Monday, April 30, 2007

ಬಹಿಷ್ಕಾರ??

"ನಿನಗೆ ಬಹಿಷ್ಕಾರ ಹಾಕ್ತಾರೆ ಅಷ್ಟೆ! ಯಾರೂ ಸೇರಿಸೋದಿಲ್ಲ ತಮ್ಮ ಮನೆಗೆ ನಿನ್ನನ್ನು.. ಎಲ್ಲರನ್ನೂ ದೂರ ಮಾಡ್ಕೋತೀಯ.." ಸತ್ಯಪ್ರಕಾಶ್ ಹೇಳಿದರು ನನಗೆ...

ಅವರು ಹಾಗೆ ಹೇಳಲು ಕಾರಣ ಇದೆ.. ಬಲವಾಗಿದೆ.. ನನ್ನ ನಂಬಿಕೆಗಳು, ನನ್ನ ಆದರ್ಶಗಳು, ನನ್ನ ಆಚರಣೆಗಳು, ನನ್ನ ಅನಿಸಿಕೆಗಳು, ನನ್ನ ವಿಚಾರಗಳು ಅನೇಕರಿಗೆ ಹಿಡಿಸೋದೇ ಇಲ್ಲ. ಇದಕ್ಕೆ ನಾನೇನೂ ಮಾಡಲಾಗುವುದಿಲ್ಲ.. ಅದು ಅವರ ಕರ್ಮ!!

ಮೊನ್ನೆ ದೊಡ್ಡಮ್ಮ ತೀರಿಕೊಂಡ ದಿನ ಶವದ ಬಾಯಿಗೆ ಅಕ್ಕಿ ಕಾಳು ಹಾಕುವಾಗ ಮನಸ್ಸು ತುಂಬಾ ಹಿಂಸೆ ಪಟ್ಟಿತು. ಇದೆಂಥಾ ಹೀನ ಸಂಪ್ರದಾಯ, ಅಸಹ್ಯ ಎಂದೆನಿಸಿತು. ಅಲ್ಲೇ, "ನನಗೆ ಇದು ಸಾಧ್ಯವಿಲ್ಲ, ನೀವು ಏನಾದರೂ ಮಾಡಿಕೊಳ್ಳಿ, ನನ್ನ ಬಲವಂತ ಮಾಡದಿರಿ" ಎಂದು ಹೇಳಿ ಹೊರಟು ಬಂದುಬಿಡೋಣವೆಂದೆನಿಸಿತು.. ಆದರೆ ಅಮ್ಮನ ಮುಖ ನೋಡಿದೆ.. ನಾನು ಹಾಗಂದಿದ್ದರೆ ಎಷ್ಟು ಜನರಲ್ಲಿ ನಿಷ್ಠುರ ಕಟ್ಟಿಕೊಳ್ಳಬೇಕಿತ್ತೋ ಏನೋ.. ಅದಕ್ಕೆ ನಾನು ಸಿದ್ಧ. ಆದರೆ ಅಮ್ಮ ಅದಕ್ಕೆ ಸಿದ್ಧವಿಲ್ಲವೆಂದು ಅವರ ಕಣ್ಣುಗಳು ಹೇಳುತ್ತಿದ್ದವು. ಮನಸ್ಸು ತೀರ ಕೆಟ್ಟಿದ್ದಿದ್ದರೆ ಅದನ್ನೂ ಲೆಕ್ಕಿಸದೆ ಹೇಳಿಬಿಡುತ್ತಿದ್ದೆನೇನೋ!!

ಇನ್ನು ಈ ಭೂಮಿ ಋಣ ತೀರಿತು, ಇವರಿಗೆ ಕೊನೆಯ ಅಕ್ಕಿ.. ಎಂಬ ಕಾರಣಕ್ಕೆ ಅಕ್ಕಿ ಕಾಳನ್ನು ಬಾಯಿಗೆ ಹಾಕುವುದಂತೆ.. ಹಾಗಂತ ಪುರೋಹಿತರು ಹೇಳಿದರು. ಬದುಕಿದಾಗ ಅನ್ನ ಹಾಕಲಾಗದ ಬಾಯಿಗೆ ಸತ್ತ ಮೇಲೆ ಅಕ್ಕಿ ಹಾಕಲು ಎಲ್ಲೆಲ್ಲಿಂದಲೋ ಹುಡುಕಿಕೊಂಡು ಬಂದು ಕಣ್ಣೀರಿನ ಮಳೆಯನ್ನು ಸುರಿಸಿ, "ನಾವಿದ್ದೇವೆ, ಚಿಂತಿಸದಿರಿ" ಎಂದು ಬದುಕುಳಿದವರಿಗೆ ಸಾಂತ್ವನ ಹೇಳುವ ನಾಟಕವನ್ನಾಡುವುದಕ್ಕಿಂತ ಬಹಿಷ್ಕಾರವೇ ಮೇಲೆನಿಸಿತು. ಇನ್ನು ಸ್ಮಶಾನದಲ್ಲಿ ಹೆಣಕ್ಕೆ ಸಿಂಗಾರ ಮಾಡುವ ಪರಿಯಂತೂ ಚಿತ್ರಹಿಂಸೆ ಕೊಡುವಂಥದ್ದು. ಇದನ್ನು ಸಂಪ್ರದಾಯವೆಂದು ಹೇಳಿಕೊಳ್ಳಲು ಮನಸ್ಸಿಗೆ ನೋವಾಗುತ್ತೆ. ಅದನ್ನೆಲ್ಲಾ ವಿರೋಧಿಸಿದವನಿಗೆ ಬಹಿಷ್ಕಾರ ಗ್ಯಾರೆಂಟಿ..

ಇಷ್ಟಕ್ಕೂ ಬಹಿಷ್ಕಾರ ಹಾಕುವವರು ಯಾರು? ನನ್ನನ್ನು "ಅರುಣ" ಎಂದು ಗುರುತಿಸದೆ, ಕೇವಲ ನಾನು ಅವರ ಜಾತಿಯವನು, ನಾನೊಬ್ಬ ಸಂಕೇತಿಯೆಂದೋ, ನಾನೊಬ್ಬ ಬ್ರಾಹ್ಮಣನೆಂದೋ, ನಾನೊಬ್ಬ ಹಿಂದುವೆಂದೋ ನನ್ನನ್ನು ತಮ್ಮವನೆಂದು ಭಾವಿಸಿರುವವರು ತಾನೇ.. ನನಗಿಂತ ನನ್ನ ಜಾತಿ ಮುಖ್ಯವಾಗಿರುವವರು ನನ್ನವರೆಂದೂ ಆಗಿರಲಾರರು. ಅದು ಬರಿ ಅವರ ನಟನೆ. ಅಂಥವರ ಸಂಬಂಧವೂ ನನಗೆ ಬೇಕಾಗಿಲ್ಲ. ಸತ್ಯಪ್ರಕಾಶರು ಬಹಿಷ್ಕಾರದ ವಿಷಯ ಹೇಳಿದ ಮರುಕ್ಷಣವೇ ಮುಂದಿನ ಸಲದಿಂದ ನೇರವಾಗಿ ಹೇಳಿಬಿಡೋಣವೆಂದೆನಿಸಿತು, ಎದುರು ಯಾರಿದ್ದರವರಿಗೆ - "ನಿಮ್ಮ ಆಚರಣೆ (ಡಂಬಾಚರಣೆ) ನಿಮಗಿರಲಿ. ನನ್ನ ಕರೆಯದಿರಿ." ಎಂದು.

ಹಿರಿಯರು ತುಂಬಿದ ಮನೆಯಲ್ಲಿ ಇದನ್ನೆಲ್ಲಾ ಮಾತನಾಡುವ ಧೈರ್ಯವೂ ಇಲ್ಲದೆ, ವಿದ್ಯಾವಂತ ಮಕ್ಕಳು ಸುಮ್ಮನೆ ಇರುತ್ತಾರಲ್ಲದೆ ತಾವೂ ಆಚರಿಸುತ್ತಾರೆ. ಡಂಬಾಚಾರವೇ ಸಂಪ್ರದಾಯವೆಂದು ನಂಬಿ, ಅದನ್ನೆಲ್ಲಾ ಆಚರಿಸದವರನ್ನು ದೂರ ಮಾಡಿಕೊಳ್ಳಬೇಕೆಂಬುದು ಇವರಿಗೆ ಅದೆಲ್ಲಿಂದ ಹೊಳೆಯುವ ಚಿಂತನೆಗಳೋ ಅವರು ನಂಬುವ ದೇವರೇ ಬಲ್ಲ! ಅವುಗಳಿಂದ ಅವರು ಮಾಡುವ ಸಾಧನೆಯಾದರೂ ಎಂಥದ್ದು?


" ಯಾವುದೋ ದೇವಸ್ಥಾನದ ಪುರೋಹಿತನಂತೆ.. ನಾನ್ಯಾಕೆ ಅವನ ಕಾಲಿಗೆ ನಮಸ್ಕರಿಸಬೇಕು? ಅವನು ಯಾರಾಗಿದ್ದರೆ ನನಗೇನಂತೆ? ಅವನಿಗೆ ದೇವರು ಒಲಿದಿದ್ದರೂ ನನಗೇನು! ಅವನು ಈ ಜಗತ್ತನ್ನು ನಡೆಸುವ ಪ್ರಕೃತಿಗಿಂತ ಹಿರಿಯನೇ? ಅವನೇನು ನನಗೆ ವಿದ್ಯೆ ಕೊಟ್ಟ ಗುರುವಲ್ಲ, ನನ್ನನ್ನು ಸಾಕಿ ಸಲಹಿದ ಪೋಷಕನಲ್ಲ. ಅವನು ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡು ಅವನ ಪಾಡಿಗವನಿದ್ದಾನೆ. ಅದು ಅವನ ಕರ್ಮ. ಅವನಿಗೆ ನಾನೇಕೆ ನಮಸ್ಕರಿಸಬೇಕು? ಇದು ನನಗೆಂಥ ಕರ್ಮ? ಒಳ್ಳೆ ಮಾತಾಡಿದರೆ ನಾನು ಒಳ್ಳೇ ಮಾತಾಡುತ್ತೇನೆ. ಅವನಿಗೆ ನಾನೇನೂ ಕೆಟ್ಟದ್ದು ಬಯಸಿಲ್ಲ. ಅವನು ಯಾರೆಂದೇ ಗೊತ್ತಿಲ್ಲ. ಅವನನ್ನು ನೋಡುತ್ತಿರೋದೇ ಇದೇ ಮೊದಲು. ನಮಸ್ಕಾರ ಬೇರೆ ಮಾಡಬೇಕಂತೆ. ಸಾಧ್ಯವೇ ಇಲ್ಲ." ಹೀಗೆಂದು ಮಿತ್ರನೊಬ್ಬ ತನ್ನ ತಂದೆಯ ವಿರುದ್ಧ ಮಾತನಾಡಿದ್ದಕ್ಕೆ ಅವನ ತಂದೆ "ಮನೆಯಿಂದ ತೊಲಗಾಚೆ" ಎಂದು ಹೇಳಿ ಅವನನ್ನು ಸ್ವತಂತ್ರ ಜೀವಿಯನ್ನಾಗಿಸಿದರು.

"ನನ್ನ ಆಪ್ತಮಿತ್ರ ಸಂತೋಷ್ ಹೋಗಿಬಿಟ್ಟ. ನಾನು ಅವನ ಅಂತ್ಯಸಂಸ್ಕಾರಕ್ಕೆ ಹೋಗಿದ್ದೆ. ಹರಿಶ್ಚಂದ್ರ ಘಾಟ್‍ಗೆ. ಅದಕ್ಕೆ ರಾತ್ರಿ ಸ್ವಲ್ಪ ಲೇಟ್ ಆಯ್ತು ಮನೆಗೆ ಬಂದಿದ್ದು." ಎಂದು ರಮೇಶ್ ತಡವಾಗಿ ಬಂದಿದ್ದಕ್ಕೆ ಕಾರಣವೇನೆಂದು ಕೇಳಿದ ತಂದೆಗೆ ಉತ್ತರ ಕೊಟ್ಟ. "ಅಯ್ಯೋ, ನಿನಗೇನೋ ಬಂತು ಬರಬಾರದ್ದು? ನಾನು ಬದುಕಿರುವಾಗಲೇ ಸ್ಮಶಾನಕ್ಕೆ ಹೋಗಿದ್ದೀಯಲ್ಲ.." ಎಂದು ತಂದೆ ಹೇಳಿದ್ದೇ ಕೊನೆ. ಅದಾದ ನಂತರ ಎಂಟು ವರ್ಷಗಳಿಂದ ಇನ್ನೂ ಒಂದು ಮಾತನ್ನೂ ಆಡಿಲ್ಲ ಅವರ ಮಗನೊಡನೆ!!

ಮಗಳು ಬೇರೆ ಜಾತಿಯವನನ್ನು ಪ್ರೀತಿಸಿದಳೆಂಬ ಕಾರಣಕ್ಕೆ ಮಗಳ ಸಂಬಂಧವೇ ಕಡಿದು ಹೋದರೆ, ಮಗಳನ್ನು ಮಗಳಾಗಿ ಪ್ರೀತಿಸಿರಲೇ ಇಲ್ಲವೆಂದರ್ಥ. ಪ್ರೀತಿ ತನಕ ಯಾಕೆ ಹೋಗೋದು. "ಅದ್ಯಾವನೋ ಬೇರೆ ಜಾತಿಯವನನ್ನೆಲ್ಲಾ ಮನೆಗೆ ಸೇರಿಸಿ, ನೀನೂ ಅವರ ಮನೆಗೆ ಹೋಗಿ ಊಟ ಮಾಡಿದ್ದೀಯಲ್ಲಾ, ನಾಚಿಕೆ ಆಗಲ್ವಾ?" ಅನ್ನೋದು ಎಷ್ಟು ಜನರ ಮನೆಯಲ್ಲಿ ಈಗಲೂ, ಈ ಕಾಲದಲ್ಲೂ ನಡೆಯುವ ಮಾತೇ ಅಲ್ಲವೇ. ಅನೇಕರು ಹೋಟೆಲಿನಲ್ಲಿ ತಿನ್ನೋದಿಲ್ಲ. ಅದು ಆರೋಗ್ಯದ ದೃಷ್ಟಿಯಿಂದಲ್ಲ, ಅಲ್ಲಿ ಯಾವ ಜಾತಿಯವನು ಅಡಿಗೆ ಮಾಡಿರುತ್ತಾನೋ ಏನೋ.. ಎಂದು. ಶತಮಾನದ ಸಂಖ್ಯೆ ಮಾತ್ರ ಹೆಚ್ಚುತ್ತಿದ್ದೆ. ಹತ್ತೊಂಭತ್ತರಿಂದ ಇಪ್ಪತ್ತು. ಇಪ್ಪತ್ತರಿಂದ ಇಪ್ಪತ್ತೊಂದು.

ತಮ್ಮ ಆಚರಣೆಗಳಿಗೆ, ತಮ್ಮ ನಂಬಿಕೆಗಳಿಗೆ, ತಮ್ಮ ಆದರ್ಶಗಳಿಗೆ ವಿರುದ್ಧ ಹೋಗುವ ಮಕ್ಕಳನ್ನು ತಂದೆತಾಯಂದಿರು, ಸಮಾಜ ಒಪ್ಪಿಕೊಳ್ಳುವ ಉದಾಹರಣೆಗಳು ಬಹಳ ವಿರಳ. ತಮ್ಮಂತೆಯೇ ಎಲ್ಲರಿಗೂ ತಮ್ಮದೇ ಆದ ನಂಬಿಕೆಗಳು, ಆದರ್ಶಗಳು ಇರುತ್ತವೆಂದು ಅರ್ಥೈಸಿಕೊಳ್ಳೋರು ತುಂಬಾ ಕಡಿಮೆ. ಅವುಗಳಿಗೆ ಗೌರವ ನೀಡುವವರು ಬಹಳ ಕಮ್ಮಿ.. "ನಿಮ್ಮಾಚರಣೆಗಳು ನನಗೆ ಹಿಡಿಸೋದಿಲ್ಲ. ನಿಮ್ಮ ಸಂಪ್ರದಾಯಗಳು ನಿಮಗೇ ಇರಲಿ. ನನ್ನ ಮೇಲೆ ಹೇರದಿರಿ." ಎಂದು ನನ್ನ ವಿನಂತಿ. ಕೇಳುವುದು ಬಿಡುವುದು "ಹಿರಿಯರಿಗೆ" ಬಿಟ್ಟಿದ್ದು.

ನಾನು ಇರುವುದೇ ಹೀಗೆ.. ಬಹಿಷ್ಕಾರ ಹಾಕುವವರಿಗೆ ಎದೆಗಾರಿಕೆಯಿದ್ದರೆ ಮುಂದೆ ಬನ್ನಿ.. ನೀವು ಬಹಿಷ್ಕಾರ ಹಾಕುವ ಮುನ್ನ ನಾನೇ ನಿಮ್ಮನ್ನು ಬಹಿಷ್ಕರಿಸುತ್ತೇನಷ್ಟೆ!!

Thursday, April 26, 2007

'ದೇವರು'ಗಳು.." ನಾಸ್ತಿಕರೆಲ್ಲರೂ ಪಾಪಿಗಳೆಂದು ಹೇಳಲಾಗದು. ಅವರಲ್ಲಿ ನೀತಿಯಿಲ್ಲವೆಂದೂ ಹೇಳಲಾಗದು. ಬುದ್ಧಿಶಕ್ತಿಯಲ್ಲಿಯೂ ವಿಚಾರಗಾಢತೆಯಲ್ಲಿಯೂ ಅವರು ಇತರರಿಗಿಂತ ಕಡಿಮೆಯಿಲ್ಲ. ವಿಜ್ಞಾನದಲ್ಲಂತೂ ಅವರು ಪ್ರಸಿದ್ಧರು. ಆದರೆ ಅವರಲ್ಲಿ ಬುದ್ಧಿಪ್ರಮಾದವುಂಟು. ಯಾವ ಒಬ್ಬ ಮನುಷ್ಯನ ಚಿಂತನೆಗೂ ಅನುಭವಕ್ಕೂ ಅನ್ವೇಷಣೆಗೂ ದೊರಕಲಾಗದ ಸಂಗತಿಗಳು ಲೋಕದಲ್ಲಿ ಎಷ್ಟೋ ಉಂಟೆಂದು ಅವರು ಗಣಿಸುವುದೇ ಇಲ್ಲ. ಇದೇ ಅವರ ಪ್ರಮಾದ.

ತಮಗಲ್ಲದೆ ಇತರರಿಗೆ ಊಹನೆಗೂ ಅನುಭವಕ್ಕೂ ದೊರೆತಿರಬಹುದಾದ ಸಂಗತಿಗಳು ಇರಲಾಗದೇ? ಲೋಕದ ಬಹುಕಾಲದ ಸಿದ್ಧಾಂತವನ್ನು ಅದು ತನ್ನ ಅನುಭವಕ್ಕೆ ಬರಲಿಲ್ಲವೆಂಬ ಕಾರಣದಿಂದ ಯಾರೊಬ್ಬನೂ ತಳ್ಳಿಹಾಕಲಾಗದು. ಇತರರ ನಂಬಿಕೆ ಪ್ರಮಾಣವಲ್ಲವೆಂದರೆ ಸ್ವಬುದ್ಧಿ ಹೆಚ್ಚು ಪ್ರಮಾಣವಾಗಲಾರದು.."

-ಡಿ.ವಿ.ಜಿ." ದೇವರನ್ನು ನಂಬುವುದಿಲ್ಲ ಎಂದು ನಾನೇನೂ ಪಣ ತೊಟ್ಟಿಲ್ಲ. ನಂಬಿಕೆ ಬರಲೊಲ್ಲದು - ಅಷ್ಟೇ! ಇತರರಿಗೆ ದೈವಭಕ್ತಿಯಿಂದ ಶಾಂತಿ ಬರುವುದಾದರೆ ಬರಲಿ, ಅದರಿಂದ ಸಜ್ಜನಿಕೆಗೆ ಉತ್ತೇಜನ ದೊರಕುವುದಾದರೆ ಅವರ ದೈವಭಕ್ತಿ ಸಂತತವಾಗಿ ಇರಲಿ. ನನಗೆ ನಂಬಿಕೆ ಬರಲೊಲ್ಲದು - ಇದು ನನ್ನ ತಪ್ಪಲ್ಲ.

ನನಗೆ ಅದರಲ್ಲಿ ನಂಬಿಕೆಯಿಲ್ಲ, ಇದರಲ್ಲಿ ನಂಬಿಕೆಯಿಲ್ಲ... 'ಇಲ್ಲ'ಗಳ ಪಟ್ಟಿ ದೊಡ್ಡದಾಯಿತು. ನನ್ನ ಬದುಕು 'ನ'ಕಾರದ ಭಜನೆಯೋ ಅಥವಾ ನನ್ನ ನಂಬಿಕೆಗೆ ಪಾತ್ರವಾಗಿರುವುದೂ ಏನಾದರೂ ಉಂಟೋ? ಉಂಟು. ಇಹಜೀವನದಲ್ಲಿ ನಂಬಿಕೆಯುಂಟು.. ಲೋಕದಲ್ಲಿ ಸಂಕಟ ಕಡಿಮೆಯಾಗುವಂತೆ. ಸಹಮಾನವರ ಬದುಕು ಸುಖಸಮೃದ್ದವಾಗುವಂತೆ ಕೈಲಾದದ್ದನ್ನು ಮಾಡುವುದು ಕರ್ತವ್ಯ ಎಂಬ ನಂಬಿಕೆಯುಂಟು..

ಬದುಕಿಗಾಗಿ ನನ್ನ ಕೃತಜ್ಞತೆಯನ್ನು ಸಮರ್ಪಿಸುತ್ತೇನೆ.."

- ಎ.ಎನ್. ಮೂರ್ತಿರಾವ್


ಎರಡು ಪುಸ್ತಕಗಳು. ಎರಡರ ಹೆಸರೂ 'ದೇವರು'. ಆದರೆ ಎರಡರ ವಸ್ತುಗಳು ತದ್ವಿರುದ್ಧ!! ದೇವರು ವರ್ಸಸ್ ದೇವರು!! ಮೂರ್ತಿರಾವ್ ವರ್ಸಸ್ ಡಿವಿಜಿ!!!


ಮೂರ್ತಿರಾಯರ ಬರವಣಿಗೆ ಸುಲಭವಾಗಿ ಓದಿಸಿಕೊಂಡು ಹೋಗುತ್ತೆ. ತಿಳಿಹಾಸ್ಯದೊಂದಿಗೆ ಬೆರೆತ ತರ್ಕ ಅದ್ಭುತವಾಗಿದೆ. ಈ ಅದ್ಭುತಕ್ಕೆ 'ಪಂಪ' ಪ್ರಶಸ್ತಿ ದೊರಕಿದೆಯಾದರೂ ಸಂಪ್ರದಾಯಸ್ತರನೇಕರಿಗೆ ಹಿಡಿಸೋದಿಲ್ಲ. 'ದೇವರು' ಅನ್ನೋದು ಬರೀ ಕಲ್ಪನೆ, ನಂಬಿಕೆ - ಎಂದು ಯಾರಾದರೂ ಹೇಳಿದರೆ ನಮ್ಮ ಜನರಿಗೆ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಅದನ್ನೊಪ್ಪಿಕೊಳ್ಳಿ ಎಂದೂ ಎಲ್ಲೂ ಹೇಳಿಲ್ಲ ಮೂರ್ತಿರಾಯರು. ಡಿವಿಜಿಯಷ್ಟೇ ಹಿರಿಯ ಸಾಹಿತಿ ಮೂರ್ತಿರಾಯರು ಡಿವಿಜಿಯವರ ತದ್ವಿರುದ್ಧದ ಚಿಂತನೆಗಳನ್ನು ಮಂಡಿಸಿದರೂ ಅನೇಕ ಮನಸ್ಸುಗಳನ್ನು ಗೆದ್ದರು. ಮತ್ತೆ ಮತ್ತೆ ಓದಿದರೂ ಬೇಸರವಾಗದೇ, ವಿಚಾರಶಕ್ತಿಯನ್ನು ಪ್ರಚೋದಿಸುವ ಸೊಗಸಾದ ಕೃತಿ - 'ದೇವರು'.


ಡಿವಿಜಿಯವರ 'ದೇವರು' ಪುಸ್ತಕ - ಚೆನ್ನಾಗಿದೆ. ಓದಬೇಕಾದ್ದು!!

- ಅ

26.04.2007
6PM

Friday, April 20, 2007

ಹೂವು - ದೇವರು..


ಕೆಮ್ಮಣ್ಣುಗುಂಡಿಯಲ್ಲಿ ಕುವೆಂಪು ಬರೆದಿರೋದು..
ಹೂವನ್ನು ಗಿಡದಿಂದ ಕೀಳದಿರಿ!!

ಕವಿಶೈಲ - ಕುವೆಂಪು ಕೊಟ್ಟ ನೋಟೀಸು...


ಶ್ ಶ್....

T B Dam Notice...


ಇನ್ಯಾರು ಜವಾಬ್ದಾರಿಯಾಗೋಕೆ ಸಾಧ್ಯ, "ಸಾಮಾನು"ಗಳಿಗೆ??

ಹೋಟೆಲ್ ವುಡ್‍ಲ್ಯಾಂಡ್..


"ಊಟ ಬೇಕೆಂದರೆ ಮೊದಲೇ ತಿಳಿಸಬೇಕು.." ಊಟವಾದ ಮೇಲೆ ತಿಳಿಸಬೇಡಿ ಅಂತಲೇ??

ದ್ವಾರ..


ವಾಕ್ಯ ದ್ವಂದ್ವಾರ್ಥ ಬರುವ ಹಾಗೆ ಬೋರ್ಡುಗಳನ್ನು ಯಾಕೆ ಬರೆಯುತ್ತಾರೋ....

ಹುಬ್ಬಳ್ಳಿಯ ಹೋಟೆಲೊಂದರಲ್ಲಿ..


ಹೆಸರುಗಳನ್ನು ಸೊಗಸಾಗಿ ಬರೆದಿದ್ದಾರೆ..

ಇದು ನಾಗವನ..


ಹೀಗಾದರು ನಮ್ಮ ಅರಣ್ಯ ಸಂಪತ್ತು ಉಳಿದೀತು... ಸೂಪರ್ ಐಡಿಯಾ ಅಲ್ವಾ ಇದು?

ಸುಬ್ರಹ್ಮಣ್ಯ ರೋಡ್..


ಈ "ರೋಡ್" ಅಲ್ಲಿ ರೈಲು ಹೋಗುತ್ತೆ ಅಷ್ಟೇ.. ಯಾವಾಗಿಂದ ಶುರು ಅಂತ ಕೇಳ್ಬೇಡಿ..

ಲೇಡೀಸ್ ಎಂಡ್ ಜೆಂಟ್ಸ್..


ಇಬ್ಬರೂ ಒಂದೇ ಕಡೆ???
"ಕೀಪ್ ಕ್ಲೋಸ್ಡ್" ಅಂತ ಬೇರೆ ಇನ್ನೊಂದು ನೋಟೀಸು ಇದೆ ನೋಡಿ... ಇದು ಬೆಂಗಳೂರಿನ ಪಾಪ್ಡಿವಾಲ ಅನ್ನೋ ಹೊಟೆಲಿನಲ್ಲಿ ತೆಗೆದಿದ್ದು...

ಅರಣ್ಯ ಇಲಾಖೆಯ ಫಲಕ..


ಅರಣ್ಯ ಇಲಾಖೆಯವರಿಂದ "T" ಸಪ್ಲೈ ನಡೆಯುವುದೇ?

ಕಾರವಾರದಲ್ಲೊಂದು ನಾಟಕ..


ಈ ನಾಟಕಕ್ಕೆ ಎರಡು ಹೆಸರು.. ಆದರೆ ಎರಡು ಹೆಸರಿನ ಅರ್ಥವೂ ಒಂದೆಯೇ?

ವಿನಂತಿ..


ಎಷ್ಟು ವಿನಂತಿಸಿದರೇನು.... ನಮ್ಮ ಕೆಲವು ಜನ ಆ ವಿನಂತಿ ಫಲಕವನ್ನೂ ಬಿಡಲ್ಲ.. ಇದು ಕವಿಶೈಲದಲ್ಲೊಂದು ಸೂಚನಾಫಲಕ.. ವಿಪರ್ಯಾಸ... ಕೆಲವು ಜಾಗಗಳಿಗೆ ಎಲ್ಲರನ್ನೂ ಬಿಡಲೇ ಬಾರದೆನಿಸುತ್ತೆ.. ಅಲ್ಲವೇ?

ಮೃಗಾಲಯವೊಂದರ ಮುಂದೆ..


ಪ್ಲಾಸ್ಟಿಕ್ "ban" ಆಗಿದೆ.. ಅದಕ್ಕೋಸ್ಕರ ಒಳಗೆ ತೊಗೊಂಡು ಹೋಗ್ಬೇಡಿ... ಪ್ರಾಣಿಗಳಿಗೆ ಪ್ಲಾಸ್ಟಿಕ್ ಇಂದ ತೊಂದರೆಯಂತಲ್ಲ..

ಮಲೆಯಾಳಂ ಸೂಚನೆ..


ಬೇರೆ ಭಾಷೆಯವರಿಗೆ ಏನೂ ಸೂಚನೆಗಳಿಲ್ಲ.. ಸಾರಿ..

ಮೈಸೂರು ಬಸ್ ನಿಲ್ದಾಣ


ಇನ್ನೆಲ್ಲಿ ನಿಲ್ಲಿಸಬೇಕು??

ಕೆಮ್ಮಣ್ಣುಗುಂಡಿಯಲ್ಲೊಂದು ಅದ್ಭುತ ಸಂದೇಶ..


ಪ್ರಕೃತಿ ಪೂಜೆಗೆ ಇದ್ದಕ್ಕಿಂತ ಸೊಗಸಾದ ಕರೆ ಕೊಡಲು ಸಾಧ್ಯವೇ??

Thursday, April 19, 2007

ಕರೆ ಮಾಡಿ ತಲೆ ತಿನ್ನೋದು...

ಮೊಬೈಲ್ ಫೋನ್‍ಗೆ ಬೈತಾ ಇಲ್ಲ. ತಲೆತಿನ್ನುವವರನ್ನು ಬೈತಾ ಇದ್ದೀನಿ. ಮೊಬೈಲಿಗೆ ಯಾರುಯಾರೋ ಏನೇನೋ ಉದ್ದಿಶ್ಯದಿಂದ ಕರೆ ಮಾಡುತ್ತಾರಲ್ಲಾ ಅವರಿಗೆ. ಇದೊಂದು ಪದ್ಧತಿ ಅದು ಹೇಗೆ ಬಂತೋ ಏನೋ. ಕರೆ ಮಾಡಿ ಸಾಲ ಬೇಕಾ? ಕ್ರೆಡಿಟ್ ಕಾರ್ಡ್ ಬೇಕಾ? ಅಂತ ತಲೆ ತಿನ್ನೋ ಕೆಲಸ ಬಹುಶಃ ಕರೆ ಮಾಡುವವರಿಗೂ ಇಷ್ಟವಾಗಿರಲಾರದು..

ಟ್ರೆಕ್ಕಿಂಗ್ ಮಾಡ್ತಾ ಇದ್ದೆವು. ನಮ್ಮ ಲೀಡರ್ ಸ್ವಾಮಿ ಅವರ ಫೋನು ಅದ್ಯಾವುದೋ ಬೆಟ್ಟದ ಮೇಲೆ ರಿಂಗ್ ಆಗತೊಡಗಿತು. ವೈನಾಡಿನ ದಟ್ಟಡವಿಯಲ್ಲಿ ಸೊಗಸಾದ ಬೆಟ್ಟಗಳ ನಡುವೆ ಹಸಿರಿನ ಸ್ವಚ್ಛಂದ ವಾತಾವರಣದಲ್ಲಿ ಅವರು ತಮ್ಮ ಮೊಬೈಲನ್ನು ಚಾಲ್ತಿಯಲ್ಲಿಟ್ಟಿದ್ದು ಅವರ ತಪ್ಪೇ? ಅವರು ಚಾಲ್ತಿಯಲ್ಲಿಟ್ಟ ಕಾರಣಕ್ಕೆ ಸಿಗ್ನಲ್ ದೊರಕಿ ಆ ಫೋನು ಬಡಕೊಂಡಿದ್ದು ರಿಲಯನ್ಸ್ ತಪ್ಪೇ? ಅದು ಬಡುಕೊಂಡಿದ್ದು ಓಕೆ, ಆದರೆ ಅದು ಇಂಥ ಕರೆಯಾಗಿದ್ದುದು ಸ್ವಾಮಿಯವರ ಕರ್ಮದ ತಪ್ಪೇ??

"ಹಲೋ.. ದಿಸ್ ಈಸ್ ಫ್ರಮ್ ಕಂಟ್ರಿ ಕ್ಲಬ್.. " ಅಂದು, ಏನೇನೋ ಕೇಳಿ, ಕಡೆಗೆ "ಪ್ಲೀಸ್ ಗಿವ್ ಅಸ್ ಯುವರ್ ಕರೆಂಟ್ ಅಡ್ರೆಸ್" ಅಂದರು ಆ ಕಡೆಯ ಪಾರ್ಟಿ.

ಸ್ವಾಮಿ: "ಕರೆಂಟ್ ಅಡ್ರೆಸ್ಸಾ? ಓಕೆ, ಬರ್ಕೊಳಿ.. ಸೆಕೆಂಡ್ ಪೀಕ್.."

ಅವನು: "ಹ್ಂಂಂ"

ಸ್ವಾಮಿ: "ಚೆಂಬರ ಎಸ್ಟೇಟ್, ವೈನಾಡ್"

ಅವನು: "ಪಿನ್ ಕೋಡ್?"

ಸ್ವಾಮಿ: "ಪಿನ್ ಕೋಡ್ ಏನು ಬಂತು ಈ ಕಾಡಲ್ಲಿ. ನಂಗೆ ತಲೆ ತಿಂದ ಹಾಗೆ ಕೇರಳದ ಪೋಸ್ಟ್ ಆಫೀಸ್‍ಗೆ ಫೋನ್ ಮಾಡಿ ತಲೆ ತಿನ್ನಿ, ಕೊಡ್ತಾರೆ".

ಅವನು: "ಸಾರಿ ಸರ್"

ಫೋನ್ ಇಟ್ಟುಬಿಟ್ಟ.

ಕ್ಯಾಂಪಿನಲ್ಲಿ ಜೋರು ನಗು. "ಮೊದಲು ಫೋನ್ ಆಫ್ ಮಾಡ್ಬಿಡಿ ಸರ್" ಡೀನ್ ಹೇಳಿದರು ಸ್ವಾಮಿಗೆ. ಆಮೇಲೆ ಇನ್ಯಾರು ಇನ್ಯಾವ ವಿವರ ಕೇಳ್ತಾರೋ ಅಂತ.

--------------------------------------------------------------------------------------------

ನನಗೆ ಆ ರೀತಿ ಯಾರಾದರೂ ಕರೆ ಮಾಡಿದರೆ ಅವರ ತಲೆ ತಿನ್ನುತ್ತೇನೆ. ಸ್ವಚ್ಛ ಕನ್ನಡದಲ್ಲೇ ಮಾತನಾಡೋದು ಅವರುಗಳ ಜೊತೆ. ಸಾಮಾನ್ಯವಾಗಿ ಆ ರೀತಿ ಕರೆ ಮಾಡುವವರು ಮಲಯಾಳಿಗಳೋ ತಮಿಳರೋ ಆಗಿರುತ್ತಾರೆ. ಕರ್ನಾಟಕದಲ್ಲಿ ಕನ್ನಡವನ್ನೇ ಮಾತನಾಡಿ ಅಂತ ಅವರಿಗೂ ಒಂದು ಬೋಧನೆಯ ತರಗತಿಯನ್ನು ತೆಗೆದುಕೊಂಡ ನಂತರವೇ ಮಾತು ಮುಂದುವರೆಸುವುದು.

ಕೇರಂ ಆಡ್ತಾ ಇದ್ದೆ, ಮನಸ್ಸು ಬೇರೆ ಸರಿ ಇರಲಿಲ್ಲ. ಏನೋ ಜಗಳ ಮಾಡಿಕೊಂಡಿದ್ದೆ. ಒಂದು ಹುಡುಗಿ ಫೋನ್ ಮಾಡಿಬಿಟ್ಟಳು, "ಸರ್, ಹೆಚ್ ಡಿ ಎಫ್ ಸಿ ಬ್ಯಾಂಕಿನಿಂದ, ಕ್ರೆಡಿಟ್ ಕಾರ್ಡ್ ಬೇಕಾ??"

"ಬೇಡಾಮ್ಮ.. ನಿಂಗೆ ನನ್ನ ನಂಬರ್ ಯಾರು ಕೊಟ್ಟರು?"

"ಸರ್, ಡೈರೆಕ್ಟರಿಯಲ್ಲಿ ಸಿಕ್ತು ಸರ್"

"ಹಾಗೆಲ್ಲ ಕರೆ ಮಾಡಿದರೆ ತೊಂದರೆ ಆಗುತ್ತೆ ಅಲ್ವಾ? ನಾವು ಬಿಡುವಾಗಿರೋದಿಲ್ಲ ಅಲ್ವಾ?"

"ಸಾರಿ ಸರ್.. ನಿಮ್ಮ ಸ್ನೇಹಿತರ ನಂಬರ್ ಯಾರದ್ದಾದರೂ ಕೊಡ್ತೀರಾ?"

"ನಾನು ಅವರ ನಂಬರ್ ಕೊಡೋದು, ಅವರು ನನ್ನ ಅಮ್ಮ, ಅಕ್ಕ ಅಂತೆಲ್ಲಾ ಬೈಕೊಳ್ಳೋದು. ಇವೆಲ್ಲಾ ನಂಗೆ ಬೇಕಾಮ್ಮಾ??"

ಅವಳು ಫೋನ್ ಇಟ್ಟುಬಿಟ್ಟಳು.

-------------------------------------------------------------------------------------------

ಅವರ ಕೆಲಸವೇ ಹೀಗೆ. ಅನೇಕರು ಕೆಟ್ಟಕೆಟ್ಟದಾಗಿ ಬೈತಾರೆ. ಹಣಕ್ಕೋಸ್ಕರ ಇನ್ನೊಬ್ಬರಿಗೆ ತೊಂದರೆ ಕೊಟ್ಟು ಅವರಿಂದ ಉಗಿಸಿಕೊಳ್ಳುವ ಕಾರ್ಯ ಈ ಜನಗಳದ್ದು.

"ಸರ್. ದಿಸ್ ಈಸ್ ಫ್ರಂ ಐಸಿಐಸಿಐ.."

ಓಹ್.. ತಲೆ ತಿನ್ನೋಕೆ ಯಾವನೋ ಬೋಳಿಮಗ ಕರೆ ಮಾಡಿದ.. ಎಂದುಕೊಂಡೇ ಫೋನ್ ಅಲ್ಲಿ ಮಾತನಾಡುತ್ತಾರೆ..

ನಾನೆಂದೆ, "ಕನ್ನಡದಲ್ಲಿ ಮಾತಾಡಿಪ್ಪಾ"

ಅವನು: "ಓಗೆ. ನಿಮಗೆ ಬರ್ಸನಲ್ ಲೋನ್ ಬೇಗಾ??"

ನಾನು ತಲೆ ಕೆಡವಿಕೊಂಡು, ಅವನು ಹೇಳಿದ್ದನ್ನು ಇನ್ನೊಂದು ಸಲ ಹೇಳಿಕೊಂಡೆ. ಅರ್ಥವಾಯಿತು ಅವನು ಏನು ಕೇಳಿದ ಅಂತ.

" ಹೂಂ, ಬೇಕು.. ಐದು ಲಕ್ಷ.. ಆದರೆ ನಾನು ಈಗಾಗಲೇ ನಾಲ್ಕು ಕಡೆ ಸಾಲ ಮಾಡಿದ್ದೀನಿ. ತಪ್ಪಿಸಿಕೊಂಡಿದ್ದೀನಿ. ನೀವು ಸಾಲ ಕೊಟ್ಟರೆ ನಂಗೆ ತುಂಬಾ ಸಹಾಯ ಆಗುತ್ತೆ." ಎಂದೆ.

ಅವನು: "ಸರ್?????"

ನಾನು: "ಇನ್ನೇನಪ್ಪಾ, ಸಾಲ ಬೇಕು ಅಂದ್ರೆ ನಾನೇ ನಿಮ್ಮ ಹತ್ರ ಬರ್ತೀನಿ ಸುಮ್ಮನೆ ಹುಡುಕ್ಕೊಂಡ್ ಹುಡುಕ್ಕೊಂಡ್ ಸಾಲ ಕೊಡೋಕೆ ಯಾಕೆ ಬರ್ತೀರ?"

ಅವನು: "ಸಾರಿ ಸರ್. ನಿಮ್‍ಗೆ ಬೇಡವಾ ಹಾಗಾದ್ರೆ?"

ನಾನು: "ಬೇಡಪ್ಪಾ, ಥ್ಯಾಂಕ್ಸ್"ಅವನು: "ಓಗೆ ಸರ್, ದ್ಯಾಂಗ್ಯೂ.." ಎಂದು ಫೋನು ಕುಕ್ಕಿದ.

--------------------------------------------------------------------------------------------

ಮೊನ್ನೆ ನನ್ನ ಲ್ಯಾಂಡ್ ಲೈನ್ ಫೋನು ರಿಂಗಾಯಿತು. ಬರೀ ಇಂಟರ್‍ನೆಟ್ಟಿಗೆಂದು ಇದನ್ನು ಮೀಸಲಿಟ್ಟಿರುವ ನಾನು ಈ ಸಂಖ್ಯೆಯನ್ನು ಯಾರಿಗೂ ಕೊಟ್ಟೇ ಇಲ್ಲ. ಇದಕ್ಕೆ ಕರೆ ಬರುವುದಾಗಲೀ, ಇದರಿಂದ ಕರೆ ಮಾಡುವುದಾಗಲೀ ಅಭ್ಯಾಸವೇ ಇಲ್ಲ ಈ ಫೋನಿಗೆ, ಪಾಪ. ಇದ್ಯಾರಪ್ಪ ಈ ನಂಬರಿಗೆ ಕರೆ ಮಾಡ್ತಿರೋದು, ಟೆಲಿಫೋನ್ ಎಕ್ಸ್‍ಚೇಂಜಿನವರು ಇರಬೇಕು.. ಎಂದು ಫೋನ್ ಎತ್ತಿದೆ..

"ನಮಸ್ಕಾರ ಸರ್.."

"ನಮಸ್ಕಾರ... ಯಾರು???"

"ಸರ್, ನಾವು, ............................................ ಇಂದ.. .................................. ಸರ್ವೇ ಮಾಡ್ತಿದೀವಿ.."

ಅದೆಂಥದೋ ಕಂಪೆನಿ ಹೆಸರು ಹೇಳಿದಳು. ಅದೆಂಥದೋ ಸರ್ವೇ ಅಂತೆ, ನೆನಪಿಲ್ಲ. ಈ ರೀತಿಯ ಕರೆಗಳು ಬಂದು ಬಹಳ ದಿನಗಳಾಗಿದ್ದವು. ನಾನು ತಲೆ ತಿನ್ನೋಕೆ ಒಳ್ಳೇ ಅವಕಾಶವೆಂದುಕೊಂಡೆ. ನನ್ನ ಮನಸ್ಸೂ ಅಷ್ಟು ಚೆನ್ನಾಗಿರಲಿಲ್ಲ. ನಂಗೂ ಒಂದು ಬ್ರೇಕ್ ಬೇಕಿತ್ತು. ಇವರುಗಳು ನೂರೆಂಟು ಕೇಳ್ತಾರೆ, ಏನಾದರೂ ಹೇಳ್ತಾನೇ ಇರೋಣ ಎಂದುಕೊಂಡೆ.

"ಹೇಳಿಮ್ಮಾ, ಏನು ಬೇಕು?"

"ಸರ್, ಇದು ಆಫೀಸ್ ನಂಬರ್ರೋ ರೆಸಿಡೆನ್ಸ್ ನಂಬರ್ರೋ?"

"ರೆಸಿಡೆನ್ಸು.. ಯಾಕೆ?"

"ಥ್ಯಾಂಕ್ಯೂ ಸರ್"

"ಅಷ್ಟೇನಾ?"

"ನಮಗೆ ಅಷ್ಟೇ ಬೇಕಾಗಿರೋದು ಸರ್.. " ಎಂದು ಫೋನ್ ಇಟ್ಟುಬಿಟ್ಟಳು!!!

ರಿಸೀವರ್ ಇಂದ ತಲೆ ಚಚ್ಚಿಕೊಂಡೆ ಅಷ್ಟೇ.

- ಅ

19.04.2007
7PM

Monday, April 16, 2007

ಮಾರಿ ಹಬ್ಬ!!

ಬೋನ್‍ಜ಼ೂರ್!! (ಶುಭದಿನ!)

ಇದೇನು ದೊಡ್ಡ ಸಾಧನೆಯಲ್ಲ, ಘಟನೆಯಲ್ಲ. ಆದರೆ ಇದರ ಬಗ್ಗೆ ತುಂಬಾ ಯೋಚನೆ ಮಾಡುವಂತಾಗಿತ್ತು. ತುಂಬಾ ನಗಿಸಿತ್ತು ಈ ಘಟನೆ. ಅದಕ್ಕೋಸ್ಕರ ಬರೆದುಕೊಳ್ಳುತ್ತಿದ್ದೇನಷ್ಟೇ.

ಫ್ರೆಂಚ್ ಪರೀಕ್ಷೆ.. Oral examination!! ಪರೀಕ್ಷಾವಿಧಾನ ಬಹಳ ಸೊಗಸಾಗಿತ್ತು.. ನಾನು ನರ್ಸರಿಯಲ್ಲಿ ಈ ಥರದ ಪರೀಕ್ಷೆಗೆ ಹಾಜರಾಗಿದ್ದು ಅನ್ನಿಸುತ್ತೆ. ಆಮೇಲೆ ಹೋದ ತಿಂಗಳೇ.. ಫ್ರೆಂಚ್ ಮಾತನಾಡುವುದರಲ್ಲಿ ನಾವು ನರ್ಸರಿ ಮಕ್ಕಳಂತೆಯೇ ಸರಿ. ಪ್ರತಿಯೊಂದಕ್ಕೂ ಪದಗಳನ್ನು ಸ್ಮೃತಿಪಥದಿಂದ ತಾಂಬೂಲ ಸಹಿತ ಬಿನ್ನವಿಸಿ ಕರೆತರಬೇಕಿತ್ತು!! ಅಷ್ಟು ಕ್ಲಿಷ್ಟಮಯ!!!!

ಇಬ್ಬಿಬ್ಬರು ಹೋಗಬೇಕು, ಇನ್‍ವಿಜಿಲೇಟರ್ ಎದುರು ಕುಳಿತು, ಅವರು ಕೊಟ್ಟ ವಿಷಯದ ಬಗ್ಗೆ ಫ್ರೆಂಚಿನಲ್ಲಿ ಮಾತನಾಡಬೇಕು. ಮೊದಲೇ ನಮ್ಮ ನಮ್ಮ ಪಾರ್ಟ್‌ನರ್‍ಗಳನ್ನು ಆಯ್ಕೆ ಮಾಡಿದ್ದಾಗಿತ್ತು. ನನ್ನ ಜೊತೆ ವಿಕ್ರಮ್ ಜೋಶಿ!

ಇದುವರೆಗೂ ಗಮನಿಸಿದ್ದೀನಿ -ನನ್ನ ಇಡೀ ವಿದ್ಯಾರ್ಥಿ ಜೀವನದಲ್ಲಿ. ಪರೀಕ್ಷೆಗೆ ಕೆಲವನ್ನು ಓದಲು ಸಾಧ್ಯವಾಗಿರೋದಿಲ್ಲ. "ಅಯ್ಯೋ ಇದನ್ನು ಕೊಡೋದಿಲ್ಲ ಅನ್ಸುತ್ತೆ.." ಅಂತ ಅದನ್ನು ಓದದೆ ಬಿಟ್ಟರೆ, ಪರೀಕ್ಷೆಯಲ್ಲಿ ಅದನ್ನೇ ಕೊಟ್ಟಿರುತ್ತಿದ್ದರು!! ನಮ್ಮ ಮೇಷ್ಟ್ರುಗಳು ಬೈಯ್ಯೋರು, "ಅವತ್ತವತ್ತಿನ ಪಾಠಗಳನ್ನು ಅವತ್ತವತ್ತೇ ಓದಿಕೊಳ್ಳೋಕೆ ಏನು ರೋಗ ನಿಮಗೆ" ಅಂತ. ಕಾಲೇಜುದಿನಗಳಲ್ಲಂತೂ ಪರೀಕ್ಷೆಗೆ ಹಿಂದಿನ ದಿನ ಓದಿಕೊಂಡು ಹೋದರೇನೆ ಪರೀಕ್ಷೆ ಬರೆಯೋದಕ್ಕೆ ಆಗುವುದು ಎಂಬಂತಾಗಿ ಹೋಗಿತ್ತು . (ವಿ.ಸೂ.: ಇದು ಶುದ್ಧ ತಪ್ಪು - ಇದನ್ನೋದಿದವರು ಇದರಂತನುಕರಿಸಿದರೆ ಅದಕ್ಕೆ ನಾನು ಹೊಣೆಯಲ್ಲ). ಪರೀಕ್ಷೆಗೆ ಹಿಂದಿನ ದಿನವೆಲ್ಲಾ ಕೂತು, ರಾತ್ರಿಯೆಲ್ಲಾ ಎದ್ದಿದ್ದು ಏನೇನು ಓದಲು ಸಾಧ್ಯವೋ ಅದನ್ನೋದಿಕೊಂಡು ಹೋಗುವುದು ಅಭ್ಯಾಸವಾಗಿತ್ತು, ಆ ದುರಭ್ಯಾಸ ಫ್ರೆಂಚ್ ತರಗತಿಗೂ ಮುಂದುವರೆದಿತ್ತು. ಮೊದಲಾದರೆ ಗೆಳೆಯರ ಮನೆಯಲ್ಲಿ ನೈಟ್ ಔಟ್ ಮಾಡ್ತಿದ್ವಿ.. ಈಗ ಸ್ವಲ್ಪ ಬೆಳೆದಿದ್ದೇವೆ, ತಂತ್ರಜ್ಞಾನ ಬೆಳೆದಿದೆ, ನಾನು ಹಾಗೂ ವಿಕ್ರಮ್ ಇಬ್ಬರೂ ಆನ್‍ಲೈನ್ ರಿಹರ್ಸಲ್ ಮಾಡಿಕೊಂಡೆವು ನಮ್ಮ ಸಂಭಾಷಣೆಗಳನ್ನು. ಒಟ್ಟು ಆರು ಸಂಭಾಷಣೆಗಳಿದ್ದವು. ನಾವು ಐದಕ್ಕೆ ಸಂಪೂರ್ಣ ರೆಡಿಯಾಗಿ ಆರನೇದನ್ನು ಬೆಳಿಗ್ಗೆ ಓದಿದರಾಯ್ತೆಂದು ಬಿಟ್ಟೆವು. ಬೆಳಿಗ್ಗೆ ಏಳಕ್ಕೆ ಪರೀಕ್ಷೆ. ಪರೀಕ್ಷಾ ಕೊಠಡಿಯಲ್ಲಿ ಆರನೆಯದನ್ನು ರಿಹರ್ಸಲ್ ಮಾಡಿದೆವು.

ನಮ್ಮ ಸಂಭಾಷಣಾ ಪರೀಕ್ಷೆಗೆ ಆರನೆಯದರ ಬಗ್ಗೆಯೇ ಕೊಟ್ಟುಬಿಟ್ಟರು!! ಅಯ್ಯೋ ಕರ್ಮವೇ...

ಅದಾಯ್ತು, ಹೇಗೋ.. ನೆನಪು ಮಾಡಿಕೊಂಡು ಮಾಡಿಕೊಂಡು ಮಾತನಾಡಿದೆವು.. ಚೆನ್ನಾಗೇ ಮಾತನಾಡಿದೆವು..

ಪರೀಕ್ಷೆಯ ಎರಡನೆಯ ಹಂತ ಬಹಳ ವಿನೋದಮಯ. ಎರಡು ಕಾರ್ಡನ್ನು ಆರಿಸಿಕೊಳ್ಳಬೇಕು, ಅದರಲ್ಲಿ ಏನು ಬರೆದಿರುತ್ತೋ ಅದರ ಬಗ್ಗೆ ಗುರುಗಳಿಗೆ ಪ್ರೆಶ್ನೆ ಕೇಳಬೇಕು. ಅವರು ಉತ್ತರಿಸಿ ನಮಗೆ ಮರುಪ್ರೆಶ್ನೆಯೊಂದು ಕೇಳುವುದು, ನಾವು ಅದಕ್ಕೆ ಉತ್ತರಿಸುವುದು.. ಇದು ವಿಧಾನ. ಒಬ್ಬೊಬ್ಬರೇ ಮಾಡಬೇಕಿತ್ತು.. ಮೊದಲು ವಿಕ್ರಮ್ ಸರದಿ. ಒಂದು ಕಾರ್ಡ್ ಎತ್ತಿದರು.

"ಈಮೈಲ್!"

ಕ್ಲಾಸಿನಲ್ಲಿ ಅರ್ಧಗಂಟೆ ಮುಂಚೆ ವಿಕ್ರಮ್ ಹೇಳುತ್ತಿದ್ದರು ಕೌಸ್ತುಭ್‍ಗೆ, "ಈಮೈಲ್ ಗೀಮೈಲ್ ಬಗ್ಗೆ ತಲೆ ಕೆಡ್ಸ್ಕೋಬೇಡ್ರೀ.. ಕೊಡಲ್ಲ ಅದನ್ನೆಲ್ಲಾ..." ಅಂತ!!

ಅವರನ್ನವರೇ ಶಪಿಸಿಕೊಂಡರೂ ಹೇಗೋ ಪ್ರೆಶ್ನೆ ಕೇಳಿ, ಅವರಿಂದ ಪ್ರೆಶ್ನೆ ಕೇಳಿಸಿಕೊಂಡು ಉತ್ತರ ಕೊಟ್ಟು ಇನ್ನೊಂದು ಕಾರ್ಡ್ ಎತ್ತಿ, ಅದರ ಬಗ್ಗೆಯೂ ಪ್ರಶ್ನೋತ್ತರಗಳನ್ನು ಅದಲುಬದಲಿಸಿಕೊಂಡು ನಿಟ್ಟುಸಿರು ಬಿಟ್ಟು ಪಾರಾದರು.

ನನ್ನ ಸರದಿ ಬಂತು!

"ಮಾರಿ!!"

ನಾನು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ನನಗೆ "ಮಾರಿ" ಬರುತ್ತೆ ಅಂತ. ನಾನು ಎರಡೂ ಕಾರ್ಡುಗಳನ್ನೂ ಒಟ್ಟಿಗೇ ಎತ್ತಿದೆ. ಒಂದು "ಮಾರಿ" ಆಗಿತ್ತು, ಇನ್ನೊಂದು "ಆಂಫೋ" ಆಗಿತ್ತು..

ಮಾರಿ ಎಂದರೆ ಸಂಗಾತಿ ಎಂದೂ, ಆಂಫೋ ಎಂದರೆ ಮಕ್ಕಳು ಎಂದರ್ಥ.

ನಾನು ಸುಮಾರು ಹೊತ್ತು ಆ ಕಾರ್ಡನ್ನೇ ದಿಟ್ಟಿಸಿದೆ - ಕಾರ್ಡು ಭಸ್ಮವಾಗುವಂತೆ! ಮೇಡಂ ನನ್ನನ್ನು ನೋಡಿ, ಇವನಿಗೆ ಏನೂ ತೋಚುತ್ತಿಲ್ಲವೇನೋ ಬಡಪಾಯಿ ಎಂದುಕೊಂಡು, "At least ಒಂದನ್ನು ಪ್ರಯತ್ನ ಪಡು ಬಡ್ಡೀ ಮಗನೇ..." ಎಂದು ಫ್ರೆಂಚಿನಲ್ಲಿ ಹೇಳಿದರು. ನಾನು, ಮತ್ತೆ ಆ ಕಾರ್ಡನ್ನೇ ಕಣ್ಣ್ರರಳಿಸಿ ನೋಡಿ, "ಕೆಲ್ ಏ ವೋತ್ರ್ ನೋ ದ್ ಮಾರಿ?" (ನಿಮ್ಮ "ಮಾರಿ" ಹೆಸರೇನು?) ಎಂದೆ. ನಾನೆಂದುಕೊಂಡೆ, ಅದಾದ ಮೇಲೆ, "ಆಂಫೋ" ಹೆಸರುಗಳನ್ನು ಕೇಳೋಣ. ಅಲ್ಲಿಗೆ ಸರಿ ಹೋಗುತ್ತೆ ಅಂತ.. ಆದರೆ ನನಗೆ ಅನಿರೀಕ್ಷಿತ ಉತ್ತರ ಸಿಕ್ಕಿಬಿಟ್ಟಿತು. ಅವರು, ರಮೇಶನೋ, ಪ್ರಕಾಶನೋ ಎಂದು ಹೇಳುತ್ತಾರೆಂದುಕೊಂಡಿದ್ದೆ. ಆದರೆ ಅವರು ತಮಗೆ ಮದುವೆಯೇ ಆಗಿಲ್ಲವೆಂದು ಉತ್ತರ ಕೊಟ್ಟುಬಿಟ್ಟು "ಏ ವೂ??" ಎಂದರು. "ಏ ವೂ" ಎಂದರೆ, "ಮತ್ತು ನೀವು?" ಎಂದು. ನಾನು "ಮುಆ ಆಸಿ" ಅಂದುಬಿಟ್ಟು ಪಾರಾದೆ. ನಾನೂ ಅಷ್ಟೇ ಅಂತ!!

ಈಗ ಇರೋದು ಮಾರಿ ಹಬ್ಬ. ಎರಡನೆಯ ಕಾರ್ಡಿನ ಕಥೆ. ಆಂಫೋ.. ಅಂದರೆ ಮಕ್ಕಳು.. ಈಗ ಏನಪ್ಪಾ ಕೇಳೋದು. ನನಗೆ ಗೊತ್ತಿರೋದು ನರ್ಸರಿ ಮಕ್ಕಳಷ್ಟೇ ಪದಗಳು ಅಂತ ಆಗಲೇ ಹೇಳದೆನಲ್ಲಾ... ಮೇಡಮ್ ಗಹಗಹಿಸುತ್ತಿದ್ದುದು ಕಂಡಿತು. ಅವರು ನಾನು ಏನು ಪ್ರೆಶ್ನೆ ಕೇಳಬಹುದೆಂದು ಉತ್ಸುಕರಾಗಿದ್ದರೆನಿಸಿತು. ನಾನು "ಹ ಹ ಹ ಹಾ..." ಎಂದೆ.. ಏನೂ ಕೇಳಲು ತೋಚದಿದ್ದಾಗ ನಗು ತಾನಾಗಿ ತಾನೇ ಬರುವುದಲ್ಲವೇ... ಹಾಗೇ ನಂಗೂ ನಗು ಬಂತು. ಅವರು ಮಾತ್ರ ನಗಲಿಲ್ಲ. ಕಾತುರದಿಂದ ನನ್ನ ಬಾಯನ್ನೇ ನೋಡುತ್ತಿದ್ದರು. ನಾನು ನಿಮ್ಮ ಮಕ್ಕಳ ಹೆಸರುಗಳೇನು ಅಂತ ಕೇಳೋ ಹಾಗಿಲ್ಲ. ಯಾಕೆಂದರೆ ಹಿಂದಿನ ಪ್ರೆಶ್ನೆಯಲ್ಲಿ ಅವರು ತಮಗೆ ಮದುವೆಯೇ ಆಗಿಲ್ಲವೆಂದು ಹೇಳಿದ್ದಾರೆ..

ಸಿಕ್ಕಿತು ಪದಗಳು!!!

"ಜ಼ಡೋರ್ ಲೇಸ್ ಆಂಫೋ.. ಏ ವೂ??" ಎಂದುಬಿಟ್ಟೆ.. (I LOVE children, and you??) ಅವರು ವಿಧಿಯಿಲ್ಲದೆ, "ಮುಆ ಆಸಿ" ಅಂದರು.. ನಾನು ನಿಟ್ಟುಸಿರು ಬಿಟ್ಟೆ. ಅದೆಲ್ಲಿ ಹುದುಗಿತ್ತೋ ಪದಗಳು, ನನ್ನ ಸ್ಮರಣಾ ಶಕ್ತಿಯನ್ನು ನಾನೇ ಒಮ್ಮೆ ಪ್ರಶಂಸಿಸಿಕೊಂಡೆ ಮನಸ್ಸಿನಲ್ಲಿ.. ನನ್ನ ಶತ್ರುವಾದ ಮರೆವು ನನ್ನ ಕೈ ಹಿಡಿದು ಪಾರು ಮಾಡಿದ್ದ!!

ಆಮೇಲೆ ನಮ್ಮ ಟೀಚರ್ರು "ನೀವು ಕ್ಯೂಟ್ ಪ್ರೆಶ್ನೆ ಕೇಳಿದರಂತೆ??" ಎಂದು ನನ್ನ ಕೇಳಿದಾಗ ನನಗೆ ಚೆನ್ನಾಗಿ ಅಂಕಗಳು ಬಂದಿರುತ್ತೆ ಹಾಗಾದರೆ ಎಂದೆನಿಸಿತು.. ಅಂತೂ ಇಂತೂ ಫ್ರೆಂಚ್ ಪರೀಕ್ಷೆಯಲ್ಲಿ ಎಪ್ಪತ್ತೈದು ಪರ್ಸೆಂಟ್ ತೆಗೆದುಕೊಂಡು ಉತ್ತೀರ್ಣನಾಗಿದ್ದೇನೆ. ಇನ್ನು ಮುಂದಿನ ಲೆವೆಲ್ಲಿಗೆ ಹೋಗೋದು ಬಾಕಿ. ಜೂನ್ ಇಂದ.. ಆಮೇಲೆ ನಡೆಯುವ ಮಾರಿ ಹಬ್ಬದ ಬಗ್ಗೆ ಮತ್ತೆ ಬರೆಯುತ್ತೇನೆ.

ಬೋನ್‍ಜ಼ೂರ್ನೇ...

- ಅ

16.04.2007
5PM

Thursday, April 12, 2007

ಭೀತಿ - ಪ್ರೀತಿ

ದೂರದ ದಿಗಂತದೆಡೆಗೆ
ನನ್ನ ಪಯಣವೋ ನಿನ್ನ ಪಯಣವೋ - ಭೀತಿ
ಕ್ಷಿತಿಜದಲಿ ಲೀನವಾಗಲೆಮ್ಮ ಚೇತನವು
ಕೈ ಕೈ ಹಿಡಿದು, ಎದೆಯೆದೆ ಬೆಸೆದು, ಮನ ಮನ ಬಿಗಿದು
ನಿನ್ನ ಪಯಣದೊಳೆನ್ನ ಪಯಣವು - ಪ್ರೀತಿ!

ಎದೆ ಕಲ್ಲೆನಿಸಿ, ಅನುರಾಗದ
ಸುಧೆಯ ಸಿಂಚನಕೆ ಸ್ಪಂದನವ ತೊರೆವೆಯಾ - ಭೀತಿ
ಕಲ್ಲೆದೆಯಾದರೇನು ನಿನ್ನದು
ಮೂಡಲಿ ಇಳೆಯನಿಳಿಸುವ ಸುಂದರ ಶಿಲೆಯು
ನಿನ್ನ ಶಿಲೆಯೊಳೆನ್ನ ಕಲೆಯು - ಪ್ರೀತಿ!

ಮುರಿದೆನೇ ಮನವನು, ಮಾತಿನಲಿ ತಿಳಿಯದೇ!
ಮುನಿದೆನ್ನ ಮೇಲೆ ಹಗೆಯ ಧಗೆಯೇ - ಭೀತಿ
ಇರಲಿ ಮುನಿಸು-ಕೋಪಗಳು ಮಿತಿಯಲಿ
ಪ್ರೇಮದ ಬಳ್ಳಿಗೆ ಗೊಬ್ಬರವು ಮುನಿಸು
ನಿನ್ನ ಮುನಿಸಿನಲ್ಲೆನ್ನ ಮನಸು - ಪ್ರೀತಿ!

ಮಾತಿಲ್ಲದೆ ಹೊತ್ತು ಕಳೆಯಿತು
ಮೌನಶರಧಿಯಲಿ ಮುಳುಗಿಹೆಯಾ - ಭೀತಿ
ಮಾತು ತೀರ, ತೀರದ ತಿರೆಯೊಳು ಬರಿಯೆ ತೆರೆಯ ಸದ್ದು
ಮೌನವು ಕಡಲಿನೊಡಲು, ಒಡಲಿನಲಿ ಒಲವಿಹುದು
ನಿನ್ನೊಲವಿನಲೆನ್ನ ಗೆಲುವು - ಪ್ರೀತಿ!

- ಅ
12.04.2007
11AM

Thursday, April 05, 2007

ಗಾಡ್ ಫಾದರ್...

ತೇಜಸ್ವಿ ಬಗ್ಗೆ ಮತ್ತೆ ಬರೆಯುತ್ತಿದ್ದೇನೆ. ಟಿವಿ ನ್ಯೂಸುಗಳಲ್ಲಿ, "ತೇಜಸ್ವಿ ಇನ್ನಿಲ್ಲ" ಎಂದು ಪ್ರಸಾರ ಮಾಡುತ್ತಿರುವುದನ್ನು ನೋಡಲು ಆಗುತ್ತಲೇ ಇಲ್ಲ. ಅದನ್ನು ನಂಬಲು ಮನಸ್ಸೂ ಇಲ್ಲ. ಮಾಯಾಲೋಕ - ೨ ಬೇರೆ ಬರೆಯೋದಿದೆ ಅವರು?? ಮನಸ್ಸು ನಂಬದಿದ್ದರೇನು!!


ಅರುಣ ಅಂದ ತಕ್ಷಣ ನನ್ನನ್ನು ಅನೇಕರು ಗುರುತಿಸೋದು, " ಓಹ್, ಅದೇ ಟ್ರೆಕ್ಕಿಂಗ್ ಅರುಣ ಅಲ್ವಾ??" ಅಂತ. ಈ ಟ್ರೆಕ್ಕಿಂಗ್ ಬಗ್ಗೆ, ಕಾಡಿನ ಬಗ್ಗೆ ಆಸಕ್ತಿ, passionನ ನಾನು ಬೆಳೆಸಿಕೊಂಡಿದ್ದು ತೇಜಸ್ವಿಯನ್ನು ಓದಿದರಿಂದಲೇ.. ಅವರನ್ನೋದಿದ ಮೇಲೆಯೇ.. "ಕಾಡಿನ ಕಥೆಗಳು" ಓದಿದ ಹೊಸತರಲ್ಲಿ ಕುಮಾರಪರ್ವತದಲ್ಲಿ ರಾತ್ರಿ ಚಾರಣ ಮಾಡುವಾಗ ನರಭಕ್ಷಕ ಹುಲಿಯು ನನ್ನ ಹಿಂದೆಯೇ ಇದೆಯೆಂಬ ಭಾಸವಾಗಿತ್ತು. ಈಗಲೂ ನೆನಪಿದೆ, ನಾನು ಆ ಅನುಭವವನ್ನು ನಮ್ಮ ಸಹಚಾರಣಿಗರೊಡನೆ ಹಂಚಿಕೊಳ್ಳುತ್ತಿದ್ದುದು..


ತೇಜಸ್ವಿಯ ಬಗ್ಗೆಯೆಲ್ಲಾ ಬರೆಯುವ ತೇಜಸ್ಸು ನನ್ನಂಥವನಿಗಿಲ್ಲ. ಆದರೆ, ನಾನೊಬ್ಬ ಓದುಗನಾಗಿದ್ದು ತೇಜಸ್ವಿಯಿಂದಲೇ. ನನ್ನ ಕೋಣೆಯಲ್ಲಿ ಇಂದು ಮೂರುಸಾವಿರ ಕನ್ನಡ ಪುಸ್ತಕಗಳಿವೆಯೆಂದರೆ, ಅದಕ್ಕೆ ತೇಜಸ್ವಿಯೇ ಕಾರಣ. "ಓದುವುದು ಇಷ್ಟು ಸೊಗಸಾಗಿರುವಂಥದ್ದೇ?" ಎಂದು ನಾನು ಮೊಟ್ಟಮೊದಲು ಓದಿದ ಕನ್ನಡ ಪುಸ್ತಕ ಕರ್ವಾಲೋ ನನ್ನ ಮನಸ್ಸಿನಲ್ಲಿ ಪರಿಣಾಮ ಬೀರಿತು.


ನನ್ನ ಜೊತೆ "ಕಿವಿ"ಯಂಥಾ ಒಂದು ನಾಯಿಯಿರಬೇಕು, ಎಂದು ಯಾವ ನಾಯಿಯನ್ನು ನೋಡಿದಾಗಲೂ ಅನ್ನಿಸುತ್ತದೆ..


ತೇಜಸ್ವಿ ಸೃಷ್ಟಿಸಿದ ಪ್ರತಿಯೊಂದು ಪಾತ್ರಗಳೂ ಇನ್ನೂ ಕಣ್ಣುಮುಂದೆ ಜೀವಂತವಾಗಿವೆ. ಆ ಪಾತ್ರಗಳಲ್ಲಿ ಅವರೂ ಜೀವಂತವಾಗಿದ್ದಾರೆ.. ನನ್ನ, ನನ್ನ ಗೆಳೆಯರ ಅಭಿರುಚಿಗಳಲ್ಲಿ, ಅವರು ಉಸಿರಾಡುತ್ತಲೇ ಇದ್ದಾರೆ. ನನ್ನಂಥ ಹಲವರಿಗೆ ಅವರು ಪರೋಕ್ಷವಾಗಿ ಗಾಡ್ ಫಾದರ್ ಆಗಿದ್ದರು.


ಅನ್ನಪೂರ್ಣ ಫೋನಿನಲ್ಲಿ ತೇಜಸ್ವಿಯ ಸಾವಿನ ಸುದ್ದಿ ಹೇಳಿದಾಗ "ಸುಮ್ಮನೆ ರೂಮರ್ ಇರಲಿಪ್ಪಾ" ಅಂತ ಟಿವಿಯನ್ನು ಆನ್ ಮಾಡಿದೆ. ಶ್ರೀನಿಧಿ "ನನಗೆ ಏನೂ ತೋಚುತ್ತಿಲ್ಲ ಅರುಣ. ನಾನು ಓದುಗನಾಗಲು ತೇಜಸ್ವಿಯೇ ಕಾರಣ" ಎಂದು ಹೇಳಿದ. http://shree-lazyguy.blogspot.com/2007/04/blog-post_05.html


ತೇಜಸ್ವಿಯ ಸುಮಾರು ಅಪರೂಪದ ಕವಿತೆಗಳನ್ನು ಮೊನ್ನೆ ಸಂಗ್ರಹಿಸಿದ್ದರ ಬಗ್ಗೆ ಅಕ್ಕನಿಗೆ ಹೇಳುತ್ತಿದ್ದೆ. ಅವರ ಪ್ರಕಟಿತ ಕವನ ಸಂಕಲನದ ಹೊರೆತಾಗಿ ಲಂಕೇಶ್ ಪತ್ರಿಕೆಯಲ್ಲಿ ಅವರು ಬರೆದಿದ್ದ ಕೆಲವು ಕವನಗಳು. ಅದನ್ನೊಮ್ಮೆ ಓದಿದೆ ಇವತ್ತು. ಯಾರ ಸುದ್ದಿಗೂ ಹೋಗದೆ ಮೌನವಾಗಿ ತಮ್ಮಷ್ಟಕ್ಕೆ ತಾವೇ ಕುಳಿತು ಅದ್ಭುತಗಳನ್ನು ಸೃಷ್ಟಿಸಿದರು ತೇಜಸ್ವಿ. ಚಿತ್ರಕಲೆ, ಫೋಟೋಗ್ರಫಿ, ಸಂಗೀತ, ಕವನ, ನಾಟಕ, ಕಾದಂಬರಿ, ಕಥೆ, ಕಂಪ್ಯೂಟರ್ - ಹೀಗೆ ಅವರು ಕಾಲಿಡದ ಕ್ಷೇತ್ರವೇ ಇಲ್ಲ. Great Man!!


ನನ್ನಂಥ ಲಕ್ಷಾಂತರ Great Fansಗೆ ತುಂಬಾ ನೋವಾಗುತ್ತಿದೆ. ಅವರ ಎಲ್ಲಾ ಪುಸ್ತಕಗಳನ್ನು ಕೊಂಡು ಓದಿದವರು, ನನ್ನಂಥವರು ಬಹಳಷ್ಟು ಜನ ಇದ್ದಾರೆ.


ತೇಜಸ್ವಿಯ ಪುಸ್ತಕಗಳನ್ನು ಅದೆಷ್ಟು ಜನರಿಗೆ ಉಡುಗೊರೆಯಾಗಿ ಕೊಟ್ಟಿದ್ದೇನೋ ಏನೋ.. ಇನ್ನು ಮುಂದೆಯೂ ಕೊಡುತ್ತೇನೆ. ಇನ್ನು ಮುಂದೆಯೂ ಓದಿಸುತ್ತೇನೆ. ತೇಜಸ್ವಿಗೆ ಅದಕ್ಕಿಂತ ದೊಡ್ಡ ಗೌರವ ಇನ್ನು ಹೇಗೆ ತಾನೆ ಸಲ್ಲಿಸಲು ಸಾಧ್ಯ!!

ಒಂದಷ್ಟು ಚಿತ್ರಗಳು..