Tuesday, March 06, 2007

ಬೋನ್‍ಜೂರ್‍ನೇ...

ಇದೊಂದು ಬಾಕಿ ಇತ್ತು ನೋಡಿ.. ಅಮ್ಮನ ಅಸಮಾಧಾನ ಮುಗಿಲೆತ್ತರಕ್ಕೇರಿಬಿಡುತ್ತಿತ್ತು ನಾನು "ಫ್ರೆಂಚ್ ಕ್ಲಾಸ್"ಗೆ ಸೇರಿಕೊಳ್ಳುತ್ತಿದ್ದೇನೆ, ಹಣ ಕೊಡು ಎಂದು ಕೇಳಿದ್ದಿದ್ದರೆ... ಎಂಟನೇ ತರಗತಿಯಲ್ಲಿದ್ದಾಗ ವ್ಯಾಯಾಮಶಾಲೆಗೆ ಸೇರಿಕೊಳ್ಳುತ್ತೇನೆಂದು ಹೇಳಿ, ಎಂಭತ್ತು ರೂಪಾಯಿಯನ್ನು ನ.ರಾ. ಕಾಲೋನಿಯ ಗರಡಿಗೆ ಕಟ್ಟಿ, ಒಂದು ದಿನವೂ ಹೋಗಲಿಲ್ಲ. ಅದನ್ನು ಅಮ್ಮ ಮರೆತೇ ಇಲ್ಲ. ಅದಾದ ಮೇಲೆ, ಯಾವಾಗ ಹಣ ಕೇಳಿದ್ದೆನೋ, ಆಗೆಲ್ಲಾ ಇದನ್ನೇ ನೆನಪು ಮಾಡಿಕೊಂಡು, "ಆ ಜಿಮ್‍ಗೆ ತೆತ್ ಬಂದ್ಯಲ್ಲಾ... ಕೊಡಲ್ಲ ಹೋಗ್" ಎಂದು ಬೈಯ್ಯೋರು.


ಒಂದು ವಯಸ್ಸಿನವರೆಗೂ, ಅಂದರೆ ಕಾಲೇಜು ಮುಗಿಯುವವರೆಗೂ ಮನೆಯಲ್ಲಿ ತಂದೆ/ತಾಯಿಗಳು ಹಣ ಕೊಡಲಿಲ್ಲ ಅಂತ ತುಂಬಾ ಬೇಜಾರು, ಸಿಟ್ಟು ಆಗುತ್ತೆ. ಆದರೆ, ಕಾಲೇಜು ಮುಗಿದ ನಂತರವೂ ಅವರೇನಾದರೂ ಹಣ ಕೊಟ್ಟರೆ, "ಅಯ್ಯೋ ಯಾಕಪ್ಪಾ ಕೊಡುತ್ತಾರೆ.." ಅನ್ಸುತ್ತೆ. ಜೇಬು ಖಾಲಿಯಿದ್ದರೂ ಅಪ್ಪ-ಅಮ್ಮ ಕೊಡುವ ಹಣ ನಮಗೆ ಬೇಡ. ಕಾಲೇಜು ವಿದ್ಯಾಭ್ಯಾಸ ಮುಗಿದ ನಂತರ ನಮಗೆ ಬೇಕಾದ್ದು ಅಮ್ಮ ಕೊಡುತ್ತಿದ್ದ ಹಣವಲ್ಲ. ನಾವೇ ನಮ್ಮ ಕೈಯ್ಯಾರೆ ಸಂಪಾದಿಸಿದ ಪೈಸೆ!! ಅಷ್ಟು ಸಿಕ್ಕರೆ ಸಾಕು!

ಹಬ್ಬ ಹರಿದಿನಗಳಲ್ಲಿ ಸಂಬಂಧಿಕರು ಉಡುಗೊರೆಯಾಗಿ ಹಣ ಕೊಡುತ್ತಿದ್ದರು ಚಿಕ್ಕನ್ನಲ್ಲಿ. ಕೆಲವು ಸಲ ಸುಮ್ಮನೆ ಇಟ್ಕೋ ಬೇಕಾಗುತ್ತೆ ಅಂತ ಕೊಡೋರು.. ಬಹಳ ಸಂತೋಷವಾಗಿ ಹಿಗ್ಗಿಹೋಗಿ ಕುಣಿದು ಕುಪ್ಪಳಿಸಿ ಹೋಗಿ ಅಂಗಡಿ‍ಗೆ ಸುರಿಯುತ್ತಿದ್ದೆವಲ್ಲವೇ ಆ ಹಣವನ್ನು! ಆದರೆ, ಈಗ? ಹಾಗೇನಾದರೂ ಯಾರಾದರೂ ಹಣವನ್ನು ಸುಮ್ಮನೆ ಕೊಡುತ್ತಾರೆ ಅಂದರೆ ಅದು ತಡೆಯಲಾರದ ಅವಮಾನ ಅನ್ನಿಸಿಬಿಡುತ್ತೆ.. ಅದರಲ್ಲೂ ಕೆಲಸದಲ್ಲಿ ಇಲ್ಲದಿರುವವನಿಗೆ!! ಕೊಡುವವರು ಅವಮಾನಿಸಬೇಕೆಂಬ ಉದ್ದಿಶ್ಯದಿಂದ ಕೊಟ್ಟಿರೋದಿಲ್ಲ. ಆದರೆ, ನಮ್ಮ ego ನಮ್ಮನ್ನು ಚುಚ್ಚಿ ಕೊಂದು ಬಿಡುತ್ತೆ!

ಇಂಥಾ ಅವಮಾನಗಳನ್ನು ನಾನು ಬೇಕಾದಷ್ಟು ಅನುಭವಿಸಿದೀನಿ ಬಿಡಿ. ಆದರೂ, ಪುಸ್ತಕಗಳಿಗೆ, ವಿದ್ಯೆಗೆ ಬೇಡಲು, ನನಗೆ ಎಂದೂ ಅವಮಾನ ಆಗಿಲ್ಲ. ಗುರುನಾಥನ ದೆಸೆಯಿಂದ ನಾನು Alliance Francaise ಗೆ ಸೇರಿಕೊಂಡು ಇವತ್ತಿಗೆ ಎರಡು ತಿಂಗಳುಗಳಾದುವು.. ಇನ್ನೇನು ನಾಳೆ ಒಂಭತ್ತನೇ ತಾರೀಖು ಪರೀಕ್ಷೆ. ಕಾಲೇಜು ದಿನಗಳಿಂದಲೂ ಗುರುನಾಥ ಇನ್ನಿಲ್ಲದ ಹಾಗೆ ಒಂದು ಪರದೇಶೀ ಭಾಷೆಯನ್ನು ಕಲಿತುಕೋ ಎಂದು ಹೇಳುತ್ತಿದ್ದ. ಅದನ್ನು ಯಾಕೆ ನಾನು ಕೇಳಲಿಲ್ಲವೋ ಎಂದು ನನಗೆ ಸಾಕಷ್ಟು ಬಾರಿ ಅನ್ನಿಸಿದೆ. ಸಕಲದರಲ್ಲೂ ಪ್ರೋತ್ಸಾಹಿಸುತ್ತಾ ಇರುವ ಗುರುನಾಥನೇ ನನ್ನನ್ನು ಈ ಹೊಸಭಾಷೆಯ ಕಲಿಕೆಗೆ ಸೇರಿಸಿದನು. ಸಾಹಿತ್ಯಪ್ರೇಮಿಯಾದ ನನಗೆ ಒಂದು ಸುಂದರ, ಮಧುರ ಭಾಷೆಯ ಪರಿಚಯ ಮಾಡಿಕೊಳ್ಳಲು ಅಣಿಮಾಡಿಕೊಟ್ಟನು. Virtually, ಕಾಣದ ದಾರಿಯೊಂದನ್ನರಸಿದ್ದ ನನಗೆ ಹೊಸ ದಾರಿಯೊಂದನ್ನು ಕಲ್ಪಿಸಿಕೊಟ್ಟ!!


ಹತ್ತು ವಿದ್ಯಾರ್ಥಿಗಳನ್ನೊಳಗೊಂಡ ನಮ್ಮ ಫ್ರೆಂಚ್ ತರಗತಿಯ ಗುರುವಿನ ಹೆಸರು ಲಕ್ಷ್ಮಿಯೆಂದು. ಬಹುಭಾಷಾಪ್ರವೀಣೆ. ಪಾಠ ಮಾಡುತ್ತಿದ್ದರೆ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಹೇಳಿಕೊಡುವ ಟೀಚರಿನಂತೆ ಭಾಸವಾಗುತ್ತೆ. ನಾವೆಲ್ಲಾ, ಸಂಖ್ಯೆಗಳನ್ನು ಒಂದರಿಂದ ನೂರರ ವರೆಗೆ ಜೋರಾಗಿ ಓದುತ್ತಿದ್ದರೆ, "ಅಂ.. ದ್.. ಥ್ರ್ವಾ.. ಖಾತ್ರ್.. ಸ್ಯಾಂಕ್..." ಅಂತ... ನರ್ಸರಿ ತರಗತಿಗಳೂ ಸಹ ನೆನಪಾಗುತ್ತೆ!

"ಜ ಮಾಪೆಲ್ ಅರುಣ್, ಎ ವೂ?" ಅಂತ ಸಂಭಾಷಣೆ ಮಾಡುತ್ತಿದ್ದರೆ ಅಕ್ಕನ ಮಗು ಪರ್ಣಿಕಾಳ ಇಂಗ್ಲೀಷು ಸಂಭಾಷಣೆ ನೆನಪಾಗುತ್ತೆ.. "My name is Arun, what is your name?" ಅಂತ!! ಕ್ಲಾಸಿನಲ್ಲಿ ಇಂಥಾ ಸಂಭಾಷಣೆಗಳನ್ನು ಮಾಡಿ ವರ್ಷಾನುಗಟ್ಟಲೆ ಆಗೋಗಿದ್ದವು. ಒಂದು ಸುಮಧುರ ನೆನಪನ್ನು, ನನ್ನನ್ನು ಮತ್ತೆ ವಿದ್ಯಾರ್ಥಿಯನ್ನಾಗಿಸುವುದರ ಮೂಲಕ Alliance Francaise, ಉಡುಗೊರೆಯಾಗಿ ಕೊಟ್ಟಿದೆ.ಒಂದು ಅಳುಕು ಮಾತ್ರ ನನಗೆ ಎಲ್ಲಿ ಹೋದರೂ ಉಳಿಯೋದೇನೆಂದರೆ, ಯಾವುದೇ ಕ್ಲಾಸಿಗೆ ಹೋದರೂ ನಾನೇ ಹಿಂದುಳಿದ ವಿದ್ಯಾರ್ಥಿ! ಶಾಲೆಗಳಲ್ಲಿ ಹೀಗಿರಲಿಲ್ಲ. ಅರುಣ ಅಂದರೆ ಬಹಳ ಬುದ್ಧಿವಂತ ಎನ್ನೋರು. ಕಾಲೇಜಿಗೆ ಬಂದ ಮೇಲೆ ಅದೇನಾಯಿತೋ ಏನೋ! ನ್ಯಾಷನಲ್ ಕಾಲೇಜು ನನ್ನ ಪಾಲಿನ ಅತಿದೊಡ್ಡ ಶತ್ರುವಾಗಿ, ನನ್ನ ಅಂಕಗಳನ್ನೆಲ್ಲಾ ನುಂಗಿ ಹಾಕಲು ಆರಂಭಿಸಿ, ನಾನು "poor student" ಪಟ್ಟಿಯಲ್ಲಿ ಸೇರಿಬಿಟ್ಟೆ. ಆ ಸಂಪ್ರದಾಯ ಈಗಲೂ ಮುಂದುವರೆಯುತ್ತಿದೆ. ಬರೆದ ಪರೀಕ್ಷೆಗಳಲ್ಲಿ ಅನುತ್ತೀರಣನಾಗುವುದು, ಕ್ಲಾಸಿನಲ್ಲಿ ಪಾಠ ಅರ್ಥವಾಗದೆ ಮುಖ ಮುಖ ನೋಡುವುದು, ಇಂಟರ್ವ್ಯೂಗಳಲ್ಲಿ "better luck next time" ಅಂತ ಹೇಳಿಸಿಕೊಳ್ಳುವುದು, ಪ್ರೀತಿಸುವವರ ಕೈಯಲ್ಲಿ "ನೀನೊಬ್ಬ ಅಪ್ರಯೋಜಕ" ಎಂದು ಹೇಳಿಸಿಕೊಳ್ಳುವುದೆಲ್ಲಾ ಬಹಳವಾಗಿ ಅಭ್ಯಾಸವಾಗಿದ್ದಾಗಲೂ ಅದ್ಯಾವ ಭಂಡ ಧೈರ್ಯ ನನ್ನನ್ನು ಗುರುನಾಥನ ಪ್ರಚೋದನೆಗೆ ತಲೆಯಾಡಿಸಿತೋ ಗೊತ್ತಿಲ್ಲ. ಈಗ A1 levelನ ಮುಗಿಸುವುದರಲ್ಲಿದ್ದೇನೆ. Hopefully, ಇದಕ್ಕೆ ಯಾವ ಅಡೆತಡೆಗಳೂ ಬಾರದಿರಲಿ. ಆಸೆ ಪಟ್ಟು ಕಲಿಯುತ್ತಿದ್ದೇನೆ.


ನೆಗಟಿವಿಟಿಯು ಅಭ್ಯಾಸವಾಗಿದ್ದಾಗಲೂ ಪಾಸಿಟಿವಿಟಿ ತುಂಬುವಂಥ ಗುರುನಾಥರು ಇರುತ್ತಾರೆ.. ಶ್ರದ್ಧೆ, ತಾಳ್ಮೆ, ಆಸೆ, ಸತ್ಯ, ನಿಷ್ಠೆ ಇದ್ದರೆ ಒಂದಲ್ಲಾ ಒಂದು ದಿನ ಯಶಸ್ಸು ಸಂಪಾದಿಸಬಹುದೆಂದು ನನ್ನ ಅಭಿಪ್ರಾಯ, ಎಲ್ಲರಷ್ಟು ಬೇಗ ಅಲ್ಲದಿದ್ದರೂ....


ಬೋನ್‍ಜೂರ್‍ನೇ...


-ಅ
06.03.2006
2AM

5 comments:

 1. ಬೇಗ್ಬೇಗ ಫ್ರೆಂಚ್ ಕಲ್ತು ಒಂದು ಆನ್‍ಲೈನ್ ಕೋರ್ಸ್ ಶುರು ಮಾಡಿ ನಮ್ಗೆಲ್ಲಾ ಫ್ರೆಂಚ್ ಕಲ್ಸಿ... ಅದ್ಸರೀ, ಬೋನ್‍ಜೂರ್‍ನೇ ಅಂದ್ರೆ ಏನು?

  ReplyDelete
 2. all the very best :)
  ನೀನು ಖಂಡಿತ ಚೆನ್ನಾಗಿ ಮಾಡ್ತಿಯ.... don't worry... :)

  ReplyDelete
 3. bahala "touching" aarticle. naavella namma jeevandalli ee thara yeshto"bad phase" gallanna kaanodhu idhe.aadhre ivellakintha mukhya yenandre,naavu namma mele iruva "confidence" na ittukondu ee tharada kastha paristhi-indha horagade baruvudhu. ninage ninna college vidyaabyaasada time-nalli aathara incindents aagdhe iddhidhre ninna volage french kaliyo aasakthi huttuthirlilveno gothilla..."failure is the stepping stone for success" antha helthaare..
  yella bonne idhe ! all the best !

  ReplyDelete
 4. chenaagi bareetheera ri...ene aadru...'aagodella volledakke' annuvudu nanna nambike...neevu collegealli 'good student' aagi..engineering maadi..'volle' ankagalanna thegediddare..ivaaga ghulamana tharaha yaavdo software co. nalli irthidrenoo eno...naanu heege...cet alli yaavdooo rank bandaaga...swalpa 'down' aagidde.. aadare..aa keela 'rank' kaaranadinda..i got into a field in which i found myself perfect..ivaaga...naanu haagu nanna thande thaayi/maneyavaru ellarigu khushi.....nanage daridra cet rank banthalla..endu...aagodella volledakke...nanna nambike...

  ReplyDelete
 5. Yaavde vidye aadroo yavatto vyartha alla, haage bhashe noo ashte ... munde yaavattadroo chinese noo kalto :-) ... Jokes apart, language is a 'way' to express. School nalli shyamala missu namge marks thogondre maathra 'good student' anskoLodu annodakkintha hechchu heLkottidaare antha nanna anisike. Neenu sampadane shuru maaDi, nanna duddu keLodu nilsbitre nan manassige tumba kashta aaguththe kano ... hope you will continue to ask me. Ninge duddu kododu nanna hakku ... adanna kithkondre supremem court ge hogteeni. Neenu french classes na eegle mugsalla bidu, keep doing the higher levels :)

  ReplyDelete

ಒಂದಷ್ಟು ಚಿತ್ರಗಳು..