Thursday, April 05, 2007

ಗಾಡ್ ಫಾದರ್...

ತೇಜಸ್ವಿ ಬಗ್ಗೆ ಮತ್ತೆ ಬರೆಯುತ್ತಿದ್ದೇನೆ. ಟಿವಿ ನ್ಯೂಸುಗಳಲ್ಲಿ, "ತೇಜಸ್ವಿ ಇನ್ನಿಲ್ಲ" ಎಂದು ಪ್ರಸಾರ ಮಾಡುತ್ತಿರುವುದನ್ನು ನೋಡಲು ಆಗುತ್ತಲೇ ಇಲ್ಲ. ಅದನ್ನು ನಂಬಲು ಮನಸ್ಸೂ ಇಲ್ಲ. ಮಾಯಾಲೋಕ - ೨ ಬೇರೆ ಬರೆಯೋದಿದೆ ಅವರು?? ಮನಸ್ಸು ನಂಬದಿದ್ದರೇನು!!


ಅರುಣ ಅಂದ ತಕ್ಷಣ ನನ್ನನ್ನು ಅನೇಕರು ಗುರುತಿಸೋದು, " ಓಹ್, ಅದೇ ಟ್ರೆಕ್ಕಿಂಗ್ ಅರುಣ ಅಲ್ವಾ??" ಅಂತ. ಈ ಟ್ರೆಕ್ಕಿಂಗ್ ಬಗ್ಗೆ, ಕಾಡಿನ ಬಗ್ಗೆ ಆಸಕ್ತಿ, passionನ ನಾನು ಬೆಳೆಸಿಕೊಂಡಿದ್ದು ತೇಜಸ್ವಿಯನ್ನು ಓದಿದರಿಂದಲೇ.. ಅವರನ್ನೋದಿದ ಮೇಲೆಯೇ.. "ಕಾಡಿನ ಕಥೆಗಳು" ಓದಿದ ಹೊಸತರಲ್ಲಿ ಕುಮಾರಪರ್ವತದಲ್ಲಿ ರಾತ್ರಿ ಚಾರಣ ಮಾಡುವಾಗ ನರಭಕ್ಷಕ ಹುಲಿಯು ನನ್ನ ಹಿಂದೆಯೇ ಇದೆಯೆಂಬ ಭಾಸವಾಗಿತ್ತು. ಈಗಲೂ ನೆನಪಿದೆ, ನಾನು ಆ ಅನುಭವವನ್ನು ನಮ್ಮ ಸಹಚಾರಣಿಗರೊಡನೆ ಹಂಚಿಕೊಳ್ಳುತ್ತಿದ್ದುದು..


ತೇಜಸ್ವಿಯ ಬಗ್ಗೆಯೆಲ್ಲಾ ಬರೆಯುವ ತೇಜಸ್ಸು ನನ್ನಂಥವನಿಗಿಲ್ಲ. ಆದರೆ, ನಾನೊಬ್ಬ ಓದುಗನಾಗಿದ್ದು ತೇಜಸ್ವಿಯಿಂದಲೇ. ನನ್ನ ಕೋಣೆಯಲ್ಲಿ ಇಂದು ಮೂರುಸಾವಿರ ಕನ್ನಡ ಪುಸ್ತಕಗಳಿವೆಯೆಂದರೆ, ಅದಕ್ಕೆ ತೇಜಸ್ವಿಯೇ ಕಾರಣ. "ಓದುವುದು ಇಷ್ಟು ಸೊಗಸಾಗಿರುವಂಥದ್ದೇ?" ಎಂದು ನಾನು ಮೊಟ್ಟಮೊದಲು ಓದಿದ ಕನ್ನಡ ಪುಸ್ತಕ ಕರ್ವಾಲೋ ನನ್ನ ಮನಸ್ಸಿನಲ್ಲಿ ಪರಿಣಾಮ ಬೀರಿತು.


ನನ್ನ ಜೊತೆ "ಕಿವಿ"ಯಂಥಾ ಒಂದು ನಾಯಿಯಿರಬೇಕು, ಎಂದು ಯಾವ ನಾಯಿಯನ್ನು ನೋಡಿದಾಗಲೂ ಅನ್ನಿಸುತ್ತದೆ..


ತೇಜಸ್ವಿ ಸೃಷ್ಟಿಸಿದ ಪ್ರತಿಯೊಂದು ಪಾತ್ರಗಳೂ ಇನ್ನೂ ಕಣ್ಣುಮುಂದೆ ಜೀವಂತವಾಗಿವೆ. ಆ ಪಾತ್ರಗಳಲ್ಲಿ ಅವರೂ ಜೀವಂತವಾಗಿದ್ದಾರೆ.. ನನ್ನ, ನನ್ನ ಗೆಳೆಯರ ಅಭಿರುಚಿಗಳಲ್ಲಿ, ಅವರು ಉಸಿರಾಡುತ್ತಲೇ ಇದ್ದಾರೆ. ನನ್ನಂಥ ಹಲವರಿಗೆ ಅವರು ಪರೋಕ್ಷವಾಗಿ ಗಾಡ್ ಫಾದರ್ ಆಗಿದ್ದರು.


ಅನ್ನಪೂರ್ಣ ಫೋನಿನಲ್ಲಿ ತೇಜಸ್ವಿಯ ಸಾವಿನ ಸುದ್ದಿ ಹೇಳಿದಾಗ "ಸುಮ್ಮನೆ ರೂಮರ್ ಇರಲಿಪ್ಪಾ" ಅಂತ ಟಿವಿಯನ್ನು ಆನ್ ಮಾಡಿದೆ. ಶ್ರೀನಿಧಿ "ನನಗೆ ಏನೂ ತೋಚುತ್ತಿಲ್ಲ ಅರುಣ. ನಾನು ಓದುಗನಾಗಲು ತೇಜಸ್ವಿಯೇ ಕಾರಣ" ಎಂದು ಹೇಳಿದ. http://shree-lazyguy.blogspot.com/2007/04/blog-post_05.html


ತೇಜಸ್ವಿಯ ಸುಮಾರು ಅಪರೂಪದ ಕವಿತೆಗಳನ್ನು ಮೊನ್ನೆ ಸಂಗ್ರಹಿಸಿದ್ದರ ಬಗ್ಗೆ ಅಕ್ಕನಿಗೆ ಹೇಳುತ್ತಿದ್ದೆ. ಅವರ ಪ್ರಕಟಿತ ಕವನ ಸಂಕಲನದ ಹೊರೆತಾಗಿ ಲಂಕೇಶ್ ಪತ್ರಿಕೆಯಲ್ಲಿ ಅವರು ಬರೆದಿದ್ದ ಕೆಲವು ಕವನಗಳು. ಅದನ್ನೊಮ್ಮೆ ಓದಿದೆ ಇವತ್ತು. ಯಾರ ಸುದ್ದಿಗೂ ಹೋಗದೆ ಮೌನವಾಗಿ ತಮ್ಮಷ್ಟಕ್ಕೆ ತಾವೇ ಕುಳಿತು ಅದ್ಭುತಗಳನ್ನು ಸೃಷ್ಟಿಸಿದರು ತೇಜಸ್ವಿ. ಚಿತ್ರಕಲೆ, ಫೋಟೋಗ್ರಫಿ, ಸಂಗೀತ, ಕವನ, ನಾಟಕ, ಕಾದಂಬರಿ, ಕಥೆ, ಕಂಪ್ಯೂಟರ್ - ಹೀಗೆ ಅವರು ಕಾಲಿಡದ ಕ್ಷೇತ್ರವೇ ಇಲ್ಲ. Great Man!!


ನನ್ನಂಥ ಲಕ್ಷಾಂತರ Great Fansಗೆ ತುಂಬಾ ನೋವಾಗುತ್ತಿದೆ. ಅವರ ಎಲ್ಲಾ ಪುಸ್ತಕಗಳನ್ನು ಕೊಂಡು ಓದಿದವರು, ನನ್ನಂಥವರು ಬಹಳಷ್ಟು ಜನ ಇದ್ದಾರೆ.


ತೇಜಸ್ವಿಯ ಪುಸ್ತಕಗಳನ್ನು ಅದೆಷ್ಟು ಜನರಿಗೆ ಉಡುಗೊರೆಯಾಗಿ ಕೊಟ್ಟಿದ್ದೇನೋ ಏನೋ.. ಇನ್ನು ಮುಂದೆಯೂ ಕೊಡುತ್ತೇನೆ. ಇನ್ನು ಮುಂದೆಯೂ ಓದಿಸುತ್ತೇನೆ. ತೇಜಸ್ವಿಗೆ ಅದಕ್ಕಿಂತ ದೊಡ್ಡ ಗೌರವ ಇನ್ನು ಹೇಗೆ ತಾನೆ ಸಲ್ಲಿಸಲು ಸಾಧ್ಯ!!

4 comments:

 1. ಹೌದು ತೇಜಸ್ವಿಯವರೂ ಅವರ ಬರಹಗಳೂ ತುಂಬ different.
  ಇನ್ನೊಂದು ಹೆಸರಲ್ಲಿ ತೇಜಸ್ವಿ ಹುಟ್ಟಿ ಬರಲಿ ತಮ್ಮ ಅಭಿಮಾನಿಗಳಿಗೆ ಮತ್ತದೇ ಹಸಿರಿನ ಹಸಿವನ್ನು ಹಚ್ಚಿ ತಮ್ಮ ಬರಹಗಳ ಮೂಲಕ ಹೊಸ ಲೋಕಗಳ ಪರಿಚಯ ಮಾಡಿಸಲಿ ಎಂದು ಪ್ರಾರ್ಥಿಸೋಣ

  ಬಹುಶಹ ಆ ಭಗವಂತನಿಗೆ ಇವರ ಬರವಣಿಗೆಯ ಮೇಲೆ ಅಸೂಯೆಯೋ ಪ್ರೀತಿಯೋ ಹುಟ್ಟಿತಿರಬೇಕು
  "ಸಾಕಯ್ಯ ತೇಜಸ್ವಿ ಇನ್ನು ಇಲ್ಲಿ ಬಾ ನನಗಾಗಿ ಕೆಲವು ಪುಸ್ತಕಗಳನ್ನು" ಬರೆ ಎಂದು ಕರೆಸಿಕೊಂಡನೋ ಹೇಗೆ ?

  ReplyDelete
 2. ಅರುಣ್,

  ನೀವು ಹೇಳಿದ್ದು ಸರಿ..ಅವರ ಪುಸ್ತಕಗಳನ್ನು ಓದಿಸೋಣ..ಅದೇ ಸರಿಯಾದ ಶ್ರದ್ದಾಂಜಲಿ..ಅವರ ಕೃತಿಗಳು ಇನ್ನೂ ಹೆಚ್ಚು ತಲುಪಲಿ..


  ನನ್ನದೊಂದು ನುಡಿ-ನಮನ ನನ್ನ ಬ್ಲಾಗಿನಲ್ಲಿ
  http://chittey.blogspot.com

  ReplyDelete
 3. arun,
  neevu heLiddu nija....tuMba sannavaniddaga kaaDina kathe odedde..avaga manadalli ella hulidayade chinte....
  naMtar karvali odide naMtar tejaswi poorti avarasibittaru...neevu heLida haage avara kRutigaLannu innasTu janakke odisoNa....

  ReplyDelete
 4. ನಾನು ನಿಮ್ಮಂತೆ ಓದಲು ಮೊದಲು ಶುರು ಮಾಡಿದ್ದು "ಪರಿಸರ ಕಥೆ" ಅಲ್ಲಿಯ ಕಿವಿಯೆಂಬ ನಾಯಿ ನನಗೆ ಪಂಚ ಪ್ರಾಣ ಅದು ನನ್ನ ಎಲ್ಲರೂ ಕಿವಿ ಅಂತ ಕರೆಯೋವರೆಗು ಹೋಗಿತ್ತು ಆದರೆ ಅವ್ರು ಸದಾ ನಮ್ಮೊಂದಿಗೆ ಇದ್ದಾರೆಯೆಂಬ ಸಮಾಧಾನ ನನಗೆ.........

  ReplyDelete

ಒಂದಷ್ಟು ಚಿತ್ರಗಳು..