Monday, February 19, 2007

ತೇಜಸ್ವಿಯ ಕಥೆಯೂ.. ನಮ್ಮ ಹೈಟೆಕ್ ಸಿಟಿಯೂಗೊತ್ತು-ಗುರಿಯಿಲ್ಲದೆ ಬೆಳೆಯುತ್ತಿದೆ ನಮ್ಮ ಬೆಂಗಳೂರು. ಕೆಂಗೇರಿಗೆ ಹೋಗಬೇಕೆಂದರೇನೇ ವಿಪರೀತ ಕಷ್ಟವಾಗುತ್ತಿತ್ತು, ಬಸ್ಸು ಸಿಗುತ್ತಿರಲಿಲ್ಲ, ಬೆಳಿಗ್ಗೆ ಹೊರಟರೆ ಸಂಜೆ ಹಿಂದಿರುಗುವಂತಿತ್ತು. ಕೆಂಗೇರಿಯು ಬೇರೇ ಊರೇ ಆಗಿತ್ತು. ಈಗ ಅಲ್ಲಿಂದ ಮುವ್ವತ್ತು ಕಿ.ಮೀ. ದೂರದ ಬಿಡದಿಯೂ ಸಹ ನಮ್ಮ ಬೆಂಗಳೂರು ಸಿಟಿಗೇ ಸೇರಿದೆ. ಕನಕಪುರವೂ ಇನ್ನೇನು ಸೇರಲಿದೆ. ತುಮಕೂರು ಬೆಂಗಳೂರು ನಗರಕ್ಕೆ ಹೆಚ್ಚೇನು ದೂರವಾಗಿಲ್ಲ. ಕೋಲಾರ ಜಿಲ್ಲೆಯು ಬೆಂಗಳೂರು ಜಿಲ್ಲೆಯೊಳಗೆಯೇ ಸೇರಿಕೊಂಡುಬಿಟ್ಟಿದೆಯೇನೋ ಅನ್ನುವಷ್ಟು ಹತ್ತಿರವಾಗಿ ಹೋಗಿದೆ. ಒಟ್ಟಿನಲ್ಲಿ ಬೆಂಗಳೂರಿಗೆ ಒಂದು ಬೌಂಡರಿಯೇ ಇಲ್ಲ. ದಿನೇ ದಿನೇ ಬೆಳೆಯುತ್ತಿದೆ.
ನೆನ್ನೆ ಪೂರ್ಣಚಂದ್ರ ತೇಜಸ್ವಿಯವರ 'ಕಾಡಿನ ಕತೆಗಳು' ಪುಸ್ತಕಗಳನ್ನು ನಾಲ್ಕನೆಯ ಸಲ ಓದುತ್ತಿದ್ದೆ. ಕೆನೆತ್ ಆಂಡರ್ಸನ್ ಬರೆದ ತನ್ನ ಅನುಭವಗಳನ್ನು ತೇಜಸ್ವಿ ಕೇವಲ ಅನುವಾದ ಮಾಡಿಲ್ಲ. ಕೆನೆತ್ ಆಂಡರ್ಸನ್‍ನೇ ಅಚ್ಚರಿಗೊಳ್ಳುವಂತೆ ಒಂದು ವಿಶಿಷ್ಟ ಲೋಕವನ್ನೇ ಸೃಷ್ಟಿಸಿದ್ದಾರೆ. ಬಹುಶಃ ಕೆನೆತ್ ಆಂಡರ್ಸನ್‍ಗಿಂತ ಚೆನ್ನಾಗಿ ವರ್ಣಿಸಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಓದುತ್ತಿದ್ದರೆ, ಕಾಡು ನಮ್ಮ ಮುಂದಿರುತ್ತೆ. ಅಲ್ಲಲ್ಲ, ನಾವು ಕಾಡಿನೊಳಗೆ ಹೊಕ್ಕಿಬಿಟ್ಟಿರುತ್ತೇವೆ. ನರಭಕ್ಷಕ ಈಗ ಎದುರಾದೀತು, ಆಗ ಎದುರಾದೀತು ಎಂದು ಕುತೂಹಲದಿಂದ ಮಲಗಿ ಓದುತ್ತಿದ್ದವರು ಎದ್ದು ಕೂತುಬಿಡುತ್ತೇವೆ. ನರಭಕ್ಷಕ ಹುಲಿ ಬಂದು ಹೆಂಗಸೊಬ್ಬಳನ್ನು ಸದ್ದಿಲ್ಲದೆ ಹೊತ್ತುಕೊಂಡು ಹೋಯಿತೆಂದು ಓದುವಾಗ ಆ ಹೆಂಗಸಿಗೆ ಆದಷ್ಟೆ ಆತಂಕವಾಗುತ್ತೆ. ಅದು ತೇಜಸ್ವಿ ಸ್ಟೈಲು ಹಾಗು ಸ್ಪೆಷಾಲಿಟಿ.


ಇಂಥಾ ನರಭಕ್ಷಕಗಳ ಕಥೆಯನ್ನು ಕೇಳಿದರೆ, ಅವೆಲ್ಲಾ ನಮ್ಮ ಪಶ್ಚಿಮಘಟ್ಟದ ದಟ್ಟಡವಿಯಲ್ಲೋ, ಬಂಡಿಪುರ ಮದುಮಲೈ ಅಂಥ ರಿಸರ್ವ್ ಫಾರೆಸ್ಟಿನಲ್ಲೋ ಕಂಡುಬಂದಿರಬಹುದು ಎಂದು ಅನ್ನಿಸದೇ ಇರೋದಿಲ್ಲ. ಆದರೆ, ಬೆಂಗಳೂರಿಗರಿಗೆ ಆಶ್ಚರ್ಯ ಆಗುವಂಥ ವಿಷಯಗಳೆಂದರೆ, ಅನೇಕ ನರಭಕ್ಷಕ ಹುಲಿ, ಚಿರತೆಗಳನ್ನು ಕೆನೆತ್ ಆಂಡರ್ಸನ್ ಹೊಡೆದದ್ದು ಬೆಂಗಳೂರಿನ ಆಸುಪಾಸಿನಲ್ಲೇ ಎಂದು ಈ ಲೇಖನಗಳು ಹೇಳುತ್ತವೆ. ಇಲ್ಲಿ ಅಂಥ ಕಾಡಿತ್ತೇ? ಅಚ್ಚರಿಯಾಗುವುದಲ್ಲವೇ?

ಬೆಂಗಳೂರಿನ ಆಸುಪಾಸು ಎಂದು ನಾನು ಹೇಳಿದ್ದು ಯಾಕೆ ಅಂದರೆ, ಕೆನೆತ್ ಆಂಡರ್ಸನ್ ಹಂಟ್ ಮಾಡಿದ್ದ ಕಾಲದಲ್ಲಿ ಆ ಜಾಗಗಳು ಬೆಂಗಳೂರಿನ ಆಚೆಗೆ ಇದ್ದದ್ದು. ಈಗ? ರೇಡಿಯೋ ಹಾಕಿ.. "ಬೆಳಂದೂರಿನ ಹತ್ತಿರ huuuuuuge trafic jam ಇದೆ, ಬೇರೆ ದಾರಿ ತೊಗೊಳಿ, ಬೊಮ್ಮನ ಹಳ್ಳಿಯಲ್ಲಿ ಹೈವೇ ಪ್ರಾಜೆಕ್ಟು ನಡೀತಾ ಇರೋದ್ರಿಂದ roads ಎಲ್ಲಾ completely blocked!, ಜಾಲಹಳ್ಳಿಯ ಬಳಿ ಎರಡು ತಾಸಿನಿಂದ ಟ್ರಾಫಿಕ್ ಸ್ಥಗಿತವಾಗಿದೆ.." ಕೇಳ್ತಾನೇ ಇರ್ತೀವಿ ಅಲ್ವಾ? ಈ ಜಾಗಗಳನ್ನು ನೋಡಿದ್ದೀರ? ಜಾಲಹಳ್ಳಿ, ಬೊಮ್ಮನಹಳ್ಳಿ, ಬೆಳಂದೂರು.. ಎಲ್ಲಾ?? ಈ ಜಾಗಗಳನ್ನು ಕಾಡು ಎಂದರೆ ನಂಬುತ್ತೀರ? ಇಲ್ಲೆಲ್ಲಾ ನರಭಕ್ಷಕ ಹುಲಿಚಿರತೆಗಳು ಇದ್ದವು ಎಂದರೆ ನಂಬಲು ಸಾಧ್ಯವಾದೀತೇ?? ಆದರೆ, ಅದು ಅಕ್ಷರಶಃ ನಿಜ. ಕೇವಲ ಐವತ್ತು ವರ್ಷಗಳ ಹಿಂದೆ!! ಜಾಲಹಳ್ಳಿಯ ಕುರ್ಕ, ಬೆಳ್ಳಂದೂರಿನ ನರಭಕ್ಷಕ - ಹೀಗೆಯೇ ಇವೆ ಪುಸ್ತಕದ ಶೀರ್ಷಿಕೆ. ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಅಲ್ಲವೇ? ಓದುತ್ತಿದ್ದರೆ ಓದುತ್ತಿರಲೇ ಬೇಕು ಎನಿಸುವ ಕೃತಿ. ಊಟನಿದ್ರೆಗಳು ಬೇಡ, ಈ ಪುಸ್ತಕ ಓದಿ ಮುಗಿಸುವ ತನಕ ಎಂಬ ಭಾವನೆಯಾಗುತ್ತೆ.


ನಿಮ್ಮ ಹಿರಿಯರನ್ನು ಕೇಳಿ ನೋಡಿ, ಇಪ್ಪತ್ತೈದು ವರ್ಷಗಳ ಕೆಳಗೆ ಜಯನಗರ ಹೇಗಿತ್ತೆಂದು? ನೀವೇ ಸ್ವಲ್ಪ flash-back ಹೋಗಿ, ಹದಿನೈದು ವರ್ಷದ ಕೆಳಗೆ ಕತ್ತರಿಗುಪ್ಪೆ ಹೇಗಿತ್ತೆಂದು? ಬೆಂಗಳೂರಿನ ಹಳಬರನ್ನು ಮಾತಾನಾಡಿಸಿ ನೋಡಿ, ಹೇಳುತ್ತಾರೆ, ಹನುಮಂತನಗರ ಸುಂಕೇನ ಹಳ್ಳಿಯಾಗಿತ್ತು, ಶ್ರೀನಗರ ದಾಸರಹಳ್ಳಿಯಾಗಿತ್ತು. ಮೆಜೆಸ್ಟಿಕ್ ಬಸ್ ನಿಲ್ದಾಣ ಧರ್ಮಾಂಬುಧಿ ಕೆರೆಯಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ಕಾಲಿಡಲಾಗದ ದಟ್ಟಡವಿಯಾಗಿತ್ತು. ತ್ಯಾಗರಾಜನಗರಕ್ಕೆ ಹೋಗಬೇಕೆಂದರೆ ಹೊಲದಲ್ಲಿ ನಡೆದು ಹೋಗಬೇಕಿತ್ತು. ಈಗ್ಗೆ ಹತ್ತುವರ್ಷದ ಕೆಳಗಿನ ಬೆಂಗಳೂರನ್ನು ನೆನೆಸಿಕೊಳ್ಳಿ! ಎಷ್ಟು ಸುಂದರವಾಗಿತ್ತಲ್ಲವೇ??ಅಪಾರವಾದ ಅರಣ್ಯಸಂಪತ್ತು ಇಂದು ಎಲೆಕ್ಟ್ರಾನಿಕ್ ಸಿಟಿ, ಜಾಲಹಳ್ಳಿ ಇಂಡಸ್ಟ್ರಿಯಲ್ ಏರಿಯಾ, ಆಗಿವೆ. ಕಾಡು ಮೃಗಗಳು ವಸತಿಯಿಲ್ಲದೆ ಟಾರ್ ರಸ್ತೆಗೆ ಬಂದಿವೆ. ಬೆಂಗಳೂರಿನ ನೂರಾರು ಕೆರೆಗಳು dustbinಗಳಾಗಿವೆ, ದೊಡ್ಡ ದೊಡ್ಡ ಲೇ-ಔಟುಗಳಾಗಿವೆ. ಕೆರೆಗಳನ್ನೇ ನಂಬಿದ್ದ ಹಕ್ಕಿಗಳು ಕೆರೆಗಳಂತೆಯೇ ಮಾಯವಾಗಿವೆ. ಹೊಲ-ಗದ್ದೆಗಳ ದೆಸೆಯಿಂದ ನಮ್ಮ ಜನಕ್ಕೆ ಅನ್ನ ಕೊಡುತ್ತಿದ್ದ ನೆಲವು ಸಾಫ್ಟ್‍ವೇರ್‍ನ ಪರದೇಶಕ್ಕೆ ಮಾರುವ ಕಟ್ಟಡಗಳಾಗಿವೆ. ಎಂದೂ 30 degree C ಏರದಿದ್ದ ಬೆಂಗಳೂರಿನ ತಾಪಮಾನ ಈಗ ನಲವತ್ತನ್ನೂ ಮುಟ್ಟಿದೆ. ಮಳೆ ಬೇಕಾದಾಗ ಸುಡುವ ಬಿಸಿಲು, ಮಳೆ ಬಂದಾಗ ಮನೆಯೊಳಗೆಲ್ಲಾ ನೀರು! ತಲೆ ಮೇಲೆತ್ತಿದರೆ ಕಪ್ಪು ಪದರ ಕವಚದಂತೆ. ಬಗ್ಗಿದರೆ ಪ್ಲಾಸ್ಟಿಕ್ ಕಸ, ಪ್ಲಾಸ್ಟಿಕ್ ರಸ, ಪ್ಲಾಸ್ಟಿಕ್ ರಸ್ತೆ, ಸರ್ವವೂ ಪ್ಲಾಸ್ಟಿಕ್‍ಮಯ! ಎಡ-ಬಲ ನೋಡುವಂತಿಲ್ಲ, ಪಕ್ಕದವರು ಗುದ್ದುಬಿಡುತ್ತಾರೆ. ಎಷ್ಟೇ ಆದರೂ ನಮ್ಮದು ಹೈಟೆಕ್ ಸಿಟಿ ಅಲ್ಲವೇ? ಇದನ್ನೇ ಡೆವಲಪ್‍ಮೆಂಟ್ ಅನ್ನೋದು ಅಲ್ಲವೇ?
- ಅ
19.02.2007
2PM

5 comments:

 1. ಅಬ್ಬಬ್ಬಾ.... ಭಯಾನಕ ಸತ್ಯ !!! :)

  ReplyDelete
 2. ಸರಿಯಾಗಿ ಹೇಳಿದ್ದೀರಿ. ಆದರೆ ಇದಕ್ಕೆ ಪರಿಹಾರವೇನು ಎಂದು ಯೋಚಿಸಿದರೆ ಏನೂ ಕಾಣುತ್ತಿಲ್ಲ. ಕಡಿದು ನಾಶ ಮಾಡಿದಷ್ಟು ಸುಲಭವಾಗಿ ಕಾಡನ್ನು ಮತ್ತೆ ಬೆಳೆಸುವುದಂತೂ ಸಾಧ್ಯವಿಲ್ಲ. ಸುಮ್ಮನೆ ಹಳೆಯ ದಿನಗಳನ್ನು ನೆನೆಸಿಕೊಂಡು ಈಗಿನದನ್ನು ಹಳಿಯುತ್ತಾ ಕೂರಬೇಕಾಗಿದೆ. ಈಗಿರುವ ಹಳ್ಳಿಗಳೂ ಬೆಂಗಳೂರಾಗದಂತೆ ತಡೆಯುವ ಪ್ರಜ್ಞಾವಂತ ಕೆಲಸವೊಂದೇ ಬಹುಶಃ ನಾವು ಮಾಡಬಹುದಾದ್ದು.

  ಪರಿಸರದೆಡೆಗಿನ ನಿಮ್ಮ ಕಾಳಜಿಗೆ ಶರಣು.

  ReplyDelete
 3. [Ana] kaadina kathegaLu intha satyavanna huduko haage maadthu!

  [Sushrutha] ee pragnyaavantha kelsa hege maadodu annode samasye alva!!

  ReplyDelete
 4. ನಿಮ್ಮ ಪರಿಸ ಕಾಳಜಿ ನನಗೆ ತು೦ಬಾ ಹಿಡಿಸಿತು...
  ಮು೦ದುವರಿಯಲಿ ಹೀಗೆ ನಿಮ್ಮ ಪರಿಸರ ಪ್ರೇಮ........


  ಇತಿ ನಿಮ್ಮ ಅಭಿಮಾನಿ

  ReplyDelete
 5. [samanvayana] ತುಂಬ thanks ಕಣ್ರೀ... ಪರಿಸರದಲ್ಲಿ ನಾವು ಇರುವಾಗ ಅದರ ಬಗ್ಗೆ ಕಾಳಜಿ ತೋರಿಸಬೇಕಾದ್ದು ನಮ್ಮ ಕರ್ತವ್ಯ ತಾನೆ.. :-)

  ReplyDelete

ಒಂದಷ್ಟು ಚಿತ್ರಗಳು..