Saturday, March 17, 2007

ಇದು ನಿಜಾನೇ ಕಣ್ರೀ....

ನನಗಾಗಲೀ, ವರುಣನಿಗಾಗಲೀ, ಸುನಿಲನಿಗಾಗಲೀ ಇದನ್ನು ಸುಳ್ಳು ಎಂದು ಒಪ್ಪಿಕೊಳ್ಳಲು ಇಷ್ಟವೇ ಇರಲಿಲ್ಲ. ಕಣ್ಣಲ್ಲಿ ನೀರೂ ಸಹ ಬಂದುಬಿಟ್ಟಿತ್ತು ಒಮ್ಮೆ ನಂಗೆ - ಇವೆಲ್ಲಾ ಸುಳ್ಳು, ಇವನ್ನೆಲ್ಲಾ ನೋಡ್ಬೇಡಿ, ಅಂತ ನನ್ನ ಕಝಿನ್ ಗಿರೀಶ ಹೇಳಿದ್ದಾಗ. ಜೀವನದಲ್ಲಿ WWF (ಈಗ ಇದು WWE) ಗಿಂತ ಮುಖ್ಯವಾದದ್ದು ಬೇರೆ ಏನೂ ಇಲ್ಲ ಎಂಬ ಭಾವನೆ ಇತ್ತು, ನಾನು ವಿಮೆನ್ಸ್ ಪೀಸ್ ಲೀಗ್ ಶಾಲೆಯಲ್ಲಿ ಇನ್ನೂ ಆರನೇ ತರಗತಿಯಲ್ಲಿದ್ದಾಗ.ಕೇಬಲ್ ಟಿ.ವಿ. ಬಂದ ಹೊಸತು ನಮ್ಮ ಮನೆಯಲ್ಲಿ. ನಮ್ಮ ಎಲ್ಲ ಸ್ನೇಹಿತರ ಪೈಕಿ ನಮ್ಮ ಮನೆಯಲ್ಲೇ ಮೊದಲು ಕೇಬಲ್ ಟಿ.ವಿ. ಕನೆಕ್ಷನ್ ಬಂದಿದ್ದು. ಹಾಗಾಗಿ ಈ WWF - World Wrestling Federation ನ ನೋಡೋದಕ್ಕೆ ಸುನಿಲ, ವರುಣ ಇಬ್ಬರೂ ನಮ್ಮ ಮನೆಗೆ ಬರೋರು. ಬಿಟ್ಟ ಕೆಲಸ ಎಲ್ಲಾ ಬಿಟ್ಟು ಅದನ್ನೇ ನೋಡ್ತಾ ಇದ್ದೆವು. ನಮ್ಮ ಮನೆಯಲ್ಲಿ ಇದ್ದ ವಿ.ಸಿ.ಆರ್. ನ ಬಳಸುವ ಸಲುವಾಗಿ ಅಂಗಡಿಯಿಂದ WWF ವಿಡಿಯೋ ಕ್ಯಾಸೆಟ್ಟುಗಳನ್ನು ಬಾಡಿಗೆಗೆ ತಂದೂ ಸಹ ನೋಡಿದ್ದೇವೆ. ಆಗ ಸ್ಟಾರ್ ಟಿವಿಯವರ "ಪ್ರೈಮ್ ಸ್ಪೋರ್ಟ್ಸ್" (ಈಗಿನ ಸ್ಟಾರ್ ಸ್ಪೋರ್ಟ್ಸ್) ಚಾನೆಲ್ಲಿನಲ್ಲಿ ಪ್ರತಿ ಶುಕ್ರವಾರ ಒಂದು ಗಂಟೆಗಳ ಕಾಲ ಮಧ್ಯಾಹ್ನದ ಹೊತ್ತಿನಲ್ಲಿ ಬರುತ್ತಿದ್ದುದನ್ನು ನಾವು ತಪ್ಪಿಸಿಕೊಂಡರೆ ಆ ವಾರವೆಲ್ಲಾ ಮೂಡಿರುತ್ತಿರಲಿಲ್ಲ.

ಅವನು ನಮ್ಮ ಕಡೆ ಅಲ್ವೋ..

ವರುಣ ಹೀಗೊಂದು ಮಾತು ಹೇಳಿದ್ದ, ಇನ್ನೂ ಚೆನ್ನಾಗಿ ನೆನಪಿದೆ. ಅವನ ಮನೆಯ ಹತ್ತಿರ ಒಬ್ಬ ರವಿ ಅಂತ ಇದ್ದ. ಅವನನ್ನು ನಾವು "WWF" ಅಂತಲೇ ಕರೆಯುತ್ತಿದ್ದೆವು. ಅವನ ಜೊತೆ ಏನೋ ಮಾತನಾಡಿ ಮುಗಿಸಿದ ನಂತರ ಬದಿಗೆ ಕರೆದ ವರುಣ ಹೇಳಿದ್ದ, "ಅವನು ನಮ್ಮ ಕಡೆಯಲ್ಲವೋ... ಅವನು ಯೋಕೋಝುನಾ ಕಡೆ.. "ತುಂಬಾ ಗಂಭೀರವಾಗಿ ಹೇಳಿದ್ದ. ನನಗೆ ರವಿಯ ಕಂಡರೆ ಆಗಿನಿಂದಲೂ ಅಷ್ಟಕ್ಕಷ್ಟೇ... ಈಗ ನೆನೆಸಿಕೊಂಡರೆ ನಗು ಬರುತ್ತೆ!!


ಹೀಗೆ ಪರಿಣಾಮ ಬೀರಿತ್ತು, ಈ WWF ಎಂಬ ಮನರಂಜನಾ ಕುಸ್ತಿ ಕಾರ್ಯಕ್ರಮ, ನಮ್ಮ ಮೇಲೆ. ಲೆಕ್ಸ್ ಲೂಗರ್, ರೇಜರ್ ರಮಾನ್, ಒನ್ ಟು ತ್ರೀ ಕಿಡ್, ಇವರೆಲ್ಲಾ ಕುಸ್ತಿಯ ರಿಂಗಿನತ್ತ ಸಂಗೀತದೊಂದಿಗೆ ಬಂದರೆ ರೋಮಾಂಚನವಾಗುತ್ತಿತ್ತು. ಯೋಕೊಝುನಾ ಮತ್ತು ಅವನ ಸಂಗಡಿಗರು ಬಂದರೆ ಶಪಿಸುತ್ತಿದ್ದೆವು, ಸೋತು ಹೋಗಲಿ ಇವನು ಎಂದು. ಏನೋ ನಮ್ಮ ಆಸ್ತಿಗೆ ಪಾಲು ಬಂದವರಂತೆ ಅವರನ್ನು ದ್ವೇಷಿಸುತ್ತಿದ್ದೆವು. ಕತ್ತಲೆಯಲ್ಲಿ ಹೆದರಿಕೆಯುಂಟಾಗುವ ಸಂಗೀತದೊಂದಿಗೆ ಬರುತ್ತಿದ್ದ ಅಂಡರ್ ಟೇಕರ್ ಎಂಬ ದೆವ್ವದಂಥ ಮನುಷ್ಯನನ್ನು ನಿಜವಾಗಿಯೂ ದೆವ್ವವೆಂದೇ ನಂಬಿದ್ದೆವು. ಜಗತ್ತೇ ಮೆಚ್ಚಿ ಕೊಂಡಾಡುತ್ತಿದ್ದ ಹಿಟ್‍ಮ್ಯಾನ್ ಒಂದು ರೀತಿಯ ದೇವರಾಗಿದ್ದ ನನಗೆ. ರಾಜ್‍ಕುಮಾರ್ ಅಭಿಮಾನಿಗಳು ಹೇಗೆ ರಾಜ್‍ರನ್ನು ಅಭಿಮಾನದಿಂದ ಕಾಣುತ್ತಾರೋ ಅದರ ಹತ್ತರಷ್ಟು ಅಭಿಮಾನ ನನಗೆ ಹಿಟ್‍ಮ್ಯಾನ್ ಕಂಡರೆ ಇತ್ತು. He was everything to me!! ಕಣ್ತೆರದರೆ, ಕಣ್ಮುಚ್ಚಿದರೆ ಅವನೇ ಕಾಣುತ್ತಿದ್ದ. ಪ್ರೈಮ್ ಸ್ಪೋರ್ಟ್ಸ್ ಅಲ್ಲಿ ಒಂದೊಂದು ಸಲ ಮಧ್ಯರಾತ್ರಿ ಒಂದುವರೆಗೆ WWF ಪ್ರಸಾರವಾಗಿಬಿಡುತ್ತಿತ್ತು. ಅಲಾರಮ್ ಇಟ್ಟುಕೊಂಡು ಎದ್ದು ಅದನ್ನು ನೋಡಿ, ಸ್ವರ್ಗಕ್ಕೇ ಹೋಗಿಬಂದವರಂತೆ ಖುಷಿಯಾಗಿ ಮಲಗುತ್ತಿದ್ದೆ. ಹಿಟ್‍ಮ್ಯಾನ್ ಏನಾದರೂ ಸೋತಿದ್ದರೆ ನಿದ್ದೆಯೇ ಇಲ್ಲ. ಒಂದೇ ಕೊರಗು. ಅವನು ಮತ್ತೆ ಗೆಲ್ಲುವವರೆಗೂ!! ಅದು ನಿಜ ಎಂಬ ನಂಬಿಕೆ ಎಷ್ಟು ಚೆನ್ನಾಗಿತ್ತು! ಕೆಲವು ವಿಷಯಗಳೇ ಹಾಗೆ ಅಲ್ಲವೇ, ಅದು ಸುಳ್ಳಾಗಿದ್ದರೂ "ನಿಜ" ಎಂಬ ನಂಬಿಕೆ ಎಷ್ಟು ಸೊಗಸಾಗಿರುತ್ತೆ ಅಲ್ಲವೇ??


ಇದು ನಿಜಾನೇ ಕಣ್ರೀ....

ಬುದ್ಧಿವಿಕಾಸವಗುತ್ತಲೇ ಆಸೆಗಳು, ಆಸಕ್ತಿಗಳು, ಕನಸುಗಳು ಬದಲಾಗುತ್ತಾ ಹೋಗುತ್ತೆ. ಪ್ರೈಮರಿ ತರಗತಿಗಳಲ್ಲಿ ಅಷ್ಟೊಂದು ಮೇನಿಯಾ ಇದ್ದ WWF ಹೈ ಸ್ಕೂಲಿಗೆ ಬಂದಾಗ ಮರೆಯಾಗಿಹೋಗಿತ್ತು. ಅಷ್ಟು ಹೊತ್ತಿಗೆ ಅರ್ಥವಾಗಿಹೋಗಿತ್ತು, ಇವೆಲ್ಲಾ ಕೇವಲ entertainment showಗಳು ಎಂದು. ಇಲ್ಲಿ ನಡೆಯುವುದೆಲ್ಲ ಒಂದು frame-up ಎಂಬ ಭಾವನೆ ಬಂದು ಬಿಟ್ಟಿತು. ದೊಡ್ಡೋರೆಲ್ಲಾ ಹೇಳತೊಡಗಿದರು, ಅವರು ಹಣಕ್ಕಾಗಿ ಸಿನಿಮಾ ಥರಾ ಏನೇನೋ ಸ್ಟಂಟುಗಳು ಮಾಡ್ತಾರೆ ಅಷ್ಟೆ ಅಂತ. ನನಗೂ ಸ್ವಂತವಾಗಿ ಯೋಚಿಸುವ ಬುದ್ಧಿ ಬೆಳೆದಿತ್ತು. ಹುಡುಗಾಟಿಕೆ ಕಡಿಮೆಯಾಗುತ್ತಾ ಬಂದಿತು. ಟಿವಿಯಲ್ಲಿ WWF ನೋಡುವುದು ಕ್ರಮೇಣ ಕಡಿಮೆಯಾಗುತ್ತ ಬಂದು, ಒಂದು ದಿನ ನಿಂತೇ ಹೋಯಿತು. ಗಮನ Discovery Channelನತ್ತ ಹರಿಯಿತು. ಸಂಗ್ರಹಿಸಿದ್ದ ಇನ್ನೂರೈವತ್ತು WWF Superstarಗಳ ಫೋಟೋಗಳು ಜಿರಲೆಗಳ ಆಹಾರವಾಗಿಬಿಟ್ಟವು. Trump Cards ಅಂತ ಬರೋದು, ಅದನ್ನು ಆಡದ ದಿನವೇ ಇರಲಿಲ್ಲ ಪ್ರೈಮರಿ ತರಗತಿಗಳಲ್ಲಿ. ಆ ಕಾರ್ಡುಗಳೆಲ್ಲಾ ದಿಕ್ಕು ಕಾಣದೆ ದಿಕ್ಕಾಪಾಲಾಗಿ ಹೋದವು. ಬದುಕು WWF ಎಂಬುದನ್ನು ನನ್ನ ಸ್ಮೃತಿಪಥದಿಂದ ದೂರ ಮಾಡಿಬಿಟ್ಟಿತು.


ಇತ್ತೀಚೆಗಷ್ಟೇ ಒಂದು ಟ್ರೆಕ್ಕಿನಲ್ಲಿ ಡೀನ್ ಹಾಗು ಪವನ್ ಇಬ್ಬರೂ ಈ WWF ಬಗ್ಗೆ ಸುಮಾರು ಮಾತನಾಡಿ, ಅದು ಮನರಂಜನಾ ಕಾರ್ಯಕ್ರಮ ನಿಜ, ಆದರೆ, ಅದು ಸುಳ್ಳಲ್ಲ, ಆ ಸ್ಟಂಟುಗಳು ಸುಳ್ಳಲ್ಲ, ಅದು ಕೂಡ ಒಂದು ವೃತ್ತಿ ಅವರುಗಳದು, ಎಂದು ಹೇಳಿದರು. ನಾನು ಅಷ್ಟು ಸುಲಭವಾಗಿ ಒಪ್ಪಿಕೋತೀನಾ?? ಮನೆಗೆ ಬಂದ ಮೇಲೆ, ಅಂತರ್ಜಾಲವನ್ನೆಲ್ಲಾ ಜಾಲಾಡಿದೆ. ಹದಿನೈದು ವರ್ಷಗಳ ಕೆಳಗೆ ನೋಡುತ್ತಿದ್ದ ಕಾರ್ಯಕ್ರಮದ ಬಗ್ಗೆ ಮಾತುಕತೆ ನಡೆದ ಮೇಲೆ, ಅದನ್ನೆಲ್ಲಾ ಸವಿಯಾಗಿ ಮೆಲುಕು ಹಾಕಿಕೊಳ್ಳುವ ದೆಸೆಯಿಂದ ಏನೇನೋ ಹುಡುಕತೊಡಗಿದೆ. It was nostalgic!!


ಇದನ್ನು ಬರೆದೆನೇಕೆಂದರೆ..

ಈಗ WWF ಬದಲಾಗಿ WWE ಆಗಿದೆ. ಪ್ರೈಮ್ ಸ್ಪೋರ್ಟ್ಸ್ ಸ್ಟಾರ್ ಸ್ಪೋರ್ಟ್ಸ್ ಆಗಿದೆ. ಈಗ ಅದನ್ನೇನಾದರೂ ನೋಡಿದರೆ ಸಿನಿಮಾ ನೋಡಿದ ಹಾಗೆ ಆಗುತ್ತೆ. ಅಷ್ಟು ನಾಟಕೀಯವಾಗಿರುತ್ತೆ ಶೋಗಳು.

ಹೀಗೆ ಅಂತರ್ಜಾಲದಲ್ಲಿ ಹುಡುಕುತ್ತಿರುವಾಗ ಒಂದು ಬೇಸರದ ಸಂಗತಿ ಸಿಕ್ಕಿತು. ಹಿಟ್‍ಮ್ಯಾನ್‍ಗೆ ಸ್ಟ್ರೋಕ್ ಆಗಿದೆ! ಅಯ್ಯೋ.. ಇದೇನಾದರೂ ಹದಿನೈದು ವರ್ಷಗಳ ಕೆಳಗೆ ಆಗಿದ್ದಿದ್ದರೆ ನಾನು ಎಷ್ಟು ನೊಂದುಕೊಳ್ಳುತ್ತಿದ್ದೆನೋ.. ನನ್ನ ಹಿರಿಯಣ್ಣನಿಗೇನೇ ಏನೋ ಆಗಿದೆಯೇನೋ ಎಂಬಂತೆ ನೋವಾಗುತ್ತಿತ್ತೇನೋ.. ಕಣ್ಣು ಮುಂದೆ ಬಾಲ್ಯ ಬಂದು ಹೋಯಿತು. ವರುಣ, ನಾನು, ಸುನಿಲ, ಜೀವ ಹಿಡಿದುಕೊಂಡು ನೋಡುತ್ತಿದ್ದ, ಕಿರುಚಾಟ, ಎಕ್ಸೈಟ್‍ಮೆಂಟು, ಉತ್ಸುಕತೆಗಳಿಂದ ಬಿಟ್ಟ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದ ಕ್ಷಣಗಳು ನೆನಪಾದವು.


ಕುಸ್ತಿಪಟುಗಳಿಗೆ, ಜಿಮ್‍ಗಳಲ್ಲಿ ತಮ್ಮನ್ನು ತಾವು ಮಗ್ನರಾಗಿಸಿಕೊಳ್ಳೂವವರಿಗೆ, ಅತಿಯಾದ ವ್ಯಾಯಾಮ ಮಾಡುವವರಿಗೆ ಹೃದಯ ಹಾಗೂ ನರಗಳ ದೌರ್ಬಲ್ಯ ಬರುವುದು ಸರ್ವೇ ಸಾಮಾನ್ಯ ಎಂದು ಸಾಕಷ್ಟು ಕಡೆ ಓದಿದ್ದೇನೆ. ಈ WWF ಪಟುಗಳಿಗೆ ಈ ರೀತಿಯ ಕಾಯಿಲೆಗಳು ಕಟ್ಟಿಟ್ಟ ಬುತ್ತಿಯೆಂಬುದು ಸ್ವತಃ ಹಿಟ್‍ಮ್ಯಾನ್ ಬರೆದಿದ್ದಾನೆ. ಹಣದ ಜೊತೆಗೆ ಅನಾರೋಗ್ಯವನ್ನೂ ಚೆನ್ನಾಗಿ ಸಂಪಾದನೆ ಮಾಡಿರುತ್ತಾರೆ ಈ professional wrestlers.


http://www.brethart.com/

ಇದು ಸ್ವತಃ ಬ್ರೆಟ್ ಹಾರ್ಟ್ ಹಿಟ್‍ಮ್ಯಾನ್‍ನ ವೆಬ್‍ಸೈಟು. ನಿಮಗೆ ಆಸಕ್ತಿಯಿದ್ದರೆ ನೋಡಿ. ಇಲ್ಲಿ ಅವನ ಬರವಣಿಗೆಗಳೂ ಸಹ ಇವೆ. ತನ್ನ ಜೊತೆ ಗುದ್ದಾಡಿದ, ಕಾದಾಡಿದ ಕುಸ್ತಿಪಟುಗಳೆಲ್ಲ ತನ್ನ ಸ್ನೇಹಿತರೇ ಎಂದು ಅವನು ಬರೆದಿದ್ದಾನೆ. ಈತನ ಉದ್ಗಾರ ""The best there is, the best there was, and the best there ever will be"" ಆಗಿತ್ತು. ನಾವು ನೋಡುತ್ತಿದ್ದಾಗ ಆಡುತ್ತಿದ್ದ ಅನೇಕರು ಈಗ ಚಿತ್ರಪಟದಲ್ಲಿ ನೇತಾಡುತ್ತಿದ್ದಾರೆ. ಅನೇಕರು ಹಿಟ್‍ಮ್ಯಾನ್‍ನ ಹಾಗೆ ಕೈಕಾಲು ತಿರುಗಿಸಿಕೊಂಡು ಸ್ಟ್ರೋಕ್ ಹೊಡೆಸಿಕೊಂಡು ಕುಳಿತಿದ್ದಾರೆ. ಇವರು ಮಾಡಿದ್ದೆಲ್ಲಾ ಯಾವುದಕ್ಕೆ? ಹಣಕ್ಕಾಗಿ.. ಜನರಿಗೆ ಮನರಂಜನೆ ನೀಡುವುದಕ್ಕಾಗಿ.. ಅಷ್ಟೇ!!


- ಅ

17.03.2007
9.30PM
2 comments:

 1. ಉತ್ತಮವಾದ ಬರಹ ಅರುಣ್. ನಿಮ್ಮ ಗದ್ಯದ ಶೈಲಿಯ ಬಗ್ಗೆ ಹೊಟ್ಟೆಕಿಚ್ಚು ಉಂಟಾಗುತ್ತದೆ ;) beautiful

  ReplyDelete
 2. ಗುರುಗಳೇ, WWF/E ಬಗ್ಗೆ ನೆನಪುಗಳೆಲ್ಲವನ್ನೂ ಮನದಾಳದಿಂದ ಹೆಕ್ಕಿ ತೆಗೆದು ಜಾಲಾಡಿಸಿಬಿಟ್ಟಿತು ಈ ನಿಮ್ಮ ಲೇಖನ!
  WWF ನೋಡದ, ಟ್ರಂಪ್ ಕಾರ್ಡ್ ಆಡದ, ಅದರ ಬಗ್ಗೆ ಡಿಸ್ಕಸ್ ಮಾಡದ ದಿನಗಳೇ ಇರಲಿಲ್ಲ. ಒಬ್ಬೊಬ್ಬರ ಸ್ಟಾಟಿಸ್ಟಿಕ್ಸ್‍ನೂ ನಾಡಗೀತೆಯಷ್ಟೇ ಗಂಭೀರವಾಗಿ ಬಾಯಿಪಾಠ ಮಾಡಿಕೊಂಡಿದ್ದ ದಿನಗಳವು!
  ನಂತರ ಅದೆಲ್ಲವೂ ಸಿನಿಮಾದಂತೆಯೇ ಸ್ಟಂಟ್ಸ್ ಅಂತ ತಿಳಿದ ಮೇಲೂ ಕೆಲದಿನಗಳ ಮಟ್ಟಿಗೆ ಮನರಂಜನೀಯವಾಗಿಯೇ ಇತ್ತು ಕೂಡಾ!

  ಸೂಪರ್ ಲೇಖನ..

  ReplyDelete

ಒಂದಷ್ಟು ಚಿತ್ರಗಳು..