Monday, December 18, 2006

ಸುಧಾರಿಸಿಕೊಳ್ಳಲು ಎರಡು ದಿನಗಳೇ ಬೇಕು..

ಕೆಲವು ಜಾಗಗಳಿಗೆ ಹೋಗಿಬಿಟ್ಟರೆ ಮನೆಗೆ ವಾಪಸ್ ಯಾವಾಗ ಹೋಗ್ತೀನೋ ಅನ್ನಿಸಿಬಿಟ್ಟಿರುತ್ತೆ. ಕೆಲವು ದಾಕ್ಷಿಣ್ಯಗಳಿಗೆ, ಅಥವಾ ಯಾವುದೋ ವ್ಯವಹಾರದ ವಿಷಯಾರ್ಥವಾಗಿ ಕೆಲವು ಜಾಗಗಳಿಗೆ ಹೋಗಿ, ನಮ್ಮನ್ನು ನಾವೇ ಯಾವುದೋ ಚಿತ್ರಹಿಂಸೆಯ ಜೇಡರಬಲೆಯಲ್ಲಿ ಸಿಲುಕಿಕೊಂಡು ವದ್ದಾಡುವಂತೆ ಆಗಿಬಿಡುತ್ತೇವೆ.. ಅಯ್ಯೋ ಬೆಂಗಳೂರಿನ ಎಸ್.ಪಿ. ರೋಡಿಗೆ ಹೋದಾಗೆಲ್ಲಾ ನಂಗೆ ಹೀಗೆ ಅನ್ನಿಸಿಬಿಡುತ್ತೆ!! ಸಾಕಪ್ಪಾ ಸಾಕು!! ಈ ಸ್ಥಳ ಮಹಾತ್ಮೆ ಅಂಥದ್ದು!!

ಸಿಕ್ಕಿದನೇ ಗಂಗಾ??

ಸಂಜೆ ಐದುವರೆಗಂಟೆಗೆ ಎಸ್.ಪಿ. ರೋಡಿನಲ್ಲಿ ನಾನು ಮಹೇಂದ್ರನ ಆದೇಶದ ಪ್ರಕಾರ ಒಂದು ಅಂಗಡಿಯನ್ನು ಹೊಕ್ಕು "ಇಲ್ಲಿ ಗಂಗಾ ಅನ್ನೋರು ಯಾರು?" ಅಂದೆ.. ಅಲ್ಲಿ ಒಬ್ಬೊಬ್ಬರ ವೇಷವೂ ಒಂದೊಂದು ರೀತಿ ಭಯಂಕರವಾಗಿತ್ತು. ಇವರೆಲ್ಲಾ ಅಂಗಡಿಯಲ್ಲಿ ವ್ಯಾಪಾರ ಮಾಡುವವರೋ ಅಥವಾ ಮಿಲಿಟರಿ ಏಜೆಂಟುಗಳೋ ಅನ್ನಿಸಿತು. ನನ್ನ ಪ್ರೆಶ್ನೆಯನ್ನು ಆಲಿಸುವವರೇ ಇಲ್ಲ!! ಅಲ್ಲಿ ಒಬ್ಬ ಕಪ್ಪಗೆ, ರಬ್ಬರ್ ಮುಖದಂತೆ ಒಬ್ಬ cash counterನಲ್ಲಿ ನಿಂತಿದ್ದ. ಕುಳ್ಳಗೆ ಬೇರೆ ಇದ್ದ. ಆದರೆ ಧ್ವನಿ ಮಾತ್ರ ಅಮಿತಾಬ್ ರೀತಿ ಗಡುಸಾಗಿತ್ತು. ಅವನನ್ನ ಕೇಳಿದೆ ಒಂದು ಸಲ. "ಇಲ್ಲಿ ಗಂಗಾ ಅನ್ನೋರು ಯಾರು?" ಎಂದು. ಅವನು ಕೆಂಗಣ್ಣಿನಿಂದ ನನ್ನ ನೋಡಿದ. ನನಗೆ ಯಾವುದೋ crime ಸಿನೆಮಾ ನೆನಪಾಯಿತು. ಇದೇನು ನಾನು ಇಲ್ಲಿ computer components ಕೊಂಡುಕೊಳ್ಳಲು ಬಂದಿದ್ದೀನೋ ಅಥವಾ ಯಾರನ್ನೋ ಸುಪಾರಿ ಹತ್ಯೆ ಮಾಡಿಸಲು ಬಂದಿದ್ದೀನೋ ಎಂಬಂತೆ ನನಗೇ ಡೌಟಾಯಿತು. ಅವನು ಮುಖದಲ್ಲಾಗಲೀ ಕಂಠದಲ್ಲಾಗಲೀ ಒಂದು ಚೂರೂ ಭಾವನೆಗಳ ಬದಲಾವಣೆಗಳನ್ನು ತೋರದೆ, "ನಮಾಜ್‍ಗೆ ಹೋಗಿದಾನೆ.." ಎಂದು UNDERTAKER ರೀತಿ ಉತ್ತರಿಸಿದ. ನಾನು "ಎಷ್ಟು ಹೊತ್ತಿಗೆ ಬರ್ತಾರೆ?" ಎಂದು ಕೇಳಬೇಕೆಂದಿದ್ದ ಪ್ರೆಶ್ನೆಯೇ ಅವನಿಗೆ ಬೇಡವಾಗಿತ್ತು. ನನ್ನನ್ನು "ignore user" ಮಾಡಿಬಿಟ್ಟ.

ಆ ಒಂದು ಸಣ್ಣ ಅಂಗಡಿಯಲ್ಲಿ ಸುಮಾರು ಇಪ್ಪತ್ತು ಜನ customers ಇದ್ದರು. ಇನ್ನೂ ಇಪ್ಪತ್ತು ಜನ ಆ ಅಂಗಡಿಯ ಕೆಲಸಗಾರರೇ ಇದ್ದರು. ಎಸ್.ಪಿ. ರೋಡಿನ ಅಂಗಡಿಗಳೇ ಅಂಥದ್ದು. ಅಲ್ಲಿಗೆ ಬರುವ ಗಿರಾಕಿಗಳೆಲ್ಲಾ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಯಾವುದಾದರೂ ಒಬ್ಬ ಹುಡುಗನನ್ನು ಪರಿಚಯ ಮಾಡಿಕೊಂಡಿರುತ್ತಾರೆ, componentsನ ಕಡಿಮೆ ದರದಲ್ಲಿ ಖರೀದಿಸಲು. ನನಗೆ ಅಲ್ಲಿ ಯಾರ ಪರಿಚಯವೂ ಇರಲಿಲ್ಲ. ಮಹೇಂದ್ರ ಹೇಳಿದ್ದ, ಅಲ್ಲಿ ಗಂಗಾ ಅನ್ನೊನು ಇರ್ತಾನೆ, ಹೋಗು, ಒಳ್ಳೆ priceಗೆ ಕೊಡ್ತಾನೆ ಎಂತ. ಆದರೆ ಗಂಗಾ ನಮಾಜಿಗೆ ಹೋಗಿದ್ದಾನೆ!!

ನಾನು ಅಂಗಡಿಯ ಒಳಭಾಗಕ್ಕೆ ನುಗ್ಗಿಬಿಟ್ಟೆ. ಅಲ್ಲಿ ಕಪ್ಪು ಬಟ್ಟೆ ಧರಿಸಿ ಒಬ್ಬ ಸಾಬಿ ನಿಂತಿದ್ದ. ಅಲ್ಲಿ ಇದ್ದ customers ಜತೆಗೆಲ್ಲಾ ಹಿಂದಿಯಲ್ಲಿ, ಉರ್ದುವಿನಲ್ಲಿ ಮಾತನಾಡುತ್ತಿದ್ದ. ನನ್ನ ಹಿಂದಿ, ಉರ್ದು ಅವನೇನಾದರೂ ಕೇಳಿಬಿಟ್ಟಿದ್ದಿದ್ದರೆ ಅವನು ಅಂಗಡಿಯಲ್ಲಿ short circuit ಮಾಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡುಬಿಡುತ್ತಿದ್ದ, ಅಥವಾ ನನ್ನ ಬಾಯಿ ಮುಚ್ಚಿಸಬೇಕೆಂದು ತಾನೇ ಗಂಗಾ ಎಂದು ಒಪ್ಪಿಕೊಂಡುಬಿಡುತ್ತಿದ್ದ!! ಕನ್ನಡ ಬರದೆ ಇರುವ ಜನರೆದುರು ನಮ್ಮ ಕನ್ನಡಾಭಿಮಾನ ಸ್ವಲ್ಪ ಹೆಚ್ಚಾಗುವುದು ಸರ್ವೇ ಸಾಮಾನ್ಯ! ನಾನು ಕನ್ನಡದಲ್ಲೇ ಕೇಳಿದೆ. "ಇಲ್ಲಿ ಗಂಗಾ ಅನ್ನೋರು ಯಾರು?" ಅಂತ. ಅವನೂ ಕೂಡ ಅದೇ ಉತ್ತರ ಕೊಟ್ಟ. ಆದರೆ ಸ್ಪಷ್ಟ ಕನ್ನಡದಲ್ಲಿ. ನಾನು ಅವನೊಡನೆ ಮಾತು ಮುಂದುವರಿಸಿದೆ. ಕಪ್ಪು ಬಟ್ಟೆ ಧರಿಸಿದ್ದರೂ, ಗಡ್ಡ ಬಿಟ್ಟಿದ್ದರೂ, ನನ್ನ ಹಾಗೆ ತೆಳ್ಳಗೆ ಇದ್ದು, ಮೃದು ಕಂಠ ಹೊಂದಿದ್ದ. ಮಾರುದ್ದ ಜಟೆಯಿದ್ದರೂ ಈತನೊಡನೆ ಮಾತನಾಡಬಹುದೆನಿಸಿತು. ಭಯ ಆಗಲಿಲ್ಲ. "ಎಷ್ಟ್ ಹೊತ್ತಿಗೆ ಬರ್ತಾರೆ?" ಎಂದೆ. "ಒಂದು ಹತ್ತು ನಿಮಿಷ ಆಗುತ್ತೆ ಕೂತ್ಕೋಳಿ ಸರ್" ಎಂದ. ಅಬ್ಬಾ ಸ್ವಲ್ಪ ಆದ್ರೂ ಮರ್ಯಾದೆ ಸಿಕ್ಕಿತಲ್ಲಾ!! ಇದೇನು customersನ ಹೆದರಿಸುವವನನ್ನೆಲ್ಲಾ ಈ ಅಂಗಡಿಯಲ್ಲಿ ಕೆಲ್ಸಕ್ಕೆ ಇಟ್ಟುಕೊಂಡಿದ್ದಾರಲ್ಲಾ ಎಂದು ಆ ಭಯಾನಕ ಮುಖವನ್ನು ಶಪಿಸಿ, ಇವನು ಈ ಅಂಗಡಿಯಲ್ಲಿ ಸ್ವಲ್ಪ ಓಕೆ ಎಂದು ನನಗೆ ಉತ್ತರ ಕೊಟ್ಟವನನ್ನು ಮನಸ್ಸಿನಲ್ಲೇ ಪ್ರಶಂಸಿಸಿದೆ. "ಬಂದ ಮೇಲೆ ಇವರೇ ಗಂಗಾ ಅಂತ ನಂಗೆ ಹೇಳಿ, ಇಲ್ಲೇ ಕೂತಿರ್ತೀನಿ" ಎಂದು ಅಲ್ಲಿ ಇದ್ದ ಎರಡೇ ಕುರ್ಚಿಯಲ್ಲಿ ಒಂದನ್ನು musical chair ಎಂಬಂತೆ ಆರಿಸಿಕೊಂಡು ಕುಳಿತೆ.

"ಗಂಗಾ" ಅಂತ ಹೆಸರಿಟ್ಟುಕೊಂಡು ನಮಾಜಿಗೆ ಹೋಗ್ತಾನಾ?? ಅವರಲ್ಲಿ ಗಂಗಾ ಅನ್ನೋ ಹೆಸರೂ ಉಂಟಾ? ಎಂದು ಯೋಚಿಸುತ್ತಾ ನನ್ನ ಮೊಬೈಲ್‍ನಲ್ಲಿ ರೇಡಿಯೋ ಕೇಳುತ್ತಾ ಅಲ್ಲಿ ಇದ್ದ componentsನೆಲ್ಲಾ ನೋಡುತ್ತಾ ಕಾಲಕಳೆದೆ. ಆ ಕಪ್ಪುವಸ್ತ್ರಧಾರಿ ಮಾಯವಾಗಿಬಿಟ್ಟಿದ್ದ. ಅಂಗಡಿಯ ಕ್ರೌಡು ಜಾಸ್ತಿಯಾಗಿತ್ತು. ಬಿಳಿ ಶರ್ಟು ತೊಟ್ಟ ಒಂದಷ್ಟು ಯುವಕರು ಅಂಗಡಿಯೊಳಗೆ ದಾಳಿ ಮಾಡಿ cash counter ಬಳಿ ಇದ್ದ ಆ ಭಯಂಕರ ಮನುಷ್ಯನನ್ನು ಏನೇನೋ ಕೇಳುತ್ತಿದ್ದರು. Cash counter ಬಳಿ ಅವನೊಬ್ಬನೇ ಇದ್ದ ನಾನು ಅಂಗಡಿಗೆ ಬಂದಾಗ. ಈಗ ಅಲ್ಲಿ ಐದು ಜನ ಇದ್ದಾರೆ. ಆ ಬಿಳಿ ಶರ್ಟು ತೊಟ್ಟು ಬಂದವರು INTEL ಕಂಪೆನಿಯಿಂದ, ಏನೋ ಸರ್ವೆ ಮಾಡಲು ಎಂದು ತಿಳಿಯಿತು. ಅವರು ಹೋಗೋವರೆಗೂ ನಾನು ಅಲ್ಲೇ ಕೂತು ಅವರನ್ನು ನೋಡುತ್ತಿದ್ದೆ. ನನಗಿಂತ ಲೇಟಾಗಿ ಬಂದೋರೆಲ್ಲಾ, ಕಂಪ್ಯೂಟರುಗಳನ್ನು ಕೊಂಡುಕೊಂಡು, assemble ಸಹಾ ಮಾಡಿಸಿಕೊಂಡು ಹೊರಟು ಹೋಗುತ್ತಿದ್ದರು. ಹೊಸ ಹೊಸ customers ಒಳಗೆ ಬರುತ್ತಲೇ ಇದ್ದರು. ಗಂಗೆಯು ಮಾತ್ರ ಕಾಣಲೇ ಇಲ್ಲ.. ನಾನು ಆ ಅಂಗಡಿಯ ಒಳಗೆ ಕಾಲಿಟ್ಟು ಒಂದು ಗಂಟೆಕಾಲ ಆಗಿಹೋಯಿತು!!

ಮತ್ತೆ cash counter ಬಳಿ ಹೋದೆ. ಈ ಬಾರಿ ಆ ಭಯಂಕರ ವ್ಯಕ್ತಿಯನ್ನು ಮಾತನಾಡಿಸಲಿಲ್ಲ. ಅವನ ಪಕ್ಕ ಒಬ್ಬ ಚಿಕ್ಕ ಹುಡುಗ ನಿಂತಿದ್ದ. ಹದಿಹರೆಯದವನಿರಬೇಕು. ಆ ಇಂಟೆಲ್ ಗುಂಪಿಗೆ ಅವನೇ ಉತ್ತರ ಕೊಡುತ್ತಿದ್ದುದು. ತುಂಬಾ ವಿಷಯ ಬಲ್ಲವನಂತೆ ಮಾತನಾಡುತ್ತಿದ್ದ. ಹೆಸರೇನು ಎಂದು ಅವರು ಕೇಳಿದಾಗ ಎಂಥದೋ ಇಜಾಜ್ ಎಂದ. ಅದೇನು intuite ಅಯಿತೋ ಗೊತ್ತಿಲ್ಲ, ಅವನ ಹೆಸರನ್ನು ಕೇಳಿಯಾದಮೇಲೂ ಅವನನ್ನೇ, "ಗಂಗಾ ಎಂದರೆ ನೀವೇನಾ?" ಎಂದೆ. ಅವನು ನನ್ನನ್ನು ಮೇಲಿಂದ ಕೆಳಗಿನವರೆಗೂ ನೋಡಿದ. ಭಯಂಕರ ಮನುಷ್ಯನೂ ಸಹ ಪಕ್ಕದಲ್ಲೇ ನಿಂತು ನನ್ನನ್ನು ವಜ್ರಮುನಿಯಂತೆ ದುರುಗುಟ್ಟಿ ನೋಡುತ್ತಿದ್ದ. ಆ ಹುಡುಗ ತಾನೆ ಗಂಗಾ ಎಂದ.

ಇಲ್ಲಿ ಏನು ಬೇಕಾದರೂ ಸಿಗುತ್ತೆ, ಯಾವ ಹೆಸರಿನ ಬ್ರಾಂಡ್ ಬೇಕಾದರೂ......

ನನಗೆ ಆದ ಸಮಾಧಾನ ಅಷ್ಟಿಷ್ಟಲ್ಲ. ನನ್ನ ಅಲ್ಲಿನ ಕೆಲಸವನ್ನು ವಿವರಿಸಿ, ನನಗೆ ಏನೇನು ಬೇಕು ಎಂದು ಹೇಳಿದೆ. ಅವನು ಬರೆದುಕೊಳ್ಳುತ್ತಾ ಹೋದ. components ಒಂದು ಕಡೆ, ಅದರ cost ಇನ್ನೊಂದು ಕಡೆ. ಅವನು ಬರೆಯುತ್ತಿದ್ದರೆ ನಾನು ಕೋಲೆಬಸವನ ಹಾಗೆ ತಲೆಯಲ್ಲಾಡಿಸುತ್ತಾ ಇದ್ದೆ. "ಬರೀ preocessor, board, keyboard, mouse, cabinet ಸಾಕೂ?? RAM, Hard Disk, Speaker, Monitor ಎಲ್ಲಾ ಬೇಡಾ??" ಎಂದ. ನಾನು, "ಇಲ್ಲ, ಅವೆಲ್ಲಾ ಇದೆ. ಇಷ್ಟು ಮಾತ್ರ ಸಾಕು" ಎಂದೆ. ನನ್ನ customer ಹತ್ತಿರ ಮಿಕ್ಕ components ಇದ್ದವು. ನನಗೆ ಬೇಕಾಗಿದ್ದುದು ಅಷ್ಟೇ! ಆದರೆ ಎಲ್ಲಾ ವರ್ತಕರಂತೆ ಈ ಕಂಪ್ಯೂಟರ್ ವರ್ತಕರೂ ಸಹ ಅದು ತೊಗೊಳಿ ಇದು ತೊಗೊಳಿ ಅನ್ನೋದುಂಟು. ನಮಗೆ ಬೇಡವಾಗಿದ್ದರೂ ಗಂಟು ಹಾಕುತ್ತಾರೆ ಕೆಲವು ಸಲ. "ಬರೀ ಇಷ್ಟೇ ಇಟ್ಕೊಂಡ್ ಏನು ಮಾಡ್ತೀರಾ?" ಎಂದ. ನಾನು, "ಇಲ್ಲ, ಅವೆಲ್ಲಾ ಇದೆ. ಇಷ್ಟು ಮಾತ್ರ ಸಾಕು" ಎಂದು ಇನ್ನೊಂದು ಸಲ ಸ್ವಲ್ಪಾ ಏರಿದ ಧ್ವನಿಯಲ್ಲಿ ಹೇಳಿದೆ. ಅವನ ಮುಖ ಒಂದು ಥರ ಬೇಸರದಿಂದ ಕೂಡಿತು. ಪಕ್ಕದಲ್ಲಿ ಇನ್ನೊಬ್ಬ ಬಿಳಿ ವಸ್ತ್ರ ಧರಿಸಿದ typical ಸಾಬಿಯಿದ್ದ. ಅವನ ಕೈಗೆ ಈ ಚೀಟಿಯನ್ನು ಎಸೆದು, "ಇವರಿಗೆ ಇಷ್ಟು ಮಾತ್ರ ಸಾಕಂತೆ, ಕೊಡೋ" ಎಂದು ಉರ್ದುವಿನಲ್ಲಿ ಹೇಳಿದ. ಅವನು ಆ ಚೀಟಿ ಇಟ್ಕೊಂಡು ನನ್ನ ಆಟ ಆಡಿಸಿದ್ದು ಅಷ್ಟಿಷ್ಟಲ್ಲ. ಅರ್ಧ ಗಂಟೆ!! Show Caseನಲ್ಲಿ ಇದ್ದ componentsನ ತೆಗೆದು ನನ್ನ ಕೈಗೆ ಕೊಡೋಕೆ ಇವನಿಗೆ ಅರ್ಧ ಗಂಟೆ ಬೇಕಾಯ್ತು.

"Processor ಯಾವುದು ಬೇಕು?" ಎಂದು ಕೇಳಿದ. ಅಲ್ಲೇ ಬರೆದಿತ್ತು. ಗಂಗಾ ಎಲ್ಲಾ ಬರೆದುಕೊಟ್ಟಿದ್ದ. ಆದರೂ ಇವನು ನನ್ನನ್ನು ಕೇಳಿದ. ಗಂಗಾನಿಗಾಗಿ ಅಷ್ಟು ಹೊತ್ತು ಯಾಕೆ ಕಾಯಬೇಕಿತ್ತು ಎಂದೆನಿಸಿತು. "processor ಯಾವುದು ಬೇಕು?" ಎಂದು ಕೇಳಿದ ಶ್ವೇತವರ್ಣವಸ್ತ್ರಧಾರಿ ನನ್ನ ಉತ್ತರಕ್ಕೆ ಕಾಯಲೇ ಇಲ್ಲ. ಪಕ್ಕದವನ ಜೊತೆ ಏನೋ ಜೋಕು ಹೇಳಿಕೊಂಡು ನಕ್ಕ. ಮತ್ತೆ ನನ್ನ ಕಡೆ ತಿರುಗಿ ಅದೇ ಪ್ರೆಶ್ನೆ ಕೇಳುವವನಂತೆ ನನ್ನ ಮುಖ ನೋಡಿದ. ಮತ್ತೆ ಹೇಳೋಕೆ ಹೊರಟೆ, ಪುನಃ ಅದೇ ರೀತಿ ಮಾಡಿದ. ಈ ರೀತಿ ಸುಮಾರು ಐದು ಸಲ ಮಾಡಿದ. ನಾನು ಅವನ ಕೈ ಎಳೆದು "ಸ್ವಾಮಿ, AMD ATHLON 3500 ಕೊಡಿಪ್ಪಾ!!" ಎಂದೆ. ಅವನು, "3500? ಇರಿ ಒಂದು ನಿಮಿಷ" ಎಂದು ಯಾರಿಗೋ ಫೋನಾಯಿಸಿದ. ನಾನು, "ಎರಡು ಗಂಟೆಗಳ ಕಾಲದಿಂದ ಇಲ್ಲೇ ಇದೀನಿ, ಇನ್ನು ಒಂದು ನಿಮಿಷ ತಾನೆ", ಎಂದು ಸುಮ್ಮನಾದೆ. ಸುಮಾರು ಹತ್ತು ನಿಮಿಷ ಹೀಗೆ ಫೋನಾಯಿಸಿ, ಮತ್ತೆ ನನ್ನ ನೋಡಿ "ಒಂದು ನಿಮಿಷ.." ಎಂದು ಹೇಳಿ, ಅಂಗಡಿಯಿಂದ ಹೊರಕ್ಕೆ ಹೋಗಿಬಿಟ್ಟ. ನನ್ನ ಚೀಟಿ ಅನಾಥವಾಗಿಬಿಟ್ಟಿತು!!

ಐದು ನಿಮಿಷ ಆದರೂ ಬಾರದ ಅವನನ್ನು ಶಪಿಸಿ, ಆ ಚೀಟಿಯನ್ನು ಕೈಗೆ ಎತ್ತಿಕೊಂಡು, ಗಂಗಾ ಬಳಿ ಹೋಗಿ, "ಇದನ್ನ ಕೊಡಿಪ್ಪಾ.." ಎಂದು ಭಿಕ್ಷುಕನಂತೆ ಗೋಗರೆದೆ. ಅವನು ಆ ಪ್ರಾಜೆಕ್ಟ್ ಅನ್ನು ಇನ್ನೊಬ್ಬನಿಗೆ ವಹಿಸಿದ. ಅವನೊಡನೆ ತಮಿಳು ಮಾತಾಡಿದ. ಎಲಾ ಇವನಾ, ಎಲ್ಲಾ ಭಾಷೆ ಬರುತ್ತೆ ಈ ಗಂಗೆಗೆ?? ಎಂದುಕೊಂಡೆ. ಆ ಇನ್ನೊಬ್ಬ ಅಂತೂ ಇಂತೂ ಎಲ್ಲಾ ತರಿಸಿದ. ಆದರೆ cabinet ಒಂದನ್ನು ಹೊರೆತು. ತಂದಿದ್ದ ಎಲ್ಲವೂ ನನ್ನಲ್ಲೇ ಉಳಿಯುತ್ತೆ ಎಂದು ಖಾತ್ರಿ ಮಾಡಿಕೊಳ್ಳುವ ಸಲುವಾಗಿ ಎಲ್ಲವನ್ನೂ ನನ್ನ ಎರಡೂ ಕೈಗಳಲ್ಲಿ ಭದ್ರವಾಗಿ ಇಟ್ಟುಕೊಂಡೆ. ನನ್ನ bill ಆ ಭಯಂಕರ ಮನುಷ್ಯನು ತಂದುಕೊಟ್ಟ. ದುಡ್ಡೂ ಕಟ್ಟಿದೆ. ಆದರೆ cabinet ಬರಲೇ ಇಲ್ಲ. ನಾನು ಆ ಅಂಗಡಿಗೆ ಬಂದು ಮೂರು ತಾಸಾಯಿತು. ಸಮಯ ಎಂಟುವರೆ..

ಚಳಿಗಾಲದಲ್ಲೂ ಬೆವರುವಷ್ಟು ಸುಸ್ತಾಯಿತು. ಇನ್ನು ಗೋಗರೆಯಲೂ ಚೈತನ್ಯ ಇರಲಿಲ್ಲ. ಅವನು ತಂದುಕೊಡುವವರೆಗೂ rest ತೊಗೊಳೋಣ ಎಂದೆನಿಸಿ, ಅಲ್ಲೇ ಬಾಗಿಲಲ್ಲೇ ಕುಳಿತೆ, ಕೈಯ್ಯಲ್ಲಿ computer componentsನ ಹಿಡಿದುಕೊಂಡು. ಎಂಥ ರೋಡಪ್ಪಾ ಇದು.. ಇಲ್ಲಿಗೆ ಐದು ವರ್ಷದಿಂದ ಬರುತ್ತಿದ್ದೇನೆ, ಇರೋಬರೋ ಅಂಗಡಿಗಳಲ್ಲೆಲ್ಲಾ ಇದೇ ಗೋಳಲ್ಲಾ ಎಂದು ನೊಂದುಕೊಂಡೆ. ಕಾಯಿಸುತ್ತಾರೆ, ನೋಯಿಸುತ್ತಾರೆ, ಸತಾಯಿಸುತ್ತಾರೆ, ಸಾಯಿಸುತ್ತಾರೆ!! ಆದರೆ, ಇಲ್ಲಿ ಕಡಿಮೆಗೆ ಸಿಗುತ್ತದೆ. MG Roadಗೆ ಹೋದರೆ, ಜಯನಗರಕ್ಕೆ ಹೋದರೆ, ಅರ್ಧ ಗಂಟೆಯಲ್ಲಿ ಎಲ್ಲಾ ಕೆಲಸ ಆಗೋಗುತ್ತೆ, ಆದರೆ ಲಾಭ ಗಿಟ್ಟೋದೇ ಇಲ್ಲ. ವ್ಯಾಪಾರ ಮಾಡೋದು ಲಾಭಕ್ಕಾಗಿ ಅಲ್ಲವೇ? ವ್ಯಾಪಾರದಲ್ಲಿ ಲಾಭವೇ ಇಲ್ಲವಾದರೆ, ಮದುವೆ ಗಂಡಿಗೆ "ಅದೇ" ಇಲ್ಲ ಅನ್ನೋ ಹಾಗೆ ಎಂದು ಯೋಚಿಸುತ್ತಾ Big FM ಅಲ್ಲಿ ಬರುತ್ತಿದ್ದ ಕೆಟ್ಟ ಹಾಡೊಂದನ್ನು ಕೇಳುತ್ತಾ ಕುಳಿತಿದ್ದೆ. ನನ್ನ ತಲೆಯು ಅದಕ್ಕಿಂತ ಕೆಟ್ಟಿತ್ತು. ನಾನು ಇದ್ದ ಜಾಗ ಎಲ್ಲಕ್ಕಿಂತ ಕೆಟ್ಟಿ ಕುಲಗೆಟ್ಟಿತ್ತು.

ಎಸ್.ಪಿ. ರೋಡಿನಲ್ಲಿ ಸಿಗದ electronic ಉಪಕರಣವೇ ಇಲ್ಲ. ಯಾವ ಬ್ರಾಂಡ್ ಬೇಕಾದರೂ ಸಿಗುತ್ತದೆ. ಯಾವ ಮೇಕ್ ಬೇಕಾದರೂ ಸಿಗುತ್ತದೆ. ಯಾವ ಕಂಪೆನಿಯ ಹೆಸರು ಕೊಡುತ್ತೀರೋ ಆ ಕಂಪೆನಿಯ logo ನಿಮ್ಮ ಉಪಕರಣದ ಮೇಲೆ ಇರುತ್ತದೆ. ನಿಮ್ಮ ಹೆಸರು ಕೊಟ್ಟರೆ, ಆ ಹೆಸರಿನ logo ಸಹ ಹಾಕಿ ಕೊಡುತ್ತಾರೆ. "ಅರುಣ್ DVD Player" ಎಂದು ಸಿಕ್ಕರೂ ಆಶ್ಚರ್ಯ ಪಡಬೇಡಿ. ಎಲ್ಲಾ ಅಲ್ಲೇ manufacture ಮಾಡಿಕೊಡೋದು, including label!! "Made in ......." ಯಾವ ದೇಶದ ಹೆಸರು ಬೇಕೋ ನೀವೇ ಆಯ್ಕೆ ಮಾಡಬಹುದು. ಅದನ್ನು ಹಾಕಿ ಕೊಡುತ್ತಾರೆ. ಬೇಕಿದ್ದರೆ Made in ಕತ್ತರಿಗುಪ್ಪೆ" ಅಂತ ಕೂಡ ಹಾಕಿಸಿಕೊಳ್ಳಬಹುದು.

ಹೀಗೆ ತ್ರಿಕಾಲಸತ್ಯದ ವಿಪರ್ಯಾಸವನ್ನು ಯೋಚಿಸುತ್ತಾ ಬುದ್ಧನಂತೆ ಕುಳಿತಿದ್ದ ನನ್ನ ಬಳಿ ಗಂಗಾ ಬಂದು, "ಸರ್, cabinet ready ಇದೆ" ಎಂದ. "ನಾನು ಹೊರಡೋಕೆ ರೆಡಿ.. ನೀವು ಬೇಗ ಕೊಡಿ.." ಎಂದು, ಅವನ ಕೈಯ್ಯಿಂದ cabinetನ ಕಸಿದುಕೊಂಡು ಜಾಗ ಖಾಲಿ ಮಾಡಿದೆ.

ಹನುಮಂತನಗರಾನಾ??? ಛೆ!!

ಇದು ಆಟೋದವನ reaction. "ಹನುಮಂತನಗರ ಬರ್ತೀರಾ?" ಅಂತ ಕೇಳಿದ್ದಕ್ಕೆ, "ಹನುಮಂತನಗರಾನಾ? ಛೆ!!" ಎಂದು ಹೇಳಿ ಗೇರು ಬದಲಿಸಿ, ಆ ಸಣ್ಣ ರಸ್ತೆಯಲ್ಲೇ ಮೈಕಲ್ ಶೂಮಾಕರ್‍ನಂತೆ ಪರಾರಿ (ferarri) ಆಗಿಬಿಟ್ಟ. ಇನ್ನೊಬ್ಬ ಆಟೋದವನದು ಸ್ವಲ್ಪ ದೊಡ್ಡ ಮನಸ್ಸು. "ಅರವತ್ತು ರುಪಾಯಿ ಆಗುತ್ತೆ" ಎಂದು ನನ್ನ ಕೈಯಲ್ಲಿ ಇದ್ದ ಸಾಮಾನುಗಳನ್ನು ನೋಡಿದ. ನಾನು, "ಯಾಕೆ ನಿಮಗೆ meter ಇಲ್ವಾ? Sorry, ನಿಮ್ಮ ಆಟೋಗೆ ಮೀಟರ್ ಇಲ್ವಾ?" ಎಂದೆ. ಅವನು, "ಅಯ್ಯೋ ನಿಮಗೆ ಎಸ್.ಪಿ.ರೋಡಿಂದ ನಿಮ್ಮ ಮನೆಗೆ ಆಟೋ ಸಿಗ್ತಾ ಇರೋದು ನಿಮ್ಮ ಪುಣ್ಯ.." ಎಂದ. Weaknessನ ಚೆನ್ನಾಗಿ ಉಪಯೋಗಿಸಿಕೊಳ್ಳೋದರಲ್ಲಿ ಆಟೋದವರು ಉತ್ತಮರು ಎಂದು ಶಪಿಸುತ್ತ, ಅರವತ್ತು ರುಪಾಯಿ ಹೋದರೂ ಚಿಂತೆಯಿಲ್ಲ, ಪಾಲಿಗೆ ಬಂದದ್ದು ಪಂಚಾಮೃತ ಎಂದು ಆ ಆಟೋ ಹತ್ತಿದೆ.

ಎಸ್.ಪಿ.ರೋಡಿಗೆ bye ಹೇಳಿದೆ. ತಲೆಯಲ್ಲಿ ಎಂಥದೋ vibrations ಆಗುತ್ತಿತ್ತು. ಕಣ್ಣುಗಳು ಆಯಾಸದಿಂದ ನೀರುತುಂಬಿಕೊಂಡಿದ್ದವು. ಕಲಾಸಿಪಾಳ್ಯವನ್ನು ಸಮೀಪಿಸಿದಂತೆ, ಈ ಕಚಡಾಪಾಳ್ಯಕ್ಕೆ ಮತ್ತೊಮ್ಮೆ ಕಾಲಿಡಬಾರದು ಎಂದೆನಿಸಿತು. Fly-over ಇಳಿದು, ಚಾಮರಾಜಪೇಟೆಯ ಬಳಿ ನಮ್ಮ ರಥ ಬರುತ್ತಿದ್ದಂತೆ ಸ್ವಲ್ಪ ದಣಿವಾರಿತು. ರಾಮಕೃಷ್ಣ ಆಶ್ರಮ ಕಾಣಿಸಿದಂತೆ, "ಅಬ್ಬಾ, ನಮ್ಮೇರಿಯಾಗೆ ಬಂದೆ" ಎಂಬ ತೃಪ್ತಿ. ಮನೆ ತಲುಪಿದ ನಂತರ ಯುದ್ಧವನ್ನು ಗೆದ್ದು ಬಂದಂತೆ ಸಮಾಧಾನ. ಅವನಿಗೆ ಅರವತ್ತ್ತು ರೂಪಾಯಿ ಕೊಟ್ಟರೂ ಪರವಾಗಿಲ್ಲ, ಈ ಸಮಾಧಾನ ಸಿಕ್ಕಿತಲ್ಲಾ ಎಂದೆನಿಸಿತು. . ಆದರೆ ಮಾರ್ಕೆಟ್ ಏರಿಯಾಗೆ ಹೋಗಿ ಬಂದಾಗ ಆದ ದಣಿವು ಸಂಪೂರ್ಣವಾಗಿ ಆರಲು ಎರಡು ದಿನವೇ ಬೇಕಾಯಿತು.

- ಅ
18.12.2006
6AM

7 comments:

 1. neev aagidakke 3 hrs wait maadidri....naanu 1hr kaaysidh koodle yedd oodogthidde...nimge bhaaLa patience idhe......

  Chennagidhe lekhana...[:)]

  ReplyDelete
 2. user comment same as above :D

  neenu vivarisiro reeti super-agide.. continue.. :)

  ReplyDelete
 3. Hmmm SP road vyatheya kathe naa soooper agi bardhidhiraa....

  ReplyDelete
 4. chennagide arun! barahakke heLiddu naanu. anubhava alla matte! :)

  ReplyDelete
 5. arun,
  nangeno narration nalli grip saalDu anstu (sikkapatte critical aagi heLtidini) ... nin bere baravaNigege holisdre... innu chennaagi irabahudittu anstu

  - karun

  ReplyDelete
 6. ಹ ಹ ಹಾ...!!!! ಸಖತ್ತಾಗಿದೆ.... ಶನಿವಾರದ ಬೆಳಗ್ಗೆ ಶಕ್ಕರೆ ತಿಂದ ಹಾಗೆ... :)

  ಅಲ್ಲಾ... ಗಂಗನ ವಿಷಯದಲ್ಲಿ ನೀವು ಮಂಗ ಆಗ್‍ಬಿಟ್ರಲ್ಲಾ... ಸಖತ್ತಾಗಿದೆ :)

  ReplyDelete
 7. Nin haLe blognella ivattu mathe odhtha idde... idu nange tumuba ishta aaytu... ofcourse ... 20rs blog is still my fav :-) ... bejaarago paristhithi na humour use maadi describe maado prayantna sakkthagide ... keep it up!

  ReplyDelete

ಒಂದಷ್ಟು ಚಿತ್ರಗಳು..