Monday, January 22, 2007

ಅಗ್ನಿಸಾಕ್ಷಿಯಾಗಿ ನಡೆದದ್ದು

ಚಿಕ್ಕಮಗಳೂರನ್ನು ಅನೇಕರು ಚಿಕ್ಕಮಂಗಳೂರು ಅಂತ ತಪ್ಪು ಉಚ್ಚಾರ ಅದ್ಯಾಕೆ ಮಾಡುತ್ತಾರೋ ದೇವರಿಗೇ ಗೊತ್ತು! ಬಸ್ಸಿನ ಬೋರ್ಡುಗಳ ಮೇಲೆ ಕೂಡ ತಪ್ಪು ಬರೆದಿದ್ದಾರೆ, ಅಂತ ಪ್ರತಿಬಾರಿ ಚಿಕ್ಕಮಗಳೂರಿಗೆ ಹೋದಾಗಲೂ ತಪ್ಪು ಉಚ್ಚಾರ ಮಾಡುವವರ ನಾಲಿಗೆಗೆ ಶಪಿಸುತ್ತ ನನ್ನ ಯಾಣ ಆರಂಭಿಸುವುದು ಸಂಪ್ರದಾಯವಾಗಿಹೋಗಿದೆ..

ಕಾನನದಾನಲ

Confusion ಬೇಡ. "ಆನಲ" ಅಂದರೆ ಬೆಂಕಿ ಎಂದರ್ಥ. ಕಾನನ ಅಂದರೇನು ಎಂದು ಗೊತ್ತೇ ಇದೆ. ಕಾಡು ಎಂದು. But ಅರಣ್ಯದ "definition" ಕೇಳಿದರೆ ಬಹುಶಃ ಅಚ್ಚರಿಯಾಗಬಹುದು. ಯಾವುದೇ ಪ್ರದೇಶವನ್ನು ದೇಶದ ಸರ್ಕಾರವು ಅರಣ್ಯವೆಂದು ಘೋಷಿಹುದೋ ಅದನ್ನು ಅರಣ್ಯ ಎನ್ನುತ್ತೇವೆ. ಇಷ್ಟೇ ಗಿಡ, ಮರ, ಪ್ರಾಣಿ, ಪಕ್ಷಿ, ಮನುಷ್ಯರು ಇರಬೇಕೆಂದೇನೂ ಇಲ್ಲ. ಆ ಘೊಷಣೆಗೆ ಆಧಾರಗಳೂ ಸಹ ಇಲ್ಲ. ಚಿಕ್ಕಮಗಳೂರಿನ ಅರಣ್ಯವು ನಮ್ಮ ನಿತ್ಯಹರಿದ್ವರ್ಣದ ಪಶ್ಚಿಮಘಟ್ಟದ ಬೌಂಡರಿ ಲೈನ್‍ನಲ್ಲಿ ಇದೆಯಾದ್ದರಿಂದ ಇಲ್ಲಿನ ಬಾಬಾಬುಡನಗಿರಿ, ಮುಳ್ಳಯನಗಿರಿ ಬೆಟ್ಟಗಳ ಆಸುಪಾಸಿನಲ್ಲಿ ಸೊಗಸಾದ ಅರಣ್ಯಸಂಪತ್ತಿದೆ.

ನಮ್ಮ trek ಇದ್ದದ್ದು ಕರ್ನಾಟಕದ ಅತ್ಯಂತ ಎತ್ತರ ಶಿಖರವಾದ ಮುಳ್ಳಯ್ಯನಗಿರಿಯಿಂದ ದತ್ತಪೀಠ (ಅಥವಾ ಬಾಬಾಬುಡನಗಿರಿ) ದ ವರೆಗೂ. ಎತ್ತರದಿಂದ ಇಳಿದಿಳಿದು ನಡೆಯಬೇಕು. ದಟ್ಟಕಾನನದೊಳಗೆ ಚಾರಣ ಮಾಡುವುದೇನಿಲ್ಲ. ಪೂರ್ತಿ ಟ್ರೆಕ್ಕು ಹುಲ್ಲುಗಾಡಿನಲ್ಲಿ. ಅಲ್ಲಲ್ಲಿ ಎತ್ತೆತ್ತರದ ಬಂಡೆಗಳು ನಮಗೆ ಅಡ್ಡ ಹಾಕಿ ಇನ್ನು ಮುಂದೆ ಹೋಗಿ ನೋಡೋಣ, ಎಂದು ಸವಾಲು ಹಾಕುತ್ತವೆ ಎಂಬುದನ್ನು ಬಿಟ್ಟರೆ ಇನ್ನೇನು ಅಡೆತಡೆಗಳು ಈ ಟ್ರೆಕ್ಕಲ್ಲಿ ಬರೋದಿಲ್ಲ. ಹಾಗಂತ ನಾನು, ಡೀನ್ ನಂಬಿದ್ದೆವು.
"ಏನೋ ಅದು ಪಟಾಕಿ ಸದ್ದು?" ಮಧು ನನ್ನ ಕೇಳಿದ.

"ಅದು ಪಟಾಕಿ ಸದ್ದಲ್ಲ. ಆ ಹೊಗೆ ಇದೆ ನೋಡು, ಅಲ್ಲಿ ಆ ಹುಲ್ಲು ಹತ್ತುರಿಯುತ್ತಿದೆ ನೋಡು.. ಅದರ ಸದ್ದು ಅದು" ಎಂದು ನಾನು ದೂರದ ಕಾಳ್ಗಿಚ್ಚನ್ನು ತೋರಿಸಿದೆ ಅವನಿಗೆ. ನಂತರ ನನ್ನ ಕಣ್ಣುಗಳನ್ನು ಆ ಬೆಂಕಿಯತ್ತಲೇ ಹಾಯಿಸಿದೆ. ಆ ಸಣ್ಣ ಗುಡ್ಡ ಪೂರ್ತಿ ಹತ್ತುರಿಯುತ್ತಿತ್ತು. ಆ ಗುಡ್ಡ ನಮ್ಮಿಂದ ಸುಮಾರು ಹತ್ತು ನಿಮಿಷದ ಚಾರಣದಷ್ಟು ದೂರದಲ್ಲಿತ್ತು. ಗುಡ್ಡದ ವಲಯದಲ್ಲಿ ಬೆಂಕಿಯು ಎಲ್ಲಾ ದಿಕ್ಕಿನಲ್ಲೂ ವೇಗವಾಗಿ ಚಟಚಟನೆ ಸದ್ದು ಮಾಡುತ್ತ ಸಾಗುತ್ತಿತ್ತು. ಇನ್ನೂ ದಿಟ್ಟಿಸಿ ನೋಡಿದೆ. ನಮ್ಮ ದಾರಿ ಅದೇ ಗುಡ್ಡದ ಕಡೆಗಿದೆ!! ಬೆಂಕಿಯೊಳಗೆ ಹೋಗಬೇಕು ನಾವು - ಬಾಬಾ ಬುಡನಗಿರಿಯನ್ನು ತಲುಪಲು!!

ಚಿತ್ರದಲ್ಲಿ ಬೌಂಡರಿ ಕಾಣಿಸುತ್ತಿದೆಯಲ್ಲಾ, ಆ ಬೌಂಡರಿಯಲ್ಲಿ ಅಗ್ನಿದೇವನಿದ್ದಾನೆ. ನಮ್ಮ ಕಡೆ ಧಾವಿಸುತ್ತಿದ್ದಾನೆ. ನಾವು ಅದರತ್ತ ಇಳಿದು ಸಾಗುತ್ತಿದ್ದೇವೆ. ಕಪ್ಪು ಭಾಗದ ಗುಡ್ಡವನ್ನು ದಾಟಿ ಹೋಗಬೇಕು. ಬಲಕ್ಕೆ ಜಾರುವಂತಿಲ್ಲ, ಕೆಳಗೆ ಬೀಳುವಂತಿಲ್ಲ. ಮತ್ತಷ್ಟು ಚಿತ್ರಗಳಿವೆ. ಇನ್ನೊಂದೆರಡು ದಿನಗಳಲ್ಲಿ ಹಾಕ್ತೀನಿ.

ಆ ಬೌಂಡರಿಯ ಎದುರು ನಿಂತು, ಸುಡಬಲ್ಲಂಥ ವಸ್ತುಗಳನ್ನೆಲ್ಲ rucksack ಒಳಗೆ ತೂರಿಸಿ, ಅಗ್ನಿರೇಖೆಯನ್ನು ಜಿಗಿದು ದಾಟಿ ಕಪ್ಪು ಪ್ರದೇಶದೊಳಗೆ ಹೋದೆವು. ಜಿಗಿದಾಗ pant ಒಳಗಿನಿಂದ ಅಗ್ನಿದೇವ ನನ್ನನ್ನು ಹೊಕ್ಕಿಬಿಟ್ಟನೆಂಬ ಭಾಸವಾಯಿತು. ಬೆಂಕಿಯ ಶಾಖ ಬೆವರಿಳಿಸುತ್ತಿತ್ತು. ಬೂದಿಯು ವಿಜಯಾಳು ಕನ್ನಡಕ ಹಾಕಿಕೊಂಡಿದ್ದರೂ ಅದಕ್ಕೆ ಮರ್ಯಾದೆ ಕೊಡದೆ ಕಣ್ಣೊಳಗೆ ಹೋಗಿ ಒಂದಷ್ಟು ಕಿರುಕುಳ ಕೊಟ್ಟಿಬಿಟ್ಟಿತು. ನಮ್ಮ ಸುತ್ತಲೂ ಬೆಂಕಿಯಿದ್ದರೂ ನಮ್ಮ ಮೊಣಕಾಲುದ್ದದಷ್ಟು ಮಾತ್ರ ಇದ್ದುದರಿಂದ ಅಷ್ಟೇನು ಭೀತಿಯುಂಟಾಗಲಿಲ್ಲ. ಇಡೀ ಬೆಟ್ಟ ಹುಲ್ಲುಗಾಡಾದ್ದರಿಂದ ಮತ್ತೆ ಆ ಹುಲ್ಲು ಚಿಕ್ಕಚಿಕ್ಕದ್ದಾದ್ದರಿಂದ ಅಷ್ಟೇನು ತೊಂದರೆ ಸಹ ಆಗಲಿಲ್ಲ. ಟಿಪಿಕಲ್ ಪಶ್ಚಿಮಘಟ್ಟದ ವನವಾಗಿದ್ದಿದ್ದರೆ ಅಗ್ನಿಪಾಲಾಗುತ್ತಿದ್ದೇವೇನೋ..

ಒಂದು ಸಲವಂತೂ ಮಧುಗೆ ಹೆದರಿಸಿಬಿಟ್ಟಿತ್ತು. ಶ್ರೀಕಾಂತನು ಕಾಲುದಾರಿಯಲ್ಲಿ ಮುಂದೆ ಹೋದ. ಎಡಗಡೆಯಿಂದ ಬೆಂಕಿ ನಮ್ಮೆಡೆಗೆ ಬರುತ್ತಿತ್ತು. ದಾರಿಯ ಬಲಬದಿಯಲ್ಲಿ ಪ್ರಪಾತ. ಎಡಬದಿಯಲ್ಲಿ ಸ್ವಲ್ಪ ತೊಡೆಯಷ್ಟೆತ್ತರದ ಹುಲ್ಲು-ಪೊದೆಗಳು. ಅನತಿದೂರದಿಂದಲೇ ಬೆಂಕಿಯು ಎಡಗಡೆಯಿಂದ ನಮ್ಮ ದಾರಿಗೆ ಅಡ್ಡ ಗೇಟ್ ಹಾಕುವಂತೆ ಧಾವಿಸುತ್ತಿದೆ. ಶ್ರೀಕಾಂತನ ಹಿಂದೆ ಸುಬ್ಬು ಹೋದ. ಆಗ ಬೆಂಕಿಯು ಇನ್ನೂ ದೂರ ಇತ್ತು. ನಾನು ಬರುವ ಹೊತ್ತಿಗೆ ಗೇಟ್ ಕ್ಲೋಸ್ ಎನ್ನುತ್ತಾ ಸದ್ದು ಮಾಡುತ್ತ ಬಂದೇಬಿಟ್ಟಿತು ಬೆಂಕಿ. ನಾನು ಭಂಡ, ದಾಟಿದೆ. ವಿಜಯಾ ನನ್ನ ಹಿಂದೆಯೇ ಇದ್ದಳು. ಅವಳನ್ನು ನೋಡಿ ಸಿಟ್ಟಾದ ಬೆಂಕಿ, ಬುಸ್ಸೆಂದು ಅವಳ ಮೇಲೆ ದಾಳಿ ಮಾಡುವುದರಲ್ಲಿತ್ತು. ಅವಳೂ ಜಿಗಿದು ದಡ ಸೇರಿಕೊಂಡಳು. ಮಧು ಹಿಂದುಳಿದಿದ್ದ. ಗೇಟ್ ಕ್ಲೋಸ್ ಮಾಡಿಬಿಟ್ಟಿತ್ತು ಬೆಂಕಿ. ಅವನಿಗೆ ಭಗ್ ಎಂದು ಒಂದು ಚಮಕ್ ಕೊಟ್ಟುಬಿಟ್ಟಿತು. ಅವನು ಹಿಂದಿರುಗಿಬಿಟ್ಟ. ನಂತರ ಸ್ವಲ್ಪ ಬದಿಗೆ ಸರಿದು ನಮ್ಮತ್ತ ಓಡಿಬಂದ. ಡೀನ್ ಮತ್ತು ಅನ್ನಪೂರ್ಣ ಇಬ್ಬರೂ ನಾವು ಬಂದ ದಾರಿಯಲ್ಲಿ ಬರಲಿಲ್ಲವಾದ್ದರಿಂದ ಮಧು vs ಬೆಂಕಿ ಯುದ್ಧವನ್ನು ನೋಡಲಾಗಲಿಲ್ಲ ಅವರಿಬ್ಬರಿಗೆ.


ಹೀಗೆ ಅಗ್ನಿಯಿಂದ ಸುತ್ತುವರೆದಿದ್ದಾಗ ಸತ್ಯ ಹರಿಶ್ಚಂದ್ರ ಚಿತ್ರದ ದೃಶ್ಯವೊಂದು ನೆನಪಾಯಿತು. ಹರಿಶ್ಚಂದ್ರ ಚಂದ್ರಮತಿಯರು ನಕ್ಷತ್ರಿಕನೊಡನೆ ಕಾಡಿನಲ್ಲಿ ಹೋಗುತ್ತಿದ್ದಾಗ ವಿಶ್ವಾಮಿತ್ರನ ಆಣತಿಯ ಮೇರೆಗೆ ಅಗ್ನಿದೇವನು ಕಾಳ್ಗಿಚ್ಚಾಗಿ ಬಂದು "ನಿಮ್ಮ ನಿಜವಾದ ಹೆಸರನ್ನು ನಿಮ್ಮ ಹೆಸರಲ್ಲ ಎಂದುಕೊಳ್ಳುತ್ತ ನನ್ನಲ್ಲಿ ಪ್ರವೇಶಿಸಿದರೆ ನಾನು ಏನೂ ಮಾಡೋದಿಲ್ಲ.." ಎನ್ನುತ್ತಾನೆ. ಅದಕ್ಕೆ ನಕ್ಷತ್ರಿಕ, "ನಾನು ವಿಶ್ವಾಮಿತ್ರನ ಶಿಷ್ಯನಲ್ಲ, ನನ್ನ ಹೆಸರು ನಕ್ಷತ್ರಿಕನಲ್ಲ, ಒಟ್ಟಿನಲ್ಲಿ ನಾನು ಮನುಷ್ಯನಲ್ಲ" ಎಂದು ಅಗ್ನಿಯೊಳಗೆ ಪ್ರವೇಶಿಸಿದಾಗ ಅಗ್ನಿ ಅವನನ್ನು ಸುಡೋದೇ ಇಲ್ಲ. ಈ ದೃಶ್ಯವು ನೆನಪಾಯಿತು.

ಆ ರೀತಿಯ ಭಯಂಕರ ಕಾಳ್ಗಿಚ್ಚು ಇದಾಗಿರಲಿಲ್ಲ. ಸಣ್ಣಬೆಂಕಿಯಷ್ಟೇ. ಮೊಣಕಾಲೆತ್ತರದಲ್ಲಿ. ಆದರೆ ಬೆಂಕಿ ಬೆಂಕಿಯೇ.. ಶಾಖದಿಂದ ದಣಿದಿದ್ದೆವು. ಬೆವೆತಿದ್ದೆವು.. ಅಂತೂ ಇಂತೂ ದತ್ತಪೀಠವನ್ನು ತಲುಪಿಕೊಂಡೆವು..

ಈ ಮುಂಚೆ ನನ್ನ ಚಾರಣಗಳಲ್ಲಿ ದೂರದಿಂದ ಕಾಳ್ಗಿಚ್ಚನ್ನು ನೋಡಿದ್ದುಂಟು. ಮೊದಲ ಸಲ ಕಾಳ್ಗಿಚ್ಚಿನೊಳಗೇನೇ ನಡೆದು ಸಾಗಿದ್ದು ಇಲ್ಲಿ ದತ್ತಪೀಠದ ಬಳಿಯೇ.. ಚೆನ್ನಾಗಿತ್ತು. Adventurous ಆಗಿತ್ತು. ಮರೆಯಲಾರದಂತಿತ್ತು..

- ಅ
23.01.2007
11PM

2 comments:

  1. ಅಬ್ಬ... ಒಳ್ಳೆಯ adventure ಕಣ್ರೀ.. ನಾನು ಕೂಡ ಅದನ್ನ ಒಂದು ಸಲ ಅಷ್ಟು ಹತ್ತಿರದಿಂದ ನೋಡ್ಬೇಕು ಅನ್ನೋ ಆಸೆ .. :D

    ReplyDelete
  2. Sooper narration ... hege chennagi baritairu ... yaavaagloo ... ninge oLLedaagali :-) (Haaraisi andidyalla!!! )

    Kannige adenu bitto yeno ... bengloorina neeralli thoLedamele ne adu hogiddu ... illi neeralli sakkath cleansing agents ide :-)

    Innond vishya enu andre ... alli naavu sanna daareeli nadeebekadre, naanu tumba hedridde ... KP nalli palti hodeda haage illenaadroo bidre ... govinda goovinda antha...

    ReplyDelete

ಒಂದಷ್ಟು ಚಿತ್ರಗಳು..