Wednesday, January 03, 2007

ಇವರ ಹುಟ್ಟುಹಬ್ಬ!!

ಮಿತ್ರರ ಹುಟ್ಟುಹಬ್ಬ

ಒಬ್ಬ ಮಹೇಂದ್ರ, ಇನ್ನೊಬ್ಬ ಸೀತು.. ಇವರಿಬ್ಬರ ಹುಟ್ಟುಹಬ್ಬ ಈ ವಾರದಲ್ಲಿತ್ತು. ಏನು ಉಡುಗೊರೆ ಕೊಡೋದು ಇವರಿಗೆ ಅಂತಲೇ ತೋಚಲಿಲ್ಲ. ಇನ್ನು ಏನೂ ಕೊಟ್ಟೇ ಇಲ್ಲ. ನಾನು ಗಿಫ್ಟಾಗಿ ಸಾಮಾನ್ಯವಾಗಿ ಪುಸ್ತಕಗಳನ್ನು ಕೊಡ್ತೀನಿ. ಪುಸ್ತಕಗಳು ಯಾರಿಗೇ ಆಗಲೀ ಒಂದು ಬಹಳ ಉತ್ತಮವಾದ ಫ್ರೆಂಡು ಎಂಬುದು ನನ್ನ ನಿಲುವು. ಒಬ್ಬರೇ ನಾವು ಎಲ್ಲಿದ್ದರೂ ನಮ್ಮನ್ನು ಒಂಟಿತನದಿಂದ ದೂರವಾಗಿಸುವ ಶಕ್ತಿಯು ಪುಸ್ತಕಗಳಿಗೆ ಮಾತ್ರ ಇರುವುದು. ಆದರೆ ಕೆಲವು ವ್ಯಕ್ತಿಗಳಿರುತ್ತಾರೆ, ಅವರು ಪುಸ್ತಕಗಳನ್ನು ಓದಲೇ ಬಾರದೆಂದು ತೀರ್ಮಾನಿಸಿಬಿಟ್ಟಿರುತ್ತಾರೆ. ಅಂಥವರಿಗೆ ಏನು ಗಿಫ್ಟು ಕೊಡುವುದಪ್ಪಾ ಅಂತ ಯೋಚನೆ ಆಗುತ್ತೆ.

ಪಾಪ, ಸೀತು ಆಗಲೀ ಮಹೇಂದ್ರ ಆಗಲೀ ಓದೋರಲ್ಲ ಎಂದು ನಾನು ಹೇಳಿದರೆ ಮಹಾಪರಾಧ ಆಗಿಬಿಡುತ್ತೆ. ನಾನು ಏನೇ ಬರೆದರೂ ಅದನ್ನು ಓದಿ ನನಗೆ, ಉತ್ತಮ ಪ್ರೋತ್ಸಾಹ ಕೊಟ್ಟಿದ್ದಾರೆ. ಅವರಿಬ್ಬರೇ ಅಂತ ಅಲ್ಲ, ನಮ್ಮ ಶ್ರೀನಗರದ ಹುಡುಗರೆಲ್ಲರಿಗೂ ಕೂಡ ನಾನು ಚಿರಋಣಿ..

ಶ್ರೀನಗರದ ಹುಡುಗರು ಮತ್ತು ಇವರಿಬ್ಬರು

ಈ ನಾಮಕರಣ ಮಾಡಿದ್ದು ಜಯಣ್ಣ (ಜಯರಾಂ). ಈ ಗುಂಪಿನಲ್ಲಿ ಹುಡುಗೀರೂ ಇದ್ದಾರಾದರೂ ಈ ಹೆಸರು ಗುಂಪಿನವರಿಗೆಲ್ಲಾ ವಿಪರೀತ ಇಷ್ಟವಾಗಿ ಹೋಯಿತು. ಜಯಣ್ಣ ತಾನು ಅಮೇರಿಕೆಗೆ ತೆರಳುವ ಮುನ್ನ ಇದೊಂದು ಗುಂಪನ್ನು ಬರೀ ಯಾಹೂ-ಲಿ ರಚಿಸಲಿಲ್ಲ, ಒಂದು ತಂಡವನ್ನೇ ಸೃಷ್ಟಿಸಿದ. ತಾನು initiative ತೆಗೆದುಕೊಂಡು ಇದರ ರಚನೆ ಮಾಡದಿದ್ದರೆ ಬಹುಶಃ ಇಂದು ಈ ಶ್ರೀನಗರದ ಹುಡುಗರ ತಂಡ ಪರಸ್ಪರ ಇಷ್ಟೊಂದು close ಆಗಿರುತ್ತಿರಲಿಲ್ಲ.ಮಹೇಂದ್ರನು ಈ ಗುಂಪಿಗೆ ಕೊಂಚ ತಡವಾಗಿ ಸೇರಿಕೊಂಡನಾದರೂ, ಇವನು ತುಂಬ ಹಳೆಯ ಗೆಳೆಯನಂತೆ ಜೊತೆಗಿದ್ದಾನೆ. ಗುಂಪಿನಲ್ಲಿ ಇವನನ್ನು ಎಲ್ಲರೂ ಬಹಳ ಇಷ್ಟ ಪಡುತ್ತಾರೆ. ಇವನ ಜೊತೆ ಇದ್ದರೆ ಹೊತ್ತು ಹೋಗುವುದೇ ತಿಳಿಯುವುದಿಲ್ಲ. ಅವನ ವ್ಯಕ್ತಿತ್ವವೇ ಅಂಥದ್ದು. ಎಲ್ಲರನ್ನೂ ಬಹಳ ಸಲೀಸಾಗಿ ತನ್ನವರನ್ನಾಗಿ ಮಾಡಿಕೊಳ್ಳುವಂಥದ್ದು. ಇವನ ಮಾತು ವಿಪರೀತ fast. ಅರ್ಥ ಮಾಡಿಕೊಳ್ಳಬೇಕಾದರೆ ಇವನು ಮಾತಾಡಿದ್ದನ್ನು ರೆಕಾರ್ಡ್ ಮಾಡಿ ಮತ್ತೆ ರೀಪ್ಲೇ ಮಾಡಿ ಕೇಳಿ ಅರ್ಥ ಮಾಡಿಕೊಳ್ಳಬೇಕು. ಅವನ ದೈತ್ಯ ದೇಹಕ್ಕೆ ತಕ್ಕನಾದ ಶಾರೀರ ಅವನಿಗಿಲ್ಲವಾದರೂ ಮಾತಿನ ವೇಗ ಮಾತ್ರ ತಾನು ಓಡಿಸುವ ಸಮುರೈಗಿಂತ fast!! ಮನಸ್ಸು ಅಷ್ಟೇ ಮೃದು. ಜೂಸ್ ಕುಡಿದು ಕುಡಿದು ಮನಸ್ಸು ಸಹ ಹಣ್ಣಿನ ಹಾಗೆ ಮೃದು ಮಾಡಿಕೊಂಡುಬಿಟ್ಟಿದ್ದಾನೆ. ಒಂದು ಸಲ ಜೂಸ್ ಅಂಗಡಿ ಹೊಕ್ಕನೆಂದರೆ ಕನಿಷ್ಟ ನಾಕು ಲೋಟ ಜೂಸ್ ಇವನ ಉದರಾಳದಲ್ಲಿಳಿದುಬಿಟ್ಟಿರುತ್ತದೆ. "ಮಹೇಂದ್ರ, ಒಂಚೂರು ಇದನ್ನ ನೋಡಪ್ಪ.." ಎಂದು ಯಾವ ವೇಳೆಯಲ್ಲಿ ಹೇಳಿದರೂ ಏನು ಸಮಸ್ಯೆಯಿದೆಯೋ ಅದನ್ನು ತನ್ನದಾಗಿಸಿಕೊಂಡು ಬದಿಗಿರುತ್ತಾನೆ.ಈ ಗುಂಪಿಗೆ ಎಷ್ಟೇ ಹೊಸಬನಾಗಿದ್ದರೂ ನನಗೆ ಇವನು ನಾನು ಪ್ರೈಮರಿ ಸ್ಕೂಲಿನಲ್ಲಿದ್ದಾಗಿನಿಂದಲೂ ಪರಿಚಿತ ವ್ಯಕ್ತಿ. ಎಡಚನಾದ್ದರಿಂದ ತನಗೆ ಬಲಗಡೆ ಹೃದಯವಿರುವುದೆಂದು ಆಗಾಗ್ಗೆ ತಮಾಷೆ ಮಾಡುತ್ತಿರುತ್ತಾನೆ. ಇವನ ತಮಾಷೆಗಳು ಅರ್ಥ ಆಗೋದು ಕೂಡ ಕಷ್ಟ, ಯಾಕೆಂದರೆ ಅಷ್ಟು ವೇಗವಾಗಿ joke ಹೇಳಿರುತ್ತಾನೆ. ಇವನ ಗಾಡಿಯಲ್ಲಿ ಕನ್ನಡಿಗಳಿಲ್ಲ, ಇವನ ತಲೆಯ ಮೇಲೆ ಹೆಲ್ಮೆಟ್ಟಿಲ್ಲ. ಗಾಡಿ ಮಾತ್ರ ಗಂಟೆಗೆ ಎಂಭತ್ತು ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಹಿಂದೆ ಕುಳಿತವರ ಹೃದಯವು ಬಾಯಲ್ಲೇ ಇರುತ್ತದೆ. ಆದರೂ ಸುರಕ್ಷಿತವಾಗಿ ಎಲ್ಲಿ ತಲುಪಿಸಬೇಕೋ ಅಲ್ಲಿ ತಲುಪಿಸುತ್ತಾನೆ ಅನ್ನೋದು ಸಂತಸದ ಸಂಗತಿ.

ಇದನ್ನು ಓದುವುದಕ್ಕೆ ಅವನಿಗೆ ಬಹುಶಃ ಸಮಯ ಸಿಗುವುದಿಲ್ಲ.. ಆದರೂ ಅವನ ಬಗ್ಗೆ ಬರೆಯಬೇಕೆನಿಸಿತು. ಸಮಯ ಬಂದಾಗ ಓದಿಕೋ ಮಹೇಂದ್ರ.. ಇದು ನಿನ್ನ ಹುಟ್ಟುಹಬ್ಬಕ್ಕೆ ನನ್ನದೊಂದು ಪುಟ್ಟ ಉಡುಗೊರೆ.

ಸೀತು ಕತೆ ಹೇಳ್ತೀನಿ ಕೇಳಿ.. ಸೀತು ಅಲಿಯಾಸ್ ಶ್ರೀಧರನನ್ನು ಈ ಗುಂಪಿನವರು ಕರೆಯುವುದು ಸೀತು ಅಲಿ ಖಾನ್ ಎಂದು. ಇಂಜಿನಿಯರಿಂಗ್ ಮುಗಿಸಿದ್ದು ಗೌಸಿಯಾ ಕಾಲೇಜಿನಲ್ಲಿ ನೋಡಿ, ಅದಕ್ಕೆ ಈ ಹೆಸರು. ಆಗಾಗ್ಗೆ ಬಾರದ ಉರ್ದುವಿನಲ್ಲಿ ಏನೇನೋ ಹೊಡೆಯುತ್ತಿರುತ್ತಾನೆ. ಕೇಳಲು ಸೊಗಸಾಗಿರುತ್ತದೆ. ತಾನೂ ನಗುತ್ತಾ, ತನ್ನ ಪೋಲಿ ಜೋಕುಗಳಿಂದ ನಮ್ಮನ್ನೂ ನಗಿಸುತ್ತಾ ನಮ್ಮ ಹೊಟ್ಟೆಹುಣ್ಣಾಗಿಸುತ್ತಾನೆ. ಇವನ ನಗು ನೋಡುವುದಕ್ಕೇನೇ ಒಂದು ಸಂತೋಷ ಆಗುತ್ತದೆ. ಸೀತೂ, ದೃಷ್ಟಿ ತೆಗೆಸಿಕೊಳ್ಳಪ್ಪಾ ಪ್ರತಿದಿನವೂ!! ಪಿ.ಯು.ಸಿ.ಯಲ್ಲಿ ಒಂದೇ ಕಡೆ ಬಯಾಲಜಿ ಪಾಠಕ್ಕೆ ಹೋಗುತ್ತಿದ್ದೇವಾದರೂ ಈ ಶ್ರೀನಗರದ ಹುಡುಗರ ಗುಂಪು ಆರಂಭವಾಗುವವರೆಗೂ ಅಷ್ಟೇನೂ ಹತ್ತಿರವಿರಲಿಲ್ಲ. ಆದರೆ ಇಂದು ಇವನು ನನ್ನ ಬಾಲ್ಯಸ್ನೇಹಿತನೆಂದೆಸಿಸುತ್ತದೆ. ಆ ರೀತಿಯ impact ಯಾರ ಮೇಲಾದರೂ ಬೀರುವ ವ್ಯಕ್ತಿತ್ವ ಇರುವವರು ತುಂಬ ಕೆಲವರಿಗೆ ಮಾತ್ರ. ಬಾಲ್ಯ ಸ್ನೇಹಿತರು ಕೂಡ ಹಲವು ಬಾರಿ ಅಪರಿಚಿತರಂತೆ, ಅಥವಾ ವಿಪರೀತ ವ್ಯವಹಾರಿಕ ವ್ಯಕ್ತಿತ್ವ ಹೊಂದಿರುವವರಿರುತ್ತಾರೆ.. ಅಂಥದರಲ್ಲಿ ಸೀತುವಿನಂಥವರು ಅಪರೂಪದ ವ್ಯಕ್ತಿತ್ವ.ಇಬ್ಬರಿಗೂ ಹುಟ್ಟುಹಬ್ಬದ ಶುಭಾಶಯಗಳು.. ನಿಮ್ಮ ದಿನಗಳು ನಿಮಗೆ ಯಶಸ್ಸನ್ನೂ, ಶ್ರೇಯಸ್ಸನ್ನೂ, ಸಂತಸವನ್ನೂ ತಂದುಕೊಡಲಿ. ಪಾರ್ಟಿ ಕೊಡಿಸುವುದನ್ನು ಮರೆಯಬೇಡಿ.. ಆ ಪಾರ್ಟಿ!! ;-)

1 comment:

  1. lekan bahut acha hai, app yesehi likthe rahiye. kuda apka kayal rakke.

    situ.

    ReplyDelete

ಒಂದಷ್ಟು ಚಿತ್ರಗಳು..