Sunday, December 08, 2013

ಗೊತ್ತಿರದ ತಪ್ಪುಗಳು

ಮಗಳಿಗೆ ಪುಸ್ತಕ ತರಲೆಂದು ಸಪ್ನ ಬುಕ್ ಹೌಸ್‍ಗೆ ಹೋಗಿದ್ದೆ. ಪುಸ್ತಕದ ಜೊತೆಗೆ ಒಂದು ಚಾರ್ಟನ್ನೂ ಖರೀದಿಸಬೇಕೆಂದೆನಿಸಿತು. ಪ್ರಾಣಿಗಳ ಮರಿಗಳ ಚಿತ್ರವಿರುವ ಒಂದು ಚಾರ್ಟನ್ನು ಕೈಗೆ ತೆಗೆದುಕೊಂಡೆ. ಅದನ್ನೇ ಖರೀದಿಸಬೇಕೆಂದೂ ತೀರ್ಮಾನಿಸಿಯಾಗಿತ್ತು. ಗೆಳೆಯ ನಾಗಾರ್ಜುನ ಅವರು ಕಾಕತಾಳೀಯವೆಂಬಂತೆ ಅದೇ ಕ್ಷಣದಲ್ಲಿ ನನಗೆ ಸಿಕ್ಕರು. ಚಾರ್ಟಿನ ಮೇಲೆ ಕಣ್ಣು ಹಾಯಿಸಿ, “ರೀ owlet ಅಂದ್ರೆ baby owl ಅಲ್ಲಾ ರೀ” ಎಂದು ಎಚ್ಚರಿಸಿದರು. ನನಗೆ ಅದರ ಕಡೆ ಗಮನ ಹೋಗಿರಲಿಲ್ಲವೆಂಬುದು ಒಂದು ವಿಷಯವಾದರೆ, ನಾನು ಔಲೆಟ್ ಎಂದರೆ ಮರಿ ಔಲ್ ಎಂದೇ ತಿಳಿದಿದ್ದು ಇನ್ನೊಂದು. ಆದರೆ ಅನೇಕ ಪುಸ್ತಕಗಳು, ಅನೇಕ ವೆಬ್‍ಸೈಟುಗಳು ನನ್ನಂತೆಯೇ ಎಂಬುದನ್ನು ನಾನು ಬಲ್ಲೆ. ಅವರು ಹಾಗೆ ಹೇಳಿದ ಮೇಲೂ ನಾನು ಅದೇ ಚಾರ್ಟನ್ನೇ ಖರೀದಿಸಿದೆ. ನನ್ನ ಮಗಳು ಸದ್ಯ ಓದುವ ಹಂತವನ್ನು ತಲುಪಿಲ್ಲವಾದ್ದರಿಂದ, ಅಲ್ಲಿ ಬರೆದಿರುವುದು ಔಲೆಟ್ಟಾಗಲೀ, ಔಲಾಗಲೀ, ಪಿಜನ್ ಆಗಲೀ, ಆಸ್ಟ್ರಿಚ್ ಆಗಲೀ – ಅವಳ ಪಾಲಿಗೆ ಅದು “ಗೂಬೆ” ಅಷ್ಟೇ! ಚಿತ್ರವನ್ನಷ್ಟೇ ನೋಡಿ ಸಂತೋಷ ಪಡುವ ಮಕ್ಕಳ ಬದುಕು ಸಲೀಸಷ್ಟೆ?

ಶಾಲೆಯಲ್ಲಿ ಗಮನಿಸಿದ್ದೇನೆ, ಅನೇಕ ಪುಸ್ತಕ್ಗಳಲ್ಲಿ parakeet ಜಾಗದಲ್ಲಿ parrot ಎಂಬ ಹೆಸರಿರುತ್ತೆ, hare ಜಾಗದಲ್ಲಿ rabbit ಎಂಬ ಹೆಸರಿರುತ್ತೆ. ಇಂಗ್ಲೀಷ್ ಮೀಡಿಯಮ್ ಶಾಲೆಯಲ್ಲವೇ, ಅದಕ್ಕೆ ಈ ಸಮಸ್ಯೆ. ಕನ್ನಡದಲ್ಲಿ ಈ ಸಮಸ್ಯೆ ಹೇಗೆ ಸಾಧ್ಯ? Alligator ಆಗಲೀ, Gharial ಆಗಲೀ, Crocodile ಆಗಲೀ ಅದು ಮೊಸಲೆ ಅಷ್ಟೇ. Cheetah ಆಗಲೀ, Leopard ಆಗಲೀ ಅದು ಚಿರತೆ ಅಷ್ಟೇ. ಎಮ್ಮೆ – ಕಾಡಲ್ಲಿದ್ದರೆ ಕಾಡೆಮ್ಮೆ. ಅದೇ ರೀತಿ ಹಂದಿ – ಕಾಡು ಹಂದಿ, ಕೋಳಿ – ಕಾಡು ಕೋಳಿ. ಆದರೆ ಇಂಗ್ಲೀಷಿನಲ್ಲಿ ಕಲಿಯುವಾಗ (ಮತ್ತು ಹೇಳಿಕೊಡುವಾಗ) ಬಹಳ ಜಾಗರೂಕರಾಗಿರಬೇಕು.

ನನ್ನ ಟ್ರೆಕ್ಕಿಂಗ್ ಗುರುಗಳಾದ ಕ್ಯಾಪ್ಟನ್ ಶ್ರೀನಿವಾಸ್ ಅವರು ನನ್ನ ಮೊದಲ ಚಾರಣದಲ್ಲಿ mountain ಮತ್ತು hill ಪದಗಳ ವ್ಯತ್ಯಾಸ ತಿಳಿಸಿದ್ದರು. ಅಲ್ಲಿಯವರೆಗೂ ನಾನು ಮುಳ್ಳಯ್ಯನಗಿರಿಯನ್ನು mountain ಎಂದುಕೊಂಡಿದ್ದೆ. ಒಂಭತ್ತು ಸಾವಿರ ಅಡಿ ಎತ್ತರವಿಲ್ಲದ ಬೆಟ್ಟವು ಬರೀ ಬೆಟ್ಟವಷ್ಟೆ. ಕುಮಾರ “ಪರ್ವತ”ವೂ, ನರಸಿಂಹ “ಪರ್ವತ”ವೂ, ಮೇರುತಿ “ಪರ್ವತ”ವೂ ಬೆಟ್ಟಗಳೇ– ಪರ್ವತಗಳಲ್ಲ. ಹಿಮಾಲಯ ಪರ್ವತವಲ್ಲ – ಅದು ಪರ್ವತ ಶ್ರೇಣಿ.

James_Ward_Lion_and_Tiger_Fighting_1797 

(http://en.wikipedia.org/wiki/Tiger_versus_lion)

ಈಗಿನ ಮಕ್ಕಳ ಚಿತ್ರಕಲೆಯ ಕೃತಿಗಳಲ್ಲಿ ಒಂದೇ ಕಾಡಿನಲ್ಲಿ ಹುಲಿ ಮತ್ತು ಸಿಂಹಗೆಳರಡೂ ಇರುವುದನ್ನು ನಾನು ನೋಡುತ್ತಲೇ ಇರುತ್ತೇನೆ ಶಾಲೆಯಲ್ಲಿ. ಖಾಜ಼ಿರಂಗ ಅರಣ್ಯಧಾಮದ ಮಾಡೆಲ್‍ನಲ್ಲಿ ಜಿರಾಫ್ ಇರುವುದನ್ನೂ ನೋಡಿದ್ದೇನೆ. ಹಾಗೆಯೇ ಕರ್ನಾಟಕದ ಕಾಡುಪ್ರಾಣಿಗಳ ಹೆಸರನ್ನು ಹೇಳಲು ಹೇಳಿದಾಗ ಚೀತಾ, ರಾಟಲ್ ಸ್ನೇಕ್, ಬೈಸನ್ ಇವೆಲ್ಲವನ್ನೂ ಹೆಸರಿಸಿವುದು ಸಾಮಾನ್ಯ! ಪೋಷಕರು, ಶಿಕ್ಷಕರು ಈ ಬಗ್ಗೆ ಗಮನ ಹರಿಸುವುದು ಕಡಿಮೆಯೇ. ನರ್ಸರಿ ಮಕ್ಕಳಿಗೆ ಇಂಗ್ಲೀಷ್ ಹೇಳಿಕೊಡುವ ನೆಪದಲ್ಲಿ O for Orangutan ಎಂದೋ, ಅಥವಾ O for Ostrich ಎಂದೋ, ಹೇಳಿಕೊಡುತ್ತೇವೆ. ಪದಗಳನ್ನು ಕಲಿಯುತ್ತವೆಂಬುದೇನೋ ನಿಜ, ಆದರೆ, ತಮ್ಮ ಪರಿಸರಕ್ಕೆ ಹೊಂದಿಸಿಕೊಳ್ಳುವುದು ಅಸಾಧ್ಯವೆಂಬುದು ಸತ್ಯ. ನಮ್ಮ ಪರಿಸರದಲ್ಲಿ ಆಸ್ಟ್ರಿಚ್ಚೂ ಇಲ್ಲ, ಒರಾಂಗುಟಾನೂ ಇಲ್ಲವೆಂಬುದನ್ನು ಹೇಳಿಕೊಡುವವರಿಗೆ ಹೇಳಿಕೊಡುವ ಅಗತ್ಯವಿದೆ. 

ಈಗ ಸದ್ಯಕ್ಕೆ ನನ್ನ ಮಗಳಿಗೆ ಇವೆಲ್ಲವನ್ನೇನೂ ಹೇಳಿಕೊಡುತ್ತಿಲ್ಲ. ಚಿತ್ರವನ್ನು ನೋಡುವುದಷ್ಟೇ ಹವ್ಯಾಸವಾದ್ದರಿಂದ ನನ್ನ ಜವಾಬ್ದಾರಿ ತಾತ್ಕಾಲಿಕವಾಗಿ ಕಡಿಮೆಯಿದೆ!

- ಅ

08.12.2013

1.45 AM

Friday, January 25, 2013

ವೈಭವದ ಪಥ

ಡಾಕ್ಟರ್ ಲ್ಯಾಂಪ್ಟನ್ ತಮ್ಮ ಜಿಮ್‍ನ ಮಧ್ಯ ನಿಂತು ಹನ್ನೆರಡೂ ಜನರನ್ನೂ ತಮ್ಮ ಸುತ್ತಲೂ ನಿಲ್ಲಲು ಹೇಳಿದರು. “ಮೊದಲ ಹಂತದ ಪರೀಕ್ಷೆಗೆ ಅರ್ಹರಾಗಿರುವ ನಿಮಗೆಲ್ಲರಿಗೂ ಶುಭಾಶಯಗಳು. ಎಂದರೆ, ನನ್ನ ’ಟಾರ್ಚರ್ ಛೇಂಬರ್’ನ್ನು ಪ್ರವೇಶಿಸುವ ಅರ್ಹತೆಯನ್ನು ಪಡೆದ್ದಿದ್ದೀರಿ.” ಎಂದರು. ಡಾಕ್ಟರ್ ಲ್ಯಾಂಪ್ಟನ್ನರ ಹಾಸ್ಯಪ್ರಜ್ಞೆಗೆ ಎಲ್ಲರೂ ನಕ್ಕರು. “ಇನ್ನೊಂದು ಗಂಟೆಯಾದ ಮೇಲೆ ಹೀಗೆ ನಗುತ್ತಾರೋ ಇಲ್ಲವೋ” ಎಂದು ಮನದಲ್ಲೇ ಅಂದುಕೊಂಡು ಎಲ್ಲರನ್ನೂ ಒಳಕ್ಕೆ ಕರೆದೊಯ್ದರು. ಎದುರು ಸಿಕ್ಕ ಬಾಗಿಲನ್ನು ತೆರೆದು, ಒಳಗಿದ್ದ ದೊಡ್ಡ, ಬಹಳ ದೊಡ್ಡ ಕೋಣೆಯೊಳಕ್ಕೆ ಹೋದರು.

“ಯುವಕರೇ, ಜಲಾಂತರ್ಗಾಮಿ (submariners) ಗಳನ್ನು ಸಮುದ್ರದೊಳಗೆ ಹೆಚ್ಚು ಹೊತ್ತು ಕಳೆಯಬಲ್ಲರೋ ಇಲ್ಲವೋ ಎಂಬ ಪರೀಕ್ಷೆ ಮಾಡುವ ಛೇಂಬರಿನ ಮೇಲೆ ನೀವುಗಳು ನಿಂತಿದ್ದೀರ. ಆದರೆ ಈ ಛೇಂಬರನ್ನು ಸ್ವಲ್ಪ ಬದಲಿಸಿದ್ದೇವೆ. ನೀವು ಎವೆರೆಸ್ಟ್ ಹತ್ತುವಾಗ ಎದುರಾಗುವ ಸ್ಥಿತಿಗಳನ್ನು ಇಲ್ಲಿ ಎದುರಿಸುತ್ತೀರ.”

“ಇಲ್ಲಿರುವುದನ್ನೆಲ್ಲಾ ಗಮನಿಸಿ. ಈ ಛೇಂಬರಿನ ಮಧ್ಯದಲ್ಲಿರುವ ಮೆಟ್ಟಿಲುಗಳು – ಚಲಿಸುವ ಮೆಟ್ಟಿಲುಗಳು – ಸಾಮಾನ್ಯ ಎಸ್ಕಲೇಟರಿನಂತಲ್ಲ. ಇದು ನಿಮಗೆ ಸಹಾಯಕವಾಗಿರುವುದಕ್ಕಿಂತಲೂ ನಿಮ್ಮನ್ನು ತಡೆಗಟ್ಟುವ ಕೆಲಸವನ್ನೇ ಮಾಡುತ್ತೆ. ಈ ಮೆಟ್ಟಿಲುಗಳು ಕೆಳಕ್ಕೆ ಚಲಿಸುತ್ತಿರುತ್ತವೆ, ನೀವು ಮೇಲೆ ಹತ್ತುತ್ತಿರುತ್ತೀರಿ. ಈ ಮೆಟ್ಟಿಲುಗಳು ಗಂಟೆಗೆ ಐದು ಮೈಲುಗಳ ವೇಗದಲ್ಲಿ ಚಲಿಸುತ್ತಿರುತ್ತವೆ.”

“ಇದೇನು ಹುಚ್ಚಾಟ? ಒಂದು ಗಂಟೆಯ ಕಾಲ ಚಲಿಸುವ ಮೆಟ್ಟಿಲನ್ನೇರುವುದು ಯಾವ ಮಹಾ ಪರೀಕ್ಷೆ? ಎಂದು ನೀವು ಅಂದುಕೊಳ್ಳಬಹುದು. ಇಲ್ಲಿ ಒಂದೆರಡು ಸಂಗತಿಗಳನ್ನು ನೀವು ಗಮನಿಸಬೇಕು. ಸದ್ಯ ಈ ಛೇಂಬರಿನ ತಾಪಮಾನವು ಸಾಮಾನ್ಯ ಉಷ್ಣಾಂಶದಲ್ಲಿರುತ್ತೆ. ಇನ್ನೊಂದು ಗಂಟೆಯೊಳಗೆ ನೀವುಗಳು 29,000 ಅಡಿ ಎತ್ತರದಲ್ಲಿ ಯಾವಯಾವ ಸ್ಥಿತಿಗಳಿರುತ್ತವೋ ಅವನ್ನೇ ಅನುಭವಿಸುತ್ತಿರುತ್ತೀರಿ. ತಾಪಮಾನವೂ ಸಹ –40 ಡಿಗ್ರೀ ಸೆಲ್ಷಿಯಸ್ ಇರುತ್ತೆ. ಅದಕ್ಕಾಗಿಯೇ ನಾನು ಹೇಳಿದ್ದು, ನೀವು ಪರ್ವತಾರೋಹಣ ಮಾಡುವಾಗ ಯಾವ ಬಟ್ಟೆಯನ್ನು ಧರಿಸುತ್ತೀರೋ ಅದನ್ನೇ ಧರಿಸಿಕೊಳ್ಳಿ ಎಂದು.”

“ಇನ್ನೂ ಒಂದು ಸವಾಲೊಡ್ಡುತ್ತೇನೆ ನಿಮಗೆ. ಅದೋ ದೂರದ ಗೋಡೆಯ ಮೇಲೆ ಎರಡು ಬೀಸಣಿಗೆಗಳು ಕಾಣಿಸುತ್ತಿವೆಯಲ್ಲಾ, ಅವೇ ನನ್ನ ಗಾಳಿ ಯಂತ್ರಗಳು. ಅವೇನೂ ನಿಮ್ಮ ಶೆಖೆಯನ್ನು ಆರಿಸಲು ಇರುವ ಫ್ಯಾನುಗಳಲ್ಲ. ಅವುಗಳನ್ನು ನಾನು ಆನ್ ಮಾಡಿದ ತಕ್ಷಣವೇ, ತಮ್ಮೆಲ್ಲ ಶಕ್ತಿಯಿಂದಲೂ, ನಿಮ್ಮನ್ನು ಎಸ್ಕಲೇಟರಿನಿಂದ ಕೆಳಕ್ಕೆ ತಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತವೆ." ಒಂದಿಬ್ಬರು ಭೀತಿಯಿಂದ ನಕ್ಕರು.

"ಕೋಣೆಯ ಸುತ್ತಲೂ ಹೊದಿಕೆಗಳು, ಹಾಸಿಗೆಗಳು, ಬಕೆಟ್ಟುಗಳು ಇರುವುದನ್ನು ಗಮನಿಸಿ. ಚಲಿಸುವ ಮೆಟ್ಟಿಲಿನಿಂದ ನೀವು ಕೆಳಕ್ಕೆ ಬಿದ್ದ ಮೇಲೆ ನೀವು ಸುಧಾರಿಸಿಕೊಳ್ಳಲೆಂದೇ ಈ ವ್ಯವಸ್ಥೆ. ಬಕೆಟ್ಟುಗಳನ್ನು ಯಾಕಿರಿಸಿದ್ದೇನೆಂಬುದನ್ನು ನಾನು ವಿವರಿಸಬೇಕಿಲ್ಲ." ಈ ಬಾರಿ ಯಾರೂ ನಗಲಿಲ್ಲ. "ಏನಾದರೂ ಪ್ರಶ್ನೆಗಳಿವೆಯಾ?" ಡಾಕ್ಟರ್ ಕೇಳಿದರು.

"ಗೋಡೆಯ ಆ ಬದಿಯಲ್ಲಿ ಏನಿದೆ?" ನಾರ್ಟನ್ ಕೇಳಿದನು. ಅದಕ್ಕೆ ಡಾಕ್ಟರ್ ಉತ್ತರಿಸುತ್ತ, "ಅಲ್ಲಿರುವುದೇ ಕಂಟ್ರೋಲ್ ರೂಮು. ನಾವು ನಿಮ್ಮನ್ನು ನೋಡಬಲ್ಲೆವು. ಆದರೆ ನೀವು ನಮ್ಮನ್ನು ನೋಡಲಾಗುವುದಿಲ್ಲ. ಒಂದು ಗಂಟೆಯಾದ ಮೇಲೆ ಎಸ್ಕಲೇಟರು ನಿಲ್ಲುತ್ತೆ. ವಾಯುಯಂತ್ರಗಳು ಆಫ್ ಆಗುತ್ತವೆ. ತಾಪಮಾನವು ಸಾಮಾನ್ಯ ಸ್ಥಿತಿಗೆ ಮರಳುತ್ತೆ. ಆಮೇಲೆ ಹಲವು ವೈದ್ಯರು ಬಂದು ನಿಮ್ಮನ್ನು ತಪಾಸಣೆ ಮಾಡುತ್ತಾರೆ. ನಿಮ್ಮ ನಿಮ್ಮ ಮೆಟ್ಟಿಲನ್ನು ಆರಿಸಿಕೊಂಡು ನಿಂತುಕೊಳ್ಳಿ, ಗೆಳೆಯರೇ." ಎಂದರು.

ನಿರೀಕ್ಷಿಸಿದಂತೆಯೇ ಫಿಂಚ್ ಮೊದಲ ಮೆಟ್ಟಿಲನ್ನು ಆರಿಸಿಕೊಂಡ. ಎರಡು ಮೆಟ್ಟಿಲನ್ನು ಬಿಟ್ಟು ಜಾರ್ಜ್ ನಿಂತುಕೊಂಡ. ಜಾರ್ಜ್‍ನ ಹಿಂದೆ ಸೋಮರ್ವೆಲ್. ಹೀಗೆ, ಎರಡೆರಡು ಮೆಟ್ಟಿಲುಗಳ ಅಂತರದಲ್ಲಿ ಎಲ್ಲರೂ ನಿಂತರು. "ಮೆಟ್ಟಿಲುಗಳು ಬಜ಼ರ‍್ ಸದ್ದಾದ ಕೂಡಲೇ ಚಲಿಸಲು ಶುರುವಾಗುತ್ತೆ. ಹತ್ತು ನಿಮಿಷದ ನಂತರ ಮತ್ತೆ ಬಜ಼ರ್ ಸದ್ದು ಕೇಳಿಸುತ್ತೆ. ಆಗ ಈ ಛೇಂಬರಿನ ಸ್ಥಿತಿಯು ಐದು ಸಾವಿರ ಅಡಿ ಎತ್ತರದಲ್ಲಿರುವ ಹಾಗಿರುತ್ತೆ - ತಾಪಮಾನವು ಸೊನ್ನೆಯಾಗಿರುತ್ತೆ. ಪ್ರತಿ ಹತ್ತು ನಿಮಿಷಗಳಿಗೊಮ್ಮೆ ಬಜ಼ರ್ ಸದ್ದಾಗುತ್ತಿರುತ್ತೆ. ನಲವತ್ತು ನಿಮಿಷಗಳಾದ ನಂತರ ಗಾಳಿಯು ಶುರುವಾಗುತ್ತೆ. ಯಾರಾದರೂ ಒಂದು ಗಂಟೆಯ ನಂತರವೂ ಮೆಟ್ಟಿಲಿನ ಮೇಲೆ ಇದ್ದರೆ ಅವರು 29,000 ಅಡಿ ಎತ್ತರದ ಸ್ಥಿತಿಯನ್ನೇ ಅನುಭವಿಸುತ್ತಿರುತ್ತಾರೆ. ಮತ್ತೆ ಮತ್ತೆ ಹೇಳಿದ್ದನ್ನೇ ಹೇಳುತ್ತಿದ್ದೇನೆ, ಕ್ಷಮಿಸಿ. ಗುಡ್ ಲಕ್ ಜಂಟಲ್‍ಮೆನ್! " ಇಷ್ಟು ಹೇಳಿ ಡಾಕ್ಟರ್ ಲ್ಯಾಂಪ್ಟನ್ ಕೋಣೆಯಿಂದ ಹೊರಹೋದರು. ಹನ್ನೆರಡೂ ಜನರು ಬಾಗಿಲು ಬೀಗ ಹಾಕಿದ ಸದ್ದನ್ನು ಕೇಳಿಕೊಂಡರು.

ನಮ್ಮ ಕಥಾನಾಯಕ ಜಾರ್ಜ್ ಒಂದು ಸುದೀರ್ಘ ಉಸಿರನ್ನು ಒಳಗೆ ತೆಗೆದುಕೊಂಡ. ಮುಂದೆ, ಹಿಂದೆ ಯಾರು ಯಾರಿದ್ದಾರೆಂದು ನೋಡುವ ಗೋಜಿಗೂ ಹೋಗಲಿಲ್ಲ. ಬಜ಼ರ್ ಸದ್ದಾಯಿತು. ಮೆಟ್ಟಿಲುಗಳು ಕೆಳಕ್ಕೆ ಚಲಿಸಲು ಆರಂಭಿಸಿದವು. ಜಾರ್ಜ್ ನಿಧಾನ ಗತಿಯಲ್ಲಿ ಮೇಲೇರ ತೊಡಗಿದನು. ಹನ್ನೆರಡೂ ಜನರು ತಮ್ಮ ತಮ್ಮ ಸ್ಥಾನಗಳನ್ನು ಉಳಿಸಿಕೊಂಡರು. ಎರಡನೆಯ ಸಲ ಬಜ಼ರ್ ಸದ್ದಾದ ಮೇಲೂ ಜಾರ್ಜ್‍ಗೆ ಹೆಚ್ಚೇನೂ ಬದಲಾವಣೆಯಾದಂತೆ ತೋರಲಿಲ್ಲ - ಐದು ಸಾವಿರ ಅಡಿ ಎತ್ತರದಲ್ಲಿರುವ ತಾಪಮಾನವು, ಅಂದರೆ ಸೊನ್ನೆ ಡಿಗ್ರೀ ಇದ್ದರೂ!  ಇಪ್ಪತ್ತು ನಿಮಿಷವಾದ ನಂತರವೂ ಹನ್ನೆರಡೂ ಜನರು ತಮ್ಮ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದರು. ಇನ್ನೂ ಹತ್ತು ನಿಮಿಷವಾದ ಮೇಲೆ, ಹದಿನೈದು ಸಾವಿರ ಅಡಿ ಎತ್ತರವನ್ನು ತಲುಪಿದರು. ತಾಪಮಾನವು -10ಕ್ಕೆ ಇಳಿದಿತ್ತು. ಕೆನ್‍ರೈಟ್ ಪಕ್ಕಕ್ಕೆ ಚಲಿಸಿದ, ಹಿಂದಿದ್ದವರು ಮೇಲೆ ಹೋಗಲು ಜಾಗ ಮಾಡಿಕೊಟ್ಟ. ತಾನು ಕೆಳಗಿನ ಕೊನೆಯ ಮೆಟ್ಟಿಲನ್ನು ತಲುಪಿದ! ಕಷ್ಟ ಪಟ್ಟು ಹತ್ತಿರದ ಹಾಸಿಗೆಯನ್ನು ಹಾಸಿಕೊಂಡು ಹೊದ್ದು ಕುಳಿತ. ಡಾಕ್ಟರ್ ಲ್ಯಾಂಪ್ಟನ್ ಕೆನ್‍ರೈಟಿನ ಹೆಸರನ್ನು ಹೊಡೆದು ಹಾಕಿದರು.

ಫಿಂಚ್ ಮತ್ತು ಜಾರ್ಜ್ ಇಬ್ಬರೂ ಬಹಳ ಸೊಗಸಾಗಿ ತಮ್ಮ ವೇಗವನ್ನು ಉಳಿಸಿಕೊಂಡಿದ್ದರು. ಜಾರ್ಜ್‍ಗೆ ವಾಯುಯಂತ್ರಗಳ ಬಗ್ಗೆ ಮರೆತೇ ಹೋಗಿತ್ತು. ಐದನೇ ಸಲದ ಬಜ಼ರ್ ಸದ್ದಾದ ಕೂಡಲೇ ಮುಖಕ್ಕೆ ಅತಿ ತಣ್ಣನೆಯ ಗಾಳಿಯು ರಾಚಿದಾಗಲೇ ಅದರ ನೆನಪಾಗಿದ್ದು. ಕಣ್ಣುಜ್ಜಬೇಕೆನ್ನಿಸಿತು. ಆದರೆ, 29,000 ಅಡಿ ಎತ್ತರದಲ್ಲಿ, ನಿಜವಾದ ಪರ್ವತದ ಮೇಲೆ  ತಾನು ಧರಿಸಿದ್ದ ಗಾಗಲ್ಸ್ ತೆರೆಯುವುದು ಕ್ಷೇಮವಲ್ಲ, ಅದರಿಂದ ಸ್ನೋ ಬ್ಲೈಂಡ್ನೆಸ್ ಉಂಟಾಗುವುದೆಂಬ ಅರಿವು ಜಾರ್ಜ್‍ಗೆ ಇತ್ತು. ಮುಂದಿದ್ದ ಫಿಂಚ್ ಕೊಂಚ ಗಾಬರಿಯಾದಂತೆ ಕಂಡಿತು. ಆದರೆ, ಕೆಲವೇ ಹೆಜ್ಜೆಗಳ ಹಿಂದಿದ್ದವನು ತನ್ನ ಕನ್ನಡಕವನ್ನು ತೆಗೆದಿದ್ದ ಕಾರಣ, ಮುಖಕ್ಕೆ ಹೊಡೆದ ತಣ್ಣನೆಯ ಗಾಳಿಯ ಅಬ್ಬರಕ್ಕೆ ಕೆಲವೇ ಕ್ಷಣದಲ್ಲಿ ಎಸ್ಕಲೇಟರಿನ ಕೆಳಗಿದ್ದ - ವಾಂತಿ ಮಾಡುತ್ತ! ಅವನ ಹೆಸರನ್ನೂ ಡಾಕ್ಟರ್ ಹೊಡೆದು ಹಾಕಿದರು.

ಐವತ್ತು ನಿಮಿಷಕ್ಕೆ ಬಜ಼ರ್ ಸದ್ದಾದಾಗ ಮೆಟ್ಟಿಲಿನ ಮೇಲೆ ಉಳಿದವರಿಗೆ ಅರಿವಾಯಿತು - ತಾವು ಇಪ್ಪತ್ತನಾಲ್ಕು ಸಾವಿರ ಅಡಿಯನ್ನು ತಲುಪಿದ್ದೇವೆಂದು. ತಾಪಮಾನವು -25 ಡಿಗ್ರೀ ಸೆಲ್ಷಿಯಸ್ ಆಗಿತ್ತು. ಫಿಂಚ್, ಜಾರ್ಜ್, ಓಡೆಲ್, ಸೋಮರ್ವೆಲ್, ಬುಲ್ಲಕ್, ಮತ್ತು ನಾರ್ಟನ್ ಇಷ್ಟೇ ಜನ ಉಳಿದಿದ್ದು. ಇನ್ನೊಂದು ಸಾವಿರ ಅಡಿ ಎತ್ತರ ಹೋಗುವಷ್ಟರಲ್ಲಿ ಬುಲ್ಲಕ್ ಮತ್ತು ಓಡೆಲ್ ಕೆಳಗುರುಳಿದರು. ತಮ್ಮ ಹಾಸಿಗೆ ಹೊದಿಕೆಗಳನ್ನೆಳೆದುಕೊಳ್ಳುವ ಶಕ್ತಿಯೂ ಅವರಿಗಿರಲಿಲ್ಲ. ಡಾಕ್ಟರ್ ಲ್ಯಾಂಪ್ಟನ್ ಗಡಿಯಾರವನ್ನೊಮ್ಮೆ ನೋಡಿ, ಅವರಿಬ್ಬರ ಹೆಸರುಗಳ ಪಕ್ಕ ಟಿಕ್ ಮಾಡಿದರು. ಐವತ್ತಮೂರು ನಿಮಿಷಕ್ಕೆ ಸೋಮರ್ವೆಲ್ ಕೆಳಗೆ ಬಿದ್ದ. ಇನ್ನೊಂದು ನಿಮಿಷದ ಬಳಿಕ ನಾರ್ಟನ್ ಬಿದ್ದ. ಇಬ್ಬರ ಹೆಸರ ಪಕ್ಕದಲ್ಲಿಯೂ ಸಮಯವನ್ನು ಗುರುತಿಸಿ ಡಾಕ್ಟರ್ ಲ್ಯಾಂಪ್ಟನ್ ಅವರು ಟಿಕ್ ಗುರುತು ಹಾಕಿದರು. ನಂತರ ಅಲ್ಲಿ ಉಳಿದಿದ್ದ ಇನ್ನೂ ಇಬ್ಬರ ಮೇಲೆ ಗಮನ ಹರಿಸಿದರು.

ತಾಪಮಾನವು -40 ಡಿಗ್ರೀ ಆಯಿತು. ಇಪ್ಪತ್ತೊಂಭತ್ತು ಸಾವಿರ ಅಡಿ ಎತ್ತರದಲ್ಲಿರುವ ಒತ್ತಡವೂ ಅಲ್ಲಿ ಏರ್ಪಟ್ಟಿತು. ವಾಯುಯಂತ್ರಗಳು ಗಂಟೆಗೆ ನಲವತ್ತು ಮೈಲಿ ವೇಗದಲ್ಲಿ ಗಾಳಿ ಬೀಸತೊಡಗಿದವು. ಫಿಂಚ್ ಇನ್ನೇನು ಬೀಳುವವನಿದ್ದ. ಆದರೆ ಸುಧಾರಿಸಿಕೊಂಡ. ಇನ್ನು ಮೂರೇ ನಿಮಿಷ ಬಾಕಿ ಇದ್ದಿದ್ದು. ಜಾರ್ಜ್ ಸೋಲನ್ನೊಪ್ಪಿಕೊಳ್ಳಲು ಸಿದ್ಧನಾದ. ಉಸಿರಾಟವು ಕ್ಲಿಷ್ಟವಾಯಿತು. ಫಿಂಚ್ ಗೆದ್ದನೆಂದೇ ತಿಳಿದು ಕೈ ಸಡಿಲಗೊಳಿಸಿದ. ಅಷ್ಟರಲ್ಲಿ ಸೂಚನೆಯೇ ಇಲ್ಲದಂತೆ ಫಿಂಚ್ ಒಂದು ಹೆಜ್ಜೆ ಹಿಂದಿಟ್ಟ. ಇನ್ನೊಂದಿಟ್ಟ. ಮತ್ತೊಂದಿಟ್ಟ. ಜಾರ್ಜ್‍ಗೆ ಇದರಿಂದ ಹುಮ್ಮಸ್ಸು ಹೆಚ್ಚಾಗಿ ಮತ್ತೆ ಕೈ ಬಿಗಿ ಮಾಡಿಕೊಂಡ. ಇನ್ನು ತೊಂಭತ್ತೇ ಸೆಕೆಂಡುಗಳು ಬಾಕಿ ಇದ್ದಿದ್ದು. ಕೊನೆಯ ಬಜ಼ರ್ ಸದ್ದಾಯಿತು! ಮೆಟ್ಟಿಲುಗಳು ನಿಂತವು. ಬಹಳ ಸುಸ್ತಾದ ಫಿಂಚ್ ಮತ್ತು ಜಾರ್ಜ್ ಇಬ್ಬರೂ ತಬ್ಬಿಕೊಂಡರು. ಅಲ್ಲಿದ್ದ ಉಳಿದವರೆಲ್ಲರೂ ಇವರಿಬ್ಬರಿಗೂ ಶುಭ ಕೋರಿದರು. ವೈದ್ಯರುಗಳು ಒಳ ಬಂದು ತಪಾಸಣೆಗಳನ್ನು ನಡೆಸಿದರು.

29,000 ಅಡಿಯನ್ನು ಯಾರಾದರೂ ತಲುಪಿ, ಜಗತ್ತಿನ ಅತ್ಯಂತ ಎತ್ತರದ ಪ್ರದೇಶದ ಮೇಲೆ ಮೊಟ್ಟಮೊದಲ ಬಾರಿಗೆ ನಿಲ್ಲುತ್ತಾರೆಂದರೆ, ಅದು ಫಿಂಚ್ ಮತ್ತು ಜಾರ್ಜ್ ಇಬ್ಬರಲ್ಲೊಬ್ಬರು ಎಂದು ಡಾಕ್ಟರ್ ಲ್ಯಾಂಪ್ಟನ್‍ಗೆ ಖಚಿತವಾಯಿತು.

ಮೌಂಟ್ ಎವೆರೆಸ್ಟ್ ಅನ್ನು ಹತ್ತಬೇಕೆಂದರೆ, ಅದೂ ಪ್ರಪ್ರಥಮ ಬಾರಿಗೆ - ಸಾಕಷ್ಟು ತಯಾರಿಗಳು ಆಗಲೇ ಬೇಕಷ್ಟೆ? ಈ ತಯಾರಿ ನಡೆದದ್ದು 1921ರಲ್ಲಿ. ಅಂದರೆ ಎಡ್ಮಂಡ್ ಹಿಲರಿ ಎವೆರೆಸ್ಟ್ ಶಿಖರವನ್ನೇರುವುದಕ್ಕಿಂತ ಸುಮಾರು ಮೂವತ್ತು ವರ್ಷಕ್ಕೂ ಮುಂಚೆ. ಜಾರ್ಜ್ ಮ್ಯಾಲೋರಿ ತನ್ನ ಕನಸಾದ ಕೋಮೋಲಂಗ್ಮಾ (ಬ್ರಿಟಿಷರಿಟ್ಟ ಹೆಸರಾದ ಎವೆರೆಸ್ಟ್) ಪರ್ವತವನ್ನು ಪ್ರಪ್ರಥಮ ಬಾರಿಗೆ ಏರಿದನೆಂಬ ನಂಬಿಕೆಯು ಬಹಳ ಪರ್ವತಾರೋಹಿಯರಲ್ಲಿದೆ. ಇದನ್ನು ಸ್ವತಃ ಹಿಲರಿಯೇ ಒಪ್ಪುತ್ತಾರಾದರೂ "ಯಶಸ್ವಿ ಪರ್ವತಾರೋಹಣವೆಂದರೆ ಶಿಖರವನ್ನು ತಲುಪಿ ನಂತರ ಸುರಕ್ಷಿತವಾಗಿ ಹಿಂದಿರುಗುವುದು, ಆದರೆ ಮ್ಯಾಲರಿ ಹಿಂದಿರುಗಲಿಲ್ಲವಾದ್ದರಿಂದ ನಮಗೆ ಗೊತ್ತಿಲ್ಲ - ಅವರು ಶಿಖರವನ್ನು ತಲುಪಿದರೋ ಇಲ್ಲವೋ ಎಂದು" ಎಂದು ಹೇಳುತ್ತಾರೆ. ಈ ಕಥೆಯನ್ನು ಜೆಫೆರಿ ಆರ್ಚರ್ ಬಹಳ ಸೊಗಸಾಗಿ ತಮ್ಮ ಕೃತಿ - ಪಾತ್ಸ್ ಆಫ್ ಗ್ಲೋರಿಯಲ್ಲಿ ಹೇಳಿದ್ದಾರೆ. ಜಾರ್ಜ್ ಮ್ಯಾಲರಿ (ಮತ್ತು ಇರ್ವೀನ್) ಇಬ್ಬರೂ ಜಗತ್ತಿನ ಪ್ರಪ್ರಥಮ ಪರ್ವತಾರೋಹಿಗಳು - ಕೋಮೋಲಂಗ್ಮಾ ಶಿಖರವನ್ನೇರಲು - ಎಂಬುದನ್ನು ನಿರೂಪಿಸುತ್ತಾರೆ. ಈ ನಿರೂಪಣೆಯ ಶೈಲಿಯೇ ಸೊಗಸು.

ಕೃತಿಯಲ್ಲಿ ಜಾರ್ಜ್‍ನ ಬಾಲ್ಯದಲ್ಲಿದ್ದ ಪರ್ವತಾರೋಹಣ, ಚಾರಣದ ಆಸಕ್ತಿ ಮತ್ತು ಆ ಕೃತ್ಯಗಳು, ನಂತರ ತಾನು ಇಷ್ಟ ಪಟ್ಟು ಮದುವೆಯಾದ ರುಥ್ ಮತ್ತು ಜಾರ್ಜ್‌ನ ಪ್ರಣಯ ಪ್ರಸಂಗಗಳು, ನಂತರ ಎವೆರೆಸ್ಟ್ ಕಮಿಟಿಯು ಇವನನ್ನು (ಮತ್ತು ತಂಡವನ್ನು) ಆಯ್ಕೆ ಮಾಡಿ ಭಾರತಕ್ಕೆ ಕಳುಹಿಸಿದಾಗ ಇಲ್ಲಿ ಬಂದಾಗ ಒಬ್ಬ ಆಂಗ್ಲನ ದೃಷ್ಟಿಯಲ್ಲಿ ಭಾರತದ ಚಿತ್ರಣ (ನಮ್ಮ ಕಥಾನಾಯಕನೂ ಆಂಗ್ಲನು, ಕಥೆಗಾರನೂ ಆಂಗ್ಲನು), ರುಥ್ ಮತ್ತು ಜಾರ್ಜ್‍ನ ನಡುವಿನ ಪತ್ರ ಸಂಭಾಷಣೆಗಳು, ಹಿಮಾಲಯದ ಮನೋಹರ ಚಿತ್ರಣವು, And of course, ಮೌಂಟ್ ಎವೆರೆಸ್ಟ್ ಶಿಖರವನ್ನು ಪ್ರಪ್ರಥಮ ಬಾರಿಗೆ ಏರುವ ತಂಡವು ಮಾಡಿಕೊಂಡ ಸಿದ್ಧತೆಯ ವಿವರಣೆ - ಪಾತ್ಸ್ ಆಫ್ ಗ್ಲೋರಿಯಲ್ಲಿ ಮೂಡಿವೆ.

ನಾನಂತೂ ಕೋಮೋಲಂಗ್ಮಾ ಏರುವ ಅರ್ಹತೆಯನ್ನು ಪಡೆದಿಲ್ಲ. ಆದರೆ ಪುಸ್ತಕದೊಳಗೆ ಮುಳುಗಿ, ಅನೇಕ ಬಾರಿ ಶಿಖರವನ್ನು ತಲುಪಿ ಬಂದಾಯಿತು.

-ಅ
25.01.2013
11.35PM

Saturday, November 24, 2012

ಕೊಂಬುಗಳು

ಎಂಭತ್ತರ ದಶಕದಲ್ಲಿ ಬಸವನಗುಡಿಯ ಕಹಳೆ ಬಂಡೆಯ ಆಸುಪಾಸಿನಲ್ಲೊಂದು ಗೂಳಿಯ ಭೀತಿಯಿತ್ತು ಜನರಿಗೆ. ಬಹಳ ಕಾಲ ಜನರನ್ನು ಹೆದರಿಸಿದ್ದ ಆ ಗೂಳಿಯು ಸತ್ತ ನಂತರ ಅಲ್ಲಿನ ಜನರು ಕಹಳೆ ಬಂಡೆಯ ಉದ್ಯಾನದಲ್ಲೇ ಅದನ್ನು ಹೂತರು. ಅದರ ಸಮಾಧಿಯು ಈಗಲೂ ಕಹಳೆ ಬಂಡೆಯ ವಾಟರ್ ಟ್ಯಾಂಕ್ ಎದುರು ಇದೆ.

ಗೂಳಿಯ ಭೀತಿಯುಂಟಾಗಲು ಬಹುಶಃ ಎರಡು ಕಾರಣ – ಒಂದು ಅದರ ಗಾತ್ರ, ಎರಡು ಅದರ ಕೊಂಬುಗಳ ಗಾತ್ರ. ಯಾವುದೇ ಪ್ರಾಣಿಯಾಗಲೀ ತನಗಿಂತ ಗಾತ್ರದಲ್ಲಿ ದೊಡ್ಡದಾಗಿರುವ ಪ್ರಾಣಿಯನ್ನು ಕಂಡರೆ ಹೆದರುತ್ತದೆ. ಅದಕ್ಕಾಗಿಯೇ ಕಾಡಿನಲ್ಲಿ ಯಾವುದಾದರೂ ಪ್ರಾಣಿಯು ಎದುರಾದರೆ ನಾವು ಅದಕ್ಕಿಂತಲೂ ದೊಡ್ಡದಾಗಿದ್ದೇವೆಂದು ತೋರ್ಪಡಿಸಿಕೊಳ್ಳಬೇಕು ಎಂದು ಹೇಳುವುದು. ಇನ್ನು ಗೂಳಿಯ ಕೊಂಬುಗಳನ್ನು ನೋಡಿದರೆ ಯಾರಿಗೆ ತಾನೆ ಭಯವಾಗುವುದಿಲ್ಲ? ಇಂಗ್ಲೀಷಿನಲ್ಲಿ “Take the bull by the horns” ಎಂಬ ಇಡಿಯಮ್ ಇದೆ. ಗೂಳಿಯ ಕೊಂಬನ್ನು ಹಿಡಿದುಕೊಂಡು ಅದನ್ನು ಪಳಗಿಸು ಎಂದರೆ ಅತ್ಯಂತ ಕಷ್ಟದ ಸಮಸ್ಯೆಯು ಎದುರಾದಾಗ ನೇರವಾಗಿ, ಧೈರ್ಯವಾಗಿ, ಕೊಂಚವೂ ಹಿಂಜರಿಯದೆ ಮುನ್ನುಗ್ಗು ಎಂದು. ಗೂಳಿಯ ಕೊಂಬನ್ನು ಹಿಡಿದವನು ಏನನ್ನು ಬೇಕಾದರೂ ಎದುರಸಬಲ್ಲನು! (ಜೀವಂತ ಗೂಳಿಯಾಗಿರಬೇಕಷ್ಟೆ.)

ಗೂಳಿಯು ಅನೇಕ ಕೊಂಬುಗಳುಳ್ಳ ಪ್ರಾಣಿಗಳಂತೆ ಆತ್ಮರಕ್ಷಣೆಗೆ ತನ್ನ ಕೊಂಬನ್ನು ಬಳಸಿಕೊಳ್ಳುತ್ತೆ. ಜಿಂಕೆ, ದನ, ಗೇಂಡಾಮೃಗ, ಟಗರು, ಜಿರಾಫ್ – ಎಲ್ಲವೂ ಅಷ್ಟೆ. ಕ್ರೂಗರ್ ಅರಣ್ಯದಲ್ಲಿ ನಡೆದ ಈ ಯುದ್ಧದ ವಿಡಿಯೋ ಅಂತರ್ಜಾಲದಲ್ಲಿ ಬಹಳ ಪ್ರಸಿದ್ಧ. ಕೊಂಬುಗಳಿಲ್ಲದಿದ್ದರೆ ಕ್ರೂಗರ್-ನ ಈ ಕಾಡೆಮ್ಮೆಗಳು ಈ ಯುದ್ಧ ಮಾಡಲು ಆಗುತ್ತಿತ್ತೇ?

http://speaktonature.blogspot.in/2007/08/blog-post_27.html

ಈಗಲೂ ಅದೆಷ್ಟೋ ಹಳ್ಳಿಗಳಲ್ಲಿ ಟಗರುಗಳ ಜಗಳವನ್ನು ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಇಂಥ ಆಚರಣೆಗಳಿಗೆ ಧಿಕ್ಕಾರ ಹೇಳುತ್ತ ಈ ಪ್ರಾಣಿಗಳು ಯಾಕೆ ಕೊಂಬು ಮುರಿಯುವ ಹಾಗೆ ಜಗಳವಾಡುತ್ತವೆಂದು ತಿಳಿದುಕೊಳ್ಳೋಣ.

ಜೀವಿಗಳೆಲ್ಲವೂ ವರ್ತಿಸುವ ರೀತಿಯನ್ನು ಅಧ್ಯಯನ ಮಾಡಿದ ಚಾರ್ಲ್ಸ್ ಡಾರ್ವಿನ್ ಮೂರು ಕ್ರಿಯೆಗಳನ್ನು ಹೆಸರಿಸುತ್ತಾರೆ – (ಇದರ ಪಾಠವು ನಮಗೆ ಹೈಸ್ಕೂಲಿನಲ್ಲೇ ಆಗಿರುತ್ತೆ.)

  1. Struggle for existence – ಅಸ್ತಿತ್ವಕ್ಕಾಗಿ ಹೋರಾಟ
  2. Survival of the fittest – ಅತ್ಯಂತ “ಬಲಶಾಲಿ”ಗೇ ಜಯ – ಉಳಿಗಾಲ.
  3. Natural selection of species – ಪ್ರಕೃತಿಯ ಆಯ್ಕೆ

ಅಸ್ತಿತ್ವಕ್ಕಾಗಿ ಹೋರಾಟ ಮಾಡಲು ಪ್ರತಿಯೊಂದು ಜೀವಿಯ ಜೊತೆ ಪ್ರತಿ ಕ್ಷಣವೂ ಸ್ಪರ್ಧಿಸುತ್ತಿರಬೇಕಾಗುತ್ತೆ. ಟಗರುಗಳ ಗುಂಪಿನಲ್ಲಿ ಜಗಳವಾಯಿತೆಂದರೆ ಬಲಶಾಲಿ ಯಾರೆಂದು ನಿರ್ಧರಿಸಲು ಸ್ಪರ್ಧೆ ನಡೆಯುತ್ತಿದೆಯೆಂದರ್ಥ. ಬೇರೆ ಪ್ರಾಣಿಯ ಜೊತೆ ಜಗಳವಾಯಿತೆಂದರೆ ತನ್ನ ಉಳಿವಿಗಾಗಿ ಸ್ಪರ್ಧೆ ನಡೆಯುತ್ತಿದೆಯೆಂದರ್ಥ. ಒಟ್ಟಿನಲ್ಲಿ ನಿರಂತರ ಸ್ಪರ್ಧೆಯಲ್ಲಿ ಜೀವಿಗಳು ತೊಡಗಿರುತ್ತವೆ.  ತಾನು ಬಲಶಾಲಿಯೆಂದು ನಿರೂಪಿಸಲು ಉಳಿದ ಪ್ರಾಣಿಗಳನ್ನು ಕೊಲ್ಲಲೂ ಸಿದ್ಧವಾಗಿರುತ್ತೆ.

ಸಾಮಾನ್ಯವಾಗಿ ಗಂಡು ಪ್ರಾಣಿಗಳಲ್ಲಿಯೇ ಕೊಂಬುಗಳು ಕಾಣಿಸುವುದಾಗಿದ್ದೂ, ಅವು ಹೆಣ್ಣು ಪ್ರಾಣಿಗಳನ್ನು ಒಲಿಸಿಕೊಳ್ಳಲು ಹೀಗೆ ಕೊಂಬುಗಳನ್ನು ಬಳಸಿ ಜಗಳವಾಡುತ್ತವೆ. ಜಗಳವು ಎಷ್ಟು ತೀವ್ರವಾಗಿರುತ್ತವೆಂದರೆ ಎರದು ಟಗರುಗಳ, ಅಥವಾ ಎರಡು ಕಡವೆಗಳು ದ್ವಂದ್ವ ಯುದ್ಧ ಮಾಡುತ್ತಿವೆಯೆಂದರೆ ಕೊಂಬುಗಳ ನಡುವೆ ಬೆಂಕಿಯ ಕಿಡಿಗಳು ಬರುತ್ತವೆ, ಕೊಂಬುಗಳು ಮುರಿದು ಹೋಗುತ್ತವೆ, ಅನೇಕ ವೇಳೆ ಪ್ರಾಣವೂ ಹೋಗುತ್ತೆ. ಯಾವ ಗಂಡು ಗೆಲ್ಲುತ್ತೋ ಅದನ್ನು ಹೆಣ್ಣು ಪ್ರಾಣಿಯು ಒಪ್ಪಿಕೊಳ್ಳುತ್ತೆ.

ಕೊಂಬುಗಳು ಕೆರಾಟಿನ್ ಎಂಬ ವಸ್ತುವಿನಿಂದ ಮಾಡಲ್ಪಟ್ಟಿದ್ದೂ, ಜೊತೆಗೆ ಮೂಳೆಯ ಮೂಲವಿರುವುದರಿಂದ ಅಷ್ಟು ಗಟ್ಟಿಯಾಗಿರುತ್ತವೆ. ಗೇಂಡಾಮೃಗದ ಕೊಂಬುಗಳಲ್ಲಿ ಮೂಳೆಯ ಅಂಶವಿಲ್ಲದಿರುವುದರಿಂದ ಅವು ಕೂದಲು ಮತ್ತು ಉಗುರುಗಳಂತೆಯೇ. ಅನೇಕ ಜಿಂಕೆಗಳಲ್ಲಿ ಕಾಣಿಸುವ ಕೊಂಬುಗಳು ವಾಸ್ತವಾಗಿ ಕೊಂಬುಗಳಲ್ಲ. ಅವುಗಳಲ್ಲಿ ಕೆರಾಟಿನ್ ಅಂಶವಿಲ್ಲದೇ ಇರುವುದರಿಂದ ಅವುಗಳನ್ನು ಕೊಂಬುಗಳಲ್ಲವೆನ್ನಬಹುದು. ಸಾಮಾನ್ಯವಾಗಿ ಈ ಜಿಂಕೆಯ ಕೊಂಬುಗಳು ಉದುರಿ ಹೋಗಿ ಮತ್ತೆ ಬೆಳೆಯುತ್ತವೆ.

ಅಂತೂ ಕೊಂಬುಗಳು ಪ್ರಾಣಿಗಳಿಗೇನೋ ಬಹಳ ಉಪಯೋಗವಾಗುವ ಅಂಗಗಳು. ಪ್ರಾಣಿಗಳ ಕೊಂಬುಗಳು ಮನುಷ್ಯರಿಗೂ ಸಾಕಷ್ಟು ಉಪಯೋಗಗಳು, ಬಹುಪಾಲು ದುರುಪಯೋಗಗಳು ಆಗಲೇ ಬೇಕಷ್ಟೆ? ಬೇಟೆಯಾಡಿ ಕೊಂಬುಗಳನ್ನು ಗೋಡೆಯ ಮೇಲೆ ನೇತುಹಾಕಿಕೊಳ್ಳುವ ಹುಚ್ಚು ಬೇಟೆಗಾರರು, ಜಗತ್ತಿನ ಪ್ರತಿಯೊಂದು ಪ್ರಾಣಿಯಿಂದಲೂ ಔಷಧ ತಯಾರಿಸಬಹುದೆಂಬ ಚೀನೀ ನಂಬಿಕಸ್ಥರು, ಮನೆಯ ಪೀಠೋಪಕರಣಗಳನ್ನು ವಿಜೃಂಭಣೆಯಿಂದ ಮಾಡಿಸಿಕೊಳ್ಳುವವರು, ಕೆಲವು ಸಂಗೀತ ವಾದ್ಯಗಳ ತಯಾರಕರು - ಕೊಂಬುಗಳನ್ನು ಬಳಕೆ - ದುರ್ಬಳಕೆ ಮಾಡಿಕೊಳ್ಳುತ್ತಲೇ ಇದ್ದಾರೆ. ಪ್ರಾಣಿಗಳ ಅಂಗಗಳನ್ನು ಆಯಾ ಪ್ರಾಣಿಗಳಿಗಿಂತ ಮನುಷ್ಯರೇ ಹೆಚ್ಚು ಬಳಸುವುದರಿಂದ ಪ್ರಾಣಿಗಳು ನಮ್ಮನ್ನು ಪ್ರಶ್ನಿಸಬಹುದು: "ಏನು ನೀವು ಮನುಷ್ಯರಾದ ಮಾತ್ರಕ್ಕೆ , ನಿಮಗೇನು ಕೊಂಬು ಬಂದಿದೆಯಾ?" ಎಂದು.

-ಅ
೨೪. ೧೧.೨೦೧೨

Saturday, June 23, 2012

ಇದು ಅಪ್ಪನ ಕಥೆಯೋ ಅಮ್ಮನ ಕಥೆಯೋ?ಹೆಲೋ, ನಾನು ನೀಮೋ!  ನನ್ನ ಬಗ್ಗೆ ಫೈಂಡಿಂಗ್ ನೀಮೋ ಚಿತ್ರದಲ್ಲಿ ನೀವು ತಿಳಿದಿದ್ದೀರಷ್ಟೆ? ಅಲ್ಲಿ ಹೇಳಿರದ ಕೆಲವು ವಿಷಯಗಳ ಬಗ್ಗೆ ಬಹಳ ದಿನಗಳಿಂದಲೂ ಯೋಚಿಸುತ್ತಿದ್ದೆ. ಆ ಚಿತ್ರದಲ್ಲೇನೋ ನಾನಿನ್ನೂ ಚಿಕ್ಕ ಮಗು - ಗಂಡು ಮಗು, of course. ನಮ್ಮಲ್ಲಿ ಮೊಟ್ಟೆಯಿಂದ ಹೆಣ್ಣು ಹುಟ್ಟುವುದೇ ಇಲ್ಲ. ಹುಟ್ಟುತ್ತಾ ನಾವೆಲ್ಲರೂ ಗಂಡುಗಳೇ!

ಆದರೆ ಈಗ ನೋಡಿ, ನಾನು ಬೆಳೆದಿದ್ದೇನೆ. ನಮ್ಮಪ್ಪ ಮಾರ್ಲಿನ್ನಿನಂತೆಯೇ ಆಗಿದ್ದೇನೆ. ಎಷ್ಟು ಬೆಳೆದಿದ್ದೇನೆ ಎಂದರೆ, ನಮ್ಮ ಗುಂಪಿನಲ್ಲಿ ನಾನೇ ಅತ್ಯಂತ ಬಲಶಾಲಿ, ಶಕ್ತಿಶಾಲಿ! ಆದ್ದರಿಂದ ನಾನು ಈಗ ಹೆಣ್ಣಾಗಿಬಿಟ್ಟೆ! ನಿನ್ನೆಯವರೆಗೂ ನಾನು ನಮ್ಮ ಗುಂಪಿನ ಅತ್ಯಂತ ಬಲಶಾಲಿ ಗಂಡಾಗಿದ್ದೆ. ಇವತ್ತು ನನಗೆ ಈ ಬಡ್ತಿ ಸಿಕ್ಕಿತು. ನನ್ನ ಹೆಂಡತಿ ಸತ್ತು ಹೋದಳು. ವಂಶ ಮುಂದುವರಿಯಬೇಕಲ್ಲವೇ? ಅವಳ ಜಾಗವನ್ನು ಈಗ ನಾನು ಅಲಂಕರಿಸಿದ್ದೇನೆ. ಒಂದು ವಿಧದಲ್ಲಿ ಪಟ್ಟಾಭಿಷೇಕವಾಯಿತೆಂದೇ ಹೇಳಬೇಕು. ನನ್ನ ಜಾಗಕ್ಕೆ ಬೇರೊಬ್ಬ ಬಂದಿದ್ದಾನೆ. ನಾಳೆ ನಾನು ಸತ್ತಮೇಲೆ ಅವನು ಹೆಣ್ಣಾಗುತ್ತಾನೆ! ಕಳೆದು ಹೋದುದಕ್ಕೆ ಚಿಂತಿಸದೆ ಸದ್ಯಕ್ಕೆ ನಾವಿಬ್ಬರೂ ಚೆನ್ನಾಗಿಯೇ ಸಂಸಾರ ಮಾಡಿಕೊಂಡಿದ್ದೇವೆ.ನಮ್ಮ ಸಂಸಾರದ ವಿಷಯವನ್ನು ನಿಮಗೆ ಒಂದಿಷ್ಟು ಹೇಳಬೇಕು. ನಾನು ಗ್ರೇಟ್ ಬ್ಯಾರಿಯರ್ ರೀಫ್‍ನಿಂದ ಆಚೆಗೆ ಕಳೆದು ಹೋಗಿದ್ದು, ಏನೇನು ಸಾಹಸ ಮಾಡಿದ್ದೆನೆಂಬುದನ್ನು ನೀವು ನೋಡಿದ್ದೀರಿ. ಅದೆಲ್ಲಾ ಮುಗಿದ ಮೇಲೆ ನಾನು ಬೆಳೆದು ದೊಡ್ಡವನಾದ ಮೇಲೆ, ಅಂದರೆ ನಮ್ಮ ಗುಂಪಿನಲ್ಲಿ ನಾನೇ ಅತ್ಯಂತ ಬಲಶಾಲಿ ಗಂಡಸು ಎಂದು ತೀರ್ಮಾನವಾದ ಮೇಲೆ, ನೆನ್ನೆಯವರೆಗೂ ನನ್ನ ಹೆಂಡತಿಯಾಗಿದ್ದಳಲ್ಲಾ - ಅವಳ ಹೆಸರು ಹೇಳಲು ನನಗೆ ಬೇಸರವಾಗುತ್ತೆ, ಕ್ಷಮಿಸಿ - ಅವಳ ಜೊತೆ ಬಹಳ ಸಂತೋಷದಿಂದಿದ್ದೆ. ನಾವು ನಮ್ಮ ವಂಶ ಮಿತ್ರರಾದ ಅನಿಮೋನಿಗಳ ಜೊತೆಗೇ ಬದುಕುವುದಾದ್ದರಿಂದ,  ಅವುಗಳ ಕೊಂಡಿಗಳ ಮಧ್ಯದಲ್ಲೇ ನಮ್ಮ ಗೂಡೂ ಇದ್ದವು. ಹೀಗೆ ನಾಲ್ಕೈದು ಅನಿಮೋನಿಗಳಲ್ಲಿ ನಮ್ಮ ಮನೆಯಿದ್ದುದರಿಂದ, ನನ್ನಾಕೆಯು ಹೋದಲ್ಲೆಲ್ಲಾ ಮೊಟ್ಟೆಯಿಟ್ಟು ಬರುತ್ತಿದ್ದಳು. ನಾನು ಅವಳನ್ನು ಹಿಂಬಾಲಿಸುತ್ತ ಹೋಗಿ, ಅವಳು ಮೊಟ್ಟೆಯಿಟ್ಟ ಮೇಲೆ ಅವುಗಳನ್ನು ಫಲವತ್ತು ಮಾಡುವುದು, ಸುರಕ್ಷಿತವಾಗಿ ನೋಡಿಕೊಳ್ಳುವುದು, ಶತ್ರುಗಳಿಂದ ರಕ್ಷಿಸುವುದು, ನನ್ನ ರೆಕ್ಕೆಗಳಿಂದ ಗಾಳಿ ಬೀಸುವುದು, ಕಾವು ಕೊಟ್ಟು ಮರಿ ಮಾಡುವುದು - ಇವೆಲ್ಲವೂ ನನ್ನ ಕೆಲಸವೇ ಆಗಿತ್ತು. ಸುಮಾರು ಎಂಟು ನೂರು ಮೊಟ್ಟೆಗಳನ್ನು ನೋಡಿಕೊಳ್ಳುತ್ತಿದ್ದೆ! ಜೊತೆಗೆ ನನ್ನ ಮಿತ್ರ ಅನಿಮೋನಿ ಕೂಡ ಇರುತ್ತಿದ್ದ - ತನ್ನ ವಿಷಪೂರಿತ ಕೊಂಡಿಗಳನ್ನು ತೆರೆದು! ನನ್ನ ಮತ್ತು ಅನಿಮೋನಿಯ ಸ್ನೇಹದ, ಸಹಬಾಳ್ವೆಯ ವಿಷಯವನ್ನು ಇನ್ನು ಯಾವಾಗಲಾದರೂ ಹೇಳುತ್ತೇನೆ.ನಾನು ಇಲ್ಲಿಯವರೆಗೆ ಏನು ಮಾಡುತ್ತಿದ್ದೆನೋ, ಆ ಕೆಲಸವನ್ನು ಮಾಡಲು ಈಗ ಬೇರೆಯವನು ಬಂದಿದ್ದಾನೆ. ಈಗ ಮೊಟ್ಟೆಯಿಡುವ ಕರ್ತವ್ಯ ನನ್ನದು, ನನ್ನನ್ನು ಹಿಂಬಾಲಿಸಿ, ನನ್ನ ಮೊಟ್ಟೆಗಳನ್ನು ಜೋಪಾನ ಮಾಡಿ ಮರಿ ಮಾಡುವ ಕೆಲಸ ಅವನದು.

ನನ್ನ ಒಂದು ತೃಪ್ತಿಯೆಂದರೆ, ಅಂತೂ ನಾನು ಹೆಣ್ಣಾದೆನಲ್ಲಾ ಎಂದು. ಎಷ್ಟು ಕ್ಲೌನ್ ಮೀನುಗಳಿಗಿರುತ್ತೆ ಹೇಳಿ ಈ ಭಾಗ್ಯ!

........................................................................................................................

ಋಣ:

http://tolweb.org/treehouses/?treehouse_id=3390

http://www.imdb.com/title/tt0266543/


.....................................................................................................................


- ಅ
23.06.2012
12.10PM

Monday, November 07, 2011

ಅಪ್ಪನ ಕಥೆ - ೯ - ರಿಯಾ

ರಿಯಾ ಮನೆ ಎಂದರೆ ಇದೇನೆ. ಬನ್ನಿ.

ಈಗ ಒಳಗೆ ಬರಬಹುದು. ಮೂರು ತಿಂಗಳುಗಳ ಕೆಳಗೆ ಬಂದಿದ್ದರೆ, ಗೊತ್ತಿಲ್ಲ, ಬಹುಶಃ ಕೊಂದುಬಿಡುತ್ತಿದ್ದೆ. ಪುಣ್ಯ, ಈಗ ಬಂದಿದ್ದೀರಿ. ಬನ್ನಿ.

ಮೂರು ತಿಂಗಳುಗಳ ಕೆಳಗೆ ನೀವೇ ಏನು, ನನ್ನ ಹೆಂಡತಿ ಬಂದಿದ್ದರೂ ನಾನು ಕೊಂದು ಬಿಡುತ್ತಿದ್ದೆ. ಮೊಟ್ಟೆಯನ್ನು ಕಾಯುವುದೆಂದರೇನು ಸಾಮಾನ್ಯವಾದ ವಿಷಯವೇ? ಕಳೆದ ಬಾರಿ ಹೀಗೇ, ಯಾರೋ ಒಂದಷ್ಟು ಜನ ಬಂದಿದ್ದರು. ಚಳಿಗಾಲ ಮುಗಿದಿತ್ತು. ನಾನು ಒಂಟಿಯಾಗಿರಬೇಕಾದ ಸಮಯ. ನನ್ನ ಹೆಂಡತಿಯರು ಮೊಟ್ಟೆಗಳನ್ನಿಟ್ಟಿದ್ದರು. ಸುಮಾರು ನಲವತ್ತೈದು ಮೊಟ್ಟೆಗಳಿದ್ದವು ನಮ್ಮ ಮನೆಯಲ್ಲಿ. ಮೊಟ್ಟೆಯಿಟ್ಟು ಮನೆಯಲ್ಲಿರದೆ ಕಾಡು ಮೇಡು ತಿರುಗಲು ಹೋಗಿದ್ದರು! ಅದು ಅವರುಗಳ ಹವ್ಯಾಸ. ಮೊಟ್ಟೆಗಳಿಗೆ ಕಾವು ಕೊಡುವುದು ಹೆಣ್ಣಿನ ಕೆಲಸವೇನಲ್ಲ, ಅದು ನನ್ನ ಕೆಲಸ ತಾನೆ?ನಾನೇನೋ ನನ್ನ ಕೆಲಸವನ್ನು ಮಾಡುತ್ತಲೇ ಇದ್ದೆ, ಆದರೆ, ಬಂದಿದ್ದರಲ್ಲ ಯಾರೋ ಒಂದಷ್ಟು ಜನ, ನಾನು ಒಂಟಿಯಾಗಿ ಮೊಟ್ಟೆಯನ್ನೇ ನೋಡುತ್ತ ಕನಸು ಕಾಣುತ್ತಿದ್ದಾಗ, ಬಂದೂಕ ತೋರಿಸಿ ನನ್ನನ್ನು ಕೊಲ್ಲಲು ಸಿದ್ಧರಾಗಿದ್ದರು! ಹೇಗೋ ನಾನು ತಪ್ಪಿಸಿಕೊಂಡೆ, ಆ ಕಥೆ ಈಗ ಯಾಕೆ. ಆದರೆ ನನ್ನ ಮುದ್ದಿನ ಕನಸುಗಳು ಮಾತ್ರ ಆ ಜನಗಳ ಪಾಲಾಗಿ ಹೋಯಿತು. ನಮ್ಮ ಮೊಟ್ಟೆಗಳು ಅಷ್ಟು ರುಚಿಯಂತೆ, ನನ್ನನ್ನು ಕೊಂದಾದರೂ ತಿನ್ನುವಷ್ಟು!

ಚಳಿಗಾಲದಲ್ಲಿ ಬಂದಿದ್ದರೆ ನಾನು ಮನೆಯಲ್ಲೆಲ್ಲಿರುತ್ತಿದ್ದೆ? ಜಿಂಕೆಗಳ ನಡುವೆಯೋ ಕಡವೆಗಳ ಗುಂಪಿನಲ್ಲೋ ಹುಡುಕಬೇಕಿತ್ತು. ಹುಡುಕುತ್ತಿದ್ದರೇನೋ, ಚರ್ಮ ಸಿಗುತ್ತೆ ಅಂತ!

ಚಳಿಗಾಲ ಮುಗಿದಾಗಿನಿಂದ ನನ್ನ ಕೆಲಸ ಶುರು! ನನ್ನ ಶಕ್ತಿಯ ಬಗ್ಗೆ ಅರಿವು ಮೂಡಬೇಕಾದರೆ, ನನ್ನ ಹೆಂಡತಿಯರನ್ನು ಕೇಳಿ. ಬೇರೆ ಯಾವ ಪಕ್ಷಿಸಂಕುಲದವರಿಗೂ ನನ್ನಷ್ಟು ಶಕ್ತಿ ಇರಲು ಸಾಧ್ಯವೇ ಇಲ್ಲ. ಹೇಗೆ ಅಂತೀರಾ? ಪ್ರತಿ ನಾಲ್ಕು ತಿಂಗಳಿಗೆ ನನ್ನ ಹೆಂಡತಿಯರು ಮೊಟ್ಟೆಯನ್ನಿಡುತ್ತಾರೆ. ನಲವತ್ತೈದು ಐವತ್ತು ರಿಯಾಸ್ತ್ರೀಗಳು! ಈ ಐವತ್ತೂ ರಿಯಾಸ್ತ್ರೀಗಳೂ ನಾನು ನಿರ್ಮಿಸಿರುವ ಈ ಒಂದೇ ಗೂಡಿನಲ್ಲಿಯೇ ಮೊಟ್ಟೆಯನ್ನಿಡುತ್ತಾರೆ! ಆ ಐವತ್ತು ಮೊಟ್ಟೆಗಳ ಹೊಣೆಯೂ ನನ್ನದೇ. ಐವತ್ತು ಹೆಂಡತಿಯರ ಹೊಣೆಯೂ ಸಹ! ನಾನು ಶಕ್ತಿವಂತನಲ್ಲದೇ ಇನ್ನೇನು?

..............................................................................................................................


ರಿಯಾ - Rhea americana ಎಂಬ ಅಮೇರಿಕಾದ ಪಕ್ಷಿಯು ಹಾರಲು ಬಾರದಿದ್ದರೂ ಬಹಳ ಶಕ್ತಿಯನ್ನು ಹೊಂದಿರುವಂಥದ್ದು. ನಾಲ್ಕು ಅಡಿ ಎತ್ತರದ ಈ ಪಕ್ಷಿ ಉಷ್ಟ್ರಪಕ್ಷಿಯ ಜಾತಿಗೆ ಸೇರಿದ್ದು. ಹಾಗಾಗಿ ಬಲವಾದ ಕಾಲುಗಳನ್ನುಳ್ಳ ಇದು ಬಹಳ ವೇಗವಾಗಿ ಓಡಬಲ್ಲದು. ಇದರ ಚರ್ಮಕ್ಕಾಗಿ, ಮೊಟ್ಟೆಗಳಿಗಾಗಿ ಬೇಟೆಯನ್ನೂ ಸಹ ಆಡುತ್ತಾರಾದ್ದರಿಂದ ಈ ಪಕ್ಷಿಯು ಅಳಿವಿನ ಅಂಚಿನಲ್ಲಿದೆಯೆಂಬುದು ದುರಂತದ ಸಂಗತಿ.
-ಅ
07.11.2011
9.30PM

Friday, June 24, 2011

ಮಾತೃ ದೇವೋ ಭವ - ಅನಾಥ ರಕ್ಷಕಿ

ನಮ್ಮಲ್ಲಿ ಸಾವಿರಾರು ಪ್ರಭೇದಗಳಿರಬಹುದು. ಎಲ್ಲರಿಗಿಂತಲೂ ನಾವು ಮಿಗಿಲು! ನಾವು “ರಾಜ” ವಂಶಕ್ಕೆ ಸೇರಿರುವವರು! ಇಂಗ್ಲೀಷಿನಲ್ಲಿ “ಕಿಂಗ್” ಎಂದೇ ನಮ್ಮನ್ನು ಕರೆಯುತ್ತಾರೆ.

ಸರಿಸೃಪಗಳಲ್ಲೆಲ್ಲ ಜನರು ಬಹಳವಾಗಿ ಹೆದರುವುದು ನಮ್ಮನ್ನು ಕಂಡೇ. ವಿಷವಿರಲಿ, ಬಿಡಲಿ - ಜನರಿಗೆ ನಾವೆಂದರೆ ಭಯ. “ಜನ್ಮ ಕೊಟ್ಟ ತಾಯಿ ವಿಷ ಕೊಡುವಳೇ?” ಎಂದು ಏನೇನೋ ಭಾವನಾತ್ಮಕ ಮಾತುಗಳನ್ನು ನೀವು ಕೇಳಿರಬಹುದು. ಆದರೆ ನಮ್ಮ ತಾಯಿಯ ದೆಸೆಯಿಂದಲೇ ನಮ್ಮಲ್ಲಿ ವಿಷವೂ ನೆಲೆಯೂರಿರುವುದು. ಸರ್ಪಗಳೆಂದರೆ ಏನು ಸಾಮಾನ್ಯವೇ? ಹೇಗೂ ಇರಲಿ, ನಮ್ಮ ಅಮ್ಮನ ಮಹದ್ವಿಷಯವನ್ನು ಹೇಳುವ ಮುನ್ನ, ನಮ್ಮ ಸಂಬಂಧಿಕರ ಬಗ್ಗೆ ಒಂದಿಷ್ಟು ತಿಳಿಸುತ್ತೇವೆ.

ನಮ್ಮ ಅಮ್ಮನಿಗೆ ಇರುವ ಹಾಗೆ ನಮ್ಮ ಯಾವುದೇ ಸಂಬಂಧಿಕರುಗಳ ತಾಯಂದಿರಿಗೂ ಮಕ್ಕಳ ಬಗೆಗೆ ಪ್ರೇಮವಿರುವುದನ್ನು ಕಾಣೆವು. ಹಾಗಂತ ದ್ವೇಷವೇನೂ ಇಲ್ಲ. ಯಾರೋ ಸುಳ್ಳು ಸುದ್ದಿ ಹಬ್ಬಿಸಿ ನಾಣ್ನುಡಿಯನ್ನೂ ಮಾಡಿದ್ದಾರೆ - ಹಾವುಗಳು ತಮ್ಮ ಮೊಟ್ಟೆಗಳನ್ನು ತಾವೇ ತಿನ್ನುತ್ತವೆ ಎಂದು. ಎಲ್ಲಾದರೂ ಉಂಟೇ? ಮೊಟ್ಟೆಯಿಡುವುದು ಮರಿಯಾಗಲೆಂದು, ಸಂತತಿ ಬೆಳೆಯಲೆಂದು. ತನ್ನ ಕರುಳಿನ ಕುಡಿಯನ್ನೇ ತಾಯಿಯೆಂದಾದರೂ ತಿಂದಾಳೇ? ಈ ಮಹದುಪಕಾರವನ್ನು ನಮ್ಮ ಸಂಬಂಧಿಕರುಗಳ ತಾಯಂದಿರು ಮಾಡುವುದರಿಂದ ಮೊಟ್ಟೆಯೊಡೆದು ಹೊರಗೆ ಬರುವ ವೇಳೆಗೆ ಅವರು ಅನಾಥರೇ ಸರಿ. ಪಕ್ಷಿಗಳ ಹಾಗೆ ಸರ್ಪಗಳ ಮೊಟ್ಟೆಗಳಿಗೆ ಕಾವು ಕೊಡುವ ಅಗತ್ಯವೇನಿದೆ?

ಕಾವು ಕೊಡುವ ಅಗತ್ಯ ನಮ್ಮ ಹತ್ತಿರದ ಸಂಬಂಧಿ ಹೆಬ್ಬಾವುಗಳ ಮೊಟ್ಟೆಗಳಿಗಿವೆ. ಅದೂ ಕೂಡ ಹೆಚ್ಚಿಗೆ ದಿನಗಳೇನಿಲ್ಲ. ಸ್ವಲ್ಪ ಕಾಲವಾದ ಮೇಲೆ ಹೆಬ್ಬಾವು ಮರಿಗಳೂ ಕೂಡ ಅನಾಥರೇ.

ನಾವು ಕಾಳಿಂಗ ಸರ್ಪಗಳು! ನಮ್ಮನ್ನೂ ಅನಾಥರನ್ನಾಗಿಸಿ ಎಲ್ಲೋ ಹೋಗಿ, ಮುಂದಿನ ವರ್ಷ ಮತ್ತೆ ಮೊಟ್ಟೆಯಿಡುವ ನಮ್ಮಮ್ಮ ನಮ್ಮ ಪಾಲಿಗೆ ದೇವರಂತೆ ಹೇಗೆ ಎಂದು ಯೋಚಿಸುತ್ತೀರಾ? ಅಥವಾ, ನಮ್ಮೆಲ್ಲ ಸಂಬಂಧಿಕರಿಗಿಂತ ನಮ್ಮ ತಾಯಿಯು ಹೇಗೆ ವಿಶೇಷ ಎಂದು ಕೇಳುತ್ತೀರಾ?ಸರ್ಪಗಳಲ್ಲೇ ಯಾರೂ ಕೈಹಾಕದ ಸಾಹಸ ಒಂದನ್ನು ನಮ್ಮಮ್ಮ ಮಾಡಿದ್ದಾಳೆ - ನಾವು, ಮೂವತ್ತು ಒಡಹುಟ್ಟಿದವರೂ, ಮೊಟ್ಟೆಯೊಳಗಿರುವಾಗ ನಮಗೊಂದು ಮನೆ, ಅರ್ಥಾತ್ ಗೂಡು ನಿರ್ಮಿಸಿದ್ದಾಳೆ! “ಈ ಪರಿಯ ಸಾಮರ್ಥ್ಯ ಬೇರಾವ ಅಮ್ಮನಲು ಕಾಣೆವು ನಮ್ಮಮ್ಮನಿಗಲ್ಲದೆ!”

ನಮ್ಮೆಲ್ಲರನ್ನೂ - ಅಂದರೆ ಮೊಟ್ಟೆಗಳನ್ನು - ಗೂಡಿನಲ್ಲಿ ಭದ್ರವಾಗಿರಿಸಿ, ಅತಿ ತೇವಾಂಶವುಳ್ಳ ಪ್ರದೇಶವಾಗಿರುವುದರಿಂದ ನಮ್ಮನ್ನು ಬೆಚ್ಚಗೆ ತಬ್ಬಿಕೊಂಡು ಎರಡುವರೆ ತಿಂಗಳು ಕಾದಿದ್ದಾಳೆ, ರಕ್ಷಿಸಿದ್ದಾಳೆ! ಇದಕ್ಕಿಂತಲೂ ಅವಳು ಮಾಡಿರುವ ಅತ್ಯದ್ಭುತ ಕೆಲಸವೆಂದರೆ ನಾವು ಹುಟ್ಟುವ ಕೆಲವೇ ಸಮಯಗಳ ಮುಂಚೆ ನಮ್ಮನ್ನು ತೊರೆದು ಹೋಗಿರುವುದು.

ಹದಿನೈದರಿಂದ ಇಪ್ಪತ್ತು ಅಡಿ ಉದ್ದ ಇದ್ದಳೇನೋ ಅನ್ನಿಸುತ್ತೆ ಅಮ್ಮ, ನಮಗೆ ಯಾರಿಗೂ ಗೊತ್ತಿಲ್ಲ. ನಾವು ಅವಳನ್ನು ಕಂಡಿದ್ದರೆ ತಾನೆ? ಹೇಳೆದೆವಲ್ಲ, ನಾವು ಹುಟ್ಟುವ ಕೆಲವೇ ಸಮಯದ ಮುಂಚೆ ನಮ್ಮನ್ನೆಲ್ಲಾ ಬಿಟ್ಟು ಹೊರಟುಹೋಗಿದ್ದಾಳೆಂದು. ಅವಳಲ್ಲಿರುವಷ್ಟು ವಿಷ ನಮ್ಮಲ್ಲಿಲ್ಲದಿರಬಹುದು. ಆದರೆ ಮನುಷ್ಯರನ್ನು ಸಲೀಸಾಗಿ ಕೊಲ್ಲಬಲ್ಲಷ್ಟು ವಿಷ ಅಗತ್ಯವಾಗಿ ಇದೆ.

ವಿಷಯಕ್ಕೆ ಬರೋಣ. ಅಮ್ಮ ನಮ್ಮನ್ನು ಬಿಟ್ಟು ಹೋಗಿರುವುದು ಏಕೆ? ಮತ್ತು ಅದು ಮಹತ್ತಿನ ಕೃತ್ಯ ಎಂದು ನಾವು ಕರೆದು, ಅಮ್ಮನನ್ನು ಪೂಜ್ಯವಾಗಿಸಲು ಕೊಡುತ್ತಿರುವ ಕಾರಣವೂ ಸಹ ಅದೇ, ಏಕೆ?

ನಾವು ಹುಟ್ಟಿದ್ದೇವಲ್ಲ, ಮೂವತ್ತು ಸೋದರ ಸೋದರಿಯರು, ಒಟ್ಟಿಗೆ ಬಾಳುವವರಲ್ಲ. ಅಮ್ಮ ಹೋದ ಹಾಗೆಯೇ ನಾವೂ ಹೋಗಬೇಕು. ಒಟ್ಟಿಗೆ ಇರಲು ಸಾಧ್ಯವೇ ಇಲ್ಲ. ನಮ್ಮ ಹೆಸರು “ಕಿಂಗ್” ಎಂದು ಆಗಲೇ ಹೇಳಿದೆವಷ್ಟೆ? “ಕಿಂಗ್” ಯಾವತ್ತಿದ್ದರೂ ಏಕಾಂಗಿಯೇ. ಇದಕ್ಕೆಲ್ಲ ಮೂಲಭೂತವಾದ ಕಾರಣ ನಮ್ಮ ಆಹಾರ.

ನಾವು ಸರ್ಪಭಕ್ಷಕರು!

ನಾವು ಹುಟ್ಟುವ ವೇಳೆಗೆ ಅಮ್ಮ ಇದ್ದಿದ್ದರೆ ಬಲವಂತವಾಗಿ ತನ್ನ ಮಕ್ಕಳನ್ನೇ ತಿನ್ನಬೇಕಾಗಿರುತ್ತಿತ್ತು - ನಿಯಮಾನುಸಾರ. ಆದರೆ, ನಿಯಮ ಬೇರೆ ರೀತಿಯದೇ ಆಗಿದೆ. ನಾವು ಹುಟ್ಟುವ ಸಮಯಕ್ಕೆ ಅವಳು ನಮ್ಮೊಡನೆ ಇರಲು ಸಾಧ್ಯವೇ ಇಲ್ಲ! ಹಾಗೇ ನಾವೂ ಸಹ ಜೊತೆಗೆ ಇರಲು ಸಾಧ್ಯವೇ ಇಲ್ಲ. ಇದ್ದರೆ ಯಾರು ಬಲಿಷ್ಠರೋ ಅವರು ದುರ್ಬಲರನ್ನು ತಿಂದುಬಿಡುತ್ತಾರೆ! ಸ್ವಜಾತಿಭಕ್ಷಣೆಯು ಅಪರಾಧವಷ್ಟೆ.

ವಿಕಾಸವಾದಿಗಳು ನಮ್ಮನ್ನು ಈ ಕಾರಣಕ್ಕೆ ಬಹಳ ಗೌರವಿಸುತ್ತಾರೆ. ಅವರ ಪ್ರಶ್ನೆಗಳಿಗೆ ಉತ್ತರ ಸಿಗುವ ಕಾಲವು ದೂರವಿರದೆ ಇರಲಿ.

-ಅ
07.05.2011
2AM

೧. http://www.hinduonnet.com/2001/06/20/stories/0420402s.htm

೨. http://www.stanford.edu/group/stanfordbirds/text/essays/Parental_Care.html

Thursday, June 02, 2011

ಮಾತೃ ದೇವೋ ಭವ - ರಾಕ್ಷಸ ಮಾತೆ

ನಮ್ಮನ್ನು ರಾಕ್ಷಸರಿಗೆ ಹೋಲಿಸಿದ್ದಾರೆ ಹಿಂದಿನ ಮನುಷ್ಯರು. ನೋಡೋದಕ್ಕೂ ಹಾಗೆಯೇ ಇದ್ದೇವೆಂದಿಟ್ಟುಕೊಳ್ಳಿ. ಯಾರೋ ನನ್ನ ಪೂರ್ವಜರು ಆನೆಯನ್ನೇ ಕೆಳಗುರುಳಿಸಿರಬೇಕು, ಅದನ್ನು ನೋಡಿದ ಕವಿಯು ತಮ್ಮ ಕಣ್ಣಿಗೆ ಚೆನ್ನಾಗಿ ಕಾಣದ ನನ್ನ ಪೂರ್ವಜನನ್ನು ರಾಕ್ಷಸನಿಗೂ, ಆನೆಯು ತಮಗೆ ಸಹಾಯ ಮಾಡುವ ಸಲುವಾಗಿ ಅದನ್ನು ಸಾಧುವನ್ನಾಗಿಯೂ ಹೋಲಿಸಿರುವ ಕಥೆ ನಿಮಗೆ ಗೊತ್ತೇ ಇದೆ. ಆ ಕಥೆಯೆಲ್ಲಾ ಈಗ ಕಟ್ಟುಕೊಂಡು ಏನಾಗಬೇಕಿದೆ! ಈ ಕವಿಯ ಜಾತಿಯವರು ಹುಟ್ಟುವ ಎಷ್ಟೋ ಲಕ್ಷ ವರ್ಷಗಳ ಕೆಳಗೆಯೇ ನನ್ನ ಜಾತಿಯವರು ಈ ಗ್ರಹದ ಮೇಲೆ ಹುಟ್ಟಿರುವಾಗ, ಕೇವಲ ಎರಡು ಲಕ್ಷ ವರ್ಷದ ಕೆಳಗೆ ಹುಟ್ಟಿದ ಮನುಷ್ಯನ ವಿರುದ್ಧ ಹಠ ಸಾಧಿಸಲು ನಾನೇನು ಮನುಷ್ಯನೇ?

ನಮ್ಮನ್ನು ರಾಕ್ಷಸರೆಂದು ಕರೆದಿರಬಹುದು. ನಮ್ಮವರೇ ನಮ್ಮನ್ನು ಕೊಂದು ತಿನ್ನುವ ಅಭ್ಯಾಸವೂ ನಮ್ಮವರಿಗಿರಬಹುದು. ಅದರಲ್ಲೂ ಚಿಕ್ಕ ಮಕ್ಕಳನ್ನು! ಅದಕ್ಕಾಗಿಯೇ ಅಲ್ಲವೇ, ಅಮ್ಮ ನಮ್ಮನ್ನೆಲ್ಲಾ - ಇಪ್ಪತ್ತು ಜನ ಒಡಹುಟ್ಟಿದವರೆಲ್ಲರನ್ನೂ - ತನ್ನ ಬಾಯೊಳಗೆ ಬಚ್ಚಿಟ್ಟುಕೊಂಡು ಕಾಪಾಡಿದ್ದು!

ಆ ಕೋರೆಹಲ್ಲುಗಳು, ಖಡ್ಗದಂತೆ ಹರಿತವಾಗಿರುವ ಹಲ್ಲುಗಳು, ಸ್ವಲ್ಪವೂ ಸೌಮ್ಯವಾಗಿರದ ಕಣ್ಣುಗಳು, ಮೈಯೆಲ್ಲಾ ಮುಳ್ಳು ಮುಳ್ಳಾಗಿರುವ ನಮ್ಮಮ್ಮ ಅಲ್ಲಲ್ಲಿ ಓಡಿ ಹೋಗುತ್ತಿದ್ದ ನಮ್ಮನ್ನೆಲ್ಲಾ ತಿನ್ನುತ್ತಿರುವ ಹಾಗೆಯೇ ಕಂಡೀತು ಬುದ್ಧಿಹೀನರಿಗೆ. ಅಮ್ಮ ಎಲ್ಲಾದರೂ ಮಕ್ಕಳನ್ನು ತಿನ್ನಲು ಸಾಧ್ಯವೇ? ಹಾಗಿದ್ದರೆ, ಅಮ್ಮನನ್ನು ದೇವರೆಂದು ಕರೆಯುತ್ತಿದ್ದರೇ?

ಬೇರೆಯವರು ಸ್ವಜಾತಿಭಕ್ಷಕರಾಗಬಹುದು. ಅದರಲ್ಲೂ ಬೇರೆ ಗಂಡಸರೂ. ಅಪ್ಪನನ್ನೂ ಸೇರಿಸಿ! ಆದರೆ ಅಮ್ಮ ಹಾಗಾಗೋಕೆ ಸಾಧ್ಯವೇ ಇಲ್ಲ. ನಾವು ಇಪ್ಪತ್ತು ಜನ ಒಡಹುಟ್ಟಿದವರು ಮಾತ್ರವಲ್ಲ. ಕಳೆದ ವರ್ಷ ಒಂದಿಪ್ಪತ್ತು, ಮತ್ತೆ, ಅದಕ್ಕೆ ಮುಂಚಿನ ವರ್ಷ ಇನ್ನೊಂದಿಪ್ಪತ್ತು, ಹೀಗೆ ವರ್ಷಾನುಗಟ್ಟಲೆಯಿಂದಲೂ ಇಪ್ಪತ್ತಿಪ್ಪತ್ತು ಮಕ್ಕಳನ್ನು ಹಡೆಯಲು ಅದೇ ಜಾಗವನ್ನು ನೆನಪಿನಲ್ಲಿಟ್ಟುಕೊಂಡು, ಪ್ರತೀ ಸಾರಿಯೂ ಕಾಲಿನಲ್ಲೇ ಗೂಡನ್ನು ನಿರ್ಮಿಸಿ, ಶ್ರಮ ಪಡುತ್ತಿದ್ದಳೇ? ಅದೂ ಅಲ್ಲದೆ, ನಾವುಗಳು ಮೊಟ್ಟೆಯೊಳಗಿರುವಾಗ - ಅಂದರೆ - ಸುಮಾರು ಎರಡು ತಿಂಗಳುಗಳ ಕಾಲ ನಮ್ಮನ್ನು ಕಾವಲಾಗಿಯೇ ಇರುತ್ತಿದ್ದಳೇ? ಜೊತೆಗೆ, ಎರಡು ತಿಂಗಳೂ ಸಹ, ಮೊಟ್ಟೆಗಳಲ್ಲಿದ್ದ ನಮಗೆ ತೊಂಭತ್ತು ಡಿಗ್ರೀ ಸೆಲ್ಷಿಯಸ್ ಉಷ್ಣಾಂಶ ಬೇಕಿದ್ದಾಗ, ಅದನ್ನು ಒದಗಿಸುವುದು ಅವಳ ಕರ್ತವ್ಯವಾಗಿತ್ತು, ಮತ್ತು ಆ ಕರ್ತವ್ಯವನ್ನು ಅವಳು ಸ್ವಲ್ಪವೂ ದೋಷವಿಲ್ಲದೇ ನಿರ್ವಹಿಸಿದಳು. ಮುಂದೆಯೂ ನಿರ್ವಹಿಸುತ್ತಾಳೆ.

ಚಿಕ್ಕ ಮಕ್ಕಳನ್ನು ಬರೀ ನಮ್ಮ ಜಾತಿಯವರೇ ತಿನ್ನುವವರು ಎಂದು ಭಾವಿಸದಿರಿ. ಚಿಕ್ಕಂದಿನಲ್ಲಿರುವವರು ಯಾವಾಗಲೂ ದುರ್ಬಲರೇ. ನಮ್ಮನ್ನು ಮುಗಿಸಲು ನಮ್ಮಮ್ಮ ಒಬ್ಬಳನ್ನು ಬಿಟ್ಟು, ಬೇರೆಲ್ಲರೂ ಕಾದಿರುತ್ತಾರೆ - ಎಲ್ಲ ಜಾತಿಯವರೂ! ಅದಕ್ಕೇನೇ ನಮ್ಮನ್ನು ನಾವು ಶಕ್ತಿಗೊಳಿಸಿಕೊಳ್ಳಬೇಕು. ನಮ್ಮ ಶಕ್ತಿ ಏನಿದ್ದರೂ ನೀರಿನಲ್ಲಿ ತಾನೆ? ನೆಲದ ಮೇಲೆ ನಾವು ನಿಷ್ಪ್ರಯೋಜಕರಂತೆ. ಅಮ್ಮನೇ ಹೇಳಿದ್ದು ಇದನ್ನು. ನೀರಿನಲ್ಲಿ ಈಜಲು ಕಲಿಸಿದ್ದೂ ಸಹ ಅಮ್ಮನೇ. ಮೊಟ್ಟೆಯಿಂದ ಹೊರಗೆ ಬಂದು ಇನ್ನೂ ಒಂದು ಘಂಟೆಯೂ ಆಗಿಲ್ಲ, ಆಗಲೇ ಬಂದು ನಮ್ಮನ್ನೆಲ್ಲಾ ತಿಂದುಬಿಡುತ್ತಾಳೋ ಎಂಬಂತೆ ಬಾಯಲ್ಲಿ ಕಚ್ಚಿಕೊಂಡಳು. ಹಲ್ಲುಗಳು ನಮಗೆ ಯಾರಿಗೂ ಸೋಕಲಿಲ್ಲ. ನಾವೋ, ಒಬ್ಬರೂ ನಿಂತಲ್ಲಿ ನಿಲ್ಲುವವರಲ್ಲ. ಕಪ್ಪೆತಕ್ಕಡಿ ಸಹವಾಸ. ಅಮ್ಮ ಬೇಸರಗೊಳ್ಳದೇ ಎಲ್ಲರನ್ನೂ ತನ್ನ ವಿಶಾಲ ಬಾಯಿಯ ವಾಹನದಲ್ಲಿ ನಮ್ಮನ್ನೆಲ್ಲ ಕರೆದೊಯ್ದು ನೀರೊಳಗೆ ಮುಳುಗಿಸಿಬಿಟ್ಟಳು. ಈಜು ಕಲಿಯಿರಿ ಎಂದು. ಐದು ನಿಮಿಷದಲ್ಲಿ ಕಲಿತುಕೊಂಡೆವು!

ಭಯವಾದರೆ ಸಾಕು, ನಮಗೆಲ್ಲ ಅಮ್ಮನ ಬಾಯಿಯೇ ರಕ್ಷೆಗೂಡು. ಅಲ್ಲೇ ನಮಗೆ ಬೇಟೆಯ ಪಾಠ ಕೂಡ. ಅಲ್ಲೇ ನಮಗೆ ತಾಳ್ಮೆಯ ಪಾಠ ಕೂಡ. ನಾವುಗಳೆಲ್ಲ ಬಾಯಲ್ಲಿ ಇರುವಾಗ ಅಮ್ಮ ಎಂದೂ ಬಂಡೆಯ ಮೇಲೆ ಬಂಡೆಯ ಹಾಗೆ ಬಿದ್ದುಕೊಂಡಿಲ್ಲ. ಹಾಗೆ ಬಿದ್ದುಕೊಂಡಿರುವವರನ್ನು ತೋರಿಸಿದ್ದಾಳೆ. ಮತ್ತೆ ಹಾಗೆ ಬಿದ್ದುಕೊಂಡಿರುವವರ ಹತ್ತಿರ ಹೋಗಬಾರದೆಂದೂ ಎಚ್ಚರಿಕೆ ಕೊಟ್ಟಿದ್ದಾಳೆ. ಆ ಎಚ್ಚರಿಕೆಯನ್ನು ಗಮನವಿಟ್ಟು ಕೇಳಿಸಿಕೊಂಡಿದ್ದು ನಾನು ಮತ್ತು ನನ್ನ ಅಣ್ಣ ಅಷ್ಟೆ ಅನ್ನಿಸುತ್ತೆ, ಅದಕ್ಕೆ ಜೊತೆ ಹುಟ್ಟಿದವರಲ್ಲಿ ನಾವಿಬ್ಬರೇ ಬದುಕಿರುವುದು. ಒಂದು ರೀತಿಯಲ್ಲಿ ಒಳ್ಳೆಯದೇ ಬಿಡಿ, ಇಪ್ಪತ್ತು ಜನರೂ ಬದುಕಿಬಿಟ್ಟಿದ್ದರೆ, ಆಮೇಲೆ ನಮ್ಮ ಜನಸಂಖ್ಯೆ ಹೆಚ್ಚಾಗುತ್ತಿತ್ತಷ್ಟೆ? ನಮ್ಮ ಅಮ್ಮ ನಮಗೆ ಹೇಳಿಕೊಟ್ಟ ಪಾಠ ಇದಾದರೆ, ಪ್ರಕೃತಿಯೆಂಬ ಅಮ್ಮ ಬೇರೆಯದೇ ಪಾಠವನ್ನು ಬೇರೆಯವರಿಗೆ ಹೇಳಿಕೊಟ್ಟಿದ್ದಾಳೆ.
ಈಗ ನನಗೆ ಶತ್ರುವೇ ಇಲ್ಲ - ಒಬ್ಬ ಮನುಷ್ಯ ಪ್ರಾಣಿಯನ್ನು ಹೊರೆತು. ಅವನ ದೃಷ್ಟಿಯಲ್ಲಿ ನಾನು ರಾಕ್ಷಸ ವಂಶದವನು. ಸೃಷ್ಟಿಯ ನಿಯಮದಲ್ಲಿ ನಾನು ಡೈನೊಸಾರ್ ವಂಶದವನು. ಒಟ್ಟಿನಲ್ಲಿ ನಾವು ಹುಟ್ಟಿದ ನಂತರ ದೊಡ್ಡವರಾಗುವವರೆಗೂ ಬದುಕುವುದು ಬಹಳ ಕಷ್ಟ. ಹೆಜ್ಜೆ ಹೆಜ್ಜೆಗೂ ಅಪಾಯ. ದೊಡ್ಡವರಾದರೆಂದರೆ ಸಾಯುವುದು ಬಹಳ ಕಷ್ಟ.

ಮೊಸಳೆಗಳಾಗಿ ಬದುಕುವುದೂ ಸಹ ಅಷ್ಟು ಸುಲಭ ಎಂದುಕೊಂಡೀರಾ?-ಅ
20.04.2011
12.25AM

http://animal.discovery.com/convergence/safari/crocs/expert/expert8.html

ಒಂದಷ್ಟು ಚಿತ್ರಗಳು..