Friday, March 23, 2007

ಮೇಲೇರಿದಷ್ಟೂ..

ಈ ಲೇಖನವನ್ನು ಬರೆಯಬಾರದೆಂದುಕೊಂಡಿದ್ದೆ. ಆದರೆ, ಹೀಗೂ ಆಗುವುದುಂಟು ಎಂದು ಎಲ್ಲಾ ಸಾಹಸಪ್ರೇಮಿಗಳಿಗೂ ತಿಳಿಯಲಿ ಎಂಬ ಕಾರಣಕ್ಕಾಗಿ ಬರೆಯುತ್ತಿದ್ದೇನೆ. ಪ್ರಕೃತಿಯು ನಮ್ಮ ನಿಜವಾದ ಸಾರ್ವಭೌಮ, ನಾವು ಅದರ ಮುಂದೆ ಅತ್ಯಂತ ನಿಕೃಷ್ಟ ತೃಣದಲ್ಲಿ ತೃಣ ಎಂದು ಸಾರುವುದಕ್ಕಾಗಿ ಬರೆಯುತ್ತಿದ್ದೇನೆ. Nature always rules!!


ಹತ್ತುಸಾವಿರದಡಿಯ ಮೇಲೆ ನಡೆದ ಘಟೆನೆಯಿದು.ಮೈಲಿ ಥಾಚ್! ಸಮುದ್ರಮಟ್ಟದಿಂದ ಹತ್ತುವರೆ ಸಾವಿರ ಅಡಿಯೆತ್ತರ! ಸುತ್ತಮುತ್ತಲು ಎತ್ತ ನೋಡಿದರೂ ನೀಲಾಂಬರಿಯನ್ನು ಮುಟ್ಟುವ ಹಂಬಲದಲ್ಲಿ ನಿಂತಿದ್ದ ಅಚಲ ಹಿಮಪರ್ವತಗಳು! ಎಲ್ಲೆಡೆ ರಾರಾಜಿಸುತ್ತಿದ್ದ ಹಿಮಸಿಂಚನವಾಗಿದ್ದ ಹೆಮ್ಮರಗಳು!! ದೂರದಲ್ಲೆಲ್ಲೋ ಕಾಣುತ್ತಿದ್ದ ಒಂದು ಬೆಟ್ಟದಿಂದ ಹಿಮ ಕರಗಿ ಜಲಧಾರೆಯಾಗಿ ಐದು ಸಾವಿರ ಅಡಿ ಕೆಳಗೆ ಧುಮುಕುತ್ತಿರುವುದು ಕಂಗೊಳಿಸುವಂತಿತ್ತು. ತಾಪಮಾನ ಸೊನ್ನೆಯಿತ್ತೆನಿಸುತ್ತೆ. ಬನಿಯನ್ನು, ಅದರ ಮೇಲೆ ಥರ್ಮಲ್ಸು, ಅದರ ಮೇಲೆ ಶರ್ಟು, ಅದರ ಮೇಲೆ ಸ್ವೆಟರ್ರು, ಅದರ ಮೇಲೆ ಪುಲ್ಲೋವರ್ರು ಧರಿಸಿದ್ದೆವು. ನಮ್ಮ ಕ್ಯಾಂಪ್‍ಸೈಟ್ ಅಂತೂ ಅತ್ಯದ್ಭುತ ಸ್ಥಳದಲ್ಲಿತ್ತು. ಸ್ವರ್ಗದಲ್ಲೇ ಇತ್ತು ಎಂದರೂ ಅದು ಅತಿಶಯೋಕ್ತಿಯಾಗಲಾರದು.


ಈಗಾಗಲೇ ಸೇಗ್ಲಿ ಹಾಗೂ ಹೋರಾ ಥಾಚ್, ಈ ಎರಡು ಕ್ಯಾಂಪ್‍ಸೈಟುಗಳನ್ನು ದಾಟಿಕೊಂಡು ಬಂದಿದ್ದೇವೆ. ಹತ್ತುವರೆಸಾವಿರದಡಿಯೆತ್ತರದ ಚಳಿಯಲ್ಲಿ ನಮಗಾಗಿ ಏನೇನು ಕಾದಿರಬಹುದೆಂಬ ಕಲ್ಪನೆ ನಮಗೆ ಸ್ವಲ್ಪ ಮಟ್ಟಿಗಾದರೂ ಇತ್ತು. At least, ಊಟ ತಿಂಡಿಯ ವಿಷಯಗಳಲ್ಲಿ. ಈ ಎರಡು ಕ್ಯಾಂಪುಗಳಲ್ಲಿ ಮತ್ತು ನಮ್ಮ ಬಬೇಲಿಯ ಬೇಸ್ ಕ್ಯಾಂಪಿನಲ್ಲಿ ಆದ ಅಭ್ಯಾಸ ಆಗಿತ್ತಲ್ಲ!! ನಾವು ಕ್ಯಾಂಪ್‍ಸೈಟು ತಲುಪಿದ ಕೆಲವೇ ನಿಮಿಷಗಳಲ್ಲಿ ಕ್ಯಾಂಪ್ ಲೇಡರ್, "Welcome drink ಕೇ ಲಿಯೇ ಬಾಹರ್ ಆಓ" ಎಂದು ಟೆಂಟಿನೊಳಗೆ ಹೊಕ್ಕ ಚಾರಣಿಗರನ್ನು ಕರೆದು ಒಂದು ಶರಬತ್ತನ್ನು ಕೊಟ್ಟು, "ನಿಧಾನಕ್ಕೆ, ಜೋಪಾನವಾಗಿ ಟ್ರೆಕ್ ಮಾಡಿ, ಪ್ರಪಾತಗಳಿರುವ ಜಾಗ ಇವು. ನೀವು ಬೀಳಬಹುದು, ಇಲ್ಲಿದ್ದಾನಲ್ಲಾ (ಬೆಟ್ಟಪ್ರದೇಶದವನನ್ನು ತೋರಿಸಿ) ಇವನೂ ಬೀಳಬಹುದು, ನಾನೂ ಬೀಳಬಹುದು" ಎಂದು ಸಲಹೆ ಸೂಚನೆಗಳನ್ನು ಕೊಟ್ಟು, "ಟೀ ಕುಡಿಯಿರಿ" ಎಂದು ಮನಬಂದಷ್ಟು ಟೀ ಕುಡಿಯುವ ಅವಕಾಶವನ್ನು ಕಲ್ಪಿಸಿಕೊಟ್ಟರು. ಮತ್ತೆ ಯಥಾಪ್ರಕಾರ ಡೀನ್‍ರ ಹೇಳಿಕೆ. ಎರಡುವರ್ಷದಿಂದ ಹೇಳಿಕೊಂಡು ಬರುತ್ತಿರುವ ಸಂಪ್ರದಾಯ, ಇಲ್ಲೂ ಬಿಡಲಿಲ್ಲ. "ರೀ ಟೀ ಕಾಫಿ ಎಲ್ಲಾ ಕುಡೀಬೇಡ್ರೀ.. " ಅಂತ. ನಾನೂ ಅವರಷ್ಟೇ ತಾಳ್ಮೆಯಿಂದ ಎರಡು ವರ್ಷಗಳಿಂದ ಇದನ್ನು ಕೇಳುತ್ತಲೇ ಬರುತ್ತಿದ್ದೇನೆ, ಮತ್ತು ಅಷ್ಟೇ ತಾಳ್ಮೆಯಿಂದ ಟೀ ಕಾಫಿ ಕುಡಿಯುತ್ತಲೇ ಇದ್ದೇನೆ.

ಹೊಟ್ಟೆ ಭಾರವಾಗುವಷ್ಟು ಚಹಾ ಆದಮೇಲೆ ಟೊಮೇಟೊ ಸೂಪು. ಮನಬಂದಷ್ಟು ಹೀರಬಹುದು. ನಂತರ ಊಟಕ್ಕೆ ಪೂರಿ, ಆಲೂಗೆಡ್ಡೆ ಪಲ್ಯ! ಆಲೂಗೆಡ್ಡೆಯನ್ನು ನೋಡಿ ನೋಡಿ ಸಾಕಾಗಿ ಹೋಗಿತ್ತು. ಗುಲ್ಬರ್ಗಾದಿಂದ ಬಂದ ಮೇಷ್ಟ್ರುಗಳಿಬ್ಬರು ಆಲೂಗೆಡ್ಡೆಯಿಂದ ಅವರ ವಂಶವನ್ನೆಲ್ಲಾ ವಾಚಾಮಗೋಚರವಾಗಿ ಶಪಿಸುತ್ತಿದ್ದರು. "ಸೂಳಿಮಗಂದ್ ಈ ಆಲೂಗೆಡ್ಡೇನ್ ಏನಾದ್ರೂ ಮನೀಗ್ ಹೋದ್ ಮ್ಯಾಲ್ ನನ್ ಹೆಂಡ್ತಿ ಮಾಡಿದ್ರ, ಅವಳವ್ನ್ ಅವಳ್ ತಿತಿ ಆಗ್ತೈತ್ ನೋಡ್ರಿ.." ಎಂದು ಅವರ ಧಾಟಿಯಲ್ಲಿ ವೇಗವಾಗಿ ಹೇಳುತ್ತಿದ್ದರೆ ನಮಗೆ ಹಾಸ್ಯಮಯವಾಗಿತ್ತು ಟೆಂಟಿನಲ್ಲಿ. ಸಕಲವೂ ಆಲೂಗೆಡ್ಡೇಮಯ ಹಿಮಾಚಲಪ್ರದೇಶದಲ್ಲಿ!! ಜನರೂ ಸಹ ನೋಡೋಕೆ ಆಲೂಗೆಡ್ಡೆಯಂತೆಯೇ ಮುಖ ತುಂಬಿಕೊಂಡಿದ್ದರು. ಎಲ್ಲೋ ಆಹಾರ ಮಹಿಮೆಯಿರಬೇಕು.
ಎಲ್ಲವೂ ವಿಚಿತ್ರ ಇಲ್ಲಿ..
ಊಟದ ಸಮಯ ಎಂಟುಗಂಟೆ, ಆದರೆ ಇನ್ನೂ ಸಂಜೆ ಆರುಗಂಟೆಯಂತೆ ಬೆಳಕಿರುತ್ತೆ. "ಇನ್ನೂ ರಾತ್ರಿಯೇ ಆಗಿಲ್ಲ?" ಎನ್ನುತ್ತಲೇ ಡೀನ್ ಗಡಿಯಾರ ನೋಡಿಕೊಂಡು ಶಾಕ್ ಆದರು. ಬೆಳಿಗ್ಗೆ ನಾಲ್ಕು ಗಂಟೆಗೆಲ್ಲಾ ಸೂರ್ಯನು ಬಂದು, ಟೆಂಟಿನ ಬಾಗಿಲು ಬಡಿದು, ಗುಡ್ ಮಾರ್ನಿಂಗ್ ಹೇಳಿಬಿಟ್ಟಿರುತ್ತಾನೆ. ಹತ್ತುಸಾವಿರದಡಿಯ ನಂತರ ಯಾವಾಗ ಮಳೆಯಾಗುತ್ತೆ, ಯಾವಾಗ ಹಿಮಪಾತವಾಗುತ್ತೆ ಅಂತ ಹೇಳೋಕೆ ಸಾಧ್ಯವಿಲ್ಲ. ಸಾಧ್ಯವಾದಷ್ಟು ಮಟ್ಟಿಗೆ ಮಧ್ಯಾಹ್ನದ ಒಳಗೆ ಕ್ಯಾಂಪ್‍ಸೈಟುಗಳನ್ನು ತಲುಪಿಕೊಂಡುಬಿಟ್ಟಿರಬೇಕು. ಮಧ್ಯದಲ್ಲೆಲ್ಲೋ ಹಿಮಪಾತದಲ್ಲಿ ಸಿಲುಕಿಕೊಳ್ಳುವುದು ಅಷ್ಟು ಸುರಕ್ಷಿತವಲ್ಲ. ಈ ಎತ್ತರದಲ್ಲಿ ಎಲ್ಲವೂ ವಿಚಿತ್ರ, ಪ್ರಾಕೃತಿಕ ಘಟನೆಗಳೂ ಸಹ!!


ನಮ್ಮ ದೇಹ ಕೂಡ ವಿಚಿತ್ರವಾಗಿ ನಡೆದುಕೊಳ್ಳುತ್ತೆ. ಹತ್ತುಸಾವಿರದಡಿಯನ್ನು ದಾಟಿದ ಹಲವರಿಗೆ ಊಟ ಸೇರೋದಿಲ್ಲ, ಹೊಟ್ಟೆ ತೊಳೆಸುತ್ತೆ, ನಿದ್ದೆ ಬರೋದಿಲ್ಲ, ತಲೆ ಸುತ್ತುತ್ತೆ, ತಮ್ಮ ಹೆಸರನ್ನೇ ಮರೆತರೂ ಆಶ್ಚರ್ಯವಿಲ್ಲ, ಜಗಳ ಆಡಬೇಕು ಎನಿಸುತ್ತಿರುತ್ತೆ, ಇರುಸುಮುರುಸು, ವಿಪರೀತ ಆಸಿಡಿಟಿ. ಇದರಲ್ಲಿ ಯಾವುದಾದರೊಂದು ಆಗುತ್ತಿದೆಯೆಂದು ನಮಗೆ ಅನ್ನಿಸಿದರೂ ಮರುಕ್ಷಣವೇ ಕ್ಯಾಂಪ್ ಲೀಡರ್‍ಗೆ ತಿಳಿಸಬೇಕು. ನನಗೆ ಹಾಗೂ ಡೀನ್‍ಗೆ ಅಷ್ಟು ತೊಂದರೆಯಾಗಲಿಲ್ಲ, ಯಾಕೆಂದರೆ ನಾವು ಸೂಕ್ತವಾಗಿ ಅಕ್ಲಮಟೈಸ್ ಮಾಡಿಕೊಂಡಿದ್ದೆವು.


Acclamatization ಎಂದರೆ, ಎತ್ತರದ ಪ್ರದೇಶಗಳಿಗೆ ದೇಹವನ್ನು ಹೊಂದಿಕೊಳ್ಳುವಂತೆ ಮಾಡುವುದು ಎಂದರ್ಥ. ಇದನ್ನು ಮಾಡಬೇಕಾದರೆ, ಎತ್ತರದ ಪ್ರದೇಶಕ್ಕೆ ಹೋಗಿ, ನಂತರ ತಗ್ಗು ಪ್ರದೇಶಕ್ಕೆ ಹಿಂದಿರುಗ ಬೇಕು. ಹೀಗೆ ಪುನರಾವರ್ತಿಸುವುದರಿಂದ ದೇಹ ಎತ್ತರದ ಪ್ರದೇಶಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತೆ. ಮೇಲೆ ಹೇಳಿದೆನಲ್ಲಾ, ಆ ಅವಲಕ್ಷಣಗಳು ನಮ್ಮ ದೇಹದಲ್ಲಿ ತೋರಿಸಿಕೊಳ್ಳುವುದು ಕಡಿಮೆಯಾಗುತ್ತೆ. ಆ ಅವಲಕ್ಷಣಗಳಿಗೆ High Altitude Syndrome ಅಥವಾ Mountain Sickness ಎನ್ನುತ್ತೇವೆ. ಹತ್ತುಸಾವಿರದಡಿಯೆತ್ತರವನ್ನು ದಾಟಿದ ಮೇಲೆ ಅದು ಸಾಮಾನ್ಯ. ಆದರೆ ಅದರ ತೀವ್ರತೆಯನ್ನು ಹೇಳಲಾಗದು.
ಅನಿರೀಕ್ಷಿತ ಅತಿಥಿ

ನಮ್ಮ ಮುಂದಿನ 'ದೌರಾ' ಕ್ಯಾಂಪ್ ಇರುವುದು ಹನ್ನೊಂದುವರೆ ಸಾವಿರದಡಿಯಲ್ಲಿ. ಮೈಲಿ ಥಾಚ್‍ನ ಹತ್ತುವರೆಸಾವಿರಕ್ಕೇನೇ ನಮ್ಮ ಗುಲ್ಬರ್ಗಾ ಮೇಷ್ಟ್ರು "ನಮ್ ಎರಡನೇ ಮಗನ ಹೆಸ್ರೇ ಮರ್ತ್ ಹೋಗಿತ್ ಕಣ್ರೀ.." ಎಂದಿದ್ದರು. ಇನ್ನೇನಪ್ಪಾ ಗತಿ ಎಂದುಕೊಳ್ಳುತ್ತಿದ್ದಂತೆಯೇ, ಒಬ್ಬ ವ್ಯಕ್ತಿ ಒಂಟಿ ಚಾರಣಿಗನಂತೆ ಬಂದರು. ಆಗ ತಾನೆ ರಾತ್ರಿ ಎಂಟಾಗಿದ್ದರೂ ಬೆಳಕಿದ್ದ ರಾತ್ರಿಯ ಡಿನ್ನರ್ ಮುಗಿಸಿದ್ದೆವು. ಆತ ನಮ್ಮ ಮುಂದಿನ ಕ್ಯಾಂಪಿನ ಲೀಡರ್ ಎಂದು ತಿಳಿಯಿತು. ಸ್ವಲ್ಪ ಹುಷಾರ್ ಇರಲಿಲ್ಲವಂತೆ. ಅದಕ್ಕೆ Low Altitudeಗೆ ಹೋಗಲು ಕ್ಯಾಂಪ್ ನಿರ್ವಹಕ, ನನ್ನ ಟ್ರೆಕ್ಕಿಂಗ್ ಗುರುಗಳಾದ ಸ್ವಾಮಿಯವರು ಸೂಚಿಸಿದ್ದರು. ಆ ಲೀಡರ್ ನಮ್ಮ ಕ್ಯಾಂಪಿಗೆ ಬಂದರು. ಊಟ ಸೇರಲಿಲ್ಲವಂತೆ. ನಮ್ಮ ಗುಂಪಿನಲ್ಲಿ ಇಬ್ಬರು ವೈದ್ಯರಿದ್ದರು. ಒಬ್ಬರು ಗುಜರಾತಿನವರು, ಇನ್ನೊಬ್ಬರು ಆ ಅನಾರೋಗ್ಯ ಕ್ಯಾಂಪ್ ಲೀಡರಿನ ರಾಜ್ಯವಾದ ಮಹಾರಾಷ್ಟ್ರದವರಾಗಿದ್ದರು.
"ಇವತ್ತು ನೀನು ಇಲ್ಲಿ ವಿರಮಿಸಿಕೋ, ಬೆಳಿಗ್ಗೆ ಒಬ್ಬ ಗೈಡಿನ ಜೊತೆಗೆ ಕೆಳಗಿನ ಕ್ಯಾಂಪಿಗೆ ಹೋಗುವಂತೆ" ಎಂದು ನಮ್ಮ ಕ್ಯಾಂಪ್ ಲೀಡರ್ ಇವರಿಗೆ ಆದೇಶಿಸಿದರು. ಅಂತೆಯೇ ಅವರು ನಮ್ಮ ಕ್ಯಾಂಪಿನಲ್ಲೇ ಉಳಿದುಕೊಂಡರು. ಅನಾರೋಗ್ಯದ ದೇಹ, ಹತ್ತೂವರೆ ಸಾವಿರದಡಿಯ ಎತ್ತರದ ಬೆಟ್ಟದಲ್ಲಿ, ಒಂದು ಟೆಂಟಿನೊಳಗೆ, ಸ್ಲೀಪಿಂಗ್ ಬ್ಯಾಗಿನೊಳಗೆ ಹೊಕ್ಕಿ ನಿದ್ರಿಸಿದ್ದಾದರೂ ಹೇಗೋ!
ಮರುದಿನ ಬೆಳಿಗ್ಗೆ, ನಾಲ್ಕುವರೆ ಸುಮಾರು.. ಹೆಚ್ಚು ಜನ ಎದ್ದಿರಲಿಲ್ಲ. ಡೀನ್, ನಾನು, ಮತ್ತಿನ್ನೊಂದಿಬ್ಬರು ಮೂರು ಜನ ಎದ್ದಿದ್ದೆವು. ಆ ಅನಾರೋಗ್ಯ ಕ್ಯಾಂಪ್ ಲೀಡರ್ ತನ್ನ ಬೆಳಗಿನ ಕೆಲಸಕ್ಕೆಂದು ಹೋಗಿ, ಕೆಲಸವನ್ನು ಮುಗಿಸಿಕೊಂಡು ಹಿಂದಿರುಗುತ್ತಿದ್ದರು. ಟೆಂಟು ಇನ್ನೂ ಎರಡು ಅಡಿ ದೂರದಲ್ಲಿತ್ತಷ್ಟೇ, ಕುಸಿದು ಕೆಳಗೆ ಬಿದ್ದರು. ತಕ್ಷಣ ನಮ್ಮ ಕ್ಯಾಂಪ್ ಲೀಡರ್ ಹಾಗೂ ನಾವೊಂದಿಷ್ಟು ಎಚ್ಚರಗೊಂಡಿದ್ದ ಜನ ಅತ್ತ ಧಾವಿಸಿ, ಅವರನ್ನು ಟೆಂಟಿನೊಳಗೆ ಸೇರಿಸಿದೆವು. ನಂತರ ನಮ್ಮ ಗುಂಪಿನಲ್ಲಿದ್ದ ಗುಜರಾತಿನ ಡಾಕ್ಟರ್ ಚಾಚಾ ಅವರು ಟೆಂಟಿನೊಳಗೆ ಹೋಗಿ, ಏನೇನೋ ಪರೀಕ್ಷೆಗಳನ್ನು ಮಾಡಿ, ಹೊರ ಬಂದು, ಕಂಗಾಲಾಗಿದ್ದ ನಮ್ಮ ಕ್ಯಾಂಪ್ ಲೀಡರ್‍ಗೆ "He is no more.." ಎಂದರು. ನಮಗೂ ಕೊಂಚ ಶಾಕ್ ಆದಂತಾಯಿತು. ನಂತರ ವಿವರಿಸಿದರು ಡಾಕ್ಟರ್ ಚಾಚಾ, "It is mainly because of pulmonary edema caused due to mountain sickness" ಎಂದರು.
ಆ ಘಳಿಗೆಯವರೆಗೂ ನಮ್ಮಲ್ಲಿ ಬಹಳಷ್ಟು ಜನಕ್ಕೆ Mountain Sickness ಅನ್ನುವುದು ಪ್ರಾಣಕ್ಕೂ ಹಾನಿಯುಂಟು ಮಾಡಬಹುದು ಎಂದು ಗೊತ್ತಿರಲಿಲ್ಲ. ಎಲ್ಲರೂ ಮೌನಿಗಳಾಗಿದ್ದೆವು. ನಮ್ಮ ಕ್ಯಾಂಪಿನಲ್ಲಿ ಸೂತಕದ ಛಾಯೆ ಮೂಡಿತ್ತು. ನಮ್ಮ ಕ್ಯಾಂಪ್ ಲೀಡರ್ ಕಣ್ಣಿನಲ್ಲಿ ದುಃಖದ ನೀರು ಮಾತ್ರ ಹರಿದು ಬರಲಿಲ್ಲ, ಒಂದು ಬಗೆಯ ಭಯದ ಕಣ್ಣೀರು ಹರಿದಿತ್ತು. ಆತ ಇನ್ನೂ ಅರ್ಧ ತಿಂಗಳು ಅದೇ ಕ್ಯಾಂಪಿನಲ್ಲಿ ಇರಬೇಕು. ಆತ ಅವಾಕ್ಕಾಗಿದ್ದರು. ಅವರಿಗೆ ಸಮಾಧಾನ ಹೇಳುತ್ತಾ ನಾವು ನಮ್ಮ ಕ್ಯಾಂಪನ್ನು ತೊರೆದು ಮುಂದಿನ ಕ್ಯಾಂಪಿನತ್ತ ನಮ್ಮ ಚಾರಣವನ್ನು ಬೆಳೆಸಿದೆವು. ಮೃತ ನಾಯಕನನ್ನು ಕುದುರೆಯ ಸಹಾಯದಿಂದ ಕೆಲವು ಬೆಟ್ಟದ ಜನರೊಡನೆ ಬಬೇಲಿಗೆ ಕಳಿಸಿಕೊಟ್ಟರಂತೆ ಆಮೇಲೆ. ಒಟ್ಟಿನಲ್ಲಿ ಒಬ್ಬ ಅಡ್ವೆಂಚರರ್ ಬಯಸುವ ಸಾವು ಅವರಿಗೆ ಸಿಕ್ಕಿತ್ತು. He was lucky. ಒಬ್ಬ ಟ್ರೆಕ್ಕರ್‍ಗೆ ಟ್ರೆಕ್ಕಿಂಗ್‍ನಲ್ಲಿ ಸಾವು ಬಂದರೆ ಅದಕ್ಕಿಂತ ಪುಣ್ಯ ಆತನಿಗಿನ್ನೇನಿದೆ??
ಆತ ಇಪ್ಪತ್ತು ವರ್ಷದಿಂದ ಪರ್ವತಾರೋಹಣ ಕ್ಷೇತ್ರದಲ್ಲಿದ್ದವರಂತೆ. ಎವೆರೆಸ್ಟ್ ಬೇಸ್ ಕ್ಯಾಂಪಿನಲ್ಲೆಲ್ಲಾ ಇದ್ದು ಬಂದವರು. ಇಪ್ಪತ್ತು ಸಾವಿರದಡಿಯೆತ್ತರದ ಪ್ರದೇಶಗಳಲ್ಲಿ ಗೆದ್ದು ಬಂದವರು. ಈ ಬಾರಿ, ಸಾವು ಅವರನ್ನು ಕೇವಲ ಹತ್ತುಸಾವಿರದಡಿಯಲ್ಲೇ ಗೆದ್ದುಬಿಟ್ಟಿತ್ತು. ಎಷ್ಟೇ ಆದರೂ ಅವರು ಕೇವಲ ಮನುಷ್ಯ. ಪ್ರಕೃತಿಯು ಎಲ್ಲರ ಒಡೆಯ! Nature is the boss. ನಾವೆಲ್ಲಾ ಪ್ರಕೃತಿಯ ಮುಂದೆ ತೃಣದಲ್ಲಿ ತೃಣ!!

- ಅ

23.03.2007

6AM

6 comments:

 1. You have rightly said Nature is the boss.
  The article is really good, there is a certain maturity in this blog ... keep writing.

  ReplyDelete
 2. ufff!!! Nijakko prakruti boss!
  nice write up..
  Entha Experieince .. Dangag hode nanu..
  Nijakku avru lucky ne!

  ReplyDelete
 3. ಪ್ರಕೃತಿಯ ಎದುರು ಮನುಷ್ಯ ಚಿಕ್ಕವನು...
  Just for a joke... ಅವರು "ಜೀನಾ ಯಹಾ, ಮರ್ನಾ ಯಹಾ" ಅಂತ ಹಾಡು ಹೇಳ್ಕೋಂಡು ಟ್ರೆಕ್ ಮಾಡ್ತಿದ್ರಾ?

  ReplyDelete
 4. ರೋಮಾಂಚಕ ಕಥಾನಕ. ಪ್ರಕೃತಿಯ ಮಡಿಲಲ್ಲಿ, ನಾವೆಷ್ಟಾದರೂ ಶಿಶುಗಳಲ್ಲವೆ!

  ReplyDelete
 5. hey hu susthaagode naanu idannna odi
  alli hogi bandavere punyavanthru
  and "NATURE IS THE BOSS"rules......

  ReplyDelete
 6. ನೇಚರ್ ಈಸ್ ದ ಬಾಸ್! ಮರುಮಾತಿಲ್ಲ ಇದರ ಬಗ್ಗೆ.
  ಒಳ್ಳೆಯ ಬರಹ.. ನಾವು ಸಣ್ಣದಿರುವ ಅರಿವೇ ನಮ್ಮ ಸುತ್ತಲಿನ ಮಹಾನ್ ಪ್ರಕೃತಿಯನ್ನ ಮನಸಾರೆ ಅನುಭವಿಸುವ ಆರಾಧಿಸುವ ಮನಸ್ಥಿತಿ ಕೊಡುವುದು.

  ReplyDelete

ಒಂದಷ್ಟು ಚಿತ್ರಗಳು..