Monday, January 08, 2007

ರೇಡಿಯೋಲಿ ಕೇಳ್ತಾ ಇದ್ದದ್ದು....

ಪ್ರೀತಿ ಮಾಡೋ ಮೊದಲು ಕಣ್ಣ ನೀರ ಉಳಿಸಿಕೋ
ಹೃದಯ ಒಳಗೆ ಪ್ರಳಯ ಆಗಬಹುದು ತಡೆದುಕೋ...
ಅಮೇರಿಕಾ... ನೆನೆದೊಡನೆ ಅಮೇರಿಕಾ.....

ಈ ಹಾಡನ್ನು ನಾನು ಕೇಳಿ ಸುಮಾರು ಹದಿನೈದು ವರ್ಷ ಆಗಿತ್ತೇನೋ... ನಾನು ಪ್ರೈಮರಿ ಸ್ಕೂಲಿನಲ್ಲಿದ್ದಾಗ ರೇಡಿಯೋಲಿ ಕೇಳುತ್ತಿದ್ದ ಹಾಡು.. ಇವತ್ತು ಸಂಗೀತ್ ಸಾಗರ್ ಇಂದ ಎಂಟು ಸಿ.ಡಿ. ಖರೀದಿಸಿ ತಂದೆ. ಎಲ್ಲಾ ಹಳೆಯ ಹಾಡುಗಳು. ಹಳೆಯದೆಂದರೆ ಕಪ್ಪು ಬಿಳುಪಿನದ್ದಾಗಲೀ, ಪ್ರಿಂಟೇ ಸಿಗದ ಅಣ್ಣೋರ ಚಿತ್ರದ ಹಾಡುಗಳಲ್ಲ.. ನಾನು ಚಿಕ್ಕವನಗಿದ್ದಾಗ ವಿವಿಧಭಾರತಿಯಲ್ಲಿ ಬರುತ್ತಿದ್ದ ಹಾಡುಗಳು ಇರುವ ಸಿ.ಡಿ.ಗಳು..

"ನಂದನ.. ಸಾದರ ಪಡಿಸುತ್ತಿರುವುದು ಡಾಬರ್.." ಎಂದು ಪ್ರತಿದಿನ ಬೆಳಿಗ್ಗೆ ಎಂಟುಗಂಟೆಗೆ ಶುರು ಆದಾಗ ಆನ್ ಆಗುತ್ತಿದ್ದ ನಮ್ಮ ಮನೆಯ ಹಳದಿ ಬಣ್ಣದ ದೊಡ್ಡ ರೇಡಿಯೋ, ಹತ್ತು ಗಂಟೆಗೆ ಅದು ಮುಗಿದ ಮೇಲೇಯೇ ಆರಿಸುತ್ತಿದ್ದುದು. ಶಾಲೆಗೆ ಹೊರಡುವ ಸಮಯವೂ, ನಂದನ ಮುಗಿಯುವ ಸಮಯವೂ ಸರಿಯಾಗಿ ಹೊಂದುತ್ತಿತ್ತು.

"ಕಂಡೋರ ಜೇಬಿಗೆ ಕತ್ತರಿ ಹಾಕಿದರೆ ಕಾಸೆಲ್ಲ ಮಂಗಮಾಯ...." ಈ ಹಾಡು ಕೇಳಿ ಮನಸ್ಸಿನಲ್ಲಿ ಒಂದು ರೀತಿ ಹೇಳಲಾರದ ಆನಂದ ಅಯಿತು. ಅಂಥದ್ದೇನು ಉತ್ತಮ ಸಾಹಿತ್ಯ ಅದಲ್ಲ ಒಪ್ಪಿಕೋತೀನಿ.. ಆದರೆ, ಚಿಕ್ಕವನಾಗಿದ್ದಾಗ ಕೇಳುತ್ತಿದ್ದ ಹಾಡು ಇಂದು ಬಹಳ ಸಮಯದ ನಂತರ ಕೇಳುತ್ತಿದ್ದೀನಲ್ಲಾ.. ಆ ಆನಂದ ಅನುಭವಿಸಿದವರಿಗೆ ಮಾತ್ರ ಗೊತ್ತಾಗುತ್ತೆ. ಚಿಕ್ಕವರಾಗಿದ್ದಾಗ ಕ್ಲಾಸಿನವರೆಲ್ಲ ಸೇರಿ ಮಾಡಿದ ನಾಟಕವೊಂದು ರಂಗಮಂದಿರಕ್ಕೆ ಬಂದು, ಆ ನಾಟಕವನ್ನು ನೋಡಿದಾಗ, ಕ್ಲಾಸಿನ ಗುಂಪೊಂದರಲ್ಲಿ ಡಾನ್ಸ್ ಅಂತ ಮಾಡಿದ ಹಾಡನ್ನು ವರ್ಷಾನುಗಟ್ಟಲೆಯ ನಂತರ ಟಿ.ವಿ.ಯಲ್ಲೋ, ರೇಡಿಯೋದಲ್ಲೋ ಕೇಳಿದಾಗ, ಆಗುತ್ತಲ್ಲಾ ಆನಂದ... ಆಹಾ!! ಅಂಥಾ nostalgia ನಾನು ಅನುಭವಿಸಿದೆ..

ಎಲ್ಲಿ ಹೋಗಿದ್ದವೋ ಈ ಹಾಡುಗಳು?? "ಅರೆ ಧಮ್ಮರೆ ಧಮ್ಮಮ್ಮ.. ನಾನ್ ಡಿಸ್ಕೋ ರುಕ್ಕಮ್ಮ.." ಇದು ಬರೀ ಅಂತ್ಯಾಕ್ಷರಿಯಲ್ಲಿ ಮಾತ್ರ ಹಾಡುವಂತಾಗಿತ್ತು. "ಆಕಾಶ ಬಾಗಿದೆ... ನಿನ್ನಂದ ಕಾಣಲೆಂದು...." ಹಾಡು ಕೇಳಿ, ಶಿವಣ್ಣ ಬೆಟ್ಟದ ಮೇಲೆ ನಿಂತಿರೋ ದೃಶ್ಯ ಕಣ್ಣು ಮುಂದೆ ಬಂದಿತು. ಅಕ್ಕ ಆ ಹಾಡು ತನಗೆ ತುಂಬಾ ಇಷ್ಟವೆಂದು ಹೇಳುತ್ತಿದ್ದುದು ಕಣ್ಣಿಗೆ ಕಟ್ಟಿದ ಹಾಗಿದೆ.. ಆ ಹಾಡುಗಳನ್ನೆಲ್ಲಾ ಮತ್ತೆ ನನ್ನ ಕೈಗೆ ಸಿಗುವ ವಿಧಿಯನ್ನು ಕಲ್ಪಿಸಿದ ಲಹರಿ ಮತ್ತು ಸಂಗೀತ (ಹಾಗೂ ಆನಂದ್ ಆಡಿಯೋ) ಅವರಿಗೆ ನಾನು ಆಭಾರಿ! ಹಳೆಯ ದಿನಗಳಿಗೆ ನನ್ನ ಕರೆದೊಯ್ದದ್ದಕ್ಕೆ ಅವರಿಗೆ ಎಷ್ಟು thanks ಹೇಳಿದರೂ ಸಾಲದು.

ಇನ್ನೊಂದು thanks ಸಲ್ಲ ಬೇಕಾದ್ದು ಗಾಂಧಿ ಬಜಾರಿನ ಸಂಗೀತ್ ಸಾಗರ್‍ಗೆ. ಇಡೀ ಬಸವನಗುಡಿಗೇ ಮೊದಲ ಕ್ಯಾಸೆಟ್ ಅಂಗಡಿಯಾದ ಈ ಸಂಗೀತ್ ಸಾಗರ್ ಬಿಟ್ಟರೆ ಬೇರೆ ಎಲ್ಲೂ ಕ್ಯಾಸೆಟ್ ಅಥವಾ ಸಿ.ಡಿ. ಖರೀದಿಸಲು ಮನಸ್ಸೇ ಆಗೋದಿಲ್ಲ. ಸುಮ್ಮನೆ Landmarkಗೋ, PlanetMಗೋ ಹೋಗಿದ್ದಾಗ ಯಾವುದೋ albumನ ನೋಡಿ, ಕೊಂಡುಕೊಳ್ಳಬೇಕೆನಿಸಿದಾಗ, ಸಂಗೀತ್ ಸಾಗರ್‍ಗೆ ಹೋಗಿ ತೊಗೊಬೇಕು ಎಂತ ಕೈಗೆತ್ತಿಕೊಂಡ albumನ ಅಲ್ಲೇ ಇಟ್ಟುಬಿಡುತ್ತೀನಿ. "ನೀನ್ ಬಾ ಗುರು, ನೀನ್ ಕೇಳಿದ್ ಕೊಡ್ತೀನಿ.." ಅಂತ ಆತ ಹೇಳ್ತಾನೇ ಇರ್ತಾರೆ.. ಆ ವಿಶ್ವಾಸ (ವ್ಯವಹಾರಿಕ ವಿಶ್ವಾಸ) ಹತ್ತುವರ್ಷದ್ದು.. ಇಂದು ನನಗೆ ನನ್ನ ಬಾಲ್ಯದ ಹಾಡುಗಳನ್ನು ಕೊಟ್ಟಿದ್ದಾರೆ. (ಮಾರಿದ್ದಾರೆ ಅಂತ ಹೇಳೋಕೆ ಮನಸ್ಸಿಲ್ಲ). ಹೀಗೇ ಮುಂದುವರೆಯಲಿ. ಸಂಗೀತ್ ಸಾಗರ್ ಇನ್ನೂ ಬೆಳೆಯಲಿ..

ಆಗಿನ ರೇಡಿಯೋನ ತುಂಬಾ miss ಮಾಡಿಕೊಳ್ಳುತ್ತಾ ಇದ್ದೀನಿ. ದಿನಕ್ಕೆ ಎರಡೇ ಗಂಟೆಗಳ ಕಾಲ ಪ್ರಸಾರ ಮಾಡುತ್ತಿದ್ದರಾದರೂ ಅದಕ್ಕಾಗಿ ಕಾಯುತ್ತ ಕುಳಿತಿರುತ್ತಿದ್ದೆವು. ಕೆಲಸ ಏನೇ ಮಾಡುತ್ತಿದ್ದರೂ ಕಿವಿ ಮಾತ್ರ ರ್ರೇಡಿಯೋ ಮೇಲೇ ಇರುತ್ತಿತ್ತು. Channel Change ಮಾಡುವ ಪ್ರಮೇಯವೇ ಇರುತ್ತಿರಲಿಲ್ಲ. ಬೆಂಗಳೂರು station ಬಿಟ್ಟರೆ ವಿವಿಧಭಾರತಿ ಮಾತ್ರ ಬರುತ್ತಿತ್ತು MWಯಲ್ಲಿ. Of course, SW tune ಮಾಡಿದ್ದಿದ್ದರೆ Cylone ಬರುತ್ತಿತ್ತು. ಆದರೆ "ನಂದನ" ಬರುವ ಸಮಯದಲ್ಲಿ ಬೇರೆ tune ಮಾಡುವ ಮನಸ್ಸು ಯಾರಿಗೂ ಇರುತ್ತಿರಲಿಲ್ಲ. ಅದರಲ್ಲಿ ಬರುವ adverstisementಗಳೂ ಸಹ ತುಂಬಾ ಸೊಗಸಾಗಿ ಇರುತ್ತಿತ್ತು. ಈಗಲೂ ನೆನೆಸಿಕೊಂಡು miss ಮಾಡಿಕೊಳ್ಳುತ್ತಾ ಇರ್ತೀವಿ.

"ಏನ್ ರಾಮಯ್ಯ ಅಷ್ಟೊಂದ್ ಆಳವಾಗ್ ಯೋಚಿಸ್ತಿದ್ದೀ??"
"ಮನೀಗಾ ಮತ್ತು ದನದ ಕೊಟ್ಟಿಗಿಗಾ ಯಾವ್ sheet ಹಾಕ್ಸ್ಬೇಕಂತ್ ಯೋಚಿಸ್ತಿದ್ದೆ.."

"ಆರೋಗ್ಯದ ರಕ್ಷಣೆ ಮಾಡುವುದು ಲೈಫ್ಬಾಯ್...."

"ಭಾರತ ಶ್ರೀಲಂಕ ಸಿಂಗಾಪುರ್ ಮಲೇಷಿಯಾ ಮುಂತಾದ ದೇಶಗಳಲ್ಲಿ ಹೆಚ್ಚಾಗಿ ಮಾರಾಟವಾಗುವುದು.. ಗೋಪ್ಪಾಲ್ ಹಲ್ಲು ಪುಡಿ..."

ಆಹಾ.. ಎಂಥಾ ಸವಿ ನೆನಪು.. Once again thanks to Sangeeth Sagar..

- ಅ

08. 01. 2007
3.30AM

2 comments:

  1. Sooperrr.... Aadre nammaneli radio on aagtididdu 8 gante ge alla ... 6 gante ge ... 6AM ge, bengalooru channel na music start aagi adaadmele 'vande maatharam' bartittu :-)
    Sangeets sagar ge, vividhabhrathi ge nandoo thanks!!

    ReplyDelete
  2. ಒಳ್ಳೇ ಬರಹ!! ನಾನು ಸಣ್ಣಕಿರೋವಾಗ, ಮಂಗಳೂರು ಆಕಾಶವಾಣಿ ನ ಇದೇ ತರ ಕೇಳ್ತಾ ಇದ್ದೆ...

    ReplyDelete

ಒಂದಷ್ಟು ಚಿತ್ರಗಳು..