Monday, January 29, 2007

ತೀರ್ಥಹಳ್ಳಿಯ ಬಸ್ಸು.. ಆಗ್ರಾ ರೈಲು.. ನಿಂತದ್ದು ನಾನೇ..

ಬಿಸಿಲದು ಬರಿ ಬಿಸಿಲಲ್ಲವೋ...

ದೆಹಲಿಯಲ್ಲಿ ನಾನು, ಡೀನ್ ಇಬ್ಬರು ಮೇ ತಿಂಗಳಿನಲ್ಲಿ ಪಟ್ಟ ಪಾಡು ಸೊಗಸಾಗಿತ್ತು. ಒಂದು ಸಮಾಧಾನ ಅಂದರೆ, Delhi was better than Amritsar. ಅಮೃತ್ಸರದಲ್ಲಿ 49 degree celcius ಇತ್ತು, ಇಲ್ಲಿ ನಲವತ್ತೊಂದಿತ್ತು. ದೆಹಲಿಯಿಂದ ತಾಜಮಹಲನ್ನು ನೋಡಲೆಂದು ರೈಲಿನಲ್ಲಿ ಹೊರಟೆವಪ್ಪಾ.. ಅಯ್ಯೋ ಕರ್ಮವೇ... ಆ ರೈಲಿನಲ್ಲಿ General Compartment ಇದ್ದದ್ದು ಎರಡೇ! ಜನ ಮಾತ್ರ, ಇಡೀ ರೈಲು ತುಂಬಿಸುವಷ್ಟಿದ್ದರು.
ಕೂರಲು ಜಾಗವೆಲ್ಲಿ, ನಿಲ್ಲಲು ಜಾಗ ಸಿಕ್ಕಿದ್ದೇ ನಮ್ಮ ಪುಣ್ಯ. ಹಾಗೂ ಡೀನ್‍ಗೆ ಸ್ವಲ್ಪ ಹೊತ್ತಾದ ನಂತರ ಜಾಗ ಸಿಕ್ಕಿಬಿಟ್ಟಿತು. ಅವರು ಸೀಟ್ ಪಡೆದುಕೊಳ್ಳುವುದರಲ್ಲಿ Expert. ಅವರ ದೃಢಕಾಯವು ಸೀಟನ್ನು ಯಾರಿಂದ ಬೇಕಾದರೂ ಕಬಳಿಸಿಕೊಳ್ಳಬಹುದು. ಅವರಿಗೆ ಸೀಟು ಪಡೆದುಕೊಳ್ಳುವುದು ಇಷ್ಟದ ಕೆಲಸ ಕೂಡ. ಕುಣಿಗಲ್ ಬಸ್ ಸ್ಟಾಂಡಿನಲ್ಲಿ ಅವರು ಬಸ್ಸಿನ ಕೊನೆಯ ಸೀಟನ್ನು ನಮಗಾಗಿ "ರಿಸರ್ವ್" ಮಾಡಿದ್ದನ್ನು ನಾನು ಮರೆಯುವಂತೆಯೇ ಇಲ್ಲ. ಯಾರೋ ಎದ್ದರು ಎಂದು ಇನ್ನೂ ಖಾತ್ರಿಯೂ ಆಗಿರಲಿಲ್ಲ, ಅವರು ಅಲ್ಲಾಡಿದರು ಅಷ್ಟೆ ಸೀಟಿನಿಂದ. ಡೀನ್ ತಮ್ಮ ಸೀಟನ್ನು ರೈಲಿನ ಸೀಟಿನ ಮೇಲೆ ಇಟ್ಟುಬಿಟ್ಟರು. ಅಚ್ಚರಿಯೆಂದರೆ ಡೀನ್‍ಗೆ ಇಲ್ಲಿ ಒಬ್ಬ ಸ್ಪರ್ಧಿ ಬೇರೆ ಸಿಕ್ಕಿದ್ದ. ಇವರಷ್ಟೇ ವೇಗವಾಗಿ ತನ್ನ ಸೀಟನ್ನೂ ಹೊತ್ತುಕೊಂಡುಬಂದು ಅದೇ ಸೀಟಿನಲ್ಲಿ ಇಟ್ಟ. ಅಲ್ಲಿ ಮುಂಚೆ ಕುಳಿತಿದ್ದವರು ಇವರ ಮುಖಮುಖ ನೋಡುತ್ತಾ ಕೆಳಗಿಳಿದು ಹೋದರು. ಇಲ್ಲಿ ಇವರಿಬ್ಬರು ಒಂದು ರೈಲಿನ ಸೀಟಿಗೆ ತಮ್ಮ ನಿತಂಬಗಳಿಂದ ಯುದ್ಧ ಮಾಡತೊಡಗಿದರು. ಇಬ್ಬರೂ ಅರ್ಧಂಬರ್ಧ ಕುಳಿತಿದ್ದರು. ಆತ ಸ್ವಲ್ಪ ಕೆಮ್ಮಿದ. ಡೀನ್‍ಗೆ ಅಷ್ಟೇ ಸಾಕಿತ್ತು. ದೃಢಸ್ಕಂಧರಾದ ಇವರು ತಮ್ಮ ಎರಡು ಸ್ಕಂಧಗಳನ್ನು ವಿಸ್ತರಿಸಿಬಿಟ್ಟು ಸಂಪೂರ್ಣ ಆಕ್ರಮಿಸಿಕೊಂಡುಬಿಟ್ಟರು. ಆತ helpless fellow, ಕೆಮ್ಮಿದ ತಪ್ಪಿಗೆ ಒಂದಿಂಚು ಜಾಗದಲ್ಲೇ ಕುಳಿತು ಪಯಣ ಮುಂದುವರೆಸಬೇಕಾಯಿತು.

ಇತ್ತ ನಾನು, ದೆಹಲಿಯ ನಲವತ್ತೊಂದು ಡಿಗ್ರಿ ತಾಪಮಾನದಲ್ಲಿ ಜನರಿಂದ ಸುತ್ತುವರೆದು ರೈಲಿನ ಚಾವಣಿಯು ಕೈಗೆಟುಕುವುದೇ ಎಂದು ಹಿಡಿದುಕೊಳ್ಳಲು ಏನೂ ಇಲ್ಲದೆ, ಬೆವರನ್ನೂ ಒರೆಸಿಕೊಳ್ಳಲು ಆಗದೆ ಉಸಿರು ಕಟ್ಟಿಕೊಂಡು ನಿಂತಿದ್ದೆ. ಅಲ್ಲಾಡಿದರೆ ಇನ್ಯಾರಿಗೋ ತಾಕಿ ಅವರ ಬೆವರು ನನಗೆ ತಾಕಿ ಹಿಂಸೆಯಾಗುತ್ತಿತ್ತು. ಅಂಟಂಟು ಮೈ ಬೇರೆ..
ರೈಲಿನಿಂದ ಕೆಳಗಿಳಿದು ಡೀನ್‍ಗೆ ಹೇಳಿದೆ, "ರೀ, ಇದೇ ಕೊನೆ, ಇನ್ನು ಮುಂದೆ ರೈಲಿನಲ್ಲಿ ರಿಸರ್ವೇಷನ್ ಇಲ್ಲದೆ ಎಲ್ಲೂ ಹೋಗೋದು ಬೇಡ. ತಾಜಮಹಲ್ಲಾದರೂ ಸರಿ, ಏನಾದರೂ ಸರಿ." ಎಂದೆ. ಸೀಟನ್ನು ಉಪಯೋಗಿಸಿಕೊಳ್ಳಲು ಬಾರದ ನನ್ನ ಅಸಹಾಯಕತೆಯನ್ನು ನೋಡಿ ಕಣ್ಣಿನಲ್ಲೇ ನಕ್ಕರು ಡೀನ್. "ಅದೇನು ರೈಲೋ ಅಥವಾ ಮಾರ್ಕೆಟ್ಟೋ.. ಅಲ್ಲಿದ್ದೋರು ಜನಾನೋ ಅಥವಾ ದನಗಳೋ.." ಎಂದು ಶಾಪದ ಮೇಲೆ ಶಾಪ ಹಾಕತೊಡಗಿದೆ. ಏನು ಮಾಡೋದು, ಬಿಸಿಲು ಕೂಡ ನನ್ನ ವರ್ತನೆಗೆ ಪ್ರೋತ್ಸಾಹ ಕೊಡುತ್ತಿತ್ತು.

ಅಮೃತ್ಸರದಲ್ಲಿ ನಲವತ್ತೊಂಭತ್ತು ಡಿಗ್ರಿ ತಾಪಮಾನದಲ್ಲಿ ವಾಘಾ ಬಾರ್ಡರ್ ನೋಡಿದ್ದು ಬಿಟ್ಟರೆ ಉಳಿದ ಸಮಯದಲ್ಲೆಲ್ಲಾ ಸ್ನಾನ ಮಾಡಿದ್ದಕ್ಕಿಂತ ಹೆಚ್ಚಿನ ಕೆಲಸ ಇನ್ನೇನು ಮಾಡಿರಲಿಲ್ಲ. ದೆಹಲಿಯೇನು ಕಡಿಮೆಯಿಲ್ಲ ಸ್ವಾಮಿ.. ಆಗ್ರಾ ಕೂಡ!! ಟೋಪಿ ಇತ್ತು ನನ್ನ ಪುಣ್ಯ. ಇಲ್ಲದಿದ್ದರೆ ನನ್ನ ಕೂದಲು ಕಾಳ್ಗಿಚ್ಚಿನಂತೆ ಹೊತ್ತಿಕೊಂಡುಬಿಡುತಿತ್ತು. ಡೀನ್ ಕೂದಲ ವಿನ್ಯಾಸ ಬೆಂಕಿಯು ಹತ್ತಿರ ಸುಳಿಯುವಂತಿರಲಿಲ್ಲ.

ಕುವೆಂಪು ನೆನಪಾದರು, "ಬಿಸಿಲಿದು ಬರಿ ಬಿಸಿಲಲ್ಲವೋ.. ಸೂರ್ಯನ ಕೃಪೆ ಕಾಣೋ.."

ವಸುಧೇಂದ್ರ ನೆನಪಾದರು, "ಶಿವಮೊಗ್ಗದವರು ಏನು ಬೇಕಾದರೂ ಬರೀಬೋದಪ್ಪ ಸೂರ್ಯನ ಬಗ್ಗೆ, ಅದೇ ಮಾತನ್ನು ಅವರು ಬಳ್ಳಾರಿಗೆ ಬಂದು ಹೇಳಲಿ ನೋಡೋಣ??"

ತಾಜಮಹಲನ್ನು ನೋಡಿದಾಗ ತಾಪ ಸ್ವಲ್ಪ ಕಡಿಮೆಯಾಯಿತು. ನೆಲ ಸುಡುತ್ತಿತ್ತಾದರೂ ಎದುರು ಭವ್ಯ ಕಲೆಯೊಂದು ಇದ್ದುದರಿಂದ ಪ್ರೀತಿಯ ನೆನಪು ಬಿಸಿಲನ್ನು ಮರೆಸಿಬಿಟ್ಟಿತ್ತು. ಪ್ರೇಮದರಸನಿಗೆ ಒಮ್ಮೆ ನಮಿಸಿದೆ.. ನನ್ನವಳನ್ನು ಒಮ್ಮೆ ಸ್ಮರಿಸಿದೆ..
ತೀರ್ಥಹಳ್ಳಿಯ ಬಸ್ಸು..

ಗೋವಿಂದರಾಜ್‍ಗೆ ವಿದಾಯ ಹೇಳಿ ತೀರ್ಥಹಳ್ಳಿಯನ್ನು ಐದುಗಂಟೆಗೆ ಬಿಟ್ಟೆ. ನನ್ನ ಲೆಕ್ಕಾಚಾರ, "ಐದಕ್ಕೆ ಹೊರಟರೆ, ಎಂಟಕ್ಕೆ ಮಂಗಳೂರು ತಲುಪಬಹುದು, ಅಲ್ಲಿ ಶಿಲ್ಪಾಳನ್ನು ಭೇಟಿಯಾಗಿ ನಂತರ ರಾತ್ರಿಯ ಬಸ್ಸಿನಲ್ಲಿ ಮೈಸೂರನ್ನು ತಲುಪಿಕೊಳ್ಳಬಹುದು ಎಂದು. ಮಂಗಳೂರಿಗೆ ಹೋಗುವ ಬಸ್ಸು ಆರಾದರೂ ಬರಲಿಲ್ಲ. ಆರುಕಾಲಿಗೆ ಬರಲೋ ಬೇಡವೋ ಎಂದು ಒಂದು ಮಿನಿ ಬಸ್ಸು ಬಂತು. ಅಲ್ಲೆಲ್ಲಾ ನಮ್ಮ ಹಾಗೆ ದೊಡ್ಡ ದೊಡ್ಡ ಬಸ್ಸುಗಳಿಲ್ಲ. ಮಿನಿಬಸ್ಸುಗಳು ಮಾತ್ರ. ಬಸ್ಸಿನ ಸರ್ವೀಸು ತುಂಬಾ ಚೆನ್ನಾಗಿರುತ್ತೆ. ಆದರೆ ಬೆಂಗಳೂರಿಗೆ ಸೋನಿಯಾ ಗಾಂಧಿ ಬಂದಿದ್ದರೆಂದು ಎಲ್ಲಾ ಬಸ್ಸುಗಳೂ ಅಲ್ಲಿಗೆ ಹೋಗಿದ್ದವಂತೆ, ಅದಕ್ಕೆ ಬಸ್ಸುಗಳಿರಲಿಲ್ಲ.

ಧೋ ಎಂದು ಮಳೆ ಸುರಿಯುತ್ತಿತ್ತು. ತೀರ್ಥಹಳ್ಳಿಯ ಮಳೆಯೆಂದರೆ ನಮ್ಮ ಬೆಂಗಳೂರಿನ ಮಳೆಯಂತೆ ಆಗೊಮ್ಮೆ ಈಗೊಮ್ಮೆ visit ಮಾಡಲು ಬರುವಂಥ ಮಳೆಯಲ್ಲ. ಶುರುವಾಯಿತೆಂದರೆ ಜಡಿಮಳೆ, ಮೂರು ತಿಂಗಳು ಬರುತ್ತಿರುತ್ತೆ. ಅಲ್ಲಿ ಮೂಲಭೂತ ವಸ್ತುವಾಗಿ ಒಂದು ಛತ್ರಿಯಂತೂ ಎಲ್ಲರೊಡನೆಯೂ ಇದ್ದೇ ಇರುತ್ತೆ. ಮೂಲಭೂತ ನನ್ನ ಹತ್ತಿರವೂ ಇತ್ತು. ನನ್ನ rucksack ಎಂದಿನಂತೆ ಭರ್ತಿಯಾಗಿ, ಭಾರಮಯವಗಿತ್ತು. ಬಂದ ಬಸ್ಸಿನೊಳಗೆ ನಾನು ತೂರುವುದೇ ಕಷ್ಟವಾಗಿತ್ತು, ಇನ್ನು ನನ್ನ bag ಹೇಗೆ ತೊಗೊಂಡು ಹೋಗಲಿ ಎಂದು ಯೋಚಿಸುತ್ತಿದ್ದಾಗ, ಆ ಬಸ್ಸಿನ ಕಂಡಕ್ಟರಲ್ಲೊಬ್ಬನು (ಆ ಬಸ್ಸುಗಳಲ್ಲಿ ನಾಕೈದು ಕಂಡಕ್ಟರುಗಳಿರ್ತಾರೆ) "ಮೇಲೆ ಹಾಕ್ಬಿಡಿ ಸಾರ್" ಎಂದ. ಅದರಲ್ಲಿ ಕ್ಯಾಮೆರಾ, ಟಾರ್ಚು ಇವೆಲ್ಲಾ ಇವೆ. ಹೇಗೆ ಮೇಲೆ ಹಾಕಲಿ, ಒಂದು ವೇಳೆ ಬಿದ್ದು ಹೋದರೆ ಆಗುಂಬೆಯ ಘಾಟಿನಲ್ಲಿ? ಅದೂ ಅಲ್ಲದೆ ಮಳೆ ಬೇರೆ ಬರ್ತಾ ಇದೆ.. ಬ್ಯಾಗೆಲ್ಲಾ ನೆಂದು ಹೋಗುತ್ತಲ್ಲಾ.. ಎಂದು ಯೋಚಿಸುವಷ್ಟು ಸಮಯ ಕೊಡಲೇ ಇಲ್ಲ. ನನ್ನ ಕೈಯಿಂದ ಬ್ಯಾಗನ್ನು ಕಸಿದುಕೊಂಡು ಮೇಲೆ ಹಾಕಿಬಿಟ್ಟ. ನನ್ನನ್ನು ಆ ಬ್ಯಾಗಿನಷ್ಟೇ ಜೋರಾಗಿ ಬಸ್ಸಿನೊಳಗೆ ಹಾಕಿಬಿಟ್ಟ. ಮಾತಲ್ಲಿ "ಸಾರ್" ಅಷ್ಟೆ, ವರ್ತನೆಯಲ್ಲಿ ಅಲ್ಲ.

ಅಷ್ಟು ರಷ್ ಇರುವ ಬಸ್ಸನ್ನು ನಾನು ನನ್ನ ಜೀವಮಾನದಲ್ಲೇ ನೋಡಿರಲಿಲ್ಲ. ಇಡೀ ಬಸ್ಸಿನಲ್ಲಿ ಸುಮಾರು 80 ಜನ ಇದ್ದೆವು. ಮಿನಿಬಸ್ಸಿನಲ್ಲಿ 40 ಜನರಿದ್ದರೆ ಅದನ್ನು ರಷ್ ಎನ್ನಬಹುದು. 80 ಜನರಿದ್ದರೆ?? "ಆ ರಂಡೆ ಬೆಂಗ್ಳೂರಿಗೆ ಹೋಗ್ತಾಳೆ ಅಂದ್ರೆ ಈ ಬೋಳಿಮಕ್ಳೆಲ್ಲಾ ಯಾಕ್ ಹೋಗ್ಬೇಕು? ನಮ್ಗೆಲ್ಲಾ ತೊಂದ್ರೆ ಆಗಲ್ವಾ ಊರಿಂದ ಊರಿಗೆ ಹೋಗೋರಿಗೆ? ದುಡ್ಡು ಕೊಡ್ತಾರೆ ಅಂದ್ರೆ ಈ ತಾಯ್ಗಂಡ ಸೂಳೇಮಕ್ಳು ಹೆಂಡ್ತಿನೂ ಮಾರ್ಕೋತಾರೆ.." ಎಂದು ನನ್ನ ಪಕ್ಕದಲ್ಲಿ ನಿಂತಿದ್ದ ಒಬ್ಬ ಮುದುಕ ಒಂದೇ ಸಮನೆ ಗೊಣಗಾಡುತ್ತಿದ್ದ.

ಬಸ್ಸಿನೊಳಗೆ ನಿಂತುಕೊಂಡು ಏನನ್ನೂ ಹಿಡಿದುಕೊಳ್ಳುವ ಅವಶ್ಯವಿರಲಿಲ್ಲ. ಎಲ್ಲಾ pack ಆಗೋಗಿದ್ವಿ. ಅಲುಗಾಡಲು ಅವಕಾಶವೇ ಇರಲಿಲ್ಲ. ನಾನು ಹೈಸ್ಕೂಲಿಗೆ ಪಾಠ ಮಾಡುತ್ತಿದ್ದಾಗ "solid molecules are tightly packed" ಎಂದು ಹೇಳಿಕೊಡುತ್ತಿದ್ದುದು ನೆನಪಾಯಿತು. ನಾವು ಹಾಗೇ solid molecules ರೀತಿ ಇದ್ದೆವು. ಕೈ ನವೆಯಾದರೆ ನಮ್ಮ ಕೈಯ್ಯನ್ನೇ ನಾವು ಕೆರೆದುಕೊಳ್ಳುತ್ತಿದ್ದೇವೋ ಅಥವಾ ಪಕ್ಕದವರ ಕೈ ಕೆರೆಯುತ್ತಿದ್ದೇವೋ ತಿಳಿಯುವಂತಿರಲಿಲ್ಲ. ಹಾಗೊಮ್ಮೆ ಕೆರೆದಿದ್ದರೂ, ಅದು ಕೈಯ್ಯೇ ಎಂದು ಖಾತ್ರಿಯೂ ಆಗುವಂತಿರಲಿಲ್ಲ. ಸುಮ್ಮನೆ ಎರಡೂ ಕೈಗಳನ್ನು ಜೇಬಿನೊಳಗಿಟ್ಟುಕೊಂಡು ನಿಂತಿದ್ದರೂ ಬಿಗಿಯಾಗಿ ನಿಂತಿದ್ದೆ.

ಆಶ್ಚರ್ಯ ಆಗಿದ್ದು, ಮುಂದಿನ ಸ್ಟಾಪುಗಳಲ್ಲಿ ಜನ ಇಳಿಯುವುದರ ಬದಲಿಗೆ ಇನ್ನೂ ಹತ್ತುತ್ತಿದ್ದಾರೆ.. ಕಂಡಕ್ಟರುಗಳಿಗೆ ಮಾತ್ರ ಬಸ್ಸಿನೊಳಗೆ ಜಾಗ ಕಾಣುತ್ತಿತ್ತು. "ಬನ್ನಿ ಒಳಗೆ ಖಾಲಿ ಇದೆ.. ಬನ್ನಿ ಖಾಲಿ ಇದೆ.." ಎಂದು ಕೂಗಿ ಕೂಗಿ ಕರೆಯುತ್ತಿದ್ದ. ಇದನ್ನು ಕೇಳಿಸಿಕೊಂಡ ಒಬ್ಬ ವ್ಯಕ್ತಿಯು ನನ್ನ ಶೂ ಮೇಲೆಯೇ ನಿಂತು ತನ್ನ ಕಂಗಳಲ್ಲಿ ಹಾಗೇ scan ಮಾಡತೊಡಗಿದ ಎಲ್ಲಾದರೂ ಜಾಗ ಇದೆಯೇ ನಿಲ್ಲಲು ಎಂದು. ನಾನು "ಸ್ವಾಮಿ, ಆತ ಕೂಗಿದ್ದು "ಖಾಲಿ" ಇದೆ ಬನ್ನಿ ಅಂತ.. "ಕಾಲಿದೆ" ಬನ್ನಿ ಅಂತ ಅಲ್ಲ.. ದಯವಿಟ್ಟು ನನ್ನ ಕಾಲ ಮೇಲಿಂದ ಕೆಳಗೆ ಇಳೀರೀಪ್ಪಾ... " ಎಂದೆ. ಕಷ್ಟದಲ್ಲೂ ಅಲ್ಲಿನ ಜನ ನಕ್ಕರು. ನಾನು ಕೂಡ ವಿಧಿಯಿಲ್ಲದೆ, ನೋವನ್ನು ಮರೆಯಲು ನಕ್ಕೆ.

ಹೊರಗೆ ಹುಯ್ಯುತ್ತಿದ್ದ ಮಳೆ ಕೊಂಚ ಭೀತಿಯನ್ನುಂಟುಮಾಡಿತ್ತು. ಆಗುಂಬೆಯ ಘಾಟಿಯಲ್ಲಿ ಬಸ್ಸು ಎಲ್ಲಿ ಪಾತಾಳಕ್ಕೆ ಧುಮುಕಿಬಿಡುತ್ತದೋ ಎಂದು. ಕತ್ತಲೆ ಬೇರೆ ಆಗಿತ್ತು. ಒಳಗೆ ಅಲುಗಾಡಲೂ ಒಂದಿಂಚೂ ಸ್ಥಳವಿಲ್ಲ. ಕಂಡಕ್ಟರು ಸೀಟುಗಳ ಹಿಡಿಗಳ ಮೇಲೆಯೇ ನಡೆಯುತ್ತಿದ್ದಾನೆ ದೊಂಬರಾಟದವನ ಹಾಗೆ. ಅವನಿಗೆ ದುಡ್ಡು ಮುಖ್ಯ, ಜನರಿಗೆ ತಮ್ಮ ಊರುಗಳನ್ನು ತಲುಪುವುದು ಮುಖ್ಯ, ಚಾಲಕನಿಗೆ ಮುಂದಿನ ವಾಹನವನ್ನು overtake ಮಾಡುವುದು ಮುಖ್ಯ, ನನ್ನ ಪಕ್ಕದಲ್ಲಿ ಇದ್ದ ಮುದುಕನಿಗೆ ತನ್ನ ಬೋ.. ಮಗ, ಸೂ.. ಮಗ ಶಾಪಗಳೇ ಮುಖ್ಯ, ಇಲ್ಲಿ ನಾವೆಲ್ಲಾ ಇಷ್ಟು ಕಷ್ಟ ಪಡುತ್ತಿದ್ದರೆ ರಾಜಕೀಯ ನಾಯಕಿ ಸೋನಿಯಾ ಗಾಂಧಿಗೆ ಬೆಂಗಳೂರಿನಲ್ಲಿ ತಲೆಹರಟೆ ಭಾಷಣ ಮಾಡುವುದೇ ಮುಖ್ಯ, ನನಗೆ.... ಬಿಡಿ.. ನನಗೆ ಏನು ಮುಖ್ಯ ಎನ್ನುವುದು ಯಾರಿಗೂ ಮುಖ್ಯವಲ್ಲ!! ಏನೋ ಒಟ್ಟಿನಲ್ಲಿ ಜೀವಂತವಾಗಿ ಮಂಗಳೂರು ತಲುಪಿದರೆ ಸಾಕೆಂದು ಪ್ರಕೃತಿಮಾತೆಯನ್ನು ಪ್ರಾರ್ಥಿಸತೊಡಗಿದೆ.

ಹೆಬ್ರಿಯಲ್ಲಿ ಕೈಕಾಲು ಅಲುಗಾಡಿಸುವಷ್ಟು ಸ್ಥಳಾವಕಾಶ ಸಿಕ್ಕಿತು. ಉಡುಪಿ ತಲುಪಿದ ಮೇಲೆ ಕುಳಿತುಕೊಳ್ಳಲು ಸೀಟು ಸಿಕ್ಕಿತು. ಎರಡೂವರೆಗಂಟೆಗಳ ಕಾಲದಲ್ಲೇ ನಾನು ನರಕವೆಂದರೇನೆಂಬುದನ್ನು ಕಂಡುಕೊಂಡುಬಿಟ್ಟೆ. ಎರಡು ದಿನಗಳಿದ್ದಂತಿತ್ತು ಆ ಸಮಯ. ಹೆಬ್ರಿ ತಲುಪಿದಾಗಿನಿಂದಲೂ ಕಂಡಕ್ಟರನನ್ನು ಸುಮಾರು ಎಂಟು ಸಲ," ಬ್ಯಾಗು ಮೇಲಿದೆ, ತೊಂದರೆ ಇಲ್ಲ ತಾನೆ?" ಎಂದೂ, "ಅಕಸ್ಮಾತ್ ಕೆಳಗೆ ಬಿದ್ದು ಹೋದರೆ ಅಂತಾ...." ಎಂದೆಲ್ಲಾ ಪ್ರೆಶ್ನಿಸುತ್ತಲೇ ಇದ್ದೆ. ಅವನು ನನಗೆ ಕೈ ಮುಗಿದುಬಿಟ್ಟು, "ಸಾರ್, ಹಾಗೇನಾದ್ರೂ ಆದರೆ ನಾನು ದುಡ್ಡು ಕೊಡ್ತೀನಿ ಸಾರ್, ಅದ್ಯಾಕೆ ಅಷ್ಟೊಂದು tension ಮಾಡ್ಕೋತೀರ, ನಿಮ್ಮ ಬ್ಯಾಗಿಗೆ ಏನೂ ಆಗಲ್ಲ, ದಿನಕ್ಕೆ ಇಂಥ ನೂರಾರು ಬ್ಯಾಗುಗಳನ್ನು ನಾವು ತರ್ತೀವಿ.." ಎಂದ. ಅವನಿಗೇನು ಗೊತ್ತು, ಒಬ್ಬ Trekkerಗೆ ತನ್ನ ಬ್ಯಾಗಿನ ಮೇಲೆ ಎಷ್ಟು ಪ್ರೀತಿ ಇರುತ್ತೆ ಅಂತ.


ಮಂಗಳೂರು ತಲುಪುವ ಹೊತ್ತಿಗೆ ಗಂಟೆ ಹನ್ನೊಂದಾಗಿ ಹೋಗಿತ್ತು. ಶಿಲ್ಪಾಳಿಗೆ ಎಸ್ಸೆಮ್ಮೆಸ್ ಮಾಡಿಬಿಟ್ಟೆ ಮುಂದಿನ ಸಲ ಭೇಟಿಯಾಗೋಣ ಎಂದು. ಬಸ್ಸಿನಲ್ಲಿ ನಾನು ಪಟ್ಟ ಕಷ್ಟಗಳನ್ನೂ ಸಹ ವಿವರಿಸಿದೆ. ಅವಳು ಅದನ್ನೋದಿ ಬಿದ್ದು ಬಿದ್ದು ನಕ್ಕಳಂತೆ. "ಏನ್ರೀ ಈ ಕಾಲದಲ್ಲಿ ಯಾರಾದರೂ ಕಷ್ಟ ಪಟ್ಟಿದ್ದನ್ನು ಹೇಳಿದರೆ ಈಪಾಟಿ ನಕ್ತಾರೆ.." ಎಂದು ಹೇಳಿ ನಾನೂ ನಕ್ಕೆ. ಅಂತೂ ಇಂತೂ ಮಂಗಳೂರು ತಲುಪಿಕೊಂಡೆ. ಒಂದೇ ಒಂದು ಬಸ್ಸು ಮೈಸೂರಿಗೆ ಕಾದಿತ್ತು. ಅದನ್ನು ಏರಿ, ಮೈಸೂರನ್ನು ಮಾರನೆಯ ದಿನ ಸೇರಿಕೊಂಡೆ. ಇನ್ನೂ ಜೀವಂತವಾಗಿ ಇದ್ದೇನೆ..

-ಅ
29.01.2007
2PM

Sunday, January 28, 2007

ಹಾಡಿಸಿದ ಕೋಗಿಲೆ... ಮರೆಯಾಯಿತು..

ಪುಕಾರ್‍ತಾ ಚಲಾ ಹ್ಞೂ ಮೇ...
ಗಲೀ ಗಲೀ ಬಹಾರ್ ಕಿ......


ಈ ಹಾಡು ಗೊತ್ತಿಲ್ಲದವರು ಯಾರಿದ್ದಾರೆ?? ರಫಿಯ ಕಂಠದಲ್ಲಿ ಇಂಥ ನೂರಾರು ಹಾಡು ಹಾಡಿಸಿದವರು ಎಸ್.ಡಿ. ಬರ್ಮನ್, ಮದನ್ ಮೋಹನ್, ನೌಷಾದ್ ಹಾಗೂ ಉದ್ದನೆಯ ಸ್ಮಾರ್ಟ್ ಮ್ಯೂಸಿಕ್ ಡೈರೆಕ್ಟರ್ ಓ.ಪಿ. ನಯ್ಯರ್.


ಯೆ ದುನಿಯಾ ಉಸೀಕಿ ಜ಼ಮಾನಾ ಉಸೀಕಾ...
ಮೊಹೊಬತ್ ಮೆ ಜೋ ಹೋ ಗಯಾ ಹೋ ಕಿಸೀಕಾ..


ಎಂದು ಶಮ್ಮಿ ಕಪೂರನ ಕಾಶ್ಮೀರ್ ಕಿ ಕಲಿ ಹಾಡು ಕೇಳಿ ಬಂದರೆ, ರಫಿಯ ಮೊಗದೊಂದಿಗೆ, ಬಿಳಿ ದಿರಿಸು, ಕಪ್ಪು ಟೋಪಿ, ಕಪ್ಪು ಕೂಲಿಂಗ್ ಗ್ಲಾಸ್ ಧರಿಸಿದ ಓಂಕಾರ್ ಪ್ರಸಾದ್ ನಯ್ಯರ್ ಮುಖ ನೆನಪಾಗದೇ ಇರಲಾರದು.
ಐದು ವರ್ಷ ಕೇವಲ back-ground music ಕೊಡುತ್ತ ಬಂದಿದ್ದ ಓ.ಪಿ ನಯ್ಯರ್‍ಗೆ ಮೊದಲು ಸಂಗೀತ ನಿರ್ದೇಶಕನಾಗಲು ಅವಕಾಶ ಕೊಟ್ಟಿದ್ದು The Great Director, ಗುರುದತ್ - ಆರ್ ಪಾರ್ ಅನ್ನುವ ಸಿನೆಮಾನಲ್ಲಿ. ಗುರುದತ್‍ ಕೊಟ್ಟ ಅವಕಾಶವನ್ನು ನಯ್ಯರ್ ಉಪಯೋಗಿಸಿಕೊಂಡದ್ದು ಮಾತ್ರವಲ್ಲದೆ ಗೀತಾ ದತ್ ಕೈಲಿ ಎಂತೆಂಥ ಸೊಗಸಾದ ಹಾಡು ಹಾಡಿಸಿದರು ಗೊತ್ತಾ?ಬಾಬುಜಿ ಧೀರೇ ಚಲ್‍ನಾ
ಪ್ಯಾರ್ ಮೇ ಜ಼ರಾ ಸಂಭಲ್‍ನಾ..ಗೀತಾದತ್, ರಫಿ ಮಾತ್ರವಲ್ಲದೆ, ಓ.ಪಿ. ನಯ್ಯರ್‍ಗೆ ಬಹಳ ಇಷ್ಟವಾದ ಗಾಯಕಿ ಇನ್ನೊಬ್ಬರಿದ್ದರು. ಆಶಾ ಭೋನ್ಸ್ಲೆ. ತಮ್ಮ ಬಹುತೇಕ ಹಾಡುಗಳನ್ನು ಹಾಡಿರುವುದು ಈಕೆಯೇ. ಓ.ಪಿ. ನಯ್ಯರ್ ಸಂಗೀತದಲ್ಲಿ ಆಶಾ ಹಾಡಿರುವ ಪ್ರತಿಯೊಂದೂ ಸಹ ಸೂಪರ್ ಹಿಟ್ ಹಾಡುಗಳು.


ಆಯಿಯೇ ಮೆಹ್ರ್‍ಬಾ..
ಬೈಠಿಯೇ ಜಾನೆಜಾ...
ಈ ಹಾಡನ್ನು ಮರೆಯಲಾದೀತೇ?? ಇಂಥಾ ಹತ್ತು ಹಲವಾರು ಹಾಡನ್ನು ರಫಿ, ಆಶಾರ ಸಿರಿಕಂಠದಲ್ಲಿ ನಮಗೆ ನೀಡಿದ ಓ.ಪಿ. ನಯ್ಯರ್ ಅವರು ಬಾಲಿವುಡ್‍ನ ಕೋಗಿಲೆಯೆಂದೇ ಪ್ರಖ್ಯಾತರಾದ ಲತಾ ಮಂಗೇಶ್ಕರ್‍ರವರಿಂದ ಇದುವರೆಗೂ ಒಂದು ಹಾಡನ್ನೂ ಹಾಡಿಸಿಲ್ಲ. ಐವತ್ತು ವರ್ಷ ಚಿತ್ರರಂಗದಲ್ಲಿ ಕೆಲಸ ಮಾಡಿದವರು ಒಂದು ಬಾರಿಯೂ ಲತಾರನ್ನು ತಮ್ಮ ಸಂಗೀತದೊಂದಿಗೆ ಬೆರೆಸಿಕೊಳ್ಳಲೇ ಇಲ್ಲ. ಲತಾ ಮಂಗೇಶ್ಕರ್ ಧ್ವನಿಯು ತಮ್ಮ ಸಂಗೀತದ ಶೈಲಿಗೆ ಹೊಂದುವುದಿಲ್ಲ ಎಂದು ಒಂದು ಟಿ.ವಿ. ಶೋನಲ್ಲಿ ಹೇಳಿದ್ದರಾದರೂ, ತಮ್ಮ ಪ್ರಥಮ ಚಿತ್ರಕ್ಕೆ ಲತಾರನ್ನು ಆಯ್ಕೆ ಮಾಡಿದ್ದು, ಆಕೆ ರೆಕಾರ್ಡಿಂಗ್‍ಗೆ ಬಾರದೇ ಇದ್ದದ್ದು, ತದನಂತರ ಲತಾ ಮಂಗೇಶ್ಕರ್‍ರನ್ನು ಇನ್ನೆಂದಿಗೂ ಕರೆಯೋದಿಲ್ಲ ಎಂದು ಭೀಷ್ಮ ಪ್ರತಿಜ್ಞೆ ಮಾಡಿದ್ದು ಒಂದು ಥರಾ Open Secret. ಅದೇನೇ ಆಗಲಿ ಈ ಎರಡು ಲೆಜೆಂಡುಗಳು ಒಟ್ಟಿಗೆ ಕೆಲಸ ಮಾಡದೆ ಇದ್ದುದರಿಂದ ನಷ್ಟ ಅನುಭವಿಸಿದ್ದು ನಮ್ಮಂಥ ಸಂಗೀತ ರಸಿಕರಷ್ಟೇ. ಹೀಗನ್ನಿಸುವ ಮುಂಚೆಯೇ, ಓ.ಪಿ. ನಯ್ಯರ್‍ರವರು ಲತಾ ಇಲ್ಲದೆಯೇ ಅತ್ಯಂತ ಸೊಗಸಾದ ಹಾಡುಗಳನ್ನು ನಮಗೆ ಕೊಟ್ಟಿದ್ದಾರೆ.
ನನ್ನ ಈ ಎಲ್ಲ ಹಾಡುಗಳನ್ನು ನೂರಾರು ಜನ್ಮಗಳಲ್ಲಿ ಕೇಳಿಕೊಳ್ಳಿ ಎಂದು ಹೇಳಿ ಇಂದು ಕಣ್ಮರೆಯಾಗಿದ್ದಾರೆ. ಇವರ ಸಾವಿನ ಸುದ್ದಿ ರೇಡಿಯೋದಲ್ಲಿ ಕೇಳಿಬಂದಾಗ ನಾನು ನನ್ನ ಪಯಣದಿಂದ ರೈಲಿನಲ್ಲಿ ಹಿಂದಿರುಗುತ್ತಿದ್ದೆ. ವಿವಿಧಭಾರತಿಯವರು ಓ.ಪಿ. ನಯ್ಯರ್‍ರ ಹಾಡುಗಳನ್ನು ಬಿತ್ತರಿಸುತ್ತಿದ್ದರು. ಒಂದೊಂದು ಹಾಡೂ ಒಂದೊಂದು ರೀತಿ ಚೆಂದವಾಗಿದೆ. ಇಂಥಾ ಸಂಗೀತ ನಿರ್ದೇಶಕರು ಮತ್ತೆ ಹುಟ್ಟಿ ಬರಲಿ.. ಅಸಹ್ಯ ಸಂಗೀತದಿಂದ ಕುಲಗೆಟ್ಟು ನಾರುತ್ತಿರುವ ನಮ್ಮ ಚಿತ್ರರಂಗ ಬೆಳಗಲಿ.
- ಅ
28.01.2007
11.30PM

Monday, January 22, 2007

ಅಗ್ನಿಸಾಕ್ಷಿಯಾಗಿ ನಡೆದದ್ದು

ಚಿಕ್ಕಮಗಳೂರನ್ನು ಅನೇಕರು ಚಿಕ್ಕಮಂಗಳೂರು ಅಂತ ತಪ್ಪು ಉಚ್ಚಾರ ಅದ್ಯಾಕೆ ಮಾಡುತ್ತಾರೋ ದೇವರಿಗೇ ಗೊತ್ತು! ಬಸ್ಸಿನ ಬೋರ್ಡುಗಳ ಮೇಲೆ ಕೂಡ ತಪ್ಪು ಬರೆದಿದ್ದಾರೆ, ಅಂತ ಪ್ರತಿಬಾರಿ ಚಿಕ್ಕಮಗಳೂರಿಗೆ ಹೋದಾಗಲೂ ತಪ್ಪು ಉಚ್ಚಾರ ಮಾಡುವವರ ನಾಲಿಗೆಗೆ ಶಪಿಸುತ್ತ ನನ್ನ ಯಾಣ ಆರಂಭಿಸುವುದು ಸಂಪ್ರದಾಯವಾಗಿಹೋಗಿದೆ..

ಕಾನನದಾನಲ

Confusion ಬೇಡ. "ಆನಲ" ಅಂದರೆ ಬೆಂಕಿ ಎಂದರ್ಥ. ಕಾನನ ಅಂದರೇನು ಎಂದು ಗೊತ್ತೇ ಇದೆ. ಕಾಡು ಎಂದು. But ಅರಣ್ಯದ "definition" ಕೇಳಿದರೆ ಬಹುಶಃ ಅಚ್ಚರಿಯಾಗಬಹುದು. ಯಾವುದೇ ಪ್ರದೇಶವನ್ನು ದೇಶದ ಸರ್ಕಾರವು ಅರಣ್ಯವೆಂದು ಘೋಷಿಹುದೋ ಅದನ್ನು ಅರಣ್ಯ ಎನ್ನುತ್ತೇವೆ. ಇಷ್ಟೇ ಗಿಡ, ಮರ, ಪ್ರಾಣಿ, ಪಕ್ಷಿ, ಮನುಷ್ಯರು ಇರಬೇಕೆಂದೇನೂ ಇಲ್ಲ. ಆ ಘೊಷಣೆಗೆ ಆಧಾರಗಳೂ ಸಹ ಇಲ್ಲ. ಚಿಕ್ಕಮಗಳೂರಿನ ಅರಣ್ಯವು ನಮ್ಮ ನಿತ್ಯಹರಿದ್ವರ್ಣದ ಪಶ್ಚಿಮಘಟ್ಟದ ಬೌಂಡರಿ ಲೈನ್‍ನಲ್ಲಿ ಇದೆಯಾದ್ದರಿಂದ ಇಲ್ಲಿನ ಬಾಬಾಬುಡನಗಿರಿ, ಮುಳ್ಳಯನಗಿರಿ ಬೆಟ್ಟಗಳ ಆಸುಪಾಸಿನಲ್ಲಿ ಸೊಗಸಾದ ಅರಣ್ಯಸಂಪತ್ತಿದೆ.

ನಮ್ಮ trek ಇದ್ದದ್ದು ಕರ್ನಾಟಕದ ಅತ್ಯಂತ ಎತ್ತರ ಶಿಖರವಾದ ಮುಳ್ಳಯ್ಯನಗಿರಿಯಿಂದ ದತ್ತಪೀಠ (ಅಥವಾ ಬಾಬಾಬುಡನಗಿರಿ) ದ ವರೆಗೂ. ಎತ್ತರದಿಂದ ಇಳಿದಿಳಿದು ನಡೆಯಬೇಕು. ದಟ್ಟಕಾನನದೊಳಗೆ ಚಾರಣ ಮಾಡುವುದೇನಿಲ್ಲ. ಪೂರ್ತಿ ಟ್ರೆಕ್ಕು ಹುಲ್ಲುಗಾಡಿನಲ್ಲಿ. ಅಲ್ಲಲ್ಲಿ ಎತ್ತೆತ್ತರದ ಬಂಡೆಗಳು ನಮಗೆ ಅಡ್ಡ ಹಾಕಿ ಇನ್ನು ಮುಂದೆ ಹೋಗಿ ನೋಡೋಣ, ಎಂದು ಸವಾಲು ಹಾಕುತ್ತವೆ ಎಂಬುದನ್ನು ಬಿಟ್ಟರೆ ಇನ್ನೇನು ಅಡೆತಡೆಗಳು ಈ ಟ್ರೆಕ್ಕಲ್ಲಿ ಬರೋದಿಲ್ಲ. ಹಾಗಂತ ನಾನು, ಡೀನ್ ನಂಬಿದ್ದೆವು.
"ಏನೋ ಅದು ಪಟಾಕಿ ಸದ್ದು?" ಮಧು ನನ್ನ ಕೇಳಿದ.

"ಅದು ಪಟಾಕಿ ಸದ್ದಲ್ಲ. ಆ ಹೊಗೆ ಇದೆ ನೋಡು, ಅಲ್ಲಿ ಆ ಹುಲ್ಲು ಹತ್ತುರಿಯುತ್ತಿದೆ ನೋಡು.. ಅದರ ಸದ್ದು ಅದು" ಎಂದು ನಾನು ದೂರದ ಕಾಳ್ಗಿಚ್ಚನ್ನು ತೋರಿಸಿದೆ ಅವನಿಗೆ. ನಂತರ ನನ್ನ ಕಣ್ಣುಗಳನ್ನು ಆ ಬೆಂಕಿಯತ್ತಲೇ ಹಾಯಿಸಿದೆ. ಆ ಸಣ್ಣ ಗುಡ್ಡ ಪೂರ್ತಿ ಹತ್ತುರಿಯುತ್ತಿತ್ತು. ಆ ಗುಡ್ಡ ನಮ್ಮಿಂದ ಸುಮಾರು ಹತ್ತು ನಿಮಿಷದ ಚಾರಣದಷ್ಟು ದೂರದಲ್ಲಿತ್ತು. ಗುಡ್ಡದ ವಲಯದಲ್ಲಿ ಬೆಂಕಿಯು ಎಲ್ಲಾ ದಿಕ್ಕಿನಲ್ಲೂ ವೇಗವಾಗಿ ಚಟಚಟನೆ ಸದ್ದು ಮಾಡುತ್ತ ಸಾಗುತ್ತಿತ್ತು. ಇನ್ನೂ ದಿಟ್ಟಿಸಿ ನೋಡಿದೆ. ನಮ್ಮ ದಾರಿ ಅದೇ ಗುಡ್ಡದ ಕಡೆಗಿದೆ!! ಬೆಂಕಿಯೊಳಗೆ ಹೋಗಬೇಕು ನಾವು - ಬಾಬಾ ಬುಡನಗಿರಿಯನ್ನು ತಲುಪಲು!!

ಚಿತ್ರದಲ್ಲಿ ಬೌಂಡರಿ ಕಾಣಿಸುತ್ತಿದೆಯಲ್ಲಾ, ಆ ಬೌಂಡರಿಯಲ್ಲಿ ಅಗ್ನಿದೇವನಿದ್ದಾನೆ. ನಮ್ಮ ಕಡೆ ಧಾವಿಸುತ್ತಿದ್ದಾನೆ. ನಾವು ಅದರತ್ತ ಇಳಿದು ಸಾಗುತ್ತಿದ್ದೇವೆ. ಕಪ್ಪು ಭಾಗದ ಗುಡ್ಡವನ್ನು ದಾಟಿ ಹೋಗಬೇಕು. ಬಲಕ್ಕೆ ಜಾರುವಂತಿಲ್ಲ, ಕೆಳಗೆ ಬೀಳುವಂತಿಲ್ಲ. ಮತ್ತಷ್ಟು ಚಿತ್ರಗಳಿವೆ. ಇನ್ನೊಂದೆರಡು ದಿನಗಳಲ್ಲಿ ಹಾಕ್ತೀನಿ.

ಆ ಬೌಂಡರಿಯ ಎದುರು ನಿಂತು, ಸುಡಬಲ್ಲಂಥ ವಸ್ತುಗಳನ್ನೆಲ್ಲ rucksack ಒಳಗೆ ತೂರಿಸಿ, ಅಗ್ನಿರೇಖೆಯನ್ನು ಜಿಗಿದು ದಾಟಿ ಕಪ್ಪು ಪ್ರದೇಶದೊಳಗೆ ಹೋದೆವು. ಜಿಗಿದಾಗ pant ಒಳಗಿನಿಂದ ಅಗ್ನಿದೇವ ನನ್ನನ್ನು ಹೊಕ್ಕಿಬಿಟ್ಟನೆಂಬ ಭಾಸವಾಯಿತು. ಬೆಂಕಿಯ ಶಾಖ ಬೆವರಿಳಿಸುತ್ತಿತ್ತು. ಬೂದಿಯು ವಿಜಯಾಳು ಕನ್ನಡಕ ಹಾಕಿಕೊಂಡಿದ್ದರೂ ಅದಕ್ಕೆ ಮರ್ಯಾದೆ ಕೊಡದೆ ಕಣ್ಣೊಳಗೆ ಹೋಗಿ ಒಂದಷ್ಟು ಕಿರುಕುಳ ಕೊಟ್ಟಿಬಿಟ್ಟಿತು. ನಮ್ಮ ಸುತ್ತಲೂ ಬೆಂಕಿಯಿದ್ದರೂ ನಮ್ಮ ಮೊಣಕಾಲುದ್ದದಷ್ಟು ಮಾತ್ರ ಇದ್ದುದರಿಂದ ಅಷ್ಟೇನು ಭೀತಿಯುಂಟಾಗಲಿಲ್ಲ. ಇಡೀ ಬೆಟ್ಟ ಹುಲ್ಲುಗಾಡಾದ್ದರಿಂದ ಮತ್ತೆ ಆ ಹುಲ್ಲು ಚಿಕ್ಕಚಿಕ್ಕದ್ದಾದ್ದರಿಂದ ಅಷ್ಟೇನು ತೊಂದರೆ ಸಹ ಆಗಲಿಲ್ಲ. ಟಿಪಿಕಲ್ ಪಶ್ಚಿಮಘಟ್ಟದ ವನವಾಗಿದ್ದಿದ್ದರೆ ಅಗ್ನಿಪಾಲಾಗುತ್ತಿದ್ದೇವೇನೋ..

ಒಂದು ಸಲವಂತೂ ಮಧುಗೆ ಹೆದರಿಸಿಬಿಟ್ಟಿತ್ತು. ಶ್ರೀಕಾಂತನು ಕಾಲುದಾರಿಯಲ್ಲಿ ಮುಂದೆ ಹೋದ. ಎಡಗಡೆಯಿಂದ ಬೆಂಕಿ ನಮ್ಮೆಡೆಗೆ ಬರುತ್ತಿತ್ತು. ದಾರಿಯ ಬಲಬದಿಯಲ್ಲಿ ಪ್ರಪಾತ. ಎಡಬದಿಯಲ್ಲಿ ಸ್ವಲ್ಪ ತೊಡೆಯಷ್ಟೆತ್ತರದ ಹುಲ್ಲು-ಪೊದೆಗಳು. ಅನತಿದೂರದಿಂದಲೇ ಬೆಂಕಿಯು ಎಡಗಡೆಯಿಂದ ನಮ್ಮ ದಾರಿಗೆ ಅಡ್ಡ ಗೇಟ್ ಹಾಕುವಂತೆ ಧಾವಿಸುತ್ತಿದೆ. ಶ್ರೀಕಾಂತನ ಹಿಂದೆ ಸುಬ್ಬು ಹೋದ. ಆಗ ಬೆಂಕಿಯು ಇನ್ನೂ ದೂರ ಇತ್ತು. ನಾನು ಬರುವ ಹೊತ್ತಿಗೆ ಗೇಟ್ ಕ್ಲೋಸ್ ಎನ್ನುತ್ತಾ ಸದ್ದು ಮಾಡುತ್ತ ಬಂದೇಬಿಟ್ಟಿತು ಬೆಂಕಿ. ನಾನು ಭಂಡ, ದಾಟಿದೆ. ವಿಜಯಾ ನನ್ನ ಹಿಂದೆಯೇ ಇದ್ದಳು. ಅವಳನ್ನು ನೋಡಿ ಸಿಟ್ಟಾದ ಬೆಂಕಿ, ಬುಸ್ಸೆಂದು ಅವಳ ಮೇಲೆ ದಾಳಿ ಮಾಡುವುದರಲ್ಲಿತ್ತು. ಅವಳೂ ಜಿಗಿದು ದಡ ಸೇರಿಕೊಂಡಳು. ಮಧು ಹಿಂದುಳಿದಿದ್ದ. ಗೇಟ್ ಕ್ಲೋಸ್ ಮಾಡಿಬಿಟ್ಟಿತ್ತು ಬೆಂಕಿ. ಅವನಿಗೆ ಭಗ್ ಎಂದು ಒಂದು ಚಮಕ್ ಕೊಟ್ಟುಬಿಟ್ಟಿತು. ಅವನು ಹಿಂದಿರುಗಿಬಿಟ್ಟ. ನಂತರ ಸ್ವಲ್ಪ ಬದಿಗೆ ಸರಿದು ನಮ್ಮತ್ತ ಓಡಿಬಂದ. ಡೀನ್ ಮತ್ತು ಅನ್ನಪೂರ್ಣ ಇಬ್ಬರೂ ನಾವು ಬಂದ ದಾರಿಯಲ್ಲಿ ಬರಲಿಲ್ಲವಾದ್ದರಿಂದ ಮಧು vs ಬೆಂಕಿ ಯುದ್ಧವನ್ನು ನೋಡಲಾಗಲಿಲ್ಲ ಅವರಿಬ್ಬರಿಗೆ.


ಹೀಗೆ ಅಗ್ನಿಯಿಂದ ಸುತ್ತುವರೆದಿದ್ದಾಗ ಸತ್ಯ ಹರಿಶ್ಚಂದ್ರ ಚಿತ್ರದ ದೃಶ್ಯವೊಂದು ನೆನಪಾಯಿತು. ಹರಿಶ್ಚಂದ್ರ ಚಂದ್ರಮತಿಯರು ನಕ್ಷತ್ರಿಕನೊಡನೆ ಕಾಡಿನಲ್ಲಿ ಹೋಗುತ್ತಿದ್ದಾಗ ವಿಶ್ವಾಮಿತ್ರನ ಆಣತಿಯ ಮೇರೆಗೆ ಅಗ್ನಿದೇವನು ಕಾಳ್ಗಿಚ್ಚಾಗಿ ಬಂದು "ನಿಮ್ಮ ನಿಜವಾದ ಹೆಸರನ್ನು ನಿಮ್ಮ ಹೆಸರಲ್ಲ ಎಂದುಕೊಳ್ಳುತ್ತ ನನ್ನಲ್ಲಿ ಪ್ರವೇಶಿಸಿದರೆ ನಾನು ಏನೂ ಮಾಡೋದಿಲ್ಲ.." ಎನ್ನುತ್ತಾನೆ. ಅದಕ್ಕೆ ನಕ್ಷತ್ರಿಕ, "ನಾನು ವಿಶ್ವಾಮಿತ್ರನ ಶಿಷ್ಯನಲ್ಲ, ನನ್ನ ಹೆಸರು ನಕ್ಷತ್ರಿಕನಲ್ಲ, ಒಟ್ಟಿನಲ್ಲಿ ನಾನು ಮನುಷ್ಯನಲ್ಲ" ಎಂದು ಅಗ್ನಿಯೊಳಗೆ ಪ್ರವೇಶಿಸಿದಾಗ ಅಗ್ನಿ ಅವನನ್ನು ಸುಡೋದೇ ಇಲ್ಲ. ಈ ದೃಶ್ಯವು ನೆನಪಾಯಿತು.

ಆ ರೀತಿಯ ಭಯಂಕರ ಕಾಳ್ಗಿಚ್ಚು ಇದಾಗಿರಲಿಲ್ಲ. ಸಣ್ಣಬೆಂಕಿಯಷ್ಟೇ. ಮೊಣಕಾಲೆತ್ತರದಲ್ಲಿ. ಆದರೆ ಬೆಂಕಿ ಬೆಂಕಿಯೇ.. ಶಾಖದಿಂದ ದಣಿದಿದ್ದೆವು. ಬೆವೆತಿದ್ದೆವು.. ಅಂತೂ ಇಂತೂ ದತ್ತಪೀಠವನ್ನು ತಲುಪಿಕೊಂಡೆವು..

ಈ ಮುಂಚೆ ನನ್ನ ಚಾರಣಗಳಲ್ಲಿ ದೂರದಿಂದ ಕಾಳ್ಗಿಚ್ಚನ್ನು ನೋಡಿದ್ದುಂಟು. ಮೊದಲ ಸಲ ಕಾಳ್ಗಿಚ್ಚಿನೊಳಗೇನೇ ನಡೆದು ಸಾಗಿದ್ದು ಇಲ್ಲಿ ದತ್ತಪೀಠದ ಬಳಿಯೇ.. ಚೆನ್ನಾಗಿತ್ತು. Adventurous ಆಗಿತ್ತು. ಮರೆಯಲಾರದಂತಿತ್ತು..

- ಅ
23.01.2007
11PM

Monday, January 08, 2007

ರೇಡಿಯೋಲಿ ಕೇಳ್ತಾ ಇದ್ದದ್ದು....

ಪ್ರೀತಿ ಮಾಡೋ ಮೊದಲು ಕಣ್ಣ ನೀರ ಉಳಿಸಿಕೋ
ಹೃದಯ ಒಳಗೆ ಪ್ರಳಯ ಆಗಬಹುದು ತಡೆದುಕೋ...
ಅಮೇರಿಕಾ... ನೆನೆದೊಡನೆ ಅಮೇರಿಕಾ.....

ಈ ಹಾಡನ್ನು ನಾನು ಕೇಳಿ ಸುಮಾರು ಹದಿನೈದು ವರ್ಷ ಆಗಿತ್ತೇನೋ... ನಾನು ಪ್ರೈಮರಿ ಸ್ಕೂಲಿನಲ್ಲಿದ್ದಾಗ ರೇಡಿಯೋಲಿ ಕೇಳುತ್ತಿದ್ದ ಹಾಡು.. ಇವತ್ತು ಸಂಗೀತ್ ಸಾಗರ್ ಇಂದ ಎಂಟು ಸಿ.ಡಿ. ಖರೀದಿಸಿ ತಂದೆ. ಎಲ್ಲಾ ಹಳೆಯ ಹಾಡುಗಳು. ಹಳೆಯದೆಂದರೆ ಕಪ್ಪು ಬಿಳುಪಿನದ್ದಾಗಲೀ, ಪ್ರಿಂಟೇ ಸಿಗದ ಅಣ್ಣೋರ ಚಿತ್ರದ ಹಾಡುಗಳಲ್ಲ.. ನಾನು ಚಿಕ್ಕವನಗಿದ್ದಾಗ ವಿವಿಧಭಾರತಿಯಲ್ಲಿ ಬರುತ್ತಿದ್ದ ಹಾಡುಗಳು ಇರುವ ಸಿ.ಡಿ.ಗಳು..

"ನಂದನ.. ಸಾದರ ಪಡಿಸುತ್ತಿರುವುದು ಡಾಬರ್.." ಎಂದು ಪ್ರತಿದಿನ ಬೆಳಿಗ್ಗೆ ಎಂಟುಗಂಟೆಗೆ ಶುರು ಆದಾಗ ಆನ್ ಆಗುತ್ತಿದ್ದ ನಮ್ಮ ಮನೆಯ ಹಳದಿ ಬಣ್ಣದ ದೊಡ್ಡ ರೇಡಿಯೋ, ಹತ್ತು ಗಂಟೆಗೆ ಅದು ಮುಗಿದ ಮೇಲೇಯೇ ಆರಿಸುತ್ತಿದ್ದುದು. ಶಾಲೆಗೆ ಹೊರಡುವ ಸಮಯವೂ, ನಂದನ ಮುಗಿಯುವ ಸಮಯವೂ ಸರಿಯಾಗಿ ಹೊಂದುತ್ತಿತ್ತು.

"ಕಂಡೋರ ಜೇಬಿಗೆ ಕತ್ತರಿ ಹಾಕಿದರೆ ಕಾಸೆಲ್ಲ ಮಂಗಮಾಯ...." ಈ ಹಾಡು ಕೇಳಿ ಮನಸ್ಸಿನಲ್ಲಿ ಒಂದು ರೀತಿ ಹೇಳಲಾರದ ಆನಂದ ಅಯಿತು. ಅಂಥದ್ದೇನು ಉತ್ತಮ ಸಾಹಿತ್ಯ ಅದಲ್ಲ ಒಪ್ಪಿಕೋತೀನಿ.. ಆದರೆ, ಚಿಕ್ಕವನಾಗಿದ್ದಾಗ ಕೇಳುತ್ತಿದ್ದ ಹಾಡು ಇಂದು ಬಹಳ ಸಮಯದ ನಂತರ ಕೇಳುತ್ತಿದ್ದೀನಲ್ಲಾ.. ಆ ಆನಂದ ಅನುಭವಿಸಿದವರಿಗೆ ಮಾತ್ರ ಗೊತ್ತಾಗುತ್ತೆ. ಚಿಕ್ಕವರಾಗಿದ್ದಾಗ ಕ್ಲಾಸಿನವರೆಲ್ಲ ಸೇರಿ ಮಾಡಿದ ನಾಟಕವೊಂದು ರಂಗಮಂದಿರಕ್ಕೆ ಬಂದು, ಆ ನಾಟಕವನ್ನು ನೋಡಿದಾಗ, ಕ್ಲಾಸಿನ ಗುಂಪೊಂದರಲ್ಲಿ ಡಾನ್ಸ್ ಅಂತ ಮಾಡಿದ ಹಾಡನ್ನು ವರ್ಷಾನುಗಟ್ಟಲೆಯ ನಂತರ ಟಿ.ವಿ.ಯಲ್ಲೋ, ರೇಡಿಯೋದಲ್ಲೋ ಕೇಳಿದಾಗ, ಆಗುತ್ತಲ್ಲಾ ಆನಂದ... ಆಹಾ!! ಅಂಥಾ nostalgia ನಾನು ಅನುಭವಿಸಿದೆ..

ಎಲ್ಲಿ ಹೋಗಿದ್ದವೋ ಈ ಹಾಡುಗಳು?? "ಅರೆ ಧಮ್ಮರೆ ಧಮ್ಮಮ್ಮ.. ನಾನ್ ಡಿಸ್ಕೋ ರುಕ್ಕಮ್ಮ.." ಇದು ಬರೀ ಅಂತ್ಯಾಕ್ಷರಿಯಲ್ಲಿ ಮಾತ್ರ ಹಾಡುವಂತಾಗಿತ್ತು. "ಆಕಾಶ ಬಾಗಿದೆ... ನಿನ್ನಂದ ಕಾಣಲೆಂದು...." ಹಾಡು ಕೇಳಿ, ಶಿವಣ್ಣ ಬೆಟ್ಟದ ಮೇಲೆ ನಿಂತಿರೋ ದೃಶ್ಯ ಕಣ್ಣು ಮುಂದೆ ಬಂದಿತು. ಅಕ್ಕ ಆ ಹಾಡು ತನಗೆ ತುಂಬಾ ಇಷ್ಟವೆಂದು ಹೇಳುತ್ತಿದ್ದುದು ಕಣ್ಣಿಗೆ ಕಟ್ಟಿದ ಹಾಗಿದೆ.. ಆ ಹಾಡುಗಳನ್ನೆಲ್ಲಾ ಮತ್ತೆ ನನ್ನ ಕೈಗೆ ಸಿಗುವ ವಿಧಿಯನ್ನು ಕಲ್ಪಿಸಿದ ಲಹರಿ ಮತ್ತು ಸಂಗೀತ (ಹಾಗೂ ಆನಂದ್ ಆಡಿಯೋ) ಅವರಿಗೆ ನಾನು ಆಭಾರಿ! ಹಳೆಯ ದಿನಗಳಿಗೆ ನನ್ನ ಕರೆದೊಯ್ದದ್ದಕ್ಕೆ ಅವರಿಗೆ ಎಷ್ಟು thanks ಹೇಳಿದರೂ ಸಾಲದು.

ಇನ್ನೊಂದು thanks ಸಲ್ಲ ಬೇಕಾದ್ದು ಗಾಂಧಿ ಬಜಾರಿನ ಸಂಗೀತ್ ಸಾಗರ್‍ಗೆ. ಇಡೀ ಬಸವನಗುಡಿಗೇ ಮೊದಲ ಕ್ಯಾಸೆಟ್ ಅಂಗಡಿಯಾದ ಈ ಸಂಗೀತ್ ಸಾಗರ್ ಬಿಟ್ಟರೆ ಬೇರೆ ಎಲ್ಲೂ ಕ್ಯಾಸೆಟ್ ಅಥವಾ ಸಿ.ಡಿ. ಖರೀದಿಸಲು ಮನಸ್ಸೇ ಆಗೋದಿಲ್ಲ. ಸುಮ್ಮನೆ Landmarkಗೋ, PlanetMಗೋ ಹೋಗಿದ್ದಾಗ ಯಾವುದೋ albumನ ನೋಡಿ, ಕೊಂಡುಕೊಳ್ಳಬೇಕೆನಿಸಿದಾಗ, ಸಂಗೀತ್ ಸಾಗರ್‍ಗೆ ಹೋಗಿ ತೊಗೊಬೇಕು ಎಂತ ಕೈಗೆತ್ತಿಕೊಂಡ albumನ ಅಲ್ಲೇ ಇಟ್ಟುಬಿಡುತ್ತೀನಿ. "ನೀನ್ ಬಾ ಗುರು, ನೀನ್ ಕೇಳಿದ್ ಕೊಡ್ತೀನಿ.." ಅಂತ ಆತ ಹೇಳ್ತಾನೇ ಇರ್ತಾರೆ.. ಆ ವಿಶ್ವಾಸ (ವ್ಯವಹಾರಿಕ ವಿಶ್ವಾಸ) ಹತ್ತುವರ್ಷದ್ದು.. ಇಂದು ನನಗೆ ನನ್ನ ಬಾಲ್ಯದ ಹಾಡುಗಳನ್ನು ಕೊಟ್ಟಿದ್ದಾರೆ. (ಮಾರಿದ್ದಾರೆ ಅಂತ ಹೇಳೋಕೆ ಮನಸ್ಸಿಲ್ಲ). ಹೀಗೇ ಮುಂದುವರೆಯಲಿ. ಸಂಗೀತ್ ಸಾಗರ್ ಇನ್ನೂ ಬೆಳೆಯಲಿ..

ಆಗಿನ ರೇಡಿಯೋನ ತುಂಬಾ miss ಮಾಡಿಕೊಳ್ಳುತ್ತಾ ಇದ್ದೀನಿ. ದಿನಕ್ಕೆ ಎರಡೇ ಗಂಟೆಗಳ ಕಾಲ ಪ್ರಸಾರ ಮಾಡುತ್ತಿದ್ದರಾದರೂ ಅದಕ್ಕಾಗಿ ಕಾಯುತ್ತ ಕುಳಿತಿರುತ್ತಿದ್ದೆವು. ಕೆಲಸ ಏನೇ ಮಾಡುತ್ತಿದ್ದರೂ ಕಿವಿ ಮಾತ್ರ ರ್ರೇಡಿಯೋ ಮೇಲೇ ಇರುತ್ತಿತ್ತು. Channel Change ಮಾಡುವ ಪ್ರಮೇಯವೇ ಇರುತ್ತಿರಲಿಲ್ಲ. ಬೆಂಗಳೂರು station ಬಿಟ್ಟರೆ ವಿವಿಧಭಾರತಿ ಮಾತ್ರ ಬರುತ್ತಿತ್ತು MWಯಲ್ಲಿ. Of course, SW tune ಮಾಡಿದ್ದಿದ್ದರೆ Cylone ಬರುತ್ತಿತ್ತು. ಆದರೆ "ನಂದನ" ಬರುವ ಸಮಯದಲ್ಲಿ ಬೇರೆ tune ಮಾಡುವ ಮನಸ್ಸು ಯಾರಿಗೂ ಇರುತ್ತಿರಲಿಲ್ಲ. ಅದರಲ್ಲಿ ಬರುವ adverstisementಗಳೂ ಸಹ ತುಂಬಾ ಸೊಗಸಾಗಿ ಇರುತ್ತಿತ್ತು. ಈಗಲೂ ನೆನೆಸಿಕೊಂಡು miss ಮಾಡಿಕೊಳ್ಳುತ್ತಾ ಇರ್ತೀವಿ.

"ಏನ್ ರಾಮಯ್ಯ ಅಷ್ಟೊಂದ್ ಆಳವಾಗ್ ಯೋಚಿಸ್ತಿದ್ದೀ??"
"ಮನೀಗಾ ಮತ್ತು ದನದ ಕೊಟ್ಟಿಗಿಗಾ ಯಾವ್ sheet ಹಾಕ್ಸ್ಬೇಕಂತ್ ಯೋಚಿಸ್ತಿದ್ದೆ.."

"ಆರೋಗ್ಯದ ರಕ್ಷಣೆ ಮಾಡುವುದು ಲೈಫ್ಬಾಯ್...."

"ಭಾರತ ಶ್ರೀಲಂಕ ಸಿಂಗಾಪುರ್ ಮಲೇಷಿಯಾ ಮುಂತಾದ ದೇಶಗಳಲ್ಲಿ ಹೆಚ್ಚಾಗಿ ಮಾರಾಟವಾಗುವುದು.. ಗೋಪ್ಪಾಲ್ ಹಲ್ಲು ಪುಡಿ..."

ಆಹಾ.. ಎಂಥಾ ಸವಿ ನೆನಪು.. Once again thanks to Sangeeth Sagar..

- ಅ

08. 01. 2007
3.30AM

Wednesday, January 03, 2007

ಇವರ ಹುಟ್ಟುಹಬ್ಬ!!

ಮಿತ್ರರ ಹುಟ್ಟುಹಬ್ಬ

ಒಬ್ಬ ಮಹೇಂದ್ರ, ಇನ್ನೊಬ್ಬ ಸೀತು.. ಇವರಿಬ್ಬರ ಹುಟ್ಟುಹಬ್ಬ ಈ ವಾರದಲ್ಲಿತ್ತು. ಏನು ಉಡುಗೊರೆ ಕೊಡೋದು ಇವರಿಗೆ ಅಂತಲೇ ತೋಚಲಿಲ್ಲ. ಇನ್ನು ಏನೂ ಕೊಟ್ಟೇ ಇಲ್ಲ. ನಾನು ಗಿಫ್ಟಾಗಿ ಸಾಮಾನ್ಯವಾಗಿ ಪುಸ್ತಕಗಳನ್ನು ಕೊಡ್ತೀನಿ. ಪುಸ್ತಕಗಳು ಯಾರಿಗೇ ಆಗಲೀ ಒಂದು ಬಹಳ ಉತ್ತಮವಾದ ಫ್ರೆಂಡು ಎಂಬುದು ನನ್ನ ನಿಲುವು. ಒಬ್ಬರೇ ನಾವು ಎಲ್ಲಿದ್ದರೂ ನಮ್ಮನ್ನು ಒಂಟಿತನದಿಂದ ದೂರವಾಗಿಸುವ ಶಕ್ತಿಯು ಪುಸ್ತಕಗಳಿಗೆ ಮಾತ್ರ ಇರುವುದು. ಆದರೆ ಕೆಲವು ವ್ಯಕ್ತಿಗಳಿರುತ್ತಾರೆ, ಅವರು ಪುಸ್ತಕಗಳನ್ನು ಓದಲೇ ಬಾರದೆಂದು ತೀರ್ಮಾನಿಸಿಬಿಟ್ಟಿರುತ್ತಾರೆ. ಅಂಥವರಿಗೆ ಏನು ಗಿಫ್ಟು ಕೊಡುವುದಪ್ಪಾ ಅಂತ ಯೋಚನೆ ಆಗುತ್ತೆ.

ಪಾಪ, ಸೀತು ಆಗಲೀ ಮಹೇಂದ್ರ ಆಗಲೀ ಓದೋರಲ್ಲ ಎಂದು ನಾನು ಹೇಳಿದರೆ ಮಹಾಪರಾಧ ಆಗಿಬಿಡುತ್ತೆ. ನಾನು ಏನೇ ಬರೆದರೂ ಅದನ್ನು ಓದಿ ನನಗೆ, ಉತ್ತಮ ಪ್ರೋತ್ಸಾಹ ಕೊಟ್ಟಿದ್ದಾರೆ. ಅವರಿಬ್ಬರೇ ಅಂತ ಅಲ್ಲ, ನಮ್ಮ ಶ್ರೀನಗರದ ಹುಡುಗರೆಲ್ಲರಿಗೂ ಕೂಡ ನಾನು ಚಿರಋಣಿ..

ಶ್ರೀನಗರದ ಹುಡುಗರು ಮತ್ತು ಇವರಿಬ್ಬರು

ಈ ನಾಮಕರಣ ಮಾಡಿದ್ದು ಜಯಣ್ಣ (ಜಯರಾಂ). ಈ ಗುಂಪಿನಲ್ಲಿ ಹುಡುಗೀರೂ ಇದ್ದಾರಾದರೂ ಈ ಹೆಸರು ಗುಂಪಿನವರಿಗೆಲ್ಲಾ ವಿಪರೀತ ಇಷ್ಟವಾಗಿ ಹೋಯಿತು. ಜಯಣ್ಣ ತಾನು ಅಮೇರಿಕೆಗೆ ತೆರಳುವ ಮುನ್ನ ಇದೊಂದು ಗುಂಪನ್ನು ಬರೀ ಯಾಹೂ-ಲಿ ರಚಿಸಲಿಲ್ಲ, ಒಂದು ತಂಡವನ್ನೇ ಸೃಷ್ಟಿಸಿದ. ತಾನು initiative ತೆಗೆದುಕೊಂಡು ಇದರ ರಚನೆ ಮಾಡದಿದ್ದರೆ ಬಹುಶಃ ಇಂದು ಈ ಶ್ರೀನಗರದ ಹುಡುಗರ ತಂಡ ಪರಸ್ಪರ ಇಷ್ಟೊಂದು close ಆಗಿರುತ್ತಿರಲಿಲ್ಲ.ಮಹೇಂದ್ರನು ಈ ಗುಂಪಿಗೆ ಕೊಂಚ ತಡವಾಗಿ ಸೇರಿಕೊಂಡನಾದರೂ, ಇವನು ತುಂಬ ಹಳೆಯ ಗೆಳೆಯನಂತೆ ಜೊತೆಗಿದ್ದಾನೆ. ಗುಂಪಿನಲ್ಲಿ ಇವನನ್ನು ಎಲ್ಲರೂ ಬಹಳ ಇಷ್ಟ ಪಡುತ್ತಾರೆ. ಇವನ ಜೊತೆ ಇದ್ದರೆ ಹೊತ್ತು ಹೋಗುವುದೇ ತಿಳಿಯುವುದಿಲ್ಲ. ಅವನ ವ್ಯಕ್ತಿತ್ವವೇ ಅಂಥದ್ದು. ಎಲ್ಲರನ್ನೂ ಬಹಳ ಸಲೀಸಾಗಿ ತನ್ನವರನ್ನಾಗಿ ಮಾಡಿಕೊಳ್ಳುವಂಥದ್ದು. ಇವನ ಮಾತು ವಿಪರೀತ fast. ಅರ್ಥ ಮಾಡಿಕೊಳ್ಳಬೇಕಾದರೆ ಇವನು ಮಾತಾಡಿದ್ದನ್ನು ರೆಕಾರ್ಡ್ ಮಾಡಿ ಮತ್ತೆ ರೀಪ್ಲೇ ಮಾಡಿ ಕೇಳಿ ಅರ್ಥ ಮಾಡಿಕೊಳ್ಳಬೇಕು. ಅವನ ದೈತ್ಯ ದೇಹಕ್ಕೆ ತಕ್ಕನಾದ ಶಾರೀರ ಅವನಿಗಿಲ್ಲವಾದರೂ ಮಾತಿನ ವೇಗ ಮಾತ್ರ ತಾನು ಓಡಿಸುವ ಸಮುರೈಗಿಂತ fast!! ಮನಸ್ಸು ಅಷ್ಟೇ ಮೃದು. ಜೂಸ್ ಕುಡಿದು ಕುಡಿದು ಮನಸ್ಸು ಸಹ ಹಣ್ಣಿನ ಹಾಗೆ ಮೃದು ಮಾಡಿಕೊಂಡುಬಿಟ್ಟಿದ್ದಾನೆ. ಒಂದು ಸಲ ಜೂಸ್ ಅಂಗಡಿ ಹೊಕ್ಕನೆಂದರೆ ಕನಿಷ್ಟ ನಾಕು ಲೋಟ ಜೂಸ್ ಇವನ ಉದರಾಳದಲ್ಲಿಳಿದುಬಿಟ್ಟಿರುತ್ತದೆ. "ಮಹೇಂದ್ರ, ಒಂಚೂರು ಇದನ್ನ ನೋಡಪ್ಪ.." ಎಂದು ಯಾವ ವೇಳೆಯಲ್ಲಿ ಹೇಳಿದರೂ ಏನು ಸಮಸ್ಯೆಯಿದೆಯೋ ಅದನ್ನು ತನ್ನದಾಗಿಸಿಕೊಂಡು ಬದಿಗಿರುತ್ತಾನೆ.ಈ ಗುಂಪಿಗೆ ಎಷ್ಟೇ ಹೊಸಬನಾಗಿದ್ದರೂ ನನಗೆ ಇವನು ನಾನು ಪ್ರೈಮರಿ ಸ್ಕೂಲಿನಲ್ಲಿದ್ದಾಗಿನಿಂದಲೂ ಪರಿಚಿತ ವ್ಯಕ್ತಿ. ಎಡಚನಾದ್ದರಿಂದ ತನಗೆ ಬಲಗಡೆ ಹೃದಯವಿರುವುದೆಂದು ಆಗಾಗ್ಗೆ ತಮಾಷೆ ಮಾಡುತ್ತಿರುತ್ತಾನೆ. ಇವನ ತಮಾಷೆಗಳು ಅರ್ಥ ಆಗೋದು ಕೂಡ ಕಷ್ಟ, ಯಾಕೆಂದರೆ ಅಷ್ಟು ವೇಗವಾಗಿ joke ಹೇಳಿರುತ್ತಾನೆ. ಇವನ ಗಾಡಿಯಲ್ಲಿ ಕನ್ನಡಿಗಳಿಲ್ಲ, ಇವನ ತಲೆಯ ಮೇಲೆ ಹೆಲ್ಮೆಟ್ಟಿಲ್ಲ. ಗಾಡಿ ಮಾತ್ರ ಗಂಟೆಗೆ ಎಂಭತ್ತು ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಹಿಂದೆ ಕುಳಿತವರ ಹೃದಯವು ಬಾಯಲ್ಲೇ ಇರುತ್ತದೆ. ಆದರೂ ಸುರಕ್ಷಿತವಾಗಿ ಎಲ್ಲಿ ತಲುಪಿಸಬೇಕೋ ಅಲ್ಲಿ ತಲುಪಿಸುತ್ತಾನೆ ಅನ್ನೋದು ಸಂತಸದ ಸಂಗತಿ.

ಇದನ್ನು ಓದುವುದಕ್ಕೆ ಅವನಿಗೆ ಬಹುಶಃ ಸಮಯ ಸಿಗುವುದಿಲ್ಲ.. ಆದರೂ ಅವನ ಬಗ್ಗೆ ಬರೆಯಬೇಕೆನಿಸಿತು. ಸಮಯ ಬಂದಾಗ ಓದಿಕೋ ಮಹೇಂದ್ರ.. ಇದು ನಿನ್ನ ಹುಟ್ಟುಹಬ್ಬಕ್ಕೆ ನನ್ನದೊಂದು ಪುಟ್ಟ ಉಡುಗೊರೆ.

ಸೀತು ಕತೆ ಹೇಳ್ತೀನಿ ಕೇಳಿ.. ಸೀತು ಅಲಿಯಾಸ್ ಶ್ರೀಧರನನ್ನು ಈ ಗುಂಪಿನವರು ಕರೆಯುವುದು ಸೀತು ಅಲಿ ಖಾನ್ ಎಂದು. ಇಂಜಿನಿಯರಿಂಗ್ ಮುಗಿಸಿದ್ದು ಗೌಸಿಯಾ ಕಾಲೇಜಿನಲ್ಲಿ ನೋಡಿ, ಅದಕ್ಕೆ ಈ ಹೆಸರು. ಆಗಾಗ್ಗೆ ಬಾರದ ಉರ್ದುವಿನಲ್ಲಿ ಏನೇನೋ ಹೊಡೆಯುತ್ತಿರುತ್ತಾನೆ. ಕೇಳಲು ಸೊಗಸಾಗಿರುತ್ತದೆ. ತಾನೂ ನಗುತ್ತಾ, ತನ್ನ ಪೋಲಿ ಜೋಕುಗಳಿಂದ ನಮ್ಮನ್ನೂ ನಗಿಸುತ್ತಾ ನಮ್ಮ ಹೊಟ್ಟೆಹುಣ್ಣಾಗಿಸುತ್ತಾನೆ. ಇವನ ನಗು ನೋಡುವುದಕ್ಕೇನೇ ಒಂದು ಸಂತೋಷ ಆಗುತ್ತದೆ. ಸೀತೂ, ದೃಷ್ಟಿ ತೆಗೆಸಿಕೊಳ್ಳಪ್ಪಾ ಪ್ರತಿದಿನವೂ!! ಪಿ.ಯು.ಸಿ.ಯಲ್ಲಿ ಒಂದೇ ಕಡೆ ಬಯಾಲಜಿ ಪಾಠಕ್ಕೆ ಹೋಗುತ್ತಿದ್ದೇವಾದರೂ ಈ ಶ್ರೀನಗರದ ಹುಡುಗರ ಗುಂಪು ಆರಂಭವಾಗುವವರೆಗೂ ಅಷ್ಟೇನೂ ಹತ್ತಿರವಿರಲಿಲ್ಲ. ಆದರೆ ಇಂದು ಇವನು ನನ್ನ ಬಾಲ್ಯಸ್ನೇಹಿತನೆಂದೆಸಿಸುತ್ತದೆ. ಆ ರೀತಿಯ impact ಯಾರ ಮೇಲಾದರೂ ಬೀರುವ ವ್ಯಕ್ತಿತ್ವ ಇರುವವರು ತುಂಬ ಕೆಲವರಿಗೆ ಮಾತ್ರ. ಬಾಲ್ಯ ಸ್ನೇಹಿತರು ಕೂಡ ಹಲವು ಬಾರಿ ಅಪರಿಚಿತರಂತೆ, ಅಥವಾ ವಿಪರೀತ ವ್ಯವಹಾರಿಕ ವ್ಯಕ್ತಿತ್ವ ಹೊಂದಿರುವವರಿರುತ್ತಾರೆ.. ಅಂಥದರಲ್ಲಿ ಸೀತುವಿನಂಥವರು ಅಪರೂಪದ ವ್ಯಕ್ತಿತ್ವ.ಇಬ್ಬರಿಗೂ ಹುಟ್ಟುಹಬ್ಬದ ಶುಭಾಶಯಗಳು.. ನಿಮ್ಮ ದಿನಗಳು ನಿಮಗೆ ಯಶಸ್ಸನ್ನೂ, ಶ್ರೇಯಸ್ಸನ್ನೂ, ಸಂತಸವನ್ನೂ ತಂದುಕೊಡಲಿ. ಪಾರ್ಟಿ ಕೊಡಿಸುವುದನ್ನು ಮರೆಯಬೇಡಿ.. ಆ ಪಾರ್ಟಿ!! ;-)

ಬ್ಯಾಡ್ ಲಕ್ ನೋಟು..


"ಇಪ್ಪತ್ತು ರೂಪಾಯಿ ನೋಟು ಇಟ್ಕೊಂಡಿದ್ಯೇನೋ.. ಮೊದಲು ಖರ್ಚು ಮಾಡು.." ಹೀಗೆಂದು ನಾನು ಸುಮಾರು ಒಂದು ವರ್ಷದಿಂದ ಹೇಳುತ್ತಿದ್ದೇನೆ ನನ್ನವರಿಗೆ.. Thanks to ಗುರುನಾಥ, ಇದನ್ನು ಅವನು ನನ್ನ ತಲೆಗೆ ತುಂಬಿ, ಈಗ ನಾನು ಎಷ್ಟರ ಮಟ್ಟಿಗೆ ಆಗೋಗಿದೀನಿ ಅಂದ್ರೆ, ಏನಾದರೂ ನನ್ನ ವಿರುದ್ಧ ನಡೆದರೆ, wallet ಅಲ್ಲಿ ಏನಾದರೂ ಇಪ್ಪತ್ತು ರೂಪಾಯಿ ನೋಟು ಇದೆಯಾ ಎಂದು ನೋಡಿಕೊಳ್ಳುವಂತೆ ಆಗಿದೆ. ಒಂದು ವೇಳೆ ಸಿಕ್ಕಿಬಿಟ್ಟರೆ, "ಬೋಳಿಮಗಂದು ಈ ನೋಟಿನಿಂದಲೇ ಇವತ್ತು ಲತ್ತೆ ಹೊಡೆದಿದ್ದು" ಎಂದು ಅದನ್ನ ಶಪಿಸಿ ನಾನು ನನ್ನ ಪಾಪದ ಬಿಂದಿಗೆಯನ್ನು ತುಂಬಿಕೊಳ್ಳುವಂತಾಗಿದೆ.

ರಿಸರ್ವ್ ಬ್ಯಾಂಕಿನಿಂದ ಸಔರ್‍ಕುಂಡಿ (ವಿಚಿತ್ರ ಹೆಸರು ಅಲ್ವಾ, ಇದರ ಅರ್ಥ ಹಿಮಾಚಲಿ ಭಾಷೆಯಲ್ಲಿ frozen lake ಅಂತ) ಚಾರಣಕ್ಕೆ ಬಂದಿದ್ದ ಮೈಸೂರಿನ ಚಾರಣಿಗರು ಎಲ್ಲಾ ನೋಟಿನ ಬಗ್ಗೆಯೂ ವಿವರಿಸುತ್ತಿದ್ದಾಗ ಈ ಇಪ್ಪತ್ತು ರೂಪಾಯಿಯ ಬಗ್ಗೆಯೂ ಹೇಳಿದರು. "ಈ ನೋಟು ಸ್ವಲ್ಪ ತೊಂದರೆ. ಇದರ ಬಣ್ಣ, ವಿನ್ಯಾಸ ಎಲ್ಲಾ ನಮ್ಮ ಕೆಲಸಕ್ಕೆ ತೊಂದರೆ ಮಾಡುತ್ತೆ.. Correction ಮಾಡೋದು ತುಂಬಾ ಕಷ್ಟ." ಎಂದಿದ್ದರು. ನಾನು ಆಗ ಡೀನ್‍ಗೆ, "ನೋಡ್ರೀ, ಈ ರಿಸರ್ವ್ ಬ್ಯಾಂಕಿನವರೇ ಹೇಳ್ತಿದ್ದಾರೆ, ಇಪ್ಪತ್ತು ರುಪಾಯಿ ನೋಟು ಸರಿ ಇಲ್ಲ ಅಂತ. ಅಂಥದರಲ್ಲಿ ನೀವು ಕಂತೆ ಕಂತೆ ಇಟ್ಟುಕೊಂಡಿದ್ದೀರಲ್ರೀ.. ನಿಮಗೆ ಅದಕ್ಕೆ ಬ್ಯಾಡ್ ಲಕ್ಕು.." ಎಂದು ಅವರ ಲಕ್ಕಿನ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ಹೇಳಿದ್ದೆ.

ಇಪ್ಪತ್ತು ರೂಪಾಯಿ ನೋಟು ಸಿಕ್ಕರೆ ಸಾಕು, ಅದನ್ನ ಮೊದಲು ಕಾಗೆ ಹಾರಿಸಿಬಿಡಬೇಕು.. ಅಂದರೆ, ಸಾಗ್‍ಹಾಕ್‍ಬೇಕು.. ಎಲ್ಲಾದರೂ ಖರ್ಚು ಮಾಡಿಬಿಡಬೇಕು. ಏನಾದರೂ ಕೊಂಡುಕೊಂಡು ಬಿಡಬೇಕು.. "ಈಗ ನೋಡ್ತಾ ಇರು, ನಾನು ಈ ಬೇಕರಿಯವನಿಗೆ ಇಪ್ಪತ್ತು ರುಪಾಯಿ ನೋಟು ಕೊಟ್ಟಿದೀನಿ.. ಇಷ್ಟು ರಷ್ ಇದೆ, ಇನ್ನು ಸ್ವಲ್ಪ ಹೊತ್ತಿನಲ್ಲೇ ಈ ಅಂಗಡಿ ಎಲ್ಲ ಖಾಲಿ ಆಗಿಬಿಡುತ್ತೆ.." ಎಂದು ಪಕ್ಕದಲ್ಲಿರೋರಿಗೆ ಒಂದು dialog ಹೊಡೆಯಬೇಕು. ನಮ್ಮ ದೇಶದಲ್ಲಿ ಯಾಕೆ ಹೇಳಿ ಇಷ್ಟೊಂದು ಸಮಸ್ಯೆಗಳು??? ಇಂಥಾ ಮೂಢನಂಬಿಕೆ ಇರೋರೇ ಜಾಸ್ತಿ ಅಂತೀರಾ? ಅಲ್ಲಲ್ಲಾ.. ಇಪ್ಪತ್ತು ರೂಪಾಯಿ ನೋಟನ್ನು ನಮ್ಮ ರಿಸರ್ವ್ ಬ್ಯಾಂಕು ಪ್ರಿಂಟ್ ಮಾಡುತ್ತೆ ನೋಡಿ, ಅದಕ್ಕೆ!!


- ಅ
03.01.2007
3AM

Tuesday, January 02, 2007

ಛಳಿ ಛಳಿ ತಾಳೆನು ಈ ಛಳಿಯಾ... ಆಹಾ...

ಶೇಷಾದ್ರಿ (ಅಡ್ವೆಂಚರ್ ದಿಗ್ಗಜ) ಅವರ ಜೊತೆ ಕೊಡಗಿನ ಚಾರಣದ organization plan ಮಾಡುತ್ತಿದ್ದ ಕಾಲ. "ಈ trekಗೆ ಕೂಲ್ ಕೂರ್ಗ್ ಅಡ್ವೆಂಚರ್ ಅಂತ ಹೆಸರಿಟ್ಟರೆ ಚೆನ್ನಾಗಿರುತ್ತೆ ಅಲ್ವಾ", ಎಂದು ನನ್ನ ಪಕ್ಕದಲ್ಲಿ ಕುಳಿತಿದ್ದ ಅನುಭವಿ ಸಾಹಸಿ ರಾಜೇಶ್‍ಗೆ ಹೇಳಿದರು. ನಾನು ಮಧ್ಯ ಬಾಯಿ ಹಾಕಿ, "ತುಂಬಾ ಚೆನ್ನಾಗಿದೆ.." ಎಂದೆ. ಆಗಿನಿಂದ ಇಂದಿನವರೆಗೂ ನಾನು ಆ ಚಾರಣವನ್ನು ಏಳು ಸಲ ಮಾಡಿದ್ದೇನೆ.. ಏಳು ಸಲವೂ "ಕೂಲ್ ಕೂರ್ಗ್" ಎಂಬ ಹೆಸರಿನ ದೆಸೆಯಿಂದ ಆ ಬೆಟ್ಟದಲ್ಲಿ ನಾನು ಶೇಷಾದ್ರಿಯನ್ನು ನೆನೆಸಿಕೊಂಡಿದ್ದೇನೆ. ಆ ಬೆಟ್ಟದ ಹೆಸರು ತಡಿಯಾಂಡಮೋಳ್!!

ಛಳಿ ಛಳಿ...

ಕೊಡಗು ಛಳಿಗೆ ತುಂಬಾ ಹೆಸರುವಾಸಿ.. ಆದರೆ, ಕೊಡಗಿನ ಯಾವುದೇ ಟೌನಿನಲ್ಲಿ ಅಂಥಾ ತಡೆದುಕೊಳ್ಳಲಾಗದೇ ಇರುವಂಥಹ ಛಳಿಯಿಲ್ಲ ಈ ನಡುವೆ. ಪರಿಸರಮಾಲಿನ್ಯದ ಕಾರಣ ಅಕಾಲ ಛಳಿ, ಮಳೆ ಬಿಸಿಲು ಎಲ್ಲವನ್ನು ಬೆಂಗಳೂರು ಹೇಗೆ ನೋಡುತ್ತಾ ರೋಗದಿಂದ ನರಳುತ್ತಿದೆಯೋ ಅದೇ ರೀತಿ ಎಲ್ಲಾ ಊರುಗಳೂ ನರಳುತ್ತಿವೆ. ಕೊಡಗೂ ಸಹ! ಆದರೆ, ಬೆಟ್ಟದಲ್ಲಿ ಛಳಿ, ಮಳೆ ಎಲ್ಲ ಅದ್ಭುತವಾಗಿದೆ!! ತಡಿಯಾಂಡಮೋಳ್ ಛಳಿ ಯಾವ ಹಿಮಾಲಯದ ಛಳಿಗೇನು ಕಡಿಮೆ ಇಲ್ಲ.

ಬನಿಯನ್ನು, ಅದರ ಮೇಲೆ ಷರ್ಟು, ಅದರ ಮೇಲೆ ಥರ್ಮಲ್ಸು, ಅದರ ಮೇಲೆ ಸ್ವೆಟರ್ರು, ಅದರ ಮೇಲೆ ಒಂದು ಪುಲ್ಲೋವರ್ರು, ಹಾಕ್ಕೊಂಡು, sleeping bag ಒಳಗೆ ಮಲಗಿಕೊಂಡಿದ್ದರೂ ಮೈ ಮುದುರಿಕೊಂಡಿರುವಂತಿತ್ತು ಮೈಲಿ ಥಾಚ್ ಅಲ್ಲಿ 12,000ft ಮೇಲೆ.. ಹಿಮದಲ್ಲಿ.. ನಮ್ಮ camp site ಸುತ್ತಮುತ್ತ ಎಲ್ಲಿ ನೋಡಿದರಲ್ಲಿ ಹಿಮ. ಅಂಥ ಛಳಿಯೆಂದರೆ, ಆಹಾ ಎಷ್ಟು ಆನಂದ ಆಗುತ್ತೆ ಗೊತ್ತಾ??? ಅದಕ್ಕೆ ಸ್ಪರ್ಧೆಯೆಂಬಂತೆ ನಮ್ಮ ಕೊಡಗಿನ ಬೆಟ್ಟಗಳ ಮೇಲಿನ ಛಳಿಯಿರುತ್ತದೆ. ಮೊನ್ನೆ ಅದರ ಅನುಭವ ಬಹಳ ಸೊಗಸಾಗಿ ಆಯಿತು.

ಬದುಕ್ಕೋತು ಬಡಜೀವ

Camp fire ಹಾಕಿಕೊಂಡು ಸುತ್ತಲೂ ಕುಳಿತು ಹರಟೆ ಹೊಡೆಯುತ್ತ, ಹಾಡುಗಳನ್ನು ಹಾಡುತ್ತ ಸುಮಾರು ಹೊತ್ತು ಹದಿನಾಲ್ಕು ಜನರೂ ಕಾಲ ಕಳೆದೆವು. Sleeping Bagನಲ್ಲಿ ಮಲಗಿದ್ದ ಸುಬ್ಬು ಗೊರಕೆಯನ್ನು ವ್ಯಾಘ್ರ ಗರ್ಜನೆಯಂತೆ ಹೊಡೆಯುತ್ತಿದ್ದರು. ನನ್ನ sleeping bagನಲ್ಲಿ ನಾನು ಹುದುಗಿಕೊಂಡುಬಿಡೋಣ ಎಂದುಕೊಂಡೆ, ಅದನ್ನು ಹೊದೆದುಕೊಂಡು ಕುಳಿತು ಹರಟೆ ಹೊಡೀಬೋದು ಅಂತ. ಹೊದ್ದುಕೊಳ್ಳುವಾಗ ಶ್ರೀ ಪಾಲಿಗೆ ಬಂದಳು. ಹಾಗೇ ಹರಟೆ ಹೊಡೆಯುತ್ತಲೇ ಮಲಗಿಕೊಂಡುಬಿಟ್ಟೆವು ನಾವು ಒಂದು ಮೂರು ನಾಕು ಜನ. ವಿಪರೀತ ಛಳಿ. ನನ್ನ ಪುಣ್ಯಕ್ಕೆ, ಬಲಕ್ಕೆ ಶ್ರೀ, ಎಡಕ್ಕೆ ವಿವೇಕ ಮಲಗಿದ್ದರು. ನಾನು ಬೆಚ್ಚಗಿದ್ದೆ. ಬದುಕ್ಕೋತು ಬಡಜೀವ.. ಒಂದು sleeping bagನ ಮೂರು ಜನ ಹೊದಿಕೆಯಂತೆ ಹೊದ್ದುಕೊಂಡು ಮಲಗಿರೋದನ್ನು ನಾನು ಎಲ್ಲೂ ಕಂಡರಿತಿರಲಿಲ್ಲ..

ಛಳಿಯ ಕಾರಣ ಸಿಂಧು ನಿದ್ರೆಯಿಂದ ಎದ್ದವಳೇ ತನಗೇ ತಿಳಿಯದಂತೆ ಏನೇನೋ ಮಾತಾಡುತ್ತಿದ್ದಳು. "ನಾನು ಎದ್ದೇಳ್ತೀನಪ್ಪಾ, ನಂಗೆ ಸಕ್ಕತ್ ಸಿಟ್ಟು ಬರ್ತಾ ಇದೆ.." ಎಂದು ಛಳಿಯ ಮೇಲೆ ಸಿಟ್ಟಾದಳು. ಆದರೆ ಅವಳ ಸಿಟ್ಟಿಗೆ ಎಳ್ಳಷ್ಟೂ ಹೆದರದ ಛಳಿಯು ಅವಳ ಪಾಲಿಗೆ ಇನ್ನಷ್ಟು ಕ್ರೂರವಾಯಿತು. ಪ್ರಕೃತಿಯೇ ಹಾಗೆ. ಸುಂದರ ಎಂದುಕೊಂಡರೆ, ನಮಗೆ ಎಲ್ಲವೂ ಸುಂದರವಾಗಿ, ಸೊಗಸಾಗಿ, enjoyable ಆಗಿ ದೊರಕುತ್ತದೆ. ಆದರೆ, ಒಂದು ತೃಣವಷ್ಟು ಅಸಮಾಧಾನ ಇಟ್ಟುಕೊಂಡರೂ ಪ್ರತಿಯೊಂದೂ ನಮ್ಮ ವಿರುದ್ಧವೇ ಇರುತ್ತದೆ. ಸ್ವರೂಪ ಅಂಥಾ ಛಳಿಯಲ್ಲೂ pant ಧರಿಸದೆ ಚಡ್ಡಿ ಹಾಕ್ಕೊಂಡು ಗುಮ್ಮೆಂದು camp fire ಮುಂದೆ ಕುಳಿತಿದ್ದ. ನಿದ್ರಿಸಲೇ ಇಲ್ಲ ರಾತ್ರಿಯಿಡೀ.. ಅದಕ್ಕೆ ಛಳಿಯ ಕಾರಣ ಬೇರೆ ಕೊಟ್ಟ. ಚಡ್ಡಿ ಹಾಕೊಂಡು ಕೂತಿದ್ರೆ ಛಳಿ ಆಗದೆ ಇನ್ನೇನು ಮತ್ತೆ..

ಹೀಗೆ ಕೆಲವರು ಬೆಂಕಿ ಮುಂದೆಯೇ ಕುಳಿತು ರಾತ್ರಿಯಿಡೀ ಹರಟುತ್ತಿದ್ದರು. ನಾನು ಛಳಿಯನ್ನು ತುಂಬ ತುಂಬ ಪ್ರೀತಿಸತೊಡಗಿದೆ. ಆ ಛಳಿಯು ಕೆಲವು ಹಳೆಯ ನೆನಪಿನ ಶಿಖರಗಳಿಗೆ ನನ್ನನ್ನು ಕರೆದೊಯ್ದಿತು. ಆ ಶಿಖರಗಳನ್ನು ಬಾಷ್ಪದೊಂದಿಗೆ ಏರುತ್ತಿದ್ದಂತೆಯೇ ಅದ್ಯಾವ ವೇಳೆಗೆ ನಿದ್ದೆ ಕಣ್ಣಿಗೆ ಹತ್ತಿತೋ ಗೊತ್ತಿಲ್ಲ. ಮೂರು ಗಂಟೆಗಳ ಕಾಲ ನಿದ್ರಿಸಿದೆ. ಪಕ್ಕದಲ್ಲಿ sleeping bag ಪಾಲುಗಾರ್ತಿ ಶ್ರೀ ಇದ್ದಳು. ನೆನಪಿನ ಬಂಗಾರದ ಶೂಲದೆದುರು ಒಂದು ರಕ್ಷಣೆಯೆಂಬಂತೆ ತೋರುತ್ತಿತ್ತು. ಎಡದಲ್ಲಿದ್ದ ವಿವೇಕ ಯಾವಾಗ ಎದ್ದು ಹೋದನೆಂಬುದು ತಿಳಿಯಲಿಲ್ಲ. ಒಂದು ಪ್ಲಾಸ್ಟಿಕ್ sheet ಮೇಲೆ ಮಲಗಿದ್ದ ನಮಗೆ, ನೆಲದಿಂದ ಥಂಡಿ ಮೈ ಸೋಕುತ್ತಿದ್ದುದು ಸ್ಪಷ್ಟವಾಗಿ ಗೋಚರಿಸುತ್ತಿದ್ದರೂ sleeping bag ಸರಿಪಡಿಸಿಕೊಂಡು ಅಲ್ಲೇ ಮಲಗಿದ್ದೆವು. Secured feeling ಇಲ್ಲದಿದ್ದರೆ ಹಂಸತೂಲಿಕತಲ್ಪದಲ್ಲೂ ನಿದ್ರಿಸಲು ಸಾಧ್ಯವಿಲ್ಲ. ನಿದ್ರೆಯಲ್ಲೂ ಮನಸ್ಸು ಹಾಡುತ್ತಿತ್ತು....

ವಿವಶವಾಯಿತು ಪ್ರಾಣ ಹಾ! ಪರವಶವು ನಿನ್ನೀ ಚೇತನ.....

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ..

ನಮ್ಮ ಮೇಲೆ ಅರ್ದಂಬರ್ಧ ಅರಳಿದ ಶಶಿಯು ಲೆಕ್ಕವಿಲ್ಲದಷ್ಟು ತಾರೆಗಳೊಂದಿಗೆ ನಮ್ಮನ್ನೇ ನೋಡುತ್ತ ನಗುತ್ತಿದ್ದನು. ನಮ್ಮ ಸುತ್ತ ಇದ್ದ ಹಸಿರು ಛಳಿಯೆಂದು ವದ್ದಾಡುತ್ತಿದ್ದವರನ್ನು ಕಂಡು ಒಳಗೊಳಗೇ ಇಡೀ ಅಸಹಾಯಕ ಮನುಕುಲವನ್ನು ಹಾಸ್ಯ ಮಾಡಿಕೊಳ್ಳುತ್ತಿದ್ದವು.

ಅನುಭವದ ಮಾತುಗಳು from Trekkers - ಸಖತ್ ಛಳಿ...

"ಈ ಛಳಿ ನಮಗೆ ಬೆಂಗಳೂರಲ್ಲಿ ಸಿಗಲ್ಲ. ಇದನ್ನು ಇಲ್ಲೇ ಅನುಭವಿಸಬೇಕು.. ಛಳಿಯನ್ನು ಪ್ರೀತಿಸಿ.. ಇದು Nature's Gift.. ಶೆಖೆ, ಛಳಿ, ಮಳೆ, ಬರ.. ಎಲ್ಲವನ್ನೂ ಸಮವಾಗಿ ಸ್ವೀಕರಿಸಿ.. ಎಲ್ಲವನ್ನೂ enjoy ಮಾಡಿ.." - ನಾನು (ನಂಗೂ ಛಳಿ ಆಗ್ತಿತ್ತು.. ಆದ್ರೂ dialog ಹೊಡೆಯೋಕೇನಂತೆ!!)

"ನಂಗೆ ಸಕ್ಕತ್ (ಗಡ ಗಡ ಗಡ..) ಸಿಟ್ಟು (ಗಡ ಗಡ..) ಬರ್ತಿದೆ.. ನಾನು (ಗಡಗಡಗಡ...) ಎದ್ದುಬಿಡ್ತೀನಿ ಈಗ.." - ಸಿಂಧು

"ಅಮ್ಮ ನೆನಪಾಗ್ತಾ ಇದಾರೆ.." - ಶ್ರೀ (ಜೊತೆಗೆ ಬೇರೆಯವರೂ ನೆನಪಾಗ್ತಾ ಇದ್ದರು ಬಿಡಿ..)

"ಚಡ್ಡಿ ಹಾಕೊಂಡ್ರೇನೇ ಚೆನ್ನಾಗಿರೋದು ಛಳಿಲಿ.." - ಸ್ವರೂಪ (ಅದೇನು ಮರ್ಮವೋ ಏನೋ)

"...." - ವಿವೇಕ (ಇವನು ಮೌನಿ)

"ನಾನು ಅಡ್ಡ ಮಲಗಿಬಿಡ್ತೀನಿ, ನನ್ನನ್ನೇ ದಿಂಬಾಗಿಸಿ ನೀವು ಮೂರೂ ಜನ ಮಲ್ಕೊಳಿ.. ನನಗೂ ಬೆಚ್ಚಗಿರುತ್ತೆ.." - ಸಂತೋಷ (ಅದಕ್ಕೆ ಸಿಂಧು ಕೊಟ್ಟ ಉತ್ತರ, "ಎರಡು ಅಡಿ ದಿಂಬು ಇಟ್ಕೊಂದು ನಂಗೆ ಅಭ್ಯಾಸ ಇಲ್ಲ.")

"Arun's advice ಅಂತೆ ನಾನು ಸ್ವೆಟರ್ ತೆಗೆದುಬಿಟ್ಟೆ. ಈ ಛಳಿಯನ್ನು ಅನುಭವಿಸೋಕೆ.." - ಶುಭಾ (ನಾನು jacket/sweaterನ intentional ಆಗಿ ತೊಗೊಂಡು ಹೋಗಿರಲಿಲ್ಲ.)

"I was here before. ಆದರೆ ಇಷ್ಟು ಛಳಿ ಇರಲಿಲ್ಲ ಆಗ." - ಸುಬ್ಬು

"ಕೊಡಗಿನ ಛಳಿ ಯಾಕೆ ಅಷ್ಟು famous ಅಂತ ಈ ಟ್ರೆಕ್ಕಲ್ಲಿ ತಿಳೀತು...." - ಶ್ರೇಯಸ್ (ಮಲೆನಾಡು ಇವನ ತವರೂರು, ಆದರೂ ಇವನಿಗೂ ಛಳಿಕಾಟ ಬಿಡಲಿಲ್ಲ)

"ಸಕ್ಕತ್ತಾಗಿ ನಿದ್ದೆ ಬಂತು.." - ಶ್ರೀನಿವಾಸ್ (ಶ್ರೀಧರನ sleeping bagನಲ್ಲಿ ರೂಮಿನೊಳಗೆ ಮಲಗಿದ್ದ, ನಾವು ಹೊರಗೆ ನಕ್ಷತ್ರಗಳ ಕೆಳಗೆ)

"ಅಯ್ಯೋ ಎಲ್ಲಿ ನಿದ್ದೆ, ರಾತ್ರಿ ಎದ್ದು ಆಚೆ ಬಂದೆ.. " - ಶ್ರೀಧರ (ಶ್ರೀನಿವಾಸನಿಗೆ sleeping bagನ ಕೊಟ್ಟುಬಿಟ್ಟಿದ್ದ)

"ಶಾಲ್ ಇದೆ, ಹೊದಿಕೆ ಇದೆ.." - ಸ್ಮಿತೆ (ಇಷ್ಟರಲ್ಲೇ ಸಾಗಿಸಿ ಚೆನ್ನಾಗಿ ನಿದ್ರಿಸಿದಳು. ಸ್ವೆಟರ್ ಗಿಟರ್ ಏನೂ ತಂದಿರಲಿಲ್ಲ..)

"ಯಾಯ್.. ನಿಂಗೇನು ಗೊತ್ತು, Hopeless fellow.. ರಾತ್ರಿಯಿಡೀ ಎದ್ದಿದೀನಿ ಈ ಛಳಿಯಿಂದ. ಒಂದು ಚೂರೂ ನಿದ್ದೆಯಿಲ್ಲ........ - ಶೃತಿ (ಬೆಳಿಗ್ಗೆ ಮಲಗಿಕೊಂಡಳು ಎಲ್ಲರೂ ಎದ್ದ ಮೇಲೆ..)

"ಗೊರ್ರ್‍ರ್‍ರ್.. ಗೊರ್ರ್‍ರ್‍ರ್.." - ಸುಬ್ಬು (ನಿದ್ರಾಲೋಕ.. ಗರ್ಜನಾ ಲೋಕ..)

ಕೂರ್ಗು ನಿಜವಾಗಿಯೂ ಕೂಲಾಗಿದೆ.. ಅಲ್ಲಿನ ಛಳಿಯು ಸಂತಸ ಮೂಡಿಸುವಂತಿದೆ. ಪ್ರಕೃತಿಯು ತನ್ನ ಎಲ್ಲ ಸೌಂದರ್ಯವನ್ನು ಕೊಡಗಿಗೆ ಧಾರೆಯೆರೆದಂತಿದೆ. ಹೋಗಿ ಬನ್ನಿ ಕೊಡಗಿಗೆ. ಸ್ವೆಟರ್ ತೊಗೊಂಡು ಹೋಗೋದು ಮರೀಬೇಡಿ..
-ಅ
03.01.2007
1AM

ಒಂದಷ್ಟು ಚಿತ್ರಗಳು..