Monday, February 19, 2007

ತೇಜಸ್ವಿಯ ಕಥೆಯೂ.. ನಮ್ಮ ಹೈಟೆಕ್ ಸಿಟಿಯೂಗೊತ್ತು-ಗುರಿಯಿಲ್ಲದೆ ಬೆಳೆಯುತ್ತಿದೆ ನಮ್ಮ ಬೆಂಗಳೂರು. ಕೆಂಗೇರಿಗೆ ಹೋಗಬೇಕೆಂದರೇನೇ ವಿಪರೀತ ಕಷ್ಟವಾಗುತ್ತಿತ್ತು, ಬಸ್ಸು ಸಿಗುತ್ತಿರಲಿಲ್ಲ, ಬೆಳಿಗ್ಗೆ ಹೊರಟರೆ ಸಂಜೆ ಹಿಂದಿರುಗುವಂತಿತ್ತು. ಕೆಂಗೇರಿಯು ಬೇರೇ ಊರೇ ಆಗಿತ್ತು. ಈಗ ಅಲ್ಲಿಂದ ಮುವ್ವತ್ತು ಕಿ.ಮೀ. ದೂರದ ಬಿಡದಿಯೂ ಸಹ ನಮ್ಮ ಬೆಂಗಳೂರು ಸಿಟಿಗೇ ಸೇರಿದೆ. ಕನಕಪುರವೂ ಇನ್ನೇನು ಸೇರಲಿದೆ. ತುಮಕೂರು ಬೆಂಗಳೂರು ನಗರಕ್ಕೆ ಹೆಚ್ಚೇನು ದೂರವಾಗಿಲ್ಲ. ಕೋಲಾರ ಜಿಲ್ಲೆಯು ಬೆಂಗಳೂರು ಜಿಲ್ಲೆಯೊಳಗೆಯೇ ಸೇರಿಕೊಂಡುಬಿಟ್ಟಿದೆಯೇನೋ ಅನ್ನುವಷ್ಟು ಹತ್ತಿರವಾಗಿ ಹೋಗಿದೆ. ಒಟ್ಟಿನಲ್ಲಿ ಬೆಂಗಳೂರಿಗೆ ಒಂದು ಬೌಂಡರಿಯೇ ಇಲ್ಲ. ದಿನೇ ದಿನೇ ಬೆಳೆಯುತ್ತಿದೆ.
ನೆನ್ನೆ ಪೂರ್ಣಚಂದ್ರ ತೇಜಸ್ವಿಯವರ 'ಕಾಡಿನ ಕತೆಗಳು' ಪುಸ್ತಕಗಳನ್ನು ನಾಲ್ಕನೆಯ ಸಲ ಓದುತ್ತಿದ್ದೆ. ಕೆನೆತ್ ಆಂಡರ್ಸನ್ ಬರೆದ ತನ್ನ ಅನುಭವಗಳನ್ನು ತೇಜಸ್ವಿ ಕೇವಲ ಅನುವಾದ ಮಾಡಿಲ್ಲ. ಕೆನೆತ್ ಆಂಡರ್ಸನ್‍ನೇ ಅಚ್ಚರಿಗೊಳ್ಳುವಂತೆ ಒಂದು ವಿಶಿಷ್ಟ ಲೋಕವನ್ನೇ ಸೃಷ್ಟಿಸಿದ್ದಾರೆ. ಬಹುಶಃ ಕೆನೆತ್ ಆಂಡರ್ಸನ್‍ಗಿಂತ ಚೆನ್ನಾಗಿ ವರ್ಣಿಸಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಓದುತ್ತಿದ್ದರೆ, ಕಾಡು ನಮ್ಮ ಮುಂದಿರುತ್ತೆ. ಅಲ್ಲಲ್ಲ, ನಾವು ಕಾಡಿನೊಳಗೆ ಹೊಕ್ಕಿಬಿಟ್ಟಿರುತ್ತೇವೆ. ನರಭಕ್ಷಕ ಈಗ ಎದುರಾದೀತು, ಆಗ ಎದುರಾದೀತು ಎಂದು ಕುತೂಹಲದಿಂದ ಮಲಗಿ ಓದುತ್ತಿದ್ದವರು ಎದ್ದು ಕೂತುಬಿಡುತ್ತೇವೆ. ನರಭಕ್ಷಕ ಹುಲಿ ಬಂದು ಹೆಂಗಸೊಬ್ಬಳನ್ನು ಸದ್ದಿಲ್ಲದೆ ಹೊತ್ತುಕೊಂಡು ಹೋಯಿತೆಂದು ಓದುವಾಗ ಆ ಹೆಂಗಸಿಗೆ ಆದಷ್ಟೆ ಆತಂಕವಾಗುತ್ತೆ. ಅದು ತೇಜಸ್ವಿ ಸ್ಟೈಲು ಹಾಗು ಸ್ಪೆಷಾಲಿಟಿ.


ಇಂಥಾ ನರಭಕ್ಷಕಗಳ ಕಥೆಯನ್ನು ಕೇಳಿದರೆ, ಅವೆಲ್ಲಾ ನಮ್ಮ ಪಶ್ಚಿಮಘಟ್ಟದ ದಟ್ಟಡವಿಯಲ್ಲೋ, ಬಂಡಿಪುರ ಮದುಮಲೈ ಅಂಥ ರಿಸರ್ವ್ ಫಾರೆಸ್ಟಿನಲ್ಲೋ ಕಂಡುಬಂದಿರಬಹುದು ಎಂದು ಅನ್ನಿಸದೇ ಇರೋದಿಲ್ಲ. ಆದರೆ, ಬೆಂಗಳೂರಿಗರಿಗೆ ಆಶ್ಚರ್ಯ ಆಗುವಂಥ ವಿಷಯಗಳೆಂದರೆ, ಅನೇಕ ನರಭಕ್ಷಕ ಹುಲಿ, ಚಿರತೆಗಳನ್ನು ಕೆನೆತ್ ಆಂಡರ್ಸನ್ ಹೊಡೆದದ್ದು ಬೆಂಗಳೂರಿನ ಆಸುಪಾಸಿನಲ್ಲೇ ಎಂದು ಈ ಲೇಖನಗಳು ಹೇಳುತ್ತವೆ. ಇಲ್ಲಿ ಅಂಥ ಕಾಡಿತ್ತೇ? ಅಚ್ಚರಿಯಾಗುವುದಲ್ಲವೇ?

ಬೆಂಗಳೂರಿನ ಆಸುಪಾಸು ಎಂದು ನಾನು ಹೇಳಿದ್ದು ಯಾಕೆ ಅಂದರೆ, ಕೆನೆತ್ ಆಂಡರ್ಸನ್ ಹಂಟ್ ಮಾಡಿದ್ದ ಕಾಲದಲ್ಲಿ ಆ ಜಾಗಗಳು ಬೆಂಗಳೂರಿನ ಆಚೆಗೆ ಇದ್ದದ್ದು. ಈಗ? ರೇಡಿಯೋ ಹಾಕಿ.. "ಬೆಳಂದೂರಿನ ಹತ್ತಿರ huuuuuuge trafic jam ಇದೆ, ಬೇರೆ ದಾರಿ ತೊಗೊಳಿ, ಬೊಮ್ಮನ ಹಳ್ಳಿಯಲ್ಲಿ ಹೈವೇ ಪ್ರಾಜೆಕ್ಟು ನಡೀತಾ ಇರೋದ್ರಿಂದ roads ಎಲ್ಲಾ completely blocked!, ಜಾಲಹಳ್ಳಿಯ ಬಳಿ ಎರಡು ತಾಸಿನಿಂದ ಟ್ರಾಫಿಕ್ ಸ್ಥಗಿತವಾಗಿದೆ.." ಕೇಳ್ತಾನೇ ಇರ್ತೀವಿ ಅಲ್ವಾ? ಈ ಜಾಗಗಳನ್ನು ನೋಡಿದ್ದೀರ? ಜಾಲಹಳ್ಳಿ, ಬೊಮ್ಮನಹಳ್ಳಿ, ಬೆಳಂದೂರು.. ಎಲ್ಲಾ?? ಈ ಜಾಗಗಳನ್ನು ಕಾಡು ಎಂದರೆ ನಂಬುತ್ತೀರ? ಇಲ್ಲೆಲ್ಲಾ ನರಭಕ್ಷಕ ಹುಲಿಚಿರತೆಗಳು ಇದ್ದವು ಎಂದರೆ ನಂಬಲು ಸಾಧ್ಯವಾದೀತೇ?? ಆದರೆ, ಅದು ಅಕ್ಷರಶಃ ನಿಜ. ಕೇವಲ ಐವತ್ತು ವರ್ಷಗಳ ಹಿಂದೆ!! ಜಾಲಹಳ್ಳಿಯ ಕುರ್ಕ, ಬೆಳ್ಳಂದೂರಿನ ನರಭಕ್ಷಕ - ಹೀಗೆಯೇ ಇವೆ ಪುಸ್ತಕದ ಶೀರ್ಷಿಕೆ. ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಅಲ್ಲವೇ? ಓದುತ್ತಿದ್ದರೆ ಓದುತ್ತಿರಲೇ ಬೇಕು ಎನಿಸುವ ಕೃತಿ. ಊಟನಿದ್ರೆಗಳು ಬೇಡ, ಈ ಪುಸ್ತಕ ಓದಿ ಮುಗಿಸುವ ತನಕ ಎಂಬ ಭಾವನೆಯಾಗುತ್ತೆ.


ನಿಮ್ಮ ಹಿರಿಯರನ್ನು ಕೇಳಿ ನೋಡಿ, ಇಪ್ಪತ್ತೈದು ವರ್ಷಗಳ ಕೆಳಗೆ ಜಯನಗರ ಹೇಗಿತ್ತೆಂದು? ನೀವೇ ಸ್ವಲ್ಪ flash-back ಹೋಗಿ, ಹದಿನೈದು ವರ್ಷದ ಕೆಳಗೆ ಕತ್ತರಿಗುಪ್ಪೆ ಹೇಗಿತ್ತೆಂದು? ಬೆಂಗಳೂರಿನ ಹಳಬರನ್ನು ಮಾತಾನಾಡಿಸಿ ನೋಡಿ, ಹೇಳುತ್ತಾರೆ, ಹನುಮಂತನಗರ ಸುಂಕೇನ ಹಳ್ಳಿಯಾಗಿತ್ತು, ಶ್ರೀನಗರ ದಾಸರಹಳ್ಳಿಯಾಗಿತ್ತು. ಮೆಜೆಸ್ಟಿಕ್ ಬಸ್ ನಿಲ್ದಾಣ ಧರ್ಮಾಂಬುಧಿ ಕೆರೆಯಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ಕಾಲಿಡಲಾಗದ ದಟ್ಟಡವಿಯಾಗಿತ್ತು. ತ್ಯಾಗರಾಜನಗರಕ್ಕೆ ಹೋಗಬೇಕೆಂದರೆ ಹೊಲದಲ್ಲಿ ನಡೆದು ಹೋಗಬೇಕಿತ್ತು. ಈಗ್ಗೆ ಹತ್ತುವರ್ಷದ ಕೆಳಗಿನ ಬೆಂಗಳೂರನ್ನು ನೆನೆಸಿಕೊಳ್ಳಿ! ಎಷ್ಟು ಸುಂದರವಾಗಿತ್ತಲ್ಲವೇ??ಅಪಾರವಾದ ಅರಣ್ಯಸಂಪತ್ತು ಇಂದು ಎಲೆಕ್ಟ್ರಾನಿಕ್ ಸಿಟಿ, ಜಾಲಹಳ್ಳಿ ಇಂಡಸ್ಟ್ರಿಯಲ್ ಏರಿಯಾ, ಆಗಿವೆ. ಕಾಡು ಮೃಗಗಳು ವಸತಿಯಿಲ್ಲದೆ ಟಾರ್ ರಸ್ತೆಗೆ ಬಂದಿವೆ. ಬೆಂಗಳೂರಿನ ನೂರಾರು ಕೆರೆಗಳು dustbinಗಳಾಗಿವೆ, ದೊಡ್ಡ ದೊಡ್ಡ ಲೇ-ಔಟುಗಳಾಗಿವೆ. ಕೆರೆಗಳನ್ನೇ ನಂಬಿದ್ದ ಹಕ್ಕಿಗಳು ಕೆರೆಗಳಂತೆಯೇ ಮಾಯವಾಗಿವೆ. ಹೊಲ-ಗದ್ದೆಗಳ ದೆಸೆಯಿಂದ ನಮ್ಮ ಜನಕ್ಕೆ ಅನ್ನ ಕೊಡುತ್ತಿದ್ದ ನೆಲವು ಸಾಫ್ಟ್‍ವೇರ್‍ನ ಪರದೇಶಕ್ಕೆ ಮಾರುವ ಕಟ್ಟಡಗಳಾಗಿವೆ. ಎಂದೂ 30 degree C ಏರದಿದ್ದ ಬೆಂಗಳೂರಿನ ತಾಪಮಾನ ಈಗ ನಲವತ್ತನ್ನೂ ಮುಟ್ಟಿದೆ. ಮಳೆ ಬೇಕಾದಾಗ ಸುಡುವ ಬಿಸಿಲು, ಮಳೆ ಬಂದಾಗ ಮನೆಯೊಳಗೆಲ್ಲಾ ನೀರು! ತಲೆ ಮೇಲೆತ್ತಿದರೆ ಕಪ್ಪು ಪದರ ಕವಚದಂತೆ. ಬಗ್ಗಿದರೆ ಪ್ಲಾಸ್ಟಿಕ್ ಕಸ, ಪ್ಲಾಸ್ಟಿಕ್ ರಸ, ಪ್ಲಾಸ್ಟಿಕ್ ರಸ್ತೆ, ಸರ್ವವೂ ಪ್ಲಾಸ್ಟಿಕ್‍ಮಯ! ಎಡ-ಬಲ ನೋಡುವಂತಿಲ್ಲ, ಪಕ್ಕದವರು ಗುದ್ದುಬಿಡುತ್ತಾರೆ. ಎಷ್ಟೇ ಆದರೂ ನಮ್ಮದು ಹೈಟೆಕ್ ಸಿಟಿ ಅಲ್ಲವೇ? ಇದನ್ನೇ ಡೆವಲಪ್‍ಮೆಂಟ್ ಅನ್ನೋದು ಅಲ್ಲವೇ?
- ಅ
19.02.2007
2PM

Tuesday, February 06, 2007

ಇದು ಸಂಪೂರ್ಣ ಟೀಮು...

"ಏನೋ ನಿನಗೆ ಯಾವ ಟ್ರೆಕ್ಕಲ್ಲಿ ಯಾವ ಬಟ್ಟೆ ಹಾಕ್ಕೊಂಡಿದ್ದೆ ಅಂತೆಲ್ಲಾ ನೆನಪಿರುತ್ತಾ?" ಎಂದು ಶ್ರೀಕಾಂತ್ ನನ್ನ ಕೇಳಲು ಕಾರಣ ಇದೆ. "ಈ ಥರದ jacket ನನ್ನ ಹತ್ತಿರ ಇದೆ, ನೋಡಿದ್ಯಲ್ಲಾ, ಮುಳ್ಳಯ್ಯನಗಿರಿಗೆ ಮೊದಲ ಸಲ ಹೋದಾಗ ಹಾಕ್ಕೊಂಡ್ ಬಂದಿದ್ನಲ್ಲಾ.." ಎಂದು ನಾನು ಹೇಳಿದ್ದು ಅವನಿಗೆ ಅಚ್ಚರಿ ಮೂಡಿಸಿರಬೇಕು. ನೆನ್ನೆ ಏನು ಮಾಡಿದ್ದೆ ಅನ್ನೋದೇ ಮರೆತು ಹೋಗಿರುವ ನಾನೊಬ್ಬ ಅಸಾಧ್ಯ ಮರೆಗುಳಿ ಅನ್ನೋದು ಇಡೀ ಪ್ರಪಂಚಕ್ಕೇ ಗೊತ್ತು. ಅನೇಕ ಸಲ ಈ ನನ್ನ ಮರೆವು ಕಾಯಿಲೆ ನನ್ನನ್ನು ಅವಮಾನಕ್ಕೀಡುಮಾಡಿ ನಕ್ಕಿದೆ. ಆದರೆ ಕೆಲವು ವಿಷಯಗಳು, for example, ಯಾವ ಟ್ರೆಕ್ಕಲ್ಲಿ ಯಾವ ಬಟ್ಟೆ ಹಾಕಿದ್ದೆ ಅಂತ ಮರೆಯೋದೇ ಇಲ್ಲ ನೋಡಿ. "ಐದನೇ ಸಲ ತಡಿಯಾಂಡಮೋಳ್‍ಗೆ ಹೋದಾಗ ಆಗ ಪವನ್ ಬಂದಿದ್ರು, ನಾನು ನನ್ನ ನೀಲಿಯ ಜೀನ್ಸ್ jacket ಹಾಕ್ಕೊಂಡಿದ್ನಲ್ಲಾ...." ಅಂತೆಲ್ಲಾ ನೆನಪಿರುತ್ತೆ. ಈಗ ಐದು ನಿಮಿಷದ ಕೆಳಗೆ ನನ್ನ ಕನ್ನಡಕ ಎಲ್ಲಿಟ್ಟಿದ್ದೀನಿ ಅಂತ ಊರೆಲ್ಲಾ ಹುಡುಕೋ ಹಾಗೆ ಆಗಿರುತ್ತೆ!!

ಹೀಗೆ ನೆನಪಿನಲ್ಲಿ ನೂರ್ಕಾಲ ಉಳಿಯುವಂಥ ಟ್ರೆಕ್ಕು ಮೊನ್ನೆ ತಾನೆ ಮುಗಿಸಿಕೊಂಡು ಬಂದೆ. Unofficial Trek, mind you. Unofficial ಅಂದರೆ, ನಮ್ಮ Rambling Holiday Makers ಇಂದ organize ಮಾಡಿರದ ಟ್ರೆಕ್ಕು. ಇಲ್ಲಿ ಫೀಸು ಗೀಸು ಅಂತ ಏನೂ ಇರಲ್ಲ. Formalities ಎಲ್ಲಾ ಏನೂ ಇರಲ್ಲ. ಸುಮ್ಮನೆ ಮನಸ್ಸಿಗೆ ಬಂದಂತೆ ಹೋಗೋದು! ನನ್ನ BEST TEAM ನನ್ನೊಂದಿಗೆ ಇತ್ತು. The best co-trekkers in my adventure career. ಇದು ನನ್ನ retirement ಟ್ರೆಕ್ ಆಗಿತ್ತು ಕೂಡ.
Retirement ಅಂದರೆ, ಪೂರ್ತಿ ಚಾರಣದಿಂದ ಹೊರಬಂದುಬಿಡುತ್ತೇನೆಂದಲ್ಲ. ಈ ಹಿಂದಿನ ಚಾರಣದ ಬದುಕು ಮುಂದುವರೆಯೋದಿಲ್ಲವೆಂದಷ್ಟೆ ಇದರರ್ಥ. ನನ್ನ ಪುಣ್ಯಕ್ಕೆ ಈ ಕೊನೆಯ ಟ್ರೆಕ್ಕಿನಲ್ಲಿ ನನ್ನ ಬೆಸ್ಟ್ ಸಹಚಾರಣಿಗರು ನನ್ನೊಂದಿಗಿದ್ದರು. ಟೀಮು ಸಂಪೂರ್ಣವಾಗಿತ್ತು!!


ಹೋಗಿದ್ದು ದೇವಕಾರ್‍ಗೆ. ಆದರೆ..

ನಾವು ಚಾರಣಕ್ಕೆಂದು ಹೋಗಿದ್ದು ದೇವಕಾರ್‍ಗೆ. ಆದರೆ ದೇವಕಾರ್ ಬಗ್ಗೆ ಏನಾದರೂ ಮಾಹಿತಿ ಸಿಗುತ್ತೆ ಎಂದು ಇಲ್ಲಿ ನೋಡದಿರಿ. ಇಲ್ಲಿ ಇರುವುದು ಕೇವಲ ವ್ಯಕ್ತಿಚಿತ್ರಣ, ಭಾವಚಿತ್ರಣ ಮಾತ್ರ.. ಟ್ರೆಕ್ಕಿನ ಬಗ್ಗೆ ಯಾವ ಮಾಹಿತಿಗಳೂ ಇಲ್ಲಿ ಸಿಗುವುದಿಲ್ಲ ಅಂತ ಈಗಲೇ desclaimer notice ಹಾಕ್ಬಿಡ್ತಾ ಇದೀನಿ.


ಕೇವಲ ಉತ್ತರ ಕರ್ನಾಟಕವನ್ನು ಪೂರ್ತಿಯಾಗಿ ನೋಡುವುದಕ್ಕೇನೇ ನನ್ನ ಇಡೀ ಜನ್ಮ ಸಾಲುವುದಿಲ್ಲ ಎಂದು ಬಹಳಷ್ಟು ಸಲ ನನಗೆ ಅನ್ನಿಸಿದೆ. ಅಷ್ಟು ಬೆಟ್ಟಗಳು, ಅಷ್ಟು ಕಾಡು, ಅಷ್ಟು ಜಲಧಾರೆಗಳು, ಅಷ್ಟು ಸ್ಥಳಗಳು. ಇಪ್ಪತ್ತು ವರ್ಷ, Typical ಬೆಂಗಳೂರಿಗನಾಗಿ ಬೆಳೆದ ನಾನು ನನ್ನ ಕೆಲವು view points ಇಂದ ನನ್ನ ಮಿತ್ರರಿಂದ ಅನೇಕ ಬಾರಿ ನಗೆಪಾಟಲಿಗೀಡಾಗಿದ್ದೇನೆ. ನನ್ನ ಅನೇಕ ಗೆಳೆಯರು ಗುಡ್ಡಗಾಡು ಪ್ರದೇಶದಲ್ಲೋ, ಹಳ್ಳಿಗಳಲ್ಲೋ, ಅಥವಾ, ಹುಟ್ಟಾ ಸಾಹಸಿಗಳಾಗಿದ್ದಾರೆ. ಅವರ ದೃಷ್ಟಿಯಲ್ಲಿ ನಾನು ಅನೇಕ ಬಾರಿ ಒಬ್ಬ ಹಾಸ್ಯದ ವಸ್ತು ಆಗಿದ್ದೇನೆ. ನಾನೊಬ್ಬ ಪಕ್ಕಾ ಸಿಟಿ ಗುಗ್ಗು ಎಂಬಂತೆ!! "ಅಂತೆ" ಏನು ಬಂತು, ಅದು ಸತ್ಯವೇ.


ಸಿಟಿಯಲ್ಲಿದ್ದುಕೊಂಡು, ಈ ಚಾರಣವೆಂಬ ಗೀಳನ್ನು ಹತ್ತಿಸಿಕೊಂಡು, ಅದನ್ನೇ ಒಂದು ಪ್ರವೃತ್ತಿಯನ್ನಾಗಿಸಿಕೊಂಡು ಇಲ್ಲಿಯವರೆಗೆ ಮೂರಂಕಿಯಷ್ಟು ಚಾರಣ ನಾನು ಮಾಡಲು ನನ್ನ ಟ್ರೆಕ್ ಗುರುಗಳಾದ ಸ್ವಾಮಿ ಹಾಗೂ ರಾಜೇಶ್‍ಗೆ ಒಂದು ನಮನವನ್ನು ಯಾವಾಗಲೂ ಸಲ್ಲಿಸುತ್ತಲೇ ಇರುತ್ತೇನೆ. ಆದರೆ, ಈಗ ಒಂದು ಥರಾ ಎದಬಿಡಂಗಿ ಸ್ಥಿತಿ. ಈ ಕಡೆ ಸಿಟಿಯವನೂ ಅಲ್ಲ, ಆ ಕಡೆ ಹಳ್ಳಿಗ/ಕಾಡು ಮನುಷ್ಯನೂ ಅಲ್ಲ. ಸಿಟಿಯವರಿಂದ, "ನೀನು ಕಾಡು ಮನುಷ್ಯ ಬಿಡು.." ಎಂತಲೂ, ಹಳ್ಳಿಯಲ್ಲಿ ಹುಟ್ಟಿ ಬೆಳೆದವರಿಂದ "ನಿಮಗೆ ಇವೆಲ್ಲಾ ಏನು ಗೊತ್ತಾಗುತ್ತೆ, ಬೆಂಗಳೂರಿಗ" ಎಂತಲೂ ಹಾಸ್ಯಕ್ಕೊಳಪಟ್ಟು ಕೆಲವು ಸಲ ನೊಂದಿದ್ದೇನೆ ಕೂಡ.


ನನ್ನ ಕೆಲವು view points ಬೆಂಗಳೂರಿಗನ ಮನಸ್ಸಿನಂತಿರುತ್ತದೆ, ಮತ್ತೆ ಕೆಲವು view points ಒಬ್ಬ ಹೇಳು ಮಾಡಿಸಿದ ಕಾಡುಮನುಷ್ಯನಂತಿರುತ್ತದೆ. ನಗದಿರಿ. ನೀವು ಬೆಂಗಳುರಿಗರಾದರೆ, ಕಾಡಿನ ವಿಷಯಗಳನ್ನು ತಲೆಗೆ ಹಚ್ಚಿಕೊಳ್ಳಿ, ಹಳ್ಳಿ/ಕಾಡಿನವರಾದರೆ ಬೆಂಗಳೂರಿನ ಬಗ್ಗೆ ತಲೆ ಕೆಡಿಸಿಕೊಳ್ಳಿ. ನನ್ನ ಈ ಎಡಬಿಡಂಗಿ ಸ್ಥಿತಿಯನ್ನು ನೋಡಿ ನಗು ಬಂದರೆ, ಹಾಗೇ ನಕ್ಕು ಸುಮ್ಮನಾಗಿಬಿಡಿ. ನನ್ನ "ಚಿತ್ರಣ" ಇಷ್ಟು ಸಾಕು. ಅಷ್ಟೇನೂ interesting character ನಾನಲ್ಲ. Interesting people ಬಗ್ಗೆ ತಿಳಿದುಕೊಳ್ಳೋಕೆ ಮುಂದೆ ಓದಿ.


ಕಿರಿವಯಸ್ಸಿನ ಹಿರಿಸಾಹಸಿ..


ಶ್ರೀನಿಧಿಯನ್ನು "ಹೋಗಿ/ಬನ್ನಿ" ಎಂದು ಕರೆಯುತ್ತಿದ್ದ ನಾನು, ಯಲ್ಲಾಪುರದ ಬೋರ್ಡ್ ಒಂದನ್ನು ಹೊರೆತುಪಡಿಸಿ ಸಕಲವೂ ಅಲುಗಾಡುತ್ತಿದ್ದ ಬಸ್ಸಿನಲ್ಲಿ "ಇನ್ನು ಮುಂದೆ ಏಕವಚನದಲ್ಲಿ ಪರಸ್ಪರ ಸಂಬೋಧಿಸೋಣ" ಎಂದು ಮಾತನಾಡಿಕೊಂಡು, ಈಗ ಅವನೊಬ್ಬ ಇನ್ನಷ್ಟು ಹತ್ತಿರವಾದ ಸ್ನೇಹಿತನಾದ! ಯಾವುದೇ ಥರದ ಅಡ್ವೆಂಚರ್‍ಗೆ ಯಾವುದೇ ಸಮಯದಲ್ಲಿ ಸಿದ್ಧ. ಆದರೆ, ಆಫೀಸೆಂಬ ಬಂಧನದಲ್ಲಿ ಪಂಜರದ ಗಿಣಿ. "ನೀವು ಇಪ್ಪತ್ತು ದಿನದ ಟ್ರೆಕ್ ವಿಷಯ ಎಲ್ಲಾ ಮಾತಾಡಿದರೆ ನಾನು ಕೆಲಸ ಬಿಟ್ಟುಬಿಡ್ತೀನಿ ಅಷ್ಟೆ!!" ಎಂದು ಅವನು ಹೇಳುತ್ತಿರುತ್ತಾನೆ. ಅದು ಹಾಸ್ಯಮಯವಾಗಿ ಕಂಡು ನಗು ಬಂದರೂ, ಅವನ ಮನದೊಳಗೆ ಚಾರಣದ ಬಗೆಗೆ ಅವನಿಗಿರುವ passion, ಹಾಗೂ ತಾನು miss ಮಾಡಿಕೊಂಡರೆ ತುಂಬಾ ನೋವಾಗುತ್ತದೆಂಬ ಭಾವನೆ ಅವನ ಕಂಗಳಲ್ಲಿ ಪ್ರತಿಬಾರಿಯೂ ಗೋಚರಿಸುತ್ತಿರುತ್ತದೆ.
ದೈತ್ಯಕಾಯದ ಶ್ರೀನಿಧಿ, ಯಾರಿಗೆ ಎಷ್ಟು ಬೇಗ ಬೇಕಾದರೂ ಹತ್ತಿರವಾಗಿಬಿಡುತ್ತಾನೆ. ನನಗೆ ಪರಿಚಯವಾಗಿ ಅಷ್ಟೇನು ದಿನಗಳು ಸಂದಿಲ್ಲ. ಆದರೂ ನನ್ನ ಬೆಸ್ಟ್ ಟ್ರೆಕ್ಕಿಂಗ್ ಟೀಮಿನಲ್ಲಿ ಇವನೊಬ್ಬ ಅತಿಮುಖ್ಯ ಸದಸ್ಯ. ಬಿಡಿಸಿ ಬಿಡಿಸಿ ಉತ್ತರ ಕನ್ನಡ ಜಿಲ್ಲೆಯವನಾಗಿಯೇ ಸ್ಪಷ್ಟವಾಗಿ ಕನ್ನಡ ಮಾತನಾಡುವುದನ್ನು ಕೇಳಲು ಸಂತೋಷ ಆಗುತ್ತೆ. ಒಳ್ಳೇ ಸಾಹಿತ್ಯದ ಹಾಡುಗಳನ್ನು ಕಾವ್ಯವನ್ನು ಸದಾ ಸ್ವಾದಿಸುತ್ತಾನೆ. ತನ್ನ ರಚನೆಗಳಂತೂ ಅದ್ಭುತ! ಎಲ್ಲದರಲ್ಲೂ ಸಂತಸ ಮತ್ತು ಸೌಂದರ್ಯವನ್ನು ಕಾಣುವ ಯತ್ನದಲ್ಲಿ ಬದುಕಿನ ಬಂಡಿಯನ್ನು ಸಾಗಿಸುವ ಸಾಹಸಿ ಇವನು.


ಟ್ರೆಕ್ಕಿನಲ್ಲಿ ಯಾವುದೋ ಒಂದು ಕಡೆ, ನೀರು ಹರಿಯುತ್ತಿದ್ದ ಶಬ್ದ ಕೇಳಿಸಿತು. ಶ್ರೀನಿಧಿ, "ಅದನ್ನು ಹೋಗಿ ನೋಡೋದೇ!!" ಎಂದರು. ಇವನ ಮಾತೇ ಹೀಗೆ. ಪೂರ್ವಾಪರಗಳನ್ನು ಯೋಚಿಸದೆ decisive statement ಕೊಟ್ಟುಬಿಡುತ್ತಾನೆ. Of course, ಅದೇ ಇವನಲ್ಲಿರುವ ಹುಮ್ಮಸ್ಸಿನ ಸಾಹಸಿಯನ್ನು ಪ್ರಚೋದಿಸುವುದು. ಒಂದು article ಬರ್ಕೊಡ್ತೀಯಾ ಎಂದು ಕೇಳಿದರೆ, ಪ್ರಯತ್ನ ಪಡ್ತೀನಿ ಅಂತ ಹೇಳೋದೇ ಇಲ್ಲ. ಆಗುತ್ತೆ ಅಥವಾ ಆಗಲ್ಲ ಎಂದು ನೇರವಾಗಿ ಹೇಳ್ತಾನೆ. ಆಗೋ ವಿಷಯಗಳಿಗೆ, ಕಣ್ಣು ಮುಚ್ಚಿಕೊಂಡು "ಜೈ" ಎಂದು ಉತ್ತರ ಕೊಡುತ್ತಾನೆ. ನಿರ್ಧಾರಗಳಿಗೆ ಹೆಚ್ಚು ಸಮಯ ತೆಗೆದುಕೊಂಡು ಮನಸ್ಸು ಬದಲಾಗಲು ಆಸ್ಪದ ಕೊಡುವುದಿಲ್ಲ. ಮುನ್ನುಗ್ಗುವ ಸ್ಥೈರ್ಯ ಸಾಹಸ ಸದಾ ಇವನನ್ನು ರಕ್ಷಿಸುತ್ತಿರಲಿ ಎಂದು ಹಾರೈಸುತ್ತೇನೆ.


ಇವನನ್ನು ಬೆಟ್ಟಿಯಾದ ದಿನ ಈತ ಮಾತನಾಡುತ್ತಿದ್ದುದನ್ನು ಕೇಳಿದಾಗ, "ನಾನು ಈತನ ಮುಂದೆ ತುಂಬಾ ಎಳಸು" ಎಂಬ ಭಾವನೆ ಪ್ರಾಮಾಣಿಕವಾಗಿ ಮೂಡಿತ್ತು.


ಮೊನ್ನೆ ಇವನೊಡನೆ ಪ್ರಪ್ರಥಮ ಬಾರಿಗೆ ಟ್ರೆಕ್ಕು ಮಾಡಿದ "ಸುಬ್ಬಿ"ಗೆ (ಕಾರಣಾಂತರದಿಂದ ಅವಳ actual ಹೆಸರನ್ನು ಇಲ್ಲಿ ಪ್ರಕಟಿಸುವಂತಿಲ್ಲ) ಎಂದಿನದೋ ಸ್ನೇಹವೆಂಬಷ್ಟು ಹತ್ತಿರವಾಗಿದ್ದ. ಅವಳನ್ನು ಒಂದೊಂದು ವಾಕ್ಯಕ್ಕೆ ಒಂದೊಂದು ಹೆಸರಲ್ಲಿ ಕರೆದು ರೇಗಿಸುತ್ತಿದ್ದ. ಡೀನ್ ಕೂಡ ಇವನ ಜೊತೆ ಕೈ ಸೇರಿಸಿದ್ದು ಒಳ್ಳೇ ಮನರಂಜನೆಯುಂಟುಮಾಡಿತ್ತು. ಇಂಥಾ ಜಾಲಿ ಮನುಷ್ಯನ ಜೊತೆ ಇರಲು ಯಾರಿಗೆ ತಾನೆ ಇಷ್ಟವಾಗುವುದಿಲ್ಲ?


ಅನ್ನಪೂರ್ಣರ ಕ್ಯಾಮೆರಾ ಮುನಿಸಿಕೊಂಡಿದ್ದರ ಕಾರಣ, ನನ್ನ ಮೊಬೈಲೇ ಕ್ಯಾಮೆರಾ ಆಗಬೇಕಾಗಿ ಬಂದಿತು. ಫೋಟೋಗ್ರಾಫರ್ ಆಗಿದ್ದು ಶ್ರೀನಿಧಿಯೇ. ಅನ್ನಪೂರ್ಣರಂತೆ, ನನ್ನಂತೆ, ಡೀನ್‍ರಂತೆ ಇವನೂ ಕೂಡ ಕ್ಲಿಕ್ಕಿಸುವುದು ಮನುಷ್ಯರ ಮುಖಗಳನ್ನಲ್ಲ. ಹಸಿರನ್ನು.. ಹಾರುವ ಹೂಗಳನ್ನು.. ಇನ್ನೂರು ಫೋಟೋ ತೆಗೆದಿದ್ದರು. ನನ್ನ ಮೊಬೈಲು "ಇನ್ನು ಸ್ಥಳವಿಲ್ಲ ಕಣಯ್ಯಾ" ಎಂದು ಹೇಳುವವರೆಗೂ ಬಿಡಲಿಲ್ಲ. ಜಲಧಾರೆಯ, ಅರಣ್ಯದ, ಸ್ವಚ್ಛಂದ ಪರಿಸರದ ಹಿತದೃಷ್ಟಿಯಿಂದ ಅವುಗಳ ಎಲ್ಲ ಚಿತ್ರಗಳನ್ನು ಇಲ್ಲಿ upload ಮಾಡುವುದಿಲ್ಲ, ಕ್ಷಮಿಸಿ. ದಟ್ಟಡವಿಯಾದರೂ, ಕಾಲುದಾರಿ ಸ್ಪಷ್ಟವಾಗಿದ್ದು, ಜಲಧಾರೆಯನ್ನು ತಲುಪುವ ಹೊತ್ತಿಗೆ ಸಂಜೆ ಐದಾಗಿಹೋಗಿತ್ತು. ಗೋವಿಂದರಾಜ್, ನಾನು ಮತ್ತು ಸುಬ್ಬಿ ಪೂರ್ತಿ ಜಲಧಾರೆಯ ಬುಡದವರೆಗೂ ಹೋಗಲಿಲ್ಲ. ದರ್ಶನ ಮಾಡಿ, ಅಲ್ಲೇ ನೀರಿನಲ್ಲಿ ಆಟವಾಡಿ ಕುಳಿತೆವು. ಈ ಚಾರಣದಲ್ಲಿ ನಾನು ಸ್ವಲ್ಪ ಮಾನಸಿಕವಾಗಿಯೂ, ದೈಹಿಕವಾಗಿಯೂ ಸ್ವಲ್ಪ ಅಸಮರ್ಥನಾಗಿದ್ದೆ ಎಂದು ನನಗೆ ಗೋಚರಿಸುತ್ತಿತ್ತು. ನನಗೆ ಯಾವ risk ತೆಗೆದುಕೊಳ್ಳಲೂ ಇಷ್ಟವಿರಲಿಲ್ಲ. ಶ್ರೀನಿಧಿ, ಅನ್ನಪೂರ್ಣ, ಡೀನ್ - ಸಮಯದ ಅಭಾವದಿಂದ ಚಾರಣವನ್ನು ಸಂಪೂರ್ಣಗೊಳಿಸದಿದ್ದರೂ ಜಲಧಾರೆಯ ಬುಡದವರೆಗೂ ಹೋಗಿಬಂದರೆಂಬುದಕ್ಕೆ ಅವರ ಆನಂದವು, ಬಣ್ಣನೆಗಳು, ಫೋಟೋಗಳು ಸಾಕ್ಷಿಯಾಗಿವೆ. ನಾನು ನೀರಿನಲ್ಲಿ ಇಳಿದೆನೆಂಬುದಕ್ಕೆ ಒದ್ದೆ ಚಡ್ಡಿಯು ಸಾಕ್ಷಿಯಾಗಿದೆ!!ಮೊದಲ ಸಹಚಾರಣಿಗ..


ಹೆಸರು ಗೋವಿಂದ್ ರಾಜ್. ವಯಸ್ಸು ಐವತ್ತು. ಹುಮ್ಮಸ್ಸು ಇಪ್ಪತ್ತು ವರ್ಷದ ಯುವಕನ ಹಾಗೆ. ಮಾತು ಎಪ್ಪತ್ತು ವರ್ಷದ "ಯುವಕ"ನ ಹಾಗೆ. "ರೀ, ಈ ಟ್ರೆಕ್ಕು ಸಕ್ಕತ್ತಾಗಿತ್ತು. ಒಳ್ಳೇ ಅಡ್ವೆಂಚರ್ ಇತ್ತು" ಎಂದು ಹೇಳಿದವರೂ ಇವರೇ, "ರೀ, ಯಾಕೆ ಮುಂದೆ ಹೋಗ್ತಿದೀರ, ಟೈಮಾಗೋಗುತ್ತೆ, ಆಮೇಲೆ ಸಕ್ಕತ್ ಕಷ್ಟ ಆಗೋಗುತ್ತೆ ನೋಡಿ. come back" ಅಂತ ಹೇಳಿ ಅನ್ನಪೂರ್ಣ ಶ್ರೀನಿಧಿಯರನ್ನು ಕಿರಿಕಿರಿ ಮಾಡಿದ್ದೂ ಇವರೇ. ಇವರಂಥ ಸಾಹಸಿ ಇನ್ನೊಬ್ಬರಿಲ್ಲವೆನ್ನಿಸುವಷ್ಟರಲ್ಲಿ "ಯಾಕೆ ರಿಸ್ಕ್ ತೊಗೋಬೇಕು" ಎಂದು ಹೇಳಿ ಬಿಸಿರಕ್ತದವರನ್ನು ನಿರಾಶೆಗೊಳಿಸಿಬಿಡುತ್ತಾರೆ ಕೆಲವು ಸಲ.


ಇವರು ಮೊದಲು ನನಗೆ ಪರಿಚಯವಾಗಿದ್ದು ನಾನು ಪ್ರಥಮ ಬಾರಿಗೆ ಕುಮಾರಪರ್ವತಕ್ಕೆ ಸ್ವಾಮಿಯವರ leadershipನಲ್ಲಿ ಹೋದಾಗ. ಆಗ ನಾನು ಟ್ರೆಕ್ಕಿಂಗ್‍ಗೆ ಹೊಚ್ಚಹೊಸಬ. ಇವರು ಹಿಮಾಲಯದ ಒಂದೆರಡು ಟ್ರೆಕ್ಕನ್ನು ಮಾಡಿಬಂದಿದ್ದರು. ಜೊತೆಗೆ ಒಳ್ಳೇ ಮಾತುಗಾರರು. ಇವರು ಮಾತನಾಡುತ್ತಿದ್ದುದನ್ನು ಕೇಳಲು ಬಹಳ ಸೊಗಸಾಗಿರುತ್ತಿತ್ತು. ಇವರನ್ನು ನೋಡಿದ ಪ್ರತಿಯೊಬ್ಬರೂ ಒಂದು ಪ್ರೆಶ್ನೆ ಕೇಳೇ ಕೇಳುತ್ತಾರೆ. ಶ್ರೀನಿಧಿಯೂ ಅದನ್ನು ಕೇಳಿದ್ದ. "ಇವರು ಮಿಲಿಟರಿಯವರಾ?" ಎಂದು! ಅವರ body language ಥೇಟ್ ಒಬ್ಬ ಮೇಜರ್‍ನಂತೆ! ಬಾಯಿ language ಕೂಡ ಮಿಲಿಟರಿಯವರ ಥರವೇ. "ಈ ಬೋಳಿ ಮಕ್ಳು ನಮ್ ದೇಶಾನ ಮಾರ್ಕೋತಾ ಇದಾರೆ..", "ಆ ಸೂಳೇಮಗ .......... ಸ್ವಾಮಿನ ಮೊದಲು ಓಡಿಸಬೇಕು.." ಅನ್ಯಾಯ ಮಾಡುವವರನ್ನು ಈ ರೀತಿ ಬೈಯ್ಯುತ್ತಲೇ ಇರುತ್ತಾರೆ, ಜೋರು ಜೋರಾಗಿ.


ಸಖತ್ rough ಮನುಷ್ಯ ಎಂದು ತಾವೇ ಅನೇಕ ಸಲ ಹೇಳಿಕೊಂಡಿದ್ದಾರೆ, ಹಾಗೆ ನಡೆದುಕೊಂಡೂ ಸಹ ಇದ್ದಾರೆ. ಚಾರಣಿಗರು

ಬರೀ ಉತ್ಸಾಹಭರಿತರಾಗಿದ್ದರೆ ಸಾಲದು, rough ಆಗೂ ಇರಬೇಕು ಎಂಬುದನ್ನು ಸಾಬೀತು ಪಡಿಸಿದ್ದಾರೆ, ಅನೇಕ ಸಲ. ಯಾರಾದರೂ ಕೆಣಕಿದರೆ ಅವರನ್ನು ಸರಿಯಾಗಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ಅನ್ಯಾಯವನ್ನು ಖಂಡಿಸುತ್ತಲೇ ಇರುತ್ತಾರೆ. And ತುಂಬಾ straight forward ವ್ಯಕ್ತಿ.


ಅರ್ಧ ತೋಳಿನ T Shirt, ಒಂದು ಬರ್ಮುಡಾ ಚಡ್ಡಿ, ಟ್ರೆಕ್ಕಿಂಗ್ ಶೂ, ಬೆನ್ನ ಹಿಂದೆ ರಕ್‍ಸ್ಯಾಕ್ ಎಂದ ಕ್ಷಣ ಗೋವಿಂದ್ ರಾಜರ ರೂಪ ಕಣ್ಣೆದುರು ಬಂದುಬಿಡುತ್ತೆ. ಒಂದು ರೀತಿಯ commanding ಧ್ವನಿ. ನನ್ನ ಹಾಗೆಯೇ ಹಳೆಯ, ಅದರಲ್ಲೂ ಸೈಗಲ್, ಎಸ್.ಡಿ. ಬರ್ಮನ್ ಸಂಗೀತಪ್ರಿಯರು. ಹಳೆಯ ಹಾಡುಗಳನ್ನು ಪ್ರತೀ ಟ್ರೆಕ್ಕಿನಲ್ಲೂ ಹಾಡಿಕೊಳ್ಳುತ್ತ ಅದರ ಸಂಗೀತ ಸಾಹಿತ್ಯಗಳನ್ನು ಕೊಂಡಾಡುತ್ತ enjoy ಮಾಡ್ತಿರ್ತೀವಿ. ಸಿಕ್ಕಾಪಟ್ಟೆ passionate. ಒಂದು ಮರದ pillarನ ಹುಡುಕಿಕೊಂಡು, ಇಡೀ ಮಲೆನಾಡನ್ನು ಮಳೆಗಾಲದಲ್ಲಿ ಮೂರು ತಿಂಗಳು ಸತತ ತಿರುಗಿದ್ದಾರೆ. ಹೋಟೆಲ್ ಮಾಣಿಯಿಂದ ಹಿಡಿದು, ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿಯವರೆಗೂ ಎಲ್ಲರನ್ನೂ ವಿಚಾರಣೆ ಮಾಡಿದ್ದಾರೆ.


ಮತ್ತೆ ಇನ್ನೊಂದು ವಿಶೇಷ ಎಂದರೆ, ಇವರು ಇದ್ದಕ್ಕಿದ್ದ ಹಾಗೆ ಗುರುವಾರ ಸಂಜೆ ಫೋನಾಯಿಸಿ, "ಅರುಣ್, ಏನು ನಾಳೆ ಶನಿವಾರ, ಭಾನುವಾರಕ್ಕೆ ಏನು ಕಾರ್ಯಕ್ರಮ?" ಎನ್ನುತ್ತಾರೆ. ನಾನು ಯಾವುದೋ ಟ್ರೆಕ್ಕು ಎಂದು ಹೇಳುವ ಮುಂಚೆಯೇ, "ನಾನೂ ಬರ್ತೀನಿ, ನಂಗೊಂದು ಸೀಟು ಬುಕ್ ಮಾಡಿ" ಎನ್ನುತ್ತಾರೆ. ಎಲ್ಲಿಗೆ, ಏನು, ಎತ್ತ, ವಿಚಾರಿಸೋದೇ ಇಲ್ಲ. ರೈಲ್ವೇ ಸ್ಟೇಷನ್‍ನಲ್ಲಿ ಕೇಳ್ತಾರೆ, "ಏನು ಈ ಸಲದ schedule?" ಎಂದು. ಅಡ್ವೆಂಚರ್‍ಗೆ everready!!


ಹೀಗೆಂದುಕೊಳ್ಳುತ್ತಿದ್ದಂತೆಯೇ ಟ್ರೆಕ್ಕಿನಲ್ಲಿ ತಾವು ಹಿರಿಯರು ಎಂಬ ಕಾರಣಕ್ಕಾಗಿಯೋ ಏನೋ, ಅಥವಾ ತಮ್ಮ ಮೇಲೆ ಯಾವುದೋ ದೊಡ್ಡ ಜವಾಬ್ದಾರಿ ಇದೆಯೇನೋ ಎಂಬುದಕ್ಕಾಗಿಯೋ ಏನೋ, ಕೆಲವು ಅಡ್ವೆಂಚರ್‍ಗಳಿಗೆ ವಿರುದ್ಧ ಮಾತಾಡಿಬಿಡುತ್ತಾರೆ. "ಅರುಣ್, ಅಲ್ಲೆಲ್ಲಾ ಹೋಗೋದು ಬೇಡ.. Tell them to come back.." ಎಂದು, ಅಥವಾ, "See, I tell you one thing, come here, ಕತ್ತಲಾದರೆ ಆಮೇಲೆ ತುಂಬಾ ಕಷ್ಟ ಆಗುತ್ತೆ ನೋಡಿ.. ಬೇಡ ಅಲ್ಲಿಗೆ ಹೋಗೋದು.." ಎಂದು ಹೇಳಿಬಿಡುತ್ತಾರೆ. ಅನೇಕ ಸಲ, ಅನ್ನಪೂರ್ಣರಂಥವರು ಇದರಿಂದ ಸ್ವಲ್ಪ agitate ಆಗಿರುವುದು ಕಣ್ಣಿಗೆ ಕಂಡು ಬಂದರೂ ಯಾರೂ ಇವರ ವಿರುದ್ಧ ಮಾತನಾಡಿಲ್ಲ. ಆ ಗೌರವ, ಪ್ರೀತಿ ಇವರ ಮೇಲೆ ನಮ್ಮ ಟೀಮು ಸದಾ ಇಟ್ಟಿರುತ್ತದೆ.ದೇವಕಾರದ campsite ಇವರಿಗೆ ತುಂಬಾ ಹಿಡಿಸಿತು. "ಅಮೇದಿಕಲ್ಲು ಟ್ರೆಕ್ಕಿಂಗ್‍ಗೆ ತುಂಬಾ ಚೆನ್ನಾಗಿತ್ತು, ಇದು ಕ್ಯಾಂಪಿಂಗ್‍ಗೆ ತುಂಬಾ ಚೆನ್ನಾಗಿದೆ.. ಇಂಥ valleyಲಿ camp ಮಾಡೋ ಪುಣ್ಯ ನಮ್ಮದು ನೋಡಿ." ಎಂದು ಸಾರಿ ಸಾರಿ ಹೇಳಿದರು. ಟ್ರೆಕ್ಕಲ್ಲಿ wildanimals sightings ಆಗುತ್ತೋ ಬಿಡುತ್ತೋ, Tiger roar ಕೇಳಿಸುತ್ತೋ ಬಿಡುತ್ತೋ, ಇವರ "Roar" ಮಾತ್ರ ರಾತ್ರಿ ಹೊತ್ತು miss ಇಲ್ಲದ ಹಾಗೆ ಕೇಳಿಸುತ್ತೆ. ಇದನ್ನು ಅವರಿಗೆ ಹೇಳಿಕೊಂಡು ತಮಾಷೆ ಮಾಡಿದರೆ ನಮ್ಮೊಡನೆ ಅವರೂ ನಕ್ಕುಬಿಡುವ sportive ಮನಸ್ಸು ಅವರದು.ಟ್ರೆಕ್ಕು ಮಾಡುತ್ತ ಶ್ರೀನಿಧಿ, ಗೋವಿಂದ್ ರಾಜ್, ನಾನು, ಅನ್ನಪೂರ್ಣ non-veg ಜೋಕುಗಳನ್ನು ಹೇಳಿಕೊಂಡು ನಕ್ಕು ನಲಿಯುತ್ತ ಕಳಚೆಯೆಂಬ ಗ್ರಾಮವೊಂದನ್ನು ತಲುಪಿದ್ದು ಮಧ್ಯಾಹ್ನ ಎರಡಕ್ಕೆ. ಎರಡುವರೆಗೆ ಬರಬೇಕಿದ್ದ ಬಸ್ಸು ಪಂಕ್ಚರ್ ಆಗಿ, ಬಾರದೆ, ನಾಕುವರೆಯ ಬಸ್ಸು ಐದಕ್ಕೆ ಬಂದಿತು. ಅದನ್ನು ತೋರಿಸಿ ಯಾರಾದರೂ "ಇದು ಬಸ್ಸು" ಎಂದು ಹೇಳಿದರೆ ಮಾತ್ರ ಗೊತ್ತಾಗುವಂತಿತ್ತು ಅದು ಬಸ್ಸೇ ಅಂತ. ಬಸ್ಸಿನ ಸಕಲ ಅಂಗಾಂಗಗಳೂ ಅಲುಗಾಡುತ್ತಿದ್ದವು, ಅದನ್ನು ಓಡಿಸುತ್ತಿದ್ದ ಸಾರಥಿಯನ್ನೂ ಸೇರಿಸಿ!!

Wowwww...."Wowww.." ಇದು ತಡಿಯಾಂಡಮೋಳ್‍ಗೆ ನಾನು ಮೊದಲು ರಾಜೇಶ್ ಜೊತೆ ಹೋದಾಗ ಅಲ್ಲಿ ಈ ಉದ್ಗಾರ ಬಹಳ ಪ್ರಸಿದ್ಧ ಆಗಿಹೋಗಿತ್ತು. ಅದನ್ನು ಆರಂಭಿಸಿದ್ದು ಅನ್ನಪೂರ್ಣ, ಅಲಿಯಾಸ್ Ana.. "ಹೇ, ಆ ಬೆಟ್ಟ ನೋಡು.. wowww...", "ಅಲ್ಲಿ ನೋಡು, ಮೋಡ.. wowwwww....", "ಹೇ, wowww... ಅಲ್ಲಿ ನೋಡು, ಆ ಹಕ್ಕಿ!!" ಹೀಗೆ ಪ್ರತಿಯೊಂದು ದೃಶ್ಯಕ್ಕೂ ಪಲ್ಲವಿ ಈ "Wowwww" ಆಗಿತ್ತು..
ಎತ್ತರದ ಶ್ರುತಿಯ ಕಂಠದ ಅನ್ನಪೂರ್ಣ, ಸೊಗಸಾಗಿ ಹಾಡುತ್ತಾರೆ, ಬರೆಯುತ್ತಾರೆ, ನಡೆಯುತ್ತಾರೆ, ನಗುತ್ತಾರೆ, ನಗಿಸುತ್ತಾರೆ, ನಲಿಸುತ್ತಾರೆ!! ತಮ್ಮೆಲ್ಲ ಏಳು ಬೀಳುಗಳನ್ನು ಹಂಚಿಕೊಳ್ಳುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ನಾನೂ ಒಬ್ಬ ಎಂದು ಹೇಳಿಕೊಳ್ಳುವುದಕ್ಕೇನೇ ಹೆಮ್ಮೆ ಹಾಗೂ ಸಂತೋಷ ಆಗುತ್ತೆ. ಅನುಭವಿ, ಅನುಭಾವಿ ಎರಡೂ ಆಗಿರುವ ಇವರು ಸೊಗಸಾದ ವಿಮರ್ಶಕರು. ಏನಾದರೂ ಒಂದು ವಿಷಯವನ್ನು ಕೊಟ್ಟರೆ ಬಹಳ ಬೇಗ ಅತ್ಯಂತ ಕೂಲಂಕುಷವಾಗಿ ಪರಿಶೀಲಿಸಿ, ತಮ್ಮ ವಿಮರ್ಶೆಯನ್ನು ಥಟ್ಟನೆ ಕೊಡುತ್ತಾರೆ. And she wants perfection in everything in life, perfect friend, perfect trek, perfect write-up, perfect company, perfect speech, perfect commitment... ಎಲ್ಲದರಲ್ಲೂ perfectionನ ಬಯಸುತ್ತಾರೆ. Perfection ಇಲ್ಲದ್ದನ್ನು ಸ್ಥಳದಲ್ಲಿಯೇ ಖಂಡಿಸುತ್ತಾರೆ. ನಾವು (ಹತ್ತಿರದವರು) perfect ಅಲ್ಲದಿದ್ದರೂ ಅವರ ಸಮಚಿತ್ತರೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವವರು. ಅದು ನಮ್ಮ ಭಾಗ್ಯ.ಇವರೂ ಕೂಡ ಮಧ್ಯರಾತ್ರಿಯಲ್ಲಿ "ಹೋಣಾ.....?? (ಹೋಗೋಣ್ವಾ?)" ಅಂದ್ರೆ, "ನಡಿ" ಎಂದು ತಮ್ಮ ಗಂಟು-ಮೂಟೆ ಕಟ್ಟಿಕೊಂಡು ಹೊರಟುಬಿಡುವ ಜಾಯಮಾನದವರು. ಎಲ್ಲಿಗೆ, ಏನು ಎನ್ನುವುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹೋಗಬೇಕೆಂದರೆ ಹೋಗುವುದೇ. ಹೋಗಬೇಕೆನ್ನಿಸಿದರೂ ಅಷ್ಟೆ, ಹೋಗಲೇ ಬೇಕು. "ಹೋಗು"ವ ವಿಷಯ ಮಾತ್ರವಲ್ಲ. ಏನಾದರೂ ಮಾಡಬೇಕು ಎಂದು ಮನಸ್ಸಿಗೆ ಬಂದರೆ, ಅದನ್ನು ಮಾಡಲೇ ಬೇಕು. ಆ ಸ್ವಭಾವದವರು. ನಾವೆಲ್ಲಾ ಒಂದೇ ಜಾತಿ ನೋಡಿ!!ಇವರ ಸಾಮಾಜಿಕ ಪ್ರಪಂಚ ಬಹಳ ಬಹಳ ಚಿಕ್ಕದು. ಆದರೆ, ವಿಶ್ವವೇ ಇವರ ಹೃದಯದಲ್ಲಿ ಇದೆಯೇನೋ ಎಂಬಷ್ಟು ಇಷ್ಟವಾಗುತ್ತಾರೆ - ನಮಗೆ. ಹೃದಯ ವೈಶಾಲ್ಯತೆ ಎಷ್ಟಿದೆಯೋ ಧೈರ್ಯ, ನೇರನಡೆ ಕೂಡ ಅದಕ್ಕೆ ಸ್ಪರ್ಧೆಯೆಂಬಂತೆ ರಾರಾಜಿಸುತ್ತಿದೆ. ಏನು ಬೇಕಾದರೂ ಸಾಧಿಸಬಹುದೆಂಬ ಧೈರ್ಯ, confidence. ಸ್ವಲ್ಪ restless. ನಿಜವಾದ ಪರಿಸರಪ್ರೇಮಿ. ಯಾರ ಜೊತೆಗೆ ಬೇಕಾದರೂ ಮಾತನಾಡಲು ತಯ್ಯಾರು. ಎದುರಿರುವವನು ಕೂಲಿಯವನೇ ಇರಲಿ, ಮುಖ್ಯಮಂತ್ರಿಯೇ ಆಗಿರಲಿ ತಮ್ಮ ಅಭಿಪ್ರಾಯ ಏನಾದರೂ ಹೇಳಬೇಕೆಂದಿದ್ದರೆ ಸ್ವಲ್ಪವೂ ಅಳುಕಿಲ್ಲದೆ ಹೇಳಿಬಿಡುತ್ತಾರೆ.

ಚಿಕ್ಕ ಮಕ್ಕಳು ಎಷ್ಟು ನಿಷ್ಕಲ್ಮಶರಾಗಿ ತಮಗೆ ಮನಬಂದಂತೆ ಯಾರಿಗೂ ತೊಂದರೆಯಾಗದ ಹಾಗೆ ಸಂತೋಷಿಸುತ್ತಾರೋ, Ana ಕೂಡ ಅದೇ ಥರ.. Ana's philosophy ಕೂಡ ಅದೇ ಥರ.. ಚಿಕ್ಕ ಮಕ್ಕಳ ಹಾಗೆ ಖುಷಿ ಖುಷಿಯಾಗಿದ್ದು ಜೊತೆಗಿರುವವರನ್ನೂ ಖುಷಿ ಪಡಿಸುವ talentನ ನಾನು ಅಲ್ವ ಸ್ವಲ್ಪ ಇವರಿಂದ ಕಲಿಯಲು ಪ್ರಯತ್ನ ಪಟ್ಟಿದ್ದೇನೆ. ಪರ್ಸನಲ್/ ಆಫೀಷಿಯಲ್ ವಿಷಯಗಳನ್ನು ಟ್ರೆಕ್ಕಿನ ಸಮಯದಲ್ಲಿ ಮಾತೇ ಆಡಬಾರದೆಂಬುದು ಇವರ ಇನ್ನೊಂದು ಫಿಲಾಸಫಿ. ಮಾತು ಏನಿದ್ದರೂ ಟ್ರೆಕ್ಕಿಗೆ ಸಂಬಂಧ ಪಟ್ಟಂತೆ, ಅಥವಾ ಮನಸ್ಸನ್ನು ಮುದಗೊಳಿಸುವ ಯಾವುದೇ ವಿಷಯದ ಬಗ್ಗೆ. ಮನೆಯನ್ನಾಗಲೀ, ಆಫೀಸನ್ನಾಗಲೀ ನಾವು ಟ್ರೆಕ್ಕಿನಲ್ಲಿ ಎಂದೂ ನೆನೆಸಿಕೊಂಡವರೇ ಅಲ್ಲ. ಹಾಗೆ ಆಫೀಸಿನ ವಿಷಯ ಮಾತನಾಡುವುವವರು ಬಂದಿದ್ದರೆ ಅವರನ್ನು "VIRUS" ಎಂದು ಕರೆಯುವುದು ಹೇಗೆ ರೂಢಿಯಾಯಿತೋ ನೆನಪಿಲ್ಲ.


ಹಿಮಾಲಯದ ಐಸಿನಲ್ಲಿ "ಅಯ್ಯೋ, ಅನ್ನಪೂರ್ಣ ಇದ್ದಿದ್ರೆ ಎಷ್ಟು ಖುಷಿ ಪಟ್ಟಿರೋರು" ಎಂದು, ದೆಹಲಿಯ ಬಿಸಿಲಿನಲ್ಲಿ "ಈಗ ಮೇಡಮ್ಮೋರು ಇದ್ದಿದ್ರೆ, ಬೈದಿರೋರು.." ಎಂದು, ಅಮೇದಿಕಲ್ಲಿನ ಮಳೆಯಲ್ಲಿ, "Ana ಏನಾದ್ರೂ ಇರಬೇಕಿತ್ತು, ಮಳೇಗೂ care ಮಾಡದೆ 500 photos ತೆಗೆದಿರೋರು" ಎಂದು - ಹೀಗೇ ಅವರು ನನ್ನ ಹಾಗೂ ಡೀನ್‍ರೊಡನೆ ಬಾರದ ಪ್ರತಿಯೊಂದು ಟ್ರೆಕ್ಕಿನಲ್ಲೂ ತುಂಬಾ ಮಿಸ್ ಮಾಡಿಕೊಂಡಿದ್ದೇವೆ.
ಇವರ ಬಗ್ಗೆ ಬರೀತಾ ಹೋದರೆ ಪುಟಗಟ್ಟಲೆ ಬರೆಯಬಹುದು. ಆದರೆ ಬಣ್ಣಿಸಲು ಸಾಧ್ಯವಾಗುವುದಿಲ್ಲ. ಒಂದೇ ಒಂದನ್ನು ಹೇಳಲು ನಾನು ತುಂಬಾ ಸಂತೋಷಿಸುವುದೆಂದರೆ, ನನ್ನ ಟ್ರೆಕ್ಕುಗಳಿಗೆ ಕಳೆಯಿರುವುದೆಂದು ನನಗೆ ಅನ್ನಿಸುವುದು ಅದು ಡೀನ್ ಮತ್ತು ಅನ್ನಪೂರ್ಣ ಇಬ್ಬರೂ ನನ್ನೊಡನೆ ಇದ್ದಾಗ ಮಾತ್ರ! ಇಲ್ಲದಿದ್ದರೆ ಏನೋ ನೀರಸವೆನಿಸುತ್ತಿರುತ್ತೆ.
ಹುಟ್ಟಿ ಬೆಳೆದದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಾಡಿನ ಸಮೀಪವಾದ್ದರಿಂದ ಕಾಡಿನ instincts ಇವರ ಜನ್ಮದಲ್ಲೇ ಬಂದುಬಿಟ್ಟಿದೆ. ಒಂದು ಥರಾ born trekker. ಹೂಗಳು, ಗಿಡಮೂಲಿಕೆಗಳು ಎಲ್ಲದರ ಬಗ್ಗೆ ಅಪಾರ knowledge ಇರಲು ಇವರ ವಂಶವೂ ಕಾರಣ ಎನ್ನಿಸುತ್ತೆ. ಬೆಳೆದು ಬಂದ ರೀತಿ ನಮ್ಮ ಬದುಕಿನ ಶೈಲಿಯನ್ನು ರೂಪಿಸುತ್ತೆ. ಬೆಂಗಳೂರಿಗನಾದ ನನಗೆ ಬೆಟ್ಟದ ಮೇಲಿನ ಒಂದು ಸಣ್ಣ ಬೆಂಕಿ ಕಾಳ್ಗಿಚ್ಚಿನ ಹಾಗೆ ಕಾಣಿಸುತ್ತೆ, scientific definition ಪ್ರಕಾರ - ಇವರು ಅಂಥದನ್ನು ಹುಟ್ಟಿದಾಗಿನಿಂದಲೂ ನೋಡುತ್ತಾ ಬಂದವರು, ನನ್ನ ಭಾವನೆಗಳಿಗೆ ಅಚ್ಚರಿ ಪಡುತ್ತಾರೆ. ದೇವಕಾರದ ತುಂಬಾ ಈ ಬೆಂಗಳೂರಿಗನು ಬರೆದ ಕಾಳ್ಗಿಚ್ಚಿನ ಅಂಕಣದ ಬಗ್ಗೆ ಹೇಳಿಕೊಂಡು ಶ್ರೀನಿಧಿ, ಅನ್ನಪೂರ್ಣ ತುಂಬಾ ನಕ್ಕರು. ನಾನು ಕೂಡ ಇವರೊಂದಿಗೆ ಮನಸಾರೆ ನಕ್ಕೆ. ತಿಳಿಯಬೇಕಾದ್ದು ಬಹಳಷ್ಟಿವೆ ಎಂದು ಈ ಟ್ರೆಕ್ಕು ತಿಳಿಸಿಕೊಟ್ಟಿತು..ದೇವಕಾರದಲ್ಲಿ ನಾವು ಉಳಿದುಕೊಂಡಿದ್ದ ಮನೆಯವರೊಂದಿಗೆ Ana ಬಹಳ ಬೇಗ ಹೊಂದಿಕೊಂಡು ಅವರ ಮನೆಯವರಂತೆಯೇ ಇದ್ದರು. ಅಡುಗೆಗೆ ಸಹಾಯ ಮಾಡುವುದು, ಅವರೊಡನೆ ಅವರ ಕಷ್ಟ ಸುಖಗಳನ್ನು ಮಾತನಾಡುವುದು, ಹೀಗೆ! ನಿಷಿದ್ಧ ಪ್ರದೇಶದಲ್ಲಿ ನಾವು ಕಾಲಿಟ್ಟಾಗಲೂ ಕೂಡ officials ಜೊತೆಗೆ ಅನ್ನಪೂರ್ಣ ಬಹಳ ಸೊಗಸಾಗಿ, with sense of humour, ಮಾತನಾಡಿದರು.ನೀರಿನಲ್ಲಿ ಇವರು ಆಟವಾಡಿದ್ದನ್ನು ನೋಡಲಿಲ್ಲ. ಆದರೆ ಆ ಫೋಟೋ ನೋಡಿದ ಮೇಲೆ ಅಯ್ಯೋ ಆ ಜಾಗದಲ್ಲಿ ನಾನೂ ಇರಬೇಕಿತ್ತು ಎಂದೆನಿಸಿತು. ಅದು ಈ ಟ್ರೆಕ್ಕಿನ BEST photo, ನನ್ನ ಪ್ರಕಾರ!!


ನಿಮ್ಮ ಹೆಸರೇನು??ಇದು ಡೀನ್‍ಗೆ ಪ್ರತಿಯೊಬ್ಬರೂ ಕೇಳುವ ಪ್ರೆಶ್ನೆ. ಪರಿಚಯ ಮಾಡಿಕೊಳ್ಳುವಾಗ clear ಆಗಿ ಕೇಳಿರ್ತಾರೆ, ಆದರೂ ಬಿಡುವಾದಾಗ ಮತ್ತೊಮ್ಮೆ ಖಾತ್ರಿ ಮಾಡಿಕೊಳ್ಳೋದು, "ನಿಮ್ಮ ಹೆಸರು ನಿಜವಾಗಿಯೂ ಏನು?" ಎಂದು. ಟ್ರೆಕ್ಕಿಗೆ ಬರುವ ಪ್ರತಿಯೊಬ್ಬರಿಗೂ ಯಾಕೆ ಈ ಅನುಮಾನ ಬರುವುದೋ ನಾ ಕಾಣೆ. ಅಚ್ಚರಿಯೆಂದರೆ ನನಗೆ ಈ ಡೌಟು ಎಂದೂ ಬಂದಿಲ್ಲ. ಹೆಸರು ಡೀನ್ ಎಂದರೆ ಡೀನ್ ಅಷ್ಟೆ. ಅದರಲ್ಲಿ ಅನುಮಾನ ಯಾಕೆ? ಮುಂದಿನ ಪ್ರೆಶ್ನೆ ಜನ ಕೇಳುವುದು, "ನೀವು ಕ್ರೈಸ್ತರೇ?" ಇದೊಂದು ಅನಗತ್ಯ ಪ್ರೆಶ್ನೆ. ಇರಲಿ. ಜನ ಏನೇ ಕೇಳಲಿ, ನಾನು ಏನೇ ಕೇಳದಿರಲಿ, ಅವರ ಹೆಸರು ಏನೇ ಆಗಿರಲಿ, ನನಗೆ ಟ್ರೆಕ್ಕಿಂಗಿನಲ್ಲಿ ಸಿಕ್ಕ greatest co-trekker ಎಂದರೆ ಅದು ಅತಿಶಯೋಕ್ತಿಯಾಗಲಾರದು.ಡೀನ್ ಒಬ್ಬ ಸಂಪೂರ್ಣ ಟ್ರೆಕ್ಕರ್. ಟ್ರೆಕ್ಕಿಂಗ್ ಆಗಲೀ, ಪ್ರಯಾಣ ಆಗಲೀ ಮಾಡುವಾಗ ಅವರು ಅದರಲ್ಲಿ 100% ತೊಡಗಿಕೊಂಡುಬಿಟ್ಟಿರುತ್ತಾರೆ. ಬೇರೆ ಏನನ್ನೂ ತಲೆಯಲ್ಲಿ ಇಟ್ಟುಕೊಂಡಿರುವುದಿಲ್ಲ. ಅಮೃತ್ಸರದ ವಾಘಾ ಬಾರ್ಡರಿನಲ್ಲಿ ಪಾಕಿಸ್ತಾನದವರೊಡನೆ ಹಸ್ತಲಾಘವ ಮಾಡಲು ಐದು ನಿಮಿಷ ಸಮಯ ಕೊಡುತ್ತಾರೆ ಎಂದು ಕೇಳಿದ ತಕ್ಷಣ ಧಾವಿಸಿದ್ದರು. ಅಕ್ಕ ಪಕ್ಕ ಏನನ್ನೂ ನೋಡದೆ. ನಾನು ಮೇಲೆ, ಕೆಳಗೆ, ಎಡಕ್ಕೆ, ಬಲಕ್ಕೆ, ಹಿಂದೆ, ಮುಂದೆ ಎಲ್ಲಾ ತಿಣುಕಾಡಿದ್ದೆ. ಹಸುವನ್ನು ಕಳೆದುಕೊಂಡ ಕರುವಿನಂತೆ ನಿಸ್ಸಹಾಯಕನಾಗಿ ಕಣ್ಣುತುಂಬಿಸಿಕೊಂಡು ಕಳೆದು ಹೋದವನಾಗಿದ್ದೆ. ಡೀನ್ ಅಷ್ಟು involve ಆಗಿಬಿಡುತ್ತಾರೆ. ಅವರಿಗೆ ಬಹುಶಃ ಅರುಣನ ಜೊತೆಗೆ ಬಂದಿದ್ದೆ ಅನ್ನುವುದು ಮರೆತೇ ಹೋಗಿತ್ತೇನೋ, ಅಥವಾ ಅರುಣನಿಗೆ ಕಾದು ಕೂತರೆ ಅಲ್ಲಿ ಹಸ್ತಲಾಘವ ಮಾಡಲು ಆಗುವುದಿಲ್ಲವೆಂದು ಅವರ ಸುಪ್ತ ಮನಸ್ಸು ಅವರನ್ನು ಎಳೆದೊಯ್ದಿತ್ತೇನೋ.. ಗೊತ್ತಿಲ್ಲ.


ಟ್ರೆಕ್ಕಿಂಗಿನಲ್ಲೂ ಅಷ್ಟೆ. ಇಷ್ಟು ಗಂಟೆಗೆ ಇಲ್ಲಿ ಇರಬೇಕು, ಇಷ್ಟು ಆಹಾರ ರೆಡಿ ಇಟ್ಟುಕೊಳ್ಳಬೇಕು, ಇಲ್ಲಿ ಕ್ಯಾಂಪ್ ಮಾಡಬೇಕು.. ಇಷ್ಟೆಲ್ಲಾ ಬಹಳ systematic ಆಗಿ plan ಮಾಡುವ ಕೆಲ್ಸದಲ್ಲಿ ಇವರು ಬಹಳ ಉತ್ತಮರು. ಎಲ್ಲಕ್ಕಿಂತ, ಇವರಿಗೆ ಅಪಾರವಾದ ನೆನಪಿನ ಶಕ್ತಿ ಇದೆ, especially, ನಕ್ಷೆಗಳ ವಿಷಯವಾಗಿ. ಇವರ ತಲೆಯಲ್ಲೇ maps ಇವೆ. ಒಂದು ಜಾಗದ ಹೆಸರು ಹೇಳಿದರೆ, ಅದರ ಸುತ್ತಮುತ್ತದ ಜಾಗದ ಮಾಹಿತಿಗಳನ್ನೂ ವಿವರವಾಗಿ ಕೊಟ್ಟು, ಜೊತೆಗೆ back-up planಗಳನ್ನೂ ಕೊಡುತ್ತಾರೆ. ಪ್ರಪಂಚದಲ್ಲಿ ಎಲ್ಲೇ ಹೋದರೂ survive ಆಗುವ ಸಮರ್ಥರು. ನನ್ನ ಹಾಗೆಯೇ ಇವರಿಗೂ ಪ್ರಪಂಚದಲ್ಲಿರುವ ಸ್ಥಳಗಳನ್ನೆಲ್ಲಾ ನೋಡಬೇಕೆಂಬ ಆಸೆ. ಇಡೀ ಪ್ರಪಂಚವನ್ನು ಸುತ್ತಿಬಿಡಬೇಕು ಜನ್ಮದಲ್ಲಿ.


"ಕಾಫಿ, ಟೀ ಎಲ್ಲಾ ಕುಡೀಬೇಡ್ರೀ, ಅದು ವಿಷ.." ಎಂದು ನನಗೆ ಅದೆಷ್ಟು ಸಲ ಹೇಳಿದ್ದಾರೋ ನನಗೆ ನೆನಪಿಲ್ಲ. ಆದರೆ, ಮೊದಲ ಬಾರಿ ಯಾವ tone ಅಲ್ಲಿ, ಯಾವ ಭಾವನೆಯಲ್ಲಿ ಹೇಳಿದ್ದರೋ, ಇಂದೂ ಸಹ ಅದೇ toneನಲ್ಲೇ ಹೇಳ್ತಾರೆ. ಅಷ್ಟೇ cool ಆಗಿ, ಅಷ್ಟೇ calm ಆಗಿ!! ಇನ್ನೊಂದು ಬಹಳ ಮುಖ್ಯವಾದ ವಿಷಯ ಎಂದರೆ, ಇವರ "shoulders". ಯಾವ ದಿಂಬೂ ನನ್ನ ತಲೆಗೆ ಅಷ್ಟು ಸರಿ ಹೊಂದಿಲ್ಲ. ಬಸ್ಸಿನಲ್ಲಿ ಇವರ ಭುಜಕ್ಕೊರಗಿ ನಿದ್ರಿಸಿದೆನೆಂದರೆ ಸ್ವಪ್ನಸ್ವರ್ಗದಲ್ಲಿ ಲೀನವಾಗಿಬಿಟ್ಟಿರುತ್ತೇನೆ. ತೋಳುಗಳು ಕಬ್ಬಿಣದಂತೆ, ಆದರೆ, ಪ್ರೀತಿ ತುಂಬಿದ ಮನಸ್ಸು ಹೂವಿನಂತೆ. ಇವರ ತಂಟೆಗೆ ಬಂದವರಿಗೆ ಕಬ್ಬಿಣದ ಕೈಗಳಿಂದ ಒದೆ ಬಿದ್ದಿರೋದನ್ನು ನಾನೆ ಕಣ್ಣಾರೆ ನೋಡಿದೀನಿ.


ಈ ಇಡೀ ದೇವಕಾರ್ ಟ್ರೆಕ್ಕಿನ plan ಮಾಡಿದ್ದು ಡೀನೇ. Feb 4th ಅವರ ಹುಟ್ಟುಹಬ್ಬ. ಹುಟ್ಟುಹಬ್ಬದ ದಿನ ದೇವಕಾರಿನಲ್ಲಿ ಕಳೆದಿದ್ದೆವು. ಪುಸ್ತಕಗಳನ್ನು ಉಡುಗೊರೆಯಾಗಿ ಕೊಟ್ಟು ಅವರನ್ನು ಸಂತೋಷಗೊಳಿಸಿದೆ ಎಂದು ನಂಬಿದ್ದೇನೆ. ಆದರೆ, ಅನ್ನಪೂರ್ಣರ ಜೊತೆಗೆ ಬೆಂಗಳೂರಿನಲ್ಲೇ ಕೊಡುತ್ತೇನೆಂದು ಹೇಳಿ, ಅಲ್ಲಿ ಕೊಟ್ಟಿದ್ದು ಅಷ್ಟು ಸರಿಯಿರಲಿಲ್ಲವೆಂದು ನನಗೆ ಕೊಟ್ಟ ಮೇಲೆ ಅನ್ನಿಸಿತು. ಇವರ planningu ಎಂದೂ fail ಆಗಿದ್ದಿಲ್ಲ. ಎಲ್ಲಾ ದೇವರ ದಯೆಯಿಂದ ಸಲಕ್ಷಣವಾಗಿಯೇ ನಡೆದಿದೆ ಇದುವರೆಗೂ. ದೇವಕಾರಿನ ಟ್ರೆಕ್ಕು ಸಹ ಬಾಳಿನ ಅತ್ಯಂತ ಸೊಗಸಾದ ಚಾರಣಗಳ ಗುಂಪಿಗೆ ಸೇರಿಕೊಳ್ಳಲು ಮುಖ್ಯ ಕಾರಣರಾಗಿದ್ದು ಡೀನ್.


ಡೀನ್ ಇಲ್ಲದೆ ಚಾರಣ ಮಾಡುವುದು ಮನಸ್ಸಿಗೆ ತುಂಬಾ ಕಷ್ಟ ಆಗುತ್ತೆ. ಡೀನ್ ಮತ್ತು ಅನ್ನಪೂರ್ಣ ಟ್ರೆಕ್ಕಿನಲ್ಲಿದ್ದರೆ, ಎರಡು ಕಣ್ಣುಗಳನ್ನು ತೆರೆದು ಟ್ರೆಕ್ಕು ಮಾಡುವಂತೆ. ಈ ಕಂಗಳು ಸದಾ ಪ್ರಕಾಶಿಸುತ್ತಿರಲಿ.


ಇನ್ನೊಬ್ಬರು..


ಈ ಟ್ರೆಕ್ಕಿಗೆ ಬಂದ ಇನ್ನೊಬ್ಬರ ಹೆಸರನ್ನಾಗಲೀ, ಅವರ ಬಗೆಗಿನ ವಿವರಗಳನ್ನಾಗಲೀ ಪ್ರಕಟಿಸಬಾರದೆಂದು ಅವರು ಕೇಳಿದ್ದರಿಂದ ಏನನ್ನೂ ಬರೆಯುತ್ತಿಲ್ಲ. ಹೆಸರು "ಸುಬ್ಬಿ". ನನ್ನ ಬಹಳ ಹತ್ತಿರದ ಗೆಳತಿ. ನನ್ನ ಬಗ್ಗೆ ಬಹುಪಾಲು ಅರಿತ ಕೆಲವೇ ಕೆಲವು (ಒಂದಿಬ್ಬರೋ ಮೂರೋ ಜನ ಅಷ್ಟೆ) ಜನರಲ್ಲಿ ಈ ನನ್ನ ಗೆಳತಿ ಬಹಳ ಹತ್ತಿರದವಳು. ಇನ್ನು ಹೆಚ್ಚಿಗೆ ವಿಷಯ ಬೇಡ.


ಮುಕ್ತಾಯ


ಅಂತೂ ಇಂತೂ ಒಂದು ಬೃಹತ್ ಟ್ರೆಕ್ಕನ್ನು ಮುಗಿಸಿ, ಸ್ವಲ್ಪ ಭಾವುಕನಾಗಿ ಈ ಅಂಕಣ ಬರೆದೆ. ಈ ಹಂತದ ಚಾರಣವನ್ನು ನಾನು ಮುಂದೆ ಸದ್ಯದಲ್ಲಿ ಮಾಡುವಂತಿಲ್ಲವೆಂಬ ಬೇಸರವೋ ಏನೋ ಗೊತ್ತಿಲ್ಲ, ಈ ವ್ಯಕ್ತಿಗಳಿಗೆ ಒಂದು ಪ್ರೀತಿಯ ಹೂಗುಚ್ಛವನ್ನು ಅರ್ಪಿಸಬೇಕೆಂದು ಇದನ್ನು ಬರೆದೆ. ಅನೇಕ points miss ಆಗಿರಬಹುದು. ಅನೇಕ ತಪ್ಪುಗಳಿರಬಹುದು. ಎಲ್ಲಾ ಹೊಟ್ಟೆಗೆ ಹಾಕಿಕೊಳ್ಳಿ. ಎಲ್ಲರಿಗೂ all the best.. ಇಡೀ ಪ್ರಪಂಚವನ್ನು ನೋಡುವಂತವರಾಗಿ. ನನಗೆ ಕಾಯದಿರಿ. ಮುಂದೆ ಮುಂದೆ ಸಾಗಿ..


-ಅ

09.02.2007

12AM
ಒಂದಷ್ಟು ಚಿತ್ರಗಳು..