Wednesday, November 22, 2006

ಕಣ್ಣುಗಳು ಹೇಳುತ್ತಿದ್ದವು..

ಕಟ್ಟಿದ ಮೂಗು, ನೆಗಡಿ ಕೆಮ್ಮುಗಳೆಂಬ ಸ್ನೇಹಿತರ ಜೊತೆ ಈ ಅಂಕಣ ಬರೀತಾ ಇದೀನಿ.. ಪ್ರವಾಸಗಳು ನನಗೆ ಹೊಸತಲ್ಲ.. ನನ್ನ ಅನೇಕ ಪ್ರವಾಸಗಳು ಏನಾದರೂ ಒಂದು ನೆಪದಿಂದ ಕೂಡಿರುತ್ತಿತ್ತು. ಆದರೆ ಈ ಸಲದ ಪ್ರವಾಸವೇ ಒಂದು ನೆಪವಾಗಿ ಹೋಯಿತು. ಜೊತೆಗೂಡಿ ಹರಟುವ ನೆಪ. ಈ ಹರಟೆಯನ್ನು ಎಲ್ಲಿ ಬೇಕಾದರೂ ಆಡಬಹುದಿತ್ತು. ಆದರೆ ಎಲ್ಲಾ ಕಡೆ, ಎಲ್ಲಾ ಸ್ಹಳದಲ್ಲಿ, ಎಲ್ಲಾ ಸಮಯದಲ್ಲಿ ಎಲ್ಲಾ ಮಾತನಾಡಲು ಸಾಧ್ಯವೇ ಇಲ್ಲ.

ಇರುಳ ಹರಟೆ..

ಗಂಡಭೇರುಂಡನ ಮನೆಯಲ್ಲಿಯೇ ಆ ಸಮಯ ಕಳೆದು, ಅಲ್ಲೇ ಮನದೊಳಗಿನ ಮಾತುಗಳನ್ನು ನಾಲಿಗೆಗೆ ಕರೆದುಕೊಂಡು ಬಂದು, ಎದೆಯೊಳಗಿನ ಬಾಷ್ಪವನ್ನು ಕಂಗಳಿಗೆ ಕರೆದುಕೊಂಡು ಬರುವುದು ಕಾಲನ ತೀರ್ಮಾನವಾಗಿತ್ತು. "Actually, ನಾನು ನಮ್ ತೀರ್ಥಹಳ್ಳಿ trip plan ಮಾಡೋಕೆ ಶುರು ಮಾಡಿದಾಗಿಂದಲೂ ನನ್ನ ಮನಸಲ್ಲಿ ಇದ್ದಿದ್ದೇ ಇದು, ಮಾರಾಯ. ಅದು ನೋಡಬೇಕು, ಇದು ನೋಡಬೇಕು ಅನ್ನೋದಲ್ಲ. ರಾತ್ರಿ camp fire 'ಹಾಕ್ಕಂಡು' ಚೆನ್ನಾಗಿ ಹರಟೆ ಹೊಡೀಬೇಕು ಅನ್ನೋದು.. ಇವತ್ ಮಾಡಿದ್ವಲ್ಲಾ, ರಾತ್ರಿಯೆಲ್ಲಾ.. ಅದೇ ಥರಾ..." ಅಂತ ಶ್ರೇಯಸ್ ತನ್ನ ಭಾಷೆಯಲ್ಲಿ ಹೇಳಿದಾಗ ಅವನ ಕಂಗಳಲ್ಲಿ ಎಂಥದೋ ಒಂದು satisfaction ಎದ್ದು ತೋರುತ್ತಿತ್ತು. ಅವನು ಇಂಥದ್ದೊಂದು ದಿನಕ್ಕೆ ಕಾಯುತ್ತಿದ್ದನೇನೋ ಎಂಬಂತೆ ಅವನ ಕಂಗಳು ಹೇಳುತ್ತಿದ್ದವು.

ಕಣ್ಣುಗಳು ಎಲ್ಲಾ ಹೇಳುತ್ತವೆ. ಹಸ್ತ ರೇಖೆಗಳು ಹೆಚ್ಚು ಹೇಳುವುದಿಲ್ಲ. ಕಳೆದ ಬಾರಿ ಶೃತಿಯನ್ನು ಕೈಯೊಡ್ಡಿ ಕೇಳಿದವರು, ಈ ಸಲ ನನ್ನನ್ನು ಮುತ್ತಿಗೆ ಹಾಕಿದರು. ಎರಡು ತಿಂಗಳಿಂದ ಕೇವಲ ಪುಸ್ತಕ ಓದಿ ಅಲ್ಪ ಸ್ವಲ್ಪ ತಿಳಿದುಕೊಂಡಿದ್ದ ನಾನು first time ಕೈಗಳನ್ನು ನೋಡಿದ್ದು!! ಅವರ ಕೈಗಳು ಹೇಳದಿದ್ದದ್ದನ್ನು ಅವರ ಕಂಗಳು ಹೇಳುತ್ತಿದ್ದವು.

ಶುಭಾಳ ಕಂಗಳಲ್ಲಿ curiosity ಬಹಳ ಬಹಳ ಎದ್ದು ಕಾಣುತ್ತಿತ್ತು. "ನೀನು ಕೈ ನೋಡ್ತಿದ್ಯೋ ಅಥವಾ ಮುಖಗಳನ್ನು ನೋಡಿ ಹೇಳ್ತಿದ್ಯೋ?" ಎಂದು ಪದೇ ಪದೇ ಕೇಳುತ್ತಿದ್ದಳು. ತನಗೆ ಹಪ್ಪಳ ಇಷ್ಟ ಅನ್ನೋದು ಸತ್ಯ ಎಂದು ಒಪ್ಪಿಕೊಂಡು ಶ್ರೇಯಸ್ ನನ್ನ ಮರ್ಯಾದೆ ಉಳಿಸಿದ. ಸ್ಮಿತಾ, ಸಿಂಗರ್ ಶೃತಿ, ಸಂತೋಷ್ - ನಾನು ಹೇಳಿದ್ದ ಅನೇಕಕ್ಕೆ ಹೌದೆಂದು ಹೇಳಿದಾಗ ನನಗೇ ಅಚ್ಚರಿಯಾಯಿತು. ಅವರಿಗೆಲ್ಲಾ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ.


ಈ ಕೈ ನೋಡುವ ಕಾರ್ಯಕ್ರಮ ಇನ್ನೊಂದು ವಿಜೃಂಭಣೆಯ ಕಾರ್ಯಕ್ರಮಕ್ಕೆ ದಾರಿ ತೋರಿಸಿತು. ಎಲ್ಲರ ಬಗ್ಗೆಯೂ ಎಲ್ಲರೂ ಮಾತನಾಡುವಂತೆ! ಇಂಥದೊಂದು ಸಭೆಯನ್ನು ಬದುಕಿನ ಯಾವ ಹಂತದಲ್ಲೂ ನಾನು ಎಲ್ಲೂ ಕಂಡಿರಲಿಲ್ಲ. ನಿರೀಕ್ಷಿಸಿಯೂ ಇರಲಿಲ್ಲ. ಹತ್ತು ಜನ ಹತ್ತೂ ಜನರ ಬಗ್ಗೆ ಹೇಳುವುದು - ಅಂದರೆ ಒಟ್ಟು ನೂರು appraisalಗಳು ಗಂಡಭೇರುಂಡನ ಮನೆಯ ಗೋಡೆಗಳಲ್ಲಿ ಲೀನವಾಗಿ ಹೋದವು. ನಾನು ಹೆಚ್ಚು ಹೊತ್ತು 'ಕಚ್ಚುತ್ತೀನಿ' ಅಂತ "ನೀನು last ಮಾತಾಡು, ಬೇಗ ಮುಗ್ಸಲ್ಲ" ಎಂದು ಶೃತಿ ಆಣತಿ ಮಾಡಿದಳು. ನನ್ನ ಮಾತುಗಳು ಯಾರನ್ನೂ ಬೇಸರ ತರಿಸಲಿಲ್ಲ ಎಂದು ನಂಬಿರುತ್ತೇನೆ.

ನನ್ನ ಬಗ್ಗೆ ನಡೆದ discussion ಕೊಟ್ಟಕೊನೆಯದಾಗಿತ್ತು.. ಸುದೀರ್ಘವಾಗಿತ್ತು. ನನ್ನ ಉತ್ತರ ಇನ್ನೂ ದೀರ್ಘವಾಗಿತ್ತು. ಮುಕ್ಕಾಲು ಗಂಟೆಗಳಲ್ಲಿ ಹದಿನೈದು ವರ್ಷದಿಂದ ಎದೆಯೊಳಗೆ ಅಡಗಿದ್ದರ ತಾತ್ಪರ್ಯವನ್ನು ನಾನು ಹೇಳಿದ್ದಾಗ ನನ್ನ ಕಂಗಳನ್ನೇ ದಿಟ್ಟಿಸುತ್ತಿದ್ದರು ಶುಭಾ, ಶ್ರೀನಿವಾಸ್, ಶ್ರೇಯಸ್, ಸಿಂಗರ್ ಶೃತಿ. ಅವರುಗಳಿಂದ ನನ್ನ ಬಗ್ಗೆ ಅನೇಕ ಅತಿಶಯೋಕ್ತಿಗಳು ಕೇಳಿಬಂದವು. ಎಷ್ಟು ಸಂತೋಷವಾಯಿತೋ ಅಷ್ಟೇ ಮುಜುಗರ ಕೂಡಾ ಆಯಿತು. ಆದರೂ ಏನೇನು ಹೇಳ್ತಾರೆ ಅನ್ನೋದನ್ನ ಕೇಳಲು ನಾನು ತುಂಬಾ ಉತ್ಸುಕನಾಗಿದ್ದೆ. ನಾನು ಎಲ್ಲರ ಬಗ್ಗೆ ಹೇಳುವ ಸಾಮರ್ಥ್ಯ ಹೊಂದಿರಲಿಲ್ಲ, ಏಕೆಂದರೆ ಕೆಲವರೊಡನೆ ನನ್ನ ಒಡನಾಟವೇ ಇಲ್ಲ ನೋಡಿ... ಶ್ರೇಯಸ್, ಶ್ರೀನಿವಾಸ್‍ರನ್ನು ಸ್ವಲ್ಪ ನೋಡಿದ್ದೆ. ಶೃತಿ, ಶ್ರೀ, ಸಿಂಧೂರನ್ನು ನನ್ನ ದೃಷ್ಟಿಕೋನದಿಂದ ಸಾಕಷ್ಟು ನೋಡಿದ್ದೇನಾದರೂ ಅದನ್ನೆಲ್ಲಾ ವ್ಯಕ್ತಪಡಿಸಲು ಸಾಧ್ಯವಾಗಲೇ ಇಲ್ಲ. ಆ ಹೆಣ್ಣು ಮಕ್ಕಳ ಬಗ್ಗೆ ಎಷ್ಟು ಹೇಳಿದರೂ ಸ್ವಲ್ಪವೇ.. ಏನು ಹೇಳಿದರೂ ಅಲ್ಪವೇ.. ಯಾವ ಜನ್ಮದ ಮೈತ್ರಿಯೋ....

ಕರ್ನಾಟಕ ಸಾರಿಗೆಯಿಂದ ಮೈಸೂರು ಬಸ್ ಸ್ಟಾಂಡಿನಲ್ಲಿ ಇಳಿದು ಅಲ್ಲಿಂದ ದಾಸಪ್ರಕಾಶದವರೆಗೂ ನಡೆದು ಸಾಗಿ "No service this side" ಎಂಬ ಬೋರ್ಡಿದ್ದರೂ ಎಂಟುಗಂಟೆಯ ನಂತರ ಅಲ್ಲಿ service ಮಾಡ್ತಾರೆ ಎಂಬ ಹೋಟೆಲಿನವನ ಆಶ್ವಾಸನೆಯ ಮೇರೆಗೆ ಅಲ್ಲಿ ಕಾದು ಕೂತು ಅತ್ಯಂತ ರುಚಿಕರ ಊಟ ಮಾಡುತ್ತಿದ್ದಾಗ, ಮಾತಿಗೆ ಮಾತು ಬಂದು, ಶ್ರೀನಿವಾಸ "....ಪಾಲಿಗೆ ಬಂದಿದ್ದು ಪಂಚಾಮೃತ" ಎಂದು ಹೇಳಿದ. ಆ ಮಾತು ಯಾಕೆ ಬಂತು ಎಂಬುದು ಮರೆತು ಹೋಗಿದೆ. ನಾನು ಹೇಳಿದೆ, "ನನಗೆ ಪಂಚಾಮೃತ ಅಲ್ಲ, ಎಷ್ಟೊಂದು ಅಮೃತಗಳು ಸಿಕ್ಕಿವೆ" ಎಂದು ಹೇಳಿ ಅಲ್ಲಿ ಕುಳಿತಿದ್ದವರನ್ನು ಹಾಗೇ ಕಣ್ಣಲ್ಲಿ ನೋಡಿದೆ. ಸೂತ್ರಧಾರಿಗಳೂ ಬದಿಯಲ್ಲಿಯೇ ಕುಳಿತಿದ್ದರು. ಮನದಲ್ಲೇ ಪ್ರೀತಿಪೂರ್ವಕ ಕೃತಜ್ಞತೆಯ ಪುಷ್ಪಮಾಲೆಯನ್ನು ಅವರುಗಳಿಗೆ ಅರ್ಪಿಸಿದೆ.

ನಾನು ಒಂದನ್ನು ತುಂಬಾ ಸಮಯದಿಂದ observe ಮಾಡಿದ್ದೇನೆ, ಹಗಲಲ್ಲಿ ಜತೆಗೇ ಇದ್ದರೂ ಮಾತನಾಡದ ವಿಷಯಗಳು ರಾತ್ರಿ ಹೊತ್ತು ಅದೆಲ್ಲಿಂದ ಹುಟ್ಟಿಬರುತ್ತೋ ಏನೋ, ಎಲ್ಲಾ ಮಾತಾಡಿರುತ್ತೇವೆ. ರಾತ್ರಿಯ ಶಕ್ತಿಯೇ ಅಂಥದ್ದು, especially ಸ್ನೇಹಿತರು ರಾತ್ರಿ ಹೊತ್ತು ಒಟ್ಟು ಸೇರಿದ್ದಾಗ - ಅದೂ ಪ್ರಪಂಚ ಮಲಗಿದ ನಂತರವೂ ಎದ್ದಿರುವ ಸ್ನೇಹಿತರು ಯಾವುದೇ filter ಇಲ್ಲದೆ ಮಾತನಾಡುತ್ತಾರೆ. ಮನದಾಳದ ಭಾವುಕತೆಯ ಮಾತುಗಳನಾಡುತ್ತಾರೆ. ಎಂದಿನಿಂದಲೋ ಬಚ್ಚಿಟ್ಟಿಕೊಂಡಿದ್ದ ಗುಟ್ಟುಗಳನ್ನು ಸಲೀಸಾಗಿ ಬಹಿರಂಗ ಪಡಿಸಿಬಿಡುತ್ತಾರೆ. ರಾತ್ರಿಗಳೇ, ಏನು ನಿಮ್ಮ ಮೋಡಿ?

ನಮ್ಮ ಬಗ್ಗೆ ಸದಭಿಪ್ರಾಯಗಳನ್ನು ಕೇಳಲು ಎಷ್ಟು ಸಂತೋಷ ಆಗುತ್ತೋ ಅಷ್ಟೇ ಮುಜುಗರ ಕೂಡ ಆಗುತ್ತೆ. ಶೃತಿಯ ಬಗ್ಗೆ ಮಾತು ಮುಗಿದ ನಂತರ ಅವಳ ಕಂಗಳಿಂದ ಹರಿದು ಬಂದ ಭಾವನಾತ್ಮಕ ಬಾಷ್ಪವು ನೂರು ಕಥೆಯನ್ನು ಹೇಳಿತ್ತು. ವೇದಾಳ ಕಣ್ಣ ತುದಿಯಿಂದ ಒಂದು ಹನಿ ಕೆಳ್ಗಿಳಿಯುವ ಮುನ್ನವೇ ಅವಳು ಒರೆಸಿಕೊಂಡುಬಿಟ್ಟಿದ್ದು ಗೋಚರಿಸಿತು. ಶ್ರೇಯಸ್ಸಿನ ಎಂಜಲು ಗಂಟಲಿನೊಳಗೆ ಇಳಿಯಲಾಗದೆ ಇಳಿಯುತ್ತಲಿತ್ತು. ಒಟ್ಟಿನಲ್ಲಿ ಎಲ್ಲರೂ ತುಂಬಾ ತುಂಬಾ ಭಾವುಕರಾಗಿದ್ದರು. . ನನ್ನ ಕಂಗಳೇಕೋ ಬತ್ತಿ ಹೋಗಿದ್ದವು..

ಇನ್ನೋಂದು ಅನಿರೀಕ್ಷಿತ ಮತ್ತು ಅತಿಸಂತಸದ ವಿಷಯ - "ಇದು ನಮ್ಮೆಲ್ಲರಿಂದ ನಿನ್ನ ಹುಟ್ಟುಹಬ್ಬದ gift.. Belated wishes.." ಎಂದು ಶ್ರೀ ಎಲ್ಲರ ಪರವಾಗಿ ನನ್ನ ಕೈಗೆ ಒಂದು ಕವರ್‍ನ ಕೊಟ್ಟಳು. ತೆಗೆದು ನೋಡ್ತೀನಿ, ಅದ್ಭುತವಾದ ಸೊಗಸಾದ ಒಂದು ನೀಲಿ ಬಣ್ಣದ ಜುಬ್ಬಾ!! ನನ್ನನ್ನು ಆ ವೇಷದಲ್ಲಿ ನೆನೆಸಿಕೊಂಡು ಒಳಗೇ ನಕ್ಕೆ. ಯಾವ ಕಾಲವಾಯಿತೋ ಈ ರೀತಿಯ ಬಟ್ಟೆ ತೊಟ್ಟು. ಬಟ್ಟೆಗಳ ಮೇಲಿನ ಆಸಕ್ತಿಯೇ ಹೊರಟು ಹೋಗಿ ವರ್ಷಗಳಾಗಿವೆ.. "ಹಾಕ್ಕೊಂಡ್ ಬಾ " ಎಂದಳು. ನಾನು , "ನಾಳೆ GRS ಗೆ ಹಾಕ್ಕೊತೀನಿ, ಈಗ ಬೇಡ" ಎಂದು ಸಮಯ ನೋಡಿದಾಗ ಮಧ್ಯರಾತ್ರಿಯಾಗಿತ್ತು. ಈ gift ಕಾರ್ಯಕ್ರಮ ಆದಮೇಲೇನೇ ಅಭಿಪ್ರಾಯದ ಕಾರ್ಯಕ್ರಮ ಆರಂಭವಾಗಿದ್ದು.

ಹುಟ್ಟುಹಬ್ಬಗಳೆಂದರೆ ನನ್ನ ಪಾಲಿಗೆ ಏನು ಎಂಬುದನ್ನು ನಾನು ಹೇಳಿದಾಗ ನನ್ನ ಬಾಲ್ಯದ ಚಿತ್ರ ನನ್ನ ಕಣ್ಣ ಮುಂದೆ ಸಿನಿಮಾ ಥರಾ ಬಂದುಬಿಟ್ಟಿತು. Birthday - Cake ಬಗೆಗಿನ ನನ್ನ ಒಲುಮೆ ಕೂಡ ವಿವರಿಸಿದೆ.. ಆ ವಿಷಯ ಇಲ್ಲಿ ಯಾಕೆ?

ಸರೂಪನ ಬಗ್ಗೆ, ಶ್ರೀಧರನ ಬಗ್ಗೆ ಹೇಳಲು ನನ್ನಲ್ಲಿ ನೂರು ವಿಷಯಗಳಿದ್ದವು. ಆದರೆ ಅವರೇ ಇರಲಿಲ್ಲ. ಶಿಲ್ಪಾ ಕೂಡ ಚಕ್ಕರ್ ಕೊಟ್ಟಿದ್ದಳು. ಇವರುಗಳ absence ಅಲ್ಲಿ ಮನವರಿಕೆಯಾಯಿತು. ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದುಕೊಂಡೆ. ರಾತ್ರಿಯಿಡೀ ನಿದ್ರಿಸದೇ ಇದ್ದ ನಾವೊಂದಿಷ್ಟು ಜನ "ತುಂಬಾ ಚೆನ್ನಾಗಿತ್ತು" ಎಂದು ಅಂದಿನ ಇರುಳನ್ನು ಹೊಗಳಾಡಿದೆವು.

ದಿಲ್ ಆಜ್ ಶಾಯರ್ ಹೈ..

ಈ ಹಾಡು ನನಗೆ ತುಂಬಾ ಇಷ್ಟವಾಗಿದ್ದು, ಹಿಮಾಲಯದ ತಪ್ಪಲಲ್ಲಿ ಡಾಕ್ಟರೊಬ್ಬರು ಹಾಡಿದಾಗ. ಮನೆಗೆ ಬಂದು ನಾನು ಅದನ್ನು ಕಲಿತು, ನಮ್ಮ ಮುಂಚಿನ ಕೊಡಗು ಪ್ರವಾಸದಲ್ಲಿ ನಾನು ಹಾಡಿದಾಗ ಇದು ಶ್ರೇಯಸ್ಸಿಗೆ ತುಂಬಾ ಇಷ್ಟವಾದ ಹಾಡಾಯಿತು. ಆ ಹಾಡಿನ ಸಾಹಿತ್ಯವೇ ಅಂಥದ್ದು. ಮನಕರಗಿಸುವಂತಿರುತ್ತೆ.. ನೋವೆಂದರೇನು ಎಂಬುದನ್ನು ತೋರಿಸುತ್ತೆ.
ಯೇ ಪ್ಯಾರ್ ಕೋಯಿ ಖಿಲೋನಾ ನಹಿ ಹೈ
ಹರ್ ಕೋಇ ಲೇ ಜೋ ಖರೀದ್
ಮೇರಿ ತರಹ್ ಜಿಂದಗಿ ಭರ್ ತಡಪ್‍ಲೋ
ಫಿರ್ ಆನಾ ಉಸ್‍ಕೇ ಕರೀಬ್..

ಆಹಾ.. ಎಂಥಾ ಸೊಗಸಾದ ಸಾಹಿತ್ಯ.. ಎಂಥಾ ಸೊಗಸಾದ ಸಂಗೀತ.. ಅದ್ಭುತವಾದ ಗಾಯನ ಕಿಶೋರನದು.. ಕೇಳುವ ಕಿವಿಗಳೆ ಧನ್ಯ..

ಈ ಹಾಡನ್ನು ನನ್ನಿಂದ ಹಾಡಿಸಿದನು ಶ್ರೇಯಸ್. ನಾನು ನನ್ನ ಅಲ್ಪಜ್ಞಾನದಲ್ಲೇ ಹಾಡಿದೆ.. ಆ ಹಾಡು ಹೇಳುವಾಗ ಎಷ್ಟು ಸಲ ಹಾಡಿದರೂ ಅದರ ಒಳಗೇನೇ ಹೋಗಿಬಿಡುತ್ತೇನೆ. ಯಾವುದೋ ಪ್ರಪಂಚದಲ್ಲಿ ಕಳೆದು ಹೋಗಿರುತ್ತೇನೆ.. ಒಳ್ಳೆಯ ಸಾಹಿತ್ಯ ಇರುವ ಹಾಡೆಂದರೆ ಹೀಗೆಯೇ.. ನಮ್ಮನ್ನು ಮೈ ಮರೆಸುವಂತೆ ಮಾಡಿಬಿಡುತ್ತದೆ.

ಶ್ರೀನಿವಾಸನು ಮತ್ತು ಶ್ರೀ ಇಬ್ಬರೂ ತಮ್ಮ ಉತ್ತಮವಾದ ಕಂಠಸಿರಿಯಿಂದ ಶಾಸ್ತ್ರೀಯ ಸಂಗೀತದ ಕೀರ್ತನೆಗಳನ್ನು ಹಾಡಿದರು. ಶ್ರೀನಿವಾಸನು ಯಾವ ಸಂಗೀತಗಾರರಿಗೆ ಏನು ಕಮ್ಮಿ ಇಲ್ಲ. ಧ್ವನಿ, ಧಾಟಿ, ಶೈಲಿ.. body language.. ಎಲ್ಲಾ.. ಸಿಂಗರ್ ಶೃತಿ ಕೂಡಾ ಸೊಗಸಾದ ಶಾರೀರ ಹೊಂದಿರುವವಳು.. ಧ್ವನಿಯು ತುಂಬಾ ಸಿಹಿಯಾಗಿದೆ.. ಅಷ್ಟೊಂದು ಹಾಡುಗಾರರ ಮಧ್ಯೆ ನಾನು ಕೂಡ ಒಂದು ಹಾಡು ಹಾಡಿದೆ.. "ನನ್ನ ಓಲೆ ಓಲೆಯಲ್ಲ...." ಇದು ಎಲ್ಲಾ ಪ್ರೇಮಿಗಳಿಗೂ dedicate ಮಾಡಿ ಹಾಡಿದ ಹಾಡು.. ಪ್ರೀತಿಸುವವರ ಕಡೆಗೆ ನನ್ನದೊಂದು ಸಪೋರ್ಟ್ ಯಾವಾಗ್ಲೂ ಇರುತ್ತೆ..

ಎಲ್ಲಿಗೇ ಪಯಣ??

ಬೆಳಿಗ್ಗೆ ಆರು ಗಂಟೆಗೆ ಎದ್ದೇಳುವ ಸ್ಥಿಥಿಯಲ್ಲಿ ಯಾರೂ ಇರಲಿಲ್ಲ. ನಿದ್ರಿಸಿದರೆ ತೊಂದರೆಯಾದೀತು ಎಂದು ಶ್ರೀನಿವಾಸ ಸ್ನಾನ ಮುಗಿಸಿ, ತನ್ನ ಪೂಜೆಯ ಮಂತ್ರಗಳನ್ನು ಶುರು ಮಾಡಿದ. ಅವನ ಮಂತ್ರದ ಸದ್ದಿಗಾದರೂ ಈ ಹುಡುಗರು ಏಳುತ್ತಾರೆಂದು ಭಾವಿಸಿದ್ದೆ. ಆದರೆ, ಜೋಗುಳ ಕೇಳಿದ ಮಕ್ಕಳಂತೆ ಇನ್ನೂ ಸೊಗಸಾಗಿ ಮಲಗಿದ್ದರು. ಸಂತೋಷ, ಸಿಂಗರ್ ಶೃತಿ ಮಾತ್ರ ಕೂಗಿದ ತಕ್ಷಣ ಎದ್ದು ಸಿದ್ಧರಾದರು. ಎದ್ದು ಏನು ಮಾಡಬೇಕೆಂದು ತೋಚದೆ bluff ಆಡತೊಡಗಿದೆವು. ನಾನು ಹುಡುಗರನ್ನೆಬ್ಬಿಸಲು radio ಸಹ ಹಾಕಿದೆ, ಆದರೂ ಅದಕ್ಕೂ ಯಾರೂ care ಮಾಡಲಿಲ್ಲ.. ರಾತ್ರಿಯಿಡೀ ಹರಟೆಯಲ್ಲಿ ದಣಿದ ದೇಹಗಳು ಸದ್ದಿಗೆ ಎಲ್ಲಿ ಸ್ಪಂದಿಸೀತು! ಶ್ರೀ ಒಬ್ಬಳು ಕೊಸ ಕೊಸ ಎಂದಳು ರೇಡಿಯೋ ಸದ್ದಿಗೆ.

ಅಂತೂ ಇಂತೂ ಹರಸಾಹಸ ಮಾಡಿಕೊಂಡು ಕಣ್ಣು ಬಿಡಲಾರದೆ ಬಿಟ್ಟು, ಏಳಲಾಗದೆ ಎದ್ದು, ರೆಡಿಯಾಗಲಾರದೆ ರೆಡಿಯಾದರು. ಬೊಂಬಾಟಾಗಿರೋ ಕಾಫಿ, ಟೀ ಕೊಟ್ಟ ಶ್ರೀನಿವಾಸ್. ರಾತ್ರಿ ಸಹ ಮಾಡಿಕೊಟ್ಟ ಬ್ಲ್ಯಾಕ್ ಟೀ ಅದ್ಭುತವಾಗಿತ್ತು.. ಚಪ್ಪರಿಸಿ ಕುಡಿದೆ. Original Plan ಪ್ರಕಾರ ನಾವು GRSಗೆ ಹೋಗಬೇಕೆಂದಿತ್ತು. ಆದರೆ ಬೆಂಗಳೂರಿಗೆ ಸಂಜೆ ಆರುಗಂಟೆ ಹೊತ್ತಿಗೆಲ್ಲಾ ವಾಪಸ್ ಹೋಗಲೇಬೇಕಾಗಿತ್ತು ಎಲ್ಲರೂನೂ.. ಹಾಗಾಗಿ, ಆ GRS idea ನ ನಾನು ಚಾಮುಂಡಿ ಬೆಟ್ಟಕ್ಕೆ ತಿರುಗಿಸಿದೆ. Actually ಇದು decide ಆಗಿದ್ದು, ಎಲ್ಲರೂ ಮಲಗಿದ್ದರಲ್ಲಾ ಆಗ. ನಾನು, ಶ್ರೀನಿವಾಸ್, ಶ್ರೇಯಸ್, ಶುಭಾ ನಿಷ್ಕರ್ಷಿಸಿದೆವು. ಮಲಗಿದ್ದ ಸ್ಮಿತಾಳನ್ನು ಸುಮಾರು ಎಂಟು ಸಲ ಎಬ್ಬಿಸಿ ಎಬ್ಬಿಸಿ, "plan change ಆಗಿದೆ.. ಚಾಮುಂಡಿ ಬೆಟ್ಟಕ್ಕೆ ಹೋಗೋಣ.." ಎಂದು ಹೇಳುತ್ತಿದ್ದೆ. ಅವಳ ಎಂಟೂ ಸಲವೂ ಕಣ್ಣು ಬಿಟ್ಟು ನನ್ನ ನೋಡಿ, "ಸರಿ" ಎಂದು ಮತ್ತೆ ಮಲಗುತ್ತಿದ್ದಳು. ಅವಳನ್ನು ಎಬ್ಬಿಸಲು ನನ್ನ ಉಪಾಯವಾಗಿತ್ತು ಅದು. ಆದರೆ ಅವಳು ಏಳಲೇ ಇಲ್ಲ.


ಇನ್ಫೋಸಿಸ್‍ಗೆ ಹೋಗೋಣ ಅಂತ ಅದ್ಯಾರಿಗೆ ಎಲ್ಲಿಂದ ಹೊಳೀತೋ ಗೊತ್ತಿಲ್ಲ, ಅದರ ಪ್ರಸ್ತಾಪಕ್ಕೆ ಎಲ್ಲರೂ ಕೈ ಮೇಲೆ ಮಾಡಿಬಿಟ್ಟರು. ಶ್ರೀ "ನಿನಗೆ ಇಷ್ಟ ಇಲ್ವಾ?" ಅಂತ ಮೂರು ಮೂರು ಸಲ ಬೇರೆ ಕೇಳಿದಳು.. ನಾನು, "ಇಲ್ಲಪ್ಪ, ಹಾಗೇನಿಲ್ಲ, ಎಲ್ಲರೂ ಹೊಗೋದು ಅಂದರೆ ಖಂಡಿತ ಹೊಗೋಣ.." ಎಂದು ಹೇಳಿದೆ.. ಸತ್ಯವಾಗಲೂ ನನಗೆ ಕಟ್ಟಡಗಳನ್ನು, ಕೃತಕ ಉದ್ಯಾನವನಗಳನ್ನು ನೋಡಲು ಆಸಕ್ತಿ ಇಲ್ಲ. ಆದರೆ ಇನ್ಫೋಸಿಸ್‍ನ ನಾನು ನೋಡಿದ್ದೇನೆ, ನೋಡಿರದವರ ಪಾಲಿಗೆ ನಾನು ಶತ್ರುವಾಗುವ ಆಸೆಯಿರಲಿಲ್ಲವಾದರೂ ಮನದಾಳದಲ್ಲಿ, ಬೇರೆ ಇನ್ನೆಲ್ಲಿಗಾದರೂ ಹೋಗೋಣ ಅಂತ ಅನ್ನಿಸುತ್ತಿತ್ತು. ಇನ್ನೇನು ಬೀಗ ಹಾಕಬೇಕು, ಆಗ ಥ್ಥಟ್ಟನೆ ಅದೆಲ್ಲಿಂದ ಹೊಳೆಯಿತೋ ಗೊತ್ತಿಲ್ಲ, ಹಾಡು ಗುನುಗುತ್ತಿದ್ದೆ, "ಮೈಸೂರು ಕೂಲಾಗಿದೆ, ಬೃಂದಾವನ ಗ್ರೀನಾಗಿದೆ ಲವ್ವಿಗೆ.. ಈ ಲವ್ವಿಗೆ..." ತತ್‍ಕ್ಷಣ ಪ್ರಸ್ತಾಪಿಸಿದೆ, "ಬೃಂದಾವನಕ್ಕೆ ಹೋಗೋಣವೇ?" ಎಂದು. ಎಲ್ಲರದೂ ದೊಡ್ಡ ಮನಸ್ಸು, ಕೂಡಲೇ ಒಂದು ಚೂರೂ ಭಿನ್ನಾಭಿಪ್ರಾಯ ಇಲ್ಲದೆ ಒಪ್ಪಿಕೊಂಡುಬಿಟ್ಟರು. ನನ್ನ ಮನಸ್ಸಿನಲ್ಲಿ ಹೇಳಲಾರದ ನಿರಾಳ. ಕೈಯಲ್ಲಿ ಇಟ್ಟುಕೊಂಡಿದ್ದ ಐಡಿಯನ್ನು ನನ್ನ ಕೈಗೆ ಕೊಟ್ಟ. ಜುಬ್ಬಾ ತೊಟ್ಟಿದ್ದ ನಾನು, ಆ ಐಡಿಯನ್ನು ನನ್ನ ಸೊಂಟದ ಪೌಚಿನೊಳಗೆ ಇಟ್ಟುಕೊಳ್ಳಲು, ಹಳ್ಳಿಯವರು ಪಂಚೆಯೆತ್ತಿ ಪಟ್ಟಾಪಟ್ಟಿ ಚಡ್ಡಿಯೊಳಗೆ ಹಣ ಇಟ್ಟುಕೊಳ್ಳುವಂತೆ ಜುಬ್ಬಾ ಎತ್ತಿ ಪೌಚಿನೊಳಗೆ ಇಟ್ಟುಕೊಂಡೆ..

ಒಂದು ಹೋಟೆಲಿನಲ್ಲಿ ತಿಂಡಿ ತಿಂದು, ಅದ್ಭುತವಾದ "luxury" ಬಸ್ಸಿನಲ್ಲಿ ಕೆ.ಆರ್.ಎಸ್. ಗೆ ಹೊರಟೆವು. ಕುಳಿತುಕೊಳ್ಳಲು ಸೀಟಿರಲಿಲ್ಲ. ನಿಲ್ಲಲು ಎತ್ತರ ಸಾಲದು. ಪಾಪ ಬಸ್ಸಿನ ಟಾಪ್ ಶ್ರೇಯಸ್‍ನ ಟಾಪ್‍ಗೆ ತಾಗುತ್ತಿತ್ತು. ಸಾಲದೆಂಬಂತೆ, ಜಗಳ ಬೇರೆ ಆ ಬಸ್ಸಿನೊಳಗೆ. ಅವರ ಜಗಳಕ್ಕಾದರೂ ಸೂರು ಹಾರಿಹೋಗಿ ಶ್ರೇಯಸ್ಸಿಗೆ ನಿಂತುಕೊಳ್ಳುವಂತೆ ಆಗಬೇಕಿತ್ತು, ಆದರೆ ಅವನ ದುರಾದೃಷ್ಟ. ಶೃತಿ ನಿಂತುಕೊಂಡೇ ನಿದ್ದೆ ಹೊಡೆಯುತ್ತಿದ್ದಳು.

ಕೆ.ಆರ್.ಎಸ್. ಸ್ಟಾಪಿನಿಂದ ಬೃಂದಾವನಕ್ಕೆ ನಾಕು ಕಿ.ಮೀ. ದೂರ. ಇದು ಕೂಡ ಕೃತಕ ಉದ್ಯಾನ. ಆದರೆ, ಇಲ್ಲಿ ಕನ್ನಂಬಾಡಿ ಕಟ್ಟೆಯಿದೆ, ಕಾವೇರಿಯಿದೆ, ಹಸಿರಿದೆ.. ಏನೇ ಆದರೂ ಕಾಡಿನಲ್ಲಿರುವ ಹಸಿರಿನ ಮುಂದೆ ಈ ಕೃತಕ ಹಸಿರೇನೂ ಇಲ್ಲ ಬಿಡಿ. ಆ ನಾಕು ಕಿ.ಮೀ. ನಡೆದೇ ಸಾಗಿದೆವು. ದಾರಿಯಲ್ಲಿ ಒಂದು ನಾಯಿ ಇನ್ನೇನು ಸಾಯುವ ಹಂತದಲ್ಲಿದ್ದುದನ್ನು ಕಂಡು ಎದೆ ಚುರುಕ್ ಎಂದಿತು. ಮೈಯೆಲ್ಲಾ ಖಾಯಿಲೆ ಇತ್ತು ಅದಕ್ಕೆ. ನಡೆದು ನಡೆದು, ನಮ್ಮ ಗುಂಪಿನ ಬಹುಪಾಲು ಮಂದಿಗೆ ತುಂಬಾ ಆಯಾಸ ಆಯಿತು. ಮುಖದಲ್ಲಿ ಚೈತನ್ಯವಿರಲಿಲ್ಲ. ನಡೆದಿದ್ದರಿಂದಲ್ಲ, ರಾತ್ರಿ full ಎದ್ದಿದ್ದರಿಂದ. ಶುಭಾ ತುಂಬಾ ಲವಲವಿಕೆ, ಉತ್ಸಾಹಭರಿತದಿಂದಿದ್ದನ್ನು ಕಂಡು ಸಂತೋಷ ಅಯಿತು.

ಬೃಂದಾವನ ತಲುಪುವ ಹೊತ್ತಿಗೆ ಸಮಯ ಹನ್ನೆರಡುವರೆ ಆಗಿಹೋಗಿತ್ತು. ನಮಗೆ ಇದ್ದಿದ್ದು ಕೇವಲ ಅರ್ಧ ಗಂಟೆ ಮಾತ್ರ ಸಮಯ. ಅಲ್ಲಿ camera ಗೆ ಟಿಕೆಟ್ ತೊಗೊಂಡಿದ್ದರ ಸಲುವಾಗಿ ಫೋಟೋಗಳನ್ನು ಕ್ಲಿಕ್ಕಿಸಿ, ಸಂಗೀತ ಕಾರಂಜಿಯೆದುರು ಇರುವ ಮೆಟ್ಟಿಲುಗಳ ಮೇಲೆ ತುಸು ವಿರಮಿಸಿ, ವಾಪಸ್ ಹೊರಟೆವು. ಕೆಲವರದು ಸಿಡ ಸಿಡ ಅನ್ನುವ ಮೂಡು. ಅಲ್ಲಿ ಬಿಸಿಲು ಅಷ್ಟೇ ಜೋರಾಗಿತ್ತು. ನೀರಿನಲ್ಲಿ ವಿಪರೀತ ಗಲೀಜು ಬೇರೆ. ಫ್ರೂಟ್ ಜೂಸ್ ಕುಡಿದು, ಅಲ್ಲಿಂದ ಮೈಸೂರಿನ ಗಂಡಭೇರುಂಡನ ಮನೆಗೆ ಪಯಣಿಸಿದೆವು. ಈ ಬಾರಿ ಬಸ್ಸಿನಲ್ಲಿ ಸೀಟು ಸಿಕ್ಕಿತು. ನಿದ್ರಿಸಿದರೆ ಸಾಕು ಎಂದು ಎಲ್ಲರ ಕಣ್ಣುಗಳೂ ಹೇಳುತ್ತಿದ್ದವು. ಸಿಕ್ಕಾಪಟ್ಟೆ ಬಿಸಿಲು. ಮೈಸೂರು ಕೂಲಾಗೂ ಇರಲಿಲ್ಲ, ಬೃಂದಾವನ ಗ್ರೀನಾಗೂ ಇರಲಿಲ್ಲ.. ಅದು ಬರೀ ಲವ್ವಿಗೆ ಅಷ್ಟೆ ಅಂತ ಹಾಡನ್ನು ಮತ್ತೆ ಗುನುಗಿದೆ..

ಹಿಂದಿರುಗುವಾಗ vovloಲಿ ನಿದ್ದೆ ಹೊಡೆದು ಬಂದೆವು. ಸಿಂಧೂ ರಾತ್ರಿಯ ಚರ್ಚೆಯಲ್ಲಿ ಭಾಗವಹಿಸದ ಕಾರಣ ಅವಳ sesion ಬಸ್ಸಿನಲ್ಲೇ ನಡೆಯಿತು. ತುಂಬಾ ತುಂಬಾ ಸೊಗಸಾಗಿ ಮಾತನಾಡಿದಳು. ಶೃತಿಯ ಬಗ್ಗೆ ಮಾತನಾಡುತ್ತ, ಕಣ್ಣೀರು ಉಕ್ಕಿ ಬರುವುದರಲ್ಲಿತ್ತು, ಅಷ್ಟರಲ್ಲೇ ಆಗಸದಲ್ಲಿ ಮೂಡಿದ ಕಾಮನಬಿಲ್ಲು ಅವಳ ಭಾವಪೂರ್ಣ ಬಾಷ್ಪಕ್ಕೆ distrub ಮಾಡಿಬಿಟ್ಟಿತು. . ಆದರೆ, ಈ ಪ್ರವಾಸದಲ್ಲಿ ಭಾವನೆಯೇ ನಮ್ಮ ವಾಹನ.. ಕಣ್ಣುಗಳೇ ಸ್ಥಳಗಳು.. ಮಾತುಗಳೇ ನಮ್ಮ ಪಯಣವಸ್ತ್ರಗಳು.. ನನ್ನ ಪಾಲಿಗೆ ಬಹುಶಃ ನ ಭೂತೋ ನ ಭವಿಷ್ಯತಿ!

-ಅಒಂದಷ್ಟು ಚಿತ್ರಗಳು..