಳಿಗೆ ಪ್ರೆಶ್ನೆ ಕೇಳಬೇಕು. ಅವರು ಉತ್ತರಿಸಿ ನಮಗೆ ಮರುಪ್ರೆಶ್ನೆಯೊಂದು ಕೇಳುವುದು, ನಾವು ಅದಕ್ಕೆ ಉತ್ತರಿಸುವುದು.. ಇದು ವಿಧಾನ. ಒಬ್ಬೊಬ್ಬರೇ ಮಾಡಬೇಕಿತ್ತು.. ಮೊದಲು ವಿಕ್ರಮ್ ಸರದಿ. ಒಂದು ಕಾರ್ಡ್ ಎತ್ತಿದರು.

"ಈಮೈಲ್!"

ಕ್ಲಾಸಿನಲ್ಲಿ ಅರ್ಧಗಂಟೆ ಮುಂಚೆ ವಿಕ್ರಮ್ ಹೇಳುತ್ತಿದ್ದರು ಕೌಸ್ತುಭ್‍ಗೆ, "ಈಮೈಲ್ ಗೀಮೈಲ್ ಬಗ್ಗೆ ತಲೆ ಕೆಡ್ಸ್ಕೋಬೇಡ್ರೀ.. ಕೊಡಲ್ಲ ಅದನ್ನೆಲ್ಲಾ..." ಅಂತ!!

ಅವರನ್ನವರೇ ಶಪಿಸಿಕೊಂಡರೂ ಹೇಗೋ ಪ್ರೆಶ್ನೆ ಕೇಳಿ, ಅವರಿಂದ ಪ್ರೆಶ್ನೆ ಕೇಳಿಸಿಕೊಂಡು ಉತ್ತರ ಕೊಟ್ಟು ಇನ್ನೊಂದು ಕಾರ್ಡ್ ಎತ್ತಿ, ಅದರ ಬಗ್ಗೆಯೂ ಪ್ರಶ್ನೋತ್ತರಗಳನ್ನು ಅದಲುಬದಲಿಸಿಕೊಂಡು ನಿಟ್ಟುಸಿರು ಬಿಟ್ಟು ಪಾರಾದರು.

ನನ್ನ ಸರದಿ ಬಂತು!

"ಮಾರಿ!!"

ನಾನು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ನನಗೆ "ಮಾರಿ" ಬರುತ್ತೆ ಅಂತ. ನಾನು ಎರಡೂ ಕಾರ್ಡುಗಳನ್ನೂ ಒಟ್ಟಿಗೇ ಎತ್ತಿದೆ. ಒಂದು "ಮಾರಿ" ಆಗಿತ್ತು, ಇನ್ನೊಂದು "ಆಂಫೋ" ಆಗಿತ್ತು..

ಮಾರಿ ಎಂದರೆ ಸಂಗಾತಿ ಎಂದೂ, ಆಂಫೋ ಎಂದರೆ ಮಕ್ಕಳು ಎಂದರ್ಥ.

ನಾನು ಸುಮಾರು ಹೊತ್ತು ಆ ಕಾರ್ಡನ್ನೇ ದಿಟ್ಟಿಸಿದೆ - ಕಾರ್ಡು ಭಸ್ಮವಾಗುವಂತೆ! ಮೇಡಂ ನನ್ನನ್ನು ನೋಡಿ, ಇವನಿಗೆ ಏನೂ ತೋಚುತ್ತಿಲ್ಲವೇನೋ ಬಡಪಾಯಿ ಎಂದುಕೊಂಡು, "At least ಒಂದನ್ನು ಪ್ರಯತ್ನ ಪಡು ಬಡ್ಡೀ ಮಗನೇ..." ಎಂದು ಫ್ರೆಂಚಿನಲ್ಲಿ ಹೇಳಿದರು. ನಾನು, ಮತ್ತೆ ಆ ಕಾರ್ಡನ್ನೇ ಕಣ್ಣ್ರರಳಿಸಿ ನೋಡಿ, "ಕೆಲ್ ಏ ವೋತ್ರ್ ನೋ ದ್ ಮಾರಿ?" (ನಿಮ್ಮ "ಮಾರಿ" ಹೆಸರೇನು?) ಎಂದೆ. ನಾನೆಂದುಕೊಂಡೆ, ಅದಾದ ಮೇಲೆ, "ಆಂಫೋ" ಹೆಸರುಗಳನ್ನು ಕೇಳೋಣ. ಅಲ್ಲಿಗೆ ಸರಿ ಹೋಗುತ್ತೆ ಅಂತ.. ಆದರೆ ನನಗೆ ಅನಿರೀಕ್ಷಿತ ಉತ್ತರ ಸಿಕ್ಕಿಬಿಟ್ಟಿತು. ಅವರು, ರಮೇಶನೋ, ಪ್ರಕಾಶನೋ ಎಂದು ಹೇಳುತ್ತಾರೆಂದುಕೊಂಡಿದ್ದೆ. ಆದರೆ ಅವರು ತಮಗೆ ಮದುವೆಯೇ ಆಗಿಲ್ಲವೆಂದು ಉತ್ತರ ಕೊಟ್ಟುಬಿಟ್ಟು "ಏ ವೂ??" ಎಂದರು. "ಏ ವೂ" ಎಂದರೆ, "ಮತ್ತು ನೀವು?" ಎಂದು. ನಾನು "ಮುಆ ಆಸಿ" ಅಂದುಬಿಟ್ಟು ಪಾರಾದೆ. ನಾನೂ ಅಷ್ಟೇ ಅಂತ!!

ಈಗ ಇರೋದು ಮಾರಿ ಹಬ್ಬ. ಎರಡನೆಯ ಕಾರ್ಡಿನ ಕಥೆ. ಆಂಫೋ.. ಅಂದರೆ ಮಕ್ಕಳು.. ಈಗ ಏನಪ್ಪಾ ಕೇಳೋದು. ನನಗೆ ಗೊತ್ತಿರೋದು ನರ್ಸರಿ ಮಕ್ಕಳಷ್ಟೇ ಪದಗಳು ಅಂತ ಆಗಲೇ ಹೇಳದೆನಲ್ಲಾ... ಮೇಡಮ್ ಗಹಗಹಿಸುತ್ತಿದ್ದುದು ಕಂಡಿತು. ಅವರು ನಾನು ಏನು ಪ್ರೆಶ್ನೆ ಕೇಳಬಹುದೆಂದು ಉತ್ಸುಕರಾಗಿದ್ದರೆನಿಸಿತು. ನಾನು "ಹ ಹ ಹ ಹಾ..." ಎಂದೆ.. ಏನೂ ಕೇಳಲು ತೋಚದಿದ್ದಾಗ ನಗು ತಾನಾಗಿ ತಾನೇ ಬರುವುದಲ್ಲವೇ... ಹಾಗೇ ನಂಗೂ ನಗು ಬಂತು. ಅವರು ಮಾತ್ರ ನಗಲಿಲ್ಲ. ಕಾತುರದಿಂದ ನನ್ನ ಬಾಯನ್ನೇ ನೋಡುತ್ತಿದ್ದರು. ನಾನು ನಿಮ್ಮ ಮಕ್ಕಳ ಹೆಸರುಗಳೇನು ಅಂತ ಕೇಳೋ ಹಾಗಿಲ್ಲ. ಯಾಕೆಂದರೆ ಹಿಂದಿನ ಪ್ರೆಶ್ನೆಯಲ್ಲಿ ಅವರು ತಮಗೆ ಮದುವೆಯೇ ಆಗಿಲ್ಲವೆಂದು ಹೇಳಿದ್ದಾರೆ..

ಸಿಕ್ಕಿತು ಪದಗಳು!!!

"ಜ಼ಡೋರ್ ಲೇಸ್ ಆಂಫೋ.. ಏ ವೂ??" ಎಂದುಬಿಟ್ಟೆ.. (I LOVE children, and you??) ಅವರು ವಿಧಿಯಿಲ್ಲದೆ, "ಮುಆ ಆಸಿ" ಅಂದರು.. ನಾನು ನಿಟ್ಟುಸಿರು ಬಿಟ್ಟೆ. ಅದೆಲ್ಲಿ ಹುದುಗಿತ್ತೋ ಪದಗಳು, ನನ್ನ ಸ್ಮರಣಾ ಶಕ್ತಿಯನ್ನು ನಾನೇ ಒಮ್ಮೆ ಪ್ರಶಂಸಿಸಿಕೊಂಡೆ ಮನಸ್ಸಿನಲ್ಲಿ.. ನನ್ನ ಶತ್ರುವಾದ ಮರೆವು ನನ್ನ ಕೈ ಹಿಡಿದು ಪಾರು ಮಾಡಿದ್ದ!!

ಆಮೇಲೆ ನಮ್ಮ ಟೀಚರ್ರು "ನೀವು ಕ್ಯೂಟ್ ಪ್ರೆಶ್ನೆ ಕೇಳಿದರಂತೆ??" ಎಂದು ನನ್ನ ಕೇಳಿದಾಗ ನನಗೆ ಚೆನ್ನಾಗಿ ಅಂಕಗಳು ಬಂದಿರುತ್ತೆ ಹಾಗಾದರೆ ಎಂದೆನಿಸಿತು.. ಅಂತೂ ಇಂತೂ ಫ್ರೆಂಚ್ ಪರೀಕ್ಷೆಯಲ್ಲಿ ಎಪ್ಪತ್ತೈದು ಪರ್ಸೆಂಟ್ ತೆಗೆದುಕೊಂಡು ಉತ್ತೀರ್ಣನಾಗಿದ್ದೇನೆ. ಇನ್ನು ಮುಂದಿನ ಲೆವೆಲ್ಲಿಗೆ ಹೋಗೋದು ಬಾಕಿ. ಜೂನ್ ಇಂದ.. ಆಮೇಲೆ ನಡೆಯುವ ಮಾರಿ ಹಬ್ಬದ ಬಗ್ಗೆ ಮತ್ತೆ ಬರೆಯುತ್ತೇನೆ.

ಬೋನ್‍ಜ಼ೂರ್ನೇ...

- ಅ

16.04.2007
5PM

2 comments:

  1. ತುಂಬಾ ಚೆನ್ನಾಗಿತ್ತು ನಿಮ್ಮ ಮಾರಿ ಕತೆ :)
    ಪ್ರೆಂಚ್ ಕಷ್ಟ ಇದೇನಾ?

    ReplyDelete

ಒಂದಷ್ಟು ಚಿತ್ರಗಳು..