Monday, January 29, 2007

ತೀರ್ಥಹಳ್ಳಿಯ ಬಸ್ಸು.. ಆಗ್ರಾ ರೈಲು.. ನಿಂತದ್ದು ನಾನೇ..

ಬಿಸಿಲದು ಬರಿ ಬಿಸಿಲಲ್ಲವೋ...

ದೆಹಲಿಯಲ್ಲಿ ನಾನು, ಡೀನ್ ಇಬ್ಬರು ಮೇ ತಿಂಗಳಿನಲ್ಲಿ ಪಟ್ಟ ಪಾಡು ಸೊಗಸಾಗಿತ್ತು. ಒಂದು ಸಮಾಧಾನ ಅಂದರೆ, Delhi was better than Amritsar. ಅಮೃತ್ಸರದಲ್ಲಿ 49 degree celcius ಇತ್ತು, ಇಲ್ಲಿ ನಲವತ್ತೊಂದಿತ್ತು. ದೆಹಲಿಯಿಂದ ತಾಜಮಹಲನ್ನು ನೋಡಲೆಂದು ರೈಲಿನಲ್ಲಿ ಹೊರಟೆವಪ್ಪಾ.. ಅಯ್ಯೋ ಕರ್ಮವೇ... ಆ ರೈಲಿನಲ್ಲಿ General Compartment ಇದ್ದದ್ದು ಎರಡೇ! ಜನ ಮಾತ್ರ, ಇಡೀ ರೈಲು ತುಂಬಿಸುವಷ್ಟಿದ್ದರು.
ಕೂರಲು ಜಾಗವೆಲ್ಲಿ, ನಿಲ್ಲಲು ಜಾಗ ಸಿಕ್ಕಿದ್ದೇ ನಮ್ಮ ಪುಣ್ಯ. ಹಾಗೂ ಡೀನ್‍ಗೆ ಸ್ವಲ್ಪ ಹೊತ್ತಾದ ನಂತರ ಜಾಗ ಸಿಕ್ಕಿಬಿಟ್ಟಿತು. ಅವರು ಸೀಟ್ ಪಡೆದುಕೊಳ್ಳುವುದರಲ್ಲಿ Expert. ಅವರ ದೃಢಕಾಯವು ಸೀಟನ್ನು ಯಾರಿಂದ ಬೇಕಾದರೂ ಕಬಳಿಸಿಕೊಳ್ಳಬಹುದು. ಅವರಿಗೆ ಸೀಟು ಪಡೆದುಕೊಳ್ಳುವುದು ಇಷ್ಟದ ಕೆಲಸ ಕೂಡ. ಕುಣಿಗಲ್ ಬಸ್ ಸ್ಟಾಂಡಿನಲ್ಲಿ ಅವರು ಬಸ್ಸಿನ ಕೊನೆಯ ಸೀಟನ್ನು ನಮಗಾಗಿ "ರಿಸರ್ವ್" ಮಾಡಿದ್ದನ್ನು ನಾನು ಮರೆಯುವಂತೆಯೇ ಇಲ್ಲ. ಯಾರೋ ಎದ್ದರು ಎಂದು ಇನ್ನೂ ಖಾತ್ರಿಯೂ ಆಗಿರಲಿಲ್ಲ, ಅವರು ಅಲ್ಲಾಡಿದರು ಅಷ್ಟೆ ಸೀಟಿನಿಂದ. ಡೀನ್ ತಮ್ಮ ಸೀಟನ್ನು ರೈಲಿನ ಸೀಟಿನ ಮೇಲೆ ಇಟ್ಟುಬಿಟ್ಟರು. ಅಚ್ಚರಿಯೆಂದರೆ ಡೀನ್‍ಗೆ ಇಲ್ಲಿ ಒಬ್ಬ ಸ್ಪರ್ಧಿ ಬೇರೆ ಸಿಕ್ಕಿದ್ದ. ಇವರಷ್ಟೇ ವೇಗವಾಗಿ ತನ್ನ ಸೀಟನ್ನೂ ಹೊತ್ತುಕೊಂಡುಬಂದು ಅದೇ ಸೀಟಿನಲ್ಲಿ ಇಟ್ಟ. ಅಲ್ಲಿ ಮುಂಚೆ ಕುಳಿತಿದ್ದವರು ಇವರ ಮುಖಮುಖ ನೋಡುತ್ತಾ ಕೆಳಗಿಳಿದು ಹೋದರು. ಇಲ್ಲಿ ಇವರಿಬ್ಬರು ಒಂದು ರೈಲಿನ ಸೀಟಿಗೆ ತಮ್ಮ ನಿತಂಬಗಳಿಂದ ಯುದ್ಧ ಮಾಡತೊಡಗಿದರು. ಇಬ್ಬರೂ ಅರ್ಧಂಬರ್ಧ ಕುಳಿತಿದ್ದರು. ಆತ ಸ್ವಲ್ಪ ಕೆಮ್ಮಿದ. ಡೀನ್‍ಗೆ ಅಷ್ಟೇ ಸಾಕಿತ್ತು. ದೃಢಸ್ಕಂಧರಾದ ಇವರು ತಮ್ಮ ಎರಡು ಸ್ಕಂಧಗಳನ್ನು ವಿಸ್ತರಿಸಿಬಿಟ್ಟು ಸಂಪೂರ್ಣ ಆಕ್ರಮಿಸಿಕೊಂಡುಬಿಟ್ಟರು. ಆತ helpless fellow, ಕೆಮ್ಮಿದ ತಪ್ಪಿಗೆ ಒಂದಿಂಚು ಜಾಗದಲ್ಲೇ ಕುಳಿತು ಪಯಣ ಮುಂದುವರೆಸಬೇಕಾಯಿತು.

ಇತ್ತ ನಾನು, ದೆಹಲಿಯ ನಲವತ್ತೊಂದು ಡಿಗ್ರಿ ತಾಪಮಾನದಲ್ಲಿ ಜನರಿಂದ ಸುತ್ತುವರೆದು ರೈಲಿನ ಚಾವಣಿಯು ಕೈಗೆಟುಕುವುದೇ ಎಂದು ಹಿಡಿದುಕೊಳ್ಳಲು ಏನೂ ಇಲ್ಲದೆ, ಬೆವರನ್ನೂ ಒರೆಸಿಕೊಳ್ಳಲು ಆಗದೆ ಉಸಿರು ಕಟ್ಟಿಕೊಂಡು ನಿಂತಿದ್ದೆ. ಅಲ್ಲಾಡಿದರೆ ಇನ್ಯಾರಿಗೋ ತಾಕಿ ಅವರ ಬೆವರು ನನಗೆ ತಾಕಿ ಹಿಂಸೆಯಾಗುತ್ತಿತ್ತು. ಅಂಟಂಟು ಮೈ ಬೇರೆ..
ರೈಲಿನಿಂದ ಕೆಳಗಿಳಿದು ಡೀನ್‍ಗೆ ಹೇಳಿದೆ, "ರೀ, ಇದೇ ಕೊನೆ, ಇನ್ನು ಮುಂದೆ ರೈಲಿನಲ್ಲಿ ರಿಸರ್ವೇಷನ್ ಇಲ್ಲದೆ ಎಲ್ಲೂ ಹೋಗೋದು ಬೇಡ. ತಾಜಮಹಲ್ಲಾದರೂ ಸರಿ, ಏನಾದರೂ ಸರಿ." ಎಂದೆ. ಸೀಟನ್ನು ಉಪಯೋಗಿಸಿಕೊಳ್ಳಲು ಬಾರದ ನನ್ನ ಅಸಹಾಯಕತೆಯನ್ನು ನೋಡಿ ಕಣ್ಣಿನಲ್ಲೇ ನಕ್ಕರು ಡೀನ್. "ಅದೇನು ರೈಲೋ ಅಥವಾ ಮಾರ್ಕೆಟ್ಟೋ.. ಅಲ್ಲಿದ್ದೋರು ಜನಾನೋ ಅಥವಾ ದನಗಳೋ.." ಎಂದು ಶಾಪದ ಮೇಲೆ ಶಾಪ ಹಾಕತೊಡಗಿದೆ. ಏನು ಮಾಡೋದು, ಬಿಸಿಲು ಕೂಡ ನನ್ನ ವರ್ತನೆಗೆ ಪ್ರೋತ್ಸಾಹ ಕೊಡುತ್ತಿತ್ತು.

ಅಮೃತ್ಸರದಲ್ಲಿ ನಲವತ್ತೊಂಭತ್ತು ಡಿಗ್ರಿ ತಾಪಮಾನದಲ್ಲಿ ವಾಘಾ ಬಾರ್ಡರ್ ನೋಡಿದ್ದು ಬಿಟ್ಟರೆ ಉಳಿದ ಸಮಯದಲ್ಲೆಲ್ಲಾ ಸ್ನಾನ ಮಾಡಿದ್ದಕ್ಕಿಂತ ಹೆಚ್ಚಿನ ಕೆಲಸ ಇನ್ನೇನು ಮಾಡಿರಲಿಲ್ಲ. ದೆಹಲಿಯೇನು ಕಡಿಮೆಯಿಲ್ಲ ಸ್ವಾಮಿ.. ಆಗ್ರಾ ಕೂಡ!! ಟೋಪಿ ಇತ್ತು ನನ್ನ ಪುಣ್ಯ. ಇಲ್ಲದಿದ್ದರೆ ನನ್ನ ಕೂದಲು ಕಾಳ್ಗಿಚ್ಚಿನಂತೆ ಹೊತ್ತಿಕೊಂಡುಬಿಡುತಿತ್ತು. ಡೀನ್ ಕೂದಲ ವಿನ್ಯಾಸ ಬೆಂಕಿಯು ಹತ್ತಿರ ಸುಳಿಯುವಂತಿರಲಿಲ್ಲ.

ಕುವೆಂಪು ನೆನಪಾದರು, "ಬಿಸಿಲಿದು ಬರಿ ಬಿಸಿಲಲ್ಲವೋ.. ಸೂರ್ಯನ ಕೃಪೆ ಕಾಣೋ.."

ವಸುಧೇಂದ್ರ ನೆನಪಾದರು, "ಶಿವಮೊಗ್ಗದವರು ಏನು ಬೇಕಾದರೂ ಬರೀಬೋದಪ್ಪ ಸೂರ್ಯನ ಬಗ್ಗೆ, ಅದೇ ಮಾತನ್ನು ಅವರು ಬಳ್ಳಾರಿಗೆ ಬಂದು ಹೇಳಲಿ ನೋಡೋಣ??"

ತಾಜಮಹಲನ್ನು ನೋಡಿದಾಗ ತಾಪ ಸ್ವಲ್ಪ ಕಡಿಮೆಯಾಯಿತು. ನೆಲ ಸುಡುತ್ತಿತ್ತಾದರೂ ಎದುರು ಭವ್ಯ ಕಲೆಯೊಂದು ಇದ್ದುದರಿಂದ ಪ್ರೀತಿಯ ನೆನಪು ಬಿಸಿಲನ್ನು ಮರೆಸಿಬಿಟ್ಟಿತ್ತು. ಪ್ರೇಮದರಸನಿಗೆ ಒಮ್ಮೆ ನಮಿಸಿದೆ.. ನನ್ನವಳನ್ನು ಒಮ್ಮೆ ಸ್ಮರಿಸಿದೆ..
ತೀರ್ಥಹಳ್ಳಿಯ ಬಸ್ಸು..

ಗೋವಿಂದರಾಜ್‍ಗೆ ವಿದಾಯ ಹೇಳಿ ತೀರ್ಥಹಳ್ಳಿಯನ್ನು ಐದುಗಂಟೆಗೆ ಬಿಟ್ಟೆ. ನನ್ನ ಲೆಕ್ಕಾಚಾರ, "ಐದಕ್ಕೆ ಹೊರಟರೆ, ಎಂಟಕ್ಕೆ ಮಂಗಳೂರು ತಲುಪಬಹುದು, ಅಲ್ಲಿ ಶಿಲ್ಪಾಳನ್ನು ಭೇಟಿಯಾಗಿ ನಂತರ ರಾತ್ರಿಯ ಬಸ್ಸಿನಲ್ಲಿ ಮೈಸೂರನ್ನು ತಲುಪಿಕೊಳ್ಳಬಹುದು ಎಂದು. ಮಂಗಳೂರಿಗೆ ಹೋಗುವ ಬಸ್ಸು ಆರಾದರೂ ಬರಲಿಲ್ಲ. ಆರುಕಾಲಿಗೆ ಬರಲೋ ಬೇಡವೋ ಎಂದು ಒಂದು ಮಿನಿ ಬಸ್ಸು ಬಂತು. ಅಲ್ಲೆಲ್ಲಾ ನಮ್ಮ ಹಾಗೆ ದೊಡ್ಡ ದೊಡ್ಡ ಬಸ್ಸುಗಳಿಲ್ಲ. ಮಿನಿಬಸ್ಸುಗಳು ಮಾತ್ರ. ಬಸ್ಸಿನ ಸರ್ವೀಸು ತುಂಬಾ ಚೆನ್ನಾಗಿರುತ್ತೆ. ಆದರೆ ಬೆಂಗಳೂರಿಗೆ ಸೋನಿಯಾ ಗಾಂಧಿ ಬಂದಿದ್ದರೆಂದು ಎಲ್ಲಾ ಬಸ್ಸುಗಳೂ ಅಲ್ಲಿಗೆ ಹೋಗಿದ್ದವಂತೆ, ಅದಕ್ಕೆ ಬಸ್ಸುಗಳಿರಲಿಲ್ಲ.

ಧೋ ಎಂದು ಮಳೆ ಸುರಿಯುತ್ತಿತ್ತು. ತೀರ್ಥಹಳ್ಳಿಯ ಮಳೆಯೆಂದರೆ ನಮ್ಮ ಬೆಂಗಳೂರಿನ ಮಳೆಯಂತೆ ಆಗೊಮ್ಮೆ ಈಗೊಮ್ಮೆ visit ಮಾಡಲು ಬರುವಂಥ ಮಳೆಯಲ್ಲ. ಶುರುವಾಯಿತೆಂದರೆ ಜಡಿಮಳೆ, ಮೂರು ತಿಂಗಳು ಬರುತ್ತಿರುತ್ತೆ. ಅಲ್ಲಿ ಮೂಲಭೂತ ವಸ್ತುವಾಗಿ ಒಂದು ಛತ್ರಿಯಂತೂ ಎಲ್ಲರೊಡನೆಯೂ ಇದ್ದೇ ಇರುತ್ತೆ. ಮೂಲಭೂತ ನನ್ನ ಹತ್ತಿರವೂ ಇತ್ತು. ನನ್ನ rucksack ಎಂದಿನಂತೆ ಭರ್ತಿಯಾಗಿ, ಭಾರಮಯವಗಿತ್ತು. ಬಂದ ಬಸ್ಸಿನೊಳಗೆ ನಾನು ತೂರುವುದೇ ಕಷ್ಟವಾಗಿತ್ತು, ಇನ್ನು ನನ್ನ bag ಹೇಗೆ ತೊಗೊಂಡು ಹೋಗಲಿ ಎಂದು ಯೋಚಿಸುತ್ತಿದ್ದಾಗ, ಆ ಬಸ್ಸಿನ ಕಂಡಕ್ಟರಲ್ಲೊಬ್ಬನು (ಆ ಬಸ್ಸುಗಳಲ್ಲಿ ನಾಕೈದು ಕಂಡಕ್ಟರುಗಳಿರ್ತಾರೆ) "ಮೇಲೆ ಹಾಕ್ಬಿಡಿ ಸಾರ್" ಎಂದ. ಅದರಲ್ಲಿ ಕ್ಯಾಮೆರಾ, ಟಾರ್ಚು ಇವೆಲ್ಲಾ ಇವೆ. ಹೇಗೆ ಮೇಲೆ ಹಾಕಲಿ, ಒಂದು ವೇಳೆ ಬಿದ್ದು ಹೋದರೆ ಆಗುಂಬೆಯ ಘಾಟಿನಲ್ಲಿ? ಅದೂ ಅಲ್ಲದೆ ಮಳೆ ಬೇರೆ ಬರ್ತಾ ಇದೆ.. ಬ್ಯಾಗೆಲ್ಲಾ ನೆಂದು ಹೋಗುತ್ತಲ್ಲಾ.. ಎಂದು ಯೋಚಿಸುವಷ್ಟು ಸಮಯ ಕೊಡಲೇ ಇಲ್ಲ. ನನ್ನ ಕೈಯಿಂದ ಬ್ಯಾಗನ್ನು ಕಸಿದುಕೊಂಡು ಮೇಲೆ ಹಾಕಿಬಿಟ್ಟ. ನನ್ನನ್ನು ಆ ಬ್ಯಾಗಿನಷ್ಟೇ ಜೋರಾಗಿ ಬಸ್ಸಿನೊಳಗೆ ಹಾಕಿಬಿಟ್ಟ. ಮಾತಲ್ಲಿ "ಸಾರ್" ಅಷ್ಟೆ, ವರ್ತನೆಯಲ್ಲಿ ಅಲ್ಲ.

ಅಷ್ಟು ರಷ್ ಇರುವ ಬಸ್ಸನ್ನು ನಾನು ನನ್ನ ಜೀವಮಾನದಲ್ಲೇ ನೋಡಿರಲಿಲ್ಲ. ಇಡೀ ಬಸ್ಸಿನಲ್ಲಿ ಸುಮಾರು 80 ಜನ ಇದ್ದೆವು. ಮಿನಿಬಸ್ಸಿನಲ್ಲಿ 40 ಜನರಿದ್ದರೆ ಅದನ್ನು ರಷ್ ಎನ್ನಬಹುದು. 80 ಜನರಿದ್ದರೆ?? "ಆ ರಂಡೆ ಬೆಂಗ್ಳೂರಿಗೆ ಹೋಗ್ತಾಳೆ ಅಂದ್ರೆ ಈ ಬೋಳಿಮಕ್ಳೆಲ್ಲಾ ಯಾಕ್ ಹೋಗ್ಬೇಕು? ನಮ್ಗೆಲ್ಲಾ ತೊಂದ್ರೆ ಆಗಲ್ವಾ ಊರಿಂದ ಊರಿಗೆ ಹೋಗೋರಿಗೆ? ದುಡ್ಡು ಕೊಡ್ತಾರೆ ಅಂದ್ರೆ ಈ ತಾಯ್ಗಂಡ ಸೂಳೇಮಕ್ಳು ಹೆಂಡ್ತಿನೂ ಮಾರ್ಕೋತಾರೆ.." ಎಂದು ನನ್ನ ಪಕ್ಕದಲ್ಲಿ ನಿಂತಿದ್ದ ಒಬ್ಬ ಮುದುಕ ಒಂದೇ ಸಮನೆ ಗೊಣಗಾಡುತ್ತಿದ್ದ.

ಬಸ್ಸಿನೊಳಗೆ ನಿಂತುಕೊಂಡು ಏನನ್ನೂ ಹಿಡಿದುಕೊಳ್ಳುವ ಅವಶ್ಯವಿರಲಿಲ್ಲ. ಎಲ್ಲಾ pack ಆಗೋಗಿದ್ವಿ. ಅಲುಗಾಡಲು ಅವಕಾಶವೇ ಇರಲಿಲ್ಲ. ನಾನು ಹೈಸ್ಕೂಲಿಗೆ ಪಾಠ ಮಾಡುತ್ತಿದ್ದಾಗ "solid molecules are tightly packed" ಎಂದು ಹೇಳಿಕೊಡುತ್ತಿದ್ದುದು ನೆನಪಾಯಿತು. ನಾವು ಹಾಗೇ solid molecules ರೀತಿ ಇದ್ದೆವು. ಕೈ ನವೆಯಾದರೆ ನಮ್ಮ ಕೈಯ್ಯನ್ನೇ ನಾವು ಕೆರೆದುಕೊಳ್ಳುತ್ತಿದ್ದೇವೋ ಅಥವಾ ಪಕ್ಕದವರ ಕೈ ಕೆರೆಯುತ್ತಿದ್ದೇವೋ ತಿಳಿಯುವಂತಿರಲಿಲ್ಲ. ಹಾಗೊಮ್ಮೆ ಕೆರೆದಿದ್ದರೂ, ಅದು ಕೈಯ್ಯೇ ಎಂದು ಖಾತ್ರಿಯೂ ಆಗುವಂತಿರಲಿಲ್ಲ. ಸುಮ್ಮನೆ ಎರಡೂ ಕೈಗಳನ್ನು ಜೇಬಿನೊಳಗಿಟ್ಟುಕೊಂಡು ನಿಂತಿದ್ದರೂ ಬಿಗಿಯಾಗಿ ನಿಂತಿದ್ದೆ.

ಆಶ್ಚರ್ಯ ಆಗಿದ್ದು, ಮುಂದಿನ ಸ್ಟಾಪುಗಳಲ್ಲಿ ಜನ ಇಳಿಯುವುದರ ಬದಲಿಗೆ ಇನ್ನೂ ಹತ್ತುತ್ತಿದ್ದಾರೆ.. ಕಂಡಕ್ಟರುಗಳಿಗೆ ಮಾತ್ರ ಬಸ್ಸಿನೊಳಗೆ ಜಾಗ ಕಾಣುತ್ತಿತ್ತು. "ಬನ್ನಿ ಒಳಗೆ ಖಾಲಿ ಇದೆ.. ಬನ್ನಿ ಖಾಲಿ ಇದೆ.." ಎಂದು ಕೂಗಿ ಕೂಗಿ ಕರೆಯುತ್ತಿದ್ದ. ಇದನ್ನು ಕೇಳಿಸಿಕೊಂಡ ಒಬ್ಬ ವ್ಯಕ್ತಿಯು ನನ್ನ ಶೂ ಮೇಲೆಯೇ ನಿಂತು ತನ್ನ ಕಂಗಳಲ್ಲಿ ಹಾಗೇ scan ಮಾಡತೊಡಗಿದ ಎಲ್ಲಾದರೂ ಜಾಗ ಇದೆಯೇ ನಿಲ್ಲಲು ಎಂದು. ನಾನು "ಸ್ವಾಮಿ, ಆತ ಕೂಗಿದ್ದು "ಖಾಲಿ" ಇದೆ ಬನ್ನಿ ಅಂತ.. "ಕಾಲಿದೆ" ಬನ್ನಿ ಅಂತ ಅಲ್ಲ.. ದಯವಿಟ್ಟು ನನ್ನ ಕಾಲ ಮೇಲಿಂದ ಕೆಳಗೆ ಇಳೀರೀಪ್ಪಾ... " ಎಂದೆ. ಕಷ್ಟದಲ್ಲೂ ಅಲ್ಲಿನ ಜನ ನಕ್ಕರು. ನಾನು ಕೂಡ ವಿಧಿಯಿಲ್ಲದೆ, ನೋವನ್ನು ಮರೆಯಲು ನಕ್ಕೆ.

ಹೊರಗೆ ಹುಯ್ಯುತ್ತಿದ್ದ ಮಳೆ ಕೊಂಚ ಭೀತಿಯನ್ನುಂಟುಮಾಡಿತ್ತು. ಆಗುಂಬೆಯ ಘಾಟಿಯಲ್ಲಿ ಬಸ್ಸು ಎಲ್ಲಿ ಪಾತಾಳಕ್ಕೆ ಧುಮುಕಿಬಿಡುತ್ತದೋ ಎಂದು. ಕತ್ತಲೆ ಬೇರೆ ಆಗಿತ್ತು. ಒಳಗೆ ಅಲುಗಾಡಲೂ ಒಂದಿಂಚೂ ಸ್ಥಳವಿಲ್ಲ. ಕಂಡಕ್ಟರು ಸೀಟುಗಳ ಹಿಡಿಗಳ ಮೇಲೆಯೇ ನಡೆಯುತ್ತಿದ್ದಾನೆ ದೊಂಬರಾಟದವನ ಹಾಗೆ. ಅವನಿಗೆ ದುಡ್ಡು ಮುಖ್ಯ, ಜನರಿಗೆ ತಮ್ಮ ಊರುಗಳನ್ನು ತಲುಪುವುದು ಮುಖ್ಯ, ಚಾಲಕನಿಗೆ ಮುಂದಿನ ವಾಹನವನ್ನು overtake ಮಾಡುವುದು ಮುಖ್ಯ, ನನ್ನ ಪಕ್ಕದಲ್ಲಿ ಇದ್ದ ಮುದುಕನಿಗೆ ತನ್ನ ಬೋ.. ಮಗ, ಸೂ.. ಮಗ ಶಾಪಗಳೇ ಮುಖ್ಯ, ಇಲ್ಲಿ ನಾವೆಲ್ಲಾ ಇಷ್ಟು ಕಷ್ಟ ಪಡುತ್ತಿದ್ದರೆ ರಾಜಕೀಯ ನಾಯಕಿ ಸೋನಿಯಾ ಗಾಂಧಿಗೆ ಬೆಂಗಳೂರಿನಲ್ಲಿ ತಲೆಹರಟೆ ಭಾಷಣ ಮಾಡುವುದೇ ಮುಖ್ಯ, ನನಗೆ.... ಬಿಡಿ.. ನನಗೆ ಏನು ಮುಖ್ಯ ಎನ್ನುವುದು ಯಾರಿಗೂ ಮುಖ್ಯವಲ್ಲ!! ಏನೋ ಒಟ್ಟಿನಲ್ಲಿ ಜೀವಂತವಾಗಿ ಮಂಗಳೂರು ತಲುಪಿದರೆ ಸಾಕೆಂದು ಪ್ರಕೃತಿಮಾತೆಯನ್ನು ಪ್ರಾರ್ಥಿಸತೊಡಗಿದೆ.

ಹೆಬ್ರಿಯಲ್ಲಿ ಕೈಕಾಲು ಅಲುಗಾಡಿಸುವಷ್ಟು ಸ್ಥಳಾವಕಾಶ ಸಿಕ್ಕಿತು. ಉಡುಪಿ ತಲುಪಿದ ಮೇಲೆ ಕುಳಿತುಕೊಳ್ಳಲು ಸೀಟು ಸಿಕ್ಕಿತು. ಎರಡೂವರೆಗಂಟೆಗಳ ಕಾಲದಲ್ಲೇ ನಾನು ನರಕವೆಂದರೇನೆಂಬುದನ್ನು ಕಂಡುಕೊಂಡುಬಿಟ್ಟೆ. ಎರಡು ದಿನಗಳಿದ್ದಂತಿತ್ತು ಆ ಸಮಯ. ಹೆಬ್ರಿ ತಲುಪಿದಾಗಿನಿಂದಲೂ ಕಂಡಕ್ಟರನನ್ನು ಸುಮಾರು ಎಂಟು ಸಲ," ಬ್ಯಾಗು ಮೇಲಿದೆ, ತೊಂದರೆ ಇಲ್ಲ ತಾನೆ?" ಎಂದೂ, "ಅಕಸ್ಮಾತ್ ಕೆಳಗೆ ಬಿದ್ದು ಹೋದರೆ ಅಂತಾ...." ಎಂದೆಲ್ಲಾ ಪ್ರೆಶ್ನಿಸುತ್ತಲೇ ಇದ್ದೆ. ಅವನು ನನಗೆ ಕೈ ಮುಗಿದುಬಿಟ್ಟು, "ಸಾರ್, ಹಾಗೇನಾದ್ರೂ ಆದರೆ ನಾನು ದುಡ್ಡು ಕೊಡ್ತೀನಿ ಸಾರ್, ಅದ್ಯಾಕೆ ಅಷ್ಟೊಂದು tension ಮಾಡ್ಕೋತೀರ, ನಿಮ್ಮ ಬ್ಯಾಗಿಗೆ ಏನೂ ಆಗಲ್ಲ, ದಿನಕ್ಕೆ ಇಂಥ ನೂರಾರು ಬ್ಯಾಗುಗಳನ್ನು ನಾವು ತರ್ತೀವಿ.." ಎಂದ. ಅವನಿಗೇನು ಗೊತ್ತು, ಒಬ್ಬ Trekkerಗೆ ತನ್ನ ಬ್ಯಾಗಿನ ಮೇಲೆ ಎಷ್ಟು ಪ್ರೀತಿ ಇರುತ್ತೆ ಅಂತ.


ಮಂಗಳೂರು ತಲುಪುವ ಹೊತ್ತಿಗೆ ಗಂಟೆ ಹನ್ನೊಂದಾಗಿ ಹೋಗಿತ್ತು. ಶಿಲ್ಪಾಳಿಗೆ ಎಸ್ಸೆಮ್ಮೆಸ್ ಮಾಡಿಬಿಟ್ಟೆ ಮುಂದಿನ ಸಲ ಭೇಟಿಯಾಗೋಣ ಎಂದು. ಬಸ್ಸಿನಲ್ಲಿ ನಾನು ಪಟ್ಟ ಕಷ್ಟಗಳನ್ನೂ ಸಹ ವಿವರಿಸಿದೆ. ಅವಳು ಅದನ್ನೋದಿ ಬಿದ್ದು ಬಿದ್ದು ನಕ್ಕಳಂತೆ. "ಏನ್ರೀ ಈ ಕಾಲದಲ್ಲಿ ಯಾರಾದರೂ ಕಷ್ಟ ಪಟ್ಟಿದ್ದನ್ನು ಹೇಳಿದರೆ ಈಪಾಟಿ ನಕ್ತಾರೆ.." ಎಂದು ಹೇಳಿ ನಾನೂ ನಕ್ಕೆ. ಅಂತೂ ಇಂತೂ ಮಂಗಳೂರು ತಲುಪಿಕೊಂಡೆ. ಒಂದೇ ಒಂದು ಬಸ್ಸು ಮೈಸೂರಿಗೆ ಕಾದಿತ್ತು. ಅದನ್ನು ಏರಿ, ಮೈಸೂರನ್ನು ಮಾರನೆಯ ದಿನ ಸೇರಿಕೊಂಡೆ. ಇನ್ನೂ ಜೀವಂತವಾಗಿ ಇದ್ದೇನೆ..

-ಅ
29.01.2007
2PM

4 comments:

 1. aruna..ninna innondu article nenpaagtide kano.
  neenu college nallidhaga ondu bus nalli travel maadidhe bagge bardidya nenpidya??
  jyothsna book nalli irbahudu noodu..adu..

  ReplyDelete
 2. [Sushma] he he.. nanna barahagaLanna nangintha chennaagi odhidya neenu... honestaagi tumba santhosha aagtide..

  ReplyDelete
 3. ಹ ಹ ಹಾ.... ತುಂಬಾ ಚೆನ್ನಾಗಿದೆ :-)

  ReplyDelete
 4. ಇದು ಹುಡುಕು ನೋಡಿ
  http://www.yanthram.com/kn/

  ReplyDelete

ಒಂದಷ್ಟು ಚಿತ್ರಗಳು..