Tuesday, January 02, 2007

ಛಳಿ ಛಳಿ ತಾಳೆನು ಈ ಛಳಿಯಾ... ಆಹಾ...

ಶೇಷಾದ್ರಿ (ಅಡ್ವೆಂಚರ್ ದಿಗ್ಗಜ) ಅವರ ಜೊತೆ ಕೊಡಗಿನ ಚಾರಣದ organization plan ಮಾಡುತ್ತಿದ್ದ ಕಾಲ. "ಈ trekಗೆ ಕೂಲ್ ಕೂರ್ಗ್ ಅಡ್ವೆಂಚರ್ ಅಂತ ಹೆಸರಿಟ್ಟರೆ ಚೆನ್ನಾಗಿರುತ್ತೆ ಅಲ್ವಾ", ಎಂದು ನನ್ನ ಪಕ್ಕದಲ್ಲಿ ಕುಳಿತಿದ್ದ ಅನುಭವಿ ಸಾಹಸಿ ರಾಜೇಶ್‍ಗೆ ಹೇಳಿದರು. ನಾನು ಮಧ್ಯ ಬಾಯಿ ಹಾಕಿ, "ತುಂಬಾ ಚೆನ್ನಾಗಿದೆ.." ಎಂದೆ. ಆಗಿನಿಂದ ಇಂದಿನವರೆಗೂ ನಾನು ಆ ಚಾರಣವನ್ನು ಏಳು ಸಲ ಮಾಡಿದ್ದೇನೆ.. ಏಳು ಸಲವೂ "ಕೂಲ್ ಕೂರ್ಗ್" ಎಂಬ ಹೆಸರಿನ ದೆಸೆಯಿಂದ ಆ ಬೆಟ್ಟದಲ್ಲಿ ನಾನು ಶೇಷಾದ್ರಿಯನ್ನು ನೆನೆಸಿಕೊಂಡಿದ್ದೇನೆ. ಆ ಬೆಟ್ಟದ ಹೆಸರು ತಡಿಯಾಂಡಮೋಳ್!!

ಛಳಿ ಛಳಿ...

ಕೊಡಗು ಛಳಿಗೆ ತುಂಬಾ ಹೆಸರುವಾಸಿ.. ಆದರೆ, ಕೊಡಗಿನ ಯಾವುದೇ ಟೌನಿನಲ್ಲಿ ಅಂಥಾ ತಡೆದುಕೊಳ್ಳಲಾಗದೇ ಇರುವಂಥಹ ಛಳಿಯಿಲ್ಲ ಈ ನಡುವೆ. ಪರಿಸರಮಾಲಿನ್ಯದ ಕಾರಣ ಅಕಾಲ ಛಳಿ, ಮಳೆ ಬಿಸಿಲು ಎಲ್ಲವನ್ನು ಬೆಂಗಳೂರು ಹೇಗೆ ನೋಡುತ್ತಾ ರೋಗದಿಂದ ನರಳುತ್ತಿದೆಯೋ ಅದೇ ರೀತಿ ಎಲ್ಲಾ ಊರುಗಳೂ ನರಳುತ್ತಿವೆ. ಕೊಡಗೂ ಸಹ! ಆದರೆ, ಬೆಟ್ಟದಲ್ಲಿ ಛಳಿ, ಮಳೆ ಎಲ್ಲ ಅದ್ಭುತವಾಗಿದೆ!! ತಡಿಯಾಂಡಮೋಳ್ ಛಳಿ ಯಾವ ಹಿಮಾಲಯದ ಛಳಿಗೇನು ಕಡಿಮೆ ಇಲ್ಲ.

ಬನಿಯನ್ನು, ಅದರ ಮೇಲೆ ಷರ್ಟು, ಅದರ ಮೇಲೆ ಥರ್ಮಲ್ಸು, ಅದರ ಮೇಲೆ ಸ್ವೆಟರ್ರು, ಅದರ ಮೇಲೆ ಒಂದು ಪುಲ್ಲೋವರ್ರು, ಹಾಕ್ಕೊಂಡು, sleeping bag ಒಳಗೆ ಮಲಗಿಕೊಂಡಿದ್ದರೂ ಮೈ ಮುದುರಿಕೊಂಡಿರುವಂತಿತ್ತು ಮೈಲಿ ಥಾಚ್ ಅಲ್ಲಿ 12,000ft ಮೇಲೆ.. ಹಿಮದಲ್ಲಿ.. ನಮ್ಮ camp site ಸುತ್ತಮುತ್ತ ಎಲ್ಲಿ ನೋಡಿದರಲ್ಲಿ ಹಿಮ. ಅಂಥ ಛಳಿಯೆಂದರೆ, ಆಹಾ ಎಷ್ಟು ಆನಂದ ಆಗುತ್ತೆ ಗೊತ್ತಾ??? ಅದಕ್ಕೆ ಸ್ಪರ್ಧೆಯೆಂಬಂತೆ ನಮ್ಮ ಕೊಡಗಿನ ಬೆಟ್ಟಗಳ ಮೇಲಿನ ಛಳಿಯಿರುತ್ತದೆ. ಮೊನ್ನೆ ಅದರ ಅನುಭವ ಬಹಳ ಸೊಗಸಾಗಿ ಆಯಿತು.

ಬದುಕ್ಕೋತು ಬಡಜೀವ

Camp fire ಹಾಕಿಕೊಂಡು ಸುತ್ತಲೂ ಕುಳಿತು ಹರಟೆ ಹೊಡೆಯುತ್ತ, ಹಾಡುಗಳನ್ನು ಹಾಡುತ್ತ ಸುಮಾರು ಹೊತ್ತು ಹದಿನಾಲ್ಕು ಜನರೂ ಕಾಲ ಕಳೆದೆವು. Sleeping Bagನಲ್ಲಿ ಮಲಗಿದ್ದ ಸುಬ್ಬು ಗೊರಕೆಯನ್ನು ವ್ಯಾಘ್ರ ಗರ್ಜನೆಯಂತೆ ಹೊಡೆಯುತ್ತಿದ್ದರು. ನನ್ನ sleeping bagನಲ್ಲಿ ನಾನು ಹುದುಗಿಕೊಂಡುಬಿಡೋಣ ಎಂದುಕೊಂಡೆ, ಅದನ್ನು ಹೊದೆದುಕೊಂಡು ಕುಳಿತು ಹರಟೆ ಹೊಡೀಬೋದು ಅಂತ. ಹೊದ್ದುಕೊಳ್ಳುವಾಗ ಶ್ರೀ ಪಾಲಿಗೆ ಬಂದಳು. ಹಾಗೇ ಹರಟೆ ಹೊಡೆಯುತ್ತಲೇ ಮಲಗಿಕೊಂಡುಬಿಟ್ಟೆವು ನಾವು ಒಂದು ಮೂರು ನಾಕು ಜನ. ವಿಪರೀತ ಛಳಿ. ನನ್ನ ಪುಣ್ಯಕ್ಕೆ, ಬಲಕ್ಕೆ ಶ್ರೀ, ಎಡಕ್ಕೆ ವಿವೇಕ ಮಲಗಿದ್ದರು. ನಾನು ಬೆಚ್ಚಗಿದ್ದೆ. ಬದುಕ್ಕೋತು ಬಡಜೀವ.. ಒಂದು sleeping bagನ ಮೂರು ಜನ ಹೊದಿಕೆಯಂತೆ ಹೊದ್ದುಕೊಂಡು ಮಲಗಿರೋದನ್ನು ನಾನು ಎಲ್ಲೂ ಕಂಡರಿತಿರಲಿಲ್ಲ..

ಛಳಿಯ ಕಾರಣ ಸಿಂಧು ನಿದ್ರೆಯಿಂದ ಎದ್ದವಳೇ ತನಗೇ ತಿಳಿಯದಂತೆ ಏನೇನೋ ಮಾತಾಡುತ್ತಿದ್ದಳು. "ನಾನು ಎದ್ದೇಳ್ತೀನಪ್ಪಾ, ನಂಗೆ ಸಕ್ಕತ್ ಸಿಟ್ಟು ಬರ್ತಾ ಇದೆ.." ಎಂದು ಛಳಿಯ ಮೇಲೆ ಸಿಟ್ಟಾದಳು. ಆದರೆ ಅವಳ ಸಿಟ್ಟಿಗೆ ಎಳ್ಳಷ್ಟೂ ಹೆದರದ ಛಳಿಯು ಅವಳ ಪಾಲಿಗೆ ಇನ್ನಷ್ಟು ಕ್ರೂರವಾಯಿತು. ಪ್ರಕೃತಿಯೇ ಹಾಗೆ. ಸುಂದರ ಎಂದುಕೊಂಡರೆ, ನಮಗೆ ಎಲ್ಲವೂ ಸುಂದರವಾಗಿ, ಸೊಗಸಾಗಿ, enjoyable ಆಗಿ ದೊರಕುತ್ತದೆ. ಆದರೆ, ಒಂದು ತೃಣವಷ್ಟು ಅಸಮಾಧಾನ ಇಟ್ಟುಕೊಂಡರೂ ಪ್ರತಿಯೊಂದೂ ನಮ್ಮ ವಿರುದ್ಧವೇ ಇರುತ್ತದೆ. ಸ್ವರೂಪ ಅಂಥಾ ಛಳಿಯಲ್ಲೂ pant ಧರಿಸದೆ ಚಡ್ಡಿ ಹಾಕ್ಕೊಂಡು ಗುಮ್ಮೆಂದು camp fire ಮುಂದೆ ಕುಳಿತಿದ್ದ. ನಿದ್ರಿಸಲೇ ಇಲ್ಲ ರಾತ್ರಿಯಿಡೀ.. ಅದಕ್ಕೆ ಛಳಿಯ ಕಾರಣ ಬೇರೆ ಕೊಟ್ಟ. ಚಡ್ಡಿ ಹಾಕೊಂಡು ಕೂತಿದ್ರೆ ಛಳಿ ಆಗದೆ ಇನ್ನೇನು ಮತ್ತೆ..

ಹೀಗೆ ಕೆಲವರು ಬೆಂಕಿ ಮುಂದೆಯೇ ಕುಳಿತು ರಾತ್ರಿಯಿಡೀ ಹರಟುತ್ತಿದ್ದರು. ನಾನು ಛಳಿಯನ್ನು ತುಂಬ ತುಂಬ ಪ್ರೀತಿಸತೊಡಗಿದೆ. ಆ ಛಳಿಯು ಕೆಲವು ಹಳೆಯ ನೆನಪಿನ ಶಿಖರಗಳಿಗೆ ನನ್ನನ್ನು ಕರೆದೊಯ್ದಿತು. ಆ ಶಿಖರಗಳನ್ನು ಬಾಷ್ಪದೊಂದಿಗೆ ಏರುತ್ತಿದ್ದಂತೆಯೇ ಅದ್ಯಾವ ವೇಳೆಗೆ ನಿದ್ದೆ ಕಣ್ಣಿಗೆ ಹತ್ತಿತೋ ಗೊತ್ತಿಲ್ಲ. ಮೂರು ಗಂಟೆಗಳ ಕಾಲ ನಿದ್ರಿಸಿದೆ. ಪಕ್ಕದಲ್ಲಿ sleeping bag ಪಾಲುಗಾರ್ತಿ ಶ್ರೀ ಇದ್ದಳು. ನೆನಪಿನ ಬಂಗಾರದ ಶೂಲದೆದುರು ಒಂದು ರಕ್ಷಣೆಯೆಂಬಂತೆ ತೋರುತ್ತಿತ್ತು. ಎಡದಲ್ಲಿದ್ದ ವಿವೇಕ ಯಾವಾಗ ಎದ್ದು ಹೋದನೆಂಬುದು ತಿಳಿಯಲಿಲ್ಲ. ಒಂದು ಪ್ಲಾಸ್ಟಿಕ್ sheet ಮೇಲೆ ಮಲಗಿದ್ದ ನಮಗೆ, ನೆಲದಿಂದ ಥಂಡಿ ಮೈ ಸೋಕುತ್ತಿದ್ದುದು ಸ್ಪಷ್ಟವಾಗಿ ಗೋಚರಿಸುತ್ತಿದ್ದರೂ sleeping bag ಸರಿಪಡಿಸಿಕೊಂಡು ಅಲ್ಲೇ ಮಲಗಿದ್ದೆವು. Secured feeling ಇಲ್ಲದಿದ್ದರೆ ಹಂಸತೂಲಿಕತಲ್ಪದಲ್ಲೂ ನಿದ್ರಿಸಲು ಸಾಧ್ಯವಿಲ್ಲ. ನಿದ್ರೆಯಲ್ಲೂ ಮನಸ್ಸು ಹಾಡುತ್ತಿತ್ತು....

ವಿವಶವಾಯಿತು ಪ್ರಾಣ ಹಾ! ಪರವಶವು ನಿನ್ನೀ ಚೇತನ.....

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ..

ನಮ್ಮ ಮೇಲೆ ಅರ್ದಂಬರ್ಧ ಅರಳಿದ ಶಶಿಯು ಲೆಕ್ಕವಿಲ್ಲದಷ್ಟು ತಾರೆಗಳೊಂದಿಗೆ ನಮ್ಮನ್ನೇ ನೋಡುತ್ತ ನಗುತ್ತಿದ್ದನು. ನಮ್ಮ ಸುತ್ತ ಇದ್ದ ಹಸಿರು ಛಳಿಯೆಂದು ವದ್ದಾಡುತ್ತಿದ್ದವರನ್ನು ಕಂಡು ಒಳಗೊಳಗೇ ಇಡೀ ಅಸಹಾಯಕ ಮನುಕುಲವನ್ನು ಹಾಸ್ಯ ಮಾಡಿಕೊಳ್ಳುತ್ತಿದ್ದವು.

ಅನುಭವದ ಮಾತುಗಳು from Trekkers - ಸಖತ್ ಛಳಿ...

"ಈ ಛಳಿ ನಮಗೆ ಬೆಂಗಳೂರಲ್ಲಿ ಸಿಗಲ್ಲ. ಇದನ್ನು ಇಲ್ಲೇ ಅನುಭವಿಸಬೇಕು.. ಛಳಿಯನ್ನು ಪ್ರೀತಿಸಿ.. ಇದು Nature's Gift.. ಶೆಖೆ, ಛಳಿ, ಮಳೆ, ಬರ.. ಎಲ್ಲವನ್ನೂ ಸಮವಾಗಿ ಸ್ವೀಕರಿಸಿ.. ಎಲ್ಲವನ್ನೂ enjoy ಮಾಡಿ.." - ನಾನು (ನಂಗೂ ಛಳಿ ಆಗ್ತಿತ್ತು.. ಆದ್ರೂ dialog ಹೊಡೆಯೋಕೇನಂತೆ!!)

"ನಂಗೆ ಸಕ್ಕತ್ (ಗಡ ಗಡ ಗಡ..) ಸಿಟ್ಟು (ಗಡ ಗಡ..) ಬರ್ತಿದೆ.. ನಾನು (ಗಡಗಡಗಡ...) ಎದ್ದುಬಿಡ್ತೀನಿ ಈಗ.." - ಸಿಂಧು

"ಅಮ್ಮ ನೆನಪಾಗ್ತಾ ಇದಾರೆ.." - ಶ್ರೀ (ಜೊತೆಗೆ ಬೇರೆಯವರೂ ನೆನಪಾಗ್ತಾ ಇದ್ದರು ಬಿಡಿ..)

"ಚಡ್ಡಿ ಹಾಕೊಂಡ್ರೇನೇ ಚೆನ್ನಾಗಿರೋದು ಛಳಿಲಿ.." - ಸ್ವರೂಪ (ಅದೇನು ಮರ್ಮವೋ ಏನೋ)

"...." - ವಿವೇಕ (ಇವನು ಮೌನಿ)

"ನಾನು ಅಡ್ಡ ಮಲಗಿಬಿಡ್ತೀನಿ, ನನ್ನನ್ನೇ ದಿಂಬಾಗಿಸಿ ನೀವು ಮೂರೂ ಜನ ಮಲ್ಕೊಳಿ.. ನನಗೂ ಬೆಚ್ಚಗಿರುತ್ತೆ.." - ಸಂತೋಷ (ಅದಕ್ಕೆ ಸಿಂಧು ಕೊಟ್ಟ ಉತ್ತರ, "ಎರಡು ಅಡಿ ದಿಂಬು ಇಟ್ಕೊಂದು ನಂಗೆ ಅಭ್ಯಾಸ ಇಲ್ಲ.")

"Arun's advice ಅಂತೆ ನಾನು ಸ್ವೆಟರ್ ತೆಗೆದುಬಿಟ್ಟೆ. ಈ ಛಳಿಯನ್ನು ಅನುಭವಿಸೋಕೆ.." - ಶುಭಾ (ನಾನು jacket/sweaterನ intentional ಆಗಿ ತೊಗೊಂಡು ಹೋಗಿರಲಿಲ್ಲ.)

"I was here before. ಆದರೆ ಇಷ್ಟು ಛಳಿ ಇರಲಿಲ್ಲ ಆಗ." - ಸುಬ್ಬು

"ಕೊಡಗಿನ ಛಳಿ ಯಾಕೆ ಅಷ್ಟು famous ಅಂತ ಈ ಟ್ರೆಕ್ಕಲ್ಲಿ ತಿಳೀತು...." - ಶ್ರೇಯಸ್ (ಮಲೆನಾಡು ಇವನ ತವರೂರು, ಆದರೂ ಇವನಿಗೂ ಛಳಿಕಾಟ ಬಿಡಲಿಲ್ಲ)

"ಸಕ್ಕತ್ತಾಗಿ ನಿದ್ದೆ ಬಂತು.." - ಶ್ರೀನಿವಾಸ್ (ಶ್ರೀಧರನ sleeping bagನಲ್ಲಿ ರೂಮಿನೊಳಗೆ ಮಲಗಿದ್ದ, ನಾವು ಹೊರಗೆ ನಕ್ಷತ್ರಗಳ ಕೆಳಗೆ)

"ಅಯ್ಯೋ ಎಲ್ಲಿ ನಿದ್ದೆ, ರಾತ್ರಿ ಎದ್ದು ಆಚೆ ಬಂದೆ.. " - ಶ್ರೀಧರ (ಶ್ರೀನಿವಾಸನಿಗೆ sleeping bagನ ಕೊಟ್ಟುಬಿಟ್ಟಿದ್ದ)

"ಶಾಲ್ ಇದೆ, ಹೊದಿಕೆ ಇದೆ.." - ಸ್ಮಿತೆ (ಇಷ್ಟರಲ್ಲೇ ಸಾಗಿಸಿ ಚೆನ್ನಾಗಿ ನಿದ್ರಿಸಿದಳು. ಸ್ವೆಟರ್ ಗಿಟರ್ ಏನೂ ತಂದಿರಲಿಲ್ಲ..)

"ಯಾಯ್.. ನಿಂಗೇನು ಗೊತ್ತು, Hopeless fellow.. ರಾತ್ರಿಯಿಡೀ ಎದ್ದಿದೀನಿ ಈ ಛಳಿಯಿಂದ. ಒಂದು ಚೂರೂ ನಿದ್ದೆಯಿಲ್ಲ........ - ಶೃತಿ (ಬೆಳಿಗ್ಗೆ ಮಲಗಿಕೊಂಡಳು ಎಲ್ಲರೂ ಎದ್ದ ಮೇಲೆ..)

"ಗೊರ್ರ್‍ರ್‍ರ್.. ಗೊರ್ರ್‍ರ್‍ರ್.." - ಸುಬ್ಬು (ನಿದ್ರಾಲೋಕ.. ಗರ್ಜನಾ ಲೋಕ..)

ಕೂರ್ಗು ನಿಜವಾಗಿಯೂ ಕೂಲಾಗಿದೆ.. ಅಲ್ಲಿನ ಛಳಿಯು ಸಂತಸ ಮೂಡಿಸುವಂತಿದೆ. ಪ್ರಕೃತಿಯು ತನ್ನ ಎಲ್ಲ ಸೌಂದರ್ಯವನ್ನು ಕೊಡಗಿಗೆ ಧಾರೆಯೆರೆದಂತಿದೆ. ಹೋಗಿ ಬನ್ನಿ ಕೊಡಗಿಗೆ. ಸ್ವೆಟರ್ ತೊಗೊಂಡು ಹೋಗೋದು ಮರೀಬೇಡಿ..
-ಅ
03.01.2007
1AM

1 comment:

  1. Yellaru heLirodanna sakkattaagi jnaapka ittidya! Olllllle chaLi adu. Adbhuta, atyadbhuta :)

    ReplyDelete

ಒಂದಷ್ಟು ಚಿತ್ರಗಳು..