Wednesday, March 14, 2007

ಮರೆಗುಳಿ ಮನುಜ..

ಮರೆವಿಲ್ಲದಿದ್ದರೆ ನಾವು ಬದುಕಿರಲು ಸಾಧ್ಯವೇ ಇಲ್ಲ. ಸೋಲುಗಳನ್ನು, ನೋವುಗಳನ್ನು, ಸಾವುಗಳನ್ನು ಮರೆಯುವಂತೆ ಮಾಡಿ ಕಾಲ ನಮ್ಮನ್ನು ಬದುಕಿನ ಪಯಣ ಧೈರ್ಯವಾಗಿ ಮುಂದುವರಿಸಲು ಸಹಾಯ ಮಾಡುತ್ತೆ. ಮರೆವು ಮನುಷ್ಯನಿಗೆ ಪ್ರಕೃತಿಯ ಬಹು ಮುಖ್ಯ ವರಗಳಲ್ಲಿ ಒಂದು.

ಆದರೆ ಕಾಲಕ್ರಮೇಣ ಮರೆತರೆ ಅದು ಸ್ವಾಭಾವಿಕ. ಹದಿನೇಳು ವರ್ಷಗಳ ಕೆಳಗೆ ಅಪ್ಪ ಸತ್ತಿದ್ದ ದಿನವು ಇನ್ನೂ ಕಣ್ಣು ಮುಂದೆ ಕಟ್ಟಿದ್ದ ಹಾಗಿದ್ದರೂ ಅಂದು ಆದ ನೋವು ಇಂದು ಆಗುವುದಿಲ್ಲ, ಯಾಕೆಂದರೆ, ಆ ನೋವನ್ನು ಮರೆಸಿದೆ ಕಾಲ. ನಲ್ಲೆಯು ತೊರೆದು ಹೋದ ದಿನ ಬಂದ ಅಳು ಇಂದು ಬರುವುದಿಲ್ಲ, ಯಾಕೆಂದರೆ, ಆ ಅಳುವನ್ನು ಕಾಲ ಮರೆಸಿದೆ. ಕಾಲೇಜಿನ ಪರೀಕ್ಷೆಗಳಲ್ಲಿ ಅನುತ್ತೀರ್ಣನಾಗಿ ಸೊತು ಸುಣ್ಣ ಆಗಿದ್ದರ ಬಗ್ಗೆ ಈಗ ಚಿಂತೆಯಿರುವುದಿಲ್ಲ, ಯಾಕೆಂದರೆ ದಿಕ್ಕು ದಾರಿ ಬದಲಾಗಿ ಕಾಲ ಆ ಸೋಲನ್ನು ಮರೆಸಿರುತ್ತೆ! ಇವೆಲ್ಲಾ ಸ್ವಾಭಾವಿಕ ಮರೆವು. ದಿನಗರುಳುದಂತೆ, ನೆನಪಿನಲ್ಲಿದ್ದರೂ, ತೀವ್ರತೆಯನ್ನು ಹೊಂದಿರದ ಸಂಗತಿಗಳು. ಆದರೆ ಅಸ್ವಾಭಾವಿಕವಾದ ಮರೆವು?


ಕೆಲವರಿಗೆ ಬರುತ್ತಲ್ಲಾ.. ಆಲ್ಜೈಮರ್ಸ್ ಕಾಯಿಲೆ, ಆಮೆನೀಸಿಯಾ.. Alzheimer's Disease ಬಗ್ಗೆಯಂತೂ ಪತ್ರಿಕೆಗಳಲ್ಲಿ ಸಿನೆಮಾಗಳಲ್ಲಿ ನೋಡುತ್ತಲೇ ಇರ್ತೀವಿ. ಈಗಿನ ಕಾಲದಲ್ಲಿ ಇದು ತುಂಬಾ ಹೆಚ್ಚುತ್ತಿದೆಯಂತೆ ಬೇರೆ - ಮನಶ್ಶಾಸ್ತ್ರಜ್ಞರು ಹೇಳುತ್ತಿದ್ದಾರೆ. ಸಕಲವನ್ನೂ ಮರೆತು ನಿರ್ಜೀವ ಜೀವಿಯಾಗಿಬಿಡುವ ಕಾಯಿಲೆ! ಚಿತ್ರದಲ್ಲಿನ ಹಸಿರು ಜಾಗ ಸಂಪೂರ್ಣ ಬರಿದಾಗಿ ಹೋಗಿರುತ್ತೆ ಅವರಿಗೆ. ಈ ಕ್ಷಣ ನೀನು ಆಪ್ತಮಿತ್ರ, ಮುಂದಿನ ಕ್ಷಣ ನೀನೊಬ್ಬ ಅಪರಿಚಿತ! ಈ ಕಾಯಿಲೆ ಬಗ್ಗೆ ಟೆಕ್ನಿಕಲ್ ಆಗಿ ಹೇಳಿ ಬೋರ್ ಹೊಡೆಸಿಕೊಳ್ಳೋದು ಬೇಡ. ಅದಕ್ಕೆ ನಮಗೆ ಲಕ್ಷಾಂತರ ವೆಬ್‍ಸೈಟುಗಳಿವೆ ತಿಳಿಸಿಕೊಡಲು. ಈ ಕಾಯಿಲೆಯಿಂದ ನರಳುತ್ತಿರುವವರನ್ನು ಇಬ್ಬರನ್ನಷ್ಟೇ ಭೇಟಿ ಮಾಡಿದ್ದೇನೆ ಇದುವರೆಗೂ. ಸಾಕಪ್ಪಾ ಸಾಕು. BLACK ಸಿನಿಮಾದ ಬಿಗ್ ಬಿ ಏನೂ ಇಲ್ಲ ಇವರುಗಳ ಮುಂದೆ ಎನ್ನಿಸಿಬಿಟ್ಟಿತು. ಈ ಕಾಯಿಲೆಗೆ ನಮ್ಮ ಆಹಾರ ಪದ್ಧತಿಗಳೂ, ಜೊತೆಗೆ ಪರಿಸರವೂ ಕಾರಣ ಎಂದು ತಿಳಿದು ಅಚ್ಚರಿಯೂ ಆಯಿತು. ಇದೇನಪ್ಪಾ, ನಮಗೆಲ್ಲಾ ವರವಾದ ಮರೆವು ಇವರಿಗೆ ಘೋರ ಶಾಪವೆನಿಸದೆ ಇರುವುದಿಲ್ಲ ನೀವೇನಾದರೂ ಆಲ್ಜೈಮರ್ಸ್ ರೋಗಿಯನ್ನು ನೋಡಿದಾಗ. ಅವರಿಗೆ ಮಾತನಾಡುವುದು ಹೇಗೆ ಎಂಬುದೂ ಸಹ ಮರೆತು ಹೋಗಿರುತ್ತೆ. ನೆನಪು ಅಂದರೇನು ಎಂಬುದೇ ಮರೆತು ಹೋಗಿರುತ್ತೆ.


ಈಗ ಈ ಕಾಯಿಲೆಗಳನ್ನು ಬದಿಗಿಡೋಣ. ಇದು ಪ್ರಕೃತಿಯ ಶಾಪ ಎಂದು ಪರಿಗಣಿಸಿದ್ದಾಯಿತಲ್ಲಾ.. ಇದು ನಮ್ಮ ಕೈ ಮೀರಿದ್ದು. ನನ್ನಂಥವರ ಶಾಪವೇನೆಂಬುದನ್ನು ಬರೆಯಲು ಇಷ್ಟೆಲ್ಲಾ ಪೀಠಿಕೆ ಹಾಕಿದೆ. ಈ ಮರೆಗುಳಿತನ ನನ್ನಲ್ಲೂ ಬಂದು ನೆಲೆಸಿ ನನ್ನನ್ನು ಸಿಕ್ಕ ಸಿಕ್ಕ ಹಾಗೆ ಅವಮಾನಿಸಿಬಿಟ್ಟಿದೆ. ಮರೆಗುಳಿತನ ಎಂದರೆ ಬರೀ absent mindedness ಅಲ್ಲ. ಪಿಯುಸಿಯ ಜೀವಶಾಸ್ತ್ರದ ಪಾಠಗಳನ್ನು ಚಾಚೂತಪ್ಪದೆ ಇನ್ನೊಮ್ಮೆ ಪಾಠ ಮಾಡಬಲ್ಲೆ, ಆದರೆ ಮೊನ್ನೆ ಓದಿದ ನೆಟ್ವರ್ಕ್ಸು ಪರೀಕ್ಷೆಯಲ್ಲಿ ಮರೆತೇ ಹೋಗಿತ್ತು. ಇದರ ಕಥೆ ಹಾಗಿರಲಿ. ಇನ್ನೊಂದು ದೊಡ್ಡ ಸಮಸ್ಯೆಯೆಂದರೆ, ಈ ಬೀಗದ ಕೈ ಮತ್ತು ಕನ್ನಡಕಗಳನ್ನು ಮರೆಯುವುದು. "ಎಲ್ಲಿಟ್ಟುಬಿಟ್ಟೆನಪ್ಪಾ.." ಈಗ ಐದು ನಿಮಿಷಗಳ ಕೆಳಗೆ ಇಟ್ಟೆ. ಆದರೆ ಎಲ್ಲಿಟ್ಟೆ ಅನ್ನೋ ನೆನಪು ಇಲ್ಲವಲ್ಲಾ.. ಊರೆಲ್ಲಾ ಪರೆದಾಟ.. ಆಮೇಲೆ ಗೊತ್ತಾಗುತ್ತೆ ಕನ್ನಡಕವನ್ನು ಎಲ್ಲೂ ಇಟ್ಟಿಲ್ಲ, ಹಾಕಿಕೊಂಡೇ ಇದ್ದೇನೆ! ಬೀಗದ ಕೈ ಗಾಡಿಯಲ್ಲೇ ಚುಚ್ಚಿ ಬಂದಿದ್ದೇನೆ, ತೆಗೆದೇ ಇಲ್ಲ ರಾತ್ರಿ ಮಲಗುವಾಗ. ಬೀಗವನ್ನೂ ಹಾಕಿಲ್ಲ.


ಬಹಳ ಚಿತ್ರಹಿಂಸೆ ಕೊಟ್ಟ ಮರೆವೆಂದರೆ ನನಗೆ, ಹುಟ್ಟುಹಬ್ಬಗಳದ್ದು. ನನ್ನ ಹುಟ್ಟುಹಬ್ಬಕ್ಕೆ ಸರಿಯಾಗಿ ಎಲ್ಲರೂ ನನ್ನ ನೆನೆಸಿಕೊಂಡು ರಾತ್ರಿ ಹನ್ನೆರಡಕ್ಕೆ, ಬೆಳಿಗ್ಗೆ ನಾಕಕ್ಕೆ, ಆರಕ್ಕೆಲ್ಲಾ ಫೋನಾಯಿಸುತ್ತಾರೆ ಮಿತ್ರರು. ಮನೆಗೆ ಬಂದು ಉಡುಗೊರೆ ಕೊಡುತ್ತಾರೆ. ಒಬ್ಬರೂ ಮರೆಯೋದಿಲ್ಲ ನನ್ನ ಹುಟ್ಟುಹಬ್ಬವನ್ನು. ಜಗತ್ತಿನ ಅತಿ ದೊಡ್ಡ ದುರಂತವನ್ನು ಯಾರೂ ಮರೆಯೋದಿಲ್ಲ ನೋಡಿ. ನೆನಪು ಮಾಡಿಕೊಂಡು ಉಡುಗೊರೆ ಕೊಡ್ತಾರೆ. ಆದರೆ, ನನಗೆ ಈ dateಗಳು ಎಂದರೆ ಅದೆಲ್ಲಿಂದ ಬಂದುಬಿಡುತ್ತೋ ಮರೆವು. ಫೋನಿನಲ್ಲಿ ಅಲಾರಮ್ಮು ಇಟ್ಟುಕೊಂಡಿದ್ದರೂ ಅದು ಹೊಡೆದುಕೊಂಡಾಗ ಇನ್ನು ಐದು ನಿಮಿಷದಲ್ಲಿ ಅವರಿಗೆ ಫೋನ್ ಮಾಡಿ ವಿಷ್ ಮಾಡೋಣ ಎಂದುಕೊಳ್ಳುತ್ತೇನೆ, ಅಷ್ಟೆ. ಐದು ನಿಮಿಷ ಅಲ್ಲ, ಐದು ಗಂಟೆಗಳಾದರೂ ನೆನಪಿಗೆ ಬರೋದಿಲ್ಲ. ಹುಟ್ಟುಹಬ್ಬಗಳಿಗೆ ಮಾತ್ರ ಹೀಗೆ ಆಗೋದು. ಇದೆಂಥಾ ಶಾಪ?


ನಾನು ನಿಮ್ಮ ಹುಟ್ಟುಹಬ್ಬಗಳಿಗೆ wish ಮಾಡದೇ ಇದ್ದಲ್ಲಿ ನನ್ನ ಮೇಲೆ ನಿಮ್ಮ ಕ್ಷಮೆಯಿರಲಿ. ನಿಮಗೆ wish ಮಾಡದೇ ಇರಬಹುದು, ಆದರೆ ಆ wishವಾಸ ಎಂದೆಂದೂ ನಿಮ್ಮ ಮೇಲೆ ಇರುತ್ತೆ. ಇದನ್ನು ಒಂದು desclaimer notice ಅಂತ ನಾನು ಬರೆದಿಲ್ಲ. ಮೊನ್ನೆ ಬಾಲ್ಯ ಸ್ನೇಹಿತೆ ಸುಷ್ಮಾಳ ಹುಟ್ಟುಹಬ್ಬಕ್ಕೆ wish ಮಾಡೋದನ್ನೇ ಮರೆತು, ಅವಳೇ ನನಗೆ ರಾತ್ರಿ ಹತ್ತು ಗಂಟೆಗೆ ಫೋನ್ ಮಾಡಿ, "ಅರುಣ, ನಂಗೆ wish ಮಾಡೋ.." ಎಂದು ಹೇಳಿದಾಗ ಚುರುಕ್ಕೆಂದ ಮನಸ್ಸು ಇದನ್ನು ನನ್ನಿಂದ ಬರೆಯಿಸಿತಷ್ಟೇ.. ನನಗೆ ಆಲ್ಜೈಮರ್ಸ್ ಬರುವ ಮುನ್ನ ಇದನ್ನೆಲ್ಲಾ ಬರೆದುಬಿಡೋಣ ಎಂದು ಬರೆದುಬಿಟ್ಟೆ!
14.03.2007
12PM


5 comments:

 1. ನಿಮಗೆ wish ಮಾಡದೇ ಇರಬಹುದು, ಆದರೆ ಆ wishವಾಸ ಎಂದೆಂದೂ ನಿಮ್ಮ ಮೇಲೆ ಇರುತ್ತೆ.

  ee melina line sooooooper...ninge Alzheimer's Disease baralla..dont worry maadkoLi ;-)

  ReplyDelete
 2. ವಾ...... ನೀವು ಸರ್ವಜ್ಞಾನಿ.......

  ReplyDelete
 3. This comment has been removed by the author.

  ReplyDelete
 4. ನಿಮ್ಮ "ಮರೆಯುವ ಮುನ್ನ' ;) ಅಂಕಣ ಚನ್ನಾಗಿದೆ. ಮರೆವಿನ ವಿಷಯದಲ್ಲಿ ನಾನು ನಿಮ್ಮ ಅಣ್ಣನೇ ಸರಿ. ಒಂದು ಕಿವಿಮಾತು, ಏನಾದರೂ ಮರೆಯಿರಿ, ಆದರೆ ನಿಮ್ಮ ಪತ್ನಿಯ (ಅಥವ ಭಾವೀ) ಜನ್ಮದಿನವನ್ನು ಮಾತ್ರ ಮರೆಯಬೇಡಿ, ಜೋಕೆ

  ReplyDelete
 5. ಸದ್ಯ ಈ article ನ ಬರೆಯುವಾಗ ಏನು ಬರೆಯುತ್ತಿದ್ದಿರಿ ಅಂತ ಮರೀಲಿಲ್ಲವಲ್ಲ...ಪುಣ್ಯ !! ;)

  ಈ ಶಾಪಕ್ಕೆ ವಿಮೋಚನೆ ಇಲ್ವಾ ಗುರುಗಳೇ ?

  ReplyDelete

ಒಂದಷ್ಟು ಚಿತ್ರಗಳು..